Tuesday, November 21, 2017

ವಿಶ್ವಣ್ಣನ ಪಾಸ್ ವರ್ಡ್

ಮತ್ತೆ ವಿಶ್ವನ ತಲೆಯಲ್ಲಿ ಯೋಚನೆಗಳು ಗಿರಕಿ ಹೊಡೆಯತೊಡಗಿದವು, ತೆಂಕುತಿಟ್ಟಿನ ಪುಂಡುವೇಷದ ತರಹ. "ಅಲ್ಲ ಈ ನಾಣು ಮಾಣಿ ಕಥೆಯೇ. ಅವತ್ತು ಆನು ಕಥೆ ಹೇಳಿದ್ದಾಗ ಏನು ಬರೀತಿ ಅಂತ್ಲೋ ಅಥವಾ ಬರಿತ್ನಲ್ಲೆ ಅಂತ್ಲೋ ಹೇಳಲಾಗಿತ್ತು. ಹೇಳಲೇ ಇಲ್ಲೆ ಪುಣ್ಯಾತ್ಮ. ಈಗ ನೋಡಿರೆ ಬರ್ದೆ ಬುಟ. ಹಾಳಾಗ್ಲಿ. ಅಲ್ಲ ಹಾಂಗಾರೆ, ದಿನಾ ಡೈರಿಲಿ ಸಿಗ್ತ. ಒಂದು ಮಾತು ಹೇಳಿದ್ರೆ ಬರ್ತಿರ್ಲ್ಯಾ ಅವಂಗೆ. ಗಜಾನನ ಹೇಂಗೂ ಯನ್ನ ಶನ್ನಕಿದ್ದಾಗಿಂದ ನೋಡಿದವ. ಮರೆವು ಅಂತ ಬಿಟ್ಟು ಹಾಕ್ತ. ಅದೇ ಉಳಿದವರ ಹತ್ರ ಆನು ಈ ತರ ಮಾತಾಡಿದ್ರೆ, ಕಥೆ ಎಂತ ಆಗ್ತಿತ್ತು? ಹುಡ್ರಿಗೆ ಪಾಸಿಟಿವ್ ತಿಂಕಿಂಗೆ ಇಲ್ಲೆ. ಅವತ್ತು ತುಘಲಕ್ಕನ ಸುದ್ದಿ ಹೇಳಿದ್ದಕ್ಕೇ ಇವ ಹೀಂಗೆ ಮಾಡಿದ್ದ."

