Tuesday, March 27, 2018

ಶ್ವಾನ ದಂಶನ


ಮೊನ್ನೆ ಒಂದು ದಿನ ಆಫೀಸಿನಿಂದ ಮನೆಗೆ ಬರುತ್ತಿರುವಾಗ ರೂಢಿಯಂತೆ ಫೋನಿನಲ್ಲಿ ಮಾತಾಡುತ್ತಾ ಬರುತ್ತಿದ್ದೆ. ಫುಟ್ ಪಾಥ್ ಮೇಲೆ ನಡೆಯುತ್ತಾ ಬರುತ್ತಿದ್ದ ನನಗೆ ಮೊಣಕಾಲ ಕೆಳಗೆ ಏನೋ ತಾಗಿದ ಅನುಭವ ಜತೆಯಲ್ಲಿಯೇ ಉರಿ. ಇದ್ಯಾವ ಪುಣ್ಯಾತ್ಮ ಗಾಡಿಯನ್ನು ಫುಟ್ ಪಾತ್ ಮ್ಮೇಲೆ ಹತ್ತಿಸಿದನಪ್ಪಾ ಎಂದು ತಿರುಗು ನೋಡಿದರೆ, ಅಲ್ಲಿದ್ದದ್ದು ಒಂದು ನಾಯಿ. ಅದು ಕಚ್ಚಿಯೇ ಉರಿಯಾದದ್ದು ಎಂದು ತಿಳಿಯಿತು ನನಗೆ.ಆದರೂ ಅಭ್ಯಾಸದಂತೆ ಗಾಯವನ್ನೊಮ್ಮೆ ನೋಡಿದೆ. ಗಾಯ ಆಳವಾಗಿ ಏನೂ ಇರಲಿಲ್ಲ. ಆದರೂ ನಾಯಿ ಕಚ್ಚಿದ್ದು ಎಂದ ಮೇಲೆ ಭಯ ಇದ್ದಿದ್ದೇ. ಡಾಕ್ಟರ ಹತ್ತಿರ ಹೋಗಲೇ ಬೇಕಲ್ಲ. ಆಯ್ಕೆಯಲ್ಲ- ಅನಿವಾರ್ಯವೂ ಅಲ್ಲ ದೊಮ್ದು ಅವಶ್ಯಕತೆ ಸಂದರ್ಭಕ್ಕೆ.

