Thursday, January 11, 2018

ಮೇದಿನಿ

ನೀರು ಜೀವನಾಧಾರ. ನೀರಿಲ್ಲದೇ ನಾವ್ಯಾರೂ ಇಲ್ಲ. ನೀರು ಪಡೆದುಕೊಳ್ಳುವಷ್ಟು ಆಯಾಮ ಪ್ರಕಾರಗಳು ಮತ್ಯಾವುದೇ ಧಾತು ಪಡೆಯುವುದಿಲ್ಲ. ಹರಿವ ತೊರೆಯಾಗಿ, ನಿಂತ ಕೆರೆಯಾಗಿ, ಮನೋಹರ ಜಲಪಾತವಾಗಿ, ಎಲ್ಲವನ್ನೂ ಸೆಳೆದುಕೊಳ್ಳುವ ಮಡುವಾಗಿ ಸುಳಿಯಾಗಿ ಭೋರ್ಗರೆಯುವ ಸಮುದ್ರವಾಗಿ, ಹಿಮವತ್ ಪರ್ವತಗಳಲ್ಲಿ ಘನೀಭೂತವಾಗಿ, ಶಿಶಿರ ಹೇಮಂತಗಳಲ್ಲಿ ಮಂಜಾಗಿ ಕಾಣುತ್ತದೆ ನೀರು. ಮೊದಲು ಆಸ್ತಿ ಭಾಗ ಮಾಡುವಾಗ ನೀರಿನ ಲಭ್ಯತೆ ಅಲಭ್ಯತೆಗಳ ಮೇಲೆಯೇ ಆಸ್ತಿ ಭಾಗ ಮಾಡುತ್ತಿದ್ದರಂತೆ. ಮನೆ ಕಟ್ಟುವಾಗಲೂ ಹಾಗೆಯೇ, ನೀರಿನ ಲಭ್ಯತೆ ಬಹಳ ಮುಖ್ಯ.

            ರಾಜಕೀಯದಲ್ಲಿ ರಂಗಿನಾಟ ನಡೆಯುವುದು ಎಷ್ಟೋ ಸಲ ರಾಜ್ಯ ರಾಜ್ಯಗಳ ನಡುವಿನ ನೀರು ಹಂಚಿಕೆಯ ವಿಷಯದಲ್ಲೇ ಅಲ್ಲವೇ. ಜಯಲಲಿತಾ ಬಿಡಿ. ನೀರಿನ ಬಗ್ಗೆಯೇ ಮಾತಾಡಿ ಜೀವನ ಕಳೆದರು. ನೀರಿನ ವ್ಯವಸ್ಠೆ ಮಾಡುವ ಬಗ್ಗೆ ಅತೀವ ಆಸ್ಠೆ ಹೊಂದಿಯೇ ನಜೀರ್ ಸಾಬರು ನೀರ್ ಸಾಬರು ಎಂದು ಪ್ರಸಿದ್ಧರಾದರು.

            ನೀರನ್ನು ಜೀವನ ಎಂದು ಕೂಡಾ ಕರೆದಿದ್ದಾರೆ. ಹೇಗೆ ನೀರು ತನ್ನ ಆಯಾಮ ಪ್ರಕಾರಗಳನ್ನು ಬದಲಿಸಿಕೊಳ್ಳುತ್ತಲೂ ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುವುದಿಲ್ಲವೋ ಹಾಗೆಯೇ ನಮ್ಮ ಬದುಕು ಕೂಡಾ ಇರಬೇಕು ಎನ್ನುವುದು ಇದರ ಹಿಂದಿನ ಆಶಯವೇನೋ. ಏನೇ ಇದ್ದರೂ ನೀರನ್ನು ಬದುಕಿನಿಂದ ಪ್ರತ್ಯೇಕಿಸುವುದು ಅಸಾಧ್ಯ.

