Thursday, April 5, 2018

ಪೃಥಿವೀ-ಜೀವ ವಿಕಸನ-ಶಿಲಾಯುಗ-ನಾಗರೀಕತೆ


ಇತಿಹಾಸವನ್ನು ಓದಲು ತೊಡಗುವುದು ಅದೂ ಇತಿಹಾಸ ಎನ್ನುವ ಹೆಸರು ಹಿಡಿದು ಬಹುಷಃ ಐದನೇ ತರಗತಿಯಲ್ಲಿ. ಅದೂ ಶಿಲಾಯುಗದಿಂದ. ಆದಿ ಮಾನವ ಚಕ್ರವನ್ನು ಕಂಡು ಹಿಡಿದ, ನಂತರ ಬೆಂಕಿಯನ್ನು ಕಂಡು ಹಿಡಿದ. ಬೇಟೆಯಾಡುತ್ತಾ ಪ್ರಾಣಿಗಳ ಮಾಂಸವನ್ನು ತಿಂದು ಬದುಕುತ್ತಿದ್ದ. ನಂತರ ಕಾಡಿನಲ್ಲಿ ಪ್ರಾಣಿಗಳ ಕೊರತೆಯಾಯಿತು, ಮಾನವ ಭಯ ಮತ್ತು ಒಂಟಿತನಗಳಿಂದ ಬಳಲಿದ. ನದೀ ತೀರಗಳತ್ತ ಮುಖ ಮಾಡಿದ. ನದೀ ಕೊಳ್ಳದ ನಾಗರೀಕತೆಯ ಆರಂಭವಾಯಿತು. ಮುಂದಿನ ಪಾಠವೇ ವೇದಗಳ ಕಾಲ. ವೇದಗಳ ಉಗಮ ಪರಿಷತ್ತು ಸಂಸತ್ತು ಇತ್ಯಾದಿಗಳ ಪಾಠಗಳು. ನಂತರ ಬೌದ್ಧ-ಜೈನ ಧರ್ಮಗಳ ಉಗಮ. ಅದಕ್ಕೆ ಕಾರಣವಾಗಿದ್ದು ಜಾತಿ ಭೇದ ಎನ್ನುವ ವಿಷಯ, ನಂತರ ಮೌರ್ಯರ ಕಾಲ. ಮುಂದಿನದ್ದು ಎಲ್ಲರಿಗೂ ಗೊತ್ತಿದೆ. ನಾನು ಹೊಸತಾಗಿ ಹೇಳುವುದಿಲ್ಲ.

ಆದರೆ ನಮ್ಮಂಥಾ ತಲೆಹರಟೆಗಳಿಗೆ ಹುಟ್ಟುವ ಪ್ರಶ್ನೆಯೇ ಬೇರೆ. ಅದಕ್ಕೆ ಉತ್ತರ ಸಿಗಬೇಕಿದ್ದರೆ ಕಾಯವೂ ಬೇಕು ಕಾಯಲೂ ಬೇಕು. ನಾವೂ ಅದಕ್ಕೆಲ್ಲಾ ಸಿದ್ಧರೇ ಯಾಕೆಂದರೆ ತಲೆಹರಟೆ ನಮ್ಮನ್ನು ಸುಮ್ಮನಿರಲು ಬಿದದೆ ಬೇರೆಯವರಲ್ಲಿ ಹೇಳಿಸಿ ಬಯ್ಯಿಸಿರುತ್ತದೆ ಹಾಗಂತ ಬಿಟ್ಟುಕೊಟ್ಟರೆ ನಮ್ಮ ತಲೆಗೆ ನಾವೇ ಕಟ್ಟಿರುವ ಪ್ರತಿಷ್ಠೆಗೆ ಧಕ್ಕೆ. ಹಾಗಾಗಿ ಎಷ್ಟೋ ಕಾಲದ ತನಕ ಬೇಕಾದರೂ ಕಾಯುತ್ತೇವೆ. ಏನು ಕೊಟ್ಟರೂ ಓದಿ, ಅದಕ್ಕೆ ಲಿಂಕ್ ಕೊಟ್ಟು ಅದು ಮತ್ತೇನೋ ಆಗಿ ನಾವು ಮತ್ತೇನೋ ಹೇಳಿ ನಗೆಪಾಟಲಾದರೂ ನಾವೀ ಪ್ರಶ್ನೆಗಳನ್ನು ಬಿಟ್ಟುಕೊಡುವುದಿಲ್ಲ. ಹೀಗೆ ನನಗೆ ಹುಟ್ಟಿದ ಪ್ರಶ್ನೆ, ಶಿಲಾಯುಗಕ್ಕೂ ಮೊದಲೇನಿತ್ತು ಎನ್ನುವುದು. ಇದಕ್ಕೆ ಪಾಪ ಡಾರ್ವಿನ್ ಎನ್ನುವ ವಿಜ್ಞಾನಿ ಉತ್ತರ ಕೊಟ್ಟಿದ್ದ. ಮಂಗ ಬಾಲ ಕಳೆದುಕೊಂಡು ನರವಾನರನಾಗಿ, ನಂತರ ಮಾನವನಾದ. ಮಾನವ ತನ್ನ ಬುದ್ಧಿಯನ್ನು ವಿಕಸಿತಗೊಳಿಸಿಕೊಂಡು ಅಂದರೆ ಮನೀಷಿಯನ್ನು ಬೆಳೆಸಿಕೊಂಡು ಮನುಷ್ಯ ಎನ್ನಿಸಿಕೊಂಡ. ಈಗ ಅನ್ನಿಸುತ್ತದೆ. "History without science has no fruit and science without history has no root" ಎನ್ನುವ ಮಾತು ಅದೆಷ್ಟು ಸತ್ಯ ಎಂದು.

ಆದರೆ, ನನ್ನ ತಲೆಹರಟೆ ಇಲ್ಲಿಗೆ ನಿಲ್ಲುವ ಬದಲು ಬೆಳೆಯಿತು. ಎಲ್ಲವನ್ನೂ ಮುಟ್ಟಿ ಚಿತ್ರಗಳನ್ನು ಕಣ್ಣೆದುರಿಗೆ ತಂದುಕೊಂಡು ಅರ್ಥವಿಸಿಕೊಂಡು ಬಿತ್ತರಿಸಲು ನಾನೇನು ಕಾರಂತರ ಮೂಕಜ್ಜಿಯಲ್ಲವಲ್ಲ. ಮಂಗ ಅಂದಿನಿಂದಲೂ ಸಸ್ಯಾಹಾರಿ. ಮಾನವನಾದ ಕೂಡಲೇ, ಮಾಂಸಾಹಾರ ಶುರು ಮಾಡಿದ್ದೇಕೆ. ಮತ್ತೆ ಸಸ್ಯಾಹರದತ್ತ ಒಲವು ಬಂದಿದ್ದು ಹೇಗೆ ಮತ್ತು ಯಾಕೆ? ಇಂದಿಗೂ ಮನುಷ್ಯನ ದೇಹದ ಅಂಗರಚನೆ ಮಾಂಸಾಹರಕ್ಕೆ ಅನುಕೂಲವಾಗಿ ಏಕಿಲ್ಲ. ಮನುಷ್ಯನ ಹಲ್ಲುಗಳಾಗಲೀ ಆತನ ಜೀರ್ಣಶಕ್ತಿಯಾಗಲೀ ಇದನ್ನು ಏಕೆ ಪ್ರಾಣಿಗಳಂತೆ ಮಾಂಸಾಹಾರವನ್ನು ಬೆಂಬಲಿಸುವುದಿಲ್ಲ?  ಮಂಗ ಬಾಲ ಕಳೆದುಕೊಂಡದ್ದು ಸರಿ ಆದರೆ ಮುಖದ ಉಬ್ಬು ಕಳೆದುಕೊಂಡಿದ್ದು ಇದ್ಯಾವ ಪರಿ? ಅಂಥಾ ದೈತ್ಯ ಆಕಾರದಲ್ಲಿದ್ದ ಮಂಗಗಳು ಕುಬ್ಜವಾಗಿ ಕೃಶರಾಗಿದ್ದೇಕೆ? ಇಂತೆಲ್ಲಾ ಪ್ರಶ್ನೆಗಳು ಮೂಡತೊಡಗಿದವು.

ಮೂಕಜ್ಜಿ ಕೆಲವು ಒಪ್ಪಬಹುದಾದ ಉತ್ತರಗಳನ್ನು ಕೊಟ್ಟರೂ ಪೂರ್ಣವಾಗಿ ಒಪ್ಪಲು ಸಾಧ್ಯವಾಗಿಲ್ಲ. ಎಲ್ಲಿಯಾದರೂ ಒಂದು ಕಡೆ ಉತ್ತರ ಸಿಕ್ಕೀತೇನೋ ಎನ್ನುವ ಆಶಾ ಭಾವನೆಯೂ ಕರಗಲಿಲ್ಲ. ಒಂದು ಆಶಾ ಭಾವನೆ, ಅದು ಸರಿಯಾದದ್ದಾದರೆ ಖಂಡಿತಾ ಈಡೇರುತ್ತದೆಯಂತೆ. ನಮಗರಿವಿಲ್ಲದೇ ನಮ್ಮ ಸುಪ್ತ ಮನಸ್ಸು ಕಡೆ ನಮ್ಮನ್ನು ಕಾರ್ಯೋನ್ಮುಖವಾಗಿಸುತ್ತದೆ ಎನ್ನುತ್ತಾನೆ ಡಾ| ಜೋಸೆಫ್ ಮರ್ಫಿ, ನನ್ನ ವಿಚಾರದಲ್ಲೂ ಬಹುಷಃ ಹೀಗೆಯೇ ಆಯಿತು.

ವೇನನ ಮರಣದ ವಿಚಾರ, ತದನಂತರದಲ್ಲಿ ನಿಷೀಧನ ಜನನ, ಪೃಥುವಿನ ಹುಟ್ಟು ಮೊದಲೇ ಹೇಳಿದ್ದನಲ್ಲ, ಆಗ ಅಲ್ಲುಂಟಾದ ರಾಜಕತೆಯ ಬಗೆಗೂ ಪ್ರಸ್ತಾಪಿಸಿದ್ದೆ. ಆದರೆ ಪ್ರಸ್ತಾಪಕ್ಕೆ ಈಗ ಮಹತ್ವ ಬಂತು ನೋಡಿ. ವೇನನ ದುಷ್ಟತನದಿಮ್ದ ಜನ ಕಂಗೆಟ್ಟಿದ್ದರು. ಆದರೆ ಅವನಿಗೆ ಹೆದರುತ್ತಲೂ ಇದ್ದರು. ದುರಾಡಳಿತದ ಪ್ರಭಾವವೇ ಹಸಿವು. ಅದಕ್ಕೆ ಕಾರಣ ದುರಾಡಳಿತದಲ್ಲಿ ಸಂಪನ್ಮೂಲಗಳ ದುರ್ಬಳಕೆ. ಪರಿಣಾಮ ಕ್ಷಾಮ. ಅದರ ಪ್ರಭಾವ ಹಸಿವು. ಹಸಿವು ಹೆಚ್ಚಿದಾಗ ಪ್ರಕ್ಷುಬ್ಧತೆಯೂ ಸಹಜ. ಪ್ರಕ್ಷುಬ್ಧತೆ, ಕೊಂಡೊಯ್ಯುವುದು ವಿನಾಶದತ್ತ. ಪ್ರಕ್ಷುಬ್ಧತೆಯಲ್ಲಿ ನಡೆಯುವ ರಕ್ತಪಾತವನ್ನೇ ಕೆಲವರು ಕ್ರಾಂತಿ ಎಂದು ಕರೆದು ಹೆಸರು ಮಾಡುತ್ತಾರೆ. ಆದರೆ ಅದು ಬಾಲಿಶತನ.

ಕ್ರಾಂತಿ ಆದರೆ ಅದು ಶಾಂತಿಯ ಉದ್ದೇಶವನ್ನು ಹೊಂದಿರುತ್ತದೆ ಮತ್ತು ಶಾಂತಿಯನ್ನು ಸ್ಥಾಪಿಸಿ ಸಾರ್ಥಕವೂ ಆಗುತ್ತದೆ. ಆದರೆ ಇಲ್ಲಿ ಅಂತಾಗಲಿಲ್ಲ. ಪ್ರಕ್ಷುಬ್ಧ ಜನರು ಲೂಟಿಗಿಳಿದರು. ಕಳ್ಳತನಕ್ಕೆ ಮುಂದಾದರು. ರಕ್ತಪಾತವೇ ನಡೆದು ಹೋಯಿತು. ಇದೇ ಬದುಕೆಂದು ಭಾವಿಸಿದರು ಕೆಲವರು. ಕಷ್ಟ ಸುಲಭಗಳ ಭೇದ ತಿಳಿಯದ ಸುಖದ ಪರಿಚಯ ಇಲ್ಲದಂತಾಗಿದ್ದ ಜನರು ಇನ್ನೇನು ತಾನೇ ಮಾಡಿಯಾರು? ದುರಾಡಲಿತದ ಫಲ ಇದೂ ಕೂಡ. ಮನಸ್ಸು ಬುದ್ಧಿಗಳೂ ಕ್ಷಾಮಕ್ಕೆ ಒಳಗಾಗಿ ಬಿಡುತ್ತವೆ. ಇಂಥಾ ಜನರು ನಿಷೀಧನನ್ನು ಅನುಸರಿಸಿದರು. ವಿಂಧ್ಯದ ಕಾಡುಗಳನ್ನು ಸೇರಿದರು.

ಇವರ ಜೀವನ ಕ್ರಮ ನಾವು ಓದಿದ ಶಿಲಾಯುಗವನ್ನೇ ಹೋಲುತ್ತದೆ. ಬೇಟೆಯೇ ಇವರ ಕಸುಬಾಗಿತ್ತು. ಗುಹೆಗಳಲ್ಲೇ ಇವರ ವಾಸ. ಕಾಡಿನಿಂದ ಕಾಡಿಗೆ ಅಲೆಯುವುದೇ ಜೀವನವಾಗಿತ್ತು. ಇವರ ಜೀವನಕಾಲದ ಪಳೆಯುಳಿಕೆಗಳನ್ನೇ ಆಧಾರವಾಗಿಸಿ ಶಿಲಾಯುಗ ಎಂದು ಕರೆದಿದ್ದಿರಬಹುದು.

ಪೃಥುವಿನ ಜನನವಾದಾಗಿನ ಪರಿಸ್ಥಿತಿಯ ವರ್ಣನೆ ಹೀಗಿದೆ.

ಓಶಧೀಷು ಪ್ರಣಷ್ಟಾಸು ತಸ್ಮಿನ್ಕಾಲೇ ಹ್ಯರಾಜಕೇ|
ತಮೂಚುಸ್ತೇ ನತಾಃ ಪೃಷ್ಟಾಸ್ತತ್ರಾಗಮನ ಕಾರಣಮ್||

ಅರಾಜಕೇ ನೃಪಶ್ರೇಷ್ಠ ಧರಿತ್ರ್ಯಾ ಸಕಲೌಷಧೀಃ|
ಗ್ರಸ್ತಾಸ್ತತಃ ಕ್ಷಯಂ ಯಾಂತಿ ಪ್ರಜಾಃ ಸರ್ವಾಃ ಪ್ರಜೇಶ್ವರಃ||

ತ್ವನ್ನೋ ವೃತ್ತಿಪ್ರದೋ ಧಾತ್ರಾ ಪ್ರಜಾಪಾಲೋ ನಿರೂಪಿತಃ|
ದೇಹಿ ನಃ ಕ್ಷುತ್ಪರೀನಾಂ ಪ್ರಜಾನಾಂ ಜೀವನೌಷಧೀಃ||

"ಅರಾಜಕವಾದ ರಾಜ್ಯದಲ್ಲಿ ಸಸ್ಯ ಸಂಪತ್ತು ಸೊರಗಿತ್ತು. ಹಸಿವೆಯಿಂದ ಬಳಲಿದ್ದ ಪ್ರಜೆಗಳು ರಾಜನಲ್ಲಿಗೆ ಬಂದರು, ರಾಜ ಆಗಮನದ ಬಗ್ಗೆ ವಿಚಾರಿಸಿದಾಗ, ಅವರು ಅಲ್ಲಿ ಅರಾಜಕತೆಯಿಂದ ಕ್ಷಾಮ ಉಂಟಾಗಿದ್ದನ್ನೂ, ರಾಜನಾದ ಆತ ಪ್ರಜೆಗಳ ಜೀವಿಕೆಗೆ ಬೇಕಾಗಿ ಸಸ್ಯಸಂಪತ್ತನ್ನು ಪುನಃಸ್ಥಾಪಿಸಬೇಕು ಎನ್ನುವುದನ್ನೂ ಬೇಡಿಕೊಂಡರು"

ಪ್ರಜೆಗಳ ದೂರನ್ನು ಕೇಳಿದ ಪೃಥು ಶಿವ ಧನುಸ್ಸಾದ ಆಜಗವವನ್ನು ಹಿಡಿದು ಭೂಮಿಯನ್ನು ಬೆನ್ನಟ್ಟಿದ. ಭೂಮಿಯ ಮೇಲೆ ಕೃದ್ಧನಾದ. ಭೂಮಿಯನ್ನು ಹೆದರಿಸಿದ. ಆದರೆ ಗೋವಿನ ರೂಪ ತಳೆದಿದ್ದ ಭೂಮಿ ಹೆದರಿದಂತೆ ನಟಿಸಿ, ಆತನಿಗೆ ಉಪಾಯವೊಂದನ್ನು ಹೇಳಿದಳು. "ಕರುವೊಂದನ್ನು ತಾ. ಸಸ್ಯ ಸಂಪತ್ತನ್ನು ಹಾಲಿನ ರೂಪದಲ್ಲಿ ನೀಡುತ್ತೇನೆ. ಇದಕ್ಕೂ ಮೊದಲು ಹಳ್ಳ ತಿಟ್ಟುಗಳಿಂದ ಕೂಡಿದ ಭೂಮಿಯನ್ನು ಸಮತಳವಾಗಿಸು. ಸಸ್ಯ ಸಮೃದ್ಧಿ ಹಾಲಾಗಿ ಎಲ್ಲಾ ಕಡೆ ಹರಿಯಲು ಅನುವು ಮಾಡಿಕೊಡು.” ಪೃಥು ತನ್ನ ಬಿಲ್ಲಿನಿಂದಲೇ ಕಾರ್ಯವನ್ನು ಸಾಧಿಸಿದ. ವೈವಸ್ವತ ಮನುವನ್ನು ಕರುವಾಗಿಸಿಕೊಂಡು ಗೋ ರೂಪಧಾರಿಣಿ ಧರಣೀದೇವಿಯಿಂದ ಸಸ್ಯ ಸಂಪತ್ತನ್ನು ಪೃಥು ಹಾಲಾಗಿ ಪಡೆದ. ಗೋರಕ್ಷಣೆ, ಕೃಷಿ ವ್ಯಾಪಾರಗಳು ಸುವ್ಯವಸ್ಥುತವಾದವು ಹೀಗೆ. ನಂತರ ಪೃಥು, ಭೂಮಿಯನ್ನು ಮಗಳಾಗಿ ಸ್ವೀಕರಿಸಿದ. ಆಕೆ ಪೃಥಿವೀ ಎನ್ನಿಸಿಕೊಂಡಳು

ಅರೆ!! ನಾವು ಓದಿದ ಶಿಲಾಯುಗದಿಂದ ನಾಗರೀಕತೆಯ ಕಡೆಗಿನ ಪಯಣಕ್ಕೂ ಇದಕ್ಕೂ ಎಷ್ಟೊಂದು ಹೋಲಿಕೆ ನೋಡಿ. ನಾವು ಓದಿದಂತೆ ನದೀ ತೀರಕ್ಕೆ ಬಂದ ಮಾನವ, ಹೈನುಗಾರಿಕೆಯಿಂದ ಮೊದಲುಗೊಂಡು, ಪಶುಪಾಲನೆ ಮತ್ತು ನಂತರದಲ್ಲಿ ಕೃಷಿ ಕೊನೆಗೆ ವಾಣಿಜ್ಯ ವ್ಯಾಪಾರದಂತೆ ಮುಖ ಮಾಡಿದ ಅಲ್ಲವೇ.

ವೇನನ ಮರಣದ ನಂತರದಿಂದ, ಮೇದಿನಿ ಪೃಥಿವೀ ಎಂದು ಕರೆಸಿಕೊಳ್ಳುವಲ್ಲಿನ ಕತೆಯೂ ನಾವು ಕಲಿತ ನಾಗರೀಕತೆಯ ಚರಿತ್ರೆಯಂತೆಯೇ ಇದೆ, ಸ್ವಲ್ಪ ಭಿನ್ನತೆಯೊಂದಿಗೆ. ಆಧುನಿಕ ಇತಿಹಾಸಜ್ಞರ ಪ್ರಕಾರ ಅನಾಗರೀಕನೊಬ್ಬ ನಾಗರೀಕನಾದ. ನಂತರದಲ್ಲಿಯೇ ನಗರಗಳ ನಿರ್ಮಾಣವಾಗಿದ್ದು. ಆದರೆ ನಮ್ಮ ಪುರಾಣಗಳ ಪ್ರಕಾರ, ನಾಗರೀಕತೆ ಹುಟ್ಟಲೂ ಇಲ್ಲ-ನಶಿಸಲೂ ಇಲ್ಲ. ನಾಗರೀಕತೆಯಿಂದ ಜನ ವಿಮುಖರಾಗಿದ್ದರು. ಜೀವನಕ್ಕೆ ಅಪಾಯ ಬಂದೊದಗಿತ್ತು. ವಿಮುಖತೆಯ ನಂತರ ಸಮರ್ಥನೊಬ್ಬ ಅಪಾಯಕ್ಕೀಡಾಗಿದ್ದ ನಾಗರೀಕತೆಯನ್ನು ಪುನಃ ದಾರಿಗೆ ತಂದ, ತರಬೇಕಿದ್ದ ರೀತಿಯಲ್ಲಿ.

ಜೀವ ವಿಕಾಸದ ಕುರಿತ ಪ್ರಶ್ನೆಗಳು ಸಮರ್ಪಕ ಉತ್ತರ ಪಡೆಯಲಿಲ್ಲ ಆದರೆ ಹೊಸ ಹೊಳಹನ್ನು ಕೊಟ್ಟಿತು. ಪ್ರಶ್ನೆಗಳಿಗೆ ಉತ್ತರ ಇಲ್ಲದಿದ್ದುದರಿಂದ ನಾನು ಒಪ್ಪುತ್ತಿಲ್ಲ. ಓಶೋ ಕೂಡ ಜೀವ ವಿಕಸನದ ಸಿದ್ಧಾಂತವನ್ನು ಒಪ್ಪಲಿಲ್ಲ. ಅನೇಕ ದಾರ್ಶನಿಕರೂ ಒಪ್ಪಲಿಲ್ಲ. ಅದನ್ನು ಸಮ್ರ್ಥಿಸಿದವರು ಉಳಿದವರ ಬಳಿ ಆಧಾರ ಕೇಳಿ ಅದನ್ನು ಮೊಂಡುವಾದದಿಂದ ತಿರಸ್ಕರಿಸುತ್ತಿದ್ದದ್ದೇ ಜೀವ ವಿಕಸನ-ಶಿಲಾಯುಗ-ನಾಗರೀಕತೆ ಸಿದ್ಧಾಂತಕ್ಕೆ ಆಧಾರವಾಯಿತು. ನಾನಂತೂ ನನ್ನ ವಾದಕ್ಕೆ ಆಧಾರ ಕೊಟ್ಟಿದ್ದೇನೆ. ಪ್ರಶ್ನಿಸುವವರು ತಾವು ಆಧಾರ ಕೊಟ್ಟರೆ ಒಳಿತು. ಮೊನ್ನೆ ಒಬ್ಬರಲ್ಲಿ ಶಿಲಾಯುಗಕ್ಕೆ ಆಧಾರ ಕೇಳಿದ್ದೆ. ಅದಕ್ಕವರು ಹಾರಿಕೆ ಜಾರಿಕೆ ಉತ್ತರ ಕೊಟ್ಟಿದ್ದರು. ಆಗ ಅನ್ನಿಸಿತು ನಾನು ಅವರಂತಾಗಬಾರದು. ಆಧಾರ ಕೊಡಲೇಬೇಕು ಎಂದು. ಆದರೆ ಬರೆಯುತ್ತಿದ್ದ ವಿಚಾರವೇ ಆಧಾರವನ್ನೂ ಒದಗಿಸಿದ್ದು ಹೇಗೆ. ದೈವಕೃಪೆ-ಗುರುಕೃಪೆಯೇ ಸರಿ ಎನಿಸುತ್ತದೆ ನನಗೆ.

No comments:

Post a Comment