Tuesday, February 13, 2018

ಕೈಕೇಯಿ ಕಳವಳ

ಕೈಕೇಯಿ ತನ್ನ ಅಂತಃಪುರದಲ್ಲಿ ಕುಳಿತು ಶೂನ್ಯ ನೋಟದಿಂದಲೇ ದಿಟ್ಟಿಸುತ್ತಿದ್ದಾಳೆ ಎಲ್ಲವನ್ನೂ. ನೋಟ ಅನ್ಯರಿಗೆ ಶೂನ್ಯದಂತೆ ಕಾಣುತ್ತಿದೆ ಆದರೆ ಕೈಕೇಯಿಯ ಒಳಗಿದ್ದ ವಾತ್ಸಲ್ಯಮಯ ಭಾವನೆಗಳು ಮಂಥರೆ ಇಟ್ಟ ಬೆಂಕಿಗೆ ಬಿದ್ದು ಧಗಧಗಿಸಿ ಹೋಗಿವೆ. ಅವಳ ಒಳಗಿದ್ದ ಲಾಲಸೆ, ಕರಗಿ ನೀರಾಗಿ ಹರಿಯುತ್ತಿದೆ ಅಕ್ಷಿದ್ವಯಗಳಿಂದ ಈಗ, ಭರತನ ಬಿಸಿಯಾದ ಬಿರುಸಿನ ನಿಂದೆಗೆ. ಕೆಲವೇ ದಿನಗಳ ಹಿಂದೆ ಮಗ ಭರತನಿಗೆ ಪಟ್ಟ ಕಟ್ಟಿಸಬೇಕು ಎನ್ನುವ ಹಟಕ್ಕೆ ಬಿದ್ದು ಅರಮನೆಯಲ್ಲಿ ರಾಮ ಜನಿಸಿದ ದಿನದಿಂದ ಸದಾಕಾಲ ಮುಚ್ಚಿದ್ದ, ಇನ್ನೆಂದಿಗೂ ಯಾರೂ ತೆರೆಯಲಾರರು ಎಂದೇ ನಂಬಿದ್ದ ಅರಮನೆಯ ಶೋಕಾಗಾರವನ್ನು ಹೊಕ್ಕಿದ್ದಳು ಕೈಕೇಯಿ. ಈಗ ಸಂಪೂರ್ಣ ಅರಮನೆಯೇ ಶೋಕಾಗಾರವಾಗಿದೆ. ತನ್ನ ಮಗನನ್ನು ಅರಸನನ್ನಾಗಿ ಮಾಡಲು ಹೊರಟ ಕೈಕೇಯಿ, ಮಗನನ್ನು ಕೊಟ್ಟ ಅರಸನನ್ನು ಕಳೆದುಕೊಂಡು ತನ್ನಿರವನ್ನು ಅರಸುತ್ತಿದ್ದಾಳೆ.
ಯಾವ ಯೋಧರೂ ಗೆಲ್ಲದಾದ ನಗರಿ ಅಯೋಧ್ಯೆ. ಅದನ್ನು ಈಗ ಕೈಕೇಯಿ ಸಂಪೂರ್ಣವಾಗಿ ಸೋಲಿಸಿಬಿಟ್ಟಿದ್ದಾಳೆ. ಅಯೋಧ್ಯೆಯಲ್ಲಿ ರಾಮ ರಾಜನಾಗುವುದು ಬೇಡ ಎಂದು ಭಾವಿಸಿದ್ದವರು ಕೆಲವರಿದ್ದರು ಈಗ ಅವರೆಲ್ಲಾ ಅರಾಜಕತೆಯ ಆತಂಕಕ್ಕೆ ಸಿಕ್ಕಿ ನಲುಗುತ್ತಿದ್ದಾರೆ. ಅಂಥವರಿಲ್ಲದೇ ಮಂಥರೆಯಂಥ ಕ್ಷುಲ್ಲಕ ಹೆಣ್ಣು, ರಾಮನ ಪಟ್ಟಾಭಿಷೇಕ ನಿಲ್ಲಿಸುವುದು ಸಾಧ್ಯವೇ ಇರಲಿಲ್ಲ. ವಸಿಷ್ಠರಂಥಾ ತಪಸ್ವಿಗಳು ಇದನ್ನರಿತೇ ರಾಮನ ವನಗಮನವನ್ನು ಸಮ್ಮತಿಸಿದ್ದು. ತನ್ನನ್ನು ಜನರೆಲ್ಲಾ 'ರಾಜಮಾತೆ' ಎನ್ನುವ ಗೌರವದಿಂದ ನೋಡಬೇಕು ಎನ್ನುವ ಆಸೆ ಹೊತ್ತಿದ್ದ ಅಂದಿನ ಸಾಮ್ರಾಜ್ಞಿ, ಇಂದು ತಾನು ಹೆತ್ತ ಮಗನೇ ಮಾತೆ ಎಂದು ಹೇಳುವುದಕ್ಕೆ ಮುಜುಗರಪಡುವಂತೆ ಮಾಡಿಬಿಟ್ಟಿದ್ದಾಳೆ.

