Tuesday, November 28, 2017

ಎನಿ ಒಬ್ಬರೂ.......

ಇಂಗ್ಲೀಷರ ಮೇಲೆ ಇಂಗ್ಲೀಷ್ ಮೇಲೆ ಅತೀವ ಪ್ರೀತಿ ಇಟ್ಟುಕೊಂಡು, ಅದನ್ನು ಇಂಚಿಂಚಾಗಿ ಇಂದಿಗೂ ಸಾಯಿಸಿ 'ಖನ್ಣಡ ಬಾಸೆಯ ಹಬಿಮಾನಿಗಳಿಗೆ' ಮಾತಾಡಿದಾಗಲೆಲ್ಲ ರಾಜೋಸ್ತದ ಆಚರಣೆ ನಡೆಸುತ್ತಿದ್ದ ಅನಿಸುತ್ತದೆ ಈ ಹಾಲ ನಾಯ್ಕ. ಮೊನ್ನೆ ಮೊನ್ನೆ ಊರಿಗೆ ಹೋದಾಗ ಸಿಕ್ಕ ಈ ಹಾಲ್. ಇವನನ್ನು ಮತ್ತೆ ರಾಮನಾಯ್ಕನನ್ನು ನೋಡಿದ ಕೂಡಲೇ ಏಕೋ ಏನೋ ನಾನು ನನ್ನನ್ನೇ ಮರೆತು ಮಾತಿಗಿಳಿದು ಬಿಡುತ್ತೇನೆ. ಇವರು ಪಾಪ ನಿರೀಕ್ಷೆಗೆ ತಕ್ಕಂತೆ, ನನಗೊಂದು ಬೈಟ್ ಕೊಡುತ್ತಾರೆ.

ಮೊನ್ನೆ ದೀಪಾವಳಿಗೆ ಊರಿಗೆ ಹೋದಾಗ ಬಲು ಚಂದವಾಗಿತ್ತು. ಈ ಇಬ್ಬರೂ ಪ್ರಭೃತಿಗಳೂ ಒಟ್ಟಿಗೆ ಬಂದರು. ಒಸ್ತೊಡಕಿನ ದಿನ ಕೂಡ ಆಗಿತ್ತು ಅಂದು. ಸಿಕ್ಕ ಇಬ್ಬರೂ, “ಅಯ್ಪಿ ಅರಾಮೈದಿಯ?" ಅಂದರು. ನಾನು ಕೂಡಾ ಅದೇ ವಿಶ್ವಾಸದಲ್ಲಿ "ಹೊ ಆರಾಮ. ನೀವಿಬ್ರೂ ಎಂತ ಈ ಕಡಿಗೆ? ಆವಿನಹಳ್ಳಿಗೆ ಹೋಗಿದ್ರಾ ಒಸ್ತೊಡಕು ಅಂತ." ಎಂದೆ.

"ಎಂತಾ ಒಸ್ತೊಡಕು ಮಾಯ್ಡದೆನ ಅಯ್ಪಿ. ಕಯ್ದ್ರೆ ಯುಲ್ಲ." ಎಂದ ರಾಮ ನಾಯ್ಕ. (ಭತ್ತದ ಕದಿರೇ ಇಲ್ಲ. ಒಸ್ತೊಡಕು ಎಂತ ಮಾಡದು?)

