Tuesday, January 9, 2018

ನಾನೇ ಭೂತವಾಗಿದ್ದೆ

ಪೊದೆಯೊಳಗಿಂದ ಕಾಲು ಚಾಚಿ ನನ್ನ ಭಯಗೊಳಿಸಿದ್ದ ಶುಕ್ರ ತನ್ನ ರಾಮನಾಮದ ಫಲದಿಂದ ತಲೆಯನ್ನೂ ತೋರಿಸಿ ನನ್ನ ಭಯ ದೂರಗೊಳಿಸಿದ್ದ. ಭಯ ದೂರವಾದ ಮೇಲೆ ನನಗೆ ಯಕ್ಷಗಾನದ ಒಳ್ಳೆಯ ಅಂಶಗಳು ನೆನಪಾಗಿ ನನ್ನ ಮನಸ್ಸು ಪ್ರಫುಲ್ಲಗೊಂಡಿತು. ಯಕ್ಷಗಾನದ ಪದ್ಯಗಳು ವೇಷಧಾರಿಗಳು ಮತ್ತು ಅಭಿನಯ-ಮಾತುಗಾರಿಕೆಗಳು ನೆನಪಾಗಿ ಮನಸ್ಸು ಆಕಡೆ ಹರಿದು, ಭಯ ಬಾರದಂತೆ ಆಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ರಾಮ ನಾಮದ ಮೇಲಿದ್ದ ನಂಬಿಕೆ ಬಲವಾಗಿತ್ತು. ಮರುದಿನದ ದೀಪಾವಳಿ ಆಚರಣೆಯ ಕಡೆ ಮನಸ್ಸು ಹೊರಳಿತ್ತು.

            ಆದರೂ ಕೆಲವು ಗೊಂದಲಗಳಿದ್ದವು. ಶುಕ್ರ ಪೊದೆಯಲ್ಲಿದ್ದಿದ್ದೇಕೆ? ಪೊದೆಯಿಂದ ತನ್ನ ಮುಖ ತೋರಿಸಿ, ಮತ್ತೆ ಪೊದೆಯಲ್ಲಿ ಹೊಕ್ಕಿದ್ದೇಕೆ ಎನ್ನುವ ಪ್ರಶ್ನೆಗಳು ಆಗಾಗ ಮೂಡುತ್ತಿದ್ದವು, ಸಮಸ್ಯೆ ಪ್ರಶ್ನೆಗಳದ್ದಲ್ಲ. ಪ್ರಶ್ನೆಗಳನ್ನು ಮೂಡಿಸಿದ ಪರಿಸ್ಥಿತಿಯದ್ದು. ನಡೆದ ಕತೆ ಹೇಳಿದರೆ ನಾನೇ ನಗೆಪಾಟಲಾಗಬೇಕಲ್ಲ, ಹಾಗಾಗಿ ಬಾಯಿ ಮುಚ್ಚಿ ಮನಸ್ಸಿನಲ್ಲಿಯೇ ಪ್ರಶ್ನೆಗಳನ್ನು ಮಂಥಿಸುತ್ತಿದ್ದೆ. ಒಮ್ಮೊಮ್ಮೆ, ವಿಚಿತ್ರ ಪ್ರಶ್ನೆ ಮೂಡಿಬಿಡುತ್ತಿತ್ತು. ನಿನ್ನೆ ಕಂಡದ್ದು ಭೂತವೇ ಇರಬಹುದೇ ಹಾಗಾದರೆ? ಭೂತ ಶುಕ್ರನಂತೆ ನನಗೆ ಕಂಡಿರಬಾರದೇಕೆ? ಭೂತಗಳು ನಮಗೆ ಪರಿಚಿತರ ಮುಖವನ್ನೇ ಹೊಂದಿರುತ್ತದೆಯಂತೆ ಕೆಲವು ಸಲ. ಅಥವಾ ರಾಮನಾಮ ಸ್ಮರಣೆಯ ಫಲದಿಂದ ನನ್ನನ್ನು ಕಾಡಲು ಬರುತ್ತಿದ್ದ ಭೂತ, ಶುಕ್ರನ ರೂಪವನ್ನು ತಳೆಯಿತೇ? ಒಟ್ಟು ಪ್ರಶ್ನೆಗಳಿಗೆ ನನ್ನ ಮೆದುಳು ಚಕ್ರವ್ಯೂಹವಾಗಿಬಿಟ್ಟವು. ಹೊಕ್ಕ ಪ್ರಶ್ನೆಗಳು ಹೋಗುತ್ತಲೇ ಇಲ್ಲ. ದೀಪಾವಳಿಯ ಸಂಭ್ರಮವೂ ನನಗೆ ಅರೆ ಬೆರೆಯಾಯಿತು. ಇಷ್ಟರಲ್ಲಿ ಚೌಡಿ ಬನಕ್ಕೆ ಕಾಯಿ ಒಡೆಯಲು ಹೋಗುವಂತೆ ಅಪ್ಪಣೆಯಾಯಿತು. ಮನೆತನದ ಎಲ್ಲಾ ಸದಸ್ಯರೂ ವರ್ಷಕ್ಕೊಮ್ಮೆ ಸೇರುವ ತಾಣ ಚೌಡಿ ಬನ. ನಮ್ಮ ಒಕ್ಕಲುಗಳು ಎಲ್ಲರೂ ಅಂದು ಚೌಡಿಗೆ ಕಾಯಿ ಕೊಡುತ್ತಾರೆ. ಕಾಯಿ ಒಡೆಯುವುದು ಒಂದು ಸಂಭ್ರಮವೂ ಹೌದು, ಸಾಹಸವೂ ಹೌದು ಅಂದು.