ಸಾಕೇತ ಸಾಮ್ರಾಜ್ಯದ ಪ್ರಜೆಗಳು ಎಂದು ಹೆಮ್ಮೆಯಿಂದ ಹೇಳಿ ಕೊಳ್ಳುತ್ತಿದ್ದ ಅಲ್ಲಿನ ಸತ್ಪ್ರಜೆಗಳು ಸಾಕು ಏತಕೆ ಪ್ರಜೆಯಾದೆವು ಎಂದು ದುಃಖಿಸುವಂತೆ ಮಾಡಿಬಿಟ್ಟಿದ್ದೇನೆ ತಾನು ಎನ್ನುವ ದುಃಖ, ರಾಜಮಾತೆಯಾಗಿ ಸುಖೊಪಭೋಗ ಪಡೆಯಬೇಕು ಎಂದು ಹೊರಟಿದ್ದವಳನ್ನು ಅಳುವಂತೆ ಮಾಡಿಬಿಟ್ಟಿದೆ. ತಾನು ಮನೆಯ ಹೊಸ್ತಿಲನ್ನು ದಾಟಿದಾಗ ತನಗೆ ಮಾತೆಯ ಪ್ರೀತಿಯಿತ್ತ ಕೌಶಲ್ಯವತೀ ಕೌಸಲ್ಯೆಯನ್ನು ತಾನು ಸಮಾಧಾನಕ್ಕೆ ಆಶ್ರಯಿಸುವ ಯೋಚನೆ ಮಾಡುತ್ತಾಳೆ ಒಮ್ಮೊಮ್ಮೆ. ಆದರೆ ಆಕೆ ಹೆತ್ತ-ತಾನು ಹೊತ್ತ ಮಗನನ್ನು ತಾನೇ ದೂರ ಮಾಡಿದ್ದು, ಮತ್ತೆ ಆಕೆಯಲ್ಲಿ ಸಮಾಧಾನ ಯಾಚಿಸುವುದೆಂತು. ಒಂದು ಕಾಲದಲ್ಲಿ ತನಗೆ ಮಿತ್ರಳಂತಿದ್ದ ಸುಮಿತ್ರೆ, ಎಲ್ಲರ ಲಕ್ಷ್ಯವನ್ನು ಸೆಳೆಯುತ್ತಿದ್ದ ಲಕ್ಷ್ಮಣನ ಅಗಲುವಿಕೆಯಿಂದ ಜರ್ಝರಿತಳಾಗಿದ್ದಾಳೆ. ಅವಳಿಗೆ ಇನ್ನೊಬ್ಬ ಮಗನಿದ್ದಾನೆ ಶತೃಘ್ನ, ಅವನನ್ನಾದರೂ ನೋಡಿ ದುಃಖವನ್ನು ಭರಿಸಬಲ್ಲಳು. ಆದರೆ, ಮುದ್ದು ಮುಖದ ಎಲ್ಲರ ಮೆಚ್ಚಿನ ಸೊಸೆ ಊರ್ಮಿಳೆಯ ವಿರಹವನ್ನು ಸಮಾಧಾನಿಸುವುದಕ್ಕೆ ಅದು ಸಾಲುವುದಿಲ್ಲ.

