Thursday, January 4, 2018

(ಪ್ರಧಾನ+ಪ್ರಕೃತಿ) x ಕಾಲ=ರೂಪಾಂತರ

ಜಗತ್ತಿನಲ್ಲಿ ಏನೆಲ್ಲಾ ಆಗುತ್ತದೆ. ೩೦ ವರ್ಷಗಳ ಹಿಂದೆ ಬರೇ ಎರಡು ಸ್ಥಾನ ಹೊಂದಿದ್ದ ಪಕ್ಷ ದೇಶದ ಬಹುಭಾಗದಲ್ಲಿ ಜನರಿಂದ ಆರಿಸಲ್ಪಡುತ್ತದೆ. ದ್ವೇಶಿಸುತ್ತಿದವರು ತಮ್ಮ ದ್ವೇಶಿಯ ಪಕ್ಷವನ್ನೇ ಸೇರುತ್ತಾರೆ. ಮಿತ್ರರಾಗಿದ್ದವರು ಶತ್ರುಗಳಾಗಿಬಿಡುತ್ತಾರೆ. ದಿನಾ ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ದವರು ಪ್ರಶಸ್ತಿ ಸಿಕ್ಕ ಕೂಡಲೇ ಕೆಲವರು ಮೈಕ್ ಹಿಡಿದ ಕೂಡಲೇ ಚಿಂತಕರು, ವಿಚಾರವಾದಿಗಳು ಇನ್ನೂ ಏನೇನೋ ಆಗಿಬಿಡುತ್ತಾರೆ. ಬಡವ ಶ್ರಮದಿಂದ ಶ್ರೀಮಂತನಾಗುತ್ತಾನೆ, ಧನಾಡ್ಯ ಒಬ್ಬ ಬೇಡುಗನಾಗಿಬಿಡುತ್ತಾನೆ, ಜಾತ್ಯತೀತ ಎನ್ನಿಸಿಕೊಂಡಿದ್ದವರು ಧಿಢೀರನೆ ಜನಿವಾರ ತೆಗೆದು ತೋರಿಸಿ ನಾನು ಬ್ರಾಹ್ಮಣ ಅಂತ ಜಾತಿ ಸುದ್ದಿ ಮಾತಾಡುತ್ತಾರೆ. ಆಗಲೆಲ್ಲಾ ನಾವು ಒಂದು ಉದ್ಗಾರ ತೆಗೆಯುತ್ತೇವೆ "ಏನು ಕಾಲ ಬಂತಪ್ಪಾ?!" ಅಂತ.

            ಪ್ರಕೃತಿಯೂ ಹಾಗೆಯೇ ಇದೆ.ಬೆಂಗಾಡು ಹಸಿರಿಂದ ಕಂಗೊಳಿಸುತ್ತದೆ, ಸಸ್ಯಶಾಮಲೆ ಅಂತ ಕರೆಸಿಕೊಂಡಿದ್ದ ಜಾಗ ಶುಷ್ಕ ಹವೆಯಿಂದ ಕೂಡಿ ಬರಡಾಗಿಬಿಡುತ್ತದೆ. ವಿನಯ ವಿಧೇಯತೆಯಿಂದ ಕೂಡಿದ ವ್ಯಕ್ತಿ, ದಬ್ಬಾಳಿಕೆ ಮಾಡತೊಡಗುತ್ತಾನೆ. ಪೆಕರನಂತಾಡುತ್ತಿದ್ದವ ಗಂಭೀರದ ಮಾತಾಡುತ್ತಾನೆ. ಅನೇಕ ಸಂಖ್ಯೆಯ ಹಿಂಬಾಲಕರನ್ನು ಹೊಂದಿದ್ದವ ಒಬ್ಬ ಒಬ್ಬಂಟಿಯಾಗಿಬಿಡುತ್ತಾನೆ. ಆಗೆಲ್ಲಾ ನಾವು ಹೇಳುವ ಮಾತು, "ಕಾಲ ಕೆಟ್ಟು ಹೋಯಿತು ಬಿಡಿ!!"

