Thursday, March 8, 2018

ವಂಶವಾಹಿ

ಜೀನ್ ಮಾಡಿಫ಼ಿಕೇಷನ್- ಇಂಥದ್ದೊಂದು ಶಬ್ದ ಅತಿಯಾಗಿ ಕೇಳಿ ಬರುತ್ತಿದೆ ಇತ್ತೀಚಿನ ದಿನಗಳಲ್ಲಿ. ಜೀವಿಗಳ ಅದೆಷ್ಟೋ ರೋಗಗಳಿಗೆ-ಸಮಸ್ಯೆಗಳಿಗೆ ಕಾರಣ ಜೀನ್ ಅಂದರೆ ವಂಶವಾಹಿ ಕಾರಣವಂತೆ. ನಮ್ಮ ರೂಪ, ಎತ್ತರ, ದಪ್ಪ, ತೂಕ, ಆಳ್ತನ, ಆಕಾರ ಎಲ್ಲಾ ವಂಶವಾಹಿಯ ಮೇಲೆಯೇ ನಿರ್ಭರವಾಗುತ್ತದೆ. ನಮ್ಮ ಸ್ವಭಾವಗಳು ಕೂಡ. ನಮ್ಮ ಸಿಟ್ಟು-ಸೆಡವು, ಹಾರಾಟ-ಕುಣಿದಾಟ, ಇಷ್ಟ-ಅನಿಷ್ಟ ಇವೆಲ್ಲವೂ ವಂಶವಾಹಿಯದ್ದೇ ಪ್ರಭಾವ. ನಮ್ಮ ಕೆಲವು ಅಭ್ಯಾಸ ಹವ್ಯಾಸಗಳು ಕೂಡಾ ವಂಶವಾಹಿಯದ್ದೇ ಕೊಡುಗೆ.

ವಂಶವಾಹಿಗಳು ಎಲ್ಲಾ ಜೀವಿಗಳಲ್ಲಿ ಅಂದರೆ- ಪ್ರಾಣಿಗಳು, ಸಸ್ಯಗಳು, ಕೀಟಗಳು, ಶಿಲೀಂಧ್ರ ಎಲ್ಲದರಲ್ಲೂ ಇರುತ್ತವೆ. ವಂಶವಾಹಿ ಒಂದು ರೀತಿಯ ನೀರಿನಂತೆ, ರೈಲಿನಂತೆ. ಒಳ್ಳೆಯದು ಕೆಟ್ಟದು ಎಂಬ ಭೇದ ಇದಕ್ಕಿಲ್ಲ. ಕೆಲವು ರೋಗಗಳನ್ನು ಕೂಡಾ ಹೊತ್ತು ತರುತ್ತವೆ. ಅಸ್ತಮಾ, ಮಧುಮೇಹ ಇದಕ್ಕೆ ಉದಾಹರಣೆ. ಇದನ್ನುಂಟು ಮಾಡುವ ಜೀನ್ ಅನ್ನೇ ಬದಲಾಯಿಸುವುದು ಜೀನ್ ಮಾಡಿಫ಼ಿಕೇಷನ್ ಹಿಂದಿನ ಸನ್ನಾಹ-ಯೋಚನೆ-ಹುನ್ನಾರ. ವ್ಯಕ್ತಿಯೊಬ್ಬ ದಡ್ಡನಾಗಿದ್ದರೆ ಜೀನ್ ಮಾಡಿಫ಼ಿಕೇಷನ್ ಬಳಸಿ ಅವನನ್ನು ಬುದ್ಧಿವಂತನನ್ನಾಗಿಸಬಹುದಂತೆ. ಅಲರ್ಜಿಗಳನ್ನು ಕಳೆಯಬಹುದಂತೆ ಇದರಿಂದ. ಕುಳ್ಳನನ್ನು ಎತ್ತರ ಮಾಡಬಹುದಂತೆ. ಸ್ಥೂಲಕಾಯ ಹೊಂದಿದ್ದವನನ್ನು ಸಣಕಲನನ್ನಾಗಿಸಬಹುದಂತೆ. ಸಾಧು ಸ್ವಭಾವದವ ಒಬ್ಬ ಹಿಟ್ಲರ್ ಆಗಬಲ್ಲ, ಜೀನ್ ಮಾಡಿಫ಼ಿಕೇಷನ್ನಿನಿಂದ.

