Wednesday, November 22, 2017

ಟಿಪ್ಪುರಾಣ-1

ಒಂದು ದಿನ ನೈಮಷಾರಣ್ಯದಲ್ಲಿ ಸನಕಾದಿ ಮುನಿಗಳು ತಮ್ಮ ನಿತ್ಯಕರ್ಮಗಳನ್ನು ಮುಗಿಸಿ, ಅನುಷ್ಠಾನವನ್ನು ಪೂರೈಸಿ, ಉಪನಿಷತ್ತು-ಪುರಾಣ-ಪುಣ್ಯಕತೆಗಳನ್ನು ತಮ್ಮ ಶಿಷ್ಯರಿಗೆ ಬೋಧಿಸುತ್ತಾ, ಅವರೊಡನೆ ಚರ್ಚಿಸುತ್ತಾ ಇದ್ದ ಹೊತ್ತು, ಆ ಪುಣ್ಯವೂ ರಮ್ಯವೂ ದಿವ್ಯವೂ ಆದ ಕ್ಷೇತ್ರಕ್ಕೆ ಸೀದ ಪುರಾಣಿಕರು ಆಗಮಿಸಿದರು.

ಆಶ್ರಮ ಧರ್ಮದಂತೆ, ಸನಾತನ ಪರಂಪರೆಯಂತೆ, ಅಲ್ಲಿದ್ದ ಮುನಿಗಳು ಪುರಾಣೀಕರಿಗೆ ಷೋಡಶೋಪಚಾರಗಳಿಂದ ಸಂತುಷ್ಟಿಯನ್ನು ನೀಡಿ, ಉಚಿತಾಸಾನವನ್ನು ಸಮರ್ಪಿಸಿ ಅವರ ಪದತಲದಲ್ಲಿ ಕುಳಿತರು.

ಆಗ ಆಶ್ರಮವಾಸಿಗಳಲ್ಲಿ ಅತ್ಯಂತ ತೇಜಸ್ವಿಯೂ, ಎಲ್ಲರಿಗಿಂತ ಹಿರಿಯನೂ ಆದ ಉಲೂಕ ಎನ್ನುವ ಮಹರ್ಷಿಯು ಎದ್ದು ನಿಂತು, ವಿನಯದಿಂದ ವಂದಿಸಿ, ದೇಹವನ್ನು ಬಗ್ಗಿಸಿ ಮೃದು ಮಧುರವಚನಗಳಿಂದ ಸೀದನನ್ನು ಕುರಿತು ಹೀಗೆಂದನು. "ಸೀದನೇ, ಜ್ಞಾನಿಯೇ, ಸ್ವಾಮಿಯೇ, ವಿವೇಕಿಯೇ, ಅಂತರ್ಯಾಮಿಯೇ, ಪುರುಷನೇ ಅಲ್ಲದಿರುವವನೆ, ಮಹಾ ಪುರುಷನೇ, ಈ ಹಿಂದೆ ನೀನು ನಮ್ಮಲ್ಲಿಗೆ ಬಂದಾಗಲೆಲ್ಲಾ ಪುಣ್ಯ ಚರಿತರ ವಿಚಾರಗಳನ್ನು ಹೇಳಿ ನಮ್ಮ ಕರ್ಣಗಳನ್ನು ಪುನೀತಗೊಳಿಸಿರುವೆ. ಇಂದು ಕೂಡಾ ನೀನು ಒಂದು ಮಹಾನ್ ವ್ಯಕ್ತಿಯ ಚರಿತ್ರೆಯನ್ನು ಹೇಳು."

ಉಲೂಕನ ಮಾತುಗಳನ್ನು ಕೇಳಿ ನಸುನಕ್ಕು ಸೀದನು, "ಮುನಿವರ್ಯಾ!! ಇಂದು ನಾನು ಹೇಳಲೇಬೇಕು ಎಂದು ತೀರ್ಮಾನಿಸಿಯೇ ಇಲ್ಲಿಗೆ ಬಂದಿರುವೆನು. ಇಷ್ಟು ದಿನಗಳ ಕಾಲ ನಾನು ಹೇಳದ, ನೀವು ಕೇಳದ ಕೇಳಿ ತಿಳಿಯದ ಒಬ್ಬ ಮಹಾನ್ ವ್ಯಕ್ತಿಯ ಚರಿತ್ರೆಯನ್ನು ಕೇಳಲು ಉತ್ಸುಕನಾಗು."

