Tuesday, March 6, 2018

ಭಟ್ಟರ ಪೀಠ

ಮುಳುಗಡೆ- ಆಗಬಾರದ ಒಂದು ದುರ್ಘಟನೆ ನಡೆದು ಹೋಯಿತು ಕೆಲವರ ಪಾಲಿಗೆ. ಬದುಕಿನ ಹಳಿ ತಪ್ಪಿಸಿದ ರೌದ್ರ ಘಟನೆ ಅದು. ಹಾಗೆ ಹಳಿ ತಪ್ಪಿದ ತಮ್ಮ ಹಾಗೂ ತಮ್ಮ ತಲೆಮಾರಿನ ಮುಂದಿನ ಜನರ ಬದುಕನ್ನು ಚಮ್ದಗಾಣಿಸಲು ನಮ್ಮೂಎಇಗೆ ಬಂದು ಜ್ಜಾಗ ಕೊಂಡವರು ಈಶ ಭಟ್ಟರು. ಊರ ಹೊರಗಿನ ಗದ್ದೆ ಅದು. ಮನೆ ಒಂಟಿ ಎಂದು ಅದೇ ಊರಿನಲ್ಲಿ ತಮ್ಮ ಒಕ್ಕಲಾಗಿದ್ದ ಗಣಪು ಶೆಟ್ಟಿಯ ಮನೆಯವರಿಗೂ ಮನೆ ಕಟ್ಟಲು ಜಾಗ ಕೊಟ್ಟರು ಭಟ್ಟರು. ಗಣಪು ಶೆಟ್ಟಿ ಓಡಿ ಹೋದಾಗ, ಅವರ ಮನೆಯ ಚಿಕ್ಕ ಮಕ್ಕಳಿಗೆ ದೇವರಂತೆ ನಡೆದುಕೊಂಡರು ಭಟ್ಟರು. ಗಣಪು ಶೆಟ್ಟಿಯ ಹೆಂಡತಿ ಬೇಬಿ ಶೆಡ್ತಿಗೆ ಅವರ ಮನೆಯೇ ತವರುಮನೆಯಂತಾಯಿತುಪಕ್ಕದ ಬೆಟ್ಟ ಬೋಳಾದ್ದು ಕಂಡು ಅದಕ್ಕೆ ಮುತುವರ್ಜಿಯಿಂದ ಗೇರು ಗಿಡಗಳನ್ನು ನೆಟ್ಟು ಅವು ಫಲಕೊಡ ತೊಡಗಿದ್ದನ್ನು ನೋಡಿ ಭಟ್ಟರು ಮನಸಾರೆ ಸಂತೋಷಿಸಿದ್ದರು. ಆದರೆ ಶೆಡ್ತಿಗೆ ಭಟ್ಟರು ಉದ್ಧಾರವಾಗುತ್ತಿರುವುದು ಏಕೋ ಹೊಟ್ಟೆ ಉರಿ. ಭಟ್ಟರ ಹೆಂಡತಿ ಬಹಳ ಸಾರಿ ಹೊಟ್ಟೆ ನೋವು ಅನುಭವಿಸಿದ್ದು ಕೂಡಾ ಇದಕ್ಕೆ ಕಾರಣವಾ? ಹೊಟ್ಟೆ ನೋವು ಭಟ್ಟರನ್ನು ತನ್ನೆಡೆಗೆ ದೂಡದಿದ್ದು ಕಾರಣವಾ? ಗೊತ್ತಿಲ್ಲ. ಎಷ್ಟೇ ಹೊಟ್ಟೆ ಉರಿ ಇದ್ದರೂ ಬೇಬಿ ಭಟ್ಟರ ಮನೆಯ ಕೆಲಸ ಬಿಡಲಿಲ್ಲ.

ಭಟ್ಟರು ಸ್ವಲ್ಪ ಲೆಕ್ಕಾಚಾರದ ಜನ. ಅದಿಕೆ ತೋಟದ ಫಸಲೇ ಇರಲಿ, ಕಾಳು ಮೆಣಸಿನ ಫಸಲೇ ಇರಲಿ ಮೊದಲೇ ಎಸ್ಟಿಮೇಟ್ ಮಾಡಿ ಇಟ್ಟು ಖರ್ಚು ತೂಗಿಸಿ ಹಣ ಉಳಿಸುತ್ತಿದ್ದರು ಈಶಜ್ಜ. ಇವರ ನಡೆ ನುಡಿಯ ಕಡೆಗೆ ನನಗಿದ್ದ ವಿಶಿಷ್ಠ ಆಕರ್ಷಣೆ ನನಗೆ varianace analysis ಕಲಿಯಲು ಬಹಳ ಸಹಾಯಕವಾಯಿತು. ಮಹಾ ಬೋರಿನ ಪಾಠಗಳು ನನಗೆ ಆಕರ್ಷಣೀಯವಾಗಿ ಕಂಡವು. ಮೊನ್ನೆಯ ಬೇಸಿಗೆಯಲ್ಲಿ ಈಶಜ್ಜನ ಮನೆಗೆ ಹೋಗಿದ್ದೆ. ಈಶಜ್ಜನಿಗೆ ಅದೇನೋ ಚಡಪಡಿಕೆ. ಅವರ ಮಗ, ತಿರುಮಲ ಹೇಳಿದ, "ನೋಡು ಮಾರಾಯ ಅಪ್ಪಯ್ಯನ ಲೆಕ್ಕಾಚಾರ ಗೇರು ಹಕ್ಕಲಿನ ಕಡೆ ತಿರುಗಿದ್ದು. ಗೇರು ಪೀಠದ ಫಸಲು ಕಮ್ಮಿ ಆಯ್ದು ಅಂತ ತಲೆಬಿಸಿ. ಈಗ ಎಲ್ಲಾ ಚನಾಗೇ ಇದ್ದು. ಆದ್ರೂ ಹಿಂಗೆ." ಎಂದು ಗೊಣಗಿದ್ದ. ಅದಕ್ಕೆ ಅವನ ಹೆಂಡತಿ,  "ತಲೆಬಿಸಿ ಅವಕ್ಕಲ್ಲ. ನಿಮಗೆ. ಮಧ್ಯಾಹ್ನ ಬಿರು ಬಿಸಿಲಾಗೆ ಬೆಟ್ಟ ಕಾಯಕ್ಕು ಅಂತ" ಎಂದು ನಕ್ಕಿದ್ದಳು. ಹೊತ್ತು ಮಧ್ಯಾಹ್ನವಾಗಿತ್ತು. ತಿರುಮಲಣ್ಣ, "ಬಾರಾ ಮಾತಾಡ್ತ ಬೆಟ್ಟ ತಿರುಗನ" ಅಂತ ನನ್ನನ್ನು ಕರೆದು ತನ್ನ ಸಂಚಿ, ಕತ್ತಿಗಳನ್ನು ತೆಗೆದುಕೊಂಡು ಹೊರಟ.

ನೋಟ್ ಬ್ಯಾನ್, ಇಸ್ರೇಲ್, ಕಾಶ್ಮೀರ ಹೀಗೆ ಲೋಕಾಭಿರಾಮವಾಗಿ ಮಾತಾಡುತ್ತಾ ನಾವಿಬ್ಬರೂ ಗೇರು ಹಕ್ಕಲು ತಿರುಗುತ್ತಿದ್ದೆವು. ಈಶಜ್ಜನ ಕಳ್ಳತನದ ಅನುಮಾನದ ಫಲ ಇದು. ಇಬ್ಬರೂ "ಅನುಮಾನಂ ಪೆದ್ದ ರೋಗಂ" ಎನ್ನುತ್ತಾ ನಕ್ಕಿದ್ದೆವು. ಎಲ್ಲೊ ಒಂದು ಕಡೆ ಗೆಜ್ಜೆ ಸಪ್ಪಳವಾಯಿತು. ತಿರುಮಲಣ್ಣ ಚುರುಕಾದ. ನಾನು ನನ್ನ ಹರಕು ಬಾಯಿ ತೆಗೆದು, "ಮೋಹಿನಿಯನ?" ಎಂದಿದ್ದೆ. ಅವ ನಗುತ್ತಾ, "ನೋಡನ ಬಾ!! ಮೋಹಿನಿ ಆದ್ರೆ ಭಸ್ಮಾಸುರ ಇದ್ದ ಅಂದ್ರಾತು" ಎಂದು ಸಣ್ನ ಧ್ವನಿಯಲ್ಲಿ, ನನಗೆ ಮಾತ್ರ ಕೇಳುವಂತೆ ತಮಾಷೆ ಮಾಡಿದ್ದ.
ಶಬ್ದ ಬಂದ ದಿಕ್ಕಿಗೆ ಹೋದಾಗ ಕಂಡಿದ್ದು, ಹಾಲ ನಾಯಕನ ಸೊಸೆ ಭೈರಿ. ಕೈನಲ್ಲೊಂದು ಚೀಲ ಹಿಡಿದು ಗೇರು ಪೀಠಗಳನ್ನು ಕೊಯ್ದು ಸೇರಿಸುತ್ತಿದ್ದಳು. ದೈತ್ಯ ದೇಹಿ ತಿರುಮಲಣ್ಣನಿಗೆ ಕೆಂಡಾಮಂಡಲ ಸಿಟ್ಟು ಬಂದು ಮುಖ ಬೇರೆ ಕೆಂಪಾಗಿ ಬೆಂಕಿ ಸೂಸುತ್ತಿತ್ತು. ಸಿಟ್ಟಿನಲ್ಲೇ ಒಮ್ಮೆ, "ಭೈರಿ" ಎಂದು ಗುಡುಗಿದ. ಭೈರಿ ಇವನ ರೋಷಾವಿಷ್ಠ ಮುಖ ನೋಡಿ ಬೆವೆತು ಹೋದಳು. "ಸಂಕಟ! ಸಂಕಟ!" ಎನ್ನುತ್ತಾ ಬಿದ್ದು ಹೊರಳಾಡತೊಡಗಿದಳು. ಇದನ್ನು ನೋಡಿ ತಿರುಮಲಣ್ಣ ಮತ್ತಷ್ಟು ಸಿಟ್ಟಾದ. ಅಷ್ಟು ಹೊತ್ತಿಗೆ ಹೆದರಿದ್ದ ಭೈರಿ, ಅಲ್ಲಿಯೇ ಮೂತ್ರ ಮಾಡಿ ಬಿಡಬೇಕೇ?

ನಮ್ಮ ಫಜೀತಿ ಹೆಚ್ಚಿಸಲು ಅದೇ ಕಡೆ ಬೇಬಿ ಶೆಡ್ತಿ ಪ್ರವೇಶವಾಯಿತು. ತಿರುಮಲಣ್ಣನ ಮುಖ ನೋಡಿಯೇ ಆತ ಸಿಟ್ಟಾಗಿದ್ದನ್ನು ಗ್ರಹಿಸಿದ ಅವಳು, ನನ್ನಲ್ಲಿ ಬಂದಿಉ "ಅಪಿ ಎಂತ ಆಯ್ತ್" ಎಂದಳು. ನಾನು ನಡೆದಿದ್ದನ್ನು ಹೇಳಿದೆ. ಬೇಬಿ, ತನ್ನಲ್ಲಿದ್ದ ಎಲ್ಲಾ ಸಿಟ್ಟನ್ನೂ ಬಾಯಿಗೆ ತಂದುಕೊಂಡು ಕೂಗತೂಡಗಿದಳು.

" ಹೆಣ. ಹರ್ಜಾಲಿ ಮುಂಡೆ, ನಿನ್ನ ವಾಲಿ ಕಳೂಕೆ. ಮನೆಯಂಗೆ ಗಂಡ ದುಡ್ದ್ ಹಾಕುದಿಲ್ಯಾ ನಿಂಗೆ? ನಿಂಗೆ ಇನ್ನೂ ಬೇಕಾರೆ ಎಲ್ಲಾರು ಕೆಲಸ ಮಾಡುಗೆ ಹೋಗ್. ಅದಲ್ದೆ ಕಂಡರ್ ಮನಿ ಕದೂದಾ. ಕದೀತಾ ಕದೀತಾ ನಿಂಗೆ ನಮ್ ಭಟ್ರ ಮನೆದೇ ಆಯ್ಕ?ನಿನ್ ಜನ್ಮಕೆ. ಹೆಕ್ಕ ತಿಂಬಳೆ. ಇಳಾಸ್ ತಪ್ದಳೆ ಕಂಡ್ಯಾ ಎಂತ ಆತ್ತ್ ಅಂದೇಳಿಭಟ್ಟರ ಪೀಠ ಅಂದ್ರೆ ಎಂತ ಅಂದೇಳಿ ಮಾಡೀದೆ. ಸಾಮಾನ್ಯಲ್ಲ ಅದು. ಅದು ಇಷ್ಟಾಪುಕೆ ಅವ್ರ್ ಎಷ್ಟ್ ಕಷ್ಟ ಪಟ್ಟೀರ್ ಗೊತ್ತೀತಾ ನಿಂಗೆ? ನಾ ಎಷ್ಟ್ ಕಷ್ಟು ಪಟ್ಟೀದೆ ಗೂತ್ತೀತಾ. ಹಪ್ ಹಿಡ್ದಳೆ ಭಟ್ಟರ ಪೀಠಕ್ಕೆ ಕೈ ಹಾಕಿ ಬಟ್ಟಿಯಂಗೆ ಉಚ್ಚಿ ಮಾಡ್ಕಂಬ ಪಾಡ್ ಬೇಕಿದ್ದೀತಾ ನಿಂಗೆ. ಕಾಣ್ ಭಟ್ರ ಪೀಠಕ್ಕೆ ಕೈ ಹಾಕಿ ಎಂತ ಆಯ್ತ್ ಅಂತ. ಮತ್ತೆ ಬೇಕಾ ನಿಂಗೆ ಭಟ್ರ ಪೀಠ? ಲಾಯ್ಕ್ ಜೋಲೂದ್ ನಿಂಗೇ ಅಂದೇಳಿ ಯಾರ್ ಹೇಳುದ್. ಹೋಗೆ ಹೆಕ್ಕ ತಿಂಬಳೆ. ಒಟ್ಟು ಭಟ್ಟರ ಪೀಠಕ್ಕೆ ಕೈ ಹಾಕಿ ಉಚ್ಚಿ ಮಾಡೂ ಕತಿ ಆಯ್ತ್. ನಾ ಬಿಡೂದಿಲ್ಲ. ಊರೆಲ್ಲ ಹೇಳ್ತೆ. ಭಟ್ಟರ್ ಪೀಠಕ್ಕೆ ಕೈ ಹಾಕಿ ಭೈರಿ ಉಚ್ಚಿ ಮಾಡ್ಕಂಡಿದಾಳ್ ಅಂತ....." ಎಂದೂ ಇನ್ನೂ ಏನೇನೋ ಬೈದಳು. ಅವಮಾನವಾಗಿದ್ದ ಭೈರಿ ಮಾತಾಡದೆ ಮನೆ ಕಡೆ ಹೋದಳು. ಇದೆಲ್ಲಾ ಕೇಳುತ್ತಿದ್ದ ನನಗೆ ನಗು ಬಂದರೂ ತಡೆದುಕೊಂಡೆ.

ಅಷ್ಟರಲ್ಲಿ ತಿರುಮಲಣ್ಣ "ಬೇಬಿ, ನೀ ಎಂತ ಮಾಡ್ತಿದ್ಯೆ ಇಲ್ಲಿ" ಎಂದ.

"ಮನಿ ಕಡಿ ಹಂಗೇ ಬೇಜಾರಾಯ್ತ್. ಸ್ವಲ್ಪ ಕಾಲಾಡ್ಸಿ ಹ್ವಾಪ ಅಂದೇಳಿ ಬಂದೆ" ಎನ್ನುತ್ತಾ ಬಿರಬಿರನೆ ನಡೆದಳು ಬೇಬಿ. ನಾನು ಮತ್ತು ತಿರುಮಲಣ್ಣ ಇಬ್ಬರೂ ಆಕೆ ಮುಚ್ಚಿಡಲು ಪ್ರಯತ್ನಿಸುತ್ತಿದ್ದ ಚೀಲವನ್ನು ಗಮನಿಸಿಯೂ ಗಮನಿಸದಂತೆ ನಿತ್ತಿದ್ದೆವು.

ತಿರುಮಲಣ್ಣ, "ನೋಡಾ ಮಾರಾಯ. ಒಂದು ಕಳ್ಳನ್ನ ಹಿಡಿಯಕ್ಕೆ ಬಂದು ಇಬ್ಬರು ಸಿಕ್ಕಿದ ಹಂಗಾತು. ಆದ್ರೆ ಬೇಬಿದು ಹರಕು ಬಾಯಿ, ಇನ್ನು ಊರೆಲ್ಲಾ ಹೇಳ್ತ. ಜನ ತಪ್ಪು ತಿಳಕತ್ತ" ಎಂದ.

"ಹೌದು ಮಾರಾಯ ಅವಳು ಭಟ್ಟರ ಪೀಠ ಅಂತ ಅಷ್ಟೇ ಹೇಳಿರೆ ಭಾರಿ ಅಪಾಯ. ಆದ್ರೂ ಒಂದ. ಭಟ್ತರ ಪೀಠಕ್ಕೆ ಭಾರಿ ಬೇಡಿಕೆ" ಎಂದೆ.

"ಹಂಗೆ ಬೆಳೆಸಿದ್ದ ಅಪ್ಪಯ್ಯ ಅದನ್ನ" ಎಂದ. ಅಷ್ಟರಲ್ಲಿ ಅವನಿಗೆ ತಾನು ಆಡಿದ ಮಾತಿನ ಡಬಲ್ ಮೀನಿಂಗ್ ನೆನಪಾಗಿ ಘೊಳ್ಳನೆ ನಕ್ಕು, "ನಿಂಗೊಂದು ಕತೆ ಸಿಕ್ಕಿದ ಹಂಗಾತು ಬಿಸಿಲು ಹೊತ್ತಾಗೆ, ಯಂಗೆ ಕಳ್ಳರು ಸಿಕ್ಕ" ಎಂದ. ನಾನು ಮಾತು ಸೇರಿಸಿ "ಹೌದು. ಭಟ್ಟರ ಪೀಠ ಸಿಗಕ್ಕು ಹೇಳಿ ಬಂದವ್ವು ಬರಿ ಕೈನಲ್ಲಿ ಹೋದ" ಎಂದೆ. ಆತನೂ ನಗುತ್ತಾ, "ಬೇಗ ಬರಿ ಕತೆನ" ಎಂದ.

ಆತ ಬೇಗ ಬರೆಯಲು ಹೇಳಿದ್ದ. ಆದರೆ ನಾನು ಬರೆಯುವ ಕಾಲ ಕೂಡಿ ಬಂದಿದ್ದು ಈಗ. ಭಟ್ಟರ ಪೀಠ ಸಾಮಾನ್ಯದ್ದಲ್ಲವಲ್ಲ ಅದಕ್ಕೇ ತಡ ಆಯಿತು.

No comments:

Post a Comment