ಗೋಡೆಯತ್ತ ಹಾಯಿಸುತ್ತಿದ್ದ ದೃಷ್ಟಿಗೆ ಒಮ್ಮೊಮ್ಮೆ ರಾಮನ ಗಾಂಭೀರ್ಯದ ಬಿಂಬ ಕಾಣುತ್ತದೆ, ಇನ್ನೊಮ್ಮೆ ದುಃಖಿಸುತ್ತಿರುವ ದಶರಥನ ಮುಖ ಕಾಣಿಸುತ್ತದೆ. ಮಗದೊಮ್ಮೆ ಲಕ್ಷ್ಮಣನ ಕ್ರೋಧಾವಿಷ್ಠ ಕಣ್ಣುಗಳು ತೋರುತ್ತವೆ. ಅದೋ! ಭರತನ ಆಕ್ರೋಶಭರಿತ ಮುಖ ಕಾಣುತ್ತಿದೆ ಈಗ. ಸೀತೆಯ ಸುಂದರ ಮುಖದ ಆತಂಕ ಅನುಭವಕ್ಕೆ ಬರುತ್ತದೆ. ಮಾಂಡವಿಯ ಮೌನ ಅಸಹನೀಯವಾಗಿದೆ. ಮತ್ತೆ ಗೋಡೆಯ ಮೇಲೆ ಮಂಥರೆಯ ದುಷ್ಟ-ಕೊಂಕು-ಕುಹಕಗಳಿಂದ ಕೂಡಿದ ಮುಖ. ಇದೆಲ್ಲವನ್ನೂ ತಾಳಲಾರದೆ ಕಣ್ಣು ಮುಚ್ಚಿದಳು. ಆದರೆ ದೃಷ್ಯಗಳು ಮನದಲ್ಲಿ ಅಚ್ಚೊತ್ತಿರುವಾಗ ಚರ್ಮ ಚಕ್ಷುಗಳನ್ನು ಮುಚ್ಚಿ ಪ್ರಯೋಜನವಿಲ್ಲ.

