Tuesday, November 7, 2017

ವಿಶ್ವನಾಥನ ತುಘಲಕ್ ವ್ಯಾಖ್ಯಾನ

ವಿಶ್ವನಾಥ, ತನಗೆ ತಿಳಿಯದೆ ಸಿಟ್ಟಿನ ಕೈನಲ್ಲಿ ಬುದ್ಧಿ ಕೊಟ್ಟು ತನ್ನ ಓದುವಿಕೆ, ಹದ ಹೇಳುವಿಕೆಯ ಹಿಂದಿನ ಬಂಡವಾಳ, ಮುಂದಿನ ಉದ್ದೇಶಗಳನ್ನು ತನ್ನೊಳಗಿದ್ದ ಹಠ ಚಟ ಒದ್ದಾಟಗಳನ್ನು ನಾಣುವಿನ ಎದುರು ಕಕ್ಕಿ ಮನೆಗೆ ಹೋದ.
ಪಾಪ!! ನಿದ್ದೆ ಮಾಡಲಿಲ್ಲ. ತನ್ನ ಒಳಗಿದ್ದ ವಿಚಾರ ಹೊರಗೆ ಬಿತ್ತು  ಅಂತಲ್ಲ. ತಾನು ತಿಳಿದವ ಎಂದು ಹೆಸರು ಮಾಡಲು ಮಾಡಿದ ಪ್ರಯತ್ನ ಎಲ್ಲಾ ಹಾಳಾಗಿ ಹೋಯಿತಲ್ಲ. ತನ್ನ ಇಷ್ಟು ವರ್ಷದ ಶ್ರಮ ವ್ಯರ್ಥವಾತಲ್ಲ ಎಂಬ ನೋವು ಅವನಿಗೆ. ಅದಕ್ಕಿಂತ ಹೆಚ್ಚಾಗಿ, ಹೆಸರು ಮಾಡಲು ಇನ್ನೊಂದು ಹೊಸ ದಾರಿ ಹುಡುಕಕ್ಕು,ಅಲ್ಲಿ ಶ್ರಮ ಪಡಕ್ಕು, ಆ ಮೇಲೆ ಆ ಶ್ರಮ ಸರಿ ಇರಕ್ಕು; ಯಾರೂ ತಕರಾರು ಮಾಡಲಾಗ, ಎಲ್ಲಕ್ಕಿಂತ ಹೆಚ್ಚಾಗಿ ತಾನು ಹೊಸದಾಗಿ ಹುಡುಕಿದ ಕ್ಷೇತ್ರದಲ್ಲಿ ತಾನು ಹೇಳಿದ್ದನ್ನು ಹೇಳಿದಂತೆಯೇ ಹೇಳಿದ ಕೂಡಲೇ ಮಾಡಿ ಪೂರ್ತಿ ಕ್ರೆಡಿಟ್ ತನಗೆ ಕೊಡ ಹುಡುಗರು ಸಿಗಕ್ಕು . ಅವರು ಇಷ್ಟೆಲ್ಲಾ ಮಾಡಕ್ಕಾದ್ರೆ  ಅವರಿಗೆ ಬೇಕಾಗಿದ್ದನ್ನು ತಾನು ಮಾಡಕ್ಕು. ಅಂದರೆ ತಾನು  ಬೇರೆಯವರಿಗೆ ಬೇಕಾದಂತೆ ಇದ್ದು ನಂತರ ತನ್ನ ಕಾರ್ಯ ಸಾಧನೆ ಮಾಡಿಕೊಂಡು, ಜನರನ್ನು ಒಪ್ಪಿಸಿ ಆ ಮೇಲೆ ಹೆಸರು  ಬಂದರೆ ಬಂತು ಇಲ್ಲದಿದ್ದರೆ ಇಲ್ಲೆ.