            ಇಂದು ಬಿದ್ದ ಬೀಜದಿಂದ ಕೆಲವೇದಿನಗಳಲ್ಲಿ ಮೊಳಕೆ ಮೂಡುತ್ತದೆ. ಮೊಳಕೆ ಸಸಿಯಾಗಿ ಗಿಡವಾಗಿ, ಮೊಗ್ಗಾಗಿ, ಅರಳಿ ಹೂವಾಗಿ, ಮಿಡಿಯಾಗಿ, ಕಾಯಾಗಿ ಹಣ್ಣಾಗಿ ಮತ್ತೆ ಬೀಜವನ್ನು ಭುವಿಯ ಒಡಲಿಗೇ ಸೇರಿಸುತ್ತದೆ. ಸಮುದ್ರದಲ್ಲಿದ್ದ ನೀರು ಆವಿಯಾಗಿ, ಮೋಡವಾಗಿ, ಮಳೆಯಾಗಿ ಮತ್ತೆ ಹೊಳೆಯಾಗಿ ನದಿಯಾಗಿ ಹರಿದು ಅದೇ ಸಮುದ್ರವನ್ನು ಸೇರುತ್ತದೆ. ಇಲ್ಲಿಯೂ ಅದದ್ದು ಬದಲಾವಣೆ, ಆದರೆ, ಬೀಜದಲ್ಲಿದ್ದ ಜೀವ ಮತ್ತೆ ಬೇರೆ ಬೇರೆ ರೂಪಗಳನ್ನು ಪಡೆಯಿತು ಅಷ್ಟೆ. ನೀರು ಸಮುದ್ರದಿಂದ ಮತ್ತೆ ಸಮುದ್ರವನ್ನು ಸೇರುವ ತನಕವೂ ನೀರಾಗಿಯೇ ಇತ್ತು ಆದರೆ ಬೇರೆ ಬೇರೆ ಸ್ವರೂಪಗಳನ್ನು ಧರಿಸಿತ್ತು. ಮೊದಲಿದ್ದ ಕೇಂದ್ರೀಯ ಅಬಕಾರಿ ಕಾಯಿದೆ ರೂಪಾಂತರದ ಆಧಾರದ ಮೇಲೆಯೇ ಕರ ವಿಧಿಸುತ್ತಿತ್ತು. ಎಲ್ಲ ಘಟನೆಗಳಲ್ಲೂ ಆಗಿದ್ದು ರೂಪಾಂತರವಷ್ಟೆ. ಯಾವುದೂ ಎಲ್ಲಿಯೂ ನಾಶವೂ ಆಗಲಿಲ್ಲ-ಏನೂ ಉತ್ಪತ್ತಿಯೂ ಆಗಲಿಲ್ಲ.
           
ಇಂದಿನ ನಾಗರೀಕತೆ, ನಿಂತಿರುವ ಮತ್ತು ಬಹುವಾಗಿ ನೆಚ್ಚಿರುವ ಆಧುನಿಕ ವಿಜ್ಞಾನದ ದಿಕ್ಕು ದೆಸೆಗಳನ್ನು ತನ್ನ ಅಪಾರ ಬುದ್ಧಿಮತ್ತೆ ಮತ್ತು ಚಾಣಾಕ್ಷತೆಯಿಂದ ಬದಲಿಸಿದ ಮಹಾನ್ ಮೇಧಾವಿ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ ಕೂಡಾ ಹೀಗೆಯೇ ಹೇಳಿದ್ದರಲ್ಲ. "ಜಗತ್ತಿನಲ್ಲಿ ಯಾವುದೂ ಉತ್ಪತ್ತಿಯೂ ಆಗುವುದಿಲ್ಲ. ಯಾವುದೂ ನಾಶವೂ ಆಗುವುದಿಲ್ಲ. ಎಲ್ಲವೂ ರೂಪಾಂತರವಾಗುತ್ತದೆ. ಕಾಲ ಮತ್ತು ಆಯಾಮಗಳ ಬದಲಾವಣೆ ಅಷ್ಟೆ. ಬದಲಾವಣೆ ಆಗುವುದು ಎಲ್ಲೆಲ್ಲಿಯೂ ವ್ಯಾಪಿಸಿರುವ ಶಕ್ತಿಯಿಂದ. ನಾವು ಘಟನೆಗಳೊಂದಿಗೆ ಸೇರಿದಾಗ ನಮಗೆ ರೂಪಾಂತರ ಅರಿವಿಗೆ ಬರುತ್ತದೆ."ಬಹಳ ಜನರಿಗೆ ತಿಳಿಯದ ವಿಷಯ ಎಂದರೆ ಇಂದು ನಾವು ಮೌಢ್ಯ- ಕಂದಾಚಾರಗಳ ಹೆಸರಿನಲ್ಲಿ ನಿರ್ಲಕ್ಷಿಸಿರುವ ಮತ್ತು ಉಪೇಕ್ಷಿಸಿರುವ ಉಪನಿಷತ್ತು, ಸೂತ್ರಗಳನ್ನು ಇದೇ ಮೇಧಾವಿ ಜ್ಞಾನದ ಸಾಗರ ಮತ್ತು ಆಕರ ಎಂದು ನಂಬಿದ್ದರು ಎನ್ನುವುದು. ಅವರೇ ಹೇಳಿದ ಮಾತು. ತನಗೆ ವಿಜ್ಞಾನಕ್ಕೆ ವಿಜ್ಞಾನದಿಂದ ಸರಿಯಾಗಿ ಉತ್ತರ ದೊರೆಯದಿದ್ದಾಗ ಉಪನಿಷತ್ತುಗಳನ್ನು ಓದಿ ಉತ್ತರ ಕಂಡುಕೊಳ್ಳುತ್ತೇನೆ ಎಂದಿದ್ದರು ಅವರು. ಉಪನಿಷತ್ತುಗಳು ವೇದದ ಕೊನೆಯ ಭಾಗ. ಆದ್ದರಿಂದಲೇ ಅವಕ್ಕೆ ವೇದಾಂತ ಎಂದು ಕರೆದರು. ವೇದಗಳ ಒಳ ತಿರುಳು ಕೂಡಾ ಹೌದು.
           
