Tuesday, April 10, 2018

ಸಹಸ್ರಾಕ್ಷನಿಗೆ ಏಕಾಕ್ಷಪಾತ


ಪುರಾಣ ಕತೆಗಳೆಂದರೆ ಅದೇನೋ ಒಂದು ರೀತಿಯ ಆಕರ್ಷಣೆ. ಇದಕ್ಕೆ ಎಳವೆಯಲ್ಲಿ ಕತೆ ಹೇಳಿದ ಅಮ್ಮೊಮ್ಮನೋ ಅಥವಾ ನೋಡುತ್ತಿದ್ದ ಯಕ್ಷಗಾನಗಳೋ ಗೊತ್ತಿಲ್ಲ. ಒಟ್ಟಿನಲ್ಲಿ ಮಜವಂತೂ ಬರುತ್ತಿತ್ತು. ಇದೇ ಮಜಾ ನನ್ನನ್ನು ಎಷ್ಟೋ ಸಲ ಇದೇ ಸುದ್ದಿ ಮಾತಾಡುವಂತೆ ಮಾಡುತ್ತಿತ್ತು. ಕೆಲವರು ಕೇಳಿದ ಪ್ರಶ್ನೆಗಳಿಗೆ ನಾನು ಇದರ ಆಧಾರದಲ್ಲಿ ಉತ್ತರವನ್ನೂ ಕೊಡುತ್ತಿದ್ದೆ ಮತ್ತು ಪ್ರಶ್ನಿಸುತ್ತಲೂ ಇದ್ದೆ. ಮಾತಾಡಿದರೆ ಇದೇ ಸುದ್ದಿ ಬರುತ್ತಿತ್ತು ನನಗೆ. ಓದುವ-ಬರೆಯುವ ಹವ್ಯಾಸಕ್ಕೂ ಇದೇ ನಾಂದಿ ಹಾಡಿದ್ದು ಎಂದರೆ ತಪ್ಪಲ್ಲ.

ಕೆಲವರು ಪುರಾಣಗಳ ಕತೆಗಳನ್ನು ಬಲು ಸೊಗಸಾಗಿ ವಿಮರ್ಷಿಸಿ ವಿಷದೀಕರಿಸಿದ್ದಾರೆ. ಅದರಲ್ಲೊಬ್ಬರು ದೇವುಡು ಅವರು. ಅವರು ಬರೆದ ಮಹಾಕ್ಷತ್ರಿಯ ಒಂದು ಅದ್ಭುತ ಕಾದಂಬರಿ. ನಹುಷನ ಆದರ್ಶಗಳ ಅನಾವರಣ ಅವತರಣ ಕಾದಂಬರಿ. ಅವರ ನಂತರದ ಪೀಳಿಗೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ಅಂಥಾ ಪ್ರಯೋಗಗಳಾಗಿಲ್ಲ. ಒಂದು ವೇಳೆ ಆಗಿದ್ದರೂ ಸೊಗಸು ಬರುವುದಕ್ಕೆ ಸಾಧ್ಯವೇ ಇಲ್ಲ. ಇದನ್ನು ಓದಿದ ಗುಂಗಿನಲ್ಲಿಯೇ ಇದ್ದೆ ನಾನು ಬಹಳ ದಿವಸ.

ಹೀಗೆಯೇ ಗುಂಗಿನಲ್ಲಿದ್ದಾಗ ಮಾತಾಡುತ್ತ ಇದ್ದಾಗ ಮಕ್ಕಳಿಗೆ ಹೆಸರಿಡುವ ವಿಚಾರ ಬಂತು. ನಾನಂತೂ ಚಿತ್ರ ವಿಚಿತ್ರ ಹೆಸರುಗಳನ್ನು ಕೇಳಿ ಬೇಸತ್ತಿದ್ದೆ. ಎಷ್ಟೊ ಸಲ ಹೇಳಿದ್ದೂ ಇತ್ತು. ಮೈಂದ ದ್ವಿವಿದ ಎಂದು ಯಾರೂ ಹೆಸರಿಡದೇ ಹೋದದ್ದು ಅಚ್ಚರಿ ಎಂದು. ಇನ್ನೂ ಮುಂದುವರೆದರೆ 'ನಿನಗಾಗಿ' ಸಿನಿಮಾದಲ್ಲಿ ನಾಟಕದಲ್ಲಿ ನಾಯಕ ನಾಯಕಿಯರ ಹೆಸರಾದ ಅನಿರ್ವೇಶ್ ಸಚಂತಾ ಎಂದು ಇಡದಿದ್ದರೆ ಸಾಕು ಎಂದು. ಆಗ ಯಾರೋ ಒಬ್ಬರು ಅಂದರು ಅವರ ಬಂಧುಗಳಲ್ಲಿ ಒಬ್ಬನ ಹೆಸರು ನಹುಷ ಎಂದು. ಅರ್ಥವೇ ಗೊತ್ತಿಲ್ಲ ಎಂದು.

ನಖ ಶಿಖಾಂತ ಉರಿ ಬಿತ್ತು ನನಗೆ. ಆಗ ದೇವುಡು ಅವರು ಬರೆದಿದ್ದರ ಅಕ್ಷರ ಅಕ್ಷರವೂ ನೆನಪಾಗಿತ್ತು ನನಗೆ. ಉರಿ ಬೀಳದಿದ್ದೀತೆ. ಪರಮ ಧಾರ್ಮಿಕ ನಹುಷ. ಸತ್ಯವಾದಿ ನಹುಷ. ಧರ್ಮದ ಉಳಿವಿಗಾಗಿ ಶಿಬಿಕೋತ್ಸವದಲ್ಲಿ ಸಮಾಧಿ ಭಂಗ ಮಾಡಿ ತನಗೆ ತಾನೇ ಶಾಪ ಇಟ್ಟುಕೊಂಡು ಹೆಬ್ಬಾವಾಗಿ ಬಿದ್ದ ನಹುಷನ ಪರಿಚಯ ಇಲ್ಲವೆಂದರೆ ನಮ್ಮ ಪರಂಪರೆಗೆ ಸರಿಯಲ್ಲ ಅದು. ಅದು ಅವರ ತಪ್ಪಲ್ಲ. ನಮ್ಮ ಪಠ್ಯದ್ದು ಬೆಳೆಸುವ ಅಪ್ಪ ಅಮ್ಮನದ್ದು. ಹಾಳಾಗಲಿ ಬಿಡಿ.

ನನ್ನ ಹರಕು ಬಾಯಿ ತೆಗೆದೆ ನಾನು. "ನಹುಷ ಎಂದರೆ ಅವನೊಬ್ಬ ಪರಮ ಧಾರ್ಮಿಕ ಅರಸ. ಇಂದ್ರ ಪದವಿ ಪಡೆದಿದ್ದ....." ಕತೆ ಮುಂದುವರೆಯುವ ಮೊದಲೇ ಒಬ್ಬ ಬಾಯಿ ಹಾಕಿದ. "ಅದೆಂತ ಕತೆ ಸ್ವಲ್ಪ ಹೇಳೋ ಮಾರಾಯ..." ಅಂದ. ಅಲ್ಲ, ನಾನೇನು ರತ್ನಾವತಿ ಕಲ್ಯಾಣದ ಪದ್ಯ ಹೇಳುತ್ತಿದ್ದನಾ"ಬಡ ನಡುವಿನ ಜಡ ಪಿಡಿನಡೆದುದು..." ಎಂದು ಮನಸ್ಸಿನಲ್ಲೇ ಅಂದುಕೊಂಡು ಮುಂದಾದೆ ಹೇಳಲಿಕ್ಕೆ. "ನಹುಷ ಪ್ರತಿಷ್ಠಾನ ಪುರದ ಅರಸ...." ಮೊದಲೆಂದವ ಮತ್ತೆ ಬಾಯಿ ಹಾಕಿದ. ಪ್ರಯಾಸದಿಂದ ತಾಳ್ಮೆ ತಂದುಕೊಂಡು ಮಾತು ಮುಂದುವರೆಸಿದೆ. " ಇಂದ್ರ, ಗುರುವಾಗಿ ವರಿಸಿದ್ದ ವಿಶ್ವರೂಪನನ್ನು ಕೊಂದ. ಅವನ ತಂದೆ ತ್ವಷ್ಟ್ರ, ಸಿಟ್ಟಿನಿಂದ ಇಂದ್ರನನ್ನು ಕೊಲ್ಲುವ ಮಗನನ್ನು ಪಡೆಯಲು ಮುಂದಾದ. ಆಗ ಸರಸ್ವತಿ ಸ್ವರವನ್ನು ಬದಲಿಸಿ ಇಂದ್ರನಿಂದ ಕೊಲ್ಲಲ್ಪಡುವ ಮಗ ಹುಟ್ಟಲಿ ಎಂದು ಹೇಳುವಂತೆ ಮಾಡಿದಳು. ಆಗ ವೃತ್ರ ಹುಟ್ತ. ಅವನ್ನ ಇಂದ್ರ ಮೈತ್ರಿ ಸಾಧಿಸಿ ಕೊಲ್ತ. ಅವನ ಹತ್ಯೆ ಬ್ರಹ್ಮ ಹತ್ಯೆ ಆತು. ಅದರ ತಾಪ ತಡೆಯಕ್ಕೆ ಆಗದೆ ಇಂದ್ರ ತಾವರೆ ದಂಟಲ್ಲಿ ಹೊಕ್ಕ....." ಎಂದು ಕತೆ ಮುಂದುವರೆಸುತ್ತಾ ಇದ್ದೆ.

ಅಷ್ಟರಲ್ಲಿ ಮತ್ತೆ ಬಾಯಿ ಹಾಕಿದ. "ಹೌದು. ಮುಂದೆ ಯಂಗೊತ್ತಿದ್ದು. ಇಂದ್ರ ತಾವರೆ ದಂಟಲ್ಲಿದ್ದಾಗ ಒಬ್ಬಳು ಯಾರೋ ಬಂದು ಕಡ್ಡಿ ಚುಚ್ತ. ಇಂದ್ರನ ಕಣ್ಣಿಗೆ...." ನನಗೆ ಮೊದಲೇ ಇದ್ದ ಉರಿ ಹೆಚ್ಚಾಯಿತು. ಆದರೆ ಮಾತಾಡಲು ಮನಸ್ಸಾಗಲಿಲ್ಲ. ಸಹಸ್ರಾಕ್ಷನಾದ ಇಂದ್ರನ ಕಣ್ಣಿಗೇ ಇವ ಕಡ್ಡಿ ಚುಚ್ಚಿಸಿ ಅವನಿಗೇ ಒಂಬೈನೂರಾ ತೊಂಭತ್ತೊಂಭತ್ತು ಕಣ್ಣು ಮೂಡಿಸಿದವ ಇನ್ನೋ ಏನೇನೆಲ್ಲ ಮಾಡಿಯಾನು ಎಂದು ಹೆದರಿಕೆಯಾಯಿತು.ಆದರೂ ಒಂದು ಮೆಚ್ಚಬೇಕು. ಸಹಸ್ರಾಕ್ಷಃ ಸಹಸ್ರಪಾತ್ ಎಂದು ಮಂತ್ರವಿರುವಾಗ, ಸಹಸ್ರಾಕ್ಷನಿಗೆ ಏಕಾಕ್ಷಪಾತ ಮಾಡಿಸಿದ ಧೈರ್ಯ.ಅಂದೇ ತೀರ್ಮಾನಿಸಿದೆ. ಇನ್ನು ಪುರಾಣದ ಕತೆ ಗೊತ್ತಿರುವವರಲ್ಲಿ ಮಾತ್ರ ಹೇಳಬೇಕು ಅಂತ. ಮತ್ತೆ ಚತುರ್ಭುಜ ವಿಷ್ಣು ಮುಕ್ಕಣ್ಣನಾಗಬಾರದಲ್ಲ, ಅದಕ್ಕೆ. ಕೊನೆಗೆ ಇಂಥಾ ಎಷ್ಟೋ ಮಾತುಗಳನ್ನು ಆಡದೆ, ಹೊರೆಯಾಗಿ ಹೊತ್ತೆ. ಅವು ಹೊತ್ತು ತಂದ ಮಾತುಗಳಾದವು. ಹೊತ್ತು ಬಂದಾಗ ಒಂದೊಂದಾಗಿ ನಿಮ್ಮಲ್ಲಿ ಹಂಚಿಕೊಂಡೆ.

No comments:

Post a Comment