ಹಾಳು  ಬಡಿದು ಹೋಗ. ಇದರಜ್ಜಿ ಬಾಲ ಕಡಿಯ. ಈ ಹುಡರಿಗೆ ಇಲ್ಲೆಂತ ಕಮ್ಮಿ ಆಗಿತ್ತು? ಮನೆ ಇತ್ತು. ತ್ವಾಟ ಗದ್ದೆ ಇತ್ತು. ಉಣ್ಣಕ್ಕೆ ಉಡಕ್ಕೆ ಏನೂ ತೊಂದರೆ ಇರಲೆ. ಎಂತಕ್ಕೆ ಓದಕ್ಕೆ ಹೋಯಕ್ಕಿತ್ತು? ಹೋಗ್ಲಿ ಊರಾಗೆ ಎಂತಾರು ಕೆಲಸ ಹಿಡಕಂಡು  ಮೇಷ್ಟ್ರಾ ಪಾಷ್ಟ್ರಾ ಆಗಿಯೋ  ಅಥವಾ  ಸಾಗರದ ಮಂಡಿಯಲ್ಲಿ  ಲೆಕ್ಕ ಬರ್ಕಂಡೋ ಇರಲಾಗಿತ್ತು. ಹೋಗಿ ಪ್ಯಾಟೆ ಸೇರ್ಕಂಡ. ಉದ್ಧಾರ ಆದ. ಅದಲ್ಲ. ಹಂಗರೆ ಒಬ್ಬರ ಹತ್ರ ಹೇಳಿದ್ರೆ ಬತ್ತಿರ್ಲ್ಯಾ "ವಿಶ್ವಣ್ಣ ಗನಾವ. ಹಳ್ಳಿ ಲೇಲಿ ಇದ್ರೂ ಎಷ್ಟೆಲ್ಲಾ ವಿಷಯ ಗೊತ್ತಿದ್ದು  ಅವಂಗೆ! ನಾವು ಕಾಲೇಜಿಗೆ ಹೋಗಿ ಓದಿದ್ದೆಲ್ಲಾ ಬರಿಯ ಬದನೆ ಕಾಯಿ.  ಅವ ಇಲ್ಲೇ ಇದ್ದು ಎಷ್ಟೆಲ್ಲಾ ವಿಷಯದ  ಮಾಹಿತಿ ಇದ್ದು ಅವಂಗೆ. ನಿಜಕ್ಕೂ ಗ್ರೇಟ್. " ಅಥವಾ  ಊರಿಗೆ ಬಂದವ್ವು ನಾಕು ಜನ ಕೂತು  ಮಾತಾಡಕ್ಕಿದ್ರೆ "ಹೌದು ವಿಶ್ವಣ್ಣ ಹೇಳಿದ್ಮೇಲೆ ಆತು. ಮಾತಾಡಹಂಗೇ  ಇಲ್ಲೆ. ಅದು ಸರಿ ಇರ್ತು" ಅಂತ ಒಂದು ಮಾತು ವಗದಿದ್ದರೆ ಆಗಿತ್ತಪ್ಪ. ಊರವ್ವೆಲ್ಲ ನವರಂಧ್ರಗಳನ್ನೂ ಮುಚ್ಕಂಡು ಇರ್ತಿದ್ದ.ಹೇಳಿದವಕ್ಕೂ ಏನು ಗಂಟು ಹೋಗ್ತಿರ್ಲೆ. ಹೀಗೆಯೇ  ಕಾರಣಗಳನ್ನು ಹುಡುಕುತ್ತಾ, ಪರರಿಂದ ಬೇಕಾಗಿದ್ದ ಪರಿಹಾರಗಳ ಬಗ್ಗೆ ಪರಾಮರ್ಶಿಸುತ್ತಾ ಕೈಯಲ್ಲಿದ್ದ ಕಾವಳವನ್ನು ಬಾಯಲ್ಲಿಟ್ಟ.
