Tuesday, January 30, 2018

ಶುಕ್ರನ ವೇಷ

ಅಂತೂ ಶುಕ್ರನ ಬಣ್ಣ ಮುಗಿಯಿತು. ಇತ್ತ ರಂಗಸ್ಥಳ ಹತ್ತಿದ ಭದ್ರಸೇನ, ಒಳ್ಳೆ ಉಮೇದಿನಲ್ಲಿದ್ದ. ಎಷ್ಟು ಕುಣಿದರೂ ದಣಿಯಲಿಲ್ಲ. ರಂಗಸ್ಥಳ ಬಿಡುವುದಕ್ಕೇ ತಯಾರಿಲ್ಲ ಮನುಷ್ಯ. ಆದ್ದರಿಂದ ಶುಕ್ರನ ಪ್ರವೇಶ  ತಡವಾಗುತ್ತಲೇ ಹೋಯಿತು.

ಇಷ್ಟರಲ್ಲಿ ಶುಕ್ರಾನಿಗೆ ದಿಗಿಲು ಹತ್ತಿಕೊಂಡಿತು. ಅಕ್ಕ ಪಕ್ಕದ ಮನೆಯವರೆಲ್ಲಾ ತನ್ನ ವೇಷ ಬರುವ  ಹೊತ್ತಿಗೆ ಮಲಗಿ ಬಿಟ್ಟರೆ ಅಥವಾ ಮನೆಗೆ ಹೋಗಿ ಬಿಟ್ಟರೆ, ತಾನು ಇಷ್ಟೆಲ್ಲಾ ಕಷ್ಟ ಪಟ್ಟಿದ್ದು ನಿರರ್ಥಕವಾಗುತ್ತದಲ್ಲಾ ಎನ್ನಿಸಿತು. ಅದಕ್ಕೇ ಪದೇ ಪದೇ ಚೌಕಿಯಿಂದ ಹೊರಬಂದು ಇಣುಕುತ್ತಿದ್ದ. ಕೈಸನ್ನೆ ಬೇರೆ ಮಾಡಿ ಹೇಳುತ್ತಿದ್ದ "ನಾ ಬತ್ತೆ!! ನಿಂತ್ಕಣಿ!! ಕಂಡ್ಕ ಹ್ವಾಯಿನಿ!!" ಎನ್ನುವಂತೆ

ಅದಕ್ಕೆ ಚೌಕಿಯಿಂದ ಹೊರಬಂದು ನಿಂತ. ನೋಡುತ್ತಾನೆ, ಅವನ ಹೆಂಡತಿ ಜಾನಕಿ ಬರುತ್ತಿದ್ದಾಳೆ, ಪಕ್ಕದ ಮನೆಯ ಗುಲಾಬಿಯೊಟ್ಟಿಗೆ. ಪ್ರೀತಿ ಉಕ್ಕಿ ಬಂದು " ಜಾನಕಿ, ಇಕಾಣ್!!" ಎಂದು ಅರಚಿದ. ಅವಳು ತಿರುಗುವಷ್ಟರಲ್ಲಿ ಕೈಗಳೆರಡನ್ನೂ ಚಾಚಿ ಭರ್ಜರಿ ಪೊಸಿನಲ್ಲಿ ನಿಂತಿದ್ದ. ವೇಷ ಮಾಡಿದ್ದು ಶುಕ್ರ ಎಂದು ತಿಳಿಯದೆ ಜಾನಕಿ ಭಯಗೊಂಡಳು. ಆದರೆ ಪಕ್ಕದಲ್ಲಿದ್ದ ಗುಲಾಬಿ ಮೊದಲೇ ಗಯ್ಯಾಳಿ, ಈಗಂತೂ ಮುಳ್ಳಿನ ಗುಲಾಬಿಯಾದಳು.
" ಹೆಕ್ಕ ತಿಂಬನೇ!! ಯಾವನ ನೀನ್!! ಜಾನಕ್ಕನ ಗಂಡ ಯಾರ್ ಅಂತ ಗೊತ್ತೀತ? ಅವ್ರೂ ವೇಷ ಮಾಡ್ತ್ರ್ಅವ್ರಿಗೆ ಗೊತ್ತಾರೆ ಚಳಿ ಬಿಡಸ್ತ್ರ್ ಕಾಣ್. ಅವ್ರ್ ಬಾಂಬಿಯಂಗೆ ಇದ್ದು ಬಂದರ್. ಗೊತ್ತೀತ!! ಎಲ್ ಕಂಡ್ರೂ ಹೀಂಗೆ ಆಯ್ತಲ ಕತಿ. ನಿಮ್ ಜಾತಿಯವ್ವೆಲ್ಲ ಹೀಂಗೆಯಾ!! ಯಾರ್ದಾರು ಹೆಂಡ್ತಿ ಸುದ್ದಿಗೆ ಹ್ವಾಪುದ್, ಪೆಟ್ ತಿ೦ದ್ ಸಾವುದ್. ಸಾವುಕೆ."

ಶುಕ್ರ ತನ್ನ ವೇಷ ನೈಜವಾಗಿದೆ ಮತ್ತು ಗುಲಾಬಿ ತಾನು ಹೇಳಿದ್ದೆಲ್ಲಾ ನಂಬಿದ್ದಾಳೆಎನ್ನುವುದನ್ನೆಲ್ಲಾ ತಿಳಿದು ಸಂತೋಷ ಪಟ್ಟ. ಆದರೆ, ಹೆಕ್ಕ ತಿಂಬನೇ ಅಂದಿದ್ದನ್ನು ಕಷ್ಟಪಟ್ಟು ಸಹಿಸಿಕೊಂಡ. ಸಾವರಿಸಿಕೊಂಡು, "ನಾನೇ!! ಶುಕ್ರಣ್ಣ" ಎಂದ. ಜಾನಕಿ ಹೆಮ್ಮೆಯಿಂದ ನಾಚಿದ್ದರೆ, ಗುಲಾಬಿ ಅವಮಾನದಿಂದ ನಾಚಿದ್ದಳು. ಜಾನಕಿ ಮತ್ತು ಗುಲಾಬಿಗೆ ಒಳಗಿಂದ ಚಾ ತರಿಸಿ ಕೊಟ್ಟು ಕಳಿಸಿದ. ಮತ್ತೆ ಅವನಿಗೆ ತನ್ನ ಭಾವಿ ಅಭಿಮಾನಿಗಳ ಕಾಳಜಿ ಮೂಡಿತು. ಅಲ್ಲೇ ಇಣುಕುವುದು ಕೈ ಸನ್ನೆ ಮಾಡಿ "ನಾ ಬತ್ತೆ! ನಿಂತ್ಕಣಿ!" ಎಂದು ಹೇಳುವುದು ನಡೆಯುತ್ತಲೇ ಇತ್ತು. ಇದನ್ನೇ ಮಾಡಿ ಬೇಸತ್ತು ಹೋದ ಶುಕ್ರ.

ಇತ್ತ ಭದ್ರಸೇನ ರತ್ನಾವತಿಯನ್ನು ಹುಡುಕುತ್ತಾ ಅವಳ ಶಯ್ಯಗಾರದ ಕಡೆ ಹೋದ. ಬೇಸತ್ತಿದ್ದ ಶುಕ್ರ, ಇನ್ನೇನು ಭಾಗವತ ನಾಗೇಂದ್ರ, "ರನ್ನದುಪ್ಪರಿಗೆ ಏರಿ..." ಹೇಳಲು, ""ಎಂದಿದ್ದ ಅಷ್ಟೇ. ಶುಕ್ರ ರಂಗಸ್ಥಳಕ್ಕೆ ಧಾವಿಸಿಯೇ ಬಿಟ್ಟ. ಸಮಯಪ್ರಜ್ಞೆ ಇದ್ದ ನಾಗೇಂದ್ರ ರಕ್ಕೆ " ರಕ್ಕಸನಿತ್ತ ಭೂರಿಡುತಲಿ...." ಎನ್ನುತ್ತಾ ಪ್ರಸಂಗದಲ್ಲಿಲ್ಲದ ಪದ್ಯ ಹೇಳಿದ. ತನಗೆ ಬಂದಷ್ಟನ್ನು ಶುಕ್ರ ಕುಣಿದು ಭಾವಿ ಅಭಿಮಾನಿಗಳ ಮನ ತಣಿಸಿದ.

ಇಷ್ಟರಲ್ಲಿ ಭದ್ರಸೇನನಿಗೆ ಪದ್ಯ ಹೇಳಿ, ನಾಗೇಂದ್ರ ಹೊರ ಬಂದು ಶುಕ್ರನಿಗೆ ಎಚ್ಚರಿಕೆಯ ಮಾತಾಡಿ ಹೋದ. ಅಂತೂ ಶುಕ್ರನ ಪ್ರವೇಶವಾಯಿತು. ಆಟ ಮುಂದುವರೆಯಿತು. ಉಳಿದ ಕಲಾವಿದರಿಗೆಲ್ಲಾ ಶುಕ್ರನ ಹಣೆಬರಹ ಗೊತ್ತಿದ್ದರಿಂದ ಅವರು ಜಾಸ್ತಿ ಕಾಡಿಸಲಿಲ್ಲ. ಆಟ ಹಾಳಾದರೆ ಎಂಬ ಭಯದಿಂದ. ಆದರೆ ಭದ್ರಸೇನನ ಧ್ವನಿ ಎಲ್ಲೋ ಕೇಳಿದಂತಿತ್ತು. ಅಂತೂ ಆಟ ಮುಗಿಯಿತು. ಶುಕ್ರ ಪ್ರಯಾಸದಿಂದ ಚೌಕಿ ಮನೆಯಲ್ಲಿ ವೇಷ ಕಳಚಿ ಪಕ್ಕಕ್ಕೆ ತಿರುಗಿದ. ಪಕ್ಕದಲ್ಲೇ ಮಲಗಿದ್ದ ಮಹಾಬಲ ಭಟ್ಟ, "ಅಡ್ಡಿಲ್ಲ ಶುಕ್ರ ನಿಂದು" ಎಂದ. ಶುಕ್ರ ಮತ್ತೆ ತನ್ನ ಹರಕು ಬಾಯಿ ತೆಗೆದು, "ನೀವ್ ಕಂಡ್ರ್ಯಾ?" ಎಂದ.

ಮಹಾಬಲ, "ನಾನೇ ಮಾರಾಯ ಭದ್ರಸೇನನ್ನ ಮಾಡಿದ್ದು" ಎಂದ.


ಮನಸ್ಸಿನಲ್ಲೇ ಶುಕ್ರ, "ಕಿಚ್ ಹಿಡೂಕೆ ಮುಂದೆಂತ ಹೇಳುದ್? ಇವ ಊರೆಲ್ಲ ಮಾನ ತೆಗೂಕಿದ್ದ. ಬಜ್ಜಕೆ." ಎಂದು ತನ್ನ ವಿಧಿಯನ್ನೂ, ಮಹಾಬಲನನ್ನೂ ಒಟ್ಟಿಗೆ ಶಪಿಸಿದ.

No comments:

Post a Comment