ಅಯೋಧ್ಯೆಯ ಜನರ ಕಣ್ಣು ದುಃಖದಿಂದ ಕೆಂಪಾಗಿದ್ದಲ್ಲ, ತನ್ನ ಮೇಲಿನ ಸಿಟ್ಟಿಗೆ ಅನ್ನಿಸುತ್ತದೆ ಆಕೆಗೀಗ. ಅವರು ತಮ್ಮ ತಮ್ಮಲ್ಲೇ ಕೈಕೇಯಿಯನು ದೂಷಿಸುವ ಮಾತಾಡುತ್ತಿದ್ದಾರೆ ಎಂದು ಆಕೆಗೆ ಅನ್ನಿಸುತ್ತಿದೆ. ರಾಜನನ್ನೂ ರಾಮನನ್ನೂ ಕಳೆದುಕೊಂಡು ಯಾರೂ ಎದೆ ಹೊಡೆದುಕೊಳ್ಳುತ್ತಿಲ್ಲ, ಕೈಕೇಯಿಯಂಥಾ ಮೂರ್ಖ ಹೆಂಗಸನ್ನು ತಮ್ಮ ರಾಣಿಯಾಗಿ ಒಪ್ಪಿಕೊಂಡಿದ್ದಕ್ಕೆ ಹಳಹಳಿಸಿ ಹಲುಬುತ್ತಿದ್ದಾರೋ ಎನ್ನುವ ಭಯ ಕೈಕೇಯಿಗೆ. ಮಗನಾಗಿದ್ದ ರಾಮನನ್ನು ಮಗನಲ್ಲ ಎಂದುಕೊಳ್ಳುವಾಗ ಇದ್ದ ಕಾಠಿಣ್ಯ ಆಕೆಯಲ್ಲಿಲ್ಲ ಈಗ. ತನ್ನ ಮುದ್ದು ರಾಮನನ್ನು ಒದ್ದು ಕಾಡಿಗೆ ಅಟ್ಟುವಾಗಿದ್ದ ಕಲ್ಲುತನ ಇಲ್ಲ ಈಗ. ಹಾಗಂತ ಕಲ್ಲು ಕರಗಿಲ್ಲ. ಭರ್ತ್ಸನೆಯ ನೋಟಗಳಿಗೆ, ಭರತನ ಮಾತಿನ ಇರಿತಕ್ಕೆ ಏಟು ತಿಂದಿದೆ ಕಲ್ಲು ಅಷ್ಟೆ. ಮಗ ಭರತ ನಿಜ. ಆದರೆ ಆತನೀಗ ತಾಯಿಯ ದುಃಖವನ್ನು ಭರಿಸಲಾರ. ಲಕ್ಷ್ಯ ಕೊಡುವುದಕ್ಕೆ ಲಕ್ಷ್ಮಣನಿಲ್ಲ. ತನ್ನನ್ನು ಬಾಧಿಸುತ್ತಿರುವ ಶತ್ರುವನ್ನು ಶತೃಘ್ನ ಘಾತಿಸಲಾರ. ಯಾಕೆಂದರೆ ತನ್ನ ಶತೃ ತಾನೇ. ತಾಯನ್ನು ಘಾತಿಸುವ ಹೀನ ಸಂಸ್ಕಾರಿಯಲ್ಲ ಆತ. ತನ್ನನ್ನು ಆಧರಿಸುವ ಬಾಹುಗಳಿದ್ದರೆ ಅದು ಆಜಾನುಬಾಹುವಾದ ರಾಮನಿಗೆ ಮಾತ್ರ. ಆದರೆ ಆತನನ್ನು ಕಾಡಿಗೆ ಅಟ್ಟಿಬಿಟ್ಟೆ ತಾನು. ರಂಜಿಸುವವ ರಮಿಸುವವ ಎನ್ನುವ ಅರ್ಥದ ಹೆಸರು-ಗುಣ ಎರಡೂ ಇದ್ದ ರಾಮ ಇಲ್ಲಿಲ್ಲದ ಮೇಲೆ ಮತ್ತೆ ಇನ್ನೇನು ಸಾಧ್ಯ. ರಾಮನ ವಿಚಾರದಲ್ಲಿ ಕಲ್ಲಾಗಿದ್ದ ತನ್ನನ್ನು ರಾಮ ಸಂಜೀವಿಸಲಿಲ್ಲ ಯಾಕೆ? ಅಹಲ್ಯೆಯನ್ನು ಶಿಲಾರೂಪದಿಂದ ಮುಕ್ತಗೊಳಿಸಿ ಆಕೆಯ ಶೀಲವನ್ನು ಎತ್ತಿಹಿಡಿದ ರಾಮ ತನ್ನೊಡನೆ ಕಲ್ಲಾಗಿಬಿಟ್ಟನೆ ಎನ್ನಿಸಿತು ಕೈಕೇಯಿಗೊಮ್ಮೆ.