ಈ ವಿಳ್ಯದೆಲೆ-ಅಡಿಕೆ-ಸುಣ್ಣ-ತಂಬಾಕಿನ ಕಾಂಬಿನೇಷನ್ನಿನಲ್ಲಿ ಆ ಬ್ರಹ್ಮ ಅದೇನು  ಇಟ್ಟನೋಗೊತ್ತಿಲ್ಲ. ಬಾಯಿಗೆ ಹೋಗುತ್ತಿದ್ದಂತೆ ಹವ್ಯಕರ ಯೋಚನಾ ಲಹರಿಯ ದಿಕ್ಕು, ವೇಗ ಓಘಗಲೆಲ್ಲಾ ಹದ ತಪ್ಪಿ ಹೊಸ ಮಜಲನ್ನು ಕಂಡು ಬಿಡುತ್ತವೆ. ಸೆಖೆ ಸೆಖೆ ಎಂದು ಮೈ ಬೆವರುತ್ತಿದ್ದರೂ ಒಂದು ರೀತಿಯ ಹಿತಾನುಭವ; ಎಂಥಾ ಚಳಿ ಇರಲಿ, ಒಂದು ವಿಶಿಷ್ಟ ಉಷ್ಣತೆ ಸಿಗುವುದು ಈ ಕವಳದಿಂದ. ಬೇರೆ ಯಾರೂ ತಲೆಬಿಸಿ ಅಂತ ಕಾಲ ಹಾಕುವುದನ್ನು ನಾನು ನೋಡಿಲ್ಲ. ಆದ್ದರಿಂದ ಮಾಯೆ ಕವಳದಲ್ಲೋ, ಅದನ್ನು ಜಗಿಯುವ ನಮ್ಮಲ್ಲೋ ಅಂತ ಗೊತ್ತಿಲ್ಲ. ಬಹುಷಃ ಒಂದು ಪರಸ್ಪರ ಹೊಂದಾಣಿಕೆ ಈ ಕವಲಕ್ಕೂ ಮಲೆನಾಡ ಹವ್ಯಕರಿಗೂ ಇರಬೇಕು. ವಿಶ್ವಾನಾಥನಿಗೂ ಭಿನ್ನವಾದ್ದೇನೂ ಆಗಲಿಲ್ಲ ಯೋಚನೆಯ ಪ್ರವಾಹ ತನ್ನ ದಿಕ್ಕು ಬದಲಿಸಿತು ಅಷ್ಟೆ.
"ಅಲ್ಲ ಬೆಂಕಿ. ಹೆಟ್ಟಕ್ಕೆ!! ಈ ನಾಣಿ ಮಾಣಿಗೆಂತ ಆಯ್ದು? ಎಂತಕ್ಕೆ ಇವ ಬರೆಯದು ಶುರು ಮಾಡಕ್ಕಿತ್ತು? ಹೋಗ್ಲಿ ಬರೆದ ಆತು. ಬರೀತಾ ಬರೀತಾ ಇಂಗ್ಲೀಷ್ ಒಳಗೆ ಬರೆದು ಇಂಗ್ಲೀಷ್ ಪೇಪರ್ ಒಳಗೆ ಬರ ಹಾಂಗೆ ಮಾಡಿದ್ರೆ ಬತಿತ್ತನ. ಕನ್ನಡ ಪೇಪರ್ ಎಂತಕ್ಕೆ ಬೇಕಿತ್ತು? ಅದೂ ಈ ಊರಾಗೆ ಬಾರದೆ ಇರ ಕನ್ನಡ ಪೇಪರ್ ಸಿಗಲ್ಯಾ? ಅದೂ ಆಗ್ಲೇ ಅ೦ತಿರ್ಲಿ. ಸುಡುಗಾಡು ಇಂಟರ್ನೆಟ್ ಒಳಗೆ ಎಂತಕ್ಕೆ ಬರೆಯಕ್ಕಿತ್ತು? ಅದೂ ಈ ಊರು ಬಿಟ್ಟವ್ವು ಓದ ಹಾಂಗೆ? ಹೊಸೆಯಕ್ಕೂ ಇವಂಗೆ ಅವರನ್ನ. ಪ್ಯಾತೆಲಿದ್ದವಕ್ಕೆ ತಾನು ಸರಿ ಸಮ ಅಂತ ತೋರ್ಸಕ್ಕೆ ಇಷ್ಟೆಲ್ಲಾ ಮಾಡಿದ್ದ. ಕಳ್ಳ. ಹೂ೦ ಮಾಡ್ಕಳ್ಲಿ. ಬೇಜಾರಿಲ್ಲೆ. ಒಂದರಾಗೆ, ತನಗೆ ಈ ಯೋಚನೆ ಹಚ್ಚಿದ್ದು ವಿಶ್ವಣ್ಣ ಅಂತ ಬರೆದಿದ್ರೆ ಏನು ದುಡ್ಡು ಖರ್ಚಾಗ್ತಿತ್ತಾ? ಅಥವಾ ಇವನ ಮನೆ ಹಾಳಾಗ್ತಿತ್ತಾ? " ಎಂದು ಯೋಚಿಸುವ ಹೊತ್ತಿಗೆ ಕವಳ ಬಾಯೆಲ್ಲಾ ತುಂಬಿತ್ತು. ಹೊರಗೆ ಹೋಗಿ ತುಪ್ಪಿ ಬಂದ.
