Tuesday, September 26, 2017

ಮುಖೋರ್ಜೀ ಮೂರಖ್ ಜೀ

"ಮುಖೋರ್ಜೀ" ಹೀಗೆಂದೇ ಖ್ಯಾತಿ ಪಡೆದಿಇದ ವ್ಯಕ್ತಿ ಆತ. ಆತನೇ ತನ್ನನ್ನು ಈ ಹೆಸರಿಂದ ಕರೆದುಕೊಂಡಿದ್ದರಿಂದ ಊರವರಿಗೆ ಆತನ ನಿಜ ನಾಮಧೇಯ ಮಂಜಪ್ಪ ಎನ್ನುವುದು ಬಹುಷಃ ಮರೆತು ಹೋಗುತ್ತಿತ್ತೇನೋ. ಆದರೆ ಮೂರು ದಿನಕ್ಕೊಮ್ಮೆ ಟಿ ವಿ ಯಲ್ಲಿ ಮುಸುಡು ತೋರಿಸಿ(ಕೆಲವೊಮ್ಮೆ ತೂರಿಸಿ) ಏನೋ ಕೊರೆಯುತ್ತಿದ್ದಾಗ, ಕೆಳಗಡೆ ಬರುವ ಸ್ಕ್ರಾಲ್, "ಮಂಜಪ್ಪ (ಮುಖೋರ್ಜೀ)" ಎಂದಿರುತ್ತಿದ್ದರಿಂದ ಊರಿನವರು ಮಂಜಪ್ಪ ಎಂದೇ ಕರೆಯುತ್ತಿದ್ದರು.

ಈತ ಒಂದು ಕಾಲದಲ್ಲಿ ಸಾಗರದ ಮಾರಿ ಜಾತ್ರೆ ಖರ್ಚಿಗೆ ಅಪ್ಪನಲ್ಲಿ ದುಡ್ಡು ಕೇಳಿದಾಗ ಆತ ಕೊಡದೆ ಇದ್ದಿದ್ದರಿಂದ ಸಿಟ್ಟಾಗಿ ಊರು ಬಿಟ್ಟ. ಸಿಟ್ಟಿಗೆ ಊರು ಬಿಟ್ಟರೇನು, ಹಸಿವು-ಹೊಟ್ಟೆ ಒಂದನ್ನೊಂದು ಬಿಟ್ಟಿರಲಿಲ್ಲ. ನೈವೇದ್ಯವಾಗಿದ್ದ ವಿದ್ಯೆಗೆ ತಕ್ಕ ಕೆಲಸವೊಂದನ್ನು ಹೇಗೋ ಸಂಪಾದಿಸಿದ. ಅಲ್ಲಿ ಕಾರ್ಮಿಕರ ಶ್ರಮದ, ಬಸಿದ ಬೆವರಿನ ಬೆಲೆ ಬಗ್ಗೆ ಚೆನ್ನಾಗಿ ತಿಳಿದು, ಬೇರೆಯವರಿಗೆ ತಿಳಿಸುವ ಕೆಲ ಮಂದಿ ಅವನಿಗೆ ಜೊತೆಯಾದರು. ಅವನಿಗೂ ಇದರ ಬೆಲೆ ತಿಳಿಸಿದರು.

ಪರಿಣಾಮ ಎಂಬಂತೆ ಧರ್ಮ ಬಡವರ ಅಫೀಮು ಎನ್ನಿಸಿ ಜನಿವಾರ ತೆಗೆದಿಟ್ಟ. ಫಾಕ್ಟರಿ ಹೊರಗೆ ನಿಂತು "ಧಿಕ್ಕಾರ" "ಜಿಂದಾಬಾದ್" ಎಂದೆಲ್ಲಾ ಕೂಗಿದ. ಹಾಗೆ ಕೂಗುವುದಕ್ಕೆ ಜೊತೆಯಾಗಲು ಬಂದವನೇ ಭೋನು ತೇಜೋ ಮುಖೋರ್ಜಿ  (ಭಾನು ತೇಜ ಮುಖರ್ಜಿ). ಅವನಿಂದ ಪ್ರಭಾವಿತನಾದ ಈತ ತನಗೂ ಆ ಹೆಸರಿಟ್ಟುಕೊಂಡ.

ಇವರ ಕೂಗಿನ ಫಲ, ಫ್ಯಾಕ್ಟರಿ ಬಂದ್ ಆಯಿತು. ಕೂಗಿಗೆ ಬೆಲೆ ಇಲ್ಲದಾಯಿತು. ಅಲ್ಲಿದ್ದ ಕಾರ್ಮಿಕ ನಾಯಕರು ಬೇರೆ ಕಡೆ ಬೆವರಿನ ಬೆಲೆ ತಿಳಿಸಲು ಹೋಗಿದ್ದರಿಂದ ಮಂಜಪ್ಪ ಮುಖೋರ್ಜಿಯಾಗಿ ಮತ್ತೆ ಊರಿಗೆ ಬಂದ. ಅಪ್ಪನ ಸಿಟ್ಟು ಇಳಿದಿದ್ದರಿಂದ ಏನೂ ಹೇಳಲಿಲ್ಲ. ಅಪ್ಪ ಮಾಡಿಟ್ಟ ಆಸ್ತಿ ಪೂರ್ತಿ ತನ್ನದಾದ ಮೇಲೆ ಈತನಿಗೆ ಮತ್ತೆ ಬೆವರಿನ ಬೆಲೆ ಗೊತ್ತಾಯಿತು. ಮತ್ತೆ ಎಡಪಂಥಕ್ಕೆ ಹೊರಳಿದ. ಆಸ್ತಿ ಮನೆ ಸಂಭಾಳಿಸಲು ಇನ್ನೂ ಅನೇಕ ದುಡಿಯುವ ಕೈಗಳಿದ್ದವಲ್ಲ. ತಲೆಬಿಸಿ ಇರಲಿಲ್ಲ.

ಯಾವುದೋ ವಶೀಲಿಬಾಜಿ ಬಳಸಿ ಟಿ ವಿ ಯಲ್ಲಿ ಮುಸುಡಿ ತೋರಿಸುವ ಅವಕಾಶ ಗಿಟ್ಟಿಸಿದ. ಒಂದು ದಿನ ಹೀಗೆ ಮುಖ ತೋರಿಸಿ ಹೊರಬಂದು, ಹೋರಾಟದ ಅಗ್ನಿಗೆ ತೈಲ ಹಾಕಲು ಆಂಧ್ರದ ಕಾಮ್ರೇಡ್ ಮಲ್ಲನೇನಿ ವೀರ ಸೂರ್ಯನಾರಾಯಣ ರಾಮಾಂಜನೆಯ ಸೀತಾರಾಮ ರಾವ್ (ಮವೀಸೂರಾಸೀ) ಜೊತೆ ಹೋದ. ಆತ ಎಲ್ಲಾ ಬಿಟ್ಟು "ನೀವು ಇಷ್ಟು ದಿನಕ್ಕೆ ಎಷ್ಟು ಜನ ಕಾರ್ಮಿಕ ಸೇನಾನಿಗಳನ್ನು ತಯಾರು ಮಾಡಿದ್ದೀರಿ" ಎಂದ. ಅವಾಕ್ಕಾದ ಮುಖೋರ್ಜೀ, "ಅಬ್ಬಾ !ಎಂಥಾ ದೂರ ದೃಷ್ಟಿ ನಿಮ್ಮದು. ಅನೇಕಾಂತವಾದದ ಮುಖವಾಗಬೇಕೆಂಬ ಹಂಬಲದಲ್ಲಿ, ದಮನಿತ ಶೋಷಿತರ ಬಡವರ ಧ್ವನಿಯಾಗುತ್ತಾ ನಾನಿದನ್ನು ಯೋಚಿಸಿಯೇ ಇಲ್ಲ. ಭವಿತವ್ಯದ ದಮನಿತರ, ದೂಷಿತರ, ಶೋಷಿತರನ್ನು ಮೇಲೆತ್ತಲು ನಿಮ್ಮೆಂಥವರ ದೂರ ದೃಷ್ಟಿ ಬೇಕು. ಇಂಥಾ ವಿಶಾಲ ಮತ್ತು ವಿಶೇಷ ದೃಷ್ಟಿಕೋನ ಇದ್ದಿದ್ದರಿಂದಲೇ ನೀವು ದೊಡ್ಡ ನಾಯಕರಾದಿರಿ "ಎಂದು ಹೊಗಳಿದ. ನಿಜ ಏನೆಂದರೆ ಮುಖೋರ್ಜಿಗೆ ಮುಜುಗರವಾಗಿ ಏನು ಉತ್ತರ ಕೊಡಬೇಕು ಎಂದೇ ತಿಳಿಯಲಿಲ್ಲ. ಅಲ್ಲಿಲ್ಲಿ ಕೇಳಿದ್ದ ಕೆಲ ಶಬ್ದಗಳನ್ನೇ ಪೋಣಿಸಿ ವಾಕ್ಯ ಹೆಣೆದಿದ್ದ. ಸಂತುಷ್ಟನಾದ ಮವೀಸೂರಾಸೀ, ಎಣ್ಣೆ ಜೊತೆ ಖಾರ ಸೇವಿನದ್ದೂ ದುಡ್ಡು ಕೊಟ್ಟ. ಮುಂದಿನ ಪೀಳಿಗೆಯ ದಮನಿತರ ಗಂಟಲುಗಳನ್ನು ಹುಡುಕುವ ನಿರ್ಧಾರದೊಂದಿಗೆ ಮುಖೋರ್ಜೀ ಬಸ್ಸಿನ ಸೀಟಿಗೆ ತಲೆಯಿಟ್ಟ.

ಊರಿಗೆ ಬಂದವನೇ ದಾಸನ ಮಗ ಜಟ್ಟ ಮತ್ತು ಬಿಳಿಯನ ಮಗ ಗಾಮನನ್ನು ಕರೆದು ಎಡಪಂಥೀಯ ಗೀತೋಪದೇಶ ಶುರು ಮಾಡಿಯೇ ಬಿಟ್ಟ. "ದಿನವೂ ಎಡಕ್ಕೆ ಜಯವಾಗಲಿ. ಎಡದ ಬಲ ಹೆಚ್ಚಲಿ. ಬಲ ಬಾಳದಿರಲಿ. ನಮ್ಮ ಮಾತಿದು ದರ್ಪಿತರಿಗೆ ದಮನಿತರ ಸಿಂಹ ಘರ್ಜನೆ. ಎಡವೆ ಮಹಾಬಲ" ಎಂಬ ಘೋಷಣೆಯೊಂದಿಗೆ ಇವರ ಚರ್ಚೆ ಮುಕ್ತಾಯವಾಗುತ್ತಿತ್ತು.

ಸ್ವಲ್ಪ ದಿನದಲ್ಲೇ ಹವಾಮಾನ ಬದಲಾಗಿ, ಜಟ್ಟ ಮತ್ತು ಗಾಮ ಇಬ್ಬರಿಗೂ ಜ್ವರ ಬಂತು. ಶಿಷ್ಯರ ಮನೆಗೆ ಹೋಗಿ ಕುಶಲ ವಿಚಾರಿಸಿ, ಅವರ ಕಿವಿಯಲ್ಲಿ ಇನ್ನಮದಿಷ್ಟು ವಿಚಾರದ್ರವ ಸುರಿಸಿ,ಅವರಿಗೆ ದುಡ್ಡು ಕೊಟ್ಟು, ಚಿಕಿತ್ಸೆ ಪಡೆದು ಬೇಗ ಬರಬೇಕೆಂದೂ, ಕ್ರಾಂತಿಗೆ ಕಾಲ ಸನ್ನಿಹಿತವಾಗಿದೆ ಎಂದೂ ತಿಳಿಸಿದ.

ಕೆಲವು ದಿನ ಬಿಟ್ಟು ಇಬ್ಬರೂ ಶಿಷ್ಯರು ಮತ್ತೆ ಗುರುವಿನ ಮನೆಗೆ ಬಂದರು. ಅವರಿಬ್ಬರೂ ಕುಳಿತ ಭಂಗಿ ವಿಶಿಷ್ಟವಾಗಿತ್ತು. ಜಟ್ಟ ಎಡಭಾಗದ ಪೃಷ್ಠ ಎತ್ತಿ ಕುಳಿತಿದ್ದರೆ, ಗಾಮ ಎಡಭಾಗದ ಪೃಷ್ಠ ಊರಿಕುಳಿತಿದ್ದ. ಕುತೂಹಲ ತಡೆಯದೆ, ಮುಖೋರ್ಜೀ ಕಾರಣ ಕೇಳಿದ.

ಜಟ್ಟ, "ಎಡವೇ ಮಹಾಬಲ, ಎಡದ ಬಲ ಹೆಚ್ಚಲಿ ಅಂತ ಮಾತಾಡ್ತುವು ಅಯ್ಯ. ಅದಕ್ಕೆ ಡಾಕ್ಟ್ರಿಗೆ ಅಷ್ಟೂ ಸೂಜಿ ಎಡ ಮುಕ್ಳಿಗೆ ಕೊಡಕ್ಕೆ ಹೇಳ್ದೆ. ಈಗ ನೋಯ್ತಾ ಐತೆ. ಅದಕ್ಕೆ ಎತ್ತಿ ಕುಂತಗಂಡೆ. ಅದಿರ್ಲಿ, ನಾ ಈಗ ಉಣ್ಣದೂ ಎಡಗೈನಾಗೆ" ಎಂದ.

ಗಾಮ, "ಎಡವೇ ಬಲ, ಬಲ ಬೀಳಲಿ ಅಂದ್ರಲ ಅಯ್ಯ ಅದಕ್ಕೆ ಬಲಕ್ಕೆ ಸಮಾ ಆಬೊಕು ಅಂತ ಹೇಳಿ ಎಲ್ಲಾ ಇಂಜೆಕ್ಷನ್ನೂ ಬಲದ ಮುಕ್ಳಿಗೆ ತಗಂಡೆ ಒಡೆಯಾ. ಬಲಕ್ಕೆ ಸಮಾ ಆಬೊಕು ಅಂತ ನಾ ಈಗ ಬಲಗೈನಾಗೆ ಮುಕ್ಳಿ ತೋಳಿತ್ನಿ" ಎಂದ.

ತನ್ನ ಎಡಪಂಥೀಯ ವಿಕಾರಧಾರೆ ಈ ದಡ್ಡರ ಮುಕ್ಳಿಗೆ ಬಿದ್ದಿದ್ದು ತಿಳಿದು ಮುಖೋರ್ಜೀ ಮಮ್ಮಲ ಮರುಗಿದ, ಮನಸ್ಸಿನಲ್ಲೇ.ಒಟ್ಟು ಮುಖೋರ್ಜೀ, ಮೂರಖ್ ಜೀ ಆದ, ಮುಶಂಡಿಗಳ ಮುಕ್ಳಿ ದೆಸೆಯಿಂದ.

No comments:

Post a Comment