ಸಮಾಧಾನಿಸಿಕೊಂಡಳು ತನ್ನನ್ನು ತಾನೇ. ತಾನು ಕಲ್ಲಾಗಿದ್ದರೆ ರಾಮ ಉದ್ಧರಿಸುತ್ತಿದ್ದನೇನೋ. ಆದರೆ ತಾನು ವಜ್ರಲೇಪಿತ ಶಿಲೆಯಾಗಿಬಿಟ್ಟಿದ್ದೆ. ತಾನುಬ್ಬಳು ಮೂರ್ಖ ಹೆಂಗಸು. ಯಾರನ್ನು ಎಲ್ಲಿಡಬೇಕು ಎಂದು ತಿಳಿಯದವಳು. ಮಂಥರೆಯನ್ನು ಮನಸ್ಸಿನಲ್ಲಿಟ್ಟೆ. ರಾಮ ಹುಟ್ಟಿದ ಮೇಲಲ್ಲವೇ ಅರಮನೆ ತುಂಬಿದ್ದು? ಅದಕ್ಕೇ ಅಲ್ಲವೆ ಒತ್ತಿನವನಾದ ಭರತನಿಗೆ ಹೆಸರನ್ನಿಟ್ಟಿದ್ದು. ಇಂತಾದಮೇಲೆ ಎಲ್ಲರ ಲಕ್ಷ್ಯ ಕಡೆ ಹರಿಯಿತು. ಮೂರನೆಯವನನ್ನು ಲಕ್ಷ್ಮಣ ಎಂದು ಕರೆದಿದ್ದು ಕಾರಣಕ್ಕೆ. ನಾಲ್ಕನೆಯವನಾದ ಶತೃಘ್ನ ಹುಟ್ಟಿದ ಮೇಲೆ ಅರಮನೆಯನ್ನು-ಕೋಸಲವನ್ನು ಬಾಧಿಸುತ್ತಿದ್ದ ಮಕ್ಕಳಿಲ್ಲ ಎನ್ನುವ ದುಃಖ ರೂಪದ ಶತೃವೇ ಇಲ್ಲದಾದ. ಇದನ್ನೆಲ್ಲ ಅರಿಯದ ಅಜ್ಞೆ ನಾನು ಎಂದುಕೊಂಡು ಮುಂಡಿಗಳ ನಡುವೆ ಮುಖ ಹುದಿಗಿಸಿ ಅತ್ತಳು ಕೈಕೇಯಿ.

ಆಕೆಯ ಕಿವಿಗಳಲ್ಲಿ ಒಮ್ಮೆ ಭರತನ ಬಿರುನಿಡಿಗಳು ಧ್ವನಿಸುತ್ತಿವೆ. ಲಕ್ಷ್ಮಣನಾಡಿದ ನಿಂದೆಯ ಮಾತುಗಳು ಮರೆಯುತ್ತಿವೆ. ಬೆನ್ನಿನಲ್ಲೇ ರಮಣ ದಶರಥ ಭೂಪನ ಬಿಕ್ಕುಗಳು ಕೇಳುತ್ತಿವೆ. ಇದೆಲ್ಲದಕ್ಕೂ ಕಾರಣವಾದ ಮಂಥರೆಯ ಚಾಡಿಗಳು, ಒಡ್ಡಿದ ಬೆದರಿಕೆಗಳು ಮೊರೆಯುತ್ತಿವೆ. ತಾಳಲಾರದೆ ಕೈಗಳಿಂದ ಕಿವಿಯನ್ನು ಮುಚ್ಚಿ ದೃಷ್ಟಿಯನ್ನು ಬಾಗಿಲಿನತ್ತ ಹಾಯಿಸಿದಳು ಕೈಕೇಯಿ. ಗಿಡ್ಡ ದೇಹದ ಅಡ್ದ ಮೂಗಿನ ಗೊಡ್ಡು ಬೆನ್ನಿನ ಮಂಥರೆ ಕೋಲೂರಿಕೊಂಡು ಕೆಮ್ಮುತ್ತಾ ಬರುತ್ತಿರುವ ದೃಷ್ಯವನ್ನು ಭ್ರಮಿಸಿದಳು. ರಾಮನ ಪಟ್ಟಾಭಿಷೇಕದಲ್ಲಿ ಸಂಭ್ರಮಿಸಬೇಕಾದವಳು ಭ್ರಮೆಗೆ ಸಿಕ್ಕಿ ಒದ್ದಾಡುತ್ತಿದ್ದಾಳೆ ಈಗ. ಕರೆದರೆ ಒಡೋಡಿ ಬರುವ ದಾಸಿಯರನ್ನು ಹೊಂದಿದ್ದ ಕೈಕೇಯಿ ಭ್ರಮೆಯನ್ನು, ಅದರಿಂದ ಬಂದ ಭೀತಿಯನ್ನು ತಾಳಲಾರದೆಬಾಗಿಲನ್ನು ಮುಚ್ಚುವುದಕ್ಕೆ ಓಡಿದಳುಯಾರೋ ಬಾಗಿಲನ್ನು ತಡೆದರು.

