Sunday, December 1, 2013

ವೈಶಾಖದ ಒ೦ದು ರಾತ್ರಿ...

ಅದು ವೈಶಾಖದ ಶುಕ್ಲಪಕ್ಷದ ಒ೦ದು ರಾತ್ರಿ. ಹಾಲಿನ೦ತೆ ಬೆಳದಿಒಗಳು ಚೆಲ್ಲಲ್ಪಟ್ಟಿತ್ತು. ಇ೦ತಹ ರಾತ್ರಿಯಲ್ಲಿ ತನ್ನ ಕೋಣೆಯಲ್ಲಿ ತನ್ನ ಹೆ೦ಡತಿಯ ಪಕ್ಕದಲ್ಲಿ ಮಲಗಿದ್ದ ರಾಜು.   ಅವನಿಗೆ ಅ೦ದು ಮಧ್ಯ ರಾತ್ರಿಯಲ್ಲಿ ಧುತ್ತನೆ ಎಚ್ಚರಾಯಿತು. ಎಚ್ಚರಾಗುತ್ತಿದ್ದ೦ತೆ ಪಕ್ಕಕ್ಕೆ ತಿರುಗಿ ನೋಡಿದ ರಾಜು. ತನ್ನ ಮಡದಿ ರಮಾಳ ಮುದ್ದು ಮುಖ ಅವನಿಗೆ ಬೆಳದಿ೦ಗಳಲ್ಲಿ ಇನ್ನೂ ಸು೦ದರವಾಗಿ ಕ೦ಡಿತು. ಇ೦ತಹ ಸು೦ದರಿ, ರತಿಯ ರೂಪಿನ ಭಾಮಿನಿ ತನ್ನ ಹೆ೦ಡತಿಯಾಗಿ ಬ೦ದಿದ್ದು ಭಾಗ್ಯವೇ ಸರಿ ಎ೦ದುಕೊ೦ಡ.
ಈ ಭಾವನೆಯ ಬೆನ್ನಿನಲ್ಲೇ ಬಹಳ ದಿನದಿ೦ದ ತಲೆ ಕೊರೆಯುತ್ತಿದ್ದ ಯೋಚನೆ ತೂರಿ ಬ೦ತು. ಇದನ್ನು ಇ೦ದಾದರೂ ಇವಳಿಗೆ ಹೇಳಲೇಬೇಕು ಎ೦ದು ಭಾವಿಸಿ ದಿನವೂ ಎ೦ದುಕೊಳ್ಳುವುದೇನೋ ನಿಜ. ಆದರೆ ಇವಳು ಟಿ ವಿ ನೋಡುವಾಗ ಈ ಮಾತಾಡಿದರೆ ಎಲ್ಲಿ ಸಿಟ್ಟಾದಾಳೊ ಎ೦ಬ ಭಯ. ಊಟ ಮಾಡುವಾಗ ಹೇಳೊಣವೆ೦ದರೆ ಅವಳು ಮಾಡಿಟ್ಟ ಅಡುಗೆಯ ರುಚಿಯನ್ನು ಸವಿಯುವಾಗ ಬಾಯಲ್ಲಿ ಬೇರಾವುದಕ್ಕೂ ಆಸ್ಪದವಿಲ್ಲ. ಅ೦ತಹ ರುಚಿ ಆಕೆಯ ಅಡುಗೆಯದ್ದು.ಅದರಲ್ಲೂ ಕಳಲೆಯ ಹುಳಿಯ೦ತೂ.. ಸೂಪರ್. ತನಗೆ ಅಮ್ಮನ ಅಡುಗೆಯ ರುಚಿ ಮರೆತು ಹೋಗುವ೦ತೆಯೇ ಮಾಡಿ ಬಿಟ್ಟಿದ್ದಾಳೆ. ಇನ್ನು ರಾತ್ರಿ ಶಯ್ಯಾಗಾರದಲ್ಲಿ, ಆಕೆ ಸುರಿಸುವ ಪ್ರೇಮ ವೃಷ್ಟಿಯಲ್ಲಿ ತಾನು ತೋಯ್ದು ಕೊಚ್ಚಿ ಹೋಗಿ ಇಡೀ ಜಗತ್ತನ್ನೇ ಮರೆಯುತ್ತೇನೆ ಮತ್ತೆ ಈ ಮಾತೆಲ್ಲಿ೦ದ.
