Thursday, January 18, 2018

ಭೂಮಿಗೊಂದು ಸನ್ನೆಗೋಲು

ಲೋಕದಲ್ಲಿ ಯಾರ್ಯಾರನ್ನು ಏನೇನೋ ಕಾಡಿಸುತ್ತದೆಯಂತೆ, ವಿಚಿತ್ರ ಆಕರ್ಷಣೆ ಬಳಸಿ. ಕೆಲವರನ್ನು ನಟ ನಟಿಯರು ಕಾಡಿಸಿದರೆ ಕೆಲವರನ್ನು ಭೂತ ದೆವ್ವಗಳು ಇನ್ನು ಕೆಲವರನ್ನು ಕಾಡಿದ್ದಿದೆ. ಪುಸ್ತಕಗಳಿಗೂ ಕೆಲವರಿಗೂ ಹೀಗೆಯೇ ಅವಿನಾಭಾವ ಸಂಬಂಧ. ಇನ್ನು ಕೆಲವರಿಗೆ ಸಾಧನೆಯ ಮತ್ತೆ ಕೆಲವರಿಗೆ ಅದರ ಕುರಿತ ಕುತೂಹಲದ, ಅತೃಪ್ತಿಯ ಬಾಧೆ. ಗ್ರಹಚಾರ ನೋಡಿ! ನನಗೆ ಇವಿಷ್ಟೂ ಬಾಧೆಗಳಿವೆ. ಇವೆಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ಕಾಡಿದ್ದು ನನ್ನ ಹೆಸರು ಮತ್ತು ಅದನ್ನು ಹೊಂದಿದ ಭೂಮಿಯ ಉಪಗ್ರಹ-ಚಂದ್ರ. ನನಗೆ ನನ್ನ ಹೆಸರೇ ಕಾಡಿಬಿಟ್ಟಿತು. ಕಾಟವನ್ನು ಕೊಡುವ ಚಂದ್ರ ಸುತ್ತುವುದು ಭೂಮಿಯ ಸುತ್ತ. ಹಾಗಾಗಿ ನಾನೂ ಪುರಾಣದ ಯಾನವನ್ನೇರಿ ಭೂಮಿಯ ಸುತ್ತು ಹೊಡೆದೆ.


ಭೂಮಿ ನಾವೆಲ್ಲರೂ ಜೀವಿಸುತ್ತಿರುವ ತಾಣ. ನಮಗೆಲ್ಲರಿಗೂ ಆಧಾರ. ನಾವು ಉಣ್ಣುವ ಆಹಾರವನ್ನೂ ಭೂಮಿಯೇ ಕೊಡುವುದು. ನಮಗೆ ಸಹಕಾರಿಯಾದ ಇತರ ಜೀವಜಂತುಗಳಿಗೂ ಭೂಮಿಯೇ ನೆಲೆ. ನಮಗೆ ನೆರಳು ಕೊಡುವ ತಂಪೆರೆಯುವ ಮರಗಿದಗಳಿಗೂ ಇದೇ ಭೂಮಿ ಆಧಾರ. ನಾವು ನಾಳೆ ಎಲ್ಲ ಸುಖ ಕಷ್ಟಗಳನ್ನು ಅನುಭವಿಸಿ ದೇಹ ತ್ಯಜಿಸಿದ ಮಣ್ಣಾಗಿ ಸೇರುವುದು ಇದೇ ಭೂಮಿಯನ್ನು. ದಹನ ಸಂಸ್ಕಾರವಾದರೂ, ಬೂದಿಯಾಗಿ ದೇಹ ಸೇರುವುದು ಮಣ್ಣನ್ನೇ ಅಲ್ಲವೇ?! ಎಲ್ಲಾ ಸಮಯದಲ್ಲೂ ನಮ್ಮನ್ನು ಬಿಡದೆ ಪೊರೆಯುವುದಕ್ಕೇ ಇರಬೇಕು ಭೂಮಿಯನ್ನು ಭೂಮಾತೆ-ಭೂಮಿತಾಯಿ ಎಂದು ಕರೆದದ್ದು. ನಿಜಕ್ಕೂ ಭೂಮಿ ಮಹಾನ್. ಎಂಥಾ ಪಾಪ ಮಾಡಿದವನೂ ತಾಯಿಯನ್ನು ಬಿಡಲಾರ. ತಾಯಿಯೂ ಹಾಗೆಯೇ!! ಎಂಥಾ ಮಗನನ್ನೂ ಬಿಟ್ಟುಕೊಡಲಾರಳು. ಭೂಮಿ ಪಾಪಿಗಳನ್ನು ಹೊತ್ತದ್ದು-ಹೊರುತ್ತಿರುವುದು ನೋಡಿದರೆ ಸಾಕಲ್ಲ. ಅದಕ್ಕೇ ಇರಬೇಕು ಕ್ಷಮೆಗೆ ಭೂಮಿಯನ್ನೇ ದೃಷ್ಟಾಂತವಾಗಿ 'ಕ್ಷಮಯಾ ಧರಿತ್ರಿಃ' ಎಂದು ಕರೆದದ್ದು. ಧರಿತ್ರಿ ಎಂದರೆ ಧರಿಸುವವಳು ಎಂದಲ್ಲವೇ ಅರ್ಥ?! ಅಸುರೀ ಮೇದಸ್ಸಿನಿಂದ ಜನಿತವಾದರೂ ಭೂಮಿ, ಅಸುರೀಭಾವವನ್ನು ಹೊಂದಲಿಲ್ಲ. ಇದಲ್ಲವೇ ಮಹತ್ವ?!

