Tuesday, March 20, 2018

ಮಗ


ಆಗ ತಾನೇ ಜಗತ್ತಿಗೆ ಬಂದು ಕುಳಿತ ತನ್ನ ಮಗ ತೊಟ್ಟಿಲಿನಲ್ಲಿ ಆಟವಾಡುತ್ತಿದ್ದನ್ನು ನೋಡಿ ಮುಗಳ್ನಗುತ್ತಿದ್ದ ಮೃತ್ಯುಂಜಯ. ಮಗನ ಮುದ್ದು ಮುಖವನ್ನು ನೋಡಿ ಸಂತೋಷ ಪಡುತ್ತಿದ್ದ. ಮಗನ ಮೈ ಮುರಿಯುವಿಕೆ. ಅಲ್ಲಲ್ಲೇ ನಗುವುದು ಎಲ್ಲಾ ನೋಡಿ ಎಲ್ಲಾ ಅಪ್ಪಂದಿರಂತೆ ಸಂತಸ ಪಡುತ್ತಲೇ ಇದ್ದ. ಹೀಗೆ ಸಂತೋಷ ಪಡುತ್ತಿರಬೇಕಾದರೆ ಅವನಿಗನ್ನಿಸಿತು. ಸ್ವಲ್ಪ ಹೊತ್ತಿಗೆ ಮೊದಲು ಈತನದ್ದೇ ನಿರೀಕ್ಷೆಯಾಗಿತ್ತು. ಅಲ್ಲ ಈತನೋ ಈಕೆಯೋ ಎನ್ನುವುದೂ ಕೂಡಾ ತಿಳಿಯದ ಒಂದು ವಿಶಿಷ್ಟ ಕುತೂಹಲ ಅದಾಗಿತ್ತು. ತನ್ನಿಂದಲೇ ಮೈ ಪಡೆದ ತನ್ನ ಮಗ. ಜಗತ್ತನ್ನಿನ್ನೂ ನೋಡಬೇಕಾಗಿದೆ. ತೊಟ್ಟಿಲಿನಲ್ಲಿ ಮಲಿಗಿಸುವಾಗ ಮುತ್ತು ಅವರ್ಣನೀಯ ಆನಂದವನ್ನು ಸವಿದ. ಪಕ್ಕದಲ್ಲೇ ಮಲಗಿದ್ದ ತನ್ನ ಹೆಂದತಿಯಎಡೆ ಮೆಚ್ಚುಗೆ, ಧನ್ಯತಾಭಾವ, ಕರುಣೆ, ಪ್ರೀತಿ ಎಲ್ಲದರ ಅನುಭವವನ್ನು ಮತ್ತೊಮ್ಮೆ ಪಡೆದ. ಅವಳೊಡನೆ ಮಾತಾಡುವ ಮನಸ್ಸಾಯಿತು. ಆದರೆ ಮಾತಾಡಲಿಲ್ಲ. ಮಲಗಲಿ ಅವಳಿಗಿದು ಮರುಜನ್ಮದಂತಾಗಿದೆ. ತನ್ನ ಕನಸನ್ನು ಹೂಟ್ಟೆಯಲ್ಲಿಟ್ಟುಕೊಂಡಿದ್ದ ಅವಳು, ತನ್ನ ಪ್ರೀತಿಯನ್ನು ಭರಿಸಿದ್ದ ಅವಳು ಸ್ವಲ್ಪ ವಿಶ್ರಾಂತಿ ಪಡೆಯಲಿ ಎಂದುಕೊಂಡು ತೊಟ್ಟಿಲ ಪಕ್ಕದಲ್ಲಿ ಕುಳಿತ.

          ಮಲಗಿದ್ದ ಮಗನ್ನೊಮ್ಮೆ ನೋಡುತ್ತಿದ್ದಂತೆ ಇಂದಿಗೂ ಕೆಲವು ವರ್ಷಗಳ ಮೊದಲು ತಾನೂ ಮಗುವೇ ಆಗಿದ್ದೆ ಎನ್ನಿಸಿತು. ಅನಿಸಿಕೆಗೆ ಹಳೆಯ ನೆನಪುಗಳ ರೈಲು ಬೋಗಿಗಳು ಜೊತೆಯಾದವು. ಹಳೆಯ ನೆನಪುಗಳಿಗೆ ಇರುವ ಕಾಂತೀಯ ಶಕ್ತಿ ಜಗತ್ತಿನ ಯಾವ ಕೃಷ್ಣರಂಧ್ರಕ್ಕೂ ಇಲ್ಲ. ಅದರಲ್ಲೂ ಕೆಟ್ಟ ನೆನಪುಗಳಂತೂ ಕೇಳುವುದೇ ಬೇಡ. ಧೂಮಕೇತುವಿನಂತೆ ಆಗಾಗ ಅಪ್ಪಳಿಸಿ ವರ್ತಮಾನವನ್ನು ವಿನಾಶದತ್ತ ಕೊಂಡೊಯ್ಯುತ್ತಲೇ ಇರುತ್ತವೆ. ಎಲ್ಲರಿಗೂ ಇದು ತಿಳಿದ ವಿಚಾರವೇ. ಆದರೆ ಹಳೆಯ ನೆನಪುಗಳೂ ಬಲಶಾಲಿಯೇ. ಎಲ್ಲರಿಗೂ ಆದಂತೆ ಮುತ್ತು ಕೂಡಾ ಅದರಲ್ಲಿ ಕಳೆದುಹೋದ.

