Tuesday, March 13, 2018

ಎಡದಿಂದ ಬಲಕ್ಕೆ...

ಮೊನ್ನೆ ಮೊನ್ನೆ ಗೆಳತಿಯೊಬ್ಬಳು ಕೇಳಿದ್ದಳು,”ಶಶಾಂಕ, ನೀನು ರೈಟಿಸ್ಟಾ” ಅಂತ. ನನಗೆ ಗಾಭರಿ, ಭಯ, ತಮಾಷೆ, ಕಚಗುಳಿ ಎಲ್ಲಾ ಅನುಭವ ಒಟ್ಟಿಗೆ ಆಗಿತ್ತು. ಹೊಟ್ಟೆ ತೊಳೆಸತೊಡಗಿತ್ತು. ಸತ್ಯದ ಅಜೀರ್ಣವೋ ಅಥವಾ ಹೊಟ್ಟೆಯಲ್ಲಿ ಕರಗದೆ ಕುಳಿತಿದ್ದ ಹಳೆಯ ಕೊಸರೋ ಗೊತ್ತಿಲ್ಲ. ಮಾತು ತಿರುಗಿಸಲು ಪ್ರಯತ್ನಿಸಿದೆ. ಅವಳು ಬಿಡಲಿಲ್ಲ. ಆ ಹೊತ್ತಿಗೆ ಸರಿಯಾಗಿ, ಎಲ್ಲಿಂದಲೋ ಶಬ್ದವೊಂದು ಸಿಕ್ಕಿತು. “ಅಲ್ಲ ಮಾರಯ್ತಿ ನಂದು ಅಡ್ಡಪಂಥೀಯ ಅಡ ಪಡ ಸಾಹಿತ್ಯ” ಎಂದು ನನಗೇ ಅರ್ಥವಾಗದ ಪಿಜೆ ಹೊಡೆದು ತಪ್ಪಿಸಿಕೊಂಡಿದ್ದೆ. ತಪ್ಪಿಸಿಕೊಂಡಿದ್ದು ಅವಳಿಂದಲಲ್ಲ. ನನ್ನ ಭೂತದಿಂದ. ಅಂದರೆ ನನ್ನ ಹಿಂದಿನ ಕಾಲದ ಯೋಚನೆಗಳಿಂದ. ಅವಳು ಈ ಪ್ರಶ್ನೆ, ಅದಕ್ಕ ಇದ್ದ ನಿಜವಾದ ಉತ್ತರ ಮತ್ತು ಸುಳ್ಳು ಉತ್ತರ ಮೂರೂ ಮರೆತು   ಕಾಲವಾಗಿತ್ತು. ಸಂತೋಷದಿಂದ ಇದ್ದೆ.
ಅಷ್ಟೊತ್ತಿಗೆ ಬಂತು ನೋಡಿ ತ್ರಿಪುರಾ ಚುನಾವಣೆ ಫಲಿತಾಂಶ. ಕೆಂಪು ಬಣ್ಣ ಮಾಸಿ ಹೋಗಿತ್ತು. ಕೆಂಪು ಬಾವುಟವನ್ನೇ ಆರಾಧಿಸುವವರ, ಅದರ ಹೆಸರಲ್ಲಿ ಇಲ್ಲಿನ ಅಸ್ಮಿತೆ, ಪರಂಪರೆಗಳನ್ನು ಹೀಯಾಳಿಸುವ, ಈ ದೇಶದ ತುಂಡು ಮಾಡುವ ಮಾತಾಡುವ ತಾವು ರಕ್ತ ಪಿಪಾಸು ಪಿಶಾಚಿಗಳ ಮುಖ ನಾಚಿಕೆ ಅವಮಾನದಿಂದ ಕಪ್ಪಿಟ್ಟಿತ್ತು. ನನಗೊಂದು ರೀತಿಯ ವಿಚಿತ್ರ ಸಮಾಧಾನ, ಸಂತೋಷ. ಎಲ್ಲರೊಡನೆ ನಾನಿದ್ದೇನೆ ಎನ್ನುವ ಭಾವ. ಇಷ್ಟೆಲ್ಲ ಆದಾಗ ಮನಸ್ಸು ಮತ್ತೆ ಹಳೆಯ ದಿನಗಳ ಕಡೆ-ಹದಿವಯಸ್ಸಿನ ಕಡೆ ಹೊರಳಿತ್ತು.