ನನಗೆ ಒಂದು ಸಲ ಒಳಗಿಂದ ಉರಿ ಎದ್ದಿತು. ಕಳ್ಳ ನನ್ನ ಮಕ್ಕಳು. ಒಂದು ಕಾಲದಲ್ಲಿ, "ದುಡಿದರೂ ಒಡೆತನ ಇಲ್ಲ. ಡುಡಿದು ಅರೆ ಹೊಟೆ ಉಂಡು ಧಣಿಗಳ ಹೊಟ್ಟೆ ತುಂಬಿಸಲು ನಾವಿರಬೇಕೆ?ಉಳುವವನೇ ಹೊಲದೊಡೆಯ. ಭೂಮಿ ನೈಸರ್ಗಿಕ ಸಂಪತ್ತು. ಅದರ ಮೇಲೆ ಎಲ್ಲರಿಗೂ ಒಡೆತನ ಉಂಟು." ಎಂಬಿತ್ಯಾದಿ ಸಮಾಜವಾದದ ವಾಕ್ಯಗಳನ್ನು  ಉದ್ಘೋಷಿಸುತ್ತಾ ಗದ್ದೆಯಲ್ಲಿ ಭತ್ತದ ಹೊಟ್ಟು ಬಿತ್ತಿ ಹೋರಾಟ ಮಾಡಿದವರು. ಎಂದನಿಸಿದ್ದು ಸುಳ್ಳಲ್ಲ. ತತ್ ಕ್ಷಣ ನೆನಪಾಗಿದ್ದು, ಈ ವರ್ಷ ಮಳೆ ಇಲ್ಲ ಎನ್ನುವುದು.

ಆದರೂ ಕೇಳಿದೆ. "ಎಂತ? ಗದ್ದೆ ಮಾಡದಿಲ್ಲನ್ರಈಗ? ಎಂತ ಆತ್ರಾ? ಮಳೆ ಇಲ್ಲ ಅಂತ್ಲಾ?"

"ಅಲ್ಲಿ ಆಯ್ಪೀ ಸುಂಟಿ ಹಾಕಿದಿವು" ಅಂದ ರಾಮ.

"ಅಲ್ಲಾ ರಾಮ, ಒಬ್ಬೋಬ್ರಿಗೂ ಇರದು ಹಾಳಿ ಲೆಕ್ಕದಾಗೆ ಗದ್ದೆ. ಬೇರೆ ಎಲ್ಲೂ ಕೆಲಸಕ್ಕೆ ಹೋಗದಿಲ್ಲ ನೀವು. ಸರಕಾರದ ಲೆಕ್ಕದಾಗೆ ನಿಮಗೆ ಸಬ್ಸಿಡಿ ಭಾಗ್ಯ ಎಲ್ಲಾ ಸಿಗದಿಲ್ಲ. ಭತ್ತ ಇದ್ದಿದ್ರೆ ಉಣ್ಣಕ್ಕೆ ತೊಂದ್ರೆ ತಪ್ತಿತ್ತು. ಮಳೆ ಬೇರೆ ಕಮ್ಮಿ. ಸುಂಟಿ ಹಾಕಿರೆ ಕಷ್ಟ ಅಲನ?" ಎಂದೆ.

ಈಗ ಹಾಲ ಅಂದ." ಆಯ್ಪೀ ನಿಮಗ್ಗೊತ್ತಿಲ್ಲ. ಈ ವರ್ಷ ಮಳೆ ತಡ ಆತು. ಭಯ್ತ ಹಾಕುದ್ರೆ ಯಲ್ಲಾ ವಣಗಿಯೇ ಹೋಗ್ತುತ್ತು. ಆದುಕ್ಕೆ ಹಾಯ್ಕ್ಲೆ ಯುಲ್ಲ. ಬರ ವರ್ಷ ಅಕ್ಕಿ ಸಿಗಕಲ್ಲ ನೋಡ್ರೆ. ಎಂತ ಎನಿ ಒಬ್ರೂ ಗದ್ದೆ ಮಾಡುಲ್ಲ. ಎಲ್ಲ ಸುಂಟಿ ಹಾಕ್ಯಾರೆ.ಎನಿ ಒಬ್ರನ್ನ ಕೇಳಿ ನಾ ಗದ್ದೆ ಮಾಡೀನಿ ಅನ್ನವಿಲ್ಲ. ಎನಿ ಒಬ್ರನ್ನ ನೋಡಿ ಸುಂಟಿ"

ರಾಮ, " ಎಂತಾ ಮಾಡ್ತುಯಾ ಮಯ್ತೆ? ಸುಂಟಿ ಹಾಕದೆಯ. ಗೆದ್ದೆ ಖಾಲಿ ಬಿಡಕ್ಕಾಗ್ತೈತೆ? ಇರ ಜಾಗದಾಗೆ ಎಂತಾರು ಬೆಳ್ಕಬೊಕು. ಇಲ್ಡಿದ್ದ್ರೆ, ಹೊಯ್ಟೆ ತುಯ್ಮ್ಬದು ಬ್ಯಾಡೆ? ನಿಂಗೆಂತೊ ಬೋರೆಲ್ಲ್ ಐತೆ ಭೈತ್ತ ಹಾಕ್ರೆ ನಡೀತಾವೆ. ನಮ್ಗಾಗಕ್ಕುಲ್ಲ" ಎಂದ.

ಹಾಲ, " ನಾ ಏನು ರೆಸ್ಟೆಲ್ಲ ಬೋರೆಲ್ ತೆಗೆಸದು ಬ್ಯಾಡ ಅಂದ್ನೇ? ಯುಲ್ಲ. ಬೋರೆಲ್ ತೆಗಸ್ಬೊಕು ಅದಲ್ದೆ ಎನೀ ಒಬ್ರೂ ಸುಂಟಿ ಹಾಕ್ರೆ ಅನಾಹ್ತಾಕಾವೆ. ಎನೀ ಒಬ್ರೂ ಸುಂಟಿ. ಎನೀ ಒಬ್ರೂ ಸುಂಟಿ. ಎನೀ ಒಬ್ರನ್ನ ಕೇಳು ಮಳೆ ಯುಲ್ಲ ಅಂತ ಸುಂಟಿ. ರೇಟು ಬರಕಲ್ಲ ಈ ನಮ್ನೀ ಎನಿ ಒಬ್ರೂ ಸುಂಟಿ ಹಾಕ್ರೆ. ಕೊನಿಗೆ ಎನಿ ಒಬ್ರೂ ಹೇಳದು ಸು೦ಟಿಗೆ ರೇಟ್ ಸಾಲ ಅಂತ"

ಇಷ್ಟು ಹೊತ್ತಿಗೆ ಮತ್ಯಾರೋ ಬಂದರು. ನಾನು ಅವರ ಹತ್ತಿರ ಹೋಗಿ ಬರುತ್ತೇನೆಂದು ಹೇಳಿ ಹೊರಟೆ.

ಹಾಲ, ನನಗೆ ಕೇಳುವಂತೆ ರಾಮನಿಗೆ ಹೇಳುತ್ತಿದ್ದ. "ಬೆಂಗಳೂರು ಪ್ಯಾಟೆಲಿದ್ದವ್ಕೆ ಮಾತ್ರ ಇಂಗ್ಳಿಸು ಮಾಡ್ಕಂಡಾರೆ. ಹೇಂಗೆ ಕೊಯ್ಟೆ ನೋಡು ಎಲ್ಡು"

ಈಗ ನನಗೆ ಅವ ಕೊಟ್ಟ ಎಲ್ಡು ಯಾವುದು ಅಂತ ಯೋಚನೆ ಬಂತು. ಒಂದು "ಎನಿ ಒಬ್ರು" ಅಂದರೆ ಯಾರೊಬ್ಬರೂ ಅಂತ ಗೊತ್ತಾಯಿತು. "ರೆಸ್ಟೆಲ್ಲಾ" ಅಂದರೆ ಏನಿರಬಹುದು ಎಂದು ಯೋಚಿಸುತ್ತಿದ್ದಾಗ "ಉಳಿದವರು ಕಂಡಂತೆ" ಸಿನಿಮಾದ ಟ್ಯಾಗ್ ನೆನಪಾಗಿ ಉತ್ತರ ಗೊತ್ತಾಯಿತು- "ರೆಸ್ಟೆಲ್ಲಾ" ಅಂದರೆ ಉಳಿದವರೆಲ್ಲಾ ಅಂತ.

No comments:

Post a Comment