 ಅನುಭವ ಅಳೆಯುವುದು ಕೂಡಾ ನೀರಿನಿಂದ. ಎಷ್ಟು ಕೆರೆ ನೀರು ಕುಡಿದವನೋ ಏನೋ ಎನ್ನುವ ಮಾತೇ ಇದಕ್ಕೆ ಉದಾಹರಣೆ. ಶಿಕ್ಷೆ ಕೂಡಾ ನೀರಿನಿಂದ. "ನಿನಗೆ ನೀರು ಕುಡಿಸುತ್ತೇನೆ ನೋಡು" ಎನ್ನುವ ಮಾತುಗಳನ್ನು ನಾವೆಷ್ಟು ಸಲ ಆಡಿಲ್ಲ ಕೇಳಿಲ್ಲ. ಬುದ್ಧಿ ಬರುವುದಕ್ಕೂ ನೀರಿನ ಮಾತಿದೆ-"ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು!!". ಆರ್ಕಿಮಿಡಿಸ್ ಕೂಡಾ ನೀರಿನಲ್ಲಿಳಿದೇ ವಸ್ತುಗಳ ದ್ರವ್ಯರಾಶಿ ಸಾಂದ್ರತೆಗಳ ನಿಯಮ ತಿಳಿದಿದ್ದು. ಮೂಲವನ್ನು ಮರೆತ ನಮಗೆ ಮರೆಗುಳಿ ಆರ್ಕಿಮಿಡಿಸ್ ಯುರೇಕಾ ಯುರೇಕಾ ಎನ್ನುತ್ತಾ ಓಡಿದ್ದು ಮಾತ್ರ ನೆನಪಿದೆಯೇ ಹೊರತು, ನಿಯಮ ಕೊಟ್ಟ ನೀರಲ್ಲ.

            ನೀರು ಕೆಲವು ಸಲ ಕಾಡಿಸಿ ಬಿಡುತ್ತದೆ. ಮಲಿನವಾಗಿ ಕಾಡುತ್ತದೆ. ನೆರೆ ಉಕ್ಕಿ ತೊಂದರೆ ಕೊಡುತ್ತದೆ. ಸುನಾಮಿ ಮರೆಯಲಾದೀತೇ? ಸಾಧ್ಯವೇ ಇಲ್ಲ. ಮುಂದಿನ ಮಹಾಯುದ್ಧ ನಡೆದರೆ ಅದು ಕೂಡಾ ನೀರಿಗಾಗಿ ಎನ್ನುವ ಮಾತಿದೆ. ಜಗತ್ತನ್ನು ಸದಾ ತನ್ನ ಅಧೀನದಲ್ಲಿಟ್ಟುಕೊಂಡು ಅದನ್ನು ಸೃಜಿಸಿ-ಉಳಿಸಿ-ಬೆಳೆಸಿದ ನೀರು ನಮ್ಮ ಸರ್ವನಾಶಕ್ಕೆ ಕಾರಣವಾಗುವುದಿಲ್ಲ ಎನ್ನುವ ನಂಬಿಕೆ ನಮಗಂತೂ ಇದೆ. ಭೂಮಿಯ ಮೇಲೆ ೭೫% ಕ್ಕಿಂತ ಜಾಸ್ತಿ ಇರುವ ನೀರು ಹೀಗೆ ಮಾಡಲಾರದು.

             ಭೂಮಿ ಕೂಡಾ ಮೊದಲು ಜಲಗೋಳವೇ ಆಗಿತ್ತಂತೆ. ಹೀಗೆನ್ನುತ್ತದೆ ವಿಜ್ಞಾನ. ನೀರಿನಿಂದಲೇ ಜೀವಿಗಳ ಉಗಮವಾಗಿದ್ದಂತೆಅದು ಜಲಗೋಳವಾಗುವ ಮೊದಲು ಉರಿಯುತ್ತಿದ್ದ ಅಗ್ನಿಗೋಳವಾಗಿತ್ತಂತೆ. ನನ್ನ ತಲೆಹರಟೆ ಇಲ್ಲಿಂದ ಶುರುವಗುತ್ತದೆ. ಅಗ್ನಿಗೋಲ ಬಂದಿದ್ದು ಹೇಗೆ? ಅದಕ್ಕೂ ಮೊದಲು ಅದು ಏನಾಗಿತ್ತು? ಅಗ್ನಿ, ತನ್ನ ಅಸ್ತಿತ್ವವನ್ನೇ ಇಲ್ಲವಾಗಿಸುವ ನೀರನ್ನು ಹೇಗೆ ಸೃಷ್ತಿಸಿತು? ಅದೆಲ್ಲ ಹೇಗೆ ಬಂತು ಎಂಬಿತ್ಯಾದಿ ಪ್ರಶ್ನೆಗಳು ಮೂಡುತ್ತವೆ. ನಾನು ವಿಜ್ಞಾನದ ವಿದ್ಯಾರ್ಥಿ ಅಲ್ಲದ್ದರಿಂದ ಅವರು ಕೊಡುವ ಯಾವ ವ್ಯಾಖ್ಯಾನವೂ ನನ್ನ ತಲೆಗೆ ಹೋಗಲಿಲ್ಲ. ನಾನೂ ಬಹಳ ತಲೆ ಕೆಡಿಸಿಕೊಳ್ಳಲಿಲ್ಲ. ಮೊನ್ನೆ ಮೊನ್ನೆ ಓದಿ ಮುಗಿಸಿದ ವಿಷ್ಣು ಪುರಾಣ ಸರಳವಾಗಿ ಮತ್ತು ಸುಲಭವಾಗಿ ಪ್ರಶ್ನೆಗೆ ಉತ್ತರ ಕೊಟ್ಟಿದೆ, ಪ್ರಥಮಾಂಶದ ಎರಡನೇ ಅಧ್ಯಾಯದಲ್ಲಿ.

