Tuesday, February 6, 2018

ಭಟ್ಟರು ನಿದ್ದೆಗೆಟ್ಟರು

ಗಾವಿಲನ ಅಣ್ಣ ಪರಮ ಭಟ್ಟರು ಸಿಕ್ಕಿದ್ದರು ಮೊನ್ನೆ. ನನ್ನ ಹೊತ್ತು ತಂದ ಮಾತುಗಳ ಜೋಳಿಗೆ ಬರಿದಾಗಿತ್ತು. ಅದಕ್ಕೇ ಭಟ್ತರ ಬಳಿ ಕೆಲವು ಮಾತಿಗಿಳಿದೆ. ಭಟ್ತರೂ ನನ್ನೊಡನೆ ಊರ ಮಾಣಿ ಎನ್ನುವ ಎಂದಿನ ವಿಶ್ವಾಸದಲ್ಲೇ ಮಾತಿಗಿಳಿದರು. ಅವರದ್ದೇ ಕವಳದ ಸಂಚಿಯಿಂದ ಎಲೆ ಸುಣ್ಣ ತೆಗೆದು ನಾನೂ ಒಂದು ತಾಂಬೂಲ ಮಾಡಿಕೊಂಡು ಬಾಯಲ್ಲಿಟ್ಟುಕೊಂಡೆ. ಅವರೂ ಹಾಗೆಯೇ ಮಾಡಿದರು.

ಊರಿಗೆ ಅದೇ ಬೆಳಿಗ್ಗೆ ಬಂದಿದ್ದು. ರಾತ್ರಿ ನಿದ್ದೆ ಇಲ್ಲದ ಕಾರಣದಿಂದ ಕಣ್ಣು ಕೂಡಾ ಕೆಂಪಾಗಿತ್ತು. ಭಟ್ಟರು ವಿಶ್ವಾಸದಿಂದ, "ಎಂತ ಮಾಣಿ! ನಿದ್ದೆ ಮಾಡಲ್ಯೆನಾ" ಅಂದರು.

"ಬಸ್ಸಾಗೆ ತಿಗಣೆ ಮಾರಾಯ ನಿದ್ದೆ ಮಾಡಕ್ಕೇ ಬಿಡಲೆ" ಅಂದೆ.

"ಥೋ!! ತಿಗಣೆ ಆದ್ರೆ ಕಷ್ಟ. ಆದ್ರೆ ಮನುಷ್ಯರು ಕರ ಕರೆ ಮಾಡಿ ನಿದ್ದೆ ಇರ್ತಲ್ಲೆ ಒಂದೊಂದು ಸಲ ಮಾರಾಯ! ಪಾಡು ಯಾರಿಗೂ ಬ್ಯಾಡ. ನಮ್ನಿ ನಿದ್ದೆ ತಪ್ಪಸ್ದವ್ವು ಮುಂದಿನ ಜನ್ಮದಾಗೆ ತಿಗಣೆ ಆಗಿ ಹುಟ್ತ, ಇಲ್ದಿದ್ರೆ ಹಿಂದಿನ ಜನ್ಮದಲ್ಲಿ ತಿಗಣೆ ಆಗಿರ್ತ. ಪೂರ್ವಜನ್ಮದ ವಾಸನೆ ಇಲ್ಲಿ ತೆಕ್ಕತ್ತ."

ನಾನು ಮಾತು ಮುಂದುವರೆಸಲು ತೊಡಗಿದೆ, "ಮನುಷ್ಯರ ಕಾಟ?! ಎಂತ ಅದು?" ಅಂದೆ. ಭಟ್ಟರು ಹೇಳತೊಡಗಿದರು. ನಾನು ಮೈ ಎಲ್ಲ ಕಿವಿಯಾಗಿ ಕೇಳಿದೆ. ಮಾತುಗಳು ಹೊತ್ತು ತಂದ ಮಾತಾಗಬಹುದೆಂಬ ನಿರೀಕ್ಷೆಯಲ್ಲಿ. ನಿರೀಕ್ಷೆ ಸುಳ್ಳಾಗಲಿಲ್ಲ. ಅತಿ ಉಪಚಾರದಿಂದ, ಕಾರ್ಯಕ್ರಮದ ಮನೆಯೊಂದರಲ್ಲಿ ಜಾಗರಣೆ ಮಾಡಿದ ಕತೆ ಹೇಳಿದರು ಭಟ್ಟರು.