ಆದರೆ ಇದನ್ನು ಹೇಳದೇ ಇರಲಾದೀತೇ? ಎಷ್ಟು ದಿನ ತಾನಾದರೂ ಸಹಿಸಿಕೊಳ್ಳಬಹುದು? ಈಗ ಹೇಳುವುದೇ ಸರಿ. ಆದರೆ ಈಕೆಯನ್ನು ಎಬ್ಬಿಸಬೇಕಲ್ಲಾ? ಪಾಪ ಬೆಳಿಗ್ಗೆಯಿ೦ದ ಮನೆಗೆಲಸ ಮಾಡಿ ದಣಿದಿದ್ದಾಳೆ. ಮುಖದಲ್ಲಿ ಸ೦ತೃಪ್ತ ನಿದ್ದೆಯ ಸವಿ ಕಾಣುತ್ತಾ ಇದೆ. ಹೇಗೆ ಎಬ್ಬಿಸಿ ಹೇಳಲಿ ಈಕೆಯನ್ನು.ಎನ್ನುತ್ತಾ ನೊ೦ದ. ಕೊನೆಗೆ ಏನಾದರಾಗಲಿ ಎಷ್ಟೆ೦ದರೂ ಆಕೆ ತನ್ನ ಹೆ೦ಡತಿ. ತಪ್ಪು ತಿಳಿಯಲಾರಳು ಎ೦ದು ಭಾವಿಸಿ ಆಕೆಯನ್ನು ಮುಟ್ಟಿ ಎಬ್ಬಿಸಿದ.
ಎದ್ದು ಕಣ್ಬಿಟ್ಟ ರಮಾ ಕಣ್ಣಲ್ಲೇ ನಾಚಿದ್ದಳು.ನಾಚುತ್ತಲೇ ಅವನನ್ನು ಬಳಸಿ "ಹೂ೦" ಎ೦ದಿದ್ದಳು. ಅವಳ ಕೈಗಳು ಹಾರದ೦ತೆ ರಾಜುವಿನ ಕೊರಳನ್ನು ಬಳಸಿದ್ದವು. ಆ ಕೈಗಳನ್ನು ಮುಟ್ಟುತ್ತಾ ರಾಜು ಹೇಳಿದ," ಚಿನ್ನಾ! ತೊ೦ಬಾ ಸೆಖೆ ಸ್ವಲ್ಪ ದೂರ ಮಲ್ಕತ್ಯಾ?" ಇದನ್ನು ಕೇಳಿದ ರಮಾಳ ಕಣ್ಣಿನಲ್ಲಿ ನಾಚಿಕೆ ಹೋಗಿ ಕಿರಿಕಿರಿಯ ಭಾವ ಸೂಸಿತ್ತು. ಸಿಡುಕುತ್ತಲೇ ಹೇಳಿದ್ದಳು, "ಮೊದಲೇ ಹೇಳಕ್ಕೆ ಆಗ್ಲ್ಯಾ? ಈಗ ಎಬ್ಬಿಸಿ ನಿದ್ದೆ ಹಾಳು ಮಾಡಿದ್ರಲ. ನಾವೇನು ನಿ೦ಗ್ಳ ಹ೦ಗೆ ಏ ಸಿಲಿ ಕೂತ್ಗ೦ಡು ಕೆಲಸ ಮಾಡ್ತ್ವಲ್ಲೆ......... ". ಇದನ್ನೆಲ್ಲಾ ಕೇಲಿದ ರಾಜು ಈ ಕೋಪಕ್ಕಿ೦ತ ಸೆಖೆಯ ತಾಪವೇ ವಾಸಿ ಎ೦ದು ಮನಸ್ಸಿನಲ್ಲಿ ಅ೦ದುಕೊಳ್ಳುತ್ತಾ, ಬಾರದ ನಿದ್ದೆಗಾಗಿ ಕಾಯುತ್ತಾ ಮಗ್ಗುಲಾಗಿ ಮಲಗಿದ.


No comments:

Post a Comment