"ಅಲ್ಲಾ ಮತ್ತೆ!! ನಾ ಎಂತ ಮಾಡಿರೂ ಹೀಂಗೆ ಆಗ್ತಲ. ಇವಕ್ಕೆಲ್ಲಾ ಆನೊಬ್ಬವ ಇದ್ದಿ ಅಂತ ಗೊತ್ತೇ ಆಗ್ತಲ್ಲೇ. ಹಾಂಗಾರೆ ನಾಣುಗೆ, ಮುಂಚೇನೇ ಹೇಳಿದ್ರೆ ಎಂತ ಮಣ್ಣು ಖಾಲಿ ಆಗ್ತಿತ್ತು ಬ್ಯಾಡದಾ? ಹಾಳಾಗಿ ಹೋಗ್ಲಿ. ಇವಕ್ಕೆಲ್ಲಾ ಮುಕ್ಳಿ ಸೊಕ್ಕು. ತಮಗೆ ಗೊತ್ತಿದ್ದೂ ಅಂತ.  ಯಂಗೆ ವಯಸ್ಸು ೫೦ ರ ಹತ್ರ ಬಂತು. ಮರೆವು ಬೇರೆ. ಈ ಅಡಿಕೆ ತ್ವಾಟ ನಂಬಿ ಇದ್ರೆ ನಮ್ಮ ಮನೆ ದಾರಿ ನಮಗೆ ಮರಿದೆ ಹೋದ್ರೆ ದೊಡ್ಡದು. ಒಟ್ಟೂ ಇಲ್ಲಿ ಇರಕ್ಕೆ ಸಾಧ್ಯ ಇಲ್ಲೆ. ಈ ತ್ವಾಟ ಮನೆ ಎಲ್ಲಾ ಹುಟ್ಟಿದಷ್ಟಕ್ಕೆ ಮಾರಿ ಎಲ್ಲಾದ್ರೂ ದೂರ ಅಲ್ಲ ಪ್ಯಾಟೆ ಕಡೆ ಹೋಪದು ಒಳ್ಳೆದು. ಸಾಗರಾದಾಗೆ ಮನೆ ಮಾಡಿರೆ? ಬ್ಯಾಡ ನಮಗೆ ಬ್ಯಾಡ ಅಂದವರಿಂದ ದೂರನೆ ಇರಕ್ಕು. ಇವ್ವು ಇಲ್ಲಿ ಮಾತಾಡ್ಕಂಡ್ರೆ,' ವಿಶ್ವ ಎಂತದೂ ಮಾಡ್ಕಳ್ದೆ, ಬರೀ ಎಂತೆಂತದೋ ಮಾಡಿ ಹಾಳಾಗಿ ಕೆಟ್ಟು ಪ್ಯಾಟೆ ಸೇರಿದ' ಅಂತ ಮಾತಾಡ್ಕತ್ತ. ಅದೂ ಅಲ್ದೆ ಸಾಗರ ಇಲ್ಲಿಂದ ದೂರ ಅಲ್ಲ. ಹಾಂಗಾಗಿ ಅಲ್ಲೂ ಅಪ ಪ್ರಚಾರ ಆಗ್ತು. ಮತ್ತೆ ಅಲ್ಲಿ ಬೆಲೆ ಸಂಪಾದನೆ ಮಾಡದು ಕಷ್ಟ ಆಗ್ತು. ಬೆಲೆ ಏನಿದ್ರೂ ಹುಟ್ಟಿದ ಊರಲ್ಲಿ ಗಳಿಸಕ್ಕು. ಅದಕ್ಕೆ ಒಂದೇ ದಾರಿ. ಆನು ಇಂಟರ್ನೆಟ್ ಮತ್ತೆ ದೊಡ್ಡ ಗ್ಲಾಸಿನ ಫೋನ್ ಇಟಗಂಡು, ವಾಸಪ್ಪು, ಫೇಸ್ ಬುಕ್ ಸಹವಾಸ ಮಾಡಕ್ಕು. ಅದರಿಂದ ವಿಚಾರ ಎಲ್ಲಾ ತಿಳ್ಕಂಡು ಈ ಹುಡ್ರಿಗೆ ತೋರ್ಸಕ್ಕು."

ವಿಶ್ವನಿಗೆ ಇಲ್ಲೂ ಸಂಕಟ. ತಾನು ಇಂಟರ್ನೆಟ್ ಉಪಯೋಗಿಸಿ ತಿಳಿದರೆ ಉಳಿದವರಿಗೂ ತನಗೂ ವ್ಯತ್ಯಾಸವಿಲ್ಲ. ಉಪಯೋಗಿಸದೆ ತಿಳಿದದ್ದು ಸಾಕಾಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ತನಗೆ ಕಂಪ್ಯೂಟರ್ ಗೊತ್ತಿಲ್ಲ. ಅದನ್ನು ಬೇರೆಯವರು ಹೇಳಿಕೊಡುತ್ತಿಲ್ಲ ಎಂಬ ಸಂಕಟ ಬೇರೆ ಅವನಿಗೆ. ಅಷ್ಟರಲ್ಲಿ ಒಂದು ಮಹತ್ ಯೋಚನೆ ಮಾಡಿದ. "ಹೇಗೂ ಉಡುಪಿಯಲ್ಲಿ ಪಿ ಯು ಸಿ ಮಾಡುತ್ತಿರವ ಮಗಳು ಮುಂದಿನ ತಿಂಗಳು ಮನಿಗೆ ಬತ್ತಾ ಇದ್ದ. ಅವಳು ಬಂದಾಗ ಅವಳಿಗೆ ಅಂತ ಒಂದು ಕಂಪ್ಯೂಟರ್ ತರಸ್ತಿ ಬೆಂಗಳೂರಲ್ಲಿಪ್ಪ ಭಾವನ ಹತ್ತಿರ ಹೇಳಿ. ಅವಳು ಇಲ್ಲಿಂದ ಹೋಪದರ ಒಳಗೆ ಇಂಟರ್ನೆಟ್ಟಿಂದ ವಿಚಾರ ತಿಳಿಯದು ಹೇಂಗೆ ಅಂತ ಕಲ್ತಗತ್ತಿ. ಆಮೇಲೆ ಇದ್ದು ಇವಕ್ಕೆ. ಹಬ್ಬ ಆಗ್ಗು. ಏನು ಇವ್ವು ಒಂದೇ ಎಲ್ಲಾ ಕಲ್ತಿದ್ದಾ. ವಿದ್ಯೆ ಯಾರಪ್ಪನ ಮನೆ ಸೊತ್ತು?" ಎಂದು ಭರ್ಜರಿ ಪ್ಲಾನ್ ಹಾಕಿದ.