ಯಾವುದೋ ಲೈಬ್ರರಿಯಲ್ಲಿ ಲೆನಿನ್ ಭಾಷಣದ ಪುಸ್ತಕವೊಂದು ಸಿಕ್ಕಿತ್ತು. ಅಭ್ಯಾಸದಂತೆ ಓದಿದ್ದೆ. ಅರ್ಥವಾಗಿದ್ದು ಎಷ್ಟೋ ಏನೋ ಗೊತ್ತಿಲ್ಲ. ಆದರೆ ಆತನ ವಿಚಾರಗಳು ಏಕೋ ಏನೋ ಕಾಡಿಬಿಟ್ಟವು. ಬಡತನ ಹಸಿವು ನಿರುದ್ಯೋಗ ಇದೆಲ್ಲ ದಿನಾ ನಂದಿ ಮಾರ್ಕಿನ ಪೇಪರಿನಲ್ಲಿ ಬರುತ್ತಿತ್ತು. ಆಗ ಇದ್ದಿದ್ದೇ ಎರಡೋ ಮೂರೋ ಕನ್ನಡ ದಿನಪತ್ರಿಕೆಗಳು ಬಿಡಿ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೂ ಒಂದೇ. ಅದೇ ಲೆನಿನ್ನನ ವಿಚಾರ ಎನ್ನಿಸಿಬಿಟ್ಟಿತ್ತು. ಮತ್ತೆ ಇತಿಹಾಸ ಬರೆದರೂ ಹಾಗೆಯೇ ಇದ್ದರಲ್ಲ ಆಗ. ಮಾವೋ ಬಗೆಗಿನ ಓದು ಈ ಆಲೋಚನೆಗಳನ್ನು ಇನ್ನೂ ಹೆಚ್ಚಿಸಿದವು. ಕಮ್ಯುನಿಸ್ಟ್ ವಿಚಾರಧಾರೆಯೇ ಸರಿ ಎನ್ನಿಸಿ ಅದರ ಪರವಾಗಿಯೇ ಮಾತಾಡುತ್ತಿದ್ದೆ. ಟಿವಿಯಲ್ಲಿ ಇದ್ದದ್ದು ಒಂದೇ ಚಾನೆಲ್. ಡಿ ಡಿ ಒಂದು. ಅದರಲ್ಲಿ ಪಶ್ಚಿಮ ಬಂಗಾಳದ ಸುದ್ದಿ ಬಂದರೆ ಕಣ್ಣು ಕಿವಿ ಅರಳಿಸಿ ಕೂರುತ್ತಿದ್ದೆ ತನ್ಮಯನಾಗಿ. ಅದೆಂಥಾ ಏಕಾಗ್ರತೆ. ಈಗ ಬರುವುದೇ ಇಲ್ಲ.ಜ್ಯೋತಿ ಬಸು ನನಗೆ ಆರಾಧ್ಯವಾಗಿಬಿಟ್ಟಿದ್ದರು. ನಕ್ಸಲೀಯರು ಮಾಡಿದ್ದೆಲ್ಲ ಸರಿ ಅನ್ನಿಸುತ್ತಿತ್ತು. ಮನೆಯಲ್ಲೋ, ಪಕ್ಕಾ ಬಿಜೆಪಿಗಳು. ಘರ್ಷಣೆ ಆಗುತ್ತಿತ್ತು. ಆದರೆ ಯಾರೂ ಸೀರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ.
ನನ್ನ ಮಾತುಗಳೋ ಬಿಡಿ. ಆನೆ ಅಂಬಾರಿ ಹೊರುವುದಕ್ಕೂ ವಿರೋಧ. ಹಬ್ಬದ ಆಚರಣೆ ಅದೇ ದಿನ ಏಕೆ? ವಾರಕ್ಕೊಮ್ಮೆ ಬರುವ ಭಾನುವಾರ ಮಾಡಬಹುದಲ್ಲ ಎನ್ನುವ ಅರ್ಥಹೀನ ವಾದ. ಸಾಲದ್ದಕ್ಕೆ ಮದುವೆ ಮುಂಜಿಗಳನ್ನೂ ಅವತ್ತೇ ಮಾಡಬಹುದಲ್ಲ. ಮದುವೆಯಾಗುವ ಹುಡುಗ ಹುಡುಗಿ ಇದ್ದರೆ ಸಾಕು. ಶಾಲೆ ಮಕ್ಕಳಿಗೆ ರಜೆ ಏಕೆ? ಆ ಮೂರು ತಿಂಗಳು ಅವರು ಕೆಲಸ ಮಾಡುವಂತೆ ಮಾಡಿ ಅವರ ಅದರಿಂದ ಬರುವ ಆದಾಯವನ್ನು ಅವರ ಶಿಕ್ಷಣಕ್ಕೆ ಉಪಯೋಗಿಸಬಹುದಲ್ಲ. ಇನ್ನೂ ಎಷ್ಟೆಷ್ಟೋ ಇತ್ತು ಬಿಡಿ.