          ತಾನೊಂದು ಜೀವ ಎಂದು ಯಾವತ್ತೂ ತನ್ನಪ್ಪನಿಗೆ ಅನ್ನಿಸಲೇ ಇಲ್ಲ. ತನ್ನದ್ದೂ ಒಂದು ಬದುಕಿದೆ ಎಂದು ಅಪ್ಪ ಭಾವಿಸಲೇ ಇಲ್ಲ. ತನ್ನ ಅಮ್ಮನ ಬಗೆಗೂ ಆತನದ್ದು ಇದೇ ಭಾವನೆ. ತನ್ನಿಂದ ಜನ್ಮ ಪಡೆದ ತನ್ನ ಮಗ ಒಂದು ಜೀವ, ಅವನಿಗೂ ಒಂದು ಜೀವನವಿದೆ ಎಂದು ಯೋಚಿಸುವ ಬದಲು ಅಪ್ಪ ಯೋಚಿಸಿದ್ದೇ ಬೇರೆ. ತಾನು ಈ ಮಗನಿಗೆ ಜನ್ಮ ಕೊಟ್ಟವ, ನಾನಿಲ್ಲದೇ ಇವನಿಲ್ಲ. ನನ್ನಿಂದ ಹುಟ್ಟಿದ ಈ ತನ್ನ ಮಗ ತಾನು ಹೇಳಿದ್ದನ್ನು ಕೇಳಲೇ ಬೇಕು. ಈತ ತಾನು ಬಯಸಿದಂತೆ ಬದುಕಬೇಕು. ಈತ ಹುಟ್ಟಿದ್ದೇ ಅದಕ್ಕೆ ಎಂದೇ ಯೋಚಿಸಿದ್ದ ಆತ.ಮಗ ಬರೇ ದೇಹವಾಗಿ ಕಂಡುಬಿಟ್ಟ ಅಪ್ಪನಿಗೆ. ತನ್ನಿಂದ ಹುಟ್ಟಿದವ ತನ್ನ ಮಾತನ್ನಷ್ಟೇ ಕೇಳಬೇಕು. ಆತನ ಯೋಚನೆಗಳ ಮೇಲೂ ತನ್ನದೇ ಅಧಿಪತ್ಯ ಎಂದು ಭಾವಿಸಿದ್ದ ಆತ. ಇದು ಅಪ್ಪನ ಭಾವನೆಯಾ ಅಥವಾ ಅಧಿಪತ್ಯದ ಹಪಹಪಿಯಾ ತಾನು ಇಂದಿಗೂ ತಿಳಿಯದಾದೆ. ತಿಳಿದು ಪ್ರಯೋಜನವೂ ಇಲ್ಲ.

          ಅಪ್ಪ ಅಮ್ಮನನ್ನು ನಡೆಸಿಕೊಂಡಿದ್ದಾದರೂ ಹೇಗೆ? ತನ್ನ ಚಟ ತೀರಿಸಿಕೊಳ್ಳಲು ಅನ್ನ ಹಾಕಿ ಬಟ್ಟೆ ತೊಡಿಸಿ ಆಶ್ರಯ ಕೊಟ್ಟ ಒಂದು ಹೆಣ್ಣಾಗಿ ಅಷ್ಟೇ. ಅಪ್ಪನಿಗೆ ಎಲ್ಲದರಲ್ಲೂ ತಾನೇ ಪ್ರಾಮುಖ್ಯವಾಗಬೇಕು. ತನ್ನ ಸ್ವನಿರ್ಮಿತ ಸಾಮ್ರಾಜ್ಯ ತನ್ನ ಕುಟುಂಬ. ತಾನಿಲ್ಲದಿದ್ದರೆ ಇವರೆಲ್ಲಾ ಎಲ್ಲಿ ಎನ್ನುವ ದುರಹಂಕಾರದಿಂದಲೇ ನಡೆದುಕೊಂಡ ಅಪ್ಪ. ಇವರೆಲ್ಲಾ ಇರುವುದು ತನ್ನ ಬದುಕಿನ ಸಲುವಾಗಿ ಮಾತ್ರ. ತನ್ನದ್ದೊಂದೇ ಬದುಕು. ಇವರದ್ದೆಲ್ಲಾ ಏನು ಎನ್ನುವ ಪ್ರಶ್ನೆಯೂ ಹುಟ್ಟಲಿಲ್ಲ ಆತನಿಗೆ.

          ಹುಟ್ಟುವುದಕ್ಕೆ ತಲೆಯಲ್ಲಿ ಜಾಗವಾದರೂ ಬೇಕಲ್ಲ. ಸಿಟ್ಟು-ಸೆಡವು-ದುರಹಂಕಾರಗಳ ಹದ ಪಾಕವಾಗಿದ್ದ ಅಪ್ಪ. ಆ ಪಾಕಕ್ಕಿರುವ ಹೆಸರೇ ಮದ. ಇದರ ಮೇಲಿನಿಂದ ಉನ್ಮತ್ತನಾಗಲು ಹೆಂಡ ಬೇರೆ. ಎಲ್ಲರ ವಿಚಾರದಲ್ಲೂ ಮಂಗನಿಗೆ ಹೆಂಡ ಕುಡಿಸಿದಂತಾಯ್ತು ಎನ್ನುವ ಮಾತಿದ್ದರೆ ಅಪ್ಪನಿಗೆ ಮಾತ್ರ ರಕ್ಕಸನಿಗೆ ಹೆಂಡ ಕುಡಿಸಿದಂತೆ ಎನ್ನುವ ಮಾತೇ ಸರಿ. ಅಬ್ಬಾ ಆತನ ದಬ್ಬಾಳಿಕೆಯೇ. ವರ್ಣಿಸಲು ಶಬ್ದಗಳೇ ಇಲ್ಲ. ಬಟ್ಟೆ ಹಾಕುವುದು, ಚಪ್ಪಲಿ, ಛತ್ರಿ ಎಲ್ಲದರಲ್ಲೂ ತನ್ನದೇ ಮಾತು ನಡೆಯಬೇಕು. ತಾನು ಹೆಂಡ ಕುಡಿಯುವ ಖರ್ಚಿಗೆ ಸಾಕಾಗಿ ದುಡ್ಡು ಮಿಕ್ಕಿದರೆ ಮಾತ್ರ ಮಗನ ಮತ್ತು ಹೆಂಡತಿಯ ಖರ್ಚುಗಳ ಚಿಂತೆ. ವಯೋಸಹಜವಾಗಿ  ತನಗೆ ಬಟ್ಟೆಗಳನ್ನು ಧರಿಸುವ ಆಸೆಯಾಗಿತ್ತು. ಅಪ್ಪನಲ್ಲಿ ಅದಕ್ಕೆಲ್ಲಾ ದುಡ್ಡಿರಲಿಲ್ಲ. ಕೇಳಿದರೆ ಒಮ್ದು ಉತ್ತರ ಸಿದ್ಧವಾಗಿತ್ತು. "ನಿನ್ನ ಓದಿಸಕ್ಕೆ, ತ್ವಾಟ ಗದ್ದೆದೆಲ್ಲಾ ಕೆಲಸ ಮಾಡಿಸಕ್ಕೆ ಬೇಕಾಗ್ತು." ಪ್ರಶ್ನಿಸಿದರೆ ಬಡಿತ ಹೊಡೆತ ಬೈಗುಳಗಳ ಸುರಿಮಳೆ. ಮತ್ತೊಂದಿಷ್ಟು ಕುಡಿದು ರಂಪಾಟ. ಸಾಯಲಿ ಎಂದು ಸುಮ್ಮನಾಗಿದ್ದೇ ಹೆಚ್ಚು. ಗೊಂದಲ ಎಂದರೆ ಅಪ್ಪ ಕುಡಿದು ಕಿರಿಕಿರಿ ಮಾಡುತ್ತಿದ್ದನೋ ಅಥವಾ ಕಿರಿಕಿರಿ ಮಾಡಿ ವಿಕೃತ ಆನಂದ ಸವಿಯಲು ಕುಡಿಯುತ್ತಿದ್ದನೋ ಎನ್ನುವ ವಿಚಾರ.

          ಹಾಗಂತ ಅಪ್ಪ ಹೆಡ್ದನಲ್ಲ. ಮಹಾ ಚಾಲಾಕಿ. ಎಲ್ಲರೆದುರಲ್ಲಿಯೂ ಸದಾ ಮಗನ ಶ್ರೇಯಸ್ಸನ್ನೇ ಬಯಸುವ ಆದರ್ಶ ಪುರುಷ. ಅಬ್ಬಾ ಆ ಆದರ್ಶದ ಮಾತುಗಳೇ. "ಮಗ ಒಳ್ಳೆ ಮನುಷ್ಯ ಆಯಕ್ಕು" "ಮಗನ್ನ ಭಾಳ ಚನಾಗಿ ಓದಸ್ತಿ" "ಅವ ಹೇಳಿದ ಮೇಲೆ ಯನ್ನ ವಿರೋಧವೇ ಇಲ್ಲೆ. ಮಗನ ಮೇಲೆ ನಂಬಿಕೆ ಇದ್ದು" ಎನ್ನುವ ಬಲವಾದ ವಾಕ್ಯಗಳೇ ಅಲ್ಲಿ ತುಂಬಿ ತುಳುಕುತ್ತಿದ್ದವು. ಎಲ್ಲರ ಎದುರಲ್ಲಿ ಅಪ್ಪ ದೇವತಾ ಮನುಷ್ಯ. ಉಳಿದಂತೆ ದೆವ್ವದಂಥಾ ಮನುಷ್ಯ. ಈ ತೋರುಗಾಣಿಕೆಯ ಫಲವೇ ಮನೆಗೆ ಕೆಲವು ಒಳ್ಳೆಯ ಪುಸ್ತಕಗಳು ಬಂದಿದ್ದು. ಕೊಂಡು ತರಲು ಕುಡಿದು ಕಾಸು ಮಿಕ್ಕಿದರೆ ತಾನೆ. ಎರವಲು ಸಾಹಿತ್ಯ, ಅಪ್ಪನ ಮಾತಿನಂತೆಯೇ. ಆ ಪುಸ್ತಕಗಳಾದರೂ ಘನವಾದದ್ದೇ. ವಿವೇಕಾನಂದರು, ಅರವಿಂದರ ಪುಸ್ತಕಗಳು. ತಾನು ಅವಕ್ಕೆ ಅಪ್ಪನ ಎದುರಲ್ಲಿ ಕೈ ಇಟ್ಟರೆ ಕೆಂಗಣ್ಣ ನೋಟ. ತಲೆ ಕೆಟ್ಟರೆ ಬಯ್ಗುಳದ ಪಾಠ. "ನಿನ್ನ ಕರ್ತವ್ಯ ಶಾಲೆ ಪುಸ್ತಕ ಓದದು. ಇದನ್ನೆಲ್ಲಾ ಅಲ್ಲ" ಎನ್ನುವ ಬಿರು ನುಡಿ. ಎಲ್ಲರ ಎದುರಲ್ಲಿ ಇದೇ ಮಾತು ಬರುತ್ತಿತ್ತು, ಬೇರೆ ರೀತಿಯಲ್ಲಿ ಅಷ್ಟೆ. "ನೀನು ಓದಿ ದೊಡ್ಡವನಾಗಿ ಕೆಲಸಕ್ಕೆ ಸೇರಿ ಇದನ್ನಲ್ಲ ಇದಕ್ಕೂ ಹೆಚ್ಚಿನ ಪುಸ್ತಕ ಓದಕ್ಕು" ಎನ್ನುವ ಸೋಗಲಾಡಿ ಆದರ್ಶವಾದ.

          ಇದನ್ನೆಲ್ಲಾ ನಂಬಿ ಬಿಟ್ಟರಲ್ಲ ಜನ. ಹಾಗಾದರೆ ಜಗತ್ತು ಅಷ್ಟು ಮೂರ್ಖವೇ ಎನ್ನಿಸಿತ್ತು ತನಗೆ. ಇಲ್ಲವಾದರೆ ಈ ಚೋರ ರಾಜಕಾರಣಿಗಳನ್ನು ನಂಬುತ್ತಿದ್ದರಾ ಎಂದು ತನ್ನೊಳಗೆ ತಾನೇ ನಕ್ಕಿದ್ದ. ನಂಬಿದ ಜನ ಸುಮ್ಮನಿದ್ದರೆ ಅವರ ಬೆಲೆಯಾದರೂ ಏನಾಗಬೇಕು. ತನಗೆ ಬುದ್ಧಿ ಹೇಳಲು ಶುರುವಿಟ್ಟರು. "ಅಪ್ಪಂಗೆ ನಿನ್ನ ಮೇಲೆ ಪ್ರೀತಿ. ಅದಕ್ಕೇ ಬಯ್ಯದು". "ಅಪ್ಪ ಒಳ್ಳೆಯವ. ನೀನೇ ಅವನ್ನ ಕೆಣಕ್ತೆ" ಎನ್ನುವ ಮಾತುಗಳು ಓತಪ್ರೋತವಾಗಿ ಬರತೊಡಗಿದವು ಎಲ್ಲರ ಬಾಯಲ್ಲಿ. ಅವರಿಗೆ ಅಪ್ಪನನ್ನು ಅಷ್ಟೊಂದು ಬೆಣ್ನೆ ಹಚ್ಚಿ ಇಡಲು ಅಥವಾ ಅವನ ಜೊತೆ ಅಷ್ಟು ಚೆನ್ನಾಗಿ ಇರಬೇಕೆನ್ನುವ ಆಸೆ ಹುಟ್ಟಿದ್ದಾದರೂ ಏಕೆ? ಕಾಲವೇ ಇದಕ್ಕೆ ಉತ್ತರ ಕೊಟ್ಟಿತು. ಕೆಲವರಿಗೆ ಎಲ್ಲೂ ಸಿಗದ ಬೆಲೆಯನ್ನು ಅಪ್ಪ ಕೊಟ್ಟಿದ್ದ. ತಾವೊಂದು ಜನ ಆದ ಋಣ ಇತ್ತು ಅವರಿಗೆ ಅಪ್ಪನ ಮೇಲೆ. ಇನ್ನು ಕೆಲವರಿಗೆ ಒಳ್ಳೆಯ ತನ ಇತ್ತು. ಅವರು ನಂಬಿ ಬಿಟ್ಟರು ಅಪ್ಪನನ್ನು. ಇನ್ನು ಕೆಲವರು ಬಿಡಿ. ಅಪ್ಪ ಹಾಳಾಗಲಿ ಎಂದೆ ಬಯಸಿದವರಿದ್ದರು. ಇನ್ನು ಕೆಲವರಿಗೆ ಒಟ್ಟು ಮಾತಾಡುವ ಚಟವಿತ್ತು.