"ಅಚೆ ಕೇರಿ ರಾಮು ಅಣ್ಣ ಗಣಪತಿ ಇಲ್ಲಿ ಜಮೀನು ಕೊಟ್ಟು ಹೊಳೆಯಿಂದ ಅಚಿಗೆ ಜಮೀನು ಮಾಡ್ದ. ಅವನ ಮೊಮ್ಮಗನ ಉಪನಯನ ಮಾಡಕ್ಕೆ ಆನೇ ಪುರೋಹಿತ. ರಾಮು ಮತ್ತೆ ಗಣಪತಿ ಉಪನಯನ ಯಮ್ಮಪ್ಪಯ್ಯ ಮಾಡಿಸಿದ್ದ. ರಾಮು ಭಾರೀ ವಿಶ್ವಾಸದಾಗೆ ಬಂದು 'ಪರಮಣ್ಣಯ್ಯ, ನೀನೇ ಮಾಡಿಸಕ್ಕು ಒಂದು ದಿನ ಮುಂಚೆನೆ ಬಾ ಅಂದ.' ಆನೂ ಹೋದಿ. ನಾಂದಿ ದಿನ, ಉದಕಶಾಂತಿ ಮುಗಿಸಿ, ಒಳ್ಳೆ ಮಗೆಕಾಯಿ ಗೊಜ್ಜು-ಮಾವಿನಕಾಯಿ ನೀರುಗೊಜ್ಜು ಇದ್ದ ಊಟ ಮಾಡಿ ಮಲಗಕ್ಕೆ ಹೊಂಟಿ. ರಾಮು ಮೆತ್ತಾಗೆ ಒಳ್ಳೆ ಹಾಸಿಗೆ ಹಾಸಿದ್ದ. ದೇಹ ಚಾಚಿ, ಬೀಸು ಗಾಳಿಗೆ ಮೈ ಬಿಟ್ಟು ಮಲಗಿದ್ದಿ."

"ನಿದ್ದೆ ಹತ್ತಕ್ಕಾಗಿತ್ತು. ಅಷ್ಟು ಹೊತ್ತಿಗೆ ಅವನ ಅಣ್ಣ ರಾಮು ಬಂದ. ಅಂವ ಜನ ಒಳ್ಳೆವ. ಆದ್ರೆ ಅವನ ಉಪಚಾರ ಅತಿ ಆಗ್ತು ಮಾರಾಯ ಒಂದೊಂದು ಸತಿ. ಬಂದವನೇ ' ಹೋ ಪರಮಣ್ಣ, ಹೊದಿಕೆ ಕಂಬಳಿ ಎಂತಾರು ಬೇಕಾ?!' ಅಂದ. ಬ್ಯಾಡ ಮಾರಾಯ ಅಂದಿ. 'ಚಳಿಯಾಗ್ತೇನಾ ಅನ್ನಕ್ಕ ಪ್ರಾಣಿ, ' ವೈಶಾಖ ಮಾಸದಾಗೆ ಎಂತ ಚಳಿಯಾ ಮಾರಾಯ ಅಂದು ಸಾಗ ಹಾಕಿದಿ."