ವೇದ ವೇದಾಂಗಗಳನ್ನು ವಿಂಗಡಿಸಿದ ಪಾರಾಶರ್ಯ ವ್ಯಾಸರು ಅವುಗಳ ಸಾರ ಸೊಗಸನ್ನು ತಿಳಿಸುವುದಕ್ಕಾಗಿಯೇ, ಅಂದಿನ ಘಟನೆಗಳಿಂದ ಕೂಡಿದ ಪುರಾಣ ಇತಿಹಾಸಗಳನ್ನು ರಚಿಸಿ ತಮ್ಮ ಲೋಮಹರ್ಷಣ ಎನ್ನುವ ಶಿಷ್ಯನಿಗೆ ಕೊಟ್ಟರಂತೆ. ನಿಮ್ಮ ಊಹೆ ನಿಜ. ನಾನು ಮೊದಲಿನ ಮೂರು ವಾರಗಳಲ್ಲಿ ಮಾಡಿದಂತೆ, ವಿಷ್ಣು ಪುರಾಣದಲ್ಲಿ ಇರುವ ವಿಜ್ಞಾನದ ಬಗ್ಗೆಯೇ ಬರೆಯುತ್ತಿದ್ದೇನೆ ಇಲ್ಲಿ, ಅದೂ ಕಾಲ-ಉತ್ಪತ್ತಿ-ನಾಶ-ಬದಲಾವಣೆಗಳ ಬಗ್ಗೆ. ವಿಷ್ಣು ಪುರಾಣದ ಪ್ರಥಮಾಂಶದ ಎರಡನೇ ಅಧ್ಯಾಯದಲ್ಲಿ ವಿಚಾರ, ಪರಮಾತ್ಮ ಸ್ವರೂಪಕ್ಕೆ ರೂಪಕವಾಗಿ, ಬಹಳ ಸೊಗಸಾಗಿ ಮತ್ತು ಸರಳವಾಗಿ ಮೂಡಿ ಬಂದಿದೆ. ನಾನು ಪರಮಾತ್ಮ ಸ್ವರೂಪವನ್ನು ಅರಿತ ಸಾಧಕನಲ್ಲ. ಹಾಗಾಗಿ, ಅದರ ಬಗ್ಗೆ ಏನನ್ನೂ ಹೇಳುವುದಿಲ್ಲ.

ಅವ್ಯಕ್ತಮ್ ಕಾರಣಂ ಯತ್ತತ್ ಪ್ರಧಾನಮೃಷಿಸತ್ತಮೈಃ|
ಪ್ರೋಚ್ಯತೇ ಪ್ರಕೃತಿ ಸೂಕ್ಷ್ಮಾ ನಿತ್ಯಂ ಸದಸದಾತ್ಮಕಮ್|| (--೧೯)

ಅಕ್ಷಯ್ಯಮ್ ನಾನ್ಯಾಧಾರಮಮೇಯಮಜರಂ ಧೃವಮ್|
ಶಬ್ದಸ್ಪರ್ಶವಿಹೀನಂ ತದ್ರೂಪಾದಿಭಿರಸಂಹಿತಮ್|| (--೨೦)