ಇದೇ ಭೂಮಿಯ ಮೇಲಿನ ಆಸೆಯಿಂದ ಅಥವಾ ಅದರ ಮೇಲಿನ ಅಧಿಪತ್ಯದ ಕೀರ್ತಿಯ ಹಪಹಪಿಗೆ ಬಿದ್ದು ಎಷ್ಟೋ ಜನ ಏನೆಲ್ಲ ಮಾಡಿಬಿಟ್ಟರು. ತೈಮೂರ್-ಘಜಿನಿ-ಘೋರಿ ಮೊದಲಾದ ಆಕ್ರಮಣಕಾರಿಗಳು ಇತಿಹಾಸದಲ್ಲಿ ಸ್ಥಾನ ಪಡೆದಿದ್ದು ಭೂಮಿಯ ಮೇಲಿನ ಆಸೆಯಿಂದ. ವ್ಯಾಪಾರಕ್ಕೆಂದು ಬಂದವರು ಅಧಿಪತ್ಯ ಸ್ಥಾಪಿಸಿ, ನಾಗರೀಕತೆಗಳ ನಾಶ ಮಾಡಿದ್ದು ಕಾರಣದಿಂದ. ಎರಡೆರಡು ವಿಶ್ವಯುದ್ಧಗಳು ನಡೆದಿದ್ದು ಅಧಿಪತ್ಯದ ಆಸೆಯ ದೆಸೆಯಿಂದ. ಭೂಮಿಯನ್ನು ತಾಯಿ ಎಂದು ಕರೆದದ್ದಕ್ಕೇ ಇರಬೇಕು, ಭರತೀಯರು ಪರರ ಭೂಮಿಯನ್ನು ಅಧಿಪತ್ಯಕ್ಕೆ ಒಳಪಡಿಸಲು ಬೇರೆ ಭೂಮಿಯ ಮೇಲೆ ಯುದ್ಧ ಸಾರದೇ ಇದ್ದಿದ್ದು. ಯಾವ ಮಗನ ಕೋಪವೋ ಶಾಪವೋ ತಾಯಿಯನ್ನು ಅಧಿಪತ್ಯಕ್ಕೆ ಒಳಪಡಿಸಲು ಹೋದವರೆಲ್ಲಾ ದಾರುಣವಾಗಿ ಸತ್ತರು. ಅವರನ್ನು ಅಷ್ಟು ದಿನ ಹೊತ್ತಿದ್ದು ಭೂಮಿಯ ದೊಡ್ಡತನ. ಅದಕ್ಕೇ ಇರಬೇಕು ಒಳ್ಳೆಯವರನ್ನು ಭೂಮಿ ತೂಕದ ಜನ ಎಂದು ಕರೆಯುವ ರೂಢಿ ಬಂದಿದ್ದು.

