Tuesday, January 23, 2018

ಚೌಕಿಯಲ್ಲಿ ಶುಕ್ರ

ಆಟ ನಡೆಯಬೇಕಿದ್ದ ಜಾಗಕ್ಕೆ ಹೋದಾಗ ನಾಗೇಂದ್ರ, "ಒಬ್ಬ ವೇಷಧಾರಿಗೆ ಹುಷಾರಿಲ್ಲ. ನಿನ್ನ ಬಗ್ಗೆ ಕೇಳ್ದೆ. ಆತ ಹಾಳಾಗ್ತದೆ ಅಂತ ಬೊಂಬಾಯಲ್ಲಿ ನಾವುಡರ ಪದ್ಯಕ್ಕೆ ವೇಷ ಮಾಡಿದ್ಯಂತೆ. ಈಗ ನಮ್ಮ ಮರ್ಯಾದೆ ಉಳಸ್ಕೊಡು ಮಾರಾಯ. ನಿನಗೆ ಬೇಕಾರೆ ಇನ್ನೂರು ರೂಪಾಯಿ ಕೊಡ್ತೇನೆ" ಅಂದ.

ಇನ್ನುರು ರೂಪಾಯಿ ಅಂದ ಕೂಡಲೇ ಸಂತೋಷ ಇಮ್ಮಡಿಯಾಗಿ ಆತ ಕುಣಿಯುವ ಹುರುಪು ಬಂದೇ ಬಿಟ್ಟಿತು ಶುಕ್ರನಿಗೆ. ತಕ್ಷಣವಿದ್ಯುಲ್ಲೋಚನನ ಸಂದರ್ಭ ನಡೆ ಎಲ್ಲಾ ತನಗೆ ಗೊತ್ತಿಲ್ಲ ಎಂದು ನೆನಪಾಯಿತು. ನಾಗೇಂದ್ರನಲ್ಲಿ ಅದನ್ನು ತೋರಗೊಡದೆ, "ಅಲ್ಲ ಭಾಗವತ್ರೆ, ನಾ ವೇಷ ಮಾಡಿ ಭಾರೀ ಕಾಲ ಆಯ್ತ್. ಅದ್ಕೆ ಎಲ್ಲಾನೆನಪ್ ಹ್ವಾಯ್ತ್. ಆಟ ಹಾಳಾಪುಕಾಗ ಕಾಣಿ ಅದ್ಕೆ ಸ್ವಲ್ಪ ಹೇಳ್ರೆ ಒಳ್ಳೆದಿತ್ತು. ನಾ ಮತ್ತೆ ನನ್ನ ಸ್ವಂತಕ್ಕೆ ಕೇಣುದಲ್ಲಾ ಮತ್ತೆ. ಆಟ ಚಂದ ಆಯ್ಕ್ ಕಾಣಿ." ಎಂದ. ಆಟ ನಡೆದರೆ ಸಾಕು ಎಂಬ ಪರಿಸ್ಥಿತಿಯಲ್ಲಿದ್ದ ನಾಗೇಂದ್ರ ಯಾವ ಅನುಮಾನವೂ ಇಲ್ಲದೆ ಎಲ್ಲ ಹೇಳಿದ.
ಮನೆಗೆ ಹೋಗುವಾಗ ಸಿಕ್ಕ ಸಿಕ್ಕವರ ಹತ್ರ ಎಲ್ಲಾ, " ಹ್ವಾ!! ಆಟ ಕಾಂಬೂಕೆ ಬನ್ನಿ ಆಯ್ತಾ. ನಂದೇ ವಿದ್ಯುಲ್ಲೋಚನ. ಹುಡಿ ಹಾರ್ಸುದೇ ಇವತ್! ಮರೀಬೇಡಿ ಮತ್ತೆ.. " ಎಂದು ಎಲ್ಲರಿಗೂ ಪ್ರಚಾರ ಮಾಡಿದ. ಒಂದೇ ಧೈರ್ಯ ಎಂದರೆ, ಯಾವತ್ತೋ ಘಟ್ಟ ಹತ್ತಿದ್ದ ತನ್ನವರಿಗೆ ಯಕ್ಷಗಾನ ಏನೂ ಗೊತ್ತಿಲ್ಲ. ಹಾಗಾಗಿ ತಾನು ತಪ್ಪು ಮಾಡಿದರೆ ತಿಳಿಯುವುದಿಲ್ಲ ಎನ್ನುವುದು.