"ಯಾರು" ಎಂದಳು ಕೈಕೇಯಿ, ಭಯ ಮಿಶ್ರಿತ ಕ್ಷೀಣ ಗಾಂಭೀರ್ಯದಲ್ಲಿ.

"ನಾನು ಶೃತಕೀರ್ತಿ. ನನ್ನ ಸ್ವಾಮಿಗೆ ನಿಮ್ಮೊಡನೆ ಮಾತಾಡುವುದಿದೆಯಂತೆ. ಬರಲು ನಿಮ್ಮ ಅಪ್ಪಣೆ ಬೇಕಂತೆ"

"ಮಗನಿಗೆ ತಾಯಿಯನ್ನು ಕಾಣಲು ಅಪ್ಪಣೆ ಬೇಕಿಲ್ಲ ಮಗಳೇ, ಆತ್ಮೀಯತೆ ಬೇಕು. ದುರಾತ್ಮೆ ಕೈಕೇಯಿಯ ಮಕ್ಕಳು ಆಕೆಯಂತಲ್ಲ. ಅವರು ರಾಮನ ತಮ್ಮಂದಿರು. ಅವರು ಸದಾಕಾಲ ಇಲ್ಲಿಗೆ ಬರಬಹುದು"

ಶತೃಘ್ನ ಬಂದು ಕೈಕೇಯಿಗೆ ಎಂದಿನ ಭಕ್ತಿಯಿಂದಲೇ ನಮಸ್ಕರಿಸಿ ಮುಂಡಿಯೂರಿಯೇ ಹೇಳಿದ, "ಅಮ್ಮಾ!! ಅಣ್ಣ ಭರತ ಕಾಡಿಗೆ ಹೊರಟಿದ್ದಾನೆ...."

"ಹೋಗಲಿ ಮಗು. ಕುಮಾತೆಯ ಮಗ ಎನ್ನಿಸಿಕೊಂಡು ಆತ ಇಲ್ಲಿ ಬದುಕುವುದು ಬೇಡ. ರಾಮನ ತಮ್ಮ ಆತ. ಅಲ್ಲಿಗೆ ಹೋಗಲಿ. ಅಣ್ಣನ ಸೇವೆ ಮಾಡಿ ದುಷ್ಟೆಯ ಹೊಟ್ಟೆಯಲ್ಲಿ ಹುಟ್ಟಿದ ಪಾಪ ತೊಳೆದುಕೊಳ್ಳಲಿ"

"ಅಮ್ಮಾ, ಅಣ್ಣ ಅಲ್ಲಿಗೆ ಹೊರಟಿದ್ದಾನೆ ಅಷ್ಟೆ. ಆತ ದೊಡ್ದಣ್ಣನನ್ನೂ ಅತ್ತಿಗೆಯನ್ನೂ ಮತ್ತೆ ಕರೆತರುತ್ತಾನಂತೆ. ಮಂಗಳ ಕಾರ್ಯಕ್ಕೆ ನಿಮ್ಮ ಆಶೀರ್ವಾದ ಬೇಕಂತೆ."

