Thursday, March 15, 2018

ಯುಗಾದಿ


ಕಲಿಯುಗದ ಆರಂಭದ ದಿನವೇ ಯುಗಾದಿ ಅಂದರೆ ಚೈತ್ರ ಶುದ್ಧ ಪ್ರತಿಪದೆ. ಕಲಿ ಪ್ರವೇಶವಾದ ದಿನ ಅದು. ಯುಗ ಮೂರು ಕಳೆದು ನಾಲ್ಕನೆಯ ಯುಗದ ಆರಂಭವಾದ ನೆನಪಿಗೆ, ಯುಗದುದ್ದಕ್ಕೂ ಆಚರಿಸುವ ಪರ್ವ ಯುಗಾದಿ. ಕೆಲವು ಮಹಾನ್ ಸ್ಟೈಲಿಶ್ ಜನರ ಬಾಯಿಗೆ ಸಿಕ್ಕಿ ತುಮಕುರು ಟುಮ್ಕೂರ್. ಬೆಂಗಳೂರು ಬ್ಯಾಂಗ್ಲೋರ್ ಆದ ಹಾಗೆಯೇ ಇದೂ ಉಗಾದಿಯಾಗಿದೆ. ಕೆಲವರು ಉಗಾಡಿ ಎಂದೂ ಹೇಳುತ್ತಾರೆ. ಅವರ ಹಣೆಬರಹ ಬಿಡಿ. ಆದರೆ ಯುಗದ ಆದಿಯಾದ ದಿನ ಯುಗಾದಿಯೇ ಸರಿ. ಚಾಂದ್ರಮಾನದ ಪ್ರಕಾರ ಇದು ವರ್ಷದ  ಮೊದಲ ದಿನ. ಇದನ್ನೇ ವರ್ಷದ ಮೊದಲ ದಿನವಾಗಿ ಆಚರಿಸಲು ಕಾರಣ, ದಿನದ ಹಿಂದಿನ ದಿನ ಅಂದರೆ ಫಾಲ್ಗುಣ ಮಾಸದ ಅಮಾವಾಸ್ಯೆಯ ದಿನ ಭಗವಾನ್ ಶ್ರೀಕೃಷ್ಣ ಪರಂಧಾಮವೈದನಂತೆ, ಕಡೆ ಕಲಿಯ ಪ್ರವೇಶವಾಯಿತಂತೆ. ವಸಂತ ಋರ್ತುವಿನ ಆಗಮನ ಕಾರಣ ಎನ್ನುವ ವ್ಯಾಖ್ಯಾನಕ್ಕೆ ವ್ಯತಿರಿಕ್ತವಾದ ವ್ಯಾಖ್ಯಾನ ವಿಷ್ಣುಪುರಾಣದಲ್ಲಿದೆ.

ಪ್ರಶ್ನೆ ಬರುವುದು ಕೃಷ್ಣ ದಿನವನ್ನೇ ಕಲಿಯ ಪ್ರವೇಶಕ್ಕೆ ಏಕೆ ಬಿಟ್ಟುಕೊಟ್ಟ ಎನ್ನುವುದು. ಚಂದ್ರ ಅಶ್ವಿನೀ ನಕ್ಷತ್ರವನ್ನು ಪ್ರತಿಪದೆಯಂದು ಪ್ರವೇಶಿಸುವ ದಿನ ಇದು. ಕೇವಲ ಅಷ್ಟೇ ಆಗಿದ್ದರೆ ವಿಶೇಷವಲ್ಲ, ಕಲಿಯುಗ ಇಂದ್ರಿಯದ ಕಾಲ. ಇಂದ್ರಿಯಗಳ ಪಾತ್ರ ಹೆಚ್ಚು ಯುಗದಲ್ಲಿ. ಹಿಂದಿನ ಯುಗಗಳಂತೆ ಅಲ್ಲ. ಇಂದ್ರಿಯಗಳನ್ನು ಹತೋಟಿಯಲ್ಲಿಡಲು ಸುಲಭವಲ್ಲ ಯುಗ. ಅದಕ್ಕೇ ಸನ್ಯಾಸ, ಅಶ್ವಮೇಧ, ನಿಯೋಗ ಪದ್ಧತಿಯಿಂದ ಸಂತಾನ ಪಡೆಯುವುದು, ಶ್ರಾದ್ಧದಲ್ಲಿ ಮಾಂಸ ಭಕ್ಷಣೆ ನಿಶಿದ್ಧ ಕಲಿಯುಗದಲ್ಲಿ. ಇಂದ್ರಿಯಗಳನ್ನು ಯಮ ನಚೀಕೇತನಿಗೆ ಕಠೋಪನಿಷತ್ ಅನು ಬೋಧಿಸುವಾಗ ಆತ್ಮವೆಂಬ ರಥಕ್ಕೆ, ಮನಸ್ಸೆಂಬ ಲಗಾಮಿನಿಂದ ಕಟ್ಟಲ್ಪಟ್ಟ ಕುದುರೆಗಳು ಎಂದು ಹೇಳುತ್ತಾನೆ. ಅಶ್ವಿನಿ ಅಂದರೆ ಹೆಣ್ಣು ಕುದುರೆಯಿಂದ ಜನಿಸಿದ್ದಕ್ಕೇ ನಾಸತ್ಯ-ದಸ್ರು ಎನ್ನುವ ದೇವ ವೈದ್ಯ ದೇವತೆಗಳು ಅಶ್ವಿನೀ ದೇವತೆಗಳೆನ್ನಿಸಿಕೊಂಡಿದ್ದು.

ಜಗತ್ತಿನ ಅನುಭವವನ್ನು ಇಂದ್ರಿಯಗಳ ಮೂಲಕ ಪಡೆಯುವುದು ಚಿತ್ತ. ಇಂದ್ರಿಯಗಳಿಗೆ ಜಗತ್ತಿನ ಭಾಸ ಮೂಡುವುದು ಕೂಡಾ ಚಿತ್ತದಲ್ಲಿ. ಚಿತ್ತವನ್ನು ಲಕ್ಷೋಪಲಕ್ಷ ಕಣಗಳಾಗಿ ಒಡೆದು, ಒಂದೊಂದು ಕಣವನ್ನೂ ಮತ್ತೆ ಲಕ್ಷೋಪಲಕ್ಷವಾಗಿ ಒಡೆದರೆ ಒಂದಲ್ಲ ಎಷ್ಟೋ ಜಗತ್ತನ್ನು ಚಿತ್ತದಲ್ಲಿಡಬಹುದು. ಹೀಗೆಂದು ವಸಿಷ್ಠರು ರಾಮನಿಗೆ ಹೇಳುತ್ತಾರೆ ಯೋಗವಾಸಿಷ್ಠದಲ್ಲಿ. ಚಿತ್ತವೇ ಮನಸ್ಸಿನ ನಿಯಂತ್ರಣವನ್ನು ಮಾಡಬೇಕು.

ಇನ್ನು ಚಂದ್ರ ಮನಸ್ಸಿನೊಡೆಯ. ಚಂದ್ರಮಾ ಮನಸೋ ಜಾತಃ ಎನ್ನುತ್ತದೆ ಪುರುಷ ಸೂಕ್ತ. ಇಲ್ಲಿನ ವ್ಯಾಖ್ಯಾನ ಬಹಳ ಚಂದ. ಚಂದ್ರಮಾ ಎಂದರೆ ಸಂತೋಷವನ್ನು ಕೊಡುವವ ಎಂದರ್ಥ. ಮನಸ್ಸು ಸದಾ ಸಂತೋಷವನ್ನೇ ಬಯಸುತ್ತದೆ. ನಮ್ಮ ಸಂತೋಷ ಅಸಂತೋಷಗಳಿಗನುಗುಣವಾಗಿಯೇ ಮನಸ್ಸು ವ್ಯವಹರಿಸುತ್ತದೆ. ಇದಕ್ಕೇ ಇರಬೇಕು ಚಂದ್ರನನ್ನು ಮನೋಕಾರಕ ಎಂದಿದ್ದು.

ಚೈತ್ರ ಶುದ್ಧ ಪ್ರತಿಪದೆಯ ದಿನ, ಅಶ್ವಿನೀ ನಕ್ಷತ್ರದಲ್ಲಿ ಚಂದ್ರ ಪ್ರವೇಶಿಸುತ್ತಾನೆ. ಬೆಳೆಯುತ್ತಾ ಚಿತ್ತಾ ನಕ್ಷತ್ರದಲ್ಲಿ ಪೂರ್ಣವಾಗುತ್ತಾನೆ. ಚಿತ್ತಾ ನಕ್ಷತ್ರದಂದು ಹುಣ್ಣಿಮೆ ಬರುವ ಕಾರಣದಿಂದಲೇ ಇದನ್ನು ಚೈತ್ರ ಮಾಸ ಎಂದು ಕರೆದದ್ದು. ಚಿತ್ತವನ್ನು ಪ್ರವೇಶಿಸಿದ ಮನಸ್ಸು ಕೊನೆಗೆ ಹ್ರಾಸವಾಗುತ್ತಾ ಇಲ್ಲವಾಗುತ್ತದೆ. ಚಂದ್ರ ಅಮಾ ಎನ್ನುವ ಸೂರ್ಯ ಕಿರಣವನ್ನು ಸೇರಿ ಮರೆಯಾಗುತ್ತಾನೆ. ಅಂದರೆ, ಇಂದ್ರಿಯಗಳನ್ನು ಪ್ರವೇಶಿಸಿದ ಮನಸ್ಸು ಚಿತ್ತದಲ್ಲಿ ಪೂರ್ಣವಾಗಿ ನೆಲೆಗೊಂಡು ಕೊನೆಗೆ ಇಲ್ಲವಾಗುತ್ತದೆ. ಇದೇ ಸ್ಥಿತಿಯನ್ನು ಅಂದರೆ ಮನಸ್ಸು ಇಲ್ಲವಾಗುವ ಸ್ಥಿತಿಯನ್ನೇ 'ಆನಂದ' ಎಂದು ಕರೆಯುವುದು. ಶ್ರೀ ಶ್ರೀಧರಸ್ವಾಮಿಗಳು ಅವರ ಪ್ರವಚನದಲ್ಲಿ ಎರಡು ಯೋಚನೆಗಳ ಮಧ್ಯದ ಸ್ಥಿತಿಯೇ ಆನಂದ ಎಂದು ಹೇಳಿದ್ದಾರೆ. ಓಷೋ ಕೂಡಾ ಮೌನವನ್ನು ಆನಂದಿಸಿ ಎಂದು ಹೇಳಿದ್ದು ಇದೇ ಅರ್ಥದಲ್ಲಿ.

ಕಲಿಯುಗದಲ್ಲಿ ಇಂದ್ರಿಯಾನುಭವಗಳನ್ನು ಪಡೆದೂ, ಅದರಲ್ಲಿ ನಾವು ಇಲ್ಲದಂತಾಗಿ ಇರಬೇಕು. ಇದೇ ಶ್ರೀಕೃಷ್ಣ ಬೋಧಿಸಿದ ನಿಷ್ಕಾಮ ಕರ್ಮ. ತನ್ನ ಬೋಧೆಯನ್ನು ನಮಗೆ ತಿಳಿಸಿ, ಅದನ್ನು ಶಾಶ್ವತವಾಗಿರಿಸಲು ಕೃಷ್ಣ ಫಾಲ್ಗುಣ ಬಹುಳ ಅಮಾವಾಸ್ಯೆಯ ದಿನ ಪರಂಧಾಮವನ್ನು ಹೊಂದಿದನೇ?

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. In advance.


No comments:

Post a Comment