          ಇದೆಲ್ಲ ಆಗಿದ್ದು ರಕ್ಕಸನಿಗೆ ವರ ಸಿಕ್ಕಂತಾಗಿತ್ತು. ಅಪ್ಪನ ಆರ್ಭಟ ಮಿತಿ ಮೀರಿತ್ತು. ತಾನುಂಟು ಮೂರು ಲೋಕವುಂಟು ಎಂಬಂತೆ ಆಡತೊಡಗಿದ್ದ. ಕುಡಿದು ಮನೆಗೆ ಬರುತ್ತಿದ್ದವ ರಸ್ತೆ ಮೇಲೆ ಬೀಳತೊಡಗಿದ. ಜನರ ಬಾಯಿಗೆ ಆಹಾರವಾಗಬೇಕಾಯಿತು ತಾನು. ಆ ಅವಮಾನ ದುಮ್ಮಾನಗಳನ್ನು ಯಾರಲ್ಲಿ ಹೇಳಲಿ. ಅಮ್ಮನದ್ದೂ ಅದೇ ಪಾಡು ತಾನೇ. ದಬ್ಬಾಳಿಕೆಯೂ ಮಿತಿ ಮೀರಿತ್ತು. ಎಷ್ಟರ ಮಟ್ಟಿಗೆ ಎಂದರೆ ಉಚ್ಚೆ ಹೊಯ್ದರೂ ಅಪ್ಪನ ಪ್ರಶ್ನೆಯೊಂದಿರುತ್ತಿತ್ತು. "ಈಗಿನ್ನೂ ಹೊಯ್ದಿಕ್ಕೆ ಬಂದ್ಯೆಲ" ಎನ್ನುತ್ತಾ.

          ಅಪ್ಪನೇ ಹೀಗಾದ ಮೇಲೆ ಉಳಿದವರು ಬಿಟ್ಟಾರಾ? ಎಲ್ಲರ ಹತಾಶೆ ಸಿಟ್ಟು ನೋವು ದುಃಖಗಳು ತನ್ನ ಮೇಲೆ ಬಯ್ಗುಳವಾಗಿ ಸುರಿಯತೊಡಗಿದ್ದವು. "ಏನಾ ನಿಮ್ಮಪ್ಪ ಎದ್ದಿದ್ನಾ?!" ಎನ್ನುವ ಕೊಂಕು ಕುಹಕದ ಮಾತುಗಳು ತನ್ನನ್ನು ತಿವಿದದ್ದೆಷ್ಟು ಸಲವೋ ದೇವರೇ ಬಲ್ಲ. ಸಹಿಸಿಕೊಂಡೆ. ಸಹಿಸಲಾರದಾದಾಗ ಕೊಡವಿ ನಿಂತೆ. "ಏನಾ ನಿಮ್ಮಪ್ಪ ಎದ್ದಿದ್ನಾ ಬೆಳಿಗ್ಗೆ" ಎಂದವರಿಗೆ "ನಿನ್ನ ಹೆಂಡತಿ ಪಕ್ಕ ಹೋಗಿ ನೋಡು" ಎಂದು ಉತ್ತರ ಕೊಟ್ಟೆ. ಬೊಬ್ಬಟ್ಟೆಗಳು ಹೆದರಿದವು. ಎದುರಿಗೆ ಬರಲಿಲ್ಲ. ಹಿಂದಿನಿಂದ ಇಂಥಾ ಮಾತುಗಳು ಬರುತ್ತಲೇ ಇದ್ದವು. ಕೊಡವಿಕೊಂಡು ಸಹಿಸಿಕೊಂಡು ಹೇಗೋ ಬದುಕಿದೆ. ಒಂದು ರೀತಿಯ ಭಂಡತನ ಕಲಿಸಿತ್ತು ಬದುಕು. ಅದಕ್ಕೇ ಭಂಡಬದುಕು ಬದುಕುವ ಮನಸ್ಸಾಗಲಿಲ್ಲ. ಜನರಿಂದ ದೂರಾದೆ.

          ಮಗನ ಮುಖ ನೋಡಿ ಹೇಳಿದ, "ಮಗಾ!! ನಿಂಗೆ ಈ ಕಷ್ಟ ಎಲ್ಲ ಇಲ್ಲೆ. ನಿನ್ನಪ್ಪ ಕೇಡುಗ ಅಂತ ನಿನ್ನ ಯಾರೂ ಹಂಗಸ್ತ್ವಲ್ಲೆ " ತನ್ನ ಮೇಲೇ ತನಗೆ ಅಹಂಕಾರ ಮೂಡಿತ್ತಾ ಮುತ್ತುವಿಗೆ? ಗೊತ್ತಿಲ್ಲ. ಹೆಮ್ಮೆಯಂತೂ ಇತ್ತು.

          ಅಪ್ಪ ತನಗೆ ಚೂರೂ ಸಂಬಂಧವಿರದ ವಿಚಾರಗಳಲ್ಲಿ ತಲೆ ಹಾಕುವುದಲ್ಲ, ತನ್ನದೇ ಆಡಳಿತ ನಡೆಸಿದ. ಆಗ ತನ್ನ ಮನಸ್ಸಿನ ಬೇಸರವನ್ನು ತೀರಿಸಿಕೊಂಡಿದ್ದು ಗೆರೆಗಳ ಮೂಲಕ, ಚಿತ್ರಗಳನ್ನು ಬಿಡಿಸಿ. ಕುಡಿದ ಹೊಟ್ಟೆಯುರಿಯೋ ಅಥವಾ ಮಗನ ಶ್ರೇಯಸ್ಸು ತನ್ನ ದಬ್ಬಾಳಿಕೆ ತನ್ನ ಹುಚ್ಚು ಪ್ರಭುತ್ವಕ್ಕೊಂದು ಸವಾಲು ಎನ್ನುವ ಭಯವೋ ಅಪ್ಪ ಒಂದು ದಿನ ತಾನು ಬಿಡಿಸಿಟ್ಟ ಚಿತ್ರಗಳ ಮೇಲೆ ಕಾಫಿ ಸುರಿದು ತನ್ನ ಆಸೆಯನ್ನೇ ಅಳಿಸಿಬಿಟ್ಟ. ಒಳ್ಳೆಯ ಚಿತ್ರಗಾರನಾಗಬೇಕೆನ್ನುವ ಕನಸನ್ನು ಸೆರಗಲ್ಲಿಟ್ಟು ಸಾಗಿದೆ. ಕನಸಿನ ಜೊತೆ ಇನ್ನೊಂದು ಕನಸು ಸೇರಿಕೊಂಡಿತು. ಸಂಗೀತದ್ದು. ಹಾಡುತ್ತಿದ್ದ ಜಾಗಕ್ಕೇ ಬಂದು ಕುಡಿದು ರಂಪಾಟ ಮಾಡಿದ್ದ ಅಪ್ಪ. ಆ ಕನಸೂ ಜೋಳಿಗೆಯಲ್ಲಿ ಬಿತ್ತು.

