Tuesday, May 22, 2018

ಮಕರಾವತಾರ


ವಿಘ್ನೇಶ್ವರ- ಇವನಿಗೆ ಹೆಸರನ್ನು ಇವನ ಅಪ್ಪ ಅಮ್ಮ ಅದು ಯಾವ ಘಳಿಗೆಯಲ್ಲಿಟ್ಟರೋ ವಿನಾಯಕನೇ ಬಲ್ಲ.  ಯಾಕೆಂದರೆ ಆತ ಗಣಪತಿಯ ಯಾವ ಒಳ್ಳೆ ಗುಣಗಳನ್ನೂ ಪಡೆಯಲಿಲ್ಲ. ಆದರೆ ವಿಘ್ನ ಉಂಟು ಮಾಡುವ ಕಲೆ ಅದು ಹೇಗೋ ಒಲಿದುಬಿಟ್ಟಿತ್ತು.ಅದೇನು  ಆತ ಬೇಕೆಂದು ಮಾಡುತ್ತಿರಲಿಲ್ಲ. ಏನೋ ಮಾಡಲು ಹೋಗಿ ಏನೋ ಆಗಿ ವಿಘ್ನ ಆಗಿ ಬಿಡುತ್ತಿತ್ತು. ಆತನಿಗೂ ಒಂದು ಜನ ಅನ್ನಿಸಿಕೊಳ್ಳಬೇಡವೇ? ಅದಕ್ಕೆ ಏನಾದರೊಂದು ಮಾಡುತಿರು ಮಂಕುತಿಮ್ಮ ಎನ್ನುವ ಕಗ್ಗವನ್ನು ತಪ್ಪಾಗಿ ಅರ್ಥವಿಸಿಕೊಂಡನೋ ಏನೋ, ಏನೋ ಒಂದು ಅಸಂಬದ್ಧವನ್ನೇ ಮಾಡುತ್ತಿದ್ದ. ಅವನ ಗ್ರಹಚಾರ.

ಹೀಗೆ ಏನಾದರೊಮ್ದು ಮಾಡುತ್ತಿರುವಾಗಲೇ ಅವನಿಗೆ ಗಣೇಶನಂತೆ ಮೂಗು ಉದ್ದವಾಗಿಬಿಟ್ಟಿತು. ಅಂದರೆ ಎಲ್ಲಾ ಕಡೆ ತಂದೆಲ್ಲಿಡಲಿ ಅಂತ ಶುರುವಾಯಿತು. ಹುಳುಕು ಮಾಡುವ ಚತ ಹತ್ತಿಬಿಟ್ಟಿತು. ಎಲ್ಲೋ ಇಟ್ಟು ಅದೌ ಕೊನೆಗೆ ಇವನ ಹತ್ತಿರವೇ ತಿರುಗಿ ಬರುತ್ತಿತ್ತು. ವಿಘ್ನೇಶ್ವರನಿಗೆ ತಲೆಬಿಸಿಯಾಗುತ್ತಿತ್ತು. ಇದೆಲ್ಲಾ ತಲೆಬಿಸಿ ಸಾಕು ಎನ್ನಿಸಿದಾಗ ಊರಿಗೆ ವಿದ್ಯಾನಂದ ಸ್ವಾಮಿಗಳು ಬಂದರು. ಜ್ಞಾನಿಗಳಾದ ಅವರ ಪ್ರವಚನ ಬಹಳ ಸೊಗಸಾಗಿರುತ್ತಿತ್ತು. ಜನರೂ ಬಹಳ ಸೇರಿತ್ತಿದ್ದರು. ವಿಘ್ನೇಶ್ವರನೂ ಹೋದ ಪ್ರವಚನ ಕೇಳಲಿಕ್ಕೆ. ಆದರೆ ಇವನಿಗೆ ಗಣಪತಿಯಂತೆ ಮೂಗು ಉದ್ದವಾದರೂ ಕಿವಿ ಅಗಲವಾಗಲೇ ಇಲ್ಲ. ಅಂದರೆ ಕೇಳುವ ಅಭ್ಯಾಸ ಬೆಳೆಯಲೇ ಇಲ್ಲ. ಪರಿಣಾಮ ಸ್ವಾಮಿಗಳು ಕೊಟ್ಟ ಪ್ರವಚನಕ್ಕೆ ತನ್ನದೇ ಒಗ್ಗರಣೆ ಸೇರಿಸಿ ತನಗೆ ಬೇಕಾದಂತೆ ಅರ್ಥವಿಸಿಕೊಂಡು ತಾನೊಂದು ಜನ ಎಂದು ಸಂಭ್ರಮಿಸುತ್ತಾ ಉಳಿದವರ ತಲೆ ತಿನ್ನುತ್ತಿದ್ದ. ಆಗಾಗ ಬಿಡುವು ಸಿಕ್ಕಿದಾಗ ಯಾವ ಹೆಂಗಸರು ಮಳ್ಳು ವೇಷ ಮಾಡಿದ್ದಾರೆ, ಯಾವ ಹೆಂಗಸರು ಸ್ಟೈಲ್ ಹೊದೆದರು ಯಾವ ಗಮ್ದಸರು ಪ್ರವಚನ ಮಾಡುವಾಗ ಕವಳ ಹಾಕಿದ್ದರು ಎಂಬೆಲ್ಲ ಹುಳುಕುಗಳೂ ನಡೆಯುತ್ತಿದ್ದವು.

ಒಂದು ದಿನ ಪ್ರವಚನದಲ್ಲಿ ಸ್ವಾಮಿಗಳು ಮತ್ಸ್ಯಾವತಾರದ ಕತೆಯನ್ನು ಹೇಳಿದರು. ಆಗ ಮಹಾಪುರುಷ, ಪಕ್ಕದಲ್ಲಿ ಕುಳಿತಿದ್ದ ಪರಮ ಭಟ್ಟರು ಮೊಬೈಲ್ ನೋಡುತ್ತಿದ್ದುದನ್ನು ಗಮನಿಸಿದ. ಮಾತ್ರ ಅಲ್ಲ, ಅವರ ತಮ್ಮ ಗಾವಿಲ ಕವಳ ಮೆಲ್ಲುತ್ತಿದ್ದುದನ್ನೂ ಗಮನಿಸಿದ. ದೂರದಲ್ಲಿ ಕುಳಿತಿದ್ದ ಬಾಲು ತನ್ನ ಕಾಲು ನೆಟ್ಟಗೆ ನೀಡಿದ್ದನ್ನು ನೋಡಿ, "ಥೋ!! ಮಳ್ಳು ದೊಡ್ಡವ್ವು ಸೇರಿದ್ದಾಗ ಹೆಂಗೆ ಕೂರಕ್ಕು ಹೇಳಿ ಗೊತ್ತಿಲ್ಲೆ. ಸಂಸ್ಕಾರ ಇಲ್ಲದಿದ್ರೆ ಹಿಂಗೇ ಆಗದು." ಎಂದು ಮನದಲ್ಲಿ ಗೊಣಗಿದ್ದ. ಮಧ್ಯೆ ಕಷಾಯ ಬಂದಾಗ ಅದನ್ನು ಹೀರುತ್ತಾ, "ಅಯ್ಯೋ ಸತ್ಯಣ್ಣನೇ!! ಸ್ವಾಮಿಗಳ ಪ್ರವಚನ ನಡೆಯಕ್ಕಿದ್ರೂ ನಿಂಗೆ ದುಡ್ಡೇ ಹೆಚ್ಚಾತಲ. ದುಡಿಮೆಯೇ ಮೇಲಾತಲ ಮಾರಾಯ. ಅಡಿಗೆ ಮನೆ ಬಿಟ್ಟು ಇಲ್ಲಿ ಕೂತು ಪ್ರವಚನ ಕೇಳಿದ್ರೆ ನಿಂಗೆಂತ ಗಂಟು ಹೋಗ್ತಿತ್ತೋ" ಎಂದು ಕೊರಗಿದ್ದ. ಅತ್ತ ಸ್ವಾಮಿಗಳ ಪ್ರವಚನ ಸಾಗುತ್ತಿದ್ದರೆ ಇತ್ತ ವಿಘ್ನೇಶ್ವರನ ಮನಸ್ಸೆಂಬ ಹುಚ್ಚು ಕುದುರೆ ಸಿಕ್ಕ ದಾರಿಗುಂಟ ಸಾಗುತ್ತ, ಊರವರ ಮೇಲೆ ಸಿಟ್ಟು ಕನಿಕರ ಖೇದ ಪಡುತ್ತಾ ಇತ್ತು. ಆದರೂ ಪ್ರವಚನ ಅಷ್ಟೋ ಇಷ್ಟೋ ನೆತ್ತಿಯ ಬಳಿ ಸಾರಿ ಹೋಗಿತ್ತು.

ಮಧ್ಯೆ ವಾಚ್ ನೋಡಿಕೊಂಡ ವಿಘ್ನೇಶ್ವರ. ಪ್ರವಚನ ಮುಗಿಯುವ ಸಮಯವಾಗಿತ್ತು. ಶಲ್ಯವನ್ನು ನೀಟಾಗಿ ಹೊದೆದು, ಗುರುಗಳಿಗೆ ನಮಸ್ಕರಿಸುವವರಲ್ಲಿ ತಾನೇ ಮೊದಲಿಗನಾಗಬೇಕು ಎನ್ನುವ ಉತ್ಕಟ ಇಚ್ಛೆ ಹೊಂದಿದ್ದ ಆತ ಕಾರ್ಯಕ್ಕೆ ಅನುವಾದ. ಪ್ರವಚನದ ಕೊನೆಯ ಸಾಲನ್ನು ಗಮನವಿಟ್ಟು ಕೇಳಿದ. ".....ಹೀಗೆ ಭಗವಂತ ವೇದಗಳನ್ನು ಉದ್ಧರಿಸುವುದಕ್ಕಾಗಿ, ಧರ್ಮವನ್ನು ಉದ್ಧರಿಸುವುದಕ್ಕಾಗಿ ಜಲಚರದ ಅವತಾರವನ್ನು ತಳೆದು ಕಾರ್ಯವನ್ನು ಸಾಧಿಸಿದ."

ಅಂದೂ ಕೂಡಾ ಮಂತ್ರಾಕ್ಷತೆ ಪಡೆಯುವವರಲ್ಲಿ ತಾನೇ ಮೊದಲಿಗನಾಗಬೇಕು ಎನ್ನುವ ಆಸೆ ಕೈಗೂಡಲಿಲ್ಲ. ಆದರೂ ಮಂತ್ರಾಕ್ಷತೆ ಪಡೆದು ಮನೆ" ಕಡೆ ಸಾಗಿದ. ಈಗ ಹೊರಗಡೆ ಹುಳುಗಳು ಗುಂಯ್ ಎನ್ನುತ್ತಿದ್ದರೆ ಇವನ ತಲೆಯಲ್ಲೂ ಯೋಚನೆ ಗುಂಯ್ ಎನ್ನುತ್ತಿತ್ತು. ಅದು ಮತ್ತೇನಲ್ಲ. ತಾನು ಇಂದಿನ ಪ್ರವಚನದಲ್ಲಿ ಏನನ್ನೂ ಸರಿಯಾಗಿ ಕೇಳಲಿಲ್ಲ ಯಾರಾದರೂ "ಹೋಯ್! ವಿಘ್ನೇಶ್ವರ, ಎಂತ ಅಂದ್ವೋ ಪ್ರವಚನದಲ್ಲಿ" ಅಂತ ಕೇಳಿದರೆ ಏನು ಮಾಡುವುದು ಎನ್ನುವ ಪ್ರಶ್ನೆ. ಆಗ ಭಗವಂತನೇ ಅವನನ್ನು ಕಾಪಾಡಿದ ಎಂದರೆ ತಪ್ಪಿಲ್ಲ. ಕೇಳಿದ ಕೊನೆಯ ವಾಕ್ಯ ನೆನಪು ಮಾಡಿಕೊಂಡು ಧೈರ್ಯ ತಂದುಕೊಂಡು ಮುಂದೆ ಸಾಗುತ್ತಿದ್ದ.

ದಾರಿ ಮಧ್ಯದಲ್ಲಿ ಸಿಕ್ಕಿಯೇ ಬಿಟ್ಟ ಮಂಜಣ್ಣ. ವಿಘ್ನೇಶ್ವರನ ಧೈರ್ಯ ಪರೀಕ್ಶಿಸಲು ದೈವವೇ ರೀತಿ ಮಾಡಿತೋ ಅಥವಾ ಕಾಕತಾಳೀಯವೋ ಗೊತ್ತಿಲ್ಲ. ಮಂಜಣ್ಣ ಕೇಳಿಯೇ ಬಿಟ್ಟ."ಹೋಯ್! ವಿಘ್ನೇಶ್ವರ, ಎಂತ ಅಂದ್ವೋ ಪ್ರವಚನದಲ್ಲಿ?"

ವಿಘ್ನೇಶ್ವರನೂ ತನ್ನ ಧೈರ್ಯ ಪ್ರದರ್ಶಿಸಿಯೇ ಬಿಟ್ಟ. "ಮಕರಾವತಾರದ ಬಗ್ಗೆ ಹೇಳಿದ್ದ"

ಮಂಜಣ್ಣ ಅವಾಕ್ಕಾದ. ತಾನು ಅಷ್ಟು ಪ್ರಸಂಗಗಳಲ್ಲಿ ಅರ್ಥ ಹೇಳಿದವ. ತಾನೇ ಕೇಳದ ಮಕರಾವತಾರ ಯಾವುದಿದ್ದೀತಪ್ಪಾ?ಯಾವುದಾದರೂ ಹೊಸ ಕತೆಯಾದರೆ, ತನಗೆ ಮುಂದಿನ ಪ್ರಸಂಗದಲ್ಲಿ ಉಪಯೋಗವಾದೀತು ಎಂದು ಮಾತಿಗಿಳಿದ. "ಒಂಚೂರು ಬಿಡಿಸಿ ಹೇಳು ಮಾರಾಯ. ಯಂಗೊತ್ತಿಲ್ಲೆ ಕತೆ." ಎಂದ.

ವಿಘ್ನೇಶ್ವರ ಮನದಲ್ಲಿಯೇ ಉಬ್ಬಿದ. ಪುರಾಣ ಕತೆಗಳನ್ನೆಲ್ಲಾ ಬಲ್ಲ ಎಂದು ಹೆಸರು ಮಾಡಿದವನ ಕಲರ್ ತನ್ನ ಎದುರಿಗೆ ಕರಗುತ್ತಿರುವುದನ್ನು ನೋಡಿ ಹೊಸ ಖದರ್ ತಂದುಕೊಂಡು ಹೇಳತೊಡಗಿದ." ಅದೇಯ. ಯಾವನೋ ರಾಕ್ಷಸ ವೇದ ಎಲ್ಲಾ ತಗಂಡು ಓಡಿ ಹೋಗಿ ಸಮುದ್ರ ಹೊಕ್ಕತ್ತ. ಆಗ ವಿಷ್ಣು ಮೊಸಳೆ ಅವತಾರ ತಳೆದು, ಅವನ್ನ ಕೊಂದು ವೇದಗಳನ್ನ ತಗಬತ್ತ. ಅದೇಯ." ಎಂದ.

"ಮಾರಾಯ ಅದು ಮತ್ಸ್ಯಾವತಾರ. ಮೊಸಳೆ ಅಲ್ಲ. ಮೀನು"

"ಹೋಯ್, ಇದೆಲ್ಲಾ ಬ್ಯಾಡ ಯನ್ನ ಹತ್ರ. ಮೀನು ಯಾರನ್ನೂ ಕೊಲ್ಲಕ್ಕೆ ಸಾಧ್ಯವೇ ಇಲ್ಲೆ ವೈಜ್ಞಾನಿಕವಾಗಿ. ಕೊಂದಿದ್ದು ಅಂದ್ರೆ ಅದು ಮೊಸಳೆಯೇ ಸೈ. ಆನೇನು ಹೆಡ್ಡ ಅಲ್ಲ."

ಪಾಪ ಮಂಜಣ್ಣ ಶಾಕ್ ಆಗಿ, ಪಕ್ಕದಲ್ಲಿದ್ದ ಮೋರಿ ಕಟ್ಟೆಯ ಮೇಲೆ ಕುಳಿತು, ಸಂಚಿಯಿಂದ ಎಲೆ ಅಡಿಕೆ ತೆಗೆದು ಒಂದು ಕವಳ ಮಾಡಿಕೊಂಡು ಬಾಯಲ್ಲಿಟ್ಟುಕೊಂಡು ವಿಘ್ನೇಶ್ವರನ ಕೈಗೆ ಸಂಚಿ ವರ್ಗಾಯಿಸಿದ. ಮನಸ್ಸಿನಲ್ಲಿಯೇ ಮಂಜಣ್ಣ ಹೇಳಿಕೊಂಡ. ಮೀನು ಅಂದರೆ ಹೊಳೆ ಕೆರೆ ಒಳಗಿಪ್ಪದಷ್ಟೇ ಅಲ್ಲ. ಅದೆಷ್ಟೋ ಮಾಂಸಾಹಾರಿ ಮೀನೂ ಇದ್ದ ಅಂತ ಇವನಿಗೆ ಗೊತ್ತಿಲ್ಲೆ. ಹೇಳನ ಅಂದ್ರೆ ಇವ ಕೂಪ ಮಂಡೂಕ. ಇನ್ನು ಊರೆಲ್ಲ ಮರ್ಯಾದೆ ತೆಕ್ಕತ್ತ ತಂದು. ಹಾಳಾಗಲಿ ಎಂದು ಸುಮ್ಮನಾದ. ರಾಕ್ ಮಾಡಿದ ವಿಘ್ನೇಶ್ವರ ಗಮ್ಮತ್ತಿನಲ್ಲಿ ತಂಬಾಕು ಜಾಸ್ತಿಯೇ ಹಾಕಿ ಕವಳ ಹಾಕಿದ. ಮಂಜಣ್ಣ ಸಮಾಧಾನಗೊಂಡ. ತಂಬಾಕಿನ ದೆಸೆಯಿಂದ ವಿಘ್ನೇಶ್ವರನ ಪುರಾಣ ತಪ್ಪಿದ್ದಕ್ಕೆ.

No comments:

Post a Comment