Thursday, March 22, 2018

ವೇನನ ಮಂಥನ


ನಾವಿರುವ ಭೂಮಿಯನ್ನು ಹಲವು ಹೆಸರುಗಳಿಂದ ಕರೆಯುತ್ತಾರೆ. ಅದರಲ್ಲೊಂದು ಹೆಸರು ಪೃಥಿವೀ ಎನ್ನುವುದಾಗಿ. ಪೃಥು ಎನ್ನುವ ರಾಜನಿಂದ ಪುನ್ಃಸೃಜಿಸಲ್ಪಟ್ಟ ಕಾರಣದಿಂದ ಆಕೆಗೆ ಹೆಸರು ಬಂತಂತೆ. ರಾಜರಲ್ಲೆಲ್ಲಾ ಶ್ರೇಷ್ಠನಾದವ ಪೃಥು. ಅಲ್ಲವಾದರೆ, ಮೆದಿನಿಯ ಪುನಃಸೃಜನ ಸಾಧ್ಯವಿಲ್ಲವಲ್ಲ. ವಿಶೇಷ ಎಂದರೆ ವಂಶವಾಹಿಯ ಅನೇಕ ಗುಣಗಳ ಪ್ರಕರಣ ಪೃಥುವಿನ ಜನ್ಮದೊಂದಿಗೆ ತಳುಕು ಹಾಕಿಕೊಂಡಿದೆ. ಆದರೆ ಪ್ರಕರಣದ ಉದ್ದವೂ ಆಗಿದೆ ಸ್ವಾರಸ್ಯಕರವೂ ಆಗಿದೆ.

ಭಕ್ತಶ್ರೇಷ್ಠನಾದ ಧೃವ ಯಾರಿಗೆ ತಾನೇ ತಿಳಿದಿಲ್ಲ. ಈತನ ವಂಶದಲ್ಲೇ ಮುಂದೆ ಜನಿಸಿ ರಾಜನಾದ ಅಂಗ. ಈತನ ಹೆಂಡತಿ ಸುನೀಥೆ, ಮೃತ್ಯುವಿನ ಮಗಳು. ಅವಳೇನೂ ದುಷ್ಟೆಯಲ್ಲ. ಅಂಗನೂ ದುಷ್ಟನಲ್ಲ. ಆದರೆ ಇವರಿಬ್ಬರ ಸಮಾಗಮದಿಂದ ಹುಟ್ಟಿದ ವೇನ ಮೃತ್ಯುವಿನ ಮೊಮ್ಮಗ ಎನ್ನುವುದಕ್ಕಿಂತ ಮೃತ್ಯುವಿನ ಪ್ರತಿರೂಪದಂತಿದ್ದ ಎಂದರೆ ಸುಳ್ಳಲ್ಲ. ಅಹಂಕಾರ ಎನ್ನುವುದು ಈತನಿಗೆ ಉಸಿರಾಗಿತ್ತು. ತನ್ನ ಮೇಲೆ ತನಗೆ ಭ್ರಮೆಗಳು ಸಹಜ. ಆದರೆ ವಿಭ್ರಮೆಗಳು ಅಪರೂಪ ಮತ್ತು ಅನಾಹುತಕ್ಕೆ ದಾರಿಯಾಗುತ್ತವೆ. ವಿಕ್ಷಿಪ್ತನಾಗಿದ್ದ ವೇನನಲ್ಲಿ ದುರ್ಗುಣಗಳೊಡನೆ ಅಹಂಕಾರ ಸೇರಿಬಿಟ್ಟಿತು. ತನ್ನ ಮಾತಾಮಹನಂತೆಯೇ ಆಗಿಬಿಟ್ಟ ವೇನ. ತಾನೇ ಎಲ್ಲ ಎಂದು ಭಾವಿಸಿದ. ತನ್ನಿಂದಲೇ ಎಲ್ಲ ಎಂದು ವರ್ತಿಸತೊಡಗಿದ. ಈತನ ವರ್ತನೆ ಯಾವ ಮಟ್ಟಕ್ಕೆ ಹೋಯಿತೆಂದರೆ ಅಧರ್ಮಿ ಎನ್ನುವುದಕ್ಕಿಂತ ಪಾಷಂಡಿ ಎನ್ನುವ ವ್ಯಾಖ್ಯಾನವೇ ಈತನಿಗೆ ಸೂಕ್ತವಾದೀತು.

ಈತ ತಾನೇ ದೇವರು, ಸರ್ವಶಕ್ತ ಎಂದು ವಿಭ್ರಮಿಸತೊಡಗಿದ. ವೈದಿಕ ಆಚರಣೆಗಳನ್ನು ನಿಂದಿಸತೊಡಗಿದ. ಒಮ್ಮೆ ಋಷಿಗಳು ಯಜ್ಞ ಮಾಡುವುದಕ್ಕೆ ಅನುಮತಿ ಕೇಳಿ ಗೋಗರೆದರೂ ಅನುಮತಿ ಕೊಡಲಿಲ್ಲ. ಎಂಥಾ ಒಳ್ಳೆಯವನೂ ಕೆಟ್ಟತನ ಮಿತಿ ಮೀರಿದಾಗ ತಾಳ್ಮೆ ಕಳೆದುಕೊಳ್ಳುತ್ತಾನೆ. ಸಹಜ ಅದು. ಋಷಿಗಳು ದರ್ಭೆಯಿಂದ ಆತನನ್ನು ಕೊಂದರಂತೆ. ಇದು ಬಾಲಿಶ ವಿವರಣೆ ಎನ್ನಿಸುತ್ತದೆ ಮೇಲ್ನೋಟಕ್ಕೆ. ಆದರೆ ಋಷಿಗಳು ಯಾವುದೋ ಭಯಾನಕ ವಿಷವನ್ನು ಪ್ರಯೋಗಿಸಿರಬೇಕು ಆತನ ಮೇಲೆ. ಅಂಥಾ ವಿಷವನ್ನು ರಹಸ್ಯವಾಗಿಯೇ ಕಾಪಿಡುವುದಕ್ಕೆ ವ್ಯಾಸರು ಇಂಥದ್ದೊಂದು ವಿವರಣೆ ಕೊಟ್ಟರು ಎನಿಸುತ್ತದೆ.

ರಾಜ ಸತ್ತ ನಂತರ ಅರಾಜಕತೆಯಾಯಿತು. ಇದಕ್ಕೆ ಕಾರಣ ಋಷಿಗಳು ವೇನನನ್ನು ಕೊಂದಿದ್ದು. ಪ್ರಾಯಶ್ಚಿತ್ತ ಎನ್ನುವುದು ಎಲ್ಲಕ್ಕಿಂತ ಶ್ರೇಷ್ಠ ಎನ್ನುತ್ತವೆ ಶ್ರುತಿ ಸ್ಮೃತಿಗಳು. ನಾವು ಮಾಡಿದ ತಪ್ಪನ್ನು ನಾವೇ ಸರಿ ಮಾಡುವುದೇ ಪ್ರಾಯಶ್ಚಿತ್ತ. ವ್ಯಾಕರಣದ ಅರ್ಥ ಬೇರೆ ಇರಬಹುದು. ತಮ್ಮ ತಪ್ಪನ್ನು ಸರಿಪಡಿಸಲು ಋಷಿಗಳು ಮತ್ತೊಂದು ರಾಜನನ್ನು ಕೊಡಲೇ ಬೇಕಿತ್ತು. ರಾಜ ವೇನನಿಂದಲೇ ಮೈ ಪಡೆಯುವುದು ಕಾಲದ ಅನಿವಾರ್ಯತೆಯಾಗಿತ್ತು ಎನ್ನಿಸುತ್ತದೆ. ಇದು ಕಾಲದಲ್ಲೂ ನಿಜ ಕೆಲವು ರಾಜಕೀಯ ಪಕ್ಷಗಳಲ್ಲಿ. ಅದಕ್ಕಾಗಿ ಋಷಿಗಳು ವೇನನ ತೊಡೆಯಿಂದ ಒಬ್ಬನನ್ನು ಸೃಜಿಸಿದರು. ಆದರೆ ಆತ ರಾಜನಾಗಲು ಇರಬೇಕಾದ ಯಾವ ಅರ್ಹತೆಯನ್ನೂ ಪಡೆದಿರಲಿಲ್ಲ. ಬಹುಷಃ ವೇನನಲ್ಲಿದ್ದ ಮೃತ್ಯುವಿನ ವಂಶವಾಹಿಯಿಮ್ದ ಆತನ ಜನನವಾಗಿತ್ತೇನೋ. ಬೇರೆ ಶಬ್ದಗಳಲ್ಲಿ ಹೇಳುವುದಾದರೆ ಮೃತ್ಯುವಿನ ಡಿ.ಎನ್. ಪ್ರಭಾವ ಜಾಸ್ತಿ ಇತ್ತು.  ಏನು ಮಾಡಲಿ ಎಂದು ಕೇಳಿದಾಗ ಋಷಿಗಳು "ನಿಷೀದ" ಎಂದರು, ಸುಮ್ಮನೇ ಕುಳಿತುಕೋ ಎಂದು.

ಆದರೆ ದುರ್ಗುಣಗಳ ವಂಶವಾಹಿ ಋಷಿಗಳ ಮಾತು ಕೇಳಲಿಲ್ಲ. ಕಾಡು ಸೇರಿತು. ನಿಷಿಧನ ಸಂತಾನ ನಿಷಾಧರೆಂದು ಖ್ಯಾತರಾಗಿ, ನಿಷಿದ್ಧ ಕಾರ್ಯಗಳಾದ ಕಳ್ಳತನ ಸುಲಿಗೆಗಳನ್ನೇ ವೃತ್ತಿ ಮಾಡಿಕೊಂಡಿತು.

ಇತ್ತ ಋಷಿಗಳು ವೇನನ ಬಲಗಿಯನ್ನು ಮಥಿಸಿದರು. ಆಗ ಜನಿಸಿದವನೇ ಪೃಥು. ಈತ ಧಾರ್ಮಿಕನಾಗಿದ್ದ. ವೈನ್ಯನ ದೇಹ ಮಾಡಿದ್ದ ಇದೊಂದು ಸಾರ್ಥಕ ಕಾರ್ಯದಿಂದಲೇ ಆತ ಸ್ವರ್ಗವನ್ನು ಪಡೆದನಂತೆ.

ಬಹುಷಃ ಋಷಿಗಳು ಗಡಿಬಿಡಿಯಲ್ಲಿ ಮತ್ತೊಬ್ಬ ರಾಜನನ್ನು ಸೃಜಿಸುವ ಧಾವಂತದಲ್ಲಿ ವೇನನಲ್ಲಿರುವ ಕೆಟ್ಟ ವಂಶವಾಹಿಯನ್ನು ಗುರುತಿಸಲಿಲ್ಲ. ಅದೇ ನಿಷೀಧನ ಸೃಷ್ಟಿಗೆ ಕಾರಣವಾಯಿತು. ಅಥವಾ ಕೆಟ್ಟ ಕೊಳಕು ಪೂರ್ತಿ ಹೋಗಲಿ ಎಂದೇ ಹಾಗೆ ಮಾಡಿದರೋ ಏನೊ. ಪೃಥು ಕೂಡಾ ಹಾದಿ ತಪ್ಪದಿರಲಿ ಎಂದು ಆತನ ಮೇಲೆ ಕೆಲವು ಪ್ರಯೋಗಗಳು ನಡೆದವು. ಅವು ಮನಃಶಾಸ್ತ್ರಕ್ಕೆ ಸಂಬಂಧಿಸಿದ್ದು. ಮನಸ್ಸು ಮತ್ತು ದೇಹದ ನಡುವಿನ ಸಂಬಂಧವನ್ನು ತೋರ್ಪಡಿಸುವ ಪ್ರಕರಣ ಅದು, ಮುಂದೊಮ್ಮೆ ಬರೆಯುತ್ತೇನೆ ಅದನ್ನು. ನ್ಯೂರೋ ಲಿಂಗ್ವಿಸ್ಟಿಕ್ ಪ್ರೊಗ್ರಾಮಿಂಗ್ ಕಾಲದಲ್ಲೇ ಇತ್ತು ಅನ್ನುವುದಕ್ಕೆ ಸಾಕ್ಷಿ ಘಟನೆ.

ನಾವೂ ಕೂಡಾ ವೇನನಂತೆ ಹತ್ತು ಹಲವು ತಲೆಮಾರುಗಳ ವಂಶವಾಹಿ ಹೊತ್ತು ತಂದಿರುತ್ತೇವೆ. ಅದಕ್ಕೇ ಜೀವಮಾನವಿಡೀ ಸಿಹಿ ತಿನ್ನದವನಿಗೆ ಸಕ್ಕರೆ ಖಾಯಿಲೆ ಬರುತ್ತದೆ. ಒಳ್ಳೆ ಅಪ್ಪ ಅಮ್ಮನ ಮಕ್ಕಳು ಅಡ್ನಾಡಿಗಳಾಗುತ್ತವೆ. ಅಂದರೆ "ಬಡೆ ಬಾಪ್ ಕೆ ಬಿಗಡೆ ಔಲಾದ್" ಆಗುತ್ತವೆ. ಮಹಾನ್ ದೂರದೃಷ್ಟಿ ಹೊಂದಿದ್ದವನ ಮಗ "ಏನೋ ಆಡಲು ಹೋಗಿ ಏನು ಆಡಿದೆ ನೀನು" ಎನ್ನುವ ಅಥವಾ "ಇವನ್ಯಾರಯ್ಯಾ?!!" ಎನ್ನುವಂಥಾ ಪರಿಸ್ಥಿತಿ ತಂದುಕೊಳ್ಳುತ್ತಾನೆ.

ಜೀನ್ ಬಗ್ಗೆ ಬರೆಯಲು ಪ್ರಾರಂಭಿಸಿ ಒಂದೇ ವಾರಕ್ಕೆ ಯುಗಾದಿ ಇತ್ತು ಸಮಯದಲ್ಲಿ ಅದರ ಕುರಿತಾಗಿ ಬರೆಯುವುದೇ ಸೂಕ್ತ ಎನ್ನಿಸಿತು. ಅದಕ್ಕೇ ಬರಹವನ್ನು ಮುಂದೂಡಿದೆ.

ಯಾರಿಗಾದರೂ ಆಧಾರ ಪುರಾವೆ ಸಾಕ್ಷಿಗಳು ಬೇಕಿದ್ದರೆ ಭಾರತ ದರ್ಶನ ಪ್ರಕಾಶನದವರು ಹೊರತಂದ ವಿಷ್ಣುಪುರಾಣ ಪ್ರಥಮಾಂಶ ಅಧ್ಯಾಯ ಹದಿಮೂರನ್ನು ಓದಿ. ಸಿಗುತ್ತದೆ. ಆಧಾರ ಕೇಳುವ ಬದಲು ತಾವೇ ಕೊಟ್ಟರೆ ಬಹಳ ಒಳ್ಳೆಯದು. ನಾನೂ ಕಲಿತುಕೊಳ್ಳುತ್ತೇನೆ. ತಪ್ಪು ತಿದ್ದಿಕೊಳ್ಳಲು ಸಹಾಯವಾಗುತ್ತದೆ.

No comments:

Post a Comment