" ಈತನು ಮನುಷ್ಯರಲ್ಲಿ ಶ್ರೇಷ್ಠನೂ ಗುಣದಲ್ಲಿ ಹೆಗ್ಗುಣನೂ ಆಗಿದ್ದಾನೆ. ಸೂರ್ಯನಲ್ಲಿ ಕಿರಣವೂ, ಚಂದ್ರನಲ್ಲಿ ಕಾಂತಿಯೂ, ನೀರಿನಲ್ಲಿ ತಂಪು, ಗಾಳಿಯಲ್ಲಿ ಕಂಪು, ಗಂಧದಲ್ಲಿ ಘ್ರಾಣ, ಶರೀರದಲ್ಲಿ ತ್ರಾಣ, ಉಸಿರಿನಲ್ಲಿ ಪ್ರಾಣವೂ ಆಗಿದ್ದಾನೆ. ಈತ ಸಿಂಹದ ಹೊಟ್ಟೆಯಲ್ಲಿ ಹುಟ್ಟಿದ ಹುಲಿಯೂ ಆಗಿದ್ದಾನೆ. ರಾತ್ರಿ ಕತ್ತಲಾಗುವುದಕ್ಕೂ, ಹಗಲು ತೇಜೋಮಯವಾಗಿರುವುದಕ್ಕೂ ಈತನ ಗುಣಗಳೇ ಕಾರಣ. "

"ಯುಗ ಯುಗಾಂತರಗಳಿಂದ ಅವ್ಯಕ್ತನೂ ಅವ್ಯಯನೂ ಆಗಿರುವ ಈತ ಕಲಿಯುಗದ ಒಂದು ಹಂತದಲ್ಲಿ, ಪುಣ್ಯಮಯವಾದ ಭಾರತವರ್ಷವು ಮ್ಲೇಚ್ಛ ದುಷ್ಟರ ಆಳ್ವಿಕೆಗೆ ಒಳಪಟ್ಟು ನಲುಗುತ್ತಿರುವಾಗ, ಭಗವನ್ತನೂ ಅವತಾರ ತಳೆಯಲು ಅಶಕ್ತನಾದಾಗ ತಾನೇ ಮ್ಲೇಚ್ಛ ಯೋನಿಯಲ್ಲಿ ಹುಟ್ಟಿ, ಮ್ಲೇಚ್ಛ ದಮನವನ್ನು ಮಾಡಿದನು."

"ಈತನು ಸರ್ವ ವ್ಯಾಪ್ತನೂ, ಸರ್ವಾಂತರ್ಯಾಮಿಯೂ, ಬ್ರಹ್ಮ ಸಮ ಜ್ಞಾನಿಯೂ, ವಸಿಷ್ಟ ಸಮ ಮೇಧಾವಿಯೂ ಆದ ಈ ವ್ಯಕ್ತಿಯ ಚರಿತ್ರೆಯನ್ನು ಕಲಿಯುಗದಲ್ಲಿ ಜನರು ತಮಗರಿವಿಲ್ಲದೆಯೇ ಆಡಿಕೊಂಡು, ಪರ ವಿರೋಧಗಳನ್ನು ಮಾಡಿ ಪುಣ್ಯ ಸಂಚಯನವನ್ನು ಮಾಡಿಕೊಂಡರು. ಈತನ ಬಗ್ಗೆ ಅರಿತಿದ್ದ ಮಹಾ ಜ್ಞಾನಿಯೊಬ್ಬ ಇತಿಹಾಸಕಾರನಾಗಿ ಹುಟ್ಟಿ ಈತನನ್ನು ಕೊಂಡಾಡಿದ್ದಕ್ಕೆ, ಭಾಷೆಯೇ ಬಾರದಿದ್ದರೂ ಪ್ರಶಸ್ತಿ ಪಡೆದನು. ಇನ್ನೊಬ್ಬನು ಈತನ ಕುರಿತು ನಾಟಕವನ್ನು ರಚಿಸಿ ಜ್ನಾನಪೀಠವನ್ನು ಪಡೆದನು."