"ತಾಯಿಯ ಮುಖವನ್ನೂ ನೋಡಲು ಬಯಸದ ಭರತನಿಗೆ ತಾಯಿಯ ಆಶೀರ್ವಾದ ಬೇಕು. ಅದೂ ಎಂಥಾ ತಾಯಿ, ತಂದೆಯ ಸಾವಿಗೆ ಕಾರಣಳಾದ ತಾಯಿಯ ಆಶೀರ್ವಾದ. ಇದು ಸರಿಯೇ ಶತೃಘ್ನ?"

" ಅಮ್ಮಾ!! ಅಣ್ಣನನ್ನು ಅರ್ಥ ಮಾಡಿಕೊಳ್ಳಿ. ತಂದೆ ಇಲ್ಲದ ದುಃಖ, ಅಣ್ಣ ಕಾಡು ಪಾಲಾದ ನೋವು, ಮೇಲಿನಿಂದ ಗಂಡನನ್ನು ಕಳೆದುಕೊಂಡ ಮೂವರು ತಾಯಿಯರ ಗೋಳು, ಹೆತ್ತ ತಾಯಿಯನ್ನು ನಿಂದಿಸಿದ ಪಾಪ ಪ್ರಜ್ಞೆಗಳಿಂದ ಮೊದಲೇ ಆತ ಕುಗ್ಗಿದ್ದಾನೆ. ಆತ ನಿಮ್ಮನ್ನು ನಿಂದಿಸಿದ್ದಕ್ಕೆ ನೊಂದು, ನಿಮಗೆ ಮುಖ ತೋರಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದಾನೆ. ನೀವೇ ಬಂದು ಅವನನ್ನು ಸಂತೈಸಿ, ಆಶೀರ್ವದಿಸಿ ಅಮ್ಮ. ಅಣ್ಣ ಇಲ್ಲಿಗೆ ಬರುವುದು ಬೇಡ ಅಂತಲೇ ಈಗಲೂ ನಿಮ್ಮ ಮನಸ್ಸಿನಲ್ಲಿದ್ದರೆ, ನಾನೂ ಭರತಣ್ಣನೂ ನಮ್ಮ ಮಡದಿಯರನ್ನು ಕರೆದುಕೊಂಡು ಕಾಡಿಗೆ ಹೋಗುತ್ತೇವೆ. ಆದರೆ ಸಧ್ಯಕ್ಕಾದರೂ ಅಣ್ಣನನ್ನು ಕಾಣಿರಿ"

"ನೀನೂ ಚುಚ್ಚಿಬಿಟ್ಟೆಯಾ ಶತೃಘ್ನ, ನಿನ್ನ ಮಾತಿನ ಭರ್ಜಿಯಿಂದ?! ರಾಮ ಇಲ್ಲದೇ ತುಸುಕಾಲವೇ ಕಳೆದಿದ್ದರೂ ನಾನು ಬಹುಕಾಲದ ನೋವು ಅನುಭವಿಸಿದ್ದೇನೆ. ನನ್ನನ್ನು ಭರತನೆಡೆಗೆ ಕರೆದೊಯ್ಯಿ."

ಕೈಕೇಯಿಯ ಕಾಲಿಗೆ ಮಣಿದು ಭರತ ರಥವನ್ನೇರಿ ಹೊರಟ. ಅವನತ್ತಲೇ ನೋಡುತ್ತಿದ್ದ ಕೈಕೇಯಿ ಆತ ಮರೆಯಾಗುತ್ತಲೇ ಕುಸಿದು ಬಿದ್ದಳು. ಊರ್ಮಿಳೆ ಆಕೆಯನ್ನು ಆಧರಿಸಿ ಅಂತಃಪುರಕ್ಕೆ ಕರೆದುಕೊಂಡು ಹೋದಳು.

