Tuesday, April 3, 2018

ಮಂಡೂಕ ಪುರಾಣ

ರಾಮಾಯಣದಲ್ಲಿ ರಾಮನಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯತೆ ಲಕ್ಷ್ಮಣ ಮತ್ತು ಸೀತೆಯರಿಗೂ ಇದೆ. ಶ್ರೀರಾಮ ಮರ್ಯಾದಾ ಪುರುಷೋತ್ತಮನಾಗುವಲ್ಲಿ ಲಕ್ಷ್ಮಣನ ತ್ಯಾಗ ಅಪಾರ. ಶ್ರೀರಾಮನಿಗೂ ಅಷ್ಟೇ, ಲಕ್ಷ್ಮಣನ ಮೇಲೆ ಅಪಾರ ನಂಬುಗೆ. ಇದೆಲ್ಲದರ ಅನಾವರಣವಾಗುವುದು ಶ್ರೀರಾಮನಿರ್ಯಾಣ ಯಕ್ಷಗಾನ ಪ್ರಸಂಗದಲ್ಲಿ. ಇದೇ ಪ್ರಸಂಗ ಆಯೋಜನೆಯಾಗಿತ್ತು ಹಿಂದಿನ ವರ್ಷ ಮಳೆಗಾಲದಲ್ಲಿ. ಅಂದು ಯಾಜಿಯವರ ರಾಮ, ಪ್ರದೀಪ ಸಾಮಗರ ಲಕ್ಷ್ಮಣ ಮತ್ತು ವಾಸುದೇವ ಸಾಮಗರ ದುರ್ವಾಸ. ವಾಸುದೇವ ಸಾಮಗ ಮತ್ತು ರಾಮದಾಸ ಸಾಮಗರ ಒಂದು ಮುಖಾಮುಖಿಯನ್ನು ನೋಡಿದ್ದವ ನಾನು. ಪ್ರದೀಪರ ಕೆಲವು ವೇಷಗಳನ್ನೂ ನೋಡಿದ್ದೇನೆ ಹಾಗೆಯೇ ವಾಸುದೇವ ಸಾಮಗರ ಕೆಲವು ವೇಷಗಳನ್ನೂ ಕೂಡ. ಆದರೆ ಸಾಮಗ 2G ಮತ್ತು ಸಾಮಗ 3G ಮುಖಾಮುಖಿಯನ್ನು ನೋಡಿರಲಿಲ್ಲ. ಹಾಗಾಗಿ ಯಕ್ಷಗಾನಕ್ಕೆ ಹೋದೆ.

ದುರ್ವಾಸನ ಪ್ರವೇಶವಾಯಿತು. ಲಕ್ಷ್ಮಣನೊಡನೆ ಆತನ ಭೇಟಿಯೂ ಆಯಿತು. ನಾನು ನಿರೀಕ್ಷಿಸಿದ್ದ ಸನ್ನಿವೇಶ ಬಂತು. ಪ್ರದೀಪ ಲಕ್ಷ್ಮಣನ ಇಬ್ಬಂದಿತನವನ್ನು ಸೊಗಸಾಗಿ ಅಭಿನಯಿಸಿದರು. ವಾಸುದೇವ ಸಾಮಗರೂ ಕೂಡಾ ಅದಕ್ಕೆ ಜೊತೆಯಾದರು. ನಿಜವಾಗಿ ನೋಡಿದರೆ ಲಕ್ಷ್ಮಣ ಆ ಸಮಯದಲ್ಲಿ ಮಳ್ಳು ಹರಿಯುವುದೇ ಸೂಕ್ತ. ಯಾಕೆಂದರೆ ಆತ ಮಹಾಕೋಪಿಯಾದರೂ ಅವಿವೇಕಿಯಲ್ಲ. ದುರ್ವಾಸರ ಎದುರು ವಿವೇಕದ ಪ್ರದರ್ಶನ ಸಾಧ್ಯವೂ ಅಲ್ಲ ಸಾಧುವೂ ಅಲ್ಲ. ಹಾಗಾಗಿ ಲಕ್ಷ್ಮಣ ದುರ್ವಾಸರೊಡನೆ ಮಾತಾಡುತ್ತಾ ಕಾಲವನ್ನು ಕಳೆದು, ರಾಮ ತಾನಾಗಿ ಏಕಾಂತ ಭವನದಿಂದ ಹೊರಬರಲಿ ಎಂದು ಯೋಚಿಸಿ ಮಾತು ಬೆಳೆಸುತ್ತಾ ಹೋಗುತ್ತಾನೆ. ಪ್ರದೀಪರೂ ಹಾಗೆಯೇ ಮಾಡಿದ್ದರು. ಮಾತಾಡುತ್ತಾ ಆಡುತ್ತಾ, "ಗುರುಗಳೇ!! ಅಣ್ಣ ರಹಸ್ಯದ ಮಾತುಕತೆಯಲ್ಲಿದ್ದಾನೆ. ಇಬ್ಬರ ಮಾತುಕತೆಯಲ್ಲಿ ತಲೆ ಹಾಕುವವರು ಅಥವಾ ಕದ್ದು ಕೇಳಿದವರು ಮುಂದಿನ ಜನ್ಮದಲ್ಲಿ ಕಪ್ಪೆಯಾಗಿ ಹುಟ್ಟುತ್ತಾರಂತೆ. ನೀವು ಹಾಗಾಗುವುದು ಬೇಡ." ಎಂದರು. ವಾಸುದೇವ ಸಾಮ್ಗರು ಇದಕ್ಕೆ ಪ್ರತಿಯಾಗಿ, "ಇಡೀ ಗರುಡ ಪುರಾಣವನ್ನು ಓದಿದವನು ನಾನು. ಇದನ್ನೆಲ್ಲೂ ಓದಲಿಲ್ಲ" ಎಂದರು. ಅದಕ್ಕೆ ಪ್ರದೀಪ ಅವರು, "ಗುರುಗಳೇ!! ಇದು ಮಂಡೂಕ ಪುರಾಣ ಎನ್ನುವ ಗ್ರಂಥದಲ್ಲಿದೆ. ನೀವು ಇದನ್ನು ಓದಲಿಲ್ಲ ಅಂತ ಆಗಬಾರದು. ನಾನು ತೆಗೆದುಕೊಂಡು ಬರುತ್ತೇನೆ ಅಲ್ಲಿಯ ತನಕ ಕಾಯಿರಿ" ಎಂದರು. ಮುಂದಕ್ಕೆ ಪ್ರಸಂಗ ಮುಂದುವರೆಯಿತು. ಚೆನ್ನಾಗಿಯೂ ಆಯಿತು.

ನಾನು ಪ್ರಸಂಗವನ್ನು ನೆನಪಿನಲ್ಲಿಟ್ಟುಕೊಂಡು ಆಗಾಗ ಅದರ ನೆನಪುಗಳನ್ನು ಸವಿಯುತ್ತಿದ್ದೆ. ಆದರೆ ಈ ಮಂಡೂಕ ಪುರಾಣ ನನ್ನನ್ನು ಬಹಳ ಕಾಡಿಸಿಬಿಟ್ಟಿತ್ತು. ಪ್ರದೀಪರ ಹಾಸ್ಯಪ್ರಜ್ಞೆ ಅದ್ಭುತ. ಪ್ರಸಂಗಕ್ಕೆ ಧಕ್ಕೆ ತಾರದ ರೀತಿಯಲ್ಲಿ ಅದನ್ನು ಉಪಯೋಗಿಸುವ ಸೃಜನಶೀಲತೆ ನಿಜಕ್ಕೂ ಮನೋಹರ. ಹೀಗೆ ಪ್ರದೀಪರು ಹೇಳಿದ ಮಂಡೂಕ ಪುರಾಣದ ಸಂಗತಿ ಧುತ್ತನೆ ಮತ್ತೊಮ್ಮೆ ಎದುರಾಗಬೇಕೆ ನನ್ನ ಪಾಲಿಗೆ?! ಅದೂ ಪುರಾಣಗಳ ವಿಚಾರದಲ್ಲಿ ಲೇಖನವ್ಅನ್ನು ಬರೆಯತೊಡಗಿದ ಮೇಲೆ?! ವಿರೋಧಗಳನ್ನು, ಆಧಾರ ಕೇಳುವವರನ್ನು ನಾನು ನಿರೀಕ್ಷಿಸಿಯೇ ಇದ್ದೆ. ಆದರೆ, ತಮಗೊಂದು ಸ್ವಲ್ಪ ಗೊತ್ತು ಎಂದು ತೋರಿಸಲು ಹೋಗಿ ಮತ್ತೇನೋ ಒಂದನ್ನು ಹೇಳಿ ನಮ್ಮ ತಲೆಗೆ ಹುಳ ಬಿಡುವವರನ್ನು ಬರಹದಲ್ಲೂ ಎದುರಾಗಬೇಕೆಂದು ಭಾವಿಸಿರಲಿಲ್ಲ. ಅದೂ ಆಗಿಬಿಟ್ಟಿತು ನನ್ನ ಪಾಲಿಗೆ. ನಾವೇನೂ ಮಾಡುವುದಕ್ಕಾಗುವುದಿಲ್ಲ. ಇಂಥದ್ದು ನಮ್ಮ ಕರ್ಮದ ಫಲ. ನಮಗೆ ಅಧಿಕಾರ ಇರುವುದು ಕರ್ಮದಲ್ಲಿ ಪಾಲ್ಗೊಳ್ಳಲಿಕ್ಕೇ ಹೊರತು ಅದರ ಫಲದಲ್ಲಿ ಅಲ್ಲ. ಫಲ ಏನೇ ಆದರೂ ಅದನ್ನು ಸ್ವೀಕರಿಸಲೇ ಬೇಕು.

ವಿವರವಾಗಿ ಹೇಳುತ್ತೇನೆ. ಧರ್ಮನ ಹೆಂಡತಿ-ಮಕ್ಕಳು-ಮೊಮ್ಮಕ್ಕಳು ಎಲ್ಲರ ಬಗ್ಗೆ ಬರೆದಿದ್ದನಲ್ಲ, ಫ಼ೆಬ್ರವರಿ ೨೨ಕ್ಕೆ, ಅದರಲ್ಲಿ ಆಗಿದ್ದು ಈ ಮಂಡೂಕ ಪುರಾಣದ ಪುನರಾವರ್ತನೆ. ಒಂದು ಕಾಮೆಂಟ್ ಬಿತ್ತು ಪೋಸ್ಟಿಗೆ. " ನಮ್ಮ ಪುರಾಣಗಳು ತುಂಬಾ ಚಂದ. ಅದರಲ್ಲಿ ಅನೇಕ ವಿಚಾರಗಳನ್ನು ಹೇಳಿದ್ದಾರೆ. ಮಂಡೂಕ ಪುರಾಣದಲ್ಲಿ ಓಂ ಕಾರದ ಬಗ್ಗೆ ಹೇಳಿದ್ದಾರೆ. ಅದನ್ನು ಹೇಳಿ." ಇದೇನು ಅಂತಲೇ ಗೊತ್ತಾಗಲಿಲ್ಲ ನನಗೆ. ಸವಾಲಾ? ಪ್ರಶ್ನೆಯಾ ಏನು ಅಂತಲೇ ತಿಳಿಯಲಿಲ್ಲ. ಸಂತೋಷಿಸಬೇಕಾ, ತಲೆಬಿಸಿ ಮಾಡಿಕೊಳ್ಳಬೇಕಾ, ಗೊತ್ತಿಲ್ಲದ್ದನ್ನು ಹುಡುಕಬೇಕಾ, ಅಥವಾ ನನ್ನ ಇಗೋಗೆ ಬಿದ್ದ ಪೆಟ್ಟೆಂದು ಭಾವಿಸಬೇಕಾ ಅಂತಲೇ ಗೊತ್ತಾಗಲಿಲ್ಲ ನನಗೆ. ಆದರೆ ಒಂದು ಗೊತ್ತಿತ್ತು. ಹದಿನೆಂಟು ಪುರಾಣಗಳಲ್ಲಿಯೇ ಆಗಲಿ ಅಥವಾ ಉಪಪುರಾಣಗಳಲ್ಲಿಯೇ ಆಗಲಿ, ಮಂಡೂಕ ಪುರಾಣ ಎನ್ನುವುದಿಲ್ಲ ಎನ್ನುವುದು ಖಾತ್ರಿಯಾಗಿತ್ತು.ಆಗ ಮೇಲೆ ಬರೆದ ಘಟನೆ ನೆನಪಾಗಿ ಹಗುರಾದೆ. ನಕ್ಕೆ. ಪ್ರದೀಪ ಅವರೊಂದಿಗೆ ಇದನ್ನು ಹಂಚಿಕೊಂಡು ಹೇಳಿದೆ. "ಕಾಣಿ ನಿಮ್ಮ ಉಪದ್ರ" ಎಂದು. ಅವರದ್ದು ದೊಡ್ದ ಮನಸ್ಸು. ತಮಾಷೆಗೆ ಹೇಳಿದ್ದು ಎಂದು ಅರ್ಥವಿಸಿಕೊಂಡರು. ಸ್ಮೈಲಿಗಳನ್ನು ಕಳಿಸಿದರು.

ಅದಕ್ಕೇ ಕಾಮೆಂಟಿಗರಲ್ಲಿ ಕೇಳಿದೆ. "ಇದು ಹದಿನೆಂಟು ಪುರಾಣಗಳಲ್ಲಿ ಬರುತ್ತದೆಯೇ? ಮಂಡುಕೋಪನಿಷತ್ ಇರಬೇಕು" ಎಂದು ಕೇಳಿದೆ. ಉದ್ದೇಶ ಕಿಚಾಯಿಸುವುದಾಗಿರಲಿಲ್ಲ. ಎಚ್ಚರಿಸುವುದಾಗಿತ್ತು. ಎಚ್ಚರಿಕೆಯಾಯಿತು ಜನಕ್ಕೆ. ಆದರೆ ಪೂರ್ತಿಯಲ್ಲ. "ಇರಲಿ ಬಿಡಿ. ಓಂಕಾರದ ಬಗ್ಗೆ ಹೇಳಿ" ಎನ್ನುವ ಮಾರುತ್ತರ. ನನಗೀಗ ಗೊತ್ತಾಯಿತು. ಇದು ನನ್ನ ತೂಕ ನೋಡುವುದಕ್ಕೇ ಎಂದು. ನನ್ನ ತೂಕ ನನಗೆ ಗೊತ್ತು, ಆದರೆ ಮಂಡುಕೋಪನಿಷತ್ತಿನ ಓಂಕಾರದ ವ್ಯಾಖ್ಯೆ ಗೊತ್ತಿಲ್ಲ. ಅದಕ್ಕೆ "ಗೊತ್ತಿಲ್ಲ ನೀವೇ ಹೇಳಿ" ಎಂದು ಬಿಟ್ಟೆ. ಸುಲಭದಲ್ಲಿ ಮಂಡುಕೋಪನಿಷತ್ ಕಲಿಯುವ ಅವಕಾಶ ಬಿಡಲು ಮನಸ್ಸಾಗಲಿಲ್ಲ.

ಪ್ರಾಣಿ, ಆಗ ಹೇಳುತ್ತದೆ. "ಹೇಳಿದರೆ ಬಹಳಷ್ಟಿದೆ, ಸ್ವಲ್ಪ ಮಾತ್ರ ಹೇಳುತ್ತೇನೆ. ಸಮಯವಿಲ್ಲ. 'ಅ+ಉ+ಮ'". ಈ ವ್ಯಾಖ್ಯಾನ ಬೇರೆ ಉಪನಿಷತ್ತುಗಳಲ್ಲಿಯೂ ಇದೆ. ನಾನು ಓದಿದ್ದು ಕಡಿಮೆ ಆದರೆ ಒಂದರಲ್ಲಿ ಸಿಕ್ಕಿತ್ತು. ಈಗ ನನಗೆ ನಿಜಕ್ಕೂ ಕಿಚಾಯಿಸುವ ಮನಸ್ಸಾಯಿತು. ಮಂಡೂಕ ಪುರಾಣದ ಕುರಿತು ಸುಮ್ಮನೇ ಪ್ರಶ್ನೆಗಳನ್ನು ಕೇಳತೊಡಗಿದೆ. ಎಲ್ಲಿ ಸಿಗುತ್ತದೆ? ಕಾಪಿ ಇದ್ದರೆ ಕೊಡಿ ಎಂದೆಲ್ಲ ಹೇಳಿದೆ. ಹಾರಿಕೆ ಜಾರಿಕೆಯ ಉತ್ತರಗಳು ಬಂತು. ಮಜವಾಗಿತ್ತು ಅನುಭವ. ಅಂತೂ ಧರ್ಮನ ಬಗ್ಗೆ ಬರೆದು ಸಂತೋಷವೂ ಆಗಿತ್ತು ಮಜವೂ ಬಂದಿತ್ತು. ಕೊನೆಗೆ ಮತ್ತೆ ಇದನ್ನೆಲ್ಲಾ ಸ್ಕ್ರೀನ್ ಶಾಟ್ ತೆಗೆದು ಗೆಳೆಯರೊಬ್ಬರಿಗೆ ಕಳಿಸಿದೆ. ಅವರು ನಕ್ಕು ತಾವೂ ಹಗುರಾಗಿ ನನ್ನನ್ನೂ ಹಗುರಾಗಿಸಿದರು.

No comments:

Post a Comment