Tuesday, January 2, 2018

ಆಶ್ವಯುಜ ಅಮಾವಾಸ್ಯೆ

ಅಂದು ಆಶ್ವಯುಜ ಮಾಸದ ಅಮಾವಾಸ್ಯೆ. ಸಾಗರದಲ್ಲಿ ಕಾಲಮಿತಿಯ ಯಕ್ಷಗಾನ ಪ್ರದರ್ಶನ ಇತ್ತು. ನನಗೂ ಹೋಗುವ ಆಸೆ. ಮನೆಯಲ್ಲಿ ಕೇಳಿದರೆ, ಅಮಾವಾಸ್ಯೆ, ಭೂತ ದೆವ್ವ ಎಲ್ಲದರ ಪಾಠವಾಯಿತು. ನಾನು ಬಿಡಲಿಲ್ಲ.ನಾನು ಹಟ ಹಿಡಿದು ಸಾಧಿಸಿದ ಕೆಲವೇ ವಿಷಯಗಳಲ್ಲಿ ಅದೂ ಒಂದು. ಅಂತೂ ಯಕ್ಷಗಾನಕ್ಕೆ ಹೋದೆ. ನೀ.ನಾ. ಮಧ್ಯಸ್ಥರು ಬರೆದಿದ್ದ ವೈದೇಹಿ ಪ್ರಸಂಗ ಅದು.
ಪಂಚವಟಿಯ ಸನ್ನಿವೇಶವಂತೂ ಅದ್ಭುತವಾಗಿತ್ತು. ಶೂರ್ಪನಖಿಯ ಪಾತ್ರ ವಹಿಸಿದ್ದು ಕರ್ಕಿ ಕೃಷ್ಣ ಹಾಸ್ಯಗಾರರು. ಅಮಾವಾಸ್ಯೆಯ ಕಾರಣಕ್ಕೊ ಅಥವಾ ಅಮಾವಾಸ್ಯೆ ಮಹಾತ್ಮೆ ನನ್ನೊಳಗೆ ಇನ್ನೂ ಗುಂಯ್ ಗುಡುತ್ತಿದ್ದುದಕ್ಕೋ, ಅಥವಾ ಹಾಸ್ಯಗಾರರ ಪಾತ್ರ ನಿರ್ವಹಣೆಯ ಸಾಮರ್ಥ್ಯವೋ ಏನೋ, ಮಾಯಾ ಶೂರ್ಪನಖಿಯ ಪ್ರವೇಶವಾಗುವ ತನಕ ನಾನು ಹೆದರಿದ್ದೆ. ಘೋರ ಶೂರ್ಪನಖಿ ನನ್ನಲ್ಲಿ ಮಹಾ ಭಯ ಹುಟ್ಟಿಸಿಬಿಟ್ಟಿತ್ತು.
ಅಂತೂ ಆಟ ಮುಗಿಯಿತು. ಮನೆಗೆ ಹೋಗಬೇಕಲ್ಲ, ಒಬ್ಬನೇ ಹೋಗಲು ಭಯ- ಶೂರ್ಪನಖಿ ಜೊತೆ ಸೇರಿದ ಅಮಾವಾಸ್ಯೆ ಮಹಾತ್ಮೆಯ ಪ್ರಭಾವ. ಯಾರದರೂ ಊರವರು ಇದ್ದಾರಾ ಎಂದು ನೋಡಿದೆ. ಯಾರೂ ಇಲ್ಲ. ಒಂದು ಸುತ್ತು ಪೇಟೆಯ ಕಡೆ ಓಡಾಡಿದರೆ ಯಾರಾದರೂ ಸಿಕ್ಕಾರೇನೋ ಎಂದು ಬೈಕ್ ಆ ಕಡೆ ತಿರುಗಿಸಿದೆ.ಫಲ ಇಲ್ಲ. ಅವರು ಬಹುಷಃ ಅಮಾವಾಸ್ಯೆ ಮಹಾತ್ಮೆ ಪ್ರಭಾವಕ್ಕೆ ಸಿಕ್ಕಿ ಮನೆಯಲ್ಲೇ ಇದ್ದಿರಬೇಕು. ನಿಜ. ಸಂಧ್ಯಾವಂದನೆ ಮಾಡಿದ್ದರೆ ಈ ರೀತಿ ಹೆದರಬೇಕಾಗಿರಲಿಲ್ಲ. ಭೂತ ದೆವ್ವಗಳು ಹತ್ತಿರ ಸುಳಿಯುವುದಿಲ್ಲವಲ್ಲ ಅದಕ್ಕೆ.