"ಹೋದ ನಿದ್ದೆ ಮತ್ತೆ ಬರಕ್ಕೆ ಸುಮಾರು ಹೊತ್ತಾತು. ಆಕಳಿಕೆ ತೆಗೆದೂ ತೆಗೆದೂ ಬಾಯೆಲ್ಲ ನೋಯಕ್ಕೆ ಹಿಡತ್ತು. ಎಷ್ಟು ಹೊತ್ತಿಗೆ ಕಣ್ಣು ಮುಚ್ತೊ ಏನೋ ಗೊತ್ತಾಗ್ಲೆ. ಅಷ್ಟು ಹೊತ್ತಿಗೆ ಇವರ ಭಾವ ನೆಂಟ ಬಂದ. 'ಭಟ್ರೇ, ಆಸರಿ ಕುಡದ್ರಾ?!' ಅಂದ. ಅವ ಆಸರಿ ಕೇಳಿ ನಿದ್ದೆ ಓಡ್ಸಿದ. ಹಾಳಾದ್ದು ಯಾರಾರು ಆಸರಿಗೆ ಕೇಳಿರೆ ಬ್ಯಾಡ ಅನ್ನಕ್ಕೆ ಮನಸ್ಸಾಗ್ತಲ್ಲೆ ಮಾರಾಯ. 'ಒಂದು ಲೋಟ ಕಷಾಯ ಆಗಲಿ' ಅಂದಿ. ತಂದು ಕೊಟ್ಟ ಯಾರೋವ. ಒಂದು ಅರ್ಧ ಗಂಟೆ ಕಳೆದು ಹೋತು ಅಷ್ಟೊತ್ತಿಗೆ. ಆಸರಿಗೆ ಕುಡಿದ ಮೇಲೆ ಉಚ್ಚೆ ಬರ ತಂಕ ಕಾದು, ಉಚ್ಚೆ ಹೊಯ್ದು ಮಲಗಿದಿ. ಇಷ್ಟೊತ್ತಿಗೆ ಎಷ್ಟೊತ್ತಾಗಿತ್ತಾ ಏನ ಮಾರಾಯ. ಅಂತೂ ಮತ್ತೆ ದಿಂಬಿನ ಮೇಲೆ ತಲೆ ಇಟ್ಟು ಮಲಗಿದಿ."

ಅಷ್ಟೊತ್ತಿಗೆ ಬದಿ ಮನೆ ಗೋಪಾಲಕೃಷ್ಣ ಬಂದ. ಅವ ಒಂಥರ ಎಲ್ಲರ ಮನೆ ಉಗ್ರಾಣಿ. ಎಲ್ಲಾ ವ್ಯವಸ್ಥೆ ಬದಲಾಯಿಸಿ ಅದು ಇದು ಎಲ್ಲಾ ಮಾಡಿ ಮೆತ್ತು ಹತ್ತಿ ಯನ್ನ ಹತ್ರ ಬಂದು, 'ಭಟ್ರೇ, ಬ್ಯಾಟ್ರಿ ಇದ್ದಾ' ಅಂದ. ಎಂತ ಏನ ಪಾಪ, ಕಾರ್ಯದ ಮನೆ ಬೇರೆ. ಎಂತ ಅವಶ್ಯಕತೆ ಇದ್ದ ಏನಾ ಅಂತ ಚೀಲಕ್ಕೆ ಕೈ ಹಾಕಿ ಬ್ಯಾಟರಿ ತೆಕ್ಕೊಟ್ಟಿ. ಪುಣ್ಯಾತ್ಮ, ' ಅಲ್ಲ. ಯನ್ನ ಹತ್ರಕೆ ಬ್ಯಾಟ್ರಿ ಇದ್ದು, ನಿಮಗೆ ಬೇಕಾ ಎಂತ ಅಂತ ಕೇಳಿದಿ'ಅನ್ನಕ್ಕೇ?! ಸಿಟ್ಟು ಬಂತು. ಆದರೆ ಅವನ ಮನಸ್ಸು ಉದ್ದೇಶ ಎಲ್ಲಾ ನೋಡಿ ಒಳ್ಳೆದಿದ್ದಿದ್ದು ತಿಳಕಂಡು ಕ್ಷಮಿಸಿದಿ. ಮಲಗಿ ಮತ್ತೆ ಆಕಳಿಕೆ ತೆಗೆಯಕ್ಕೆ ಹಿಡದಿ.