          ಬದುಕಿನಲ್ಲಿ ಎಲ್ಲ ಕಡೆ ಕತ್ತಲಾವರಿಸಿದಾಗ ಕಾಣುವ ಬೆಳಕು ದೇವರೊಂದೇ ಸರಿ. ಆ ದೇವರು ಇದ್ದಾನೆ ನಿಜಕ್ಕೂ. ಅಮ್ಮ ಆ ದೇವರೇ ಸರಿ. ಇಲ್ಲವಾದರೆ ಅಪ್ಪನ ಹಿಂಸೆಗೆ ಎಂದೋ ಊರು ಬಿಡುತ್ತಿದ್ದಳು. ಆದರೆ ಮಗನ್ಬಿಗೆ ಸಮಾಜದಲ್ಲಿ ಬೆಲೆ ಬೇಕೆಂದು ಅಪ್ಪನನ್ನು ಸಹಿಸಿಯೇ ಇದ್ದಳು. ಅಮ್ಮನ ಈ ಬಲ ಅಪ್ಪನಿಗೆ ದೌರ್ಬಲ್ಯವಾಗಿಬಿಟ್ಟಿತು. ತಪ್ಪು ತಿಳಿದುಕೊಂಡ ಅಪ್ಪ. ತಾನೂ ಅಮ್ಮನ ಈ ತ್ಯಾಗಕ್ಕೆ ಬೆಲೆ ಕೊಟ್ಟೇ ಮನೆ ಬಿಡಲಿಲ್ಲ. ಅಪ್ಪನ ದೆಸೆಯಿಂದ ತನಗಾಗುವ ಅವಮಾನ ಜಾಸ್ತಿಯಾಗಬಾರದೆಂಬ ಒಂದೇ ಉದ್ದೇಶಕ್ಕೆ ಕಾಲೇಜಿನಲ್ಲಿ ಬಹಳ ಕಡಿಮೆ ಜನರ ಜೊತೆ ತಾನು ಬೆರೆಯುತ್ತಿದ್ದೆ. ಉಳಿದ ಸಮಯ ಕಾಲೇಜಿನ ಲೈಬ್ರರಿಯೇ ತನ್ನ ಪ್ರಪಂಚ. ಅಲ್ಲಿದ್ದ ಗಣಿತದ ಪುಸ್ತಕಗಳು ಸೆಳೆದುಬಿಟ್ಟವು. ತಾನೂ ಸೇಡು ತೀರಿಸಿಕೊಂಡೆ. ಆ ಪುಸ್ತಕಗಳಲ್ಲಿದ್ದ ಎಲ್ಲವನ್ನೂ ಜೀರ್ಣಿಸಿಕೊಂಡು. ಒಂದು ದಿನ ಗಣಿತಶಾಸ್ತ್ರದ ಮೇಲೆ ಬಂದ ಲೇಖನವೊಂದರಲ್ಲಿದ್ದ ತಪ್ಪನ್ನು ಕಾಲೇಜಿನ ಪತ್ರಿಕೆಯಲ್ಲಿ ಬರೆದೆ. ದೇವರು ಮೇಷ್ಟರ ರೂಪದಲ್ಲಿ ಬಂದಿದ್ದ. ಯಾವುದೋ ಗಣಿತ ಸ್ಫರ್ಧೆಗೆ ಕಳಿಸಿದ್ದರು ನನ್ನನ್ನು ಬೆಂಗಳೂರಿಗೆ. ಸಿಕ್ಕಿದ ಸ್ಕಾಲರ್ಶಿಪ್ಪಿನಲ್ಲಿ ಮಾಸ್ಟರ್ ಡಿಗ್ರೀ ಮುಗಿದಿತ್ತು. ಸರಸ್ವತಿ ಕೈ ಬಿಡಲಿಲ್ಲ.

ಆದರೆ ಲಕ್ಷ್ಮಿ ಒಲಿಯಲಿಲ್ಲ. ಎಲ್ಲೂ ಕೆಲಸ ಸಿಗದೇ ಇದ್ದಾಗ ವಿದ್ಯೆ ಕಲಿಸಿದ ಮೇಷ್ಟರು ನಿವೃತ್ತಿಗೆ ಅರ್ಜಿ ಹಾಕಿದ್ದರು ಶಿಷ್ಯನಿಗೆ ಕೆಲಸ ಕೊಡಿಸಲು. ಹೊಟ್ಟೆಗಿಲ್ಲದಂತಾಗಿದ್ದ ತಾನೂ ಆ ಕೆಲಸ ಒಪ್ಪಿದ್ದೆ. ನಡೆಯುತ್ತಿತ್ತು ಜೀವನ. ದುಡ್ಡು ಕಾಣದೆ ಹೋಗಿದ್ದಕ್ಕೋ ಅಥವಾ ಜೋಳಿಗೆಯಲ್ಲಿ ಕೊಸರಾಡುತ್ತಿದ್ದ ಕನಸುಗಳಿಗೆ ಮರುಜೀವ ಕೊಡಲು ದುಡ್ಡು ಬೇಕು ಎಂದೋ, ಅಥವಾ ಕನಸಿನ ಹಾದಿಯ ಪಯಣದಲ್ಲಿ ವಾಸ್ತವದ ಜೋಳಿಗೆ ತೂತಾಗಬಾರದು ಎಂದೋ, ಒಟ್ಟಿನಲ್ಲಿ ದುಡ್ಡು ಮಾಡಲು ಮುಂದಾಗಿದ್ದೆ. ಎಲ್ಲಿಯೋ ಅತಿಥಿ ಉಪನ್ಯಾಸಕನಾಗಿ ಹೋಗಿ, ಗಣಿತದ ಪತ್ರಿಕೆಗಳಿಗೆ ಲೇಖನ ಬರೆದು ದುಡ್ಡು ಮಾಡುತ್ತಿದ್ದೆ. ಆದರೆ, ಕನಸು ತೀರಿಸಿಕೊಳ್ಳಲು ಬೇಕಾದ ವಯಸ್ಸು ದಾಟಿ ಹೋಗಿತ್ತು.

          ಇಷ್ಟರ ಮಧ್ಯೆ ಅಪ್ಪ ಪಾರ್ಶ್ವವಾಯುವಿಗೆ ತುತ್ತಾದ. ಕುಡಿದು ತೊದಲುತ್ತಿದ್ದವ ಹಾಗೆಯೇ ತೊದಲುತ್ತಿದ್ದ. ಕೋಲು ಹಿಡಿದು ಬಡಿದು ಮಾತು ನಡೆಸಿಕೊಂಡವ ತಾನು ಕೋಲು ಹಿಡಿದು ನಡೆಯುತ್ತಿದ್ದ. ಅಮಲಿನಲ್ಲಿ ತೂರಾಡುತ್ತಿದ್ದವ ಹಾಗೆಯೇ ಓಲಾಡುತ್ತಿದ್ದ. ಪಾರ್ಶ್ವವಾಯುವಿಗೆ ಕೂಡಾ ಅಪ್ಪ ಹೃದಯಹೀನ ಎಂದು ತಿಳಿದಿತ್ತೇನೋ ಅದಕ್ಕೇ ಬಲಭಾಗಕ್ಕೆ ಹೊಡೆಯಿತು. ಅಪ್ಪನನ್ನು ನೋಡಿಕೊಳ್ಳಲಿಕ್ಕೆ, ಅಷ್ಟು ದಿನ ಕಷ್ಟಪಟ್ಟ ಅಮ್ಮನ ಸಂತೋಷಕ್ಕೆ ಕಾರಣವಾಗಲಿಕ್ಕೆ ತಾನು ದುಡಿಯಲೇ ಬೇಕಿತ್ತು. ಅಪ್ಪ ತೋರುಗಾಣಿಕೆಗೆ ಮಾಡಿದ ಒಳ್ಳೆಯತನಕ್ಕೆ ಆದ ಸಾಲವನ್ನೂ ತೀರಿಸಬೇಕಿತ್ತಲ್ಲ, ತೀರಿಸದೇ ಇದ್ದರೆ ಅಪ್ಪ ಮಾಡಿದ ತಪ್ಪಿಗೆ ತಾನು ಕೆಟ್ಟವನಾಗುತ್ತಿದ್ದೆ.

ಈಗ ಕನಸುಗಳ ಕಡೆ ಮನಸ್ಸು ಹರಿಯುತ್ತಲೇ ಇರಲಿಲ್ಲ. ಆಗ ತನಗೆ ಸಿಕ್ಕವಳೇ ತನ್ನ ದೂರದ ಬಂಧುವಿನ ಮಗಳೇ ಆಗಿದ್ದ ಮಂದಾಕಿನಿ. ಅವಳಪ್ಪ ಒಮ್ಮೆ ತನ್ನನ್ನು ಎಂಥಾ ತಿರಸ್ಕಾರದಿಂದ ಕಂಡಿದ್ದ, ಅವನೂ ಕೇಳಿದವನೇ. "ನಿಮ್ಮಪ್ಪ ರಸ್ತೆಯ ಮೇಲೆ ನೆಟ್ಟಗೆ ಹೋಗ್ತ್ನಲ್ಲೆ. ಅಡ್ಡ ಹೋಪದೇ ಸೈ. ನೀನಾರು ಬದುಕಾಗೆ ನೆಟ್ಟಗೆ ಹೋಗು ಹಾಡು ಹಸೆ ಎಲ್ಲ ಬಿಡು. ಬದುಕ ದಾರಿ ನೋಡು" ಎನ್ನುವ ದೌಲತ್ತಿನ ಮಾತಾಡಿದ್ದ. ಅದು ಅವನಿಗೂ ನೆನಪಿದೆ. ಉತ್ತರ ಬಾಯಿಂದ ಬಂದರೆ ಎನ್ನುವ ಭಯಕ್ಕೇನೋ ಅಳಿಯನಲ್ಲಿ ಮಾತು ತುಂಬಾ ಕಡಿಮೆ. 

ಮಂದ ಎಂದೇ ಕರೆದದ್ದು ಆಕೆಯನ್ನು ತಾನು. ಆದರೆ ಅವಳು ಮಂದವಲ್ಲ. ತನ್ನ ಆಂತರ್ಯವನ್ನು ಚೆನ್ನಾಗಿ ಅರಿತಿದ್ದಳು. ತನ್ನ ಕನಸುಗಳು ಕಮರಿದ್ದನ್ನು ತಿಳಿದಿದ್ದಳು. ಎಷ್ಟೋ ಸಲ ಹಾಡು ಹಾಡುವಂತೆ ಕೇಳಿದ್ದಳು. ಪೀಡಿಸಿದ್ದಳು. ತಾನು ಹಾಡದಾದೆ. ಆ ಕನಸುಗಳು ಸತ್ತ ದುಃಖ ತನ್ನನ್ನು ಆ ರೀತಿ ಬಾಧಿಸುತ್ತಿತ್ತು. ಬಸುರಿಯ ಬಯಕೆ ಎಂದು ಕೇಳಿದ್ದಾಗ ಅದೆಲ್ಲಿತ್ತೋ ಏನೋ ಧ್ವನಿ ಚೆನ್ನಾಗಿ ಬಂದು ಹಾಡಿದ್ದೆ. "ಜಾನೆ ಕಹಾಂ ಗಯೇ ವೊ ದಿನ್..." ಎನ್ನುತ್ತಾ. ಆದರೆ ಅದರಲ್ಲಿ ದುಃಖದ ಭಾವಕ್ಕಿಂತ ಅವಳೆಡೆಗಿನ, ಅವಳ ಬಸಿರಲ್ಲಿದ್ದ ತನ್ನದೇ ಕನಸಿನೆಡೆಗಿನ ನಿರೀಕ್ಷೆ ಬಲವಾಗಿತ್ತು.

          ಮಗ ಮೈ ಮುರಿದ.ನಕ್ಕ. ಮುತ್ತು ಮತ್ತೆ ವಾಸ್ತವಕ್ಕೆ ಬಂದ. ಮುತ್ತು ತನ್ನ ಮಗನೊಡನೆ ಮನಸ್ಸಿನಲ್ಲೇ ಸಂಭಾಷಿಸಿದ.

          " ಮಗಾ!! ಯನ್ನ ಕನಸೆಲ್ಲ ಕೊಚ್ಚಿ ಹೋಗಿ ಕ್ಷೀಣವಾದಾಗ ಹುಟ್ಟಿದ್ದೆ ನೀನು. ಪರೀಕ್ಷಿತ ನೀನು. ನಿನ್ನ ಆನು ಅದೇ ಹೆಸರಿಂದ ಕರಿತಿ. ಎನ್ನ ಕನಸಿಗೆ ಬೆಂಕಿ ಹಚ್ಚಿಬಿಟ್ಟ. ಒಬ್ಬನೇ ಕನಸುಗಳ ಬೆನ್ನು ಹತ್ತಿ ಹೊಂಟಿ. ಎಲ್ಲಾ ಸೇರಿ ಕೊಂದುಬಿಟ್ಟ ಆ ಕನಸುಗಳನ್ನ. ಯಾರಿಗಾಗಿ ಆ ಕನಸು ಕಂಡನೋ ಅವರೇ ಆ ಕನಸಿಗೆ ಬೆಂಕಿ ಹಚ್ಚಿ ಚಳಿ ಕಾಯಿಸ್ಕಂಡ. ಯನ್ನ ಕಣ್ಣಲ್ಲಿ ಆ ದುಃಖಕ್ಕೆ ನೀರು ಬತಲ್ಲೆ. ಆನಂದ ಭಾಷ್ಪವೂ ಅಲ್ಲ. ಕನಸಿನ ಹೆಣ ಮಾಡಿ ಅದನ್ನ ಸುಟ್ಟ ಹೊಗೆಗೆ ಬರ ಕಣ್ಣೀರು ಅದು. ಯನ್ನ ಕನಸು ಚಳಿ ಕಾಯಿಸಕ್ಕಾದರೂ ಬಂತು. ಚಳಿ ಕಾಸ್ತಾ ಇಪ್ಪವ್ವು ತಮ್ಮ ಯಾವ ಕನಸನ್ನೂ ಕೊಲ್ಲಲೇ ಇಲ್ಲೆ. ಎಂತಕ್ಕೆ ಅಂದ್ರೆ ಅವರು ಕನಸನ್ನೇ ಕಾಣಲೆ. ಹಂಗಂತ ಅವ್ಯಾರೂ ನನ್ನ ಕನಸುಗಳನ್ನ ಬೇಕು ಅಂತ ಕೊಲ್ಲಲ್ಲೆ. ಕನಸೇ ಕಾಣದಿದ್ದ ಅವಕ್ಕೆ ಅದೆಲ್ಲ ಹುಚ್ಚುತನವಾಗಿ ಕಂಡ್ಚು ಅಷ್ಟೇ. ಕನಸಿನ ಜೊತೆ ನಾನೂ ಸತ್ತು ಬದುಕಿದಿ. ಮೃತ್ಯುಂಜಯ ಅನ್ನ ಹೆಸರು ನಿಜ ಆಗಿಹೋತು. ಆದ್ರೆ ಮಗಾ, ನೀ ಬಂದ್ಯೇಲ ಇನ್ನು. ಯನ್ನ ಕನಸೆಲ್ಲ ನನಸಾಗ್ತು. ನಾನು ಬಿಡಿಸಕ್ಕಾಗಿದ್ದ ಚಿತ್ರ ಎಲ್ಲ ನೀ ಬಿಡಿಸು. ನಾ ಹೇಳಕ್ಕಾಗಿದ್ದ ಹಾಡೆಲ್ಲ ನೀ ಹಾಡು. ನಿನ್ನ ಕಣ್ಣಲ್ಲಿ ಅಪ್ಪನ ಕನಸು ಈಡೇರಿಸಿದ ಸಾರ್ಥಕ ಭಾವ ನೋಡಕ್ಕು ನಾನು. ನೀ ಹೆದರಡ. ನಾ ಹಗಲೂ ರಾತ್ರೆ ದುಡಿದಾದರೂ ಸರಿ ನಿನ್ನ ಸಾಕ್ತಿ. ಇನ್ನು ನೀನು ನಿನ್ನಮ್ಮ ಅಜ್ಜಿ ಅಷ್ಟೇ ನಂಗೆ. ನನ್ನ ಬದುಕು ಬೇಕಾರೆ ಸುಟ್ಟು ಹೋಗಲಿ. ಬೂದಿಯಾಗಲಿ. ನಾ ಕಂಡ ಕನಸೆಲ್ಲ ಅಲ್ಲ ನಾ ಕೊಂದ ಕನಸೆಲ್ಲ ನೀ ನನಸು ಮಾಡಿಕೊಡು."

          ಮಗ ನಕ್ಕ. ಅದು ನಿದ್ದೆಗಣ್ಣೆಂದನ್ನಿಸಲಿಲ್ಲ. ತನ್ನ ಮಾತಿನಲ್ಲಿದ್ದ ಹುಚ್ಚುತನಕ್ಕೆ ಮಗ ನಕ್ಕನೆನ್ನಿಸಿತು. ಮುತ್ತು ಬಿಕ್ಕತೊಡಗಿದ. "ಇಲ್ಲೆ ಮಗಾ!! ನಿನ್ನದ್ದೂ ಬದುಕಿದ್ದು. ನೀನು ಅದನ್ನ ಬದುಕು. ನಿನ್ನ ಕನಸುಗಳನ್ನ ಕಾಣು. ಸತ್ತ ಎನ್ನ ಕನಸುಗಳು ಅದರಲ್ಲಿ ನಿಜ ಆಗಲಿ. ನಿನಗೆ ತೋಚಿದ ಸರಿಯಾದ ಕೆಲಸ ಮಾಡು. ಅಪ್ಪ ನಿನ್ನ ಬಲಕ್ಕಿದ್ದ. ನಿನ್ನ ಕನಸಿಗೆ ಜೊತೆಯಾಗಿ. ಕನಸ ದಾರಿಗೆ ಬೆಳಕಾಗ್ತಿ ಮಗಾ. ನನ್ನ ಕನಸಿನ ಕನವರಿಕೆ ಒಳಗೆ ನಿನ್ನ ಕನಸು ಸಾಯಲಾಗ. ನೀನು ನಿನ್ನ ಕನಸುಗಳನ್ನ ಈಡೇರಶ್ಕ್ಯ. ಎನ್ನ ಕನಸೆಲ್ಲ ಈಡೇರಿದ ಸಾರ್ಥಕ್ಯ ನೋಡ್ತಿ ಅದರಲ್ಲಿ. ನಿನ್ನ ಕನಸಿಗಾಗಿ ಯನ್ನ ಕನಸು ಸಾಯಲಿ. ನಿನ್ನ ಕನಸು ಸಾಯಲಾಗ. ನಿನ್ನ ಕನಸನ್ನ ನಾನು ನನಸು ಮಾಡಿಕೊಡ್ತಿ. ಸುಂದರ ಬದುಕು ನಿನಗೆ ಕೊಡ್ತಿ. ಹೊಟ್ಟೆ ಬಟ್ಟೆ ಕಟ್ಟಾರು ಸೈ. ಯನ್ನಪ್ಪ ಮಾಡಿದ ತಪ್ಪು ಆನು ಮಾಡ್ತ್ನಲ್ಲೆ. ಯನ್ನ ಜೊತಿಗೆ ಆದ ಹಂಗೆ ನಿನ್ನ ಜೊತೆ ಆಗದು ಬ್ಯಾಡ. ಆನು ನಿಂಗೆ ಜನ್ಮ ಕೊಟ್ಟಿದ್ದು ಅಂತ ಅಧಿಕಾರ ಮಾಡ್ತ್ನಲ್ಲೆ. ನೀನೂ ಯಂಗೆ ಜನ್ಮ ಕೊಟ್ಟೆ. ಅಪ್ಪನ ಜನ್ಮ. ನೀ ಹುಟ್ಟಿಯೇ ಅಲ್ದ ಆನು ಅಪ್ಪ ಆಗಿದ್ದು"

          ಅಪ್ಪನ ಬಿಕ್ಕು ಕೇಳಿದ ಮಗ ಅಳತೊಡಗಿದ. ಮಲಗಿದ್ದ ಮಂದಾಕಿನಿಯೂ ಎದ್ದಳು. ಧಿಗ್ಗನೆ ಮುತ್ತು ಬಚ್ಚಲಿಗೆ ಓಡಿದ. ಮನಸಾರೆ ಅತ್ತ. ಕಣ್ಣೊರೆಸಿಕೊಂಡು ಬಂದ. ರೆಪ್ಪೆಯ ಮೇಲಿದ್ದ ಹನಿಗಳಲ್ಲಿ ಆತನ ಸತ್ತ ಕನಸುಗಳಿರಲಿಲ್ಲ.ಮಗನ ಭವಿತವ್ಯದ ಬೆಳಕಿತ್ತು. ಹಾಲು ಕುಡಿಸಿ ಮಗನನ್ನು ತೊಟ್ಟಿಲಲ್ಲಿಟ್ಟು "ತೂಗಿ" ಎಂದಳು ಮಂದ. ಅಯಾಚಿತವಾಗಿ ಮುತ್ತು ಹಾಡತೊಡಗಿದ್ದ ಮೆಲುದನಿಯಲ್ಲಿ, "ಬಾಗಿ ಬಾಗಿ ಬಂಗಾರ ತೂಗಿ...".

ಅಷ್ಟರಲ್ಲಿ ಊಟಕ್ಕೆ ಹೋಗಿದ್ದ ಅಮ್ಮ ಬಂದಳು. ಮಗನ ಹಾಡನ್ನು ಕೇಳುತ್ತಾ ನಿಂತಳು ತನ್ಮಯಳಾಗಿ. ಪರೀಕ್ಷಿತ ನಿದ್ದೆಗೆ ಜಾರಿದ್ದ. ಆಸ್ಪತ್ರೆಗೆ ಮೊಮ್ಮಗನನ್ನು ನೋಡಲು ಬಂದಿದ್ದ ಅಪ್ಪ. ತೂರಾಡುತ್ತಲೇ ಇದ್ದ, ಪಾರ್ಶ್ವ ವಾಯುವಿನ ಹೊಡೆತಕ್ಕೆ. ಕೋಲಿತ್ತು ಕೈನಲ್ಲಿ ಊರಿಕೊಂಡು ನಿಲ್ಲಲು. ಪಕ್ಕದಲ್ಲೇ ನಿಂತಿದ್ದ ಮಂದಾಳ ಅಪ್ಪ. ಅವನಿಗೆ ಅಳಿಯನನ್ನು ಎದುರಿದುವ ಧೈರ್ಯವೇ ಇರಲಿಲ್ಲ. ಅಳಿಯನಾಗುವ ಮೊದಲೇ ಅದು ಸತ್ತು ಹೋಗಿತ್ತು. ಅಪ್ಪ ತೊಟ್ಟಿಲ ಪಕ್ಕದಲ್ಲಿ ಪ್ರಯಾಸ ಪಟ್ಟು ಕುಳಿತ. ಮತ್ತೆದ್ದು ನಿತ್ತು ಹೇಳಿದ. " ಸ್ವಲ್ಪ ಆ ಕಡೆ ಕೂರ್ಸು ಯನ್ನ. ನೆರಳು ಬೀಳ್ತು ಮಾಣಿ ಮೇಲೆ." ಮುತ್ತು ಹಾಗೆಯೇ ಮಾಡಿದ. ಅಪ್ಪನೆಡೆಗೊಮ್ಮೆ ನೋಡಿದ. ಅಪ್ಪನಿಗೆ ಕೋಲಿನ ಆಧಾರ. ತನ್ನ ಸತ್ತ ಕನಸುಗಳಿಗೂ ಅಪ್ಪನಿಗೂ ಯಾವ ವ್ಯತ್ಯಾಸವೂ ಇಲ್ಲ. ಅಲೆದಾಡುತ್ತಿದ್ದ ಕನಸುಗಳು ಮಗನ ಕನಸುಗಳಾಗಿ ಹಾರಾಡುತ್ತಿವೆ. ಅಪ್ಪ ತೂರಾಡುತ್ತಲೇ ಇದ್ದಾನೆ.

          ಅಷ್ಟರಲ್ಲಿ ಅಪ್ಪ ತೊದಲಿದ್ದ. " ಆನು ನಿಂಗೆ ಮಾಡಿದ್ದನ್ನ ಅವನ ಜೊತೆ ಮಾಡಡ. ಕೊನೆಗೆ ಹಿಂಗಾದ್ರೆ ಕಷ್ಟ ಭಾಳ. ಮಕ್ಕಳಿಗೆ ಮುಖ ಎತ್ತಿ ಬದುಕದನ್ನ ಕಲಿಸಕ್ಕು. ಅವ್ವು ತಲೆ ತಗ್ಗಿಸ ಹಂಗೆ ಮಾಡಿದರೆ ನಾವು ಮುಖ ಇಟ್ಕತ್ವಲ್ಲೆ ಅವರ ಎದುರಿಗೆ" ಏನೋ ಬಾಯಿ ಹಾಕಲು ಹೊರಟ ತನ್ನಪ್ಪನನ್ನು ಕಣ್ಣಿನಲ್ಲೇ ಹೆದರಿಸಿದ್ದಳು ಮಂದ, ಗೊಣಗಿದ್ದಳು ಸಿಡುಕುವಂತೆ. "ಪಾಪು ಮಲಕೈಂದು. ಅವ್ವು ಹಾಡ್ತಿದ್ದ, ನೀನು ಕೊನಿಗೆ ಮಾತಾಡು."

No comments:

Post a Comment