ತ್ರಿಗುಣಮ್ ತಜ್ಜಗದ್ಯೋನಿರನಾದಿಭವಾಪ್ಯಯಮ್|
ತೇನಾಗ್ರೇ ಸರ್ವಮೇವಾಸೀದ್ ವ್ಯಾಪ್ತಮ್ ವೈ ಪ್ರಲಯಾದನು|| (--೨೧)

ವೇದವಾದವಿದೋ ವಿದ್ವನ್ನಿಯತಾ ಬ್ರಹ್ಮವಾದಿನಃ|
ಪಠನ್ತಿ ಚೈತಮೇವಾರ್ಥಮ್ ಪ್ರಧಾನ ಪ್ರತಿಪಾದಕಮ್|| (--೨೨)

ನಾಹೋ ರಾತ್ರಿರ್ನ ನಭೋ ಭೂಮಿರ್ನಾಸೀತ್ತಮೋ ಜ್ಯೋತಿರಭೂಚ್ಚ ನಾನ್ಯತ್|
ಶ್ರೋತಾದಿಬುದ್ಧ್ಯಾನುಪಲಭ್ಯಮೇಕಂ ಪ್ರಾಧಾನಿಕಂ ಬ್ರಹ್ಮ ಪುಮಾಂಸ್ತದಾಸೀತ್|| (--೨೩)

ವಿಷ್ಣೋ: ಸ್ವರೂಪಾತ್ಪರತೋ ಹಿ ತೇ ದ್ವೇ ರೂಪೇ ಪ್ರಧಾನಂ ಪುರುಷಶ್ಚ ವಿಪ್ರ|
ತಸ್ಮೈವ ತೇಽನ್ಯೇನ ಧೃತೇ ವಿಯುಕ್ತೇ ರೂಪಾನ್ತರಂ ದ್ವಿಜ ಕಾಲಸಂಜ್ನಮ್|| (--೨೪)

ಪ್ರಕೃತೌ ಸಂಸ್ಥಿತಂ ವ್ಯಕ್ತಮತೀತಪ್ರಲಯೇ ತು ಯತ್|
ತಸ್ಮಾತ್ ಪ್ರಾಕೃತಸಂಜ್ಞೋಽಯಮುಚ್ಯತೇ ಪ್ರತಿಸಂಚರಃ|| (--೨೫)

ಅನಾದಿರ್ಭಗವಾನ್ಕಾಲೋ ನಾನ್ತೋಸ್ಯ ದ್ವಿಜ ವಿದ್ಯತೇ|
ಅವ್ಯುಚ್ಛಿನ್ನಾಸ್ತತಸ್ತ್ವೇತೇ ಸರ್ಗಸ್ಥಿತ್ಯನ್ತಸಂಯಮಾಃ|| (--೨೬)

ಶ್ಲೋಕಗಳ ಅರ್ಥ ಹೀಗಿದೆ.