ಅಂತೂ ಆಟ ಶುರುವಾಗುವ ಮುನ್ನವೇ ಶುಕ್ರನ ಸವಾರಿ ಚೌಕಿ ಮನೆಯ ಕಡೆ ಬಂತು. ಶಿಸ್ತಾಗಿ ಚೌಕಿ ಮನೆಯಲ್ಲಿ ಇಟ್ಟಿದ್ದ ಗಣಪತಿಗೆ ನಮಸ್ಕಾರ ಮಾಡಿ ಬಣ್ಣಕ್ಕೆ ಕುಳಿತ ಭದ್ರಸೇನನ ವೇಷ ಮಾಡುವವನಲ್ಲಿ "ಹ್ವಾ!! ಒಂದ್ ಸ್ವಲ್ಪ ಬಣ್ಣ ಮಾಡ್ಕಲೆ" ಅಂದ. ಬಯಲಾಟದ ಮೇಳವಾದ್ದರಿಂದ, ಇದೆಲ್ಲ ಮಾಮೂಲಿ. ಬಣ್ಣ ಮಾಡುವವ ಬಂದು ಶುಕ್ರನ ಮುಖ ಹಿಡಿದು ಬಣ್ಣ ಮಾಡ ತೊಡಗಿದ.
            ಅಷ್ಟರಲ್ಲಿ, ಪಕ್ಕದ ಮನೆಯ ರಾಜು ಬಂದ. "ಹ್ವಾ ಶುಕ್ರಣ್ಣ!! ಒಳ್ಳೇದ್ ಆಯ್ಕ್ ಇವತ್!!" ಅಂದ. ಮೊದಲೇ ಬಾಯಿ ಬಡುಕ ಶುಕ್ರ. ಯಾರಾದರೂ ಮಾತಾಡಿಸಿದರೆ ಕುನ್ನಿ ಬಾಯಿಗೆ ಕೋಲು ಹಾಕಿದಂತೆ ಆಗುತ್ತಿತ್ತು. "ಒಳ್ಳೇದ್ ಅಂದ್ರೆ!! ಮಾಡ್ರೆ ಹಿಂಗ್ ಆಯ್ಕ್ ವೇಷ ಅನ್ಕ್. ಹಾಂಗೆ ಮಾಡ್ತೆ. ಚಾ ಕುಡೂಕ್ ಎದ್ದವ ಒಂದ್ ಸ್ವಲ್ಪ ಮಂಡಕ್ಕಿ ತಂದ್ ಕೊಟ್ ಹೋಗ್ ಆಯ್ತಾ!! ಖಾರ ನೋಡಿ ಹಾಕ್ಸ್ ಮತ್ತೆ.!!" ಎಂದು ಕಳಿಸಿದ.
          ಬಣ್ಣ ಮಾಡುವವ ಮತ್ತೆ ಬಣ್ಣ ಮಾಡ ತೊಡಗಿದ. ಅಷ್ಟರಲ್ಲಿ, ಶುಕ್ರ ಕೆಲಸಕ್ಕೆ ಹೋಗುತ್ತಿದ್ದ ಮನೆಯ ಚಿದಂಬರ ಹೆಗಡೆ ಚೌಕಿಯ ಒಳಗೆ ಬಂದ. ಒಡೆಯರು ಬಂದಾಗ ಸುಮ್ಮನಿದ್ದಾರಾದೀತೇ? ತಾನು ಇವರ ಮನೆಯ ಒಕ್ಕಲು ಎಂದು ಮೇಳದವರಿಗೆಲ್ಲ ತಿಳಿಯಬೇಡವೇ? ತಾನು ಮಹಾನ್ ಕಲಾವಿದ ಎನ್ನುವುದು ಕೂಡಾ ಒಡೆಯರಿಗೆ ಗೊತ್ತಾಗಲೇ ಬೇಕಲ್ಲ
ಆಳು, ಒಡೆಯರ ಹತ್ತಿರ ಹೋಗಿ, "ಒಡೇರೆ, ನಾ ರಾಕ್ಷಸನ ಪಾತ್ರ ಮಾಡ್ಕಂಬ್ರ್. ಗಡಿಬಿಡಿಲಿ ನಿಮಗೆ ಹೆಳ್ಲೆ ಇಲ್ಲ ಕಾಣಿ. ತಪ್ ತಿಳ್ಕಬೆಡಿ ಮತ್ತೆ." ಎನ್ನುತ್ತಾ ಹಲ್ಲುಗಿಂಜಿದ.