            ಅಲ್ಲಿ ಶುಕ್ರ ಬಂದಿದ್ದ. ಪ್ರತಿ ವರ್ಷ ಎರಡು ಕಾಯಿ ಕೊಡುವ ಶುಕ್ರ, ಸಾರಿ ನಾಲ್ಕು ಕಾಯಿ ತಂದಿದ್ದ. ನಾನು ಕಾಯಿ ಒಡೆಯುವಾಗ ಕಾಯಿ ತಂದವರಲ್ಲಿ ಸ್ವಾಭಾವಿಕದ ಮಾತು ಬಿಟ್ಟರೆ ಕೆದಕುವುದಕ್ಕೆ ಹೋಗುವುದಿಲ್ಲ. ಆದರೆ ಅವರೊಳಗಿನ ಮಾತುಗಳಿಗೆ ನನ್ನ ಕಿವಿಗಳನ್ನು ಪೂರ್ತಿಯಾಗಿ ತೆರೆದಿಡುತ್ತೇನೆ, ಹೊತ್ತು ತರಬಲ್ಲ ಮಾತುಗಳ ನಿರೀಕ್ಷೆಯಲ್ಲಿ.

            ಶುಕ್ರನ ಪಕ್ಕದ ಮನೆಯ ಗೋಪಾಲ ಶುಕ್ರನಲ್ಲಿ ಕೇಳಿದ. "ಹ್ವಾ!! ಶುಕ್ರ ಎಂತ ಮಾರಾಯ ಇದು. ನೀ ಯಾವಗ್ಲೂ ಒಮ್ದ್ ಕಾಯಿ ಕೊಡುವವ ಅಲ್ದೆ? ವರ್ಷ ಎರಡ್ ಕೊಟ್ಟೀದೆ. ಎಂತಕೆ? ಎಂತಾರು ಹರ್ಕಿ ಇದ್ದೀತಾ? ಅಥವಾ ಎಂತ ಮನಿ ಕಟ್ಸೂ ಮನ ಇತ್ತಾ? ಎಂತ ಕತೆ?"

            ಶುಕ್ರ ಉತ್ಸಾಹದಿಂದ ಆದರೆ ಮಾತಿನ ಧಾಟಿಯಲ್ಲಿ ಧ್ವನಿಯಲ್ಲಿ ಅವಶ್ಯಕತೆಗಿಂತ ಸ್ವಲ್ಪ ಹೆಚ್ಚೇ ಬೇಸರ ತುಂಬಿಸಿ ಹೇಳತೊಡಗಿದ. " ಅದೆಂತ ಕೇಂತೆ ಮಾರಾಯ ನಾ ಬದುಕಿದ್ದೇ ಹೆಚ್. ಗೊತ್ತೀತಾ ನಿಂಗೆ?! ಎಲ್ಲಾ ಚೌಡಮ್ಮನ ದಯ. ಹರ್ಕಿ ಮಾಡ್ಕಂಡೆ ಉಳ್ದದ್ ನಾನ್. ಇಲ್ದೇ ಇದ್ದೀರೆ ಇವತ್ ಶುಕ್ರ ಅಲ್ಲ ಅವನ ಹೆಣ ಆಯ್ತಿತ್. ಹರ್ಕಿ ಮಾಡ್ಕಂಡದ್ದೇ ನಾ ಉಳ್ದೆ ಕಾಣ್!" ಎಂದ.