ಬಂದವ ಮತ್ತೊಂದು ಕವಳದ ಈಡು ಮಾಡಿ ಬಾಯಲ್ಲಿಟ್ಟು ಕುಳಿತ. ಮತ್ತೊಂದು ಕವಳ ಮತ್ತೆ ಯೋಚನೆಯ ದಿಕ್ಕು ತಪ್ಪಿಸಿತು. "ಅಲ್ಲ. ಆನು ಹೇಳಿದ್ದು ಬರೆಯಕ್ಕೆ ಬತಲ್ಲೆ ಅಂತಲೇ ಇಟ್ಕ೦.ಬನ. ಅದನ್ನ ಎದ್ರಾ ಎದ್ರಾ ಹೇಳದ? ನಿಧಾನಕ್ಕೆ ಬಿಡಿಸಿ ಅರ್ಥಾಪಹಂಗೆ ಹೇಳಿ ಒಪ್ಪಿಸಕ್ಕು. ಮತ್ತೆಂತ ಸುಡುಗಾಡು ಓದಿದ್ವಾ ಏನ. ಹಾಂಗಾರೆ, ಆನು ಅಷ್ಟು ಕಷ್ಟ ಪಡ್ತಿ. ಮನೆ ಬಾಡಿಗೆ ಕೆಲಸ ಮಾಡ್ಕ್ಯಂಡು, ತ್ವಾಟದ ಕೆಲಸ ಪ್ಯಾಟೆ ವ್ಯವಹಾರ ಎಲ್ಲ ನೋಡ್ಕ್ಯಂಡು, ನ್ಯೂಸ್ ಎಲ್ಲಾ ತಿಳ್ಕಂಡು, ಮೇಲಿಂದ ಯಾರ ಯಾರ ಕೈಲೊ  ಎಂತೆಂತದೋ ಸಾಹಸ ಎಲ್ಲ ಮಾಡಿ ಪುಸ್ತಕ ಬೇಡಿ ತಂದು ಓದ್ತಿ. ಹಾಂಗಾರೆ ಅದಕ್ಕೊಂದು ಬೆಲೆ ಇಲ್ಲೆ. ಏನು ಆನೊಂದು ಸ್ವಲ್ಪ ಹೆಸರು ಮಾಡಿರೆ ಮಹಾ ಗಂಟು ಹೋಪ್ದು ಇವಕ್ಕೆ?"
"ಅಲ್ಲ ಆನು .ಏನೋ ಬರೆಯಕ್ಕೆ ಬಾರದೆ ಇದ್ದಿದ್ದನ್ನೇ ಹೇಳ್ದಿ. ಇವ, ಬರೆಯದು ಗೊತ್ತಿದ್ದವ ಅದನ್ನ ಬರೆಯಕ್ಕೆ ಬಪ್ಪ ಹಾಂಗೆ ತಿದ್ದಿ ತೀಡಾಲಾಗಿತ್ತಲ. ಆನೇನು ಇವ ಹಾಳಾಗಲಿ ಅಂತ ಹೇಳಿದ್ನಾ? ಇವಂಗೆ ಅದು ಒಂದು ಯೋಚನೆ ಬರಕ್ಕೆ ಪಡ ಅಷ್ಟು ಶ್ರಮ ಉಳಿಸಿ ಕೊಡ್ಲ್ಯಾ? ಹೋಗಲಿ ಬರಿದೆ ಇದ್ರೆ ಹಾಳಾಗ್ಲಿ. ಹೇಳಿದ್ದಕ್ಕೆ ಒಂದು ಹೂ ಅಂದಿದ್ರೆ ಇವನಪ್ಪನ ಗಂಟೇನು ಖರ್ಚಾಗ್ತಿತ್ತು. ಆನೇನು ನಾ ಹೇಳಿಫ್ಫು ಬರೀಲೆ ಅಂತ ಇವನ್ನ ಗಲ್ಲಿಗೆ ಹಾಕ್ತಿದ್ನಾ? ಹೂ ಅನ್ನಕ್ಕೆ ಬಾಟಲ್ಲೇ ಈ ಹುಡ್ರಿಗೆ. ಪಾಸಿಟಿವ್ ಥಿಂಕಿಂಗ್ ಯಾವಾಗ ಕಲಿತ್ವೋ ಏನೋ?"
ಇಷ್ಟರಲ್ಲಿ ಎರಡನೇ ಕವಳ ತುಪ್ಪುವ ಹೊತ್ತು ಬಂತು. ಅದನ್ನು ಮಾಡಿ ಬಂದು ಮೂರನೆಯದನ್ನು ಬಾಯಲ್ಲಿಟ್ಟ. ಮತ್ತೆ ಯೋಚನೆ ಪಥ ಬದಲಿಸಿತು. "ಅಲ್ಲ!!! ಈಗ ಆನು ಹೇಳಿದ್ದು ಯಾರೋ ಬರದ್ದ. ಅದನ್ನ ಇವ ಹಾಂಗೆ ತಕ್ಷಣ ಹೇಳದ? ಎಷ್ಟು ಬೇಜಾರಾಗ್ತಲ್ಲೇ ಯಂಗೆ. ಅದಷ್ಟು ಹೇಳಕ್ಕೆ ಆನು ಎಷ್ಟು ಕಷ್ಟ ಪಟ್ಟಿದ್ದಿ. ಹೂಂ ಬರೀತಿ ವಿಶ್ವಣ್ಣ ಅಂತ ಒಂದು ಮಾತು ಹೇಳಿದ್ರೆ ಸಾಕಿತ್ತನ. ಬ್ಯಾಡ. ಯನ್ನ ಯೋಚನೆ ಬರೆದವಂಗೆ ಉಗೀತಿ ಅಂತ ಒಪ್ಕಂಡಿದ್ರೆ ಸಾಕಿತ್ತು ಆನು ಸುಮ್ನಿರ್ತಿದ್ದಿ. ಬರೆಯಕ್ಕು ಅಂತ ಇತ್ತು ಯಾರು ಬರೆದ್ರೆ ಏನು ಅಂದುಬಿಟ್ಟರೆ? ಅದು ಬತಲ್ಲೆ. " ಈಗ ಮೂರನೇ ಕವಳ ನೆಲಕ್ಕೆ ಬೀಳುವ ಹೊತ್ತು ಬಂತು.
ತುಪ್ಪಿ ಬಂದು ನಾಲ್ಕನೇ ಕವಳ ಹಾಕಿ ಯೋಚನೆಯ ಸ್ಟೇರಿಂಗ್ ವೀಲ್ ತಿರುಗಿಸಿದ ವಿಶ್ವ. " ಅವ ಆನು ಹೇಳಿದ್ದು ಬರೆಯಕ್ಕೆ ಬತಲ್ಲೆ ಅಂದ ಮೇಲೆ ಅದನ್ನ ಯನ್ನ ಹತ್ರ ಹೇಳದೆ ಬ್ಯಾಡದಾಗಿತ್ತು. ಯಂಗೆ ಗೊತ್ತೇ ಆಗ್ತಿರಲೆ. ತಲೆ ಬಿಸಿ ಇರಲೆ. ಈಗ ಅವ ಅಷ್ಟು ಹೇಳಿದ ಮೇಲೆ ಸುಮ್ನಿರಕ್ಕೆ ಬತ್ತಾ? ಹಂಗಂತ ಎಂತಾರು ಮಾತಾಡ ಹಾಂಗೂ ಇಲ್ಲೆ. ಹೀಂಗಾದ ಕೂಡಲೇ ಸಿಟ್ಟು ಬತ್ತು. ಸಿಟ್ಟು ಬಂದ ಮೇಲೆ ಯಂಗೆ ತಡಿತೆ ಇಲ್ಲೆ. ಅಂದಿ. ಯಂಗೆ ಹೆಸರು ಮಾಡಕ್ಕು ಅದಕ್ಕೆ ಓದಿ ನಿನಗೆ ಹೇಳ್ತಿ ಅಂತ. ಈಗ ನಾಣು ಅದನ್ನ ಬೇರೆ ಅವರ ಹತ್ರ ಹೇಳ್ಬುಟ್ರೆ ಕಥೆ ಎಂತ? ಊರವ್ವು ಬೇರೆ ಯಡವಟ್ಟುಗಳು. ಈ ನಾನು ಹೇಳಿದ್ದೆಲ್ಲಾ ನಂಬ ಜನ ಅವ್ವು ಸ್ವಂತಿಕೆ ಅನ್ನದೆ ಇಲ್ಲೆ. ಅನಾಗರಿಕರು. ಈ ಅನಾಗರಿಕರ ಹತ್ರ ನಾನು ಏನಾರು ಹೀಂಗಾತು ಅಂತ ಬಾಯಿ ಬಿಟ್ರೆ, ಯನ್ನ ಕತೆ ಎಂತ? ಆಡ್ಕಂಡು ನಗಾಡಿರೆ ಕಷ್ಟ. ಮಾಡಸ್ಟಿ ಇವಂಗೆ. ಇವ ಎಲ್ಲಿ ಹೋಗ್ತ ಬೇಕಲ. ನಾಳೆ ಹಾಲು ಡೈರಿಲಿ ಸಿಗ್ತ. ಅಲ್ಲಿ ಇವ ಹೇಳಿದ್ದನ್ನ ಸರೀ ಮಾಡಿ ಖಂಡಿಸಿ ಇವಂಗೊಂದು ಪಾಠ ಕಲಸ್ತಿ. ಅಂತೂ ನಾಕನೇ ಕವಳ ಯನ್ನ ಸಮಸ್ಯೆ ತೆಗೆದು ಹಾಕ್ಚು."

