Tuesday, November 14, 2017

ವಿಶ್ವನಾಥನ ಹೆಸರು ಬಂತು......

ಹೀಗೆ ನಾಣು ಮಾಣಿಯನ್ನು ನೇರವಾಗಿ ಅಲ್ಲದಿದ್ದಾರೂ ಸುತ್ತಿ ಬಳಸಿ ಇಕ್ಕಟ್ಟಿನಲ್ಲಿ ಸಿಕ್ಕಿಸಿ, ತನಗೆ ಅವ ನಿದ್ದೆ ಕೆಡಿಸಿದ್ದಕ್ಕೆ ಸೇಡು ತೀರಿಸಿಕೊಂಡು ನೆಮ್ಮದಿ ಕಂಡ ವಿಶ್ವನಾಥ. ಆದರೆ ಈ ನೆಮ್ಮದಿಯೂ ಅವನ ಪಾಲಿಗೆ ಶಾಶ್ವತವಾಗಲಿಲ್ಲ. ಮತ್ತೊಬ್ಬರನ್ನು ಪರೀಕ್ಷಿಸಿ ಅವರಿಗೆ ಗೊತ್ತಿಲ್ಲದಿದ್ದರೆ ಮಾತ್ರ ಇವನಿಗೆ ಒಂದು ಸಮಾಧಾನವಾಗುತ್ತಿತ್ತು. ಆದರೆ ಫೇಸ್ ಬುಕ್ ಟ್ವಿಟ್ಟರ್, ಟೆಡ್ ಟಾಕ್ ಗಳ ಈ ಯುಗ, ಒಂದೇ ದಿನ ಎಲ್ಲಾ ಪೇಪರುಗಳನ್ನೂ ಒಂದೇ ಕಿಟಕಿಯಲ್ಲಿ ತೋರುವ ಈ ಮಾಹಿತಿ ಯುಗ ಅದನ್ನು ಸುಲಭಸಾಧ್ಯವಾಗಿಸಲಿಲ್ಲ.
ಚಿಂತೆ ಯೋಚನೆಗಳ ದೆಸೆಯಿಂದ ವಿಶ್ವಣ್ಣ ಅನುಭವಿಸಿದ ಪಾಡು ಪಾಪ ಅವನಿಗೆ ಗೊತ್ತು. ರಾತ್ರಿ ನಿದ್ದೆ ಇಲ್ಲ. ಯೋಚೆನೆಗಳು ಹೋಗಲೊಲ್ಲವು. ಬಂದ ಯೋಚನೆಗಳನ್ನು ಹೊರಕಲಿಸೆ, ಹೊಸ ಯೋಚನೆಗಳನ್ನು ಪಡೆಯಲು ಅವನಿಗಿದ್ದ ಏಕೈಕ ಆಯುಧ ಕವಳ. ಪರಿಣಾಮ ಪಿತ್ತ ಹೆಚ್ಚಿತು. ನಿದ್ದೆ ಬಿಟ್ಟ ಕಾರಣದಿಂದ ಬುದ್ಧಿ ಮೊನಚು ಕಳೆದುಕೊಂಡಿತು. ಆಯಾಸ ಬೇರೆ. ದೈನಂದಿನ ಕೆಲಸಗಳನ್ನು ಮಾಡಲು ಉತ್ಸಾಹವಾಗಲೀ ಚೈತನ್ಯವಾಗಲಿ ಇಲ್ಲ. ಫಲಿತಾಂಶ, ಕೆಲಸಗಳು ಕೆಟ್ಟವು. ಕೆಟ್ಟ ಕೆಲಸದಿಂದ ತಲೆ ಇನ್ನಷ್ಟು ಕೆಟ್ಟಿತು.
ಇದನ್ನೆಲ್ಲಾ ನೋಡಿದ ನಾಣುವಿಗೆ ಅನ್ನಿಸತೊಡಗಿತು."ವಿಶ್ವಣ್ಣ ಜನ ಒಳ್ಳೆಯವನೇ. ಆದರೆ ಪಾಪ. ಹೆಸರು ಮಾಡಕ್ಕು. ಅದರಲ್ಲೂ ಬೇರೆಯವರು ತನ್ನ ಮಾತು ಕೇಳ್ತ ಅಂತಾಗಕ್ಕು ಎಂಬ ಆಸೆ ಇವನಿಗೆ. ಮುಂದಿನ ಸಲ ಲೇಖನ ಬರೆದಾಗ ಅಥವಾ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದಾಗ ಅವನಿಗೆ ಒಂದು ಕೃತಜ್ಞತೆ ಸಲ್ಲಿಸಕ್ಕು." ಎಂದುಕೊಂಡ. ಅಂತೆಯೇ ಮಾಡಿದ ಕೂಡ. ಎಲ್ಲೋ ಒಂದು ಸಾರಿ ಕೆಳದಿ ಚೆನ್ನಮ್ಮ ಔರಂಗಜೇಬನನ್ನು ಸೋಲಿಸಿದ ಬಗೆಯನ್ನು ವಿಶ್ವನಾಥನೂ ಸೇರಿದಂತೆ ಅನೇಕರ ಬಾಯಿಯಿಂದ ಕೇಳಿ ತಿಳಿದುಕೊಂಡಿದ್ದ ನಾಣು ಅದೇ ವಿಷಯದ ಮೇಲೆ ಫೇಸ್ ಬುಕ್ಕಿನಲ್ಲಿ ಪೋಸ್ಟ್ ಹಾಕಿದ. ಕೊನೆಯ ಸಾಲಿನಲ್ಲಿ ಬರೆದ, " ನಮ್ಮೂರಿನ ಚರಿತ್ರೆಯನ್ನು ಇಂದಿಗೂ ಢಾಳಾಗಿ ನೆನಪಿಟ್ಟುಕೊಂಡು ನಮ್ಮ ಮುಂದೆ ಇದನ್ನು ಕಣ್ಕಟ್ಟುವಂತೆ ವರ್ಣಿಸುವ ವಿಶ್ವನಾಥನ್ನನೇ ಈ ಲೇಖನದ ನಿಜವಾದ ಲೇಖಕ" ಎಂದು.
ಅದನ್ನು ಈ ನಾಣು ವಿಶ್ವನಿಗೆ ಹೇಳಲೇ ಇಲ್ಲ. ಹೇಳಿದರೆ ಮತ್ತೆ ಇವನ ಹತ್ತಿರ ಪಾಸಿಟಿವ್ ಥಿಂಕಿಂಗ್ ಹೆಸರಿನಲ್ಲಿ ಬೈರಿಗೆ ಗತಿ ಅಂತಲೋ ಏನೋ. ದೈವ ಲೀಲೆಯೋ ಎಂಬಂತೆ ಆ ಲೇಖನ ಪತ್ರಿಕೆಯಲ್ಲೂ ಅಚ್ಚಾಯಿತು. ನಿದ್ದೆಗೆಟ್ಟು ಚಿಂತೆಯಿಂದ ಬಸವಳಿದಿದ್ದ ವಿಶ್ವ ಸ್ವಲ್ಪ ದಿನ ರೆಸ್ಟ್ ಬೇಕು ಅಂತ ಲೈಬ್ರರಿಗೆ ಹೋಗಿರಲಿಲ್ಲ. ಅವತ್ತು ಸಂಜೆ ಹಾಲು ಕೊಡಲು ಡೈರಿಗೆ ಹೋದಾಗ ಮೇಲಿನ ಕೇರಿ ಗಜಾನನ ಭಟ್ಟರು, " ಏ ವಿಶ್ವ!! ನೀನು ಹೇಳಿದ ಚೆನ್ನಮ್ಮನ ಕತೆಯಡ. ನಾಣು ಬರದ್ದ. ಇವತ್ತಿನ ಪೇಪರ್‌ನಲ್ಲಿ ಬೈಂದು. ಚನಾಗಿದ್ದ ಕತೆ." ಅಂದ. ಒಳಗೊಳಗೇ ಹಿರಿ ಹಿರಿ ಹಿಗ್ಗಿದ ವಿಶ್ವನಿಗೆ ನಾನುವಿನ ಮೇಲಿನ ಕೋಪ ಎಷ್ಟೋ ದಿನಗಳಿಂದ ತಲೆಯ ಮೇಲಿದ್ದ ಚಿಂತೆಯ ಭಾರ ಎಲ್ಲವೂ ಒಂದೇ ಸರಿ ಇಳಿಯಿತು. ಬಹುಷಃ ಜಾಪಾಳು ಮಾತ್ರೆಗೂ ಆ ವೇಗದಲ್ಲಿ ಹೊಟ್ಟೆ ಭಾರ ಇಳಿಯಲಿಕ್ಕಿಲ್ಲ.
ಆದ ಸಂತೋಷದಲ್ಲಿ, ವಿಶ್ವ ಮಾತು ಶುರುವಿಟ್ಟುಕೊಂಡ.
"ಆನೂ ಓದಿದ್ನಾ. ಮಾಣೀ ಭಾರೀ ಚನಾಗಿ ಬರದ್ದ. ಅಷ್ಟು ಚನಾಗಿ ಬರಿತ ಅಂತ ಯಂಗೆ ಗ್ಯಾರಂಟಿ ಇರಲೆ. ವಿಚಾರ ಹಾಂಗಿದ್ದ ಅದು. ಅದೇ ಬರಸ್ಕತ್ತು. ಹೂಂ ಮತ್ತೆ. ಅವಳು ಹೆಂಗಸಲ್ದಾ. ನಿಜವಾಗಿ ಗಂಡಸುತನ ಅಂದ್ರೆ ಅವಳಿಗೆ ಇದ್ದಿದ್ದು. ಇಲ್ದೆ ಇದ್ರೆ ರಾಜ್ಯದ ಒಳಗೆ ಶತ್ರುಗಳಿದ್ದ. ಅಂತಾದ್ರಲ್ಲೂ ಆ ಬ್ರಿಟಿಷರನ್ನ ಎದುರು ಯುದ್ಧ ಮಾಡಿದ. ರಾಜ್ಯ ಸಂರಕ್ಷಣೆಗೆ ಮುಂದಾದ. ನಾವು ಕಿತ್ತೂರು ಸಂಸ್ಥಾನದಲ್ಲಿ ಇಲ್ಲದೆ ಕೆಟ್ವಾ!! ಇಲ್ಲಿ ಆ ಹೈದರಾಲಿ ಟಿಪ್ಪು ಇಬ್ಬರು ಬಾರದೆ ಹೋಗಿದ್ರೆ, ಯಂಗಕ್ಕೆ ಅಂದ್ರೆ......"

ಹೀಗೆ ವಿಶ್ವಣ್ಣನ ವಾಗ್ಝರಿ ಸಾಗುತ್ತಲೇ ಇದ್ದಾಗ ಗಜಾನನ ಭಟ್ಟರು "ಅಲ್ದಾ" ಎಂಬ ಉದ್ಗಾರ ತೆಗೆದರು. ನಿಲ್ಲು ಎನ್ನುವಂತೆ ಕೈ ತೋರಿಸಿದ ವಿಶ್ವ ಮತ್ತೆ ಮುಂದುವರೆಸಿದ.
"ಎಂತ ಹೇಳ್ತಿದ್ದಿ, ಮೈಸೂರು ಸಂಸ್ಥಾನದಾಗೆ ಅಂತಾ ಒಬ್ಬಳು ಹೆಂಗಸಿದ್ದಿದ್ರೆ, ಟಿಪ್ಪು ಹೈದರಾಲಿ ಬರ್ತನೆ ಇರ್ಲೆ. ಈ ನಮ್ಮ ಕೆಳದಿ ಸಂಸ್ಥಾನಾದವ್ವು ಅವತ್ತು......."
"ಅಲ್ದಾ!!!" ಎನ್ನುತ್ತಾ ಮತ್ತೆ ತಡೆದರು.
ಸಿಟ್ಟಾದ ವಿಶ್ವ," ನಿನಗೆ ಪೂರ್ತಿ ಮಾತು ಕೆಳಕ್ಕೆ ಎಂತ ಖಾಯಿಲೆ. ಮಾತಾಡದೆ ಯೋಚನೆ ಹೊರಗಡೆ ಹೋಗ್ತಲ್ಲೇ. ಹೊರಗಡೆ ಹೋಗದೆ ಹೊಸದು ಒಳಗಡೆ ಬತಲ್ಲೆ. ಆವಾಗ ನೆಗೆಟಿವ್ ಥಿಂಕಿಂಗ್ ಶುರು ಆಗ್ತು. ನಿಂಗಕ್ಕೆಲ್ಲಾ ಅದೇ ಆಯ್ದು. ............."
ಓತಪ್ರೋತವಾಗಿ ಹೀಗೆ ವಿಶ್ವಣ್ಣ ವಿಶ್ವ ವಾಣಿ ಹೇಳುತ್ತಿದ್ದಾಗ ಅಲ್ಲಿಗೆ ನಾಣು ಬಂದ.  ಅವ ಬಂದ ಕೂಡಲೇ ಅವನ ಕಡೆ ತಿರುಗಿ, ಗಜಾನನ ಭಟ್ಟರು, "ಮಾಣಿ, ಕೆಳದಿ ಚನ್ನಮ್ಮನ ಬಗ್ಗೆ ಒಳ್ಳೆ ಲೇಖನ ಬರದ್ದೆ" ಎಂದರು.
"ಯಂದು ಎಂತದೂ ಇಲ್ಯಾ ಅದರಾಗೆ; ಎಲ್ಲಾ ವಿಶ್ವಣ್ಣ ಹೇಳಿದ್ದು." ಅಂದು ಬಿಟ್ಟ.

ವಿಶ್ವ ಪುಸಕ್ಕನೆ, ಗಜಾನನ ಭಟ್ಟನ ಮೇಲೆ ಹರಿಹಾಯ್ದ, "ಭಟ, ಸರಿ ಹೇಳಕ್ಕೂ ಯಾವ್ದಾರು ಒಂದ. ನಿನಗೆ ಬಿಡಿಸಿ ಹೇಳಕ್ಕೆ ಎಂತ ರೋಗ, ಕೆಳದಿ ಚನ್ನಮ್ಮ ಅಂತ. ಸರಿ ಕೇಳ್ಕಂಬ  ಅಭ್ಯಾಸ ಇಲ್ಲೆ. ಮತ್ತೆಂತ ಸರಿ ಮಾತಾಡ್ತಿ ನಿಂಗ. ನೆಗೆಟಿವ್ ಥಿಂಕಿಂಗ್ ತುಂಬಿ ಹೋದ್ರೆ ತಲೆ ಒಳಗೆ ಹೀಂಗೆ ಆಪದೆ ಸೈ. ತಂದೆಲ್ಲಿಡ್ಲಿ ಅಂತ ಮಾತು." ಎಂದು ಗುರುಗುಟ್ಟಿ ಹೊರಟ ಅಲ್ಲಿಂದ. ವಿಶ್ವನನ್ನು ಎಳವೆಯಿಂದ ಬಲ್ಲವರು ಗಜಾನನ ಭಟ್ಟರು. ಹಾಗಾಗಿ ಅವರೇನೋ ಅನ್ಯಥಾ ಭಾವಿಸಲಿಲ್ಲ.
ಆದರೆ ವಿಶ್ವ, ತನ್ನ ತಲೆಯಿಂದ ಇಳಿದ ಯೋಚನೆಗಳಿಗೆ ಬಡ್ಡಿ ಚಕ್ರಬಡ್ಡಿ ಸೇರಿಸಿ ತಲೆಗೇರಿಸಿಕೊಂಡ ಮತ್ತೆ.

# ವಿಶಾರದ ವಿಶ್ವನಾಥ-3

No comments:

Post a Comment