ಹೆದರುತ್ತಾ-ಬೆದರುತ್ತಲೇ ಬೈಕನ್ನು ಮನೆ ಕಡೆ ತಿರುಗಿಸಿದೆ. ವೇಗ ಅಂದರೆ ಅವತ್ತಿನದು ನೋಡಿ. ಹಿಂದೆ ಗಾಳಿ ಬಿಡುತ್ತಾ ಸಾಗಿದೆ. ಅಂದರೆ ವಾಯುವೇಗವನ್ನೂ ಮೀರಿ ಓಡಿಸಿದೆ. ಸಂಜಯ್ ಮೆಮೋರಿಯಲ್ ಕಾಲೇಜಿನ ಬಳಿ ಬರುತ್ತಿದ್ದಂತೆ ಒಂದಿಷ್ಟು ದನಗಳು ಹಿಂಡಾಗಿ ಮಲಗಿದ್ದವು. ಒಳಗಿದ್ದ ಭಯ ಒಮ್ಮೆಲೆ ನೆತ್ತಿಗೆ ಹತ್ತಿತು. ನೆತ್ತಿಯ ತುಂಬಾ ಕ್ಷಣಕಾಲದಲ್ಲಿ ಅದೆಷ್ಟು ಆಲೋಚನೆಗಳು ಹರಿದಾಡಿಬಿಟ್ಟವು. ಯಾವುದಾದರೂ ಭೂತ ದೆವ್ವಗಳು ಈ ರೀತಿ ವೇಷ ಧರಿಸಿ ಮಲಗಿದ್ದಾವೆಯೇ ಅವು ಭೂತದೆವ್ವಗಳೆ ಆಗಿದ್ದರೆ ನನ್ನ ಪಾಡೇನು? ಅದಲ್ಲದೆ ಈಗ ತಾನೇ ಸ್ಮಶಾನ ದಾಟಿ ಬಂದಿದ್ದೇನೆ. ಮುಂದೇನು ಎನ್ನುವ ಭಯದಿಂದ ಆ ಚಳಿಯಲ್ಲೂ ಬೆವೆತೆ ನಾನು. ಬೈಕನ್ನು ನಿಧಾನವಾಗಿಸಿದರೆ, ಎಲ್ಲಿ ದನಗಳ ವೇಷದ ಭೂತ ದೆವ್ವಗಳು ಆಕ್ರಮಿಸಿಯಾವೋ ಎನ್ನುವ ಭಯ. ಜೋರಾಗಿ ಓಡಿಸಿದರೆ ಆಯ ತಪ್ಪಿ ಬಿದ್ದರೆ ಎನ್ನುವ ಭಯ. ಹಾಗೂ ಹೀಗೂ ಮಲಗಿದ್ದ ದನಗಳ ಹಿಂಡನ್ನು ದಾಟಿದೆ. ಏನೂ ಆಗಲಿಲ್ಲ. ಭೂತ ದೆವ್ವಗಳ ಭಯವೂ ಇರಲಿಲ್ಲ. ನಮ್ಮ ಕಲ್ಪನೆಗಳೆ ಭೂತ ದೆವ್ವ. ಇದೆಲ್ಲ ಮೂಢನಂಬಿಕೆ ಎಂದು ಯಾರಾದರೂ ಕೆಳಿದರೆ ಹೇಳುವ ಧೈರ್ಯ ಬಂದಿತ್ತು ನನಗೆ.
ಮುಂದೆ ಸಾಗಿದೆ. ಅಮಾವಾಸ್ಯೆಯ ರಾತ್ರಿಯಲ್ಲಿ ಕೆಲವರು ದೀಪಾವಳಿ ಜೂಜಾಡುತ್ತಿದ್ದರು, ಗ್ಯಾಸ್ ಲೈಟ್ ಬೆಳಕಿನಲ್ಲಿ. ತತ್ ಕ್ಷಣ ನನ್ನ ಲ್ಲಿದ್ದ ವಿಚಾರವಾದಿ ಜಾಗೃತನಾದ. ಕೆಟ್ಟ ಕೆಲಸ ಮಾಡುವವರು ಅಮಾವಾಸ್ಯೆಯ ರಾತ್ರಿಯನ್ನು ತಮ್ಮ ಲಾಭಕ್ಕೆ ಉಪಯೋಗಿಸುತ್ತಾರೆ. ದೀಪದ ಬೆಳಕಿನಲ್ಲಿ ಚಿತ್ರ ವಿಚಿತ್ರವಾಗಿ ವರ್ತಿಸಿ ಭೂತದ ಭ್ರಮೆ ಹುಟ್ಟಿಸಿ, ಭಯ ಮೂಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎನ್ನಿಸಿತು ನನಗೆ. ನಿಜ ಭೂತ ಎನ್ನುವುದು ಭ್ರಮೆ ಅಷ್ಟೆ ಎಂದು ನನಗೆ ನಾನೇ ಹೇಳಿಕೊಳ್ಳುತ್ತಾ, ಬಿಸಿಲು ಬಸವನ ಏರು ಹತ್ತುತ್ತಿದ್ದೆ.