ಇಷ್ಟೆಲ್ಲಾ ಆದರೂ ಜನಿವಾರ ತೆಗೆದಿಡುವ ಅಥವಾ ಸಂಧ್ಯಾವಂದನೆಗೆ ಚಕ್ರ ಹಾಕುವ ಧೈರ್ಯ ಇರಲಿಲ್ಲ. ಅಪ್ಪನ ಭಯವಾ ಅಥವಾ ನಾನೊಬ್ಬ ಸರ್ವಶಕ್ತನಲ್ಲ ಎನ್ನುವ ನಿಜದ ಅರಿವಾ ಗೊತ್ತಿಲ್ಲ. ದೇವರ ಬಳಿಯೇ ಹೋಗಿ ಕೇಳಿಬಿಟ್ಟಿದ್ದೆ. ನನ್ನಲ್ಲಿ ಸಾಧ್ಯವಿಲ್ಲ. ಈ ದೇಶವನ್ನು ನೀನೇ ಕಮ್ಯುನಿಸ್ಟ್ ರಾಷ್ಟ್ರ ಮಾಡು ಅಂತ.
ಇಷ್ಟರಲ್ಲಿ ಹತ್ತನೇ ಕ್ಲಾಸ್ ಪಾಸಾಯ್ತು. ಸಾಗರದ ಕಾಲೇಜಿಗೆ ಸೇರಿದೆ. ಎಲ್ಲರಂತೆ ಬಂಕ್ ಹೊಡೆದೆ. ಹೊಡೆದು ಮಳ್ಳಾಟ ಮಾಡಿದ್ದೂ ಇದೆ. ಲೈಬ್ರರಿಯಲ್ಲಿ ಹೋಗಿ ಕೈಗೆ ಸಿಕ್ಕ ಪುಸ್ತಕಗಳನ್ನೂ ಓದಿದ್ದಿದೆ. ಆಗ ಸ್ವಲ್ಪ ಬುದ್ಧಿಯೂ ಬೆಳಿದಿತ್ತು. ಇಂಗ್ಲಿಷ್ ಬೆಳೆಸಿಕೊಳ್ಳುವ ಆಸೆಯಿಂದ ಸ್ವಲ್ಪ ಇಂಗಿಶ್ ಪತ್ರಿಕೆಗಳನ್ನೂ ಓದತೊಡಗಿದ್ದೆ . ಕೆಲವು ಲೇಖನಗಳು ಈ ಎಡವಾದವನ್ನೇ ಸರಿ ಎನ್ನುತ್ತಿದ್ದವು. ಇಂಗ್ಲಿಷ್ ಗೊತ್ತಿದೆ ಅಂದ್ರೆ ಬುದ್ಧಿವಂತರಲ್ಲವೇ? ಬುದ್ಧಿವಂತರೇ ಹೇಳಿದಮೇಲೆ ಉಳಿದವರೇನು? ನಂದೇ ಸರಿ ಎನ್ನಿಸಿಬಿಟ್ಟಿತ್ತು.ಈ ಸಿದ್ಧಾಂತದ ಬೆಂಬಲಿಗರು ಮತ್ತು ಪ್ರತಿಪಾದಕರು ಎಡಭಾಗದ ಸಾಲಿನಲ್ಲಿ ಕೂರುತ್ತಿದ್ದರಂತೆ ಸಭೆಗಳಲ್ಲಿ. ಅದಕ್ಕೇ ಇವರಿಗೆ ಲೆಫ್ಟಿಸ್ಟ್-ಎಡಪಂಥೀಯರು ಎನ್ನುತ್ತಿದ್ದರು ಎನ್ನುವುದು ತಿಳಿದ ಮೇಲೆ, ನಾನು ಬಸ್ಸಿನಲ್ಲಿ ಎಡಭಾಗದ ಸೀಟ್ ಸಿಕ್ಕಿದಾಗ ಬಹಳ ಖುಷಿ ಪಡುತ್ತಿದ್ದೆ. ಕಮ್ಯುನಿಸಂ ಎಷ್ಟು ತಲೆ ಹೊಕ್ಕಿತ್ತು ಅಂದರೆ, ನನ್ನ ವಯಸ್ಸಿನ ಹುಡುಗರೆಲ್ಲಾ ಕಂಪನಿ ಸೇರಿ ಅಮೆರಿಕಕ್ಕೆ ಹೋಗುವ ಕನಸಿಟ್ಟುಕೊಂಡಿದ್ದರೆ ನಾನು ರಶಿಯಾ, ಚೀನಾ ಕ್ಯೂಬಾಕ್ಕೆ ಹೋಗಿ ಬದುಕುವ ಕನಸು ಕಾಣುತ್ತಿದ್ದೆ.