"ಕಲಿಯುಗದಲ್ಲಿ ಜನರು ಪ್ರಾಪಂಚಿಕ ಕಾರ್ಯಗಳು ಮತ್ತು ಸುಖೊಪಭೋಗಗಳಲ್ಲೇ ನಿರತರಾಗಿರುತ್ತಾರೆ ಎಂದು ನಿನಗೆ ಈ ಮೊದಲೇ ತಿಳಿಸಿದ್ದನಷ್ಟೆ? ಈ ಸುಖಗಳು ಕೂಡಾ ಬೇಜಾರವನ್ನು ಏಕತಾನತೆಯನ್ನೂ ಉಂಟುಮಾಡಿ ಅವರಿಗೆ ಭ್ರಮ ನಿರಸನವೂ ದುಃಖವೂ ಉಂಟಾದಾಗ ಎಷ್ಟೋ ಜನ ತಂತ್ರಜ್ಞರಿಗೆ ಯೋಚನೆಗಳನ್ನು ಕೊಟ್ಟು  ಹೊಸ ಆವಿಷ್ಕಾರಗಳಿಗೆ ಕಾರಣನಾದನು."

"ಇಂಥಾ ಸುಖವನ್ನು ಕಲಿಯುಗದಲ್ಲಿ ಮಜಾ ಎಂದು ಕರೆದರು. ಇಂಥಾ ಮಜವೇ ಜೀವನ ಎಂದು ಭಾವಿಸಿ ಸದಾ ಅದರ ಜೊತೆಗೆ ಕೂಡಿ ಇರುವವರಿಗೆ ಸಮಾಜವಾಸಿಗಳು ಎಂದು ಹೆಸರಾಯಿತು. ಅವರೂ ಕೂಡಾ, ಮಜವನ್ನು ಉಂಟು ಮಾಡುವ ಈ ಚೇತನವನ್ನು ಸ್ತುತಿಸುತ್ತಾ ಭಜಿಸುತ್ತಾ ಜೀವನವನ್ನು ಪಾವನವಾಗಿಸಿಕೊಂಡರು."

"ಈತನ ಚರಿತ್ರೆಯನ್ನು ಹೇಗೂ ವಿವರಿಸಿ ಹೇಳುವವನೇ ಇದ್ದೇನೆ. ಈಗ ಈ ಚರಿತ್ರೆಯ ಚರಿತ್ರೆಯನ್ನು ಹೇಳುತ್ತೇನೆ ಕೇಳು. ಹಿಂದೆ ಸ್ವರ್ಗದಲ್ಲಿ ಈ ಚರಿತ್ರೆಯ ಪಾರಾಯಣ ನಡೆಯುತ್ತಿರುವಾಗ ಚಂದ್ರಮನೆಂಬ ಬ್ರಾಹ್ಮಣನು ಅನಾಸಕ್ತನಾದನು. ಅದಕ್ಕೆ ಪಾಠಕನು ಅವನಿಗೆ ಕಲಿಯುಗದಲ್ಲಿ ಭೂಲೋಕದಲ್ಲಿ ಜನಿಸುವಂತೆ ಆದೇಶಿಸಿದನು. ಪ್ರತಿಯಾಗಿ ಚಂದ್ರಮನು ಈ ಚರಿತ್ರೆಯನ್ನು ಅನಾಸಕ್ತಿ ಉಂಟಾಗುವಂತೆ ಬೋಧಿಸಿದ್ದರಿಂದ ಈ ಚರಿತ್ರೆಯು ಲೋಕದಲ್ಲಿ ವಿಸ್ಮೃತವಾಗಲಿ ಎಂದು ಶಾಪ ಕೊಟ್ಟನು. ಅದಕ್ಕೆ ಇಂದ್ರನು ಈ ಚರಿತ್ರೆಯನ್ನು ನೀನೇ ಬರೆದು, ಪ್ರಚುರಪಡಿಸುವಾತಾಗಲಿ ಎಂದು ಬಿಟ್ಟನು ಸಿಟ್ಟಿನ ಭರದಲ್ಲಿ. ಆ ಬ್ರಾಹ್ಮಣನೇ ಈ ಚರಿತ್ರೆಯನ್ನು ಬರೆದ ಶಶಾಂಕನು."

"ಓ ಪಾವನಶ್ರವಣ, ಈ ಮಹಾನ್ ಚೇತನವು ಕಲಿಯುಗದಲ್ಲಿ ಟಿಪ್ಪು ಎಂಬ ಹೆಸರಿನಿಂದ ಖ್ಯಾತವಾಯಿತು. ಈಗ ಈ ಚೇತನದ ಸೃಜನದ ಕಥೆಯನ್ನು ಹೇಳುತ್ತೇನೆ ಕೇಳು."