“ಜಗತ್ತಿನ ಪ್ರಳಯದ ನಂತರ ಮತ್ತು ಉತ್ಪತ್ತಿಗೂ ಮುನ್ನ, ರಾತ್ರಿ ಹಗಲುಗಳು, ಭೂಮಿ-ಆಕಾಶಗಳೆಂಬ ಭೇದಗಳು, ಬೆಳಕು ಕತ್ತಲು ಗಳೆಂಬ ವಿಕಾರಗಳು ಇರಲಿಲ್ಲ. ಅವು ಸೃಷ್ಟಿಗೆ ಕಾರಣವಾದ, ವೇದವಿದರಾದ ಋಷಿಗಳಿಂದ ತಿಳಿಯಲ್ಪಟ್ಟ ಪ್ರಧಾನ ಎನ್ನುವಲ್ಲಿ ಲೀನವಾಗಿತ್ತು. ಪ್ರಧಾನವು ಜ್ಞಾನೇಂದ್ರಿಯಗಳನ್ನು ಹೊಂದಿತ್ತು. ಆದರೂ ಅವ್ಯಕ್ತವಾಗಿತ್ತು. ಪ್ರಧಾನವು ಸೂಕ್ಷ್ಮರೂಪದಲ್ಲಿ ಪ್ರಕೃತಿ, ಇದು ತ್ರಿಗುಣಸ್ವರೂಪಿಯಾಗಿದೆ. ಇದರಿಂದಲೇ ಜಗತ್ತು ಸೃಜಿತವಾಯಿತು. ಪ್ರಧಾನವು ಆದಿ ಅಂತ್ಯ ರಹಿತವಾಗಿದೆ. ಇದಕ್ಕೆ ಶಬ್ದವಾಗಲೀ, ರೂಪವಾಗಲೀ ಇಲ್ಲ. ಇದಕ್ಕೆ ಅಳತೆಯೂ ಇಲ್ಲ. ಇದನ್ನು ಬಾಹ್ಯ ಇಂದ್ರಿಯಗಳ ಅರಿವಿಗೆ ಬಾರದು ಕೂಡಾ. ವಿಕಾರಗಳೂ (ವೃದ್ಧಿ-ಕ್ಷಯ) ಇಲ್ಲ. ಇದು ಎಲ್ಲೆಲ್ಲಿಯೂ ವ್ಯಾಪಿಸಿಕೊಂಡಿದೆ. ಹೀಗೆ ವಿಷ್ಣುವಾಗಿರುವ (ಎಲ್ಲೆಲ್ಲಿಯೂ ವ್ಯಾಪಿಸಿಕೊಂಡಿರುವ) ಪ್ರಧಾನವು ಕಾಲದ ದೆಸೆಯಿಂದ ಪುರುಷ ಎನ್ನುವ ಸ್ವರೂಪದೊಂದಿಗೆ ಸಂಯೋಗ ವಿಯೋಗಗಳನ್ನು ಹೊಂದಿ ಸೃಷ್ಟಿ ಪ್ರಳಯಗಳಾಗುತ್ತವೆ. ಕಾಲವೂ ಆದಿ ಅಂತ್ಯಗಳಿಲ್ಲದ್ದಾಗಿದೆ. ಇದು ಕೂಡಾ ಪ್ರಧಾನಜನ್ಯವೇ ಆಗಿದೆ. ಇದರ ಕಾರಣದಿಂದಲೇ ಸೃಷ್ಟಿ-ಸ್ಥಿತಿ-ಲಯಗಳು ಸಾಗುತ್ತಿವೆ.”

ಐನ್ ಸ್ಟೀನ್ ಹೆಳಿದ್ದು ಕೂಡಾ ಹೀಗೆಯೇ ಇದೆಯಲ್ಲವೇ? ಎಲ್ಲವೂ ರೂಪಾಂತರ. ಯಾವುದೂ ಹುಟ್ಟುವುದಿಲ್ಲ-ನಾಶವೂ ಆಗುವುದಿಲ್ಲ. ಘಟನೆಗಳಿಂದ, ಅಂದರೆ ಕಾಲ ಮತ್ತು ಆಯಾಮಗಳ ಬದಲಾವಣೆಯಿಂದ ನಮ್ಮ ಅರಿವಿಗೆ ಬರುತ್ತದೆ.ಘಟನೆಗಳೊಂದಿಗೆ ನಾವು ಸೇರುವುದು ನಮ್ಮ ಜ್ಞಾನೇಂದ್ರಿಯಗಳ ಮೂಲಕವೇ ಆಗಿದೆ. ಅದಕ್ಕಾಗಿಯೇ ಇಲ್ಲಿ ಬದಲಾವಣೆಯ ಅರಿವು ಮೂಡಿದ್ದನ್ನು ತಿಳಿಸಲು ಪ್ರಧಾನಕ್ಕೆ ಜ್ಞಾನೇಂದ್ರಿಯಗಳನ್ನು ಆರೋಪಿಸಲಾಯಿತು. ವಿಷ್ಣುಃ ಎಂದರೆ ಎಲ್ಲೆಲ್ಲಿಯೂ ವ್ಯಾಪ್ತವಾಗಿರುವುದು ಎಂದರ್ಥ. ಇದನ್ನೇ ಮೇಧಾವಿ ಶಕ್ತಿ ಎಂದು ಕರೆದರು. ದುರ್ಗಾ ಸಪ್ತಶತಿಯ ಪ್ರಕಾರ ವಿಷ್ಣುವು ಶಕ್ತಿ ಸ್ವರೂಪಿಯೇ ಆಗಿದ್ದಾನೆ. ಕಾಲ ಎನ್ನುವುದು ನಿರಂತರ. ಕಾಲದ ಮತ್ತು ಆಯಾಮಗಳ ಬದಲಾವಣೆಯ ಬಗೆಗೆ ಹಿಂದಿನ ವಾರವೇ ಸೂರ್ಯನ ಬಗ್ಗೆ ಬರೆಯುವಾಗ ತಿಳಿಸಿದ್ದೇನೆ.

No comments:

Post a Comment