ಇಂಥಾ ಭೂಮಿಯನ್ನೇ ಬದಿಗಿಡುತ್ತೇನೆ ಎಂದಿದ್ದ ಗ್ರೀಕ್ ವಿಜ್ಞಾನಿ ಆರ್ಕಿಮಿಡಿಸ್. ಸನ್ನೆಯ ನಿಯಮಗಳ ನಿರೂಪಣೆ ಮಾಡಿದ ಆತ ಅಂಥಾ ಸನ್ನೆ ನಿರ್ಮಿಸಿ, ಭೂಮಿಯನ್ನು ಬದಿಗಿಡಲೂ ಅರ್ಹನಾಗಿದ್ದ. ಆತನಿಗಿದ್ದ ಜ್ಞಾನ-ಬುದ್ಧಿವಂತಿಕೆ ತಿಳುವಳಿಕೆ ಅಂಥದ್ದು. ತಿಳುವಳಿಕೆ ಆತನಿಗೆ ಭೂಮಿ ಇದ್ದಲ್ಲೇ ಇದ್ದರೆ ಚಂದ ಎಂದು ಗೊತ್ತಿತ್ತು. ಅದು ಸ್ಥಾನ ಪಲ್ಲಟವಾದರೆ ಆಗಬಹುದಾದ ಅನಾಹುತಗಳ ಅರಿವಿತ್ತು ಆತನಿಗೆ. ಅದಕ್ಕೇ ಕೆಲಸ ಮಾಡಲಿಲ್ಲ. ಮೇಧಾವಿಗಳ ಲಕ್ಷಣ ಅದು. ಮಾಡಿದರೆ   ಆದರೆ ಆತನ ದೇಹವನ್ನು ಭೂಮಿಗೆ ಎಸೆದು, ಆತ್ಮ ಭೂಮಿಯಿಂದ ಹೊರಹೋಗುವಂತೆ ಮಾಡಿದ್ದು ಯುದ್ಧ. ಯುದ್ಧದ ಉದ್ದೇಶ ಭೂಮಿಯ ಮೇಲಿನ ಅಧಿಪತ್ಯದ ಆಸೆ. ಮಾರ್ಸೆಲಸ್ ಎನ್ನುವ ರೋಮನ್ ಸೇನಾಧಿಪತಿ, ಸಿಸಿಲಿಯ ಮೇಲೆ ಆಕ್ರಮಣವನ್ನು ಮಾಡಿದ್ದ. ಆತನಿಗೆ ಆರ್ಕಿಮಿಡಿಸನ ಯೋಗ್ಯತೆಯ ಅರಿವಿತ್ತು. ಅದಕ್ಕೇ ತನ್ನ ಸೈನಿಕನಲ್ಲಿ ಆತನನ್ನು ಕೊಲ್ಲದೆ ಕರೆತರಲು ಹೇಳಿದ. ರೇಖಾಗಣಿತದ ಸಮಸ್ಯೆಯೊಂದನ್ನು ಬಿಡಿಸುತ್ತಿದ್ದ ಮಹಾಶಯನಿಗೆ ಯುದ್ಧ ನಡೆದಿದ್ದು ಕೂಡಾ ತಿಳಿದಿರಲಿಲ್ಲ. ಬರಲು ನಿರಾಕರಿಸಿದ. ಯುದ್ಧದ ಗೆಲುವಿನಿಂದ ಮತ್ತನಾಗಿದ್ದ ಸೈನಿಕ ಕೊಂದೇ ಬಿಟ್ಟ. ಬಹುಷಃ ಭೂಮಿಯಲ್ಲಿ ಇರುವ ಅಸುರೀ ಮೇದಸ್ಸು ಅದನ್ನು ಗೆದ್ದೆನೆಂದು ಭ್ರಮಿಸುವವನನ್ನು ಸೇರುತ್ತದೋ ಏನೋ!!