ಇಷ್ಟರಲ್ಲಿ, ಇಂಗ್ಲಿಷ್ ಪಠ್ಯದಲ್ಲಿ ಪಾಠವೊಂದಿತ್ತು. ರವೀಂದ್ರನಾಥ ಟ್ಯಾಗೋರರು ಬರೆದ “The workmen Paradise” ಎನ್ನುವ ಕತೆ ಅದು. ಚಿತ್ರಗಾರನೊಬ್ಬ ಸದಾ ಕೆಲಸದಲ್ಲೇ ನಿರತರಾಗಿರುವವರ ಸ್ವರ್ಗವನ್ನು ಸೇರುತ್ತಾನೆ.ಆತ ತನ್ನ ಕೆಲಸವನ್ನು ಸಂಪೂರ್ಣ ಮನಸ್ಸಿಟ್ಟು ಮಾಡಿದ್ದರಿಂದ ಆತನನ್ನೂ ಕಾರ್ಮಿಕ ಎಂದು ಭಾವಿಸಿ ಅದೃಷ್ಟ ದೇವತೆ ಆತನನ್ನು ಕಾರ್ಮಿಕರ ಸ್ವರ್ಗಕ್ಕೆ ಸೇರಿಸಿರುತ್ತಾನೆ. ಆದರೆ ಅಲ್ಲಿದ್ದವರು ಆತನನ್ನು ಕಾರ್ಮಿಕ ಎಂದು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಆತನ ಕಲೆಯನ್ನು ಗೌರವಿಸುವುದಿಲ್ಲ. ನನ್ನ ಮಂಕುಬುದ್ಧಿಗೆ ರವೀಂದ್ರರು ಬಟ್ಟೆ ಸುತ್ತಿ ಹೊಡೆದದ್ದು ಗೊತ್ತಾಗಲಿಲ್ಲ. ಅವರು ನಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂದೇ ಭ್ರಮಿಸಿದೆ. ಮತ್ತೆ ಇವರು ಆಗಾಗ ಕೊಡುತ್ತಿದ್ದ ಉದಾಹರಣೆಗಳೂ ಸಾಮಾನ್ಯದವರದ್ದಲ್ಲ. ಭಾರತದ ಸಾರ್ವಕಾಲಿಕ ಸೂಪರ್ ಹೀರೊ ಸುಭಾಷ್ ಚಂದ್ರ ಬೋಸ್,ಭಗತ್ ಸಿಂಗ್ ಎಲ್ಲ ಕಮ್ಯುನಿಸ್ಟರು ಎನ್ನುತ್ತಿದ್ದರು. ಇಷ್ಟು ಸಾಕಲ್ಲ ಸಮಾಜವಾದವೇ ಸರಿ ಎನ್ನಲಿಕ್ಕೆ.

ಒಂದು ದಿನ ಮನೆಯಲ್ಲಿ ಮಾತಾಡುತ್ತಿರುವಾಗ ಮತ್ತೆ ನನ್ನ ಕಮ್ಯುನಿಸ್ಟ್ ತುತ್ತೂರಿ ಬಾರಿಸತೊಡಗಿದೆ. ಹಿರಿಯರೆಲ್ಲರೂ ಗಂಟಲು ಒಣಗುವಷ್ಟು ತಿಳಿ ಹೇಳಿದರು. ಒಪ್ಪಿದೆ.
ಅವರು ಹೇಳಿದ್ದರ ಸಾರಾಂಶ ಇಷ್ಟೇ. ಸಮಾನತೆ ಎಂದರೆ ಮೂರಡಿಯವನಿಗೂ ಆರಡಿಯವನಿಗೂ ಒಂದೇ ಅಳತೆಯ ಚಪ್ಪಲಿ ಅಲ್ಲ ಎನ್ನುವ ಸರಳ ಸತ್ಯ. ಮುಂದೆ ಡಿಗ್ರಿ ಮಾಡಲು ಬೆಂಗಳೂರಿಗೆ ಬಂದ ಮೇಲೆ ಇನ್ನಷ್ಟು ಅರ್ಥಶಾಸ್ತ್ರದ ಪುಸ್ತಕ ಓದಿದೆ. ಕಮ್ಯುನಿಸಂ ಕಮ್ಮಿನಿಷ್ಠೆ ಅಂತ ಒಪ್ಪಿಕೊಂಡೆ.

ಗೆಳೆಯನೊಬ್ಬ ಫೋನ್ ಮಾಡಿದ್ದ ಒಮ್ಮೆ. ಅದು ಇದು ಮಾತಾಡುತ್ತಾ, ಮಾತು ಎಡಪಂಥ ಮತ್ತು ಎಡಪಂಥೀಯರ ಕಡೆ ತಿರುಗಿತು. ನನ್ನ ಬಾಯಿಯೂ ಬೊಂಬಾಯಿ. ಕನ್ನಡ ಮಾತ್ರವಲ್ಲ ಇಂಗ್ಲಿಷ್,  ಸಂಸ್ಕೃತ ಎರಡರಲ್ಲೂ ಎಡಪಂಥೀಯರಿಗೆ ಯಕ್ಕಾ ಮಕ್ಕಾ ಉಗಿಯತೊಡಗಿದ್ದೆ. ಆತನಿಗೆ ಬೇಸರವಾಯ್ತೋ ಏನೋ. “ಅಲ್ಲ ಮಾರಾಯ ನಿಂಗೆಂತಕ್ಕೆ ಅವರ ಮೇಲೆ ಅಷ್ಟು ಸಿಟ್ಟು?”ಎಂದ.
ನನ್ನ ಉತ್ತರ ಹೀಗಿತ್ತು. ಸಮಾನತೆಯ ಹೆಸರಲ್ಲಿ ಅವರು ಕೇಳುವುದು ಮೀನು ಹಿಡಿದು ಕೊಡಿ ಎಂದು. ಮೀನು ಹಿಡಿಯುವುದು ಕಲಿಸುವುದಿಲ್ಲ. ಹಾಗಂತ ಕಮ್ಯುನಿಸ್ಟ್ ಸರಕಾರ ಇದ್ದಲ್ಲಿ ದೇವರೊಂದೇ ಅಲ್ಲ. ಪ್ರಾಣಿಗಳಿಗೂ ಬೆಲೆ ಇಲ್ಲ. ಮಾವೋ ಗುಬ್ಬಿಗಳನ್ನು ಹಿಡಿ ಹಿಡಿದು ಕೊಲ್ಲಿಸಿದ್ದ, ಕಾಳು ತಿನ್ನುತ್ತವೆ ಎಂದು. ಗುಬ್ಬಿಗಳು ಎಷ್ಟು ಮಹಾ ತಿಂದಾವು? ದುಡಿದವನಿಗೆ ಹಕ್ಕು ಎನ್ನುವವ ರೈತರಿಗೆ ಕಡಿಮೆ ತಿನ್ನುವಂತೆ ಹೇಳಿದ್ದ.
“ಇಷ್ಟೇ ಆಗಿದ್ದರೆ ನಿಂಗಿಷ್ಟೆಲ್ಲಾ ಸಿಟ್ಟಿರ್ತಿರ್ಲೆ. ಬೇರೆ ಎಂತೋ . ಅವರ ಮೇಲೆ ಇಷ್ಟೆಲ್ಲಾ ವಿಚಾರ ಎಲ್ಲಿಂದ ಒಟ್ಟು ಮಾಡಿದೆ?”
ಸಿಗ್ಗು-ನಾಚಿಕೆ-ಅವಮಾನ ಮೂರೂ ಒಟ್ಟಾಗಿ ಆಗಿತ್ತು ನನಗೆ. ಅದರಲ್ಲೇ ನಗುತ್ತಾ ಹೇಳಿದ್ದೆ. “ಒಂದು ಕಾಲದಲ್ಲಿ ನಾನೋ ಅದೆಯ” ಎಂದು, ಮೇಲಿನ ಎಲ್ಲಾ ಪುರಾಣ ಹೇಳಿದ್ದೆ.
ಗೆಳೆಯ ನಗುತ್ತಲೇ ಹೇಳಿದ್ದ. “ದುಷ್ಮನ್ ಕಹಾಂ ಹೈ ಅಂದ್ರೆ ಬಗಲ್ ಮೇ ಅಂದಂತೆ, ಕಮ್ಯುನಿಸ್ಟ್ ಕಹಾ ಹೈ ಅಂದರೆ ಫೋನ್ ಪೆ ಅಂದ ಹಂಗಾತು” ಎನ್ನುತ್ತಾ ಗಹಗಹಿಸಿ ಸಂತೋಷದಿಂದ ನಕ್ಕ.
“ಹೈ ಅಲ್ಲ ಥಾ” ಎಂದು ನಾನೂ ನಕ್ಕಿದ್ದೆ.

ನನ್ನಲ್ಲಿ ಕೆಲವೇ ಕಾಲ ಇದ್ದು, ಬಹುಕಾಲ ಕಾಡಿಸಿತಲ್ಲ ಕೆಂಪು, ಇನ್ನು ಅದೆಷ್ಟೋ ಕಾಲ ಅವರಾಳಿದ ಭೂಮಿಯ ಸ್ಥಿತಿ ಹೇಗಿದ್ದೀತು? ಮತ್ತೆ ಇನ್ನೊಂದು ವಿಚಾರ. ಎಡಪಂಥೀಯ ಎನ್ನುವುದಕ್ಕೆ ವ್ಯಾಖ್ಯೆ ಸಿಗುತ್ತದೆ. ಕಾರಣ ಸಹಿತ. ಬಲಪಂಥೀಯ ಎನ್ನುವುದಕ್ಕಲ್ಲ. ಹಾಗಾಗಿ ಎಡಪಂಥೀಯರಲ್ಲದವರೆಲ್ಲಾ ಬಲಪಂಥೀಯರು ಎನ್ನುವುದೇ ವ್ಯಾಖ್ಯೆ. ಹಾಗಾಗಿ ನಾನೊಬ್ಬನೇ ಬಲಪಂಥೀಯನಲ್ಲ.

ತ್ರಿಪುರಾದಲ್ಲಿ ಕೆಂಪು ಮಾಸಿದ ಮೇಲೆ, ಇದನ್ನೆಲ್ಲಾ ನಿಮ್ಮ ಜೊತೆಯೂ ಹೇಳಿ ಹಗುರಾಗುವ ಎನ್ನಿಸಿತು. ಮಾಡಿದ ತಪ್ಪನ್ನು ತಪ್ಪೆಂದು ಒಪ್ಪಿಕೊಂಡರೆ ಆ ತಪ್ಪಿನಿಂದಾದ ಪಾಪ ಬಾಧಿಸುವುದಿಲ್ಲವಂತೆ. ಅದೇನೋ ಗೊತ್ತಿಲ್ಲ. ಆದರೆ ಮನಸ್ಸು ಹಗುರಾಗಿದೆ. ಇದೇ ಭಾವನೆಯಿಂದಲೇ ನಾನು ನನ್ನ ಸ್ನೇಹಿತನಲ್ಲಿ ಹೇಳಿದ್ದು. ಆದರಾತ ಸಂತೋಷಿಸಿದ. ಗೆಳೆಯನೊಬ್ಬ ತಪ್ಪುದಾರಿ ಬಿಟ್ಟ ಸಂತೋಷ ಅದು. ನಿಜ ಸುಹೃತ್ ಭಾವ ಅದು. ಸರಿದಾರಿಗೆ ಬಂದ ಸಮಾಧಾನ, ಜೊತೆಗೆ ನನ್ನ ಬದುಕಿನ ಒಂದು ಬದಲಾವಣೆ ಒಬ್ಬರ ನಗುವಿಗಾದರೂ ಕಾರಣವಾಯಿತಲ್ಲ ಆ ಸಡಗರ ಕೂಡ.

No comments:

Post a Comment