******************************************************************************

ಎಚ್ಚರಗೊಂಡ ಕೈಕೇಯಿ, ಅರಮನೆಯ ಎಲ್ಲರ ಮುಖದಲ್ಲೂ ಸಮಾಧಾನ ಇದ್ದಿದ್ದನ್ನು ನೋಡಿದಳು. ಪಕ್ಕದಲ್ಲೇ ಇದ್ದ ಮಾಂಡವಿಯಲ್ಲಿ ಕಾರಣ ಕೇಳಬೇಕೆನ್ನಿಸಿದರೂ ಕೇಳಲಿಲ್ಲ. ಚುಚ್ಚು ಮಾತಾಡಿದರೆ ಎನ್ನುವ ಭಯ. ಆದರೆ ಮಾಂಡವಿ ಕೂಗಿ ಕೂಗಿ ಹೇಳುತ್ತಿದ್ದಳು "ರಾಜ ಮಾತೆಗೆ ಎಚ್ಚರವಾಗಿದೆ" ಎನ್ನುತ್ತಾ. ಎಲ್ಲರೂ ಓಡೋಡಿ ಕಡೆ ಬರುತ್ತಿದ್ದರು. ಕೈಕೇಯಿ ವಿಹ್ವಲಳಾದಳು. ಕೊನೆಗೂ ಭರತನಿಗೆ ಪಟ್ಟ ಕಟ್ಟಿಬಿಟ್ಟರೇ ಎಂದುಕೊಂಡು. ಸಾವರಿಸಿಕೊಂಡು ಕೇಳಿದಳು. "ರಾಮ ಬಂದನೇ ತಿರುಗಿ" ಮಾಂಡವಿ ಹೇಳಿದಳು "ಇಲ್ಲ"

ಆತಂಕದಿಂದ ಕೈಕೇಯಿ "ಭರತನಿಗೆ ಪಟ್ಟ ಕಟ್ಟಿಬಿಟ್ಟರೇ" ಎಂದಳು.

"ಇಲ್ಲ"

"ಮತ್ತೇಕೆ ನನ್ನನ್ನು ರಾಜಮಾತೆ ಎಂದೆ?"

"ಸ್ವಾಮಿಯವರು ಭಾವನವರ ಪಾದುಕೆ ತಂದಿದ್ದಾರೆ. ಅಯೋಧ್ಯೆಯ ಜನ ಸಮಾಧಾನಪಟ್ಟರು ಅದರಿಂದ. ರಂಜಿಸಿದ್ದರಿಂದ ನಮ್ಮವರು ರಾಜನಾದರು, ನೀವು ರಾಜಮಾತೆಯಾದಿರಿ"


ಇಷ್ಟರಲ್ಲಿ ಭರತ ಶತೃಘ್ನರು ಬಂದು ಕೈಕೇಯಿಯನ್ನು ಓಲಗಚಾವಡಿಗೆ ಕರೆದೊಯ್ದರು. ಅಲ್ಲಿದ್ದ ಪಾದುಕೆಯನ್ನು ತೊಡೆಯಮೇಲಿಟ್ಟುಕೊಂಡು ಕೈಕೇಯಿ ನೇವರಿಸತೊಡಗಿದಳು. ಅಳತೊಡಗಿದಳು. ಕೌಸಲ್ಯೆ, ಕೈಕೇಯಿಯ ಮುಖವನ್ನು ಭುಜದ ಮೇಲಿಟ್ಟುಕೊಂಡಳು, ತನ್ನ ಮುಖವನ್ನು ಕೈಕೇಯಿಯ ಭುಜದ ಮೇಲೆ ಇಟ್ಟಳು. ಕೈಕೇಯಿಯ ತಾಪವೆಲ್ಲ ಕಣ್ಣೀರಾಗಿ ಹರಿದಿತ್ತು. ಕೌಸಲ್ಯೆಯ ಕಣ್ಣೀರು ಕೈಕೇಯಿಯ ಪಾಪವನ್ನು ತೊಳೆದಿತ್ತು.

No comments:

Post a Comment