Tuesday, April 24, 2018

ಮರೆವಿನ ಮಹಾತ್ಮೆ


ಸ್ವಭಾವತಃ ನಾನೊಬ್ಬ ಸೋಮಾರಿ. ಕೆಲಸಗಳ್ಳ. ಆಲಸಿ ಜೊತೆಗೆ ಮರೆಗುಳಿ ಕೂಡಾ. ನನಗೂ ಮರೆಗುಳಿ ಸ್ವಭಾವದ ಅರಿವು ಚೆನ್ನಾಗಿಯೇ ಇದೆ. ಹಾಗಂತ ಮಹಾನ್ ಮರೆಗುಳಿ ಏನಲ್ಲ. ಎಷ್ಟು ಎಂದರೆ ಫ್ರಿಡ್ಜ್ ಬಾಗಿಲು ಹಾಕದೆ ಹೋಗುವುದು. ಆಪೀಸಿಗೆ ಚಪ್ಪಲಿ ಹಾಕಿ ಹೊರಟು ಅರ್ಧ ದೂರ ಹೋದ ಮೇಲೆ ಮತ್ತೆ ಬಂದು ಬೂಟು ತೊಟ್ಟು ಹೊರಡುವುದು. ಮೊಬೈಲ್ ಫೋನ್ ಆಪೀಸಿನಲ್ಲೇ ಬಿಟ್ಟು ಬರುವುದು ಹೀಗೆ. ನಾನೇಕೆ ಮರೆಯುತ್ತೇನೆ ಎನ್ನುವ ಪ್ರಶ್ನೆ ನನಗೆ ಯಾವತ್ತೂ ಕಾಡಲೇ ಇಲ್ಲ. ಯಾಕೆಂದರೆ ನಾನದನ್ನು ಒಪ್ಪಿಕೊಂಡಿದ್ದೇನೆ.

ನನ್ನನ್ನಾಡಿಕೊಳ್ಳುವವರಿಗೆ ಇದೊಂದು ಅಸ್ತ್ರವಾಗಿದೆ. ಅದಕ್ಕೆ ಸ್ವಲ್ಪ ಬೇಸರವಿದೆ. ಆದರೆ ಅವರ ನೆನಪಿನ ಶಕ್ತಿ ಅತ್ಯದ್ಭುತ. ಯಾವುದನ್ನೋ ಯಾವುದಕ್ಕೋ ಸೇರಿಸಿಬಿಡುತ್ತಾರೆ. ನನ್ನ ಪುಣ್ಯ. ಹಾಗಾಗಲಿಲ್ಲ. ಇದರಿಂದ ನನಗೆ ಒಳ್ಳೆಯದಾಗಿದ್ದೇ ಹೆಚ್ಚು ಎಂದರೂ ತಪ್ಪಲ್ಲ. ಎಲ್ಲರೂ ಒಂದು ಪುಸ್ತಕವನ್ನು ಒಂದು ಸಲ ಓದಿ ನೆನಪಿಟ್ಟುಕೊಂಡರೆ ನಾನು ಹಲವು ಸಲ ಓದಬೇಕಾಗುತ್ತದೆ. ಪರಿಣಾಮ, ಹಲವು ದೃಷ್ಟಿಕೋನದಿಂದ ಒಂದೇ ವಿಷಯವನ್ನು ನೋಡುವ ಸುಯೋಗ ನನ್ನ ಪಾಲಿಗೆ.

ಇಂಥಾ ಮರೆವಿನಿಂದ ಒಮ್ಮೆ ಮನೆಯ ಗೀಜರ್ ಆಫ಼್ ಮಾಡದೇ ಅಪೀಸಿಗೆ ಹೋದೆ. ಅಪೀಸಿಗೆ ಹೋದ ಮೇಲೆ ನೆನಪಾಯಿತು. ಭಯವಾಗತೊಡಗಿತು. ಪರಿಣಾಮ ಕೆಲಸದ ಮೇಲೆ ಗಮನ ಕೊಡಲು ಸಾಧ್ಯವಾಗಲಿಲ್ಲ. ಆದರೂ ಸಮಾಧಾನಕ್ಕಾಗಿ ಹಲವರನ್ನು ಕೇಳಿದೆ. "ಗೀಜರ್ ಆಫ಼್ ಮಾಡದಿದ್ದರೆ ಏನು ತೊಂದರೆ?" ಎಲ್ಲರೂ ಹೇಳಿದ್ದು ಒಂದೇ. ಆಗಾಗ ಆದರೆ ತೊಂದರೆ ಇಲ್ಲ. ಅದು ತಂತಾನೇ ಆಫ಼್ ಆಗುತ್ತದೆ. ಆದರೆ ಅದರ ಹೀಟ್ ಸ್ಟಾಟ್ ಕೆಟ್ಟು ಹೋದರೆ ಕಷ್ಟ ಎಂದು. ಹಾಳಾದ ನಕರಾತ್ಮಕ ಹುಳ ತಲೆಗೆ ಬಿತ್ತು ಮತ್ತೆ. ಕೆಲಸ ಮಾಡಲು ಸಾಧ್ಯವೇ ಆಗಲಿಲ್ಲ. ಅರ್ಧ ದಿನ ರಜೆ ಹಾಕಿ ಮನೆಗೆ ಬಂದು ಗೀಜರ್ ಆಫ಼್ ಮಾಡಿದೆ.

ಮರುದಿನ ಬೆಳಿಗ್ಗೆ ಎದ್ದು ಗೀಜರ್ ಸ್ವಿಚ್ ಹಾಕಿ ಬಾತ್ ರೂಮಿಗೆ ಹೋಗಿ ಅಂತರಂಗ ಶುದ್ಧಿಗೆ ಕುಳಿತೆ. ಸ್ವಲ್ಪ ಹೊತ್ತಿನಲ್ಲೇ ಶಬ್ದಗಳು ಪ್ರಾರಂಭವಾದವು. ನನ್ನಿಂದ ಅಲ್ಲವೇ ಅಲ್ಲ. "ಗೂಂ" ಎಂದು ವಿಮಾನ ಹಾರಾಟದ ಶಬ್ದ. ರಾಮ ನಾಯಕನ ಟವೆಲ್ಲಿನಲ್ಲಿ ಗುಂಗೆ ಹುಲ ಹೊಕ್ಕ ಘಟನೆಯ ನೆನಪಾಗಿ ನಕ್ಕೆ. ಆದರೆ ನಗು ಕ್ಷಣಿಕವಾಗಿತ್ತು. ಗೀಜರ್ ಆಫ಼್ ಮಾಡದೇ ಹೋಗಿದ್ದು ನೆನಪಾಯಿತು. ಹಾಗಾದರೆ ಗೀಜರ್ ಕೆಟ್ಟಿತೇ? ನಿನ್ನೆ ಬಹಳ ಹೊತ್ತು ಆನ್ ಇದ್ದ ದುಷ್ಪರಿಣಾಮವೇ ಇದು ಎಂದು ತೀರ್ಮಾನಿಸಿ ಬಿಟ್ಟೆ. ಆದರೆ ನನಗಾದ ಭಯದ ಪರಿನಾಮವೋ ಏನೋ ಅಂತರಂಗ ಶುದ್ಧಿ ಮುಗಿಯುತ್ತಲೇ ಇಲ್ಲ. ಹಾಳಾದ ಶಬ್ದವೂ ನಿಲ್ಲುತ್ತಿಲ್ಲ. ಹೆದರಿಕೆ ಹೆಚ್ಚುತ್ತಲೇ ಇತ್ತು. ಅಷ್ಟರಲ್ಲಿ ಅಂತರಂಗ ಶುದ್ಧಿಯೂ ಮುಗಿಯಿತು. ಎದ್ದು ಹೊರಬಂದು ಗೀಜರ್ ಆಫ಼್ ಮಾಡಿದೆ. ಏನೋ ಒಂದು ದೊಡ್ಡ ಅಪಾಯ ತಪ್ಪಿಸಿದ್ದ ಸಮಾಧಾನ ಪಡೆದು ಉಸಿರು ತೆಗೆದೆ.

ಆದರೆ ಶಬ್ದ ನಿಲ್ಲುತ್ತಿಲ್ಲ. ಬದಲಾಗಿ ಜೋರಾಗುತ್ತಲೇ ಇದೆ. ಒಳ್ಳೆ ಸಮಸ್ಯೆಯಾಯಿತಲ್ಲ. ಅಷ್ಟು ಗಡಿಬಿಡಿಯಲ್ಲಿ ಅಂತರಂಗ ಶುದ್ಧಿ ಮುಗಿಸಿ ಬಂದರೂ ಹಾಳು ಶಬ್ದ ನಿಲ್ಲುತ್ತಿಲ್ಲ. ನನ್ನ ಎದೆ ಹೊಟ್ಟೆ ಎರಡರಲ್ಲೂ ಅವಲಕ್ಕಿ ಕುಟ್ಟಿದ ಅನುಭವ. ಒಟ್ಟು ಮರೆವಿಗೆ ಬೆಲೆ ತೆರಬೇಕಾಯಿತು. ಆರು ಸಾವಿರ ರೂಪಾಯಿ ಗಂಟಿಗೆ ಸಂಚಕಾರ ಬಂತು ಎಂದೇ ಭಾವಿಸಿದೆ. ಹಣೆಯ ಬರಹಕ್ಕೆ ಹೊಣೆ ಯಾರು ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಆದರೆ ಸ್ನಾನ ತಡವಾದರೆ ಕ್ಯಾಬ್ ತಪ್ಪಿಸಿಕೊಳ್ಳಬೇಕಾಗುತ್ತದೆ. ಗಡಿಯಾರದ ಮುಳ್ಳು ಮುಂದೆ ಸಾಗಿದಂತೆಲ್ಲಾ ನನ್ನ ಕಳವಲ ಹೆಚ್ಚುತ್ತಲೇ ಹೋಯಿತು. ಸ್ನಾನಕ್ಕೆ ಹೋಗದಿದ್ದರೆ ಸಾಧ್ಯವಿಲ್ಲ. ಹೋದರೆ ಅದೇ ಸಮಯದಲ್ಲಿ ಗೀಜರ್ ಸಿಡಿದರೆ ಎನ್ನುವ ಭಯ. ನಂಬಿದ ದೇವರಲ್ಲಿ ಮೊರೆ ಇಟ್ಟೆ. ಮತ್ತಿನ್ನೇನು ಮಾಡಲು ಸಾಧ್ಯ ನಮ್ಮ ಕೈ ಮೀರಿದಾಗ?

ಆಗ ಸೂಕ್ಷ್ಮವಾಗಿ ಗಮನಿಸಿದೆ. ಶಬ್ದ ನನ್ನ ಮನೆಯಿಂದ ಬರುತ್ತಿಲ್ಲ. ಹೊರಗಡೆಯಿಂದ ಬರುತ್ತಿದೆ. ಹಾಳಾಗಿ ಹೋಗಲಿ ಎಂದು ಟವೆಲ್ ಹುಡುಕಲು ಹೊರಟಿದ್ದೆ. ಅಷ್ಟರಲ್ಲಿ ಪಕ್ಕದ ಮನೆಯಿಂದ ಶಬ್ದ ಬಂತು "ಟ್ಯಾಂಕ್ ತುಂಬದೆ. ಆಫ಼್ ಮಾಡ್ಲಾ" ಎಂದು. ನಾನೆಂದುಕೊಂಡೆ ನನ್ನ ಮರೆವಿನ ಜತೆ ಇವನ ಮರೆವೂ ಸೇರಿ, ನನ್ನ ಹೊಟ್ಟೆಯಲ್ಲೇ ಅವಲಕ್ಕಿ ಕುಟ್ಟಿತಲ್ಲ, ಏನಾದರಾಗಲಿ. ಒಂದು ಲಘು ಹರಟೆಗಂತೂ ವಿಷಯ ಸಿಕ್ಕಿತು. ಹಂಚಿಕೊಂಡೆ.

No comments:

Post a Comment