ಬೈಕಿನ ಬೆಳಕಿನಲ್ಲಿ ಒಂದು ಕಾಲು ಪೊದೆಯೊಂದರ ಒಳಗೆ ಹೋಗಿದ್ದನ್ನು ನೋಡಿದೆ. ಛೇ!! ಇದೆಲ್ಲ ಭ್ರಮೆ ಅಂದುಕೊಂಡು ಮುಂದಾದೆ, ಪೊದೆಯೊಳಗೆ ಹೋಗಿದ್ದ ಕಾಲು ಮತ್ತೆ ಹೊರಬರಬೇಕೆ? ಮತ್ತೆ ಭಯ ಬಂದುಬಿಟ್ಟಿತು. ಈಗ ಮನೆಯಲ್ಲಿ ಹೇಳಿದ ಅಮಾವಾಸ್ಯೆ ಮಹಾತ್ಮೆ ಜೊತೆ, ಘೋರ ಶೂರ್ಪನಖಿಯ ವೇಷ, ಎಂದೆಂದೋ ನೋಡಿದ ಹಾರರ್ ಚಿತ್ರಗಳು, ಟಿ ವಿ ಧಾರಾವಾಹಿಯಲ್ಲಿ ಬರುವ ಮೋಹಿನಿಗಳು, ಬೇತಾಳನ ಕಥೆಗಳು, ಪತ್ತೇದಾರಿ ಕಾದಂಬರಿಗಳಲ್ಲಿ ಬರುವ ಆತ್ಮಗಳು, ಯಾರ್ಯಾರೋ ಹೇಳಿದ ಭೂತ ದೆವ್ವಗಳ ಕಥೆಗಳು ಎಲ್ಲಾ ಒಟ್ಟಿಗೆ ನೆನಪಾಗಿಬಿಡಬೇಕೇ? ಧೈರ್ಯ ಮೊದಲೇ ಕಡಿಮೆ. ಪೂರ್ತಿ ಉಡುಗಿ ಹೋಗಿತ್ತು ಈಗ.
ಅಚಾನಕ್ಕಾಗಿ ಮನಸ್ಸಿನಲ್ಲಿ ರಾಮನಾಮ ಮೂಡತೊಡಗಿತು. ಮನಸ್ಸಿನಲ್ಲೇ ರಾಮ ರಾಮ ಎನ್ನುತ್ತಾ ಗಾಡಿ ನಿಲ್ಲಿಸಿಕೊಂಡೆ. ಮುಂದೆ ಹೋಗಲು ಧೈರ್ಯವಿಲ್ಲ. ಅಲ್ಲೇ ನಿಲ್ಲಲು ಭಯ. ನನ್ನ ಪಾಡು ನನಗೇ ಗೊತ್ತು. ಜೊತೆಯಲ್ಲಿ ಒತ್ತರಿಸಿ ಬರುತ್ತಿದ್ದ ಮೂತ್ರ ಬೇರೆ. ಹುಯ್ಯದಿದ್ದರೆ ಹೇಸಿಗೆ, ಹೊಯ್ಯಲು ಹೆದರಿಕೆ. ಎಷ್ಟು ಅಂತ ಜಲಬಾಧೆ ತಡೆದುಕೊಳ್ಳುವುದು. ರಾಮ ರಾಮ ಎಂದು ಮನಸ್ಸಿನಲ್ಲೇ ಹೇಳಿಕೊಳ್ಳುತ್ತಾ, ಬೈಕ್ ಆಫ಼್ ಮಾಡದೆ, ಸ್ಟ್ಯಾಂಡ್ ಹಾಕಿ ಇಳಿದೆ. ಅಷ್ಟು ಹೊತ್ತಿಗೆ ಪೊದೆಯಿಂದ "ಆಽಽಮ್ ಆಽಽಮ್ ಊಽಽಮ್" ಎನ್ನುವ ಉದ್ಗಾರ ಬೇರೆ ಕೇಳಿತು. ಉಚ್ಚೆ ಮೊದಲಿಗಿಂತ ರಭಸವಾಗಿ ಬೀಳತೊಡಗಿತು. ಭಯದಿಂದ ಬೆವರು ಬೇರೆ.
ಭಯದಲ್ಲೇ ಕಣ್ಣನ್ನು ಪೊದೆಯ ಕಡೆ ಹಾಯಿಸಿದೆ. ಪೊದೆಯಿಂದ ಒಂದು ಆಕೃತಿ ಮೇಲೆದ್ದು ಬಂತು. ಬೈಕಿನ ಲೈಟಿನ ಬೆಳಕಿನಲ್ಲಿ ಸ್ಪಷ್ಟವಾಗಿ ಗೊತ್ತಾಯಿತು. ಇದು ಶುಕ್ರ ಅಂತ. ನನ್ನ ಭಯಕ್ಕೆ ನನ್ನನ್ನು ನಾನೇ ಹಳಿದುಕೊಳ್ಳುತ್ತಾ ಮನೆ ಕಡೆ ಹೊರಟೆ. ಭಯ ಪೂರ್ತಿಯಾಗಿ ಹೋಗಿದ್ದರಿಂದಲೋ ಏನೋ, ಹಸಿವಿನ ಅನುಭವ ಆಗತೊಡಗಿತ್ತು.

No comments:

Post a Comment