ಒಡೆಯರು ಹೆಚ್ಚು ಮಾತಾಡದೆ ಬೇಗನೆ ಹೊರ ಹೋದರು. ಆದರೆ ಹೀಗೆ ಶುಕ್ರನ ವೇಷ ಮಾಡುವ ಪರಿ ನೋಡಲು ಚೌಕಿಗೆ ಬರುವವರ ಕಾಲದಲ್ಲಿ, ಎಷ್ಟು ಹೊತ್ತಾದರೂ ಬಣ್ಣ ಮುಗಿಯಲಿಲ್ಲ. ಆಟ ಶುರುವಾಗಿ, ಒಡ್ಡೋಲಗ ಮುಂದುವರೆಯುತ್ತಿತ್ತು. ಜನರ ಗಮನ ಆಟದ ಮೇಲೆ ಇದ್ದಿದ್ದರಿಂದ ಶುಕ್ರನ ವೇಷ ಮಾಡುವುದನ್ನು ನೋಡುವುದಕ್ಕೆ ಯಾರೂ ಬರಲಿಲ್ಲ.
ಶುಕ್ರನಿಗೆ ಸುಮ್ಮನಿದ್ದು ಇದ್ದು ಬಾಯಿ ನೋಯ ಹತ್ತಿತು. ಬಣ್ಣ ಮಾಡುವವನ ಬಳಿ "ಅದರ ಕತಿ ಹೇಳ್ತೆ ಕೇಣಿ. ನಾ ಬೊಂಬಾಯಾಗಿಪ್ಪಾಗ......" ಎಂದು ಬಾಯ್ದೆರೆದ. ತಾಳ್ಮೆ ಕಳೆದುಕೊಂಡಿದ್ದ ಬಣ್ಣ ಮಾಡುವವ, ಶುಕ್ರನನ್ನು ಕೆಳ ಹಾಕಿ ಅವನ ಮೇಲೆ ಕುಳಿತು ಬಣ್ಣ ಮಾಡಿದ. ಬಣ್ಣ ಮುಗಿಯುವ ಹೊತ್ತಿಗೆ ಶುಕ್ರನಿಗೆ ಆಟವೆಂದರೆ ಆಟವಲ್ಲ ಎಂದು ತಿಳಿಸಿತ್ತು, ಬಣ್ಣ ಮಾಡಿದವ ನೆಲಕ್ಕೆ ಹಾಕಿ ಮೇಲೆ ಹತ್ತಿದ್ದ ಪರಿ. ಬಣ್ಣ ಮಾಡುವ ನೆಪದಲ್ಲಿ, ಶುಕ್ರನ ಬೈರಿಗೆ ಹತ್ತಿಸಿದ್ದ ಸಿಟ್ಟನ್ನೂ ತೀರಿಸಿಕೊಂಡಿದ್ದ. ಬಣ್ಣ ಹಚ್ಚುವ ನೆಪದಲ್ಲಿಯೇ ಮುಖಕ್ಕೆ ತಟ್ಟಿಬಿಟ್ಟಿದ್ದ. ಮಾತಾಡುವಾಗ ಎಲ್ಲರೂ ಕೇಳಿಸಿಕೊಂಡಿದ್ದನ್ನು ಮಾತ್ರ ನೋಡಿದ್ದ ಶುಕ್ರ ಪ್ರತಿಕ್ರಿಯೆಯಿಂದ ಬೆಚ್ಚಿದ್ದ. ಅದಕ್ಕೇ ಬಾಯ್ದೆರೆಯಲಿಲ್ಲವೋ ಏನೋ ಶುಕ್ರ ಎಲ್ಲವನ್ನೂ ಸಹಿಸಿಕೊಂಡ. ಇನ್ನೂರು ರೂಪಾಯಿಯ ಆಸೆಗೊ, ಅಥವಾ ಹೇಳಿದ ಸುಳ್ಳಿಗೊ ಗೊತ್ತಿಲ್ಲ.

No comments:

Post a Comment