            ಕೆಲವರಿಗೆ ಮಾತನ್ನು ಉದ್ದವಾಗಿಸಲು ಕೆದಕುವ ಚಟವಾದರೆ ಇನ್ನು ಕೆಲವರಿಗೆ ತಾವು ಮಾತಾಡುವುದಕ್ಕೆ ಕೆದಕಲು ಆಸ್ಪದ ನೀಡುವ ಅಭ್ಯಾಸ. ಗೋಪಾಲ ಶುಕ್ರರಿಬ್ಬರೂ ಇಂಥವರೇ ಆಗಿದ್ದರು.

ಗೋಪಾಲ ಶುರು ಮಾಡಿದ. "ಅಲ್ಲ ಶುಕ್ರಣ್ಣ ನಾವೆಲ್ಲ ನೆರಿ ಹೊರಿ. ಒಬ್ರಿಗೊಬ್ರು ಆಯ್ಕ್!! ಕಷ್ಟ ಸುಕ ಅಂದ್ರೆ ಒಬ್ರಿಗೊಬ್ರು ಆಯ್ಕ್!! ನಮ್ಮೊಳಗೆ ಒಗ್ಗಟ್ಟಿರ್ಕ್!! ಇಬ್ರೂ ಒಂದೇ ಊರರ್, ಒಟ್ಟಿಗೇ ಕೆಲಸ ಮಾಡೂದ್, ಅಂತದ್ರಾಗೆ ನಿಂಗೆ ಎಂತ ಆಯ್ತ್ ಅಂದೇಳಿ ನಂಗೆ ಹೇಳ್ಳೆ ಇಲ್ಲೆ ಮಾರಾಯ. ಇಕಾ ದೇವ್ರ ಮುಂದೆ ನಿಂತೀತ್. ನೀ ಈಗ್ಲಾರೂ ಸತ್ಯ ಹೇಳ್ಕ್. ನಿಂಗೆ ಎಂತ ಆಯೀತ್ ಅಂದೇಳಿ ನಂಗೆ ಹೇಳ್ಳೇ ಬೇಕ್. ನೀ ಯಾವತ್ತೂ ಕೆಲ್ಸಕ್ಕೆ ರಜಾ ಮಾಡೂದಾ ಅಥವಾ ಕೆಲಸ ಕಳ್ಳ ಬೀಳೂದಾ ಮಾಡ್ದವಲ್ಲ. ಎಂತ ಆಯ್ತ್ ಹೇಳ್."

            ಶುಕ್ರ ಶುರು ಮಾಡಿದ. "ಅದ್ರ ಕತೆ ಎಂತ ಕೇಂತ್ಯ ಗಡ. ನಿನ್ನೆ ಬೈಗಿನ ಹೊತ್ತಂಗೆ ಗಡಂಗಂಗೆ ಎಲ್ಲ ಕುಡ್ದ್ ವಾಲಿ ಆಡೀತಲೆ ನೆನಪಿತ್ತಲ್ದಾ?! ವಾಲಿ ಕಳೂಕೆ. ನಾ ದುಡ್ ಪೂರ್ತಿ ಕಳ್ಕಂಡೆ ಕಾಣ್!! ಮಂಡಿ ಬಿಸೀ ಆಯ್ ಮತ್ತೆಲ್ಡ್ ಏರಸ್ಕಂಡ್, ಸಾಲ ಮಾಡಿ ಎಂತ್ ಆರೂ ಸಯ್ಯೆ ಇವತ್ತು ಗೆಲ್ದೆ ಹ್ವಾಪ್ಕಾಗ ಅಂದೇಳಿ ಮಂಜನ ಕಯ್ಯಂಗೆ ನೂರ್ ರೂಪಾಯ್ ಸಾಲ ಮಾಡಿ ಆಡೂಕೆ ಕೂತೆ ಕಾಣ್. ಹ್ವಾದ್ದ್, ಸಾಲ ಮಾಡದ್ದ್ ಅಲ್ದೆ ಲಾಭ ಬಂತ್ ಕಾಣ್...." ಇಷ್ಟರಲ್ಲಿ ಗೋಪಾಲ ಬಾಯಿ ಹಾಕಿದ.

            "... ಈಗ್ ಗೊತ್ತಾಯ್ತ್ ಕಾಣ್ ನಂಗೆ. ವಾಲಿ ಕಳೂಕೆ!! ಜೂಜಂಗೆ ದುಡ್ ಬತ್ತ್ ಹ್ವಾತ್ತ್!! ಅದಕ್ಕೆಲ್ಲಾ ತಲೆಬಿಸಿ ಮಾಡ್ಕಂಡ್ ಉಳ್ದದ್ದೆ ಕಷ್ಟ ಅಂತ್ಯೆಲ ಶುಕ್ರಣ್ಣ ಇದ್ ಸರಿಯಾ!! ದೇವ್ರ್ ಮೆಚ್ಚುಕಿತ್ತಾ!! ಹಿಂಗೆಲ್ಲ ಮಾಡ್ಕಾಗ ಕಾಣ್!! ನಾ ಹೇಳ್ತೆ ಕೇಣ್....."

            ಕ್ರುದ್ಧನಾದ ಶುಕ್ರ ಸಿಡುಕಿದ. "ಗಡ!! ಮಾತಾಡೂದ್ ಪೂರ್ತಿ ಕೇಣ್ಕ ಮಾತಾಡ್ಕ್!! ಬಜ್ಜಕೆ ಮಧ್ಯ ಮಾತಾಡೂದ್ ಎಂತ ನೀ...ಸುಮ್ನಿರೂಕ್ ಆಯ್ದಿದ್ರೆ ಬಾಯಂಗೆ ಎಂತಾರು ಬೆಚ್ಕ. ಲಾಭ ಆದ್ ಕುಸೀಯಲ್ ನಾ ಮತ್ತೆಲ್ಡ್ ಏರಸ್ಕಂಡೆ ಕಾಣ್, ಕುಸಿ ಜತಿಗೆ ಧರ್ಯು ಬಂತ್. ಮತ್ತಂಗೆ ಬೆಟ್ರಿ ಇಲ್ದೆ ಹ್ವಾತೆ ಅಂದೇಳಿ ನಡೂಕೆ ಹಿಡ್ದೆ. ನನ್ನ್ ಗ್ರಾಚಾರಕೆ, ಎಸ್ಟ್ ಕುಡದ್ರೂ ದಾರಿ ತಪ್ದಿದ್ದವ ನಿನ್ನೆ ದಾರಿ ತಪ್ಪೂದಾ?! ಎಣ್ಣಿ ಒಳಗಿಂದ ಒದೋಕ್ ಹಿಡ್ದಿತ್. ಯಾವ್ದೋ ಮನಿ ಕಂಡಂಗಾಯಿ ಅಲ್ ಮನ್ಕಂಡೆ. ಎಸ್ಟೊತ್ತಾಯೀತೋ ಏನೋ ಗೊತ್ತಿಲ್ಲ. ಎಣ್ಣಿ ಹೊಡ್ತ. ನಾ ಹಂಗೆ ಎಸ್ಟ್ ಚಾರ್ಜ್ ಆರೂ ತಡ್ಕಂತೆ. ಆದ್ರ್ ನಿನ್ನೆ ಹೆಚ್ ಕಮ್ಮಿ ಆಯಿಬಿಡ್ತ್. ಹಂಗೇ ಮನೀಕಂಡೀದೆ. ಅಷ್ಟೊತ್ತಿಗೆ ಗಮ್ಮತ್ತಾಯ್ತ್ ಕಾಣ್. ಮುಳ್ಳೆಲ್ಲ ತಾಂಗಿ ಉರೀ ಅಂದ್ರೆ!! ಅಯ್ಯಪ್ಪ!! ಬೆಳ್ಗೆ ಕೊಬ್ರಿ ಎಣ್ಣಿ ಹಚ್ಚೀದೆ. ಎಣ್ಣಿ ಸ್ವಲ್ಪ ಇಳೂಕೆ ಹಿಡ್ದಿತ್. ಅಷ್ಟ್ರಂಗೆ ಯಾರೋ ನಡ್ಕ ಬಪ್ಪ ಶಬ್ದ. ನಂಗಾಗ್ ಗೊತ್ತಾಯ್ತ್. ಇವತ್ ಅಮಾಸಿ. ಇದ್ಯಾದೋ ಭೂತೇ ಸೈ ಅಂತ. ಆರ್ ಎಣ್ಣಿ ಬಿಡ್ಕಲ. ಧೈರ್ಯು. ಹಂಗೇ ಎದ್ ಕಂಡೆ. ಭೂತು ಎದ್ರಿಗೇ ನಿತ್ತೀತ್! ಎಶ್ಟ್ ಬೆಳ್ಕ್ ಬಿಡ್ತಿತ್ ಗೊತ್ತೀತಾ ಅದ್ರ ದೀಪದಂಗೆ? ಹೊರಗ್ ಬಪ್ಪ ಅಂತ ಕಂಡ್ರೆ ಮಟ್ಟಿ ಒಳಗೆ ಮನೀಕಂಡೀದೆ. ಎಣ್ಣೆ ಹೊಡ್ತ. ಹೊರಗ್ಬರೂಕೆ ಆತ್ಲ. ಆಗ ಚೌಡಿಗೆ ಎಲ್ಡ್ ಕಾಯ್ ಒಡಸ್ತೆ ಹಬ್ಬಕೆ ಅಂದೇಳಿ ಹರ್ಕಿ ಮಾಡ್ದೆ. ಅಷ್ಟೆ, ಭೂತು ಓಡಿ ಹ್ವಾಯ್ತ್!! ಅದು ಹ್ವಾಪೂ ಹೊತ್ತಿಗೆ ಎಂತ ಗುಡು ಗುಡು ಅಂತ್ ಶಬ್ದ ಮಾಡ್ತ್. ಹಿಂದಿಂದ ಹೊಗಿ ಬತ್ತೀತ್ ಗೊತ್ತೀತಾ?!!"

            ಈಗ ಗೋಪಾಲ " ಹೌದ್ ಶುಕ್ರಣ್ಣ, ನೀ ಬಿದ್ಕಂಡ್ದ್ ಯಲ್ಲ್?" ಎಂದ

            "ಬಿಸಿಲ್ ಬಸವನ್ ಏರಂಗೆ ಮಾರಾಯ" ಎಂದ ಶುಕ್ರ.

            ಇದೇ ನೋಡಿ ವಿಪರ್ಯಾಸ, ಅಮಾವಾಸ್ಯೆ ಮಹಾತ್ಮೆ-ಘೋರ ಶೂರ್ಪನಖಿಯರ ಗುಂಗು ನನಗೆ ಶುಕ್ರನನ್ನು ಭೂತವಾಗಿ ತೋರಿಸಿದ್ದರೆ, ನನ್ನನ್ನು ಶುಕ್ರನಿಗೆ ಭೂತವನ್ನಾಗಿಸಿತ್ತು. ನಾನು ಉಚ್ಚೆ ಮಾಡುವಾಗ ತರಗೆಲೆ ಮಾಡಿದ ಶಬ್ದವೇ ಆತನ ಕಿವಿಗೆ ಭೂತದ ಹೆಜ್ಜೆ ಸಪ್ಪಳವಾಗಿ ಕೇಳಿತ್ತು. ಬೈಕಿನ ಲೈಟ್ ಆತನಿಗೆ ಭೂತದ ದೀಪವಾಗಿ ಕಂಡಿತ್ತು. ಬೈಕ್ ಶಬ್ದವೇ ಭೂತ ಮಾಡಿದಾಗಿನ ಶಬ್ದವಾಗಿತ್ತು. ಶುಕ್ರ, ಭೂತ ಹೌದೋ ಅಲ್ಲವೋ ಎಂದು ಪರೀಕ್ಷಿಸಲು ತಲೆ ಹೊರಗೆ ಹಾಕಿದ್ದ ಪೊದೆಯಿಂದ. ಬೆದರಿ ಮತ್ತೆ ಒಳಸರಿದಿದ್ದ. ಇದೆಲ್ಲವೂ ಖಂಡಿತ ರಾಮನಾಮದ ಮಹಿಮೆಯೇ ಸರಿ. ಇಲ್ಲವಾದರೆ ಎಣ್ಣೆ ಏಟಿನಲ್ಲಿ ಮದಮಸ್ತನಾಗಿದ್ದ ಶುಕ್ರ, ನನಗೆ ಭಯ ತೀವ್ರವಾದ ಸಮಯದಲ್ಲೇ ತಲೆ ಏಕೆ ಹೊರಹಾಕುತ್ತಿದ್ದ?

            ಆದರೆ ಶುಕ್ರನಿಗೆ ನಾನು ಭೂತವಾಗಿ ಕಂಡುಬಿಟ್ಟೆ. ವಿನೋದಮಯ ಬೇಸರ ಬಲು ಮಜವೂ ಆಗಿತ್ತು, ಆದರೆ ಇದನ್ನು ಯಾರಲ್ಲಿಯೂ ಹೇಳುವಂತಿರಲಿಲ್ಲ. ನಾನೇ ನಗೆಪಾಟಲಾಗುತ್ತಿದ್ದೆ. ಆದರೆ ಶುಕ್ರ ರಂಗೀನ್ ಜನ, ರಾಮ ನಾಯ್ಕ ಮತ್ತು ಹಾಲ ನಾಯ್ಕರಂತೆ. ಒಂದಂತೆ ಇವನ ಕತೆ ಹೇಳುತ್ತೇನೆ. ಹಿಂದಿನ ಭಾಗದ ಕೊಂಡಿ ಇಲ್ಲಿದೆ.


https://tenkodu.blogspot.in/2018/01/blog-post.html

4 comments: