Thursday, March 1, 2018

ಅಧರ್ಮ ಸಂಸಾರ

ಎಲ್ಲಾ ಕ್ರಿಯೆಗಳಿಗೂ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಎನ್ನುವುದು ಇರುತ್ತದಂತೆ, ಭೌತ ಶಾಸ್ತ್ರಜ್ಞ ನ್ಯೂಟನ್ ಪ್ರಕಾರ. ವಾಸ್ತವ ಎಂದರೆ, ಇದು ಕ್ರಿಯೆಯೊಂದಕ್ಕೇ ಅಲ್ಲ, ಎಲ್ಲ ಸಂಗತಿಗಳಿಗೂ ಅನ್ವಯಿಸುತ್ತದೆ. ಆದರೆ, ಯಾವುದು ಕ್ರಿಯೆ ಯಾವುದು ಪ್ರತಿಕ್ರಿಯೆ ಎನ್ನುವುದು ಯಾವುದು ಸರಿ ಯಾವುದು ತಪ್ಪು ಯಾವುದು ಅಪೇಕ್ಷಣೀಯ ಯಾವುದು ಅನಪೇಕ್ಷಣೀಯ, ಯಾವುದು ಸ್ವೀಕಾರಾರ್ಹ ಯಾವುದು ತಿರಸ್ಕಾರಕ್ಕೆ ಯೋಗ್ಯ ಎನ್ನುವುದನ್ನು ಗ್ರಹಿಸುವುದು ನಮ್ಮ ವಿವೇಕಕ್ಕೆ ಬಿಟ್ಟ ಸಂಗತಿ ವಿಚಾರವಾಗುತ್ತದೆ. ಇಂಥಾ ವಿವೇಕವನ್ನು ಸಂಪಾದಿಸಲು ಇರುವ ಒಂದು ದಾರಿ ಅಧ್ಯಯನ, ಅದೂ ನಾವು ಬೆಳೆದ ಮತ್ತು ಮುಂದೆ ಬದುಕಬೇಕಾದ ಪರಿಸರದ ಆಧಾರದಂತಿದ್ದರೆ ಚನ್ನ. ನಮ್ಮ ಪುರಾಣಗಳು ನಮ್ಮ ವಿವೇಕವನ್ನು ಖಂಡಿತ ಉನ್ನತೀಕರಣಗೊಳಿಸುತ್ತವೆ.

ವಿಷ್ಣುಪುರಾಣ, ನಾನು ಮೊದಲೇ ಹೇಳಿದಂತೆ ಅನೇಕ ವಿಚಾರ ವಿಷಯಗಳ ಆಗರ-ಸಾಗರ. ಇದರಲ್ಲಿ ಬರುವ ಎಲ್ಲಾ ವಿಚಾರಗಳೂ ಚಂದ ಮತ್ತು ಸದಾಕಾಲಕ್ಕೂ ಪ್ರಸ್ತುತ ಎನ್ನಿಸುತ್ತದೆ. ಹಿಂದಿನ ಲೇಖನದಲ್ಲಿ ಧರ್ಮಪುರುಷ ಆತನ ಹದಿಮೂರು ಪತ್ನಿಯರು ಮತ್ತು ಸಂತಾನದ ಬಗ್ಗೆ ಓದಿದ್ದನ್ನು ಹಂಚಿಕೊಂಡೆ. ಈಗ ಧರ್ಮಕ್ಕೆ ವಿರೋಧದಂತಿರುವ ಅಧರ್ಮದ ಬಗೆಗೆ ಓದಿದ್ದನ್ನು ಹಂಚಿಕೊಳ್ಳುತ್ತೇನೆ.

ಹಿಂಸಾ ಭಾರ್ಯಾ ತ್ವಧರ್ಮಸ್ಯ ತತೋ ಜಜ್ಞೇ ತಥಾನೃತಂ|
ಕನ್ಯಾ ನಿಕೃತ್ತಿಸ್ತಾಭ್ಯಾಂ ಭಯಂ ನರಕಮೇವ ||

ಮಾಯಾ ವೇದನಾ ಚೈವ ಮಿಥುನಂ ತ್ವಿದಮೆತಯೋಃ|
ತಯೋರ್ಜಜ್ಞೇಽಥ ವೈ ಮಾಯಾ ಮೃತ್ಯುಂ ಭೂತಾಪಹಾರಿಣಮ್||

ವೇದನಾ ಸ್ವಸುತಂ ಚಾಪಿ ದುಃಖಂ ಜಜ್ಞೇಽಥ ರೌರವಾತ್|
ಮೃತ್ಯೋರ್ವ್ಯಾಧಿಜರಾಶೋಕತೃಷ್ಣಾಕ್ರೋಧಾಶ್ಚ ಜಜ್ಞಿರೇ||

ಅಧರ್ಮನ ಹೆಂಡತಿಯು ಹಿಂಸೆ. ಆತನಿಂದ ಅನೃತ ಎನ್ನುವ ಮಗನು ಜನಿಸಿದನು. ಇವರ ಮಗಳು ನಿಕೃತಿ. ಅನೃತ ಮತ್ತು ನಿಕೃತಿಯರು ಮದುವೆಯಾಗಿ ಭಯ ಮತ್ತು ನರಕ ಎನ್ನುವ ಮಗನನ್ನೂ, ಮಾಯಾ ಮತ್ತು ವೇದನಾ ಎನ್ನುವ ಹೆಣ್ಣುಮಕ್ಕಳನ್ನೂ ಪಡೆದರು. ಭಯ ಮತ್ತು ನರಕರು ತಮ್ಮ ಸಹೋದರಿಯರಾದ ಮಾಯಾ ಮತ್ತು ವೇದನಾರನ್ನೇ ಕ್ರಮವಾಗಿ ಮದುವೆಯಾದರು.ಮಾಯೆಯ ಮಗ ಮೃತ್ಯುವಾದರೆ ವೇದನೆಯು ನರಕನಿಂದ ದುಃಖ ಎನ್ನುವ ಮಗನನ್ನು ಪಡೆದಳು. ರೋಗ, ಮುಪ್ಪು, ಶೋಕ, ತೃಷ್ಣೆ, ಕ್ರೋಧ ಇವರು ಮೃತ್ಯುವಿನ ಮಕ್ಕಳು.

ಈಗ ಇಲ್ಲಿನ ಸ್ವಾರಸ್ಯ ನೋಡಿ- ಅಧರ್ಮ ಮತ್ತು ಹಿಂಸೆ ಸಂಗಾತಿಗಳು. ಇವೆರಡೂ ಒಟ್ಟಾದಾಗ ಜನಿಸುವುದೇ ಅನೃತ ಅಂದರೆ ಸುಳ್ಳು-ವಂಚನೆ-ಮೋಸ. ಇದರ ಬೆನ್ನಿಗೆ ಬರುವುದು ನಿಕೃತಿ-ಮಾಡಬಾರದ ಕಾರ್ಯಗಳು. ಮಾಡಬಾರದ್ದು ಮಾಡಿದಾಗ ಅದನ್ನು ಮುಚ್ಚಿಹಾಕಲು ಅಥವಾ ಅದರಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುವುದು ಸಹಜವಲ್ಲವೇ? ಆಗ ಜನಿಸುವುದೇ ಭಯ. ಭಯದ ಬೆನ್ನಿಗೇ ನರಕ ಅಂದರೆ ಯಾತನಾಮಯ ಪರಿಸ್ಥಿತಿ ಬರುತ್ತದೆ. ನೀವು ಭಯಪಟ್ಟಾಗ ಉಂಟಾದ ಪರಿಸ್ಥಿತಿ ನೆನಪಿಸಿಕೊಳ್ಳಿ. ಭಯದಿಂದ ಹೊರಬರಲು ಅದೆಷ್ಟು ಕಷ್ಟ ಪದಬೇಕಾಯಿತು ಅಲ್ಲವೇ? ಭಯ ಮಾಯೆಯನ್ನು ಮದುವೆಯಾದ. ಅಂದರೆ ಭಯ ಭ್ರಮೆ-ವಿಭ್ರಮೆ-ವಿಚಿತ್ರ ಆಲೋಚನೆಗಳ ಸಂಗಮವಾದ ಮಾಯೆಯನ್ನು ಸೇರುತ್ತದೆ. ಪರಿಣಾಮ ಲೌಕಿಕ ಜೀವನ ಎನ್ನುವ ಬದುಕು. ಅರ್ಥಾತ್- ಸತ್ಯ-ಧರ್ಮಗಳಿಂದ ದೂರವಾದ ಮೃತ್ಯು. ಅದಕ್ಕೇ ಭಯ ಮತ್ತು ಮಾಯೆಯರ ಸಂತಾನ ಮೃತ್ಯು ಎಂದಿದ್ದು. ಮೃತ್ಯುವಿನ ಮಕ್ಕಳ ಬಗೆಗೆ ಹೆಚ್ಚಿನ ವಿವರಣೆ ಬೇಕಿಲ್ಲ. ಇವೆಲ್ಲವೂ ಇರುವುದು ಲೋಕದ ಸಂಬಂಧದಿಂದ. ಅದಕ್ಕೇ ಭೂ ಲೋಕವನ್ನು ಮರ್ತ್ಯಲೋಕ ಎಂದರು. ಇಲ್ಲಿನ ಜೀವಿಗಳನ್ನು ಮರ್ತ್ಯರು ಎಂದರು. ಇನ್ನು ನರಕದೊಂದಿಗೆ ವೇದನೆ ಸೇರಿ ದುಃಖ ಉಂಟಾಗುತ್ತದೆ. ಹೀಗಿದೆ ಅಧರ್ಮರಾಯರ ಸಂಸಾರ.


ಇದನ್ನೇ ಸ್ವ ಸಹಾಯ ಪುಸ್ತಕಗಳ ಅಥವಾ ವ್ಯಕ್ತಿತ್ವ ಬೆಳವಣಿಗೆಯ ಪುಸ್ತಕಗಳು ನೆಗೆಟಿವ್ ಥಿಂಕಿಂಗ್ ಎನ್ನುವುದು.

No comments:

Post a Comment