Thursday, March 29, 2018

ಪೃಥು


ನಮಗೆ ಎಷ್ಟೋ ಸಲ ಏನೋ ಒಂದು ವಸ್ತುವೋ ಅಥವಾ ಬದಲಾವಣೆಯೋ ಬೇಕಾಗುತ್ತದೆ. ಆದರೆ ವಾಸ್ತವದಲ್ಲಿ ಅದು ನಮಗೆ ಸಿಗುವುದಿಲ್ಲ. ಮರೀಚಿಕೆಯಾಗಿಬಿಡುತ್ತದೆ. ನಾವು ಅದನ್ನು ಪಡೆಯದೇ ಸೋತು ಖಿನ್ನರಾಗಿ ಕುಬ್ಜರಾಗಿ ವಿಹ್ವಲರಾಗಿಬಿಡುತ್ತೇವೆ. ವಾಸ್ತವದಲ್ಲಿ, ನಾವು ಬದಲಾವಣೆಗೆ ಅಥವಾ ಬೇಕಾದ ವಸ್ತುವಿಗೆ ತಕ್ಕ ಅರ್ಹತೆ ಪಡೆದಿರುವುದೇ ಇಲ್ಲ. ಹಾಗೆ ನಮ್ಮಲ್ಲಿ ಆಗಬೇಕಾದ ಮುಖ್ಯವಾದ ಬದಲಾವಣೆ ನಮ್ಮ ಮನಸ್ಸಿನದ್ದು, ನಮ್ಮ ಮನೋಶಕ್ತಿ ಇಂದ್ರಿಯಗಳ ಮೂಲಕ ಹರಿಯುವ ಬಗೆ. ಇದಕ್ಕೆ ನಾವು ನಮ್ಮ ಮನಸ್ಸಿನೊಂದಿಗೆ ಮಾತಾಡಬೇಕು. ಇದನ್ನು 'Telepsychics' ಎನ್ನುವ ಪುಸ್ತಕದಲ್ಲಿ ಚೆನ್ನಾಗಿ ಬರೆದಿದ್ದಾನೆ ಡಾ|| ಜೋಸೆಫ್ ಮರ್ಫಿ. ಆಶ್ಚರ್ಯವೆಂದರೆ, ಆಧುನಿಕತೆ ದೇವರನ್ನು-ಧರ್ಮವನ್ನು ಒಪ್ಪುವುದಿಲ್ಲ. ಆದರೆ ಜೋಸೆಫ್ ಮರ್ಫಿ, ಬೈಬಲ್ಲಿನ ಆಧಾರದಲ್ಲೇ ಇದನ್ನು ಹೇಳುತ್ತಾ ಹೋಗುತ್ತಾನೆ.

ನಮಗೇ ನಾವು ಮಾತಾಡಿಕೊಳ್ಳುವುದು ಕೆಲವು ಸಲ ಸರಿಯಾಗುವುದಿಲ್ಲ. ನಮ್ಮ ಅಹಂಕಾರವೋ ಅಥವಾ ಮತ್ಯಾವುದೋ ಚಿಂತನೆ-ಯೋಚನೆ ಅಡ್ಡವಾಗುತ್ತದೆ ಇಲ್ಲಿ. ಇದನ್ನೇ ಮೆಂಟಲ್ ಬ್ಲಾಕ್ ಎಂದು ಕರೆಯುವುದು. ಮೆಂಟಲ್ ಬ್ಲಾಕ್ ಅನ್ನು ನಾವೇ ತೆಗೆಯುವುದು ಕಷ್ಟ. ಹೇಗೆ ನಮ್ಮ ದೇಹ ಕೆಲವು ಸಲ ರೋಗ ನಿರೋಧಕ ಶಕ್ತಿ ಬಿಡುಗಡೆ ಮಾಡುವುದನ್ನು ನಿಲ್ಲಿಸುತ್ತದೋ ಅಥವಾ ಸಾಕಷ್ಟು ಬಿಡುಗಡೆ ಮಾಡುವುದಿಲ್ಲವೋ, ಇದೂ ಹಾಗೆಯೆ. ಆಗ ನಾವು ಬೇರೊಬ್ಬರ ಸಹಾಯ ಪಡೆಯುತ್ತೇವೆ. ಹಾಗೆ ಬೇರೆಯವರು ನಮ್ಮ ಮನಸ್ಸಿನೊಡನೆ ಮಾಡುವ ಸಂವಹನಕ್ಕೆ ಅನೇಕ ವಿಧಾನಗಳಿವೆ. ಅದರಲ್ಲಿ ಒಂದು 'ನ್ಯೂರೊ ಲಿಂಗ್ವಿಸ್ಟಿಕ್ ಪ್ರೋಗ್ರಾಮ್'.