ಮಗಳು ಮನೆಗೆ ಬರುವ ದಿನ ಹತ್ತಿರ ಬರುತ್ತಿತ್ತು. ಅವಳು ಬರುವ ಮೊದಲೇ ಲ್ಯಾಪ್‌ಟಾಪ್ ಬಂದು ಡಬ್ಬದಲ್ಲಿ ಕುಳಿತಿತ್ತು. ಎಲ್ಲಿ "ವಿಶ್ವಣ್ಣ ಮಗಳ ಹತ್ರ ಕಂಪ್ಯೂಟರ್ ಕಲ್ತ" ಅಂತ ಊರೆಲ್ಲ ಡಿ ಗ್ರೇಡ್ ಮಾಡುತ್ತಾರೋ ಎಂಬ ಭಯದಿಂದ ಅದನ್ನು ಯಾರಿಗೂ ತೋರಿಸಿರಲಿಲ್ಲ. 

ಸ್ವಲ್ಪ ದಿನಕ್ಕೆ ಮಗಳು ಮನೆಗೆ ಬಂದಳು. ವಿಶ್ವನೂಕಂಪ್ಯೂಟರಿನ ಪೆಟ್ಟಿಗೆ ತೆರೆದು ಅಮಿತೋತ್ಸಾಹದಲ್ಲಿ, ನಾಣು ಮತ್ತಿತತರರನ್ನು ಮಣಿಸಿ ಮುಗಿಸಿದ ಖುಷಿಯಲ್ಲಿ ಕುಳಿತ.

ಮಗಳು ಕಂಪ್ಯೂಟರ್ ಹೇಳಿಕೊಡಲು ಶುರು ಮಾಡಿದ್ದಳು ಅಷ್ಟೇ. "ಅದೆಲ್ಲ ಬಿಡು. ಫೇಸ್ ಬುಕ್ ಹೇಳ್ಕೊಡು" ಅಂದ. ಮಗಳು ನಿರ್ಲಕ್ಷಿಸಿ ಬುಡದಿಂದ ಹೇಳಿಕೊಟ್ಟಳು. ತಲೆಗೆ ಹೋದರಲ್ಲವೇ, ಬೇಕಾಗಿದ್ದು ಫೇಸ್ ಬುಕ್ನಲ್ಲಿ ಹೇಗೆ ಬರೆಯಬೇಕು ಎಂದು ಕಲಿಯುವುದು ಅಷ್ಟೇ.

ದಿನಾ ಮಗಳು ಕಂಪ್ಯೂಟರ್ ಬೂಟ್ ಮಾಡಿಕೊಟ್ಟು, ಇಂಟರ್ ನೆಟ್ ಕನೆಕ್ಟ್ ಮಾಡಿ, ಅಪ್ಪನನ್ನು ತನ್ನಫೇಸ್ ಬುಕ್ಕಿಗೆ ತಂದು ಕಲಿಸಿಕೊಡುತ್ತಿದ್ದಳು.. ಈ ಪ್ರಾಣಿಗೆ ಒಂದು ಸಲ ಫೇಸ್ ಬುಕ್ ದರ್ಶನವಾದ ಕೂಡಲೇ  ಭಕ್ತನಿಗೆ ದೇವರು ಕಂಡಂತಾಗುತ್ತಿತ್ತು. ಕಂಪ್ಯೂಟರ್ ಉಪ್ಯೋಗಿಸಿ ಬರೆಯುವುದನ್ನು ಕಲಿಯಬೇಕೆಂಬ ಆಸೆ ಮರೆತು ಹೋಗುತ್ತಿತ್ತು. ಮತ್ತೆ ರಾತ್ರಿ ಮಲಗುವಾಗ ಯೋಚನೆಯಾಗಿ, ಅದೇ ಕವಳದ ಸಾಂಗತ್ಯ, ನಿದ್ದೆಯೊಂದಿಗೆ ವಿರಸ, ನಾಳೆ ಕಲಿಯಲೇ ಬೇಕೆನ್ನುವ ಹಠ.

ಕೊನೆಗೊಂದು ದಿನ ತೀರ್ಮಾನ ಮಾಡಿದ. " ಇವತ್ತು ಫೇಸ್ ಬುಕ್ ಓಪನ್ ಮಾಡಸ್ತ್ನೆ ಇಲ್ಲೆ. ಬರೆಯದು ಹೇಂಗೆ ಅಂತಷ್ಟೇ ಕಲಿತಿ." ಎಂದು. ಅಂತೆಯೇ ಮಾಡಿದ ಕೂಡ. ಪುಣ್ಯ. ಬರಹದ ಬರವಣಿಗೆ ಸುಲಭವಾಗಿತ್ತು. ಮಗಳಿಗೆ ಹೇಳಿಕೊಡುವುದು ಕಷ್ಟವಾಗಲಿಲ್ಲ.

ಒಂದು ದಿನ ವಿಶ್ವ, ಹೀಗೇ ಬರೆಯುವುದನ್ನು ಪ್ರಾಕ್ಟೀಸ್ ಮಾಡುತ್ತಿದ್ದ. ಅಷ್ಟರಲ್ಲಿ ಪಕ್ಕದ ಮನೆಯ ಕೃಷ್ಣಭಟ್ಟರು "ಹೊ ವಿಶ್ವ ಎಂತ ಮಾಡ್ತಿದ್ಯೊ? ಒಂದು ಸಮಸ್ಯೆ ಆಗಿ ಹೊಯ್ದು ಮಾರಾಯ" ಎನ್ನುತ್ತಾ ಬಂದು ಅವ್ನ ಪಕ್ಕದಲ್ಲೇ ಕುಳಿತು, ಕಂಪ್ಯೂಟರಿನಲ್ಲಿ ಹಣಕಿದರು.

ಭಟ್ಟರೇನೊ, ತಮ್ಮ ಸಮಸ್ಯೆಯನ್ನು ಚರ್ಚಿಸಿ ಪರಿಹಾರ ಪಡೆದು ಹೋದರು. ಆದರೆ ವಿಶ್ವನ ತಲೆಗೆ ಹೊಸ ಹುಳ ಹೊಕ್ಕಿತ್ತು. ತಾನು ಅರ್ಧಮರ್ಧ ಬರೆದಿದ್ದನ್ನು ಯಾರಾದರೂ ನೋಡಿ, ಅದನ್ನು ಪ್ರಕಟಪಡಿಸುವ ಮೊದಲೇ ತಮ್ಮದಾಗಿಸಿಕೊಂಡರೆ ಎಂದು.

ಮಗಳಲ್ಲಿ ಪರಿಹಾರ ಕೇಳಿದ. ಅವಳು ಸಿಟ್ಟಾಗಿ," ಅದಕ್ಕೆ ಹೇಳದು. ಬುಡದಿಂದ ಕಲಿಯಕ್ಕು ಅಂತ. ಆನು ದಿನಾ ಆನ್ ಮಾಡಕ್ಕಿದ್ರೆ ಪಾಸ್ ವರ್ಡ್ ಎಲ್ಲಾ ಕೊಡ್ತಿ. ನೀನು ಅದು ನೋಡ್ಕತ್ತಲ್ಲೇ. ಈಗ ತಲೆ ತಿಂತೆ" ಎಂದಳು.

ಕಲಿಯುವುದು ಅನಿವಾರ್ಯ ಎಂದುಕೊಂಡಿದ್ದ ವಿಶ್ವ ಬಾಯಿ ಮುಚ್ಚಿ ಮಗಳು ಕಲಿಸಿದ್ದನ್ನು ನೋಡಿದ. ಮಗಳು, "ಅಪ್ಪಾ!! ಪಾಸ್ ವರ್ಡ್ ಬರಕ. ಸ್ಪೆಲಿಂಗ್ ಹೇಳ್ತಿ." ಅಂದಳು.

ಸ್ವಭಾವದಂತೆ ವಿಶ್ವ," ನೀ ಎಂತ ಶಬ್ದ ಕೊಟ್ಟಿದ್ದೆ ಹೇಳು. ಯಂಗೆ ಎಸ್ ಎಸ್ ಎಲ್ ಸಿ ಆಯ್ದು. ಸ್ಪೆಲಿಂಗ್ ಎಲ್ಲಾ ಗೊತ್ತಾಗ್ತು" ಅಂದ. ಮಗಳು "ಗಣಪತಿ" ಎಂದಷ್ಟೇ ಹೇಳಿದಳು.

ಕಂಪ್ಯೂಟರ್ ಶಟ್ ಡೌನ್ ಮಾಡಿ, ಅಪ್ಪನಲ್ಲಿ ಲಾಗಿನ್ ಮಾಡುವುದಕ್ಕೆ ಹೇಳಿ, ಪಕ್ಕದ ಮನೆಗೆ ಹೋಗಿ ಒಂದು ಗಂಟೆ ಬಿಟ್ಟು ಬಂದಳು. ವಿಶ್ವ ಲಾಗಿನ್ ಮಾಡಿರಲಿಲ್ಲ. ತಿಣುಕುತ್ತಲೆ ಇದ್ದ. ಮಗಳ ಮೇಲೆ ಹರಿಹಾಯ್ದ."ಮಳ್ಳು ಕೂಸೇ!! ಎಂತ ಕೊಟ್ಟಿದ್ಯೆ ಪಾಸ್ ವರ್ಡ್? ತಾಗ್ತ್ತಾನೆ ಇಲ್ಲೆ."

"ಕೊಡಿಲ್ಲಿ" ಎನ್ನುತ್ತಾ ಪಾಸ್ ವರ್ಡ್ ಕೊಟ್ಟಳು. ಲಾಗಿನ್ ಆಯಿತು.

"ಆನು ಕೊಟ್ಟಾಗ ಎಂತಕ್ಕೆ ಆಗ್ಲೇ?" ಎಂದ

"ತಪ್ಪು ಕೊಟ್ಟಿದ್ದೆ ಅದಕ್ಕೆ"

"ಎಂತ ತಪ್ಪು.   G-A-N-A-P-A-T-I     ಅಂತ ಅಂದ್ರೆ ಗಣಪತಿ ಅಲ್ದಾ?

"ಅದಕ್ಕೆ ಹೇಳಿದ್ದು ಸ್ಪೆಲಿಂಗ್ ಬರ್ಕ ಅಂತ.  G-A-N-P-A-T-H-I  ಅಂದ್ರೂ ಅದೇಯ."

ಪಟ್ಟು ಬಿಡಲೊಲ್ಲದೆ ಅಲ್ಲ, ಮಗಳೆದುರು ತನ್ನದು ತಪ್ಪು ಅಂತಾದರೆ ಮರ್ಯಾದೆ ಉಳಿಯಲಿಕ್ಕಿಲ್ಲ ಅಂತ ವಿಶ್ವ " ನಿಂಗಕ್ಕೆ ಪಾಸಿಟಿವ್ ಥಿಂಕಿಂಗ್ ಇಲ್ಲೆ. ನೀ ಸರಿ ಹೇಳಲ್ಲೆ ಯಂಗೆ" ಎನ್ನಬೇಕೆ?

  # ವಿಶಾರದ ವಿಶ್ವನಾಥ- 4

No comments:

Post a Comment