ಸಸರ್ಜ ಶಬ್ದತನ್ಮಾತ್ರಾದಾಕಾಶಂ ಶಬ್ದಲಕ್ಷಣಮ್|
ಶಬ್ದಮಾತ್ರಮ್ ತಥಾಕಾಶಮ್ ಭೂತಾದಿಃ ಸಮಾವೃಣೋತ್||

ಆಕಾಶಾತ್ತು ವಿಕುರ್ವಾಣಃ ಸ್ಪರ್ಶಮಾತ್ರಂ ಸ್ಸರ್ಜ |
ಬಲವಾನಭವದ್ವಾಯುಸ್ತಸ್ಯ ಸ್ಪರ್ಶೋ ಗುಣೋ ಮತಃ||

ಆಕಾಶಂ ಶಬ್ದಮಾತ್ರಂ ತು ಸ್ಪರ್ಶಮಾತ್ರಂ ಸಮಾವೃಣೋತ್|
ತತೋ ವಾಯುರ್ವಿಕೌರ್ವಾಣೋ ರೂಪಮಾತ್ರಂ ಸಸರ್ಜ ||

ಜ್ಯೋತಿರುತ್ಪದ್ಯತೇ ವಾಯುಸ್ತದ್ರೂಪಗುಣಮುಚ್ಯತೇ|
ಸ್ಪರ್ಶಮಾತ್ರಮ್ತು ವೈ ವಾಯೂ ರೂಪಮಾತ್ರಂ ಸಮಾವೃಣೋತ್||

ಜ್ಯೋತಿಶ್ಚಾಪಿ ವಿಕುರ್ವಾಣಂ ರಸಮಾತ್ರಂ ಸಸರ್ಜ |
ಸಮ್ಭವನ್ತಿ ತತೋಽಮ್ಭಾಸಿ ರಸಾಧಾರಾಣಿ ತಾನಿ ||

ರಸಾಮಾತ್ರಾಣಿ ಚಾಮ್ಭಾಂಸಿ ರೂಪಮಾತ್ರಮ್ ಸಮಾವೃಣೋತ್|
ವಿಕುರ್ವಾಣಿ ಚಾಮ್ಭಾಂಸಿ ಗನ್ಧಮಾತ್ರಂ ಸಸರ್ಜಿರೇ||

ಸಂಘಾತೋ ಜಾಯತೇ ತಸ್ಮಾತ್ತಸ್ಯ ಗನ್ಧೋ ಗುಣೋ ಮತಃ|
ತಸ್ಮಿಂಸ್ತಸ್ಮಿಂಸ್ತು ತನ್ಮಾತ್ರಂ ತೇನ ತನ್ಮಾತ್ರತಾ ಸ್ಮೃತಾ||