ಮರುದಿನ ಸಂಜೆ ಹಾಲು ಡೈರಿಯಲ್ಲಿ ನಾಣು ಸಿಕ್ಕ. ಯಾವುದೋ ಮಾತಿಗೆ ನಾಣು 'ತುಘಲಕ್ಕನ ದರ್ಬಾರು' ಎಂದುಬಿಟ್ಟ. ಬಿಸ್ಕೆಟಿಗೆ ಸಿಗುವ ನಾಯಿಯಂತೆ ಬಾಯಿ ಕಳೆದು ಕುಳಿತಿದ್ದ ವಿಶ್ವ ತನ್ನ ವರಾತ ತೆಗೆದ.

"ನಿಂಗಳ ಕಥೆಯೇ ಇಷ್ಟು. ಪಾಸಿಟಿವ್ ಥಿಂಕಿಂಗ್ ಅನ್ನದೆ ಗೊತ್ತಿಲ್ಲೆ. ಏನು ತುಘಲಕ್ಕನ ತಪ್ಪು. ಬೀರಬಲ್ಲನಂತಾ ಬುದ್ಧಿವಂತಂಗೆ ಜಾಗ ಕೊಡ್ಲ್ಯಾ? ತಿಳ್ಕಂಡು ಮಾತಾಡಿ. ಒಟ್ರಾಶಿ ವಗೆಯದಲ್ಲ." ಎಂದು, ನಾಣುವಿನ ಮೇಲೆ ಹರಿ ಹಾಯ್ದ. ಇವನ ಬುದ್ಧಿ ಗೊತ್ತಿದ್ದ ಊರವರು ಯಾರೂ ಮಾತಾಡಲಿಲ್ಲ. ಆದರೆ ಇನ್ನೂ ಹತ್ತನೇ ತರಗತಿಗೆ ಹೋಗುತ್ತಿದ್ದ, ರಾಮ ನಾಯ್ಕನ ಮೊಮ್ಮಗ, "ಅಲ್ರೀ ಹೆಗಡೇರೆ, ಬೀರಬಲ್ ಇದ್ದಿದ್ದು ಅಕಬರನ ಕಾಲದಾಗೆ, ತುಘಲಕ್ ಬಂದಿದ್ದು ಅದಕ್ಕಿಂತ ಮುಂಚೆ ಅಲ್ಲನ್ರೀ" ಅಂದುಬಿಡಬೇಕೆ?

ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ನಾಕು ಕವಳ ಖರ್ಚು ಮಾಡಿದ್ದ ವಿಶ್ವಣ್ಣ, ಪ್ರತ್ಯುತ್ತರ ತಯಾರು ಮಾಡಿಕೊಂಡೆ ಮಾತಾಡಿದ್ದ. ಅದು ಉಳಿದವರಿಗೆ ಗೊತ್ತಿರಲಿಲ್ಲ. " ನಂಗೊತ್ತಿದ್ಯಾ ಹುಡುಗಾ!! ನಮ್ಮ ಲೆಕ್ಚರ್ ಸಾಹೇಬರಿಗೆ ಗೊತ್ತಿದ್ಯಾ ಅಂತ ಟೆಸ್ಟ್ ಮಾಡಿದ್ದು. ಅದು ತಮಾಷೆ. ಪಾಸಿಟಿವ್ ಥಿಂಕ್ ಮಾಡು ಅರ್ಥ ಆಗ್ತದೆ." ಅಂದು ಬಚಾವಾದ.

ಹಿಂದಿನ ಭಾಗ
http://tenkodu.blogspot.com/2017/10/blog-post_31.html

# ವಿಶಾರದ ವಿಶ್ವನಾಥ -2

No comments:

Post a Comment