ಡಾಕ್ಟರ ಕಡೆ ಹೋಗುತ್ತಿದ್ದವನಿಗೆ ಪೂರ್ಣ ಚಂದ್ರ ತೇಜಸ್ವಿಯವರ ಊರ್ವಶಿ ಎನ್ನುವ ಸಣ್ಣ ಕತೆ ನೆನಪಾಯಿತು. ಅದರಲ್ಲಿ ಕಥಾ ನಾಯಕ ಸೋಮು, ತನ್ನ ಪ್ರೇಮವನ್ನು ಮನದಲ್ಲಿ ಧೇನಿಸುತ್ತಾ, ತನಗೆ ಕಚ್ಚಿದ ನಾಯಿ ಹುಚ್ಚು ನಾಯಿಯೋ ಅಥವಾ ಅಲ್ಲವೋ ಎಂದು ಹುಡುಕುತ್ತಾನೆ. ನಾಯಿ ಬದುಕಿದ್ದರೆ ಅದು ಹುಚ್ಚು ನಾಯಿಯಲ್ಲ ಹಾಗಾಗಿ ಹೊಕ್ಕಳ ಸುತ್ತ ಇಂಜೆಕ್ಷನ್ ತೆಗೆದುಕೊಳ್ಳಬೇಜಾದ ಅವಶ್ಯಕತೆ ಇಲ್ಲ. ಇಲ್ಲವಾದರೆ ಹೊಕ್ಕುಳ ಸುತ್ತ ಇಂಜೆಕ್ಷನ್ ತೆಗೆದುಕೊಳ್ಳುವುದು ತ್ರಾಸದಾಯಕವೇ ಸರಿ. ಈಗಂತೂ ಹೊಕ್ಕುಳ ಸುತ್ತ ಇಂಜೆಕ್ಷನ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಹಾಗಾಗಿ ಪ್ರಶ್ನೆ ಬಂದರೂ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ರಿಸ್ಕ್ ಬೇಡ ಎಂದು ಡಾಕ್ಟರಿಗೆ ಹೇಳಿ, ಎಷ್ಟಿದೆಯೋ ಅಷ್ಟೂ ಸೂಜಿ ತೆಗೆದುಕೊಂಡರಾಯಿತು ಎಂದುಕೊಂಡು ಡಾಕ್ಟರ ಹತ್ತಿರ ಹೋದೆ. ಡಾಕ್ಟರು ಹೆಚ್ಚು ಪ್ರಶ್ನೆ ಕೇಳಲಿಲ್ಲ. ಮನೆ ನಾಯಿಯಾ ಬೀದಿ ನಾಯಿಯಾ ಎಂದಷ್ಟೇ ಕೇಳಿದರು. ಬೀದಿ ನಾಯಿ ಎಂದೆ. ಐದು ಇಂಜೆಕ್ಷನ್ನುಗಳನ್ನು ಬರೆದು ಕೊಟ್ಟರು. ಆಫೀಸಿನಲ್ಲೇ ಆಸ್ಪತ್ರೆ ಇರುವ ಕಾರಣ ನನಗೇನೂ ತಲೆಬಿಸಿ ಇಲ್ಲ. ಸಮಯಕ್ಕೆ ಸರಿಯಾಗಿ ಇಂಜೆಕ್ಷನ್ ತೆಗೆದುಕೊಳ್ಳಬಹುದು, ಡಾಕ್ಟರ್ ಫೀಸ್ ಇಲ್ಲದೆ. ಅಪ್ಪಿ ತಪ್ಪಿ ಆದರೆ ಅದಕ್ಕೆ ಪರಿಹಾರವಿಲ್ಲ.

ಆದರೆ, ಒಳಗಿರುವ ಲೆಕ್ಕಾಚಾರಿ ಬುದ್ಧಿ ಸುಮ್ಮನಿರಲಿಲ್ಲ. ಇದಕ್ಕೆ ಆರೋಗ್ಯ ವಿಮೆ ಸಿಕ್ಕೀತೋ ಎಂದೊಮ್ಮೆ ನೋಡಿದೆ. ಸಿಗುವಂತೆ ಕಾಣಲಿಲ್ಲ. ನನ್ನೊಳಗಿದ್ದ ಲೆಕ್ಕಾಚಾರಿ ಸತ್ತು ಬಿದ್ದ ಅಲ್ಲಿಗೆ. ತಿಳಿದೆ ಸಮಸ್ಯೆ ಬಗೆ ಹರಿಯಿತು ಅಂತ. ಆದರೆ ಘಟನೆಯ ಜೊತೆ ನಾನು ಸೇರಿ ಮತ್ತೆ ಹೊತ್ತು ತಂದ ಮಾತುಗಳಲ್ಲಿ ಇದೂ ಒಂದಾಗುತ್ತದೆ ಎಂದು ಖಂಡಿತ ಎಣಿಸಿರಲಿಲ್ಲ. ಆದರೆ ಆಗಿಯೇ ಬಿಟ್ಟಿತು. ಭಗವಂತನೇ ಹೇಳಿದ್ದಾನಲ್ಲ. ಜ್ಣಾನ ಕಾಲದೊಂದಿಗೆ ಸೇರಿ ಕಾಲ ನಿನ್ನೊಂದಿಗೆ ಸೇರಿದಾಗ ಮಾತ್ರ ಅದರ ಸಿದ್ಧಿ ಸಾಧ್ಯ ಎಂದು.  ಅದು ನಿಜ.

ಮರುದಿನ ಒಂದು ಕಾರ್ಯದ ಮನೆ. ನಾಯ್ ಹಿಂದೊಮ್ಮೆ ಕಚ್ಚಿದ್ದಾಗ ಮಾಡಿದ್ದ ಎಲ್ಲಾ ಪಥ್ಯದ ನೆನಪಿತ್ತು ನನಗೆ. ಇದೊಂದು ವಿಶೇಷ. ತಿಂದಿದ್ದು ಏನು ಎಂದು ಯಾರಿಗೂ ನೆನಪಿರುವುದಿಲ್ಲ, ಆದರೆ ತಿನ್ನದೇ ಬಿಟ್ಟಿದ್ದು ಮಾತ್ರ ಮರೆಯುವುದೇ ಇಲ್ಲ. ಇದು ಒಳ್ಳೆಯದಲ್ಲ. ಮತ್ತೆ ಅದರ ಆಸೆಗೇ ಏನೇನೋ ಆಗಿ ಹುಟ್ಟಬೇಕಾಗಿ ಬಂದರೆ ಕಷ್ಟ. ಆದರೆ ಕೆಲವರಿಗೆ ಇದು ತಿಳಿಯುವುದಿಲ್ಲ ಬೇಡ ಎಂದು ಹೇಳಿದರೆ ಪ್ರಶ್ನೆಗಳ ಬೋಗಿ. "ಎಂತಕ್ಕೆ ತಿಂತಲ್ಲೆ?" ಎನ್ನುವುದರಿಂದ ಶುರುವಾಗುತ್ತದೆ ಪ್ರಶ್ನೆ. ಆಮೇಲೆ ಅದಕ್ಕೆ ಪ್ರಶ್ನೆಗಳು ಮಾತ್ರ ಸೇರಿಕೊಳ್ಳುತ್ತವೆ. "ತೀದ್ರೆ ಎಂತ ಆಗ್ತು?" "ಬೇರೆ ಯಾರೂ ತಿಂತ್ವೇ ಇಲ್ಯಾ?" "ಮುಂಚೆ ತಿಂತಿದ್ದೆ ಈಗ ಎಂತಕ್ಕೆ ಬ್ಯಾಡ?" "ಒಂಚೂರೂ ತಿನ್ನಲಾಗ್ದಾ?" "ಚೂರು ತಿಂದರೂ ತೊಂದ್ರೆಯಾ?" ರೀತಿ ಉತ್ತರ ಇಲ್ಲದ ಮತ್ತು ಬೇಡದ ಪ್ರಶ್ನೆಗಳಿಗೆ ಏನೂ ಮಾಡಲಾಗದ ದೌರ್ಬಲ್ಯ ನನ್ನದ್ದು. ಪರಿಣಾಮ ಸಿಟ್ಟು. ಸಿಟ್ಟಿನಿಂದ ಸಾಧಿಇಸುವುದು ಏನೂ ಇಲ್ಲ ನಿಜ. ಅಂತೆಯೇ ಸಿಟ್ಟಿಗೆ ಕಾರಣವಾಗುವ ಪ್ರಶ್ನೆಗಳಿಂದಲೂ ಕೂಡಾ. ಆದರೆ ಕೊನೆಗೆ ಕಾಣುವುದು ಶಶಾಂಕನ ಸಿಟ್ಟಷ್ಟೆ. ಕ್ಷಮಿಸಿ ವಿಚಾರ ಎಲ್ಲೋ ಹೋಯಿತು. ಅದೇ ಕಾರಣಕ್ಕೆ ನಾನು ಪಥ್ಯವಿದ್ದಾಗ ಮುಲಾಜಿಲ್ಲದೆ ಅದರ ಕಾರಣವನ್ನು  ಹೇಳಿಬಿಡುತ್ತೇನೆ. ಕೆಲವರಿಗೆ ಇದು ಸಿಂಪತಿ ಗಿಟ್ಟಿಸುವ ಹುನ್ನಾರವೆಂಬಂತೆ ಕಂಡೀತು. ಅದಕ್ಕೆ ನಾನು ಹೊಣೆಯಲ್ಲ.

ಹೀಗೆಯೇ ಕಾರ್ಯದ ಮನೆಯಲ್ಲಿ ನಾನು ಕೆಲವೊಂದನ್ನು ತಿನ್ನದಿದ್ದಾಗ "ಎಂತಕ್ಕೆ" ಎನ್ನುವ ಸದಾಕಾಲದ ಯಾವತ್ತೂ ನನ್ನ ಪಾಲಿಗೆ ಸಾಯದ ಪ್ರಶ್ನೆ ಎದುರಾಯ್ತು. ಉತ್ತರ ಕೊಟ್ಟೆ. ಆದರೆ ಮತ್ತೊಂದು ಪ್ರಶ್ನೆ ಎದುರಾಗಬೇಕೇ. "ಹೆಂಗೆ ಕಚ್ಚಿದ್ದು ನಾಯಿ?" ಇದಕ್ಕೆ ಹೇಗಪ್ಪಾ ಉತ್ತರ ಕೊಡಲಿ, ನಾಯಿ ಬಾಯಿ ಕಳೆದು ಕಚ್ಚಿತು ಅಷ್ಟೇ. ಆದರೆ ಉತ್ತರ ಹೊತ್ತಿನಲ್ಲಿ ತಲೆ ಹರಟೆ ಉತ್ತರವಾಗುತ್ತದೆ. ಕೇಳಿದವರದ್ದು ನಿಜ ಕಳಕಳಿ-ಕಕ್ಕುಲತೆ. ಆದರೆ ಉತ್ತರ ಕೊಡುವುದು ಕಷ್ಟ. ಏಕೆಂದರೆ ಭಾವಾರ್ಥ ಗೂಢಾರ್ಥದ ಮಾತುಗಳು ದಿನ ನಿತ್ಯದ ವ್ಯವಹಾರಕ್ಕೆ ಬೇಡ ಎಂದೇ ನನ್ನ ನಂಬಿಕೆ. ಅದಕ್ಕೆ ಉತ್ತರ ಕೊಟ್ಟೆ. "ಹಿಂದಿಂದ ಬಂದು ಕಚ್ಚಿತು" ಅಂತ.

ಪ್ರಶ್ನೆ ಇದೊಂದೇ ಅಲ್ಲ. "ನೀ ಎಂತ ಮಾಡಿದ್ದೆ?" ಎಂದೂ ಕೇಳಿದರು. ನಾನೇನಾದರೂ ಮಾಡಿಯೇ ನಾಯಿ ಕಚ್ಚಬೇಕಾ? ಅಂದರೆ ನಾಯಿಗೆ ಪೂರ್ತಿ ವಿವೇಚನಾ ಶಕ್ತಿ ಇದೆ. ನನಗಿಲ್ಲ ಎಂದು ಅರ್ಥವಲ್ಲ. ಕೇಳುವುದಕ್ಕೊಂದು ಪ್ರಶ್ನೆ ಅಷ್ಟೇ. ಆದರೆ ಇದಕ್ಕೆ ಸ್ವಲ್ಪ ಹತ್ತಿರದ ಉತ್ತರ ಕೊಡುವುದೂ ಕಷ್ಟ. "ನಾ ಎಂತ ಮಾಡ್ಲೆ. ಹಿಂದಿಂದ ಬಂದು ಕಚ್ಚಿಬಿಡ್ತು" ಎಂದು ಹೇಳಿ ದಾಟಿದೆ ಮುಂದೆ. ಅವರಿಗಿದ್ದ ಕಳಕಳಿ ಇಷ್ಟೇ ನಾನೇನಾದರೂ ನಾಯಿಯ ಬಾಲ ಮೆಟ್ಟಿದ್ದನಾ ಅಂತ. ಅದಕ್ಕೆ ಇದು ಪೀಠಿಕೆ.

ಇನ್ನೂ ಒಂದು ಮಜವಾದ ಪ್ರಶ್ನೆ ಎಂದರೆ, "ನಾಯಿ ಮರಿ ಹಾಕಿತ್ತಾ?" ಕೇಳಿದವರೇನು ಹೋಗಿ ಮರಿ ತರುವುದಿಲ್ಲ. ನನಗೊಂದು ಎಚ್ಚರಿಕೆಯ ಮಾತು ಆಡಲು ಪೀಠಿಕೆ ಅದು. ಕಳಕಳಿಗೆ ಸಂತೋಷವಿದೆ. ಸಹಜವೇ ಅದು. ಆದರೆ ನಾಯಿ ಕಚ್ಚಿಸಿಕೊಂಡ ಹೊತ್ತಿಗೆ ಯೋಚನೆ ಬರುವುದೇ ಇಲ್ಲ. ಡಾಕ್ಟರ ದುಕಾನ್ ಎಲ್ಲಿದೆ ಎಂದು ಹುಡುಕುವ ಕಡೆಗೇ ತಲೆ ಹೋಗುತ್ತದೆ. ನಾಯಿಯೋ ಅದರ ಮರಿಯೋ ಯೋಚನೆಗೇ ಬರುವುದಿಲ್ಲ.

ಕೇಳಿದ ಮತ್ತೊಂದು ಪ್ರಶ್ನೆ "ನಾಯಿಗೆ ಹುಚ್ಚು ಹಿಡಿದಿತ್ತಾ?" ಈಗ ಮತ್ತೆ ನಾನು ಊರ್ವಶಿಯ ಸೋಮು ಆಗಿದ್ದೆ. "ನೋಡಲ್ಲೆ. ರಿಸ್ಕ್ ಬ್ಯಾಡ ತಗಬುಡ್ತಿ ಇಂಜೆಕ್ಷನ್" ಎಂದು ಉತ್ತರಿಸಿದ್ದೆ.

ಒಟ್ಟಿನಲ್ಲಿ ಪ್ರಶ್ನೆಗಳು ತಪ್ಪುವುದಿಲ್ಲ. ರೂಪ ಬದಲಾವಣೆಯಾಗುತ್ತದೆ ಎನ್ನುವ ಸತ್ಯ ನನಗೆ ಗೊತ್ತಾಯಿತು. ಪ್ರಶ್ನೆಗಳನ್ನು ಋಷಿ ಮುನಿಗಳಲ್ಲಿ ಕೇಳಿದರೆ ಉಪನಿಷತ್ತುಗಳು ಹುಟ್ಟಿದ್ದವು. ನಮ್ಮಂಥಾ ಅವಾಂತರಿಗಳಲ್ಲಿ ಕೇಳಿದರೆ ಅದು ಹೊತ್ತು ತಂದ ಮಾತುಗಳಲ್ಲಿ ಒಂದಾಗುತ್ತದೆ ಅಷ್ಟೇ.

ಪ್ರಶ್ನೆಗಳನ್ನು ಕೇಳಿದ ಯಾರೂ ಬೇಸರಿಸಬೇಡಿ. ಕೇಳುವುದನ್ನೂ ನಿಲ್ಲಿಸಬೇಡಿ. ಇದು ತಮಾಷೆಗೆ ಅಷ್ಟೇ. ನಿಮ್ಮ ಪ್ರಶ್ನೆಗಳಿರದಿದ್ದರೆ ಲೇಖನ ಬರುತ್ತಿರಲಿಲ್ಲ. ಎಲ್ಲಾ ಇಂಜೆಕ್ಷನ್ನುಗಳನ್ನೂ ಮುಗಿಸಿ ಸುಮ್ಮನೆ ಘಟನಾವಳಿಗಳನ್ನು ಮೆಲುಕು ಹಾಕಿದಾಗ ಹೀಗೆಲ್ಲ ಅನ್ನಿಸಿತು. ಹಂಚಿಕೊಂಡೆ.

ಹೀಗಿದೆ ಶ್ವಾನ ದಂಶನ ಪ್ರಕರಣ.

No comments:

Post a Comment