ಎಷ್ಟೋ ಕೊಳಕು ಕೊಳಚೆ ಹಾಳು ಮೂಳು ತುಂಬಿದ ನಮ್ಮಗಳಿಗೇ 'ನ್ಯೂರೊ ಲಿಂಗ್ವಿಸ್ಟಿಕ್ ಪ್ರೋಗ್ರಾಮ್' ಕೆಲಸ ಮಾಡಬೇಕಾದರೆ, ಯಾವುದೇ ರೀತಿಯ ಭಾವನೆ ಹುಟ್ಟಿಲ್ಲದ ಬಿಳಿಯ ಹಾಳೆಯಂಥಾ ಮಗುವಿನ ಮನಸ್ಸಿನಲ್ಲಿ ಇದು ಹೇಗೆ ಕೆಲಸ ಮಾಡೀತು ಒಮ್ಮೆ ಯೋಚಿಸಿ. ಇಂಥದ್ದೊಂದು ದೃಷ್ಟಾಂತ ಇದೆ ನಮ್ಮ ಪುರಾಣಗಳಲ್ಲಿ. ಪೃಥುವಿನ ಕಥೆಯಲ್ಲಿ. ಪ್ರಕರಣದ ಹಿಂದಿನ ಭಾಗ ಈಗಾಗಲೇ ಹಂಚಿಕೊಂಡಾಗಿದೆ.

ವೇನನ ಬಲಗೈ ಮಂಥನದಿಂದ ಪೃಥು ಜನಿಸಿದ. ಆಗ ಎಲ್ಲೆಲ್ಲೂ ಶುಭಶಕುನಗಳೇ ಘಟಿಸಿದವು. ಪೃಥು ಹುಟ್ಟಿದೊಡನೆ ಬೆಳೆದ. ಜೀನ್ ಮಾಡಿಫ಼ಿಕೇಷನ್ ಚೆನ್ನಾಗಿ ತಿಳಿದಿದ್ದ ನಮ್ಮ ಋಷಿ ಮುನಿಗಳು ಇದನ್ನು ಮಾಡಿದ್ದು ಹೆಚ್ಚಲ್ಲ ಬಿಡಿ.ಅರಾಜಕತೆಗೆ ಪರಿಹಾರವಾಗಿ ಕಂಡ ಪೃಥು. ಅವನಿಗೆ ಪಟ್ಟಾಭಿಷೇಕ ಮಾಡುವಾಗ, ಬ್ರಹ್ಮನು ಸೂತ ಮಾಗಧರನ್ನು ಕಳಿಸಿದ, ಪೃಥುವನ್ನು ಹೊಗಳಲು. ಸೂತ ಮಾಗಧರು ಹೇಳಿದರು"ಏನೂ ಕಾರ್ಯವನ್ನು ಮಾಡದ ಪೃಥುವನ್ನು ನಾವು ಹೊಗಳುವುದು ಹೇಗೆ?" ಆಗ ಋಷಿಗಳು ಹೇಳಿದರು "ಪೃಥುವಿನಿಂದ ಯಾವ ಯಾವ ಮಹತ್ಕಾರ್ಯಗಳನ್ನು ಮಾಡಬೇಕೋ, ಯಾವ ಯಾವ ಸದ್ಗುಣಗಳು ಈತನಲ್ಲಿ ನೆಲೆಸಬೇಕೋ ಅದನ್ನೇ ಊಹಿಸಿಕೊಂಡು ಹೇಳಿರಿ." ಆಗ, ಪೃಥು ಕೂಡಾ ಹೇಳುತ್ತಾನೆ.