ಅಷ್ಟೊತ್ತಿಗೆ ರಾಮು ಹೆಂಡತಿ ಮತ್ತೆ ರಾಮು ತಂಗಿ ಬಂದ. 'ಹೋ ಭಟ್ರೆ!' ಅಂದ. ಕಣ್ಣು ತಿಕ್ತಾ ಎದ್ದು ಕೂತು, 'ಎಂತ್ರೇ' ಅಂದಿ. 'ಎಂತಾರು ಬೇಕಾರೆ ಕೇಳಿ. ದಾಕ್ಷಿಣ್ಯ ಮಾಡ್ಕ್ಯಳಡಿ' ಅಂದ. ಒಳ್ಳೇ ಮನಸ್ಸು. ನಿದ್ದೆ ಹಾರಿದ್ದು ಅಂತ ಸಿಟ್ಟು ಮಾಡಿರೆ ಪಾಪ ಹತ್ತ್ಗು. ಅದಕ್ಕೇ ' 'ಎಲ್ಲಾ ಇದ್ದು' ಅಂತ ಮಲಗಿ ನಿದ್ದೆ ಮಾಡಕ್ಕೆ ಹಿಡದಿ.

"ನಿದ್ದೆ ಲಾಯಕು ಬಂದಿತ್ತು. ಜಾಗ್ರತಾವಸ್ಥೆಯಿಂದ ಸ್ವಪ್ನಕ್ಕೆ ಜಾರಿ ಅದು ಕಳೆದು ಸುಷುಪ್ತಾವಸ್ಥೆ ಕಡೆಗೆ ಹೋಗ್ತಾ ಇದ್ದಿದ್ದಿ. ಗಣಪತಿ ಬಂದು, 'ಭಟ್ರೇ!! ಭಟ್ರೇ!!' ಅಂತ ಬಡಕಳಕ್ಕೆ ಹಿಡ್ಕಂಡ. ಬರ್ತಾ ಬರ್ತಾ ಧ್ವನಿ ಜೋರಾಗ್ತಾ ಹೋತು. ಎದ್ದು 'ಎಂತ?' ಅಂದಿ. 'ನಿದ್ದೆ ಬಂತಾ ಕೇಳಿದಿ' ಅಂದ. ಅಯ್ಯೋ ರಾಮಾ! ಅದನ್ನೂ ಮಲಗಿದವನ್ನ ಎಬ್ಬಿಸಿ ಕೇಳದೇ ಅಂದಕಂಡು ಅವ ಯಜಮಾನ ಅವನ್ನ ಬಯ್ಯಲಾಗ ಅನ್ನ ಶಾಸ್ತ್ರ ನೆನಪು ಮಾಡಿ ಮಲಗಕ್ಕೆ ಹೊಂಟಿ. ಆಗ ಅನ್ನಷ್ಚು, ಇನ್ನೊಂದು ಸ್ವಲ್ಪ ಹೊತ್ತಿಗೆ ಭಾಸ್ಕರ ಬತ್ತ ಅಂತ ಹ್ಹೆ ಹ್ಹೆ ಹ್ಹೆ" ಎಂದು ಕತೆ ಹೇಳಿದರು.

"ಯಾವ ಭಾಸ್ಕರ?"

"ಅವನೇಯ- ದಿನಕರ- ಸೂರ್ಯ" ಅಂದರು ಭಟ್ಟರು. ಹಾಸ್ಯ ಮತ್ತು ಭಾಷೆ ಎರಡೂ ಒಟ್ಟಾದರೆ ಎನಿತು ಸೊಗಸು ಎನಿಸಿತು ನನಗೆ. ಭಟ್ಟರು ಮುಂದುವರೆದರು. "ಅಪ್ಪಿ, ಅವತ್ತು ಪ್ರತಿಜ್ಞೆ ಮಾಡಿಬುಟಿ. ಇನ್ನು ಯಾವತ್ತೂ ಕಾರ್ಯದ ಮನೆಲಿ ಮಲಗಲಾಗ ಅಂತ" ಅಂದರು. ಇಷ್ಟರಲ್ಲಿ ಭಟ್ಟರು ಕೊಟ್ಟಿಗೆ ಕೆಲಸ ನೆನಪು ಮಾಡಿಕೊಂಡು ನನ್ನ ತಲೆಯಲ್ಲಿ ಅವರು ಹೊತ್ತು ತಂದ ಮಾತುಗಳನ್ನಿಟ್ಟು ಮನೆ ಕಡೆ ಹೊರಟರು.


No comments:

Post a Comment