ಆರ್ಕಿಮಿಡಿಸ್, ಭೂಮಿಯನ್ನು ಎತ್ತಿಡಲು ಬೇಕಾದ ಸನ್ನೆಯ ಲೆಕ್ಕವನ್ನು ತಿಳಿದಿದ್ದಿರಬೇಕು. ಸನ್ನೆಯ ನಿಯಮವೇ ಹಾಗಲ್ಲವೇ? ಎತ್ತಿಡಬೇಕಾದ ವಸ್ತುವಿನ ದ್ರವ್ಯರಾಶಿಗನುಗುಣವಾಗಿ, ಸನ್ನೆ ಕೋಲಿನ ಮತ್ತು ಸನ್ನೆಯಾಧಾರದ ಅಳತೆ ನಿರ್ಧರಿಸಬೇಕಾಗುತ್ತದೆ. ಆಶ್ಚರ್ಯವೆಂದರೆ, ಇದನ್ನು ನಮ್ಮ ವಿಷ್ಣುಪುರಾಣದಲ್ಲಿ ಸೂಚ್ಯವಾಗಿ ಹೇಳಿದ್ದಾರೆ.

ವಿಷ್ಣು ಪುರಾಣದಲ್ಲಿ ಮೈತ್ರೇಯರು ಪರಾಶರರನ್ನು ಭೂಮಿ ಉಗಮವಾದ ಬಗೆಯನ್ನು ಕೇಳಿದಾಗ ಪರಾಶರರು ಹೇಳುತ್ತಾರೆ. ಕಲ್ಪದ ಆದಿಭಾಗದಲ್ಲಿ ಬ್ರಹ್ಮನು ನಿದ್ರೆಯಿಂದ ಎದ್ದಾಗ, ಭೂಮಿಯು ನೀರಿನಲ್ಲಿ ಮುಳುಗಿರುವುದನ್ನು ತಿಳಿದನು. ಭೂದೇವಿಯು ವಿಷ್ಣುವನ್ನು ಕುರಿತು ಸ್ತುತಿಸಿದಳು. ಆಗ ಮಹಾವಿಷ್ಣುವು ವರಾಹರೂಪವನ್ನು ತಳೆದು ಭೂಮಿಯನ್ನು ಉದ್ಧರಿಸಿದನಂತೆ. ಆತ ಭೂಮಿಯನ್ನು ತನ್ನ ಕೋರೆದಾಡೆಯ ಮೇಲೆ ಇಟ್ಟು, ನೀರಿನಿಂದ ಮೇಲೆ ತಂದನಂತೆ. ನೀಲಾಚಲದಂತೆ ಇದ್ದ ವರಾಹವು ರಸಾತಲದಿಂದ ಮೇಲೆ ಬಂದಿತ್ತಂತೆ.

ತತಃ ಸಮುತ್ಕ್ಷಿಪ್ಯ ಧರಾಂ ಸ್ವದಂಷ್ಟ್ರಯಾ ಮಹಾವರಾಹಃ ಸ್ಫುಟಪದ್ಮಲೋಚನಃ|
ರಸಾತಲಾದುತ್ಪಲಪತ್ರ ಸನ್ನಿಭಃ ಸಮುತ್ಥಿತೋ ನೀಲ ಇವಾಚಲೋ ಮಹಾನ್||

ಸ್ವಾರಸ್ಯ ಇಲ್ಲಿದೆ. ಭೂಮಿಯನ್ನು ಎತ್ತಿಡಬೇಕಿದ್ದರೆ ಸನ್ನೆ ಉಪಯೋಗವಾಗಿರಲೇಬೇಕು. ಕೋರೆದಾಡೆಯೇ ಇಲ್ಲಿ ಸನ್ನೆಕೋಲಾಯಿತು, ವರಾಹದ ಕೆಳದವಡೆಯೇ ಸನ್ನೆಯಾಧಾರವಾಯಿತು. ಸನ್ನೆಕೋಲಿನ ಉದ್ದ ತಿಳಿಯಬೇಕಿದ್ದರೆ, ರಸಾತಲ ಲೋಕ ಭೂಮಿಯಿಂದ ಎಷ್ಟು ಆಳದಲ್ಲಿದೆ ಎಂದು ಗ್ರಹಿಸಬೇಕು. ಅದಕ್ಕೆ ಅನುಪಾತದಲ್ಲಿ ಅಂಗಾಂಗಗಳ ಅಳತೆಯ ವ್ಯಾಖ್ಯೆ ಸಾಧ್ಯ. ಇದರ ಮುಖೇನ, ದಾಡೆಯ ಉದ್ದ ಅರ್ಥಾತ್ ಸನ್ನೆಕೋಲಿನ ಉದ್ದ ತಿಳಿಯುತ್ತದೆ, ಕೆಳದವಡೆಯ ಗಾತ್ರ, ಸನ್ನೆಯಾಧಾರದ ಗಾತ್ರ ತಿಳಿಸುತ್ತದೆ. ಇದರ ಸಹಾಯದಿಂದ ನಾವು ಭೂಮಿಯ ದ್ರವ್ಯರಾಶಿಯನ್ನು ಕೂಡಾ ತಿಳಿಯ ಬಹುದು. ಪುರಾಣಗಳ ಮೂಲ ಪ್ರತಿಗಳನ್ನು ಈಗಷ್ಟೇ ಓದಲು ಆರಂಭಿಸಿದ್ದೇನೆ. ಎಲ್ಲಾದರೂ ಒಂದು ದಿನ ಭೂಮಿಗೂ ರಸಾತಲಕ್ಕೂ ಇರುವ ದೂರ ತಿಳಿದೀತು. ಲಕ್ಷಣ ಶಾಸ್ತ್ರದ ಪುಸ್ತಕ ಸಿಕ್ಕಿದರೆ, ವರಾಹದ ಅಂಗರಚನೆಯ ಬಗೆಗೂ ಅದರಲ್ಲಿ ಮಾಹಿತಿ ದೊರೆತೀತು. ಖಂಡಿತ ತಿಳಿಸುತ್ತೇನೆ.


ಇನ್ನೂ ಒಂದು ಸಾಧ್ಯತೆ ತಿಳಿಸುತ್ತೇನೆ. ಅಲೆಕ್ಸಾಂಡರ್, ಭಾರತದ ಮೇಲೆ ದಾಳಿ ಮಾಡಿದ್ದು ಕೇವಲ ಸಂಪತ್ತಿನ ಆಸೆಯಿಂದಲ್ಲ. ಇಲ್ಲಿನ ಜ್ಞಾನದ ಬಗ್ಗೆ ಚೆನ್ನಾಗಿ ತಿಳಿದಿದ್ದ ಆತ, ಅರಿಸ್ಟಾಟಲ್ ಶಿಷ್ಯನಲ್ಲವೇ ಎಷ್ಟಂದರೂ!! ಭಾರತದ ಎಷ್ಟೋ ಜ್ಞಾನಭಂಡಾರಗಳನ್ನು ತನ್ನ ಜೊತೆಯಲ್ಲಿ ಕೊಂಡೊಯ್ದ ಕೂಡಾ! ಅದನ್ನೇನಾದರೂ ಆರ್ಕಿಮಿಡಿಸ್ ಅಭ್ಯಸಿಸಿರಬಹುದೇ?! ಆರ್ಕಿಮಿಡಿಸ್ ಬಗ್ಗೆ ಗೌರವೈಟ್ಟುಕೊಂಡೇ ಇದನ್ನು ಬರೆದಿದ್ದೇನೆ. ಅವನನ್ನು ಮೂಢ ಎನ್ನಲು ನಾನು ಪಾಷಂಡಿಯಲ್ಲ. ರೀತಿ ಯಾರೂ ಭಾವಿಸಬೇಕಿಲ್ಲ ಕೂಡಾ. ಭಾವಿಸಿದರೆ ನನ್ನಲ್ಲಿ ಉತ್ತರವೂ ಇಲ್ಲ.

No comments:

Post a Comment