ತತಃ ನೃಪತಿಸ್ತೋಷಂ ತಚ್ಛು ತ್ವಾ ಪರಂ ಯಯೌ|
ಸದ್ಗುಣೈಃ ಶಾಘ್ಯತಾಮೇತಿ ತಸ್ಮಾಲ್ಲಭ್ಯಾ ಗುಣಾ ಮಮ||

ತಸ್ಮಾದದ್ಯ ಸ್ತೋತ್ರೇಣ ಗುಣನಿರ್ವರ್ಣನಂ ತ್ವಿಮೌ|
ಕರಿಷ್ಯೇತೇ ಕರಿಷ್ಯಾಮಿ ತದೇವಾಹಂ ಸಮಾಹಿತಃ||

ಯದಿಮೌ ವರ್ಜನೀಯಂ ಕಿಞ್ಚಿದತ್ರ ವದಿಷ್ಮತಃ|
ತದಹಂ ವರ್ಜಯಿಷ್ಯಾಮೀತ್ಯೇವಂ ಚಕ್ರೇ ಮತಿಂ ನೃಪಃ||

"ನಿಜ. ಮನುಷ್ಯನು ಸದ್ಗುಣಗಳಿಂದಲೇ ಪ್ರಶಂಸೆಗೆ ಪಾತ್ರನಾಗುತ್ತಾನೆ. ಆದ್ದರಿಂದ, ನಾನೂ ಸದ್ಗುಣಗಳನ್ನು ಪಡೆಯುತ್ತೇನೆ. ಸ್ತೋತ್ರದ ಮೂಲಕ ಯಾವ ಸದ್ಗುಣಗಳನ್ನು ಇದೆ ಎನ್ನುತ್ತೀರೋ ಅದನ್ನು ಪಡೆಯುತ್ತೇನೆ. ಯಾವ ಗುಣಗಳನ್ನು ಬಿಡಲು ಹೇಳುತ್ತೀರೋ ಅದನ್ನು ವರ್ಜಿಸುತ್ತೇನೆ."

ಆಗ ಸೂತ-ಮಾಗಧರು ಪೃಥುವನ್ನು ರೀತಿಯಾಗಿ ಹೊಗಳಿದರು.

ಸತ್ಯವಾಗ್ದಾನ ಶೀಲೋಽಯಂ ಸತ್ಯಸನ್ಧೋ ನರೇಶ್ವರಃ|
ಹ್ರೀಮಾನ್ಮೈತ್ರಃ ಕ್ಷಮಾಶೀಲೋ ವಿಕ್ರಾನ್ತೋ ದುಷ್ಟಶಾಸನಃ||

ಧರ್ಮಜ್ಞಶ್ಚ ಕ್ರುತಜ್ಞಶ್ಚ ದಯಾವಾನ್ ಪ್ರಿಯಭಾಷಕಃ|
ಮಾನ್ಯನ್ಮಾನಯಿತಾ ಯಜ್ವಾ ಬ್ರಹ್ಮಣ್ಯಃ ಸಾಧುಸಮ್ಮತಃ||

" ರಾಜನು ಸತ್ಯಭಾಷಿ, ದಾನಶೀಲ.ಮರ್ಯಾದೆಗಂಜುವವ, ಸ್ನೇಹಜೀವಿ, ಹಾಗೂ ತಾಳ್ಮೆಯನ್ನು  ಹೊಂದಿದವನು. ವೀರನೂ ದುಷ್ಟನಿಗ್ರಹಿಯೂ ಆದ ಈತ ಧರ್ಮಜ್ಞ, ಕ್ರುತಜ್ಞ, ದಯಾಶೀಲ, ಪ್ರಿಯಭಾಷಿ. ಪೂಜ್ಯರನ್ನು ಪೂಜಿಸುತ್ತಾನೆ. ಯಜ್ಞ ಯಾಗಗಳನ್ನು ಮಾಡುತ್ತಾನೆ. ಸಜ್ಜನರನ್ನು ಆದರಿಸುತ್ತಾನೆ. ಜ್ಞಾನಿಗಳನ್ನು ಗೌರವದಿಂದ ಕಾಣುತ್ತಾನೆ. ಶತ್ರು-ಮಿತ್ರ ಎನ್ನುವ ಭಾವಗಳಿಲ್ಲದೆಯೇ ರಾಜ್ಯವಾಳುತ್ತಾನೆ"

