Tuesday, January 16, 2018

ಶುಕ್ರನ ಬಡಾಯಿ

ಕುಂದಾಪುರದ ಸಮೀಪದ ಹಾಲಾಡಿಯಿಂದ ಸೇರಿಗಾರರ ಜೊತೆಗೆ ಕೆಲಸಕ್ಕೆಂದು ಬಂದ ಕೆಲವರಲ್ಲಿ ಒಬ್ಬ ಶಂಕರ ಪೂಜಾರಿ. ಇವನ ಕೆಲಸದ ಶಿಸ್ತು ನೋಡಿ ಹೆಗಡೇರು ತಮ್ಮ ಮನೆಯ ಆಳಾಗಿರುವಂತೆ ಹೇಳಿದರು. ಹೇಗೂ ಊರು ಬಿಟ್ಟು ಘಟ್ಟ ಹತ್ತಿದ್ದ ಅವನಿಗೂ ಸೇರಿಗಾರರ ಕೈಯ ಪೆಟ್ಟು ತಿನ್ನುವುದಕ್ಕಿಂತ ಹೆಗಡೇರ ಮನೆಯಲ್ಲಿ ಗಂಜಿಯಾದರೂ ಸರಿ ಎನ್ನಿಸಿ ಇಲ್ಲೇ ಕುಳಿತ. ಅವನ ಜೊತೆ ಬಂದಿದ್ದ ಕೆಲವರೂ ಹೆಗಡೇರ ಮನೆಯ ಆಳಾಗಿ ಘಟ್ಟದ ಮೇಲೆಯೇ ಉಳಿದರು. ಊರು ಎಷ್ಟಾದರೂ ಬಿಟ್ಟೀತೆ? ಅದೂ ಊರಿಂದ ಬಂದವರೇ ಅಕ್ಕ ಪಕ್ಕದಲ್ಲಿದ್ದಾಗ? ಸಾಧ್ಯವೇ ಇಲ್ಲ. ಮಾತು ಪದ್ಧತಿಗಳು ಕೂಡಾ ಘಟ್ಟ ಹತ್ತಿದವು.

ಶಂಕರನ ಮಗಳು ಜಾನಕಿಯನ್ನು ಮದುವೆಯಾಗಿ ಅವರ ಪದ್ಧತಿಯಂತೆ ಘಟ್ಟ ಹತ್ತಿದ ಶುಕ್ರ ಪೂಜಾರಿ. ಮೊದಲು ಬೊಂಬಾಯಿಯಲ್ಲಿ ಹೋಟೆಲ್ಲಿನಲ್ಲಿದ್ದನಂತೆ. ಬಾಯಿ ಕಳೆದ ಅಂದ್ರೆ ಸಾಕು ಬೊಂಬಾಯಿ ಕಥೆಗಳೇ ಬರುತ್ತಿದ್ದವು. "ಅದರ ಕತಿ ಹೇಳ್ತೆ ಕೇಣಿ. ನಾ ಬೊಂಬಾಯಾಗಿಪ್ಪಾಗ....... ಎಂದು ಎಲ್ಲಾ ಮಾತಿಗೂ ತನ್ನದೊಂದು ಸುಳ್ಳೋ ಸತ್ಯವೋ ಹೇಳುವುದಕ್ಕೆ ಸಾಧ್ಯವಾಗದ ಘಟನೆಯೊಂದನ್ನು ಹೇಳುತ್ತಿದ್ದ.

ಒಂದು ಸಲ ಊರಲ್ಲಿ ಆಟ (ಯಕ್ಷಗಾನ ) ಏರ್ಪಾಡಾಯಿತು. ರತ್ನಾವತಿ ಕಲ್ಯಾಣ ಪ್ರಸಂಗ. ಅದರಲ್ಲೂ ಅಂದಿನ ಬಯಲಾಟದ ಸುಪ್ರಸಿದ್ಧ ಮೇಳದ ಕಲಾವಿದರ ವೇಷಗಳು. ಊರಿಗೆ ಊರೇ ಕಾತರದಿಂದ ಕಾಯುತ್ತಿತ್ತು. ಶುಕ್ರ ಯಾರೇ ಆಟದ ಸುದ್ದಿ ಮಾತಾಡಲಿ, ಕಥೆ ಹೇಳುತ್ತಿದ್ದ.
           