ತನ್ಮಾತ್ರಾಣ್ಯವಿಶೇಷಾಣಿ ಅವಿಷೇಸ್ತತೋ ಹಿ ತೇ|
ಶಾನ್ತಾ ನಾಪಿ ಘೋರಾಸ್ತೇ ಮೂಢಾಶಾವಿಶೇಷಿಣಃ||

            ಶಬ್ದ ತನ್ಮಾತ್ರೆಯನ್ನು ಹೊಂದಿದ ಆಕಾಶ, ಆಕಾಶದಿಂದ ಸ್ಪರ್ಶ ತನ್ಮಾತ್ರೆಯನ್ನು ಹೊಂದಿದ ವಾಯು, ವಾಯುವಿನಿಂದ ರೂಪತನ್ಮಾತ್ರೆಯನ್ನು ಹೊಂದಿದ ಅಗ್ನಿ ಅರ್ಥಾತ್ ತೇಜಸ್ಸು, ತೇಜಸ್ಸಿನಿಂದ ರಸತನ್ಮಾತ್ರೆಯನ್ನು ಹೊಂದಿದ ನೀರು, ನೀರಿನಿಂದ ಗಂಧತನ್ಮಾತ್ರೆಯನ್ನು ಹೊಂದಿದ ಭೂಮಿ ಹುಟ್ಟಿತು. ಹರಿವಂಶ ಮತ್ತು ದೇವೀ ಭಾಗವತಗಳಲ್ಲಿ ಭೂಮಿಯ ಹುಟ್ಟನ್ನು ತುಸು ಭಿನ್ನವಾಗಿ ನಿರೂಪಿಸಲಾಗಿದೆ. ಮಧು ಮತ್ತು ಕೈಟಭರ ಹನನವಾದಾಗ ಅವರ ಮೇಧಸ್ಸು ನೀರಿನ ಜೊತೆ ಸೇರಿ ಭೂಮಿಯನ್ನು ಸೃಜಿಸಿತು ಎಂದು ಹೇಳಲಾಗಿದೆ, ಅದಕ್ಕಾಗಿಯೇ ಭೂಮಿಯನ್ನು ಮೇದಿನೀ ಎಂದು ಕೂಡಾ ಕರೆದಿದ್ದಾರೆ. ಮೇಧಸ್ಸು ಎಂದರೆ ಜಿಡ್ಡು, ಅಂಟು. ಗ್ರೀಸ್ ರೀತಿ. ಗಂಧವೂ ಜಿಡ್ಡೇ ಅಲ್ಲವೇ?

            ವ್ಯಾಸ ಮಹರ್ಷಿಗಳು ರೀತಿಯಾಗಿ ಭೂಮಿಯ ಉಗಮದ ಬಗ್ಗೆ ಮತ್ತು ಅದಕ್ಕೆ ಕಾರಣವಾದ ವಿಕಾರಗಳ ಬಗ್ಗೆ ಮತ್ತು ವಿಕಾರಗಳು ನಮಗೆ ಗ್ರಾಹ್ಯವಾಗುವ ಬಗೆ ಕೂಡಾ ವಿವರಿಸಿದ್ದಾರೆ, ಸುಲಭ ಮತ್ತು ಸರಳ ವಾಕ್ಯಗಳಲ್ಲಿ.