"ಸೃಷ್ಟಿಯ ಆದಿ ಭಾಗದಲ್ಲಿ ಪದ್ಮಸಂಭಾವನಾದ ವಿರಂಚಿ ಎಂದು ಖ್ಯಾತನಾದ ಚತುರ್ಮುಖ ಬ್ರಹ್ಮನು, ಸೃಷ್ಟಿ ಕಾರ್ಯದಿಂದ ಬಹು ಬಳಲಿ, ಉಲ್ಲಾಸಕ್ಕೆಂದು ತಾನೇ ಸೃಷ್ಟಿಸಿದ ಟೀ ಎಂಬ ಪಾನೀಯವನ್ನು ಕುಡಿಯಲು ಮುಂದಾದನು. ಅದೇ ಸಮಯಕ್ಕೆ ಸರಿಯಾಗಿ ದಾರಿ ತಪ್ಪಿ ಸತ್ಯಲೋಕವನ್ನು ಸೇರಿದ್ದ ಸರ್ಪವೊಂದು ಫೂತ್ಕರಿಸಿತು. ಒಮ್ಮೆಲೆ ಕೇಳಿದ ಫೂತ್ಕರಣದಿಂದ ಬ್ರಹ್ಮನು ಬೆವರಿದನು. ಆ ಬೆವರು ಟೀ ಇದ್ದ ಪಾತ್ರೆಯನ್ನು ಸೇರಿತು. ಆಗ ಈ ಚೇತನದ ಸೃಷ್ಟಿಯಾಯಿತು. ‘ಟೀ’ ಪಾತ್ರೆ ಇಂದ ಬಂದದ್ದಕ್ಕೂ, ‘ಫೂ’ತ್ಕಾರಣವೂ ಅದಕ್ಕೆ ಕಾರಣವಾಗಿದ್ದರಿಂದ ಬ್ರಹ್ಮದೇವನು ಈ ಚೇತನಕ್ಕೆ ಟಿಪ್ಪು ಎಂದು ನಾಮಕರಣ ಮಾಡಿದನು."

"ತಿಳಿಯದೆ ತಪ್ಪಾಗುವುದು ಸಹಜ. ಆದರೆ ಕಾರ್ಯವೊಂದು ಘಟಿಸಿದ ಮೇಲೆ ಮುಂದಿನ ನಡೆಯನ್ನು ವಿಚಾರಿಸದೆ ಇರುವುದು ಸಜ್ಜನರಿಗೆ ಸಮ್ಮತವಲ್ಲ. ಅಂತೆಯೇ ಬ್ರಹ್ಮದೇವನು ಈ ಚೇತನದ ಪೂರ್ವಾಪರವನ್ನು ಅವಲೋಕಿಸಿದಾಗ ಟಿಪ್ಪುವೆ ವಿಶ್ವ ಚೇತನ. ಇದು ಸುಲಭಕ್ಕೆ ಜನರಿಗೆ ಅರ್ಥವಾಗಬಾರದು ಆದರೆ ಪ್ರಪಂಚ ಪರಮಾರ್ಥಗಳನ್ನು ಬೆಸೆದ ದಿವ್ಯ ಭವ್ಯ ರಹಸ್ಯ ಜನರಿಗೆ ಗೊತ್ತಾಗುತ್ತದೆ. ಇದು ಗೊತ್ತಾದಲ್ಲಿ ಪ್ರಪಂಚವು ಪರಮಾರ್ಥವಾಗಿ ಪರಮಾರ್ಥವೂ ಪ್ರಪಂಚವಾಗಿ ಬದಲಾಗುವುದರಿಂದ ಆ ಚೇತನಕ್ಕೆ ಅದೃಶ್ಯವಾಗಿ ಇರುವಂತೆ ಮತ್ತು ಅರಿಯದೆ ಉಪಕರಿಸುವಂತೆ ವಿನಂತಿಸಿದನು. ಟಿಪ್ಪು ಇದಕ್ಕೆ ಸಮ್ಮತಿಸಿದನು. ವಿನಂತಿಯನ್ನು ಪುರಸ್ಕರಿಸುವುದು ಮಹಾಂತರ ಲಕ್ಷಣ ಎಂದು ಈ ಮೂಲಕ ಬ್ರಹ್ಮನಿಗೂ ಅರಿವು ಮೂಡಿಸಿದನು.

ಇತಿ ಟಿಪ್ಪುರಾಣೆ ಆದಿ ಸರ್ಗೆ ಪ್ರವೇಶ ನಾಮಕ ಪ್ರಥಮೊಧ್ಯಾಯಃ ಸಂಪೂರ್ಣಮ್.

# ಟಿಪ್ಪುರಾಣ

No comments:

Post a Comment