"ಅದೆಂತ ಕೇ೦ತ್ರಿ. ನಾ ಬೊಂಬಾಯಾಗಿಪ್ಪಗ ಒಂದ್ ಸಲ ಆಟ ಕಾಂಬೂಕೆ ಹ್ವಾಯಿತ್. ಆಗ ನಾವುಡ್ರ್ ಇದ್ದೀರ್. ನಾವ್  ಎಲ್ಲಾ ಚಾ ಕುಡಿತಾ ಇತ್. ಅಷ್ಟೊತ್ತಿಗೆ ನಾವುಡ್ರ್ ಬಂದ್ರ್. ಜತಿಗೆ ಹೆಗ್ಗೊಡು ಸುಧಾಕರಯ್ಯ ಇದ್ದೀರ್. ಎಂಥಾ ಮದ್ಲಿ ಮಾರ್ರೆ ಅವರ್ದ್!! ನಾವುಡ್ರ್ ಬಂದ್ 'ನಮಸ್ಕಾರ ಪೂಜಾರ್ರೆ ಅರಾಮಿದ್ರ್ಯಾ' ಅಂದ್ರ್. ಅವ್ರಿಗೆ ಹೋಟ್ಳಂಗೆ ಯಜಮಾನ್ರ್ ಬೇಕಾದ್ ಕೊಡ್ಕ್ ಅಂದ್ರೆ ನಾನೇ ಹೇಳ್ಕಲ ಹಾಂಗಾಗಿ ನನ್ ನಿಷ್ಟುರ ಮಾಡ್ಕಾಂತಿರ್ಲಾ ಅವ್ರ್. ಮತ್ತೆ ನಾ ಅಂದ್ರೆ ಯಜಮಾನ್ರಿಗೆ ಆಯ್ತ್. ಹೆಚ್ ಕಡ್ಮಿ ಮಾಡ್ರೆ ಹೋಟ್ಲಿಂದಲ್ಲ, ಮ್ಯಾಳದಿಂದ್ಲೂ ಹೊರ ಹ್ವಾಪ್ಕಿತ್. ನಮ್ ಸಂಗ್ತಿ ಅಂದ್ರೆ ಹಾಂಗೆ ಕಾಲದಲ್.

“ ನಾನೂ 'ನಮಸ್ಕಾರ ನಾವುಡ್ರೆ ಹೇಂಗಿದ್ರಿ. ಹೇಂಗಿತ್ ಇವತ್ತಿನ ಕೇಲೆಕ್ಷನ್?' ಅಂದೆ. ನಾವುಡ್ರ್, 'ಎಂತ ಹೇಳೂದ್ ಮಾರ್ರೆ, 'ಆಟ ಕಲೆಕ್ಷನ್ ಅಡ್ಡಿಲ್ಲ, ಜಲವಳ್ಳಿಯವ್ರಿಗೆ ಒಂದ್ ಹುಷಾರಿಲ್ದೆ ಇವತ್ ನಮ್ಮ ಬಜ್ಜವಾ ಅಂತೇಳಿ ಮಾಡ್ದೆ. ಅಷ್ಟೊತ್ತಿಗೆ ನೀವ್ ಕಂಡ್ರಿ. ಒಂದ್ ರಾವಣನ ಮಾಡೀನಿ' ಅಂದ್ರ್. ಭಾಗವತ್ರೆ ಹೇಳಿದ್ಮೇಲೆ ಎಂತ ಮಾಡುದ್. ಇನ್ನೊಬ್ರ ಕಷ್ಟಕ್ಕಾಯ್ದಿದ್ರೆ ನಾವ್ ಕಲ್ತ್ ಕಲಿಗೆ ಅವಮಾನ ಅಲ್ದೆ? ಹೂಂ ಅಂದೇಳಿ ಚೌಕಿಗೆ ಹ್ವಾಯಿ ಬಣ್ಣ ಹಾಯ್ಕಂಡ್ ರಂಗಸ್ಥಳಕ್ಕೆ ಬಂದ್ ಹುಡಿ ಹಾರ್ಸಿ ಕೊಟ್ಟೆ. ಹೊಡ್ತ ಅಂದ್ರೆ ಎಂತ!! ಕಿಶನ್ ಹೆಗ್ಡೇರು ವೀಳ್ಯ ಕೊಡೂಕೆ ಬಂದೀರ್. ನೀನೇ ಎರಡ್ನೇ ವೇಷ ಮಾಡ್ಕ್ ಅಂದೇಳಿ. ನಾ ಆತಿಲ್ಲ ಮಾರ್ರೆ, ಹೋಟ್ಲಂಗೆ ಸಾಲ ಮಾಡೀದೆ ಅಂದೇಳಿ ಸುಳ್ ಹೇಳಿ ಹೇಂಗೋ ಬಂದೆ."

ಶುಕ್ರ ಹೇಳಿದ ಕಥೆ ಸುಳ್ಳೇನೋ ಎಂದು ಅನುಮಾನ ಬಂದರೂ ಶುಕ್ರ ನಿಗೆ ಯಕ್ಷಗಾನ ಗೊತ್ತಿದೆಯೋ ಎಂದು ಯಾರಿಗೂ ಅನುಮಾನ ಬರಲಿಲ್ಲ.

ಆಟದ ಮೇಳ ಬಂತು. ಆದರೆ ವಿದ್ಯುಲ್ಲೋಚನನ ಪಾತ್ರ ಮಾಡುವ ಪಾತ್ರಧಾರಿ ರಾಜಾರಾಮ ಜ್ವರದಿಂದ ಬರಲೇ ಇಲ್ಲ. ಮೇಳದ ಭಾಗವತ ನಾಗೇಂದ್ರ ತಲೆಬಿಸಿ ಮಾಡಿಕೊಂಡಿದ್ದ. ಅಷ್ಟರಲ್ಲಿ ಕಂಬ ಹುಗಿಯಲು ಬಂದಿದ್ದ ಮಂಜ, ಶುಕ್ರನಿಗೆ ಯಕ್ಷಗಾನ ತಿಳಿದಿರುವ ವಿಚಾರ, ಆತ ಬೊಂಬಾಯಿಯಲ್ಲಿ ವೇಷ ಮಾಡಿದ್ದು ಎಲ್ಲಾ ಹೇಳಿದ. ನಾಗೇಂದ್ರ ಉಸಿರು ಬಿಟ್ಟು ಅವನನ್ನು ಕರೆತರಲು ಹೇಳಿದ.


ಮಂಜ ಶುಕ್ರನಲ್ಲಿಗೆ ಬಂದು ವಿಷಯ ತಿಳಿಸಿದ. "ಶುಕ್ರಣ್ಣ!! ಇವತ್ತೊಂದ್ ಆಯ್ಲಿ ವೇಷ ನಾವೂ ಕಾಂಬ ಹೆಂಗಾತ್ತ್ ಅಂದೇಳಿ!! " ಎಂದ. ಶುಕ್ರ ಉಬ್ಬಿದ, ಆದರೆ ಕ್ಷಣಕಾಲ ಮಾತ್ರ. ಶುಕ್ರನಿಗೆ ಸಂಕಟ ಶುರುವಾಯಿತು. ಹೋದರೆ, ತನ್ನ ಬಂಡವಾಳ ಬಯಲಾಗುತ್ತದೆ. ಹೋಗದಿದ್ದರೆ, ಕಾರಣ ಹೇಳುವುದೇನು? ಹುಷಾರಿಲ್ಲ ಎನ್ನುವುದಕ್ಕೆ, ಹೆಂಡತಿಯನ್ನು ಕೋಳಿ ಕುಯ್ಯಲು ಪೀಡಿಸಿಯಾಗಿದೆ. ಅದರ ಜೊತೆಗೆ ಕುಡಿಯಲು ಎಣ್ಣೆ ಬೇರೆ ತಂದಾಗಿದೆ. ಎರಡೂ ಸಾಧ್ಯವಾಗುವುದಿಲ್ಲ. ಸರಿ ಹೋದರಾಯ್ತು. ಕೊಟ್ಟ ವೇಷ ಮಾಡಿದರಾಯಿತು. ಏರು ಧ್ವನಿಯಲ್ಲಿ ಪದ್ಯ ಹಾಡಿದಾಗ ಗೊತ್ತಿದ್ದ ಒಂದೇ ತಾಳದಲ್ಲಿ ಅಬ್ಬರದಿಂದ ಕುಣಿದರಾಯಿತು, ಕೈ ಕಾಲು ಬೀಸಿ. ಅಬ್ಬರದಿಂದ ಕೂಗಾಟ ಮಾಡಿ ಕೀರಲು ಧ್ವನಿಯಲ್ಲಿ ಮಾತಾಡಿದರಾಯಿತು. ತನ್ನ ಕಥೆಯನ್ನೇ ನಂಬಿದ ಇವರು ಅಭಿನಯವನ್ನೂ ನಂಬುತ್ತಾರೆ ಎಂದುಕೊಂಡು ಹೊರಟ ಮಂಜನೊಡನೆ. ಆದರೂ, ತಾನು ಹೇಳಿದ ಸುಳ್ಳೊಂದು ತನ್ನ ಬಹುಕಾಲದ ಆಸೆಯನ್ನು ಈಡೇರಿಸುತ್ತಿರುವುದಕ್ಕೆ ಮನಸ್ಸಿನೊಳಗೇ ಸಂತೋಷಿಸಿದ.

No comments:

Post a Comment