            ಮೊದಲು ಏನೂ ಇರಲಿಲ್ಲ ಎಂದರೆ ಅದು ಆಕಾಶವೇ ಆಯಿತಲ್ಲವೇ. ಆಕಾಶ ಅರಿವಿಗೆ ಬರುವುದು ಶಬ್ದದ ಮೂಲಕವೇ. ಒಂದು ಖಾಲಿಯಾದ ಡಬ್ಬವೂ ಕೂಡ ಆಕಾಶ. ಅದರಲ್ಲಿ ಶಬ್ದವಾದಾಗ ಮಾತ್ರ ನಮಗೆ ಅದರ ಖಾಲಿತನದ ಅರಿವು ಬರುತ್ತದೆ. ನಮಗೂ ಹಾಗೆಯೇ. ಯಾವ ಯೋಚನೆಗಳೂ ಇಲ್ಲದಿದ್ದಾಗ ಶಬ್ದಗಳು ತನ್ನಿಂತಾನೇ ಮೂಡುತ್ತವೆ, ಮನಸ್ಸಿನಲ್ಲಿ. ಶಬ್ದ ಸಾಗುವುದಕ್ಕೆ ಗಾಳಿ ಬೇಕೇ ಬೇಕು. ನಿರ್ವಾತದಲ್ಲಿ ಶಬ್ದ ಇರುವುದಿಲ್ಲ. ಇನ್ನು ಇದಕ್ಕೇ ವಿಲೋಮದ ವಿವರ ಕೊಡುತ್ತೇನೆ. ನಿರ್ವಾತವಾದಲ್ಲಿ ವಾತವನ್ನು ತುಂಬಲು ಹೋದಾಗ ಮೊದಲು ಶಬ್ದ ಘಟಿಸಿ ಆಮೇಲೆ ಗಾಳಿ ತುಂಬಬೇಕುಗಾಳಿಯ ಒತ್ತಡ ಹೆಚ್ಚಿದಂತೆಲ್ಲ ಉಷ್ಣತೆ ಕೂಡಾ ಹೆಚ್ಚಿ ನಂತರದಲ್ಲಿ ಅದು ಬೆಂಕಿಯೇ ಆಗುತ್ತದೆ. ಹುಟ್ಟಿದ ಗಾಳಿ ಅಂದರೆ ಅನಿಲದಲ್ಲಿ ಜಲಜನಕವೂ ಇದ್ದಿರಬೇಕು. ಇಲ್ಲವಾದರೆ ಪ್ರಾಣವಾಯು ಎನ್ನುವ ಶಬ್ದವನ್ನೇ ಉಪಯೋಗಿಸುತ್ತಿದ್ದರು ವ್ಯಾಸರು. ಜಲಜನಕ, ಬೆಂಕಿಯ ಸಂಪರ್ಕಕ್ಕೆ ಬಂದಾಗ ನೀರು ಸೃಷ್ಟಿಯಾಯಿತು. ತಿರುಗುತ್ತಿದ್ದ ಜಲಗೋಳ, ನೀರಿನಲ್ಲಿ ನೊರೆ ಹುಟ್ಟಿಸಿತು, ನೊರೆ, ಲೋಳೆಯಾಯಿತು-ಜಿಡ್ಡಾಯಿತು. ನಂತರದಲ್ಲಿ ನಮಗೆ ನೆಲೆ ಕೊಟ್ಟ ಮೇದಿನಿಯಾಯಿತು.

ಮೇದಿನಿ, ಇಂದಿಗೂ ಇದನ್ನೆಲ್ಲ ಇಟ್ಟುಕೋಂಡೇ ಇದ್ದಾಳೆ, ತನ್ನೊಡಲಿನಲ್ಲಿ. ನೀರು-ನಾವೆಲ್ಲ ನೋಡುತ್ತಿದ್ದೇವೆ. ಆಕಾಶ ಅನಿಲಗಳೂ ನಮ್ಮ ಅನುಭವಕ್ಕೆ ಬಂದಿವೆ. ಆದರೆ ಪೃಥ್ವಿ, ತನ್ನೊಡಲಿನಲ್ಲಿ ಅಪಾರ ಪ್ರಮಾಣದ ಅಗ್ನಿಯನ್ನೂ ಇಟ್ಟುಕೊಂಡಿದ್ದಾಳೆ. ಆಗಾಗ ಸಿಡಿಯುವ ಅಗ್ನಿಪರ್ವತಗಳೇ ಇದಕ್ಕೆ ಸಾಕ್ಷಿ.

ಆದರೆ ನಮ್ಮ ದಾರ್ಶನಿಕರು ಇದನ್ನೆಲ್ಲ್ಲಾ ಹೇಳುವಾಗ ಯಾವ ಪ್ರಯೋಗಶಾಲೆಯನ್ನು ಉಪಯೋಗಿಸಿದ್ದರೋ ಏನೋ ಎಂದು ನಮಗೆಲ್ಲಾ ಪ್ರಶ್ನೆ ಮೂಡುತ್ತದೆಯಲ್ಲ. ನಿಜ ಎಂದರೆ ಅವರು ಯಾವ ಮಹತ್ತರ ಉಪಕರಣಗಳನ್ನೂ ಬಳಸಿರಲಿಲ್ಲ. ತಮ್ಮ ಇಂದ್ರಿಯ-ಪರ್ಯಾವೃತ್ತ ಪ್ರದೇಶಗಳನ್ನೂ ಮೀರಿದ ವಿಚಾರ ವಿಷಯಗಳನ್ನು ಜ್ಞಾನಚಕ್ಷುಗಳಿಂದ ದರ್ಶಿಸಿದರು, ಪ್ರತ್ಯಕ್ಷವಾಗಿ ಅಲ್ಲ. ಅದಕ್ಕೇ ದಾರ್ಶನಿಕರಾದರು.

No comments:

Post a Comment