ನ್ಯೋರೋ ಲಿಂಗ್ವಿಸ್ಟಿಕ್ ಪ್ರೊಗ್ರಾಮಿನಲ್ಲಿ ಕೂಡಾ ಹೀಗೆಯೇ ಆಗುತ್ತದೆ. ನಮ್ಮನ್ನು ಕಾಡುವ ಅಡೆತಡೆಗಳು, ಹೊರಹೋಗಿ ಬೇಕಾದ ಸಾಮರ್ಥ್ಯಗಳು ಲಭ್ಯವಾಗುತ್ತವೆ. ಇಲ್ಲಿನ ಪ್ರಕ್ರಿಯೆಯಲ್ಲಿ, ಪ್ರೋಗ್ರಾಮರ್, ಒಂದು ಸನ್ನಿವೇಶವನ್ನು ನಾವು ಸ್ವೀಕರಿಸುವ, ಅದರ ಕುರಿತಾಗಿನ ನಮ್ಮ ಕ್ರಿಯೆ ಪ್ರತಿಕ್ರಿಯೆಯನ್ನು ಅಭ್ಯಸಿಸಿ, ನಮ್ಮನ್ನು ಕಲ್ಪನೆಗಳ ಮೂಲಕ ಅಂಥಾ ಒಂದು ಪರಿಸ್ಥಿತಿಗೆ ಕೊಂಡೊಯ್ದು ಅಂದರೆ ಯಾವ ಪರಿಸ್ಥಿತಿಯಲ್ಲಿ ನಮಗೆ ಸಾಮರ್ಥ್ಯ ಪ್ರವಹಿಸಬೇಕೋ ಅಂಥಾ ಪರಿಸ್ಥಿತಿಗೆ ಕೊಂಡೊಯ್ದು ನಮ್ಮ ಅಚೇತ ಮನಸ್ಸಿನ ಜೊತೆ ಸಂಭಾಷಿಸುತ್ತಾನೆ. ಹಾಗಾಗಿ ನಮಗೆ ಬದಲಾವಣೆಗಳು ಅರಿವಿಲ್ಲದಂತೆ ಆಗುತ್ತವೆ.

ಚಿತ್ತ ಮತ್ತು ಬುದ್ಧಿಯ ಶಕ್ತಿಗಳನ್ನು ಮತ್ತು ಆಜ್ಞೆಗಳನ್ನು ಮನಸ್ಸಿನ ಮೂಲಕ ಪ್ರವಹಿಸುವ ನ್ಯೂರಾನ್ ಗಳ ಪ್ರವಹಿಸುವಿಕೆಯೇ ಬದಲಾಗುತ್ತದೆ. ಪರಿಣಾಮ ಮನಸ್ಸಿನಲ್ಲಿ ಬದಲಾವಣೆ ಮತ್ತು ಸ್ಥಿತಿಯೊಂದರ ಗ್ರಹಣ, ಕ್ರಿಯೆ ಮತ್ತು ಪ್ರತಿಕ್ರಿಯೆಗಳಲ್ಲಿಯೂ ಬದಲಾವಣೆ. ಇದೆಲ್ಲ ಆಗುವುದು ಇಂದ್ರಿಯಗಳ ಮೂಲಕ. ಆದರೆ ಇದೆಲ್ಲಾ ಸಾಧ್ಯವಾಗುವುದು ಪ್ರೋಗ್ರಾಮರ್ ಹೇಳುವುದನ್ನು ನಮ್ಮ ಹೊರಮನಸ್ಸಿನಿಂದ ಒಪ್ಪಿದಾಗ ಮಾತ್ರ. ಇಲ್ಲವಾದರೆ ಅಚೇತ ಮನ ಮತ್ತು ಹೊರ ಮನಸ್ಸಿನ ನಡುವೆ ಘರ್ಷಣೆಯಾಗಿ ತೊಂದರೆಯಾಗುತ್ತದೆ.

ಪೃಥುವಿನ ವಿಚಾರದಲ್ಲಿ ಆಗಿದ್ದು ಕೂಡಾ ಇದೇ. ಸೂತ ಮಾಗಧರು ಆತನ ಕುರಿತು ಕಲ್ಪಿಸಿಕೊಂಡು ಹೇಳಿದ್ದಲ್ಲ. ಆತನಿಂದಾಗಬೇಕಾದ ಕೆಲಸವನ್ನು ತಿಳಿಸಿದ್ದು. ಪೃಥು ಕೂಡಾ ಅದನ್ನು ಸ್ವೀಕರಿಸಿದ್ದ. ಸ್ವೀಕರಿಸಲು ಸನ್ನದ್ಧವಾಗಿದ್ದೇನೆ ಎಂದಮೇಲೆಯೇ ಸೂತ ಮಾಗಧರು ಹೊಗಳಿದ್ದು.

ನಮ್ಮ ವೈದಿಕ ಮಂತ್ರಗಳಲ್ಲೂ ನ್ಯೂರೋ ಲಿಂಗ್ವಿಸ್ಟಿಕ್ ಪ್ರೋಗ್ರಾಮಿಂಗ್ ಮತ್ತು ಸೆಲ್ಫ್ ಅಫ಼ರ್ಮೇಷನ್ ಇವೆ, ಫಲಶೃತಿಯ ರೂಪದಲ್ಲಿ. ಮಂತ್ರಗಳು ಹೇಗೆ ಕೆಲಸಮಾಡುವ ಕ್ರಮ ಹೀಗೂ ಇರುತ್ತದೆ.

No comments:

Post a Comment