ನಮ್ಮ ಪುರಾಣಗಳಲ್ಲಿ ಬರುವ ಕೆಲವು ಪ್ರಕರಣಗಳು ಜೀನ್ ಮಾಡಿಫ಼ಿಕೇಷನ್ ಕಾಲದಲ್ಲೇ ತಿಳಿದಿತ್ತು ಅದೂ ಕೇವಲ ಸಾಧಕರಾಗಿದ್ದ, ಲೋಕ ಹಿತಾಕಾಂಕ್ಷಿಗಳಾಗಿದ್ದ ಋಷಿ ಮುನಿಗಳಿಗೆ ಮತ್ತು ಲೋಕ ಹಿತಕ್ಕಾಗಿ ಇದ್ದ ದೇವತೆಗಳಿಗೆ. ಇಲ್ಲವಾದರೆ ಅಲ್ಲಿ ಬರುವ ಕೆಲವು ಪ್ರಕರಣಗಳನ್ನೇ ನೋಡಿ. ಯಯಾತಿ ಇದ್ದಕ್ಕಿದ್ದಂತೆ ಮುದುಕನಾದ; ಮತ್ತೆ ಯೌವ್ವನವನ್ನು ಪಡೆದ. ವೃತ್ರಾಸುರ ಎನ್ನುವವನನ್ನು ಆತನ ತಂದೆ ಪಡೆದಿದ್ದೇ ಇಂದ್ರನನ್ನು ಕೊಲ್ಲುವ ಸಲುವಾಗಿಯಂತೆ. ಆದರೆ ಸರಸ್ವತಿ, ಮಂತ್ರೋಚ್ಛಾರಣೆಯ ಸಮಯದಲ್ಲಿ ಸ್ವರ ಲೋಪ ಮಾಡಿಸಿ, ಇಂದ್ರನನ್ನು ಕೊಲ್ಲುವ ಮಗ ಹುಟ್ಟಲಿ ಎಂಬರ್ಥದ ಬದಲು ಇಂದ್ರನಿಂದ ಕೊಲ್ಲಲ್ಪಡುವ ಮಗ ಜನಿಸಲಿ ಎಂಬಂತೆ ಮಾಡಿದಳಂತೆ. ಹಿರಣ್ಯ ಕಶ್ಯಪನ ಮಗ ಮಹಾನ್ ಹರಿ ಭಕ್ತ ಪ್ರಹ್ಲಾದನಾಗಿದ್ದು ಕೂಡಾ ಜೀನ್ ಮಾಡಿಫ಼ಿಕೇಷನ್ನಿನ ಪರಿಣಾಮ. ಕುಂತಿಯನ್ನು ನೋಡಿ. ಧಾರ್ಮಿಕನಾದ ಸಂತಾನಕ್ಕೆ ಯಮನನ್ನು, ಬಲಕ್ಕೆ ವಾಯುವನ್ನು ಕೇಳಿದ್ದಳು. ಅಂದರೆ ವಂಶವಾಹಿಗಳು ಭಿನ್ನ ಭಿನ್ನ ಎನ್ನುವುದು ಕಾಲಕ್ಕೆ ತಿಳಿದಿತ್ತು ಎನ್ನಲು ಸಾಕಲ್ಲವೇ. ಇಂಥಾ ಎಷ್ಟೋ ಕತೆಗಳಿವೆ ಬಿಡಿ ಅಲ್ಲಿ.

ಮಂತ್ರಗಳಿಂದ ಏನು ಸಾಧನೆಯಾದೀತು ಎನ್ನುವವರಿಗೂ ಇದೇ ಉತ್ತರ. ಮಂತ್ರಗಳ ಉಚ್ಛಾರದಿಂದ ಮನಸ್ಸು ತನಗೆ ತಾನೇ ಮಂತ್ರದ ಶಕ್ತಿಯ ಫಲವನ್ನು ಮನನ ಮಾಡಿಸ ತೊಡಗುತ್ತದೆ. ಮನದ ಆಳ-ಸುಪ್ತ ಮನಸ್ಸು ಇದನ್ನೊಪ್ಪಿಕೊಂಡು ಮುನ್ನಡೆಯತೊಡಗುತ್ತದೆ. ದೇಹ-ಮತ್ತು ಮನಸ್ಸುಗಳು ಒಂದಕ್ಕೊಂದು ಪೂರಕ. ಒಂದರ ಮೇಲಾದ ಕ್ರಿಯೆ ಇನ್ನೊಂದರ ಮೇಲೆ ಪರಿಣಾಮ ಬೀರುತ್ತದೆ. ಮಂತ್ರಗಳನ್ನು ಮನನ ಮಾಡಿಕೊಳ್ಳುತ್ತಾ ಹೋದಂತೆ, ನಮಗರಿವಿಲ್ಲದಂತೆ ನಮ್ಮಲ್ಲಿ ಆಗ ಬೇಕಾದ ಕೆಲಸಕ್ಕೆ ಬೇಕಾದ ಪರಿಣಾಮಗಳಾಗುತ್ತವೆ. ಆಗ ಕೆಲಸ ಸಾಧ್ಯವಾಗುತ್ತದೆ. ಹಿಪ್ನೋ ಥೆರಪಿ, ನ್ಯೂರೋ ಲಿಂಗ್ವಿಸ್ಟಿಕ್ ಪ್ರೊಗ್ರಾಮಿಂಗ್, ಸ್ಸೆಲ್ಫ್ ಅಫ಼ರ್ಮೇಷನ್ ಎಲ್ಲಾ ಮಂತ್ರಗಳಂತೆಯೇ. ಅನುಮಾನ ಇದ್ದರೆ ಜೋಸೆಫ್ ಮರ್ಫಿ ಮತ್ತು ನಾರ್ಮನ್ ವಿನ್ಸೆಂಟ್ ಪೀಲೆ ಅವರ ಪುಸ್ತಕಗಳನ್ನು ಓದಿ ನೋಡಿ.

ಹೌದು. ಮಂತ್ರಗಳಿಗೆ ನಿಯಮ ಇದೆಯಲ್ಲ ಅದು ಏಕೆ? ಎನ್ನುವ ಪ್ರಶ್ನೆ ಸಹಜ. ಯಾವುದೇ ಕೆಲಸವಾಗಲಿ ಅದನ್ನು ಮಾಡುವುದಕ್ಕೆ ಕೆಲವು ಕ್ರಮಗಳಿದ್ದೇ ಇರುತ್ತವೆ. ಅದನ್ನು ಮಾಡಲೇ ಬೇಕು ಎನ್ನುವುದು ಇದಕ್ಕೆ ಸರಳ ಉತ್ತರ. ಬಿಡಿಸಿ ಹೇಳುವುದಾದರೆ, ಮತ್ತೆ ಇಲ್ಲಿ ಮರ್ಫಿ ಎನ್ನುವ ವಿಜ್ಞಾನಿಯನ್ನು ಎಳೆತರಬೇಕು. ಆತ, ತನ್ನ ಪ್ರಯೋಗವೊಂದು ತಪ್ಪಾದಾಗ ಉದ್ಗರಿಸಿದ್ದನಂತೆ. "if there are more than one way to do anything and one of them leads to catastrophe then some or the other will do it". ಚೋದ್ಯವೆಂದರೆ, ಇದನ್ನೂ ತಪ್ಪಾಗಿ ಬದಲಾಯಿಸಿದರು. "Anything that can go wrong will go wrong" ಎಂದು. ಮರ್ಫಿಯ ನಿಯಮ ನಿಯಮಕ್ಕೇ ಸಿಕ್ಕಿ ತಪ್ಪಾಗಿದೆ ಹೀಗೆ.

ಇರಲಿ. ಹಾಗೆಯೇ ಮಂತ್ರ ಸಾಧನೆಯ ಸಮಯದಲ್ಲಿ ಕೆಲವು ತಪ್ಪುಗಳಾಗಬಹುದು. ತಪ್ಪುಗಳ ವ್ಯತಿರಿಕ್ತ ಪರಿಣಾಮಗಳನ್ನು ತಡೆಯಲು ನಿಯಮಗಳನ್ನು ತಂದರು. ಅದಕ್ಕೇ ಹೇಳುವುದು ಮಂತ್ರಗಳನ್ನು ವಿಧಿಪೂರ್ವಕವಾಗಿ ಆಚರಿಸಬೇಕು ಎನ್ನುವುದು. ಸಾಧ್ಯವಿರುವ ತಪ್ಪುಗಳನ್ನು ತಡೆಯಲೆಂದೇ ಗುರುವಿನಿಂದ ಉಪದೇಶ ಪಡೆಯಬೇಕು ಎಂದಿದ್ದು. ಹಾಗೆ ಉಪದೇಶ ಕೊಡಬೇಕಾದ ಗುರುವಿಗೂ ನಿಯಮಗಳನ್ನು ಮಾಡಿದ್ದು.

ಈಗ ಮತ್ತೆ ಮುಖ್ಯ ವಿಷಯದತ್ತ ಬರೋಣ. ಮಂತ್ರಗಳನ್ನು ಹೇಳಿದಾಗ ನಮ್ಮ ಸುಪ್ತ ಮನಸ್ಸು ಅದನ್ನು ಗ್ರಹಿಸಿ, ಅದಕ್ಕೆ ತಕ್ಕಂತೆ ನಮ್ಮಲ್ಲಿ ಕೆಲವು ಬದಲಾವಣೆಗಳನ್ನು ಮಾಡುತ್ತದೆ. ನಾವು ಬದಲಾಗತೊಡಗಿದಂತೆ ನಮ್ಮ ಸುತ್ತಮುತ್ತಲ ಆವರಣವೂ ಬದಲಾದಂತೆ ನಮಗನ್ನಿಸಿ ನಾವು ಕಾರ್ಯೋನ್ಮುಖರಾಗಲು ಸಹಾಯವಾಗುತ್ತದೆ.

 ಮಂತ್ರಗಳು ನಮ್ಮ ಉಸಿರನ್ನು ಕೂಡಾ ಲಯಬದ್ಧವಾಗಿಸುತ್ತವೆ. ಒಂದು ಮಂತ್ರಕ್ಕೆ ಇರುವ ಉಸಿರಿನ ಲಯ ಇನ್ನೊಂದಕ್ಕೆ ಇರುವುದಿಲ್ಲ. ನಿಯಮಿತವಾಗಿ ಜಪ ಮಾಡುವವರಿಗೆ ಇದು ತಿಳಿದಿದೆ. ದೇಹ ಇರುವುದೇ ಆಹಾರ ಮತ್ತು ಉಸಿರಿನ ಆಧಾರದಲ್ಲಿ. ರೀತಿಯ ಉಸಿರಿನ ಲಯಬದ್ಧತೆ ಸೂಕ್ಷ್ಮವಾಗಿ ಜೀನುಗಳನ್ನು ಬದಲಾಯಿಸುತ್ತದೆ. ನನ್ನ ಬಳಿ ಇದಕ್ಕೆ ಸಾಕ್ಷಿ ಕೇಳುವವರು ಜೀನುಗಳ ಮೇಲೆ ಮಂತ್ರದ ಪ್ರಭಾವದ ಕುರಿತು ನಡೆದ ಸಂಶೋಧನೆ ಇದ್ದರೆ ತಿಳಿಸಿ. ನನ್ನ ತಪ್ಪನ್ನು ತಿದ್ದಿಕೊಳ್ಳುತ್ತೇನೆ. ನಾನು ಮೊನ್ನೆ ಎಲ್ಲೋ 'ವಿಟ್ಠಲ' ಎನ್ನುವ ಶಬ್ದದ ಪರಿಣಾಮ ಓದಿದ ನೆನಪು. ಅದೇ ಸಾಕ್ಷಿ. ಮಂತ್ರಶಕ್ತಿ ಸಾಧಿಸಲ್ಪಡುತ್ತದೆ.

ಇನ್ನು ಕೆಲವರಿಗೆ ಮಂತ್ರದಿಂದ ಆಗಬೇಕಾದ ಕೆಲಸ ಆಗುವುದಿಲ್ಲ. ಇದಕ್ಕೆ ಜೋಸೆಫ್ ಮರ್ಫಿ ತನ್ನ ಪುಸ್ತಕವೊಂದರಲ್ಲಿ ಹೀಗೆ ಹೇಳುತ್ತಾನೆ. ಕೆಲಸ ಆಗುವುದರಿಂದ ತೊಂದರೆ ಅಥವಾ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎನ್ನುವುದನ್ನು ಸುಪ್ತ ಮನಸ್ಸು ಮೊದಲೇ ಗ್ರಹಿಸಿ ಬದಲಾವಣೆಗಳನ್ನು ಬೇರೆಡೆಗೆ ತಳ್ಳುತ್ತದೆ, ಒಳ್ಳೆಯದಕ್ಕಾಗಿ. ಒಳ್ಳೆಯ ಮಕ್ಕಳು ಬೇಕಾದರೆ ವ್ರತ ಮಾಡಬೇಕು ಎಂದಿದ್ದು, ಕೆಲಸವಾಗಲು ಇಷ್ಟು ಸಂಖ್ಯೆಯ ಜಪ ಮಾಡಿ ಎಂದೆಲ್ಲಾ ಹೇಳುವುದರ ಹಿಂದಿನ ರಹಸ್ಯ ಇದು ಇದ್ದಿರಬಹುದಾ? ಋಷಿ ಮುನಿಗಳನ್ನೇ ಕೇಳಬೇಕು!!
ಮಂತ್ರ ಸಾಧನೆ ಆಗದಿರಲು ಅದರ ಕುರಿತು ಅರೆ ನಂಬಿಕೆ ಮತ್ತು ಅಪನಂಬಿಕೆಗಳು ಕೂಡಾ ಕಾರಣ.


ವಂಶವಾಹಿಯ ಅನೇಕ ವಿಚಾರಗಳನ್ನು ಒಗ್ಗೂಡಿಸಿ ನಮ್ಮ ಶಾಸ್ತ್ರಗಳಲ್ಲಿ ಗೋತ್ರ ಎಂದು ಕರೆದಿದ್ದು. ಇದು ರಾಕ್ಷಸರ ಕೈಗೆ ಸಿಕ್ಕಿ ಆದ ಅನಾಹುತಗಳನ್ನು ನೋಡಿಯೇ ಇದನ್ನು ಗುಪ್ತವಾಗಿಟ್ಟಿದ್ದು. ಉದಾಹರಣೆ ರಾವಣ. ಅಪಾರ ಬುದ್ಧಿಶಕ್ತಿ ಮತ್ತು ದೇಹಶಕ್ತಿಯನ್ನು ಹೊಂದಿದ್ದ ಆತ ಮಾಡಿದ್ದು ಅನಾಹುತಗಳೇ. ಆದರೆ ಅದೇ ವಂಶವಾಹಿ ಪಡೆದಿದ್ದ ವಿಭೀಷಣ ಹಾಗಾಗಲಿಲ್ಲ. ಅವರಿಬ್ಬರ ಹುಟ್ಟಿನ ಹಿಂದಿನ ಕತೆಯೇ ಇದಕ್ಕೆ ಸಾಕ್ಷಿ. ರಾವಣನಂಥ ಮಗ ಬೇಕು ಎಂದೇ ಕೈಕಸೆ ಕೇಳಿದಳು ವಿಶ್ರವಸುವಿನಲ್ಲಿ. ಅಮ್ತೆಯೇ ಹುಟ್ಟಿದ ಆತ. ಅದೇ ವಿಭೀಷಣನನ್ನು ಆತ ತಾನಾಗಿ ಅನುಗ್ರಹಿಸಿದನಂತೆ, ಕೈಕಸೆಯ ಗರ್ಭ ಸುಗರ್ಭವಾಗಬೇಕೆಂದು. ಕೆಟ್ಟ ಮಕ್ಕಳ ತಾಯಿ ಎಂದು ಆಕೆ ಗುರುತಿಸಲ್ಪಡದಿರಲಿ ಎನ್ನುವ ಆಶಯದಿಂದ. ಕೈಕಸೆ, ಎರಡನ್ನೂ ಸಮಾನವಾಗಿ ಸ್ವೀಕರಿಸಿದಳು. ಎರಡೂ ಎನ್ನಿಸಿಕೊಂಡಳು.

No comments:

Post a Comment