Tuesday, December 26, 2017

ಕಾನೂನು ಅಂದ್ರೆ.......

ವರ್ಷದ ಕೊನೆಯ ತಿಂಗಳ ಕೊನೆಯ ರಜೆಯನ್ನು ಕಳೆಯಲೆಂದು ಊರಿಗೆ ಬಂದಿದ್ದೆ. ಯಥಾ ಪ್ರಕಾರ, ನನ್ನಿಷ್ಟದ ಪ್ರಭೃತಿ, ಷೇಕ್ಸ್ ಪಿಯರ್ ಮಾನಸ ಪುತ್ರ ಹಾಲ ನಾಯಕನ ದರ್ಶನವಾಯಿತು. ನನಗೂ ಹೊತ್ತು ಕಳೆಯಬೇಕಿತ್ತಲ್ಲ, ಮತ್ತೆ ಬರೆಯುವುದಕ್ಕೆ ವಿಚಾರವೂ ಬೇಕಿತ್ತು. ಸುಮ್ಮನೆ ಹಾಲನ ಬಾಯಿಗೆ ಕೋಲು ಇಳಿಸಿದೆ ಅಂದರೆ ಮಾತಿಗೆಳೆದೆ.

ಮಾತಿಗೇನು ಮತಿ ಬೇಕೆ? ಮತಿ ಇಲ್ಲದ್ದೂ ಮಾತಾಗುತ್ತದೆ ಕೇಳುವ ತಾಳ್ಮೆ ಇದ್ದರೆ. ಇನ್ನು ಕೆಲವು ಸಲ ಅನಿವಾರ್ಯ ಪರಿಸ್ಥಿತಿ ತಾಳ್ಮೆಯನ್ನು