Tuesday, April 17, 2018

ನೂರು


ನೂರು- ಅದೊಂದು ವಿಶೇಷ ಸಂಖ್ಯೆ. ಅದರ ಬಗೆಗೆ ಎಲ್ಲರಿಗೂ ಅದೊಂದು ಸೆಳೆತ. ಯಾವುದಾದರೂ ಸಂಘವೋ ಸಂಸ್ಥೆಯೋ ನೂರು ವರ್ಷಗಳನ್ನು ಪೂರೈಸಿದರೆ ಅದೊಂದು ಸಾಧನೆಯೇ ಸರಿ. ಸಂಸ್ಥೆಯೊಂದು ನೂರು ಶಾಖೆಗಳನ್ನು ಮಾಡಿದಾಗ, ಬ್ಯಂಕುಗಳು ಮೊದ ಮೊದಲು ನೂರು ಎ ಟಿ ಎಮ್ ಗಳನ್ನು ಮಾದಿದ್ದಾಗ ಪೇಪರಿನಲ್ಲಿ ಜಾಹೀರಾತು ಕೊಟ್ಟು ಸಂಭ್ರಮಿಸಿದ್ದವು.ನಮ್ಮ ಹಾರೈಕೆಗಳೂ ಹಾಗೆಯೇ ಇರುತ್ತವೆ. ನೂರ್ಕಾಲ ಬಾಳು ಎಂದೇ ಅಲ್ಲವೇ ಹರಸುವುದು. ಆಶೀರ್ವದಿಸುವ ಮಂತ್ರವೂ ಹಾಗೆಯೇ ಇದೆ."ಶತಮಾನಂ ಭವತಿ......" ಎನ್ನುತ್ತಲೇ ಆಶೀರ್ವದಿಸುವುದು. ಬೈಕ್ ಓಡಿಸುವುದನ್ನು ಕಲಿತಾಗ, ಕಾರು ಕೊಂಡ ಹೊಸದರಲ್ಲಿ ಓಡೋ ಮೀಟರ್ ನೂರಕ್ಕೆ ಮುಟ್ಟಿಸುವ ಹುಮ್ಮಸ್ಸು- ನೂರಕ್ಕೆ ಮುಟ್ಟಿಸಿ ಕೆಲವೇ ಕ್ಷಣ ಇದ್ದರೂ ಕೂಡ ಅದೇನೋ ಸಾಧನೆ ಮಾಡಿದ ಹೆಮ್ಮೆ. "ಇವತ್ತು ನೂರರಲ್ಲಿ ಓಡಿಸಿದ್ದಿ" ಎನ್ನುವ ಹಮ್ಮು ಬಿಮ್ಮಿನ ಮಾತು ಎಲ್ಲಾ ಕಡೆ.

ಇಂದು ಮಕ್ಕಳ ವಿದ್ಯಾಭ್ಯಾಸ- ಅವರ ಬಿದ್ಧಿಮತ್ತೆಯನ್ನು ಅಳೆಯುವುದಕ್ಕೆ ಕೂಡಾ ನೂರು ಮಾನದಂಡ. ಶಾಲೆ ಕಾಲೇಜುಗಳಲ್ಲಿ ನೂರಕ್ಕೆ ನೂರು ಫಲಿತಾಂಶ ಬಂದರೆ ಅದೊಂದು ಸಂಭ್ರಮ, ಸಡಗರ. ಯಾವುದಾದರೂ ವಿದ್ಯಾರ್ಥಿ ನೂರಕ್ಕೆ ನೂರು ಅಂಕ ಗಳಿಸಿದರೆ ಅವನ, ಅವನ ಬಳಗದ ಸಂಭ್ರಮಕ್ಕೆ ಬಹುಷಃ ಆಕಾಶವೇ ಗಡಿ. 

ವ್ಯವಹಾರದಲ್ಲಿಯಂತೂ ಈ ನೂರರ ಮಾನ ಬಹಳ ಹೆಚ್ಚು. ಹಿಂದಿನ ವರ್ಷಕ್ಕೂ ಈ ವರ್ಷಕ್ಕೂ ನದುವೆ ಆದ ಪ್ರಗತಿಯನ್ನು ಅಳೆಯಲು ಶತಮಾನದ ಪದ್ಧತಿಯನ್ನೇ ಬಳಸುವುದು. ಶೇಕಡಾವಾರು ಎಷ್ಟು ಬೆಳವಣಿಗೆಯಾಗಿದೆ ಎಂದು ನೋಡುವುದು ಅಲ್ಲವೇ. ಅದೇ ರೀತಿ ವ್ಯಾಪಾರವೊಂದರ ಗಳಿಕೆ ಕೂಡಾ ನೂರರ ಆಧಾರದಲ್ಲಿಯೇ ಅಲ್ಲವೇ. ಲಾಭ, ವಹಿವಾಟಿನ ಶೇಕಡಾವಾರು ಎಷ್ಟು ಎಂದು ತಾನೇ ಕೇಳುವುದು-ಹೇಳುವುದು? ಲಾಭಾಂಶ (ಡಿವಿಡೆಂಡ್) ಕೂಡಾ ಬಂದವಾಲಕ್ಕೆ ನೂರರ ಆಧಾರದಲ್ಲಿಯೇ ವ್ಯಕ್ತ ಪಡಿಸುವುದು. ತೆರಿಗೆ ಹಾಕುವುದು ಕೂಡಾ ಈ ನೂರರ ಆಧಾರದಲ್ಲಿಯೇ ಅಲ್ಲವೇ? ಹಣಕಾಸು ಮತ್ತು ಲೆಕ್ಕಪತ್ರಗಳ ವಿದ್ಯಾರ್ಥಿಯಾದ ನನಗೆ ಈ ನೂರು ಒಂದು ರೀತಿಯಲ್ಲಿ ಬೆಂಬಿಡದ ಬೇತಾಳ-ಜೊತೆಬಿಡದ ಸಂಗಾತಿ. Financial Management ಮತ್ತು Management Accounting ವಿಷಯಗಳಲ್ಲಿ ಎಷ್ಟೋ ವಿಚಾರಗಳು ನೂರರ ಆಧಾರದಲ್ಲಿಯೇ ಕೊಡಬೇಕು. ಇದಕ್ಕೆ ಕಾರನ ದಶಮಾಂಶ ಪದ್ಧತಿಯಲ್ಲಿ ಕೊಟ್ಟರೆ ಅಲ್ಲಿ ಎಲ್ಲದಕ್ಕೂ ಪೂರ್ಣಾಂಕ ಸಾಧ್ಯವಿಲ್ಲ ಮತ್ತು ಅದರ ವಿಮರ್ಶೆ ವಿಶ್ಲೇಷಣೆ ಕಷ್ಟ ಅಂತ ಶೇಕಡಾವಾರು ಕೊಡುವುದು.

ಈ ಶೇಕಡಾವಾರು ಪದ್ಧತಿ ಅದರದ್ದೇ ಆದ ನ್ಯೂನತೆಗಳನ್ನು ಹೊಂದಿದೆ. ಮೋಸ ಮಾಡುವುದಕ್ಕೆ ಇದು ಬಹಳ ಸುಲಭ ಮಾರ್ಗವೂ ಹೌದು. 5ರಿಂದ 6ಕ್ಕೆ ಇರುವ ವ್ಯತ್ಯಾಸವನ್ನೊಮ್ಮೆ ನೋಡಿ ಬೇಕಾದರೆ. ಬರಬ್ಬರಿ 20%!!. ಆದರೆ ವ್ಯತ್ಯಾಸ ಬರೇ ಒಂದು. ಇದನ್ನೇ ಉಪಯೋಗಿಸಿ ಬಹಳ ಸುಲಭವಾಗಿ ಮೋಸ ಕೂಡ ಮಾಡಬಹುದು. ವ್ಯತ್ಯಾಸ ಸಣ್ಣದಿದ್ದು ಅಥವಾ ಗೌಣವಾಗಿದ್ದರೆ ಆಗ ಶೇಕಡಾವಾರು ಅಂದರೆ ನೂರರ ಮಾನಕ್ಕೆ ಆಧಾರವಾಗಿಟ್ಟು ಸುಳ್ಳನ್ನು ಹೇಳಿ ಬೆನ್ನು ತಟ್ಟಿಕೊಳ್ಳುವುದು ಕೆಲವರ ಜಾಯಮಾನ.

ಇನ್ನು ರಾಜಕಾರಣಿಗಳು ಬಿಡಿ. ಪರ್ಸೆಂಟೇಜ್ ಅಚರಿಗೆ ಲೀಲಾಜಾಲ. ಬೇಕಾದರೆ ಶಾಲೆಯಲ್ಲಿ ಇದರಲ್ಲಿಯೇ ಒದ್ದಾಡಿರುತ್ತಾನೆ ಆದರೆ ರಾಜಕಾರಣಿಯಾದ ಕೂಡಲೇ ಅದು ಹೇಗೆ ತಲೆಗೆ ಅಡರಿಬಿಡುತ್ತದೋ ಆ ಭಗವಂತನೇ ಬಲ್ಲ, ಇವರು ಮಂತ್ಲಿ ತೆಗೆದುಕೊಳ್ಳುವುದು, ಕಮಿಷನ್ ಪಡೆಯುವುದು, ಕಟ್ ಪಡೆಯುವುದು, ಇತ್ಯಾದಿ ಎಲ್ಲಾ ಪರ್ಸೆಂಟೇಜ್ ಆಧಾರದಲ್ಲಿಯೇ. ಯೋಜನೆಗಳನ್ನು ಹಾಕುವಾಗ ಯೋಜನಾವೆಚ್ಚಕ್ಕೆ ಪರ್ಸೆಂಟೇಜ್ ಯಾರಿಗೆಷ್ಟು ಎಂದು ಅಂಗಡಿಯಲ್ಲಿ ಕಾಯಿ ಲೆಕ್ಕ ಹಾಕುವುದಕ್ಕಿಂತ ಸುಲಭದಲ್ಲಿ ಲೆಕ್ಕ ಹಾಕಿ ಬಿಡುತ್ತಾರೆ. ಆದರೆ ಕೊನೆಗೆ ಸಿಕ್ಕಿ ಬಿದ್ದು ಮನೆ ಅಧಿಕಾರ ಕಳೆದುಕೊಂಡಾಗಲೂ ಈ ಲೆಕ್ಕ ತಪ್ಪುವುದಿಲ್ಲ. ನಮ್ಮದೇ ಶೇಕಡಾವಾರು ಮತಗಳಿಕೆ ಜಾಸ್ತಿ ಎನ್ನುತ್ತಾ ಮೀಸೆಗಂಟಿದ ಮಣ್ಣು ವರೆಸಿಕೊಳ್ಳುತ್ತಾರೆ.

ಇಟಲಿಯಲ್ಲಿ ಮಿಲಾನ್ ನಗರದ ಆರ್ಥಿಕ ಸಂಯೋಜನೆಯೊಂದನ್ನು ಪರೆಟೊ ಎನ್ನುವ ಒಬ್ಬ ಶೇಕಡಾವಾರು ಆಧಾರದಲ್ಲಿ ಮಂಡಿಸಿದ್ದೇ ಇಂದು ಕಂಪನಿಗಳಲ್ಲಿ ಕಂಡು ಬರುವ 80-20 Principle.ಮಿಲಾನ್ ನಗರದಲ್ಲಿನ 80 ಶೇಕಡಾ ಸಂಪತ್ತು ಅಲ್ಲಿನ 20 ಶೇಕಡಾ ಜನರ ಕೈನಲ್ಲಿತ್ತಂತೆ. ಇದನ್ನು ಆರಂಭದಲ್ಲಿ ಪರೆಟೋ ಅನಾಲಿಸಿಸ್ ಎಂದು ಕರೆದಿದ್ದರು. ಇಂದಿಗೂ ಪಠ್ಯಗಳಲ್ಲಿ ಇದೇ ಹೆಸರಿದೆ. ಇದೇ ಆಧಾರದ ಮೇಲೆ ಅನೇಕ ಆರ್ಥಿಕ ಸಂಶೋಧನೆ ಸಂಯೋಜನೆಗಳು ನಡೆದಿದ್ದಾವೆ.

ಈ ನೂರರಲ್ಲಿಯೇ ನೂರನ್ನು ಸಾಧಿಸಿದ ಸಾಧಕ ಸಚಿನ್ ತೆಂಡೂಲ್ಕರ್. ಆ ವಾಮನ, ತ್ರಿವಿಕ್ರಮನಲ್ಲ. ಶತಕದಲ್ಲಿ ಶತ ಬಾರಿ ವಿಕ್ರಮ ಸಾಧಿಸಿದ ಶತಶತಕ ವಿಕ್ರಮಿ. ಒಂದು ದಿನದ ಪಂದ್ಯದಲ್ಲಿ ದ್ವಿಶತಕ ದಾಖಲಿಸಿದ ಮೊದಲ ವ್ಯಕ್ತಿ ಕೂಡಾ. ಶತಕದಲ್ಲಿ ಇವರ ದಾಖಲೆಯನ್ನು ಬಹುಷಃ ಯಾರೂ ಸರಿಗಟ್ತಲು ಸಾಧ್ಯವಿಲ್ಲ, ಈ ನೂರಕ್ಕೊ ಕ್ರಿಕೆಟ್ಟಿಗೂ ಇರುವ ಸಂಬಂಧದ ಸೊಗಸೇ ಬೇರೆ. ಒಬ್ಬನ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಮಾನದಂಡವಾದ ಸ್ಟ್ರೈಕ್ ರೇಟ್, ನೂರು ಎಸೆತಗಳಿಗೆ ಗಳಿಸಿದ ರನ್ನುಗಳನ್ನು ಸೂಚಿಸುತ್ತದೆ. ನೂರು ವಿಕೆಟ್ಟುಗಳ ಸಾಧನೆ ಕೂಡಾ ಸಾಮಾನ್ಯವಲ್ಲ. ಕ್ಯಾಚಿನಲ್ಲಿ ಸೆಂಚುರಿ ಮಾಡಿದ್ದಾರೆ ನಮ್ಮ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್. ಆದರೆ ಏನೇ ಹೇಳಿ, ನೂರರ ಸರಾಸರಿಗೆ ಸಮೀಪ ಬಂದಿದ್ದು ಮಾತ್ರ ಡಾನ್ ಬ್ರಾಡ್ ಮನ್ ಒಬ್ಬರೇ. ಇವರೆಲ್ಲ ಎಷ್ಟೇ ನೂರು ಮಾಡಿದರೂ ಮೊದಲ ನೂರು ಮಾಡಿದ್ದು W.G. ಗ್ರೇಸ್. ಅವರ ನೂರು ಮೊದಲ ನೂರು. ಅದಕ್ಕಿರುವ ಬೆಲೆ ಅದಕ್ಕಿದ್ದೇ ಇದೆ.

ಹೀಗೆ ನೂರು ಒಂದು ಮೈಲಿಗಲ್ಲು. ಇದರ ಬಗ್ಗೆ ನಾನು ಇಷ್ಟೆಲ್ಲಾ ಹೇಳುವುದಕ್ಕೆ ಕಾರಣವಿದೆ. ಅದಕ್ಕೂ ಮೊದಲು ನಾನು ಬರೆಯಲು ತೊಡಗಿದ ಬಗೆಗೆ ಹೇಳಬೇಕಿದೆ. ನಾನು ಸ್ವಭಾವತಃ ವಾಚಾಳಿ. ಕೆಲವರಿಗೆ ಇದು ಇಂದಿಗೂ ಕಿರಿಕಿರಿ ಮಾಡುತ್ತದೆ. ಆದರೆ ನನಗೆ ಇದನ್ನು ಬಿಡಲು ಸಾಧ್ಯವಾಗಿಲ್ಲ. ಅವರಿಗೆ ಕಿರಿಕಿರಿ ಸಹಜವೇ ಯಾಕೆಂದರೆ ನಾನು ಉತ್ತಮ ವಾಗ್ಮಿಯಲ್ಲ. ಆದರೆ, ಬದುಕಿನ ಪಯಣದಲ್ಲಿ ಬರುವ ಮಾತುಗಳನ್ನು ಹೊತ್ತು ಸಾಗಲೇ ಬೇಕು. ಆದರೆ ನಾನೊಬ್ಬನೇ ಹೊತ್ತುಕೊಂಡರೆ ಹೊರೆಯಾಗಿತ್ತದೆ. ಮತ್ತೆ ಹೊತ್ತು ಎನ್ನುವೌದು ಸದಾ ಕಾಲ ನಮ್ಮನ್ನು ಸುತ್ತುತ್ತಲೇ ಇರುತ್ತದೆ. ನಾವು ಕೂಡಾ ಹೊತ್ತನ್ನು ಹೊರೆಯಾಗಿ ಹೊತ್ತು ಹೊತ್ತಿನೊಂದಿಗೆ ಹೊತ್ತಿನ ಕಡೆಗೇ ಸಾಗುತ್ತೇವೆ. ಇದರ ಮಧ್ಯದಲ್ಲಿ ಅಮರಿಕೊಂಡ ಚಟ ಹೊತ್ತಗೆಗಳನ್ನು ಓದುವುದು. ಸಣ್ನ ವಯಸ್ಸಿನಲ್ಲಿಯೇ ನನ್ನ ಮಾತಿನ ಕಿರಿಕಿರಿ ತಡೆಯಲಾಗದೆಯೋ ಅಥವಾ ತನಗಿದ್ದ ಓದುವ ಚಟ ಚಾಳಿ ಮಗನೂಮುಂದುವರೆಸಲಿ ಅಂತಲೋ ಗೊತ್ತಿಲ್ಲ, ಅಪ್ಪ ಓದುವ ಅಭ್ಯಾಸ ಹತ್ತಿಸಿಬಿಟ್ಟ. ಅಭ್ಯಾಸ ಹವ್ಯಾಸವಾಗಿ ಚಟವಾಗಿ ಗೀಳಾಗಿ ಹೋಯಿತು. ಪರಿಣಾಮ ತಲೆತುಂಬ ವಿಷಯಗಳು ಕುತೂಹಲಗಳು ತಲೆಯನ್ನೇ ತಿಂಬ ಹುಳುಗಳು. ಮತ್ತೆ ಆಶ್ರಯಿಸಿದ್ದು ಪುಸ್ತಕಗಳನ್ನೇ.

ಇಷ್ಟಕ್ಕಾದರೂ ಬಿಟ್ಟೀತೇ ಎಂದರೆ ಹೈಸ್ಕೂಲಿನಲ್ಲಿ ಸಿಕ್ಕ ಶಾಸ್ತ್ರಿ ಮೇಷ್ಟರು, ಗುಮ್ಮಾನಿ ಮೇಷ್ಟರು, ಶಾಹಿದ್ ಮುಸ್ತಾಫ಼್, ಸೂರ್ಯನಾರಾಯಣ ರಾಯರು, ಸುಬ್ರಹ್ಮಣ್ಯ ಭಟ್ಟರು ಎನ್ನುವ ನನ್ನನ್ನು ತಿದ್ದಿ ತೀಡಿದ ಗುರುಗಳು. ಇವರು ಮಾಡಿದ ಪಾಠಗಳೂ ನನ್ನನ್ನು ಪುಸ್ತಕದೆಡೆಗೆ ಒಯ್ದವು. ತಲೆಯೊಳಗೆ ಎಷ್ಟೋ ವಿಚಾರಗಳು. ಬರೆಯ ಬೇಕೆನ್ನುವ ಆಸೆ. ಕಾಗದದಲ್ಲಿ ಬರೆದು ಪತ್ರಿಕೆಗಳಿಗೆ ಕಳಿಸಿಯೂ ಆಯಿತು. ಪ್ರಕಟಣೆಯ ನಿರೀಕ್ಷೆಯಲ್ಲಿ ಪತ್ರಿಕೆಗಳನ್ನೂ ನೋಡುತ್ತಾ ನೋಡುತ್ತಾ ಅವೂ ನನ್ನ ಗೀಳಿಗೆ ಸೇರ್ಪಡೆಯಾದವು. ಆದರೆ ಬರಹ ಮಾತ್ರ ಬರಲಿಲ್ಲ. ಬದಲಿಗೆ ಪ್ರತಾಪ್ ಸಿಂಹ, ರವಿ ಬೆಳಗೆರೆ, ವಿಶ್ವೇಶ್ವರ ಭಟ್ಟರ ಬರಹಗಳ ಶೈಲಿಗೆ ಸೆಳೆದು ನಲುಗಿ ಹೋದೆ.

ಹೀಗೆಯೇ ನಾನೂ ಪದವೀಧರನಾದೆ. ಆಗ ನಡೆಯಿತು ನಡೆಯ  ಬಾರದ ಘಟನೆ. ಕಾಂಚಿ ಶ್ರೀಗಳ ದಸ್ತಗಿರಿ. ಇದನ್ನು ಸಮರ್ಥಿಸಿಯೇ ಬಹಳ ಪತ್ರಿಕೆಗಳು ಬರೆದವು. ನಮ್ಮ ಸಾಗರದಂಥಾ ಸಣ್ಣ ಊರಿನಲ್ಲಿದ್ದ ಮಣ್ಣಿನ ವಾಸನೆ ಎನ್ನುವ ಪತ್ರಿಕೆ ಕೂಡಾ ಇದನ್ನು ಕಟು ಶಬ್ದಗಳಿಂದ ಸಮರ್ಥಿಸಿತ್ತು. ಅದೆಲ್ಲಿ ಒರಗಿ ಬಿದ್ದಿದ್ದನೋ ಏನೋ ನನ್ನೊಳಗಿದ್ದ ವಾಚಾಳಿ ಬರಹಗಾರ. ಪತ್ರಿಕೆಗೆ ನನ್ನಲ್ಲಿದ್ದ ಕಟುಶಬ್ದಗಳನ್ನೆಲ್ಲಾ ಉಪಯೋಗಿಸಿ ಲೇಖನವೊಂದನ್ನು ಬರೆದಿದ್ದೆ. ಅದೇ ನನ್ನ ಪ್ರಥಮ ಪ್ರಕಟಿತ ಲೇಖನ. ಅದಾದ ಮೇಲೆ ಪ್ರಕಾಶ ಕಮ್ಮರ್ ಎನ್ನುವ ಸಾಗರದ್ ಬರಹಗಾರರೊಬ್ಬರು ಬ್ರಾಹ್ಮಣರನು ಟೀಕಿಸಿ ಕವಿತೆಯೊಂದನ್ನು ಬರೆದಿದ್ದರು. ಅಷ್ಟು ಹೊತ್ತಿಗೆ ನನ್ನಲ್ಲಿದ್ದ ಕಮ್ಮಿನಿಷ್ಟ ಸತ್ತು ಬೂದಿಯಾಗಿದ್ದ. ಅವರಿಗೆ ಕವಿತೆಯಲ್ಲಿಯೇ ಉತ್ತರ ಕೊಟ್ಟಿದ್ದೆ. ಅದಾದ ಮೇಲೆ ನನ್ನೊಳಗಿದ್ದ ಬರಹಗಾರ ಮತ್ತೆ ಹೊದ್ದು ಮಲಗಿದ್ದ.

ಆತ ಮತ್ತೆ ಎದ್ದರೂ, ಬರೆದರೂ ಪ್ರಕಟವಾಗಲಿಲ್ಲ. ಬೇಸರ ಪಡಲಿಲ್ಲ ನಾನು. ಸರಕು ಒಟ್ಟು ಮಾಡುತ್ತಾ ಸಾಗಿದೆ. ಆಗಲೇ ಸಿಕ್ಕಿದ್ದು ತೇಜಸ್ವಿ-ಕಾರಂತರು. ಎಲ್ ಎಸ್ ಗಳು, ನನ್ನ ಪ್ರೀತುಯ ಶಾಸ್ತ್ರಿ ಮಾವ, ಸುಮ್ಮನಿದ್ದು ನನ್ನ ಯೋಚನೆಗಳನ್ನು ಪ್ರಭಾವಿಸಿ, ಪುಸ್ತಕಗಳ, ಲೇಖನಗಳ ಬಗ್ಗೆ ಮಾತಾಡುತ್ತಲೇ ನನ್ನಲ್ಲಿದ್ದ ಬರಹಗಳನ್ನು ಜೀವಂತವಾಗಿರಿಸಿದ್ದರು. ಅವರ ಮಗಳು ಅಂಬಿಕಾ (ನನಗೆ ಅಂಬಕ್ಕ) ಕೂಡ. ಪತ್ರಿಕೆಗಳಿಗೆ ಬರೆ ಎಂದು ಅವಳು ಹೇಳುತ್ತಿದ್ದರೂ ನನಗೆ ನಂಬಿಕೆಯಿಲ್ಲ ನನ್ನ ಬರಹಗಳ ಬಗ್ಗೆ. ಸ್ನೇಹಿತರಾದ ಸಂಜೀವ ಮತ್ತು ರವಿಶಂಕರ ಹೆಗಡೆ ಇಬ್ಬರು ನನ್ನ ಖಾಯಂ ಓದುಗರು ಆರಂಭದಲ್ಲಿ. ಎಳವೆಯ ಅಕ್ಕ ಸಂಕಲ್ಪ ಕೂಡಾ. ಮಾಲಕ್ಕ, ನಿನಗೆ ನಾನು ಏನು ಮಾಡಿದರೂಒ ಖುಷಿ. ತಮ್ಮ ಎನ್ನುವ ಅಭಿಮಾನ. ಆದರೆ ತಪ್ಪು ಬರೆದಾಗ ಕಿವಿ ಹಿಂಡಿದ್ದಿದೆ ನೀನು. ನನಗೆ ತೇಜಸ್ವಿಯ ಪುಸ್ತಕಗಳ ಪರಿಚಯ ಮಾಡಿಸಿದ ನಿನಗೆ ಎಷ್ಟು ಸಲಾಮ್ ಹಾಕಲಿ?! 

ಬಂತು ನೋಡಿ ಬ್ಲಾಗ್ ಸ್ಪಾಟ್ ಮತ್ತು ಫೇಸ್ ಬುಕ್. ಎಲ್ಲರಂತೆ ನಾನೂ ಸೇರಿದೆ. ಎಷ್ಟು ದಿನ ಅಂತ ಬೇರೆಯವರು ಹಾಕಿದ ಫೋಟೋಗಳಿಗೆ ಲೈಕ್ ಒತ್ತಲಿ. ಎಷ್ಟು ದಿನ ಅಂತ ಬೇರೆಯವರ ಬರಹಕ್ಕೆ ನಂದೆಲ್ಲಿಡಲಿ ಅಂತ ಕಾಮೆಂಟ್ ಮಾಡಲಿ. ನನ್ನದೇ ಬರಹಗಳನ್ನು ಶುರು ಮಾಡಿದೆ. ಬರೆಯುತ್ತಲೇ ಹೋದೆ. ಮಧ್ಯೆ ಮಧ್ಯೆ ದಣಿವಾರಿಸಿಕೊಂಡು ಖಾಲಿಯಾಗಿದ್ದ ಬರಹಕ್ಕೆ ಬೇಕಾದ ಸರಕು ತುಂಬಿಸಿಕೊಂಡೆ. ಆದರೆ ಈ ಬರಹ ನನ್ನನ್ನು ಈ ರೀತಿ ಮಾಡುತ್ತದೆಂದು ಭಾವಿಸಿರಲಿಲ್ಲ. ಬಹುಷಃ ನಿಷ್ಕಾಮ ಕರ್ಮ ಅಂತ ನಾನು ಅರ್ಥ ಮಾಡಿಕೊಂಡಿದ್ದರೆ ಅದು ಬರಹದಿಂದ. ಮೊದ ಮೊದಲು ಲೈಕ್ ಬಂದರೆ ಖುಷಿ ಪಟ್ಟು ಇಲ್ಲದೆದ್ದರೆ ವ್ಯಥೆ ಪಟ್ಟು ಕೂರುತ್ತಿದ್ದೆ. ಆದರೆ ಬರಹ ನನ್ನ ಪಾಲಿಗೆ ಧ್ಯಾನದಂತಾಗಿಬಿಟ್ಟಿತ್ತು,ಲೈಕ್ ಬರದಿದ್ದರೂ ಸರಿ ಬರೆದರೆ ಅಷ್ಟೇ ಖುಷಿ. ನನ್ನನ್ನು ನಾನು ಕಳೆದುಕೊಂಡಿದ್ದು-ಕಂಡುಕೊಂಡಿದ್ದು-ಕಾಣಿಸಿಕೊಟ್ಟಿದ್ದು ಎಲ್ಲವೂ ಬರಹದಲ್ಲಿಯೇ.

ಹೀಗೆ ಹೊತ್ತು ತಂದ ಮಾತುಗಳಿಗೆ ಆ ಹೆಸರನ್ನೇ ಇಟ್ಟು ಬ್ಲಾಗ್ ಮಾಡಿಕೊಂಡೆ. ನನ್ನ ಬರಹ ನನ್ನ ಜಾಗ ಎನ್ನುವ ಸಮಾಧಾನ ಇತ್ತು. ಫೇಸ್ ಬುಕ್ಕಿನ ಗೋಡೆಯಲ್ಲಿ, ಅಲ್ಲಿದ್ದ ಗ್ರೂಪುಗಳ ಗೋಡೆಯಲ್ಲಿ ಬರೆಯತೊಡಗಿದೆ.ಕೆಲವರಿಗೆ ಕಿರಿಕಿರಿಯಾಗಿದ್ದಿರಬಹುದು. ಕ್ಷಮಿಸಿ. ಇಲ್ಲಿ ನನ್ನನ್ನು ಪ್ರೋತ್ಸಾಹಿಸಿದವರು ಅನೇಕ ಜನ. ಹವ್ಯಕ. ನಿಲುಮೆ ಗ್ರೂಪುಗಳಂತೂ ನನ್ನ ಎಲ್ಲಾ ಬರಹಗಳಿಗೆ ವೇದಿಕೆ ಕೊಟ್ಟಿವೆ. ನಿಮಗೆ ನಾನು ಚಿರ ಋಣಿ. ಕೆಲವರು ತಮ್ಮ ಗ್ರೂಪಿನಲ್ಲಿ ಪೋಸ್ಟ್ ಮಾಡಿ ಎಂದೂ ಕೇಳಿದರು. ಒಳಗಿದ್ದ ಅಹಂಕಾರಿ ಖುಷಿ ಪಟ್ಟ ನಿಜ, ಆದರೆ, ನನಗೆ ನಿಜಕ್ಕೂ ಅಳುಕಿತ್ತು. ಅದರಲ್ಲೂ ಹವಿ ಸವಿಯಲ್ಲಿ ಪೋಸ್ಟ್ ಮಾಡುವಾಗ.

ಕೆಲವರಂತೂ ನನ್ನ ಬರಹಗಳನ್ನು ನೋಡಿ ಸ್ನೇಹಿತರಾದರು. ಅದರಲ್ಲಿ ಕೆಲವರು ಹತ್ತಿರದ ಸಂಬಂಧಿಗಳೂ ಇದ್ದರು. ಈ ವಿಚಾರ ನನಗೆ ಅವರೊಡನೆ ಚಾಟ್ ಮಾಡಿದಾಗಲೇ ತಿಳಿದಿದ್ದು. ನನ್ನ ಬರಹಗಳೇನೂ ಮಹಾನ್ ಬರಹಗಳಲ್ಲ. ನನಗನ್ನಿಸಿದ ನನ್ನ ಭಾವನೆಗಳ ಹಂಚುವಿಕೆ ಅಷ್ಟೆ. ಆದರೆ ಈ ಬರಹ, ನನ್ನ ಪಾಲಿಗೆ ಎಷ್ಟನ್ನೆಲ್ಲಾ ಕೊಟ್ಟಿದೆ. ಸ್ನೇಹಿತರು, ಸಮಾಧಾನ ಎಲ್ಲಾ ಕೊಟ್ಟ ಬರಹ. ಇದು ನನ್ನದ್ದೇ ಸಂಪೂರ್ಣವಾ? ಖಂಡಿತ ಅಲ್ಲ. ಈ ಜಗತ್ತಿನದ್ದು. ಅಲ್ಲಿ ಸಾಗಿದ ಹೊತ್ತಿನದ್ದು. ನನಗೆ ಸಿಕ್ಕ ಜನರದ್ದು. ವಿಚಾರಗಳನ್ನು ಕೊಟ್ಟ ಮಾಯಾಲೋಕ- ಇಂಟರ್ ನೆಟ್ಟಿನದ್ದು, ಪುಸ್ತಕಗಳದ್ದು. ಅವನ್ನು ಕೊಡಿಸಿದ ಅಪ್ಪನದ್ದು. ಎಷ್ಟೋ ವಿಚಾರ್ಗಳನ್ನು ನನ್ನ ತಲೆಗೆ ಹಚ್ಚಿ ಬರೆಯಿಸಿದ ಸ್ನೇಹಿತರದ್ದು. ಇಷ್ಟನ್ನೂ ಮಾಡಿಸಿದ ಗುರು ಶ್ರೀ ಶ್ರೀಧರಸ್ವಾಮಿಗಳದ್ದು.

ಹೀಗೆ ಶುರುವಾಗಿ ಬರೆದ ಬರಹಗಳ ಸಂಖ್ಯೆ ಈಗ ನೂರನ್ನು ದಾಟಿದೆ. ದೊಡ್ದ ಸಾಧನೆಯಲ್ಲ. ಯಾಕೆಂದರೆ ಮಹಾನ್ ಕವಿ ಹರಿವಂಶರಾಯ್ ಬಚ್ಚನ್ ಹೇಳಿದ ಮಾತಿದೆಯಲ್ಲ-"ಮೈಂ ಪಲ್ ದೊ ಪಲ್ ಕಾ ಶಾಯರ್ ಹೂಂ ಪಲ್ ದೊ ಪಲ್ ಮೆರಿ ಕಹಾನೀ ಹೈ" (ನಾ ಕ್ಷಣ ಎರಡೇ ಕಾಲದ ಕವಿ; ಎರಡೇ ಕ್ಷಣ ಕಾಲದ ನನ್ನ ಬರಹ) ಎಂದು. ಮುಖೇಶನ ಧ್ವನಿಯಲ್ಲಿ ಅಮಿತಾಭ್ ಬಚ್ಚನ್ ಅಭಿನಯಿಸಿದ ಹಾಡು ಅದೆಷ್ಟು ನಿಜ. ಆದರೆ ಅವರ ಈ ಮಾತು ಎರಡೇ ಕ್ಷಣಕ್ಕಲ್ಲ, ಸದಾ ಸರ್ವದಾ ಪ್ರಸ್ತುತ. . ಬರಹಗಳನ್ನು ಪ್ರೋತ್ಸಾಹಿಸಿದ ನಿಮ್ಮಲ್ಲಿ ಈ ಮೈಲಿಗಲ್ಲನ್ನು ಮುಟ್ಟಿದ ಕ್ಷಣ ಕೂಡಾ ಹಂಚಿಕೊಳ್ಳಬೇಕೆನಿಸಿತು.ಆದರೆ ಅದೇನು ಮಾಯೆಯೋ ಏನೋ. ನನ್ನ ಹೆಸರೇ ನನ್ನನ್ನು ಕಾಡಿಸಿಬಿಟ್ಟಿದೆ. ಬರಹದಲ್ಲಂತೂ ಅದು ಢಾಳಾಗಿ ಬಂದಿದೆ. 'ನೂರ್' ಎಂದರೆ ಉರ್ದುವಿನಲ್ಲಿ ಚಂದ್ರ ಎಂದು ಅರ್ಥವಂತೆ. ಚಂದ್ರನ ಹೆಸರೇ ನನ್ನದಾಗಿದೆಯಲ್ಲ. ಇದು ವಿಚಿತ್ರವೋ ವಿಪರ್ಯಾಸವೋ ಗೊತ್ತಿಲ್ಲ. ಅಹಂಕಾರ ಬೆರೆತಿದೆ. ಅದಕ್ಕೊಂದು ಕ್ಷಮೆ ಇರಲಿ.

ನನ್ನ ಬ್ಲಾಗ್ ವಿಳಾಸ:

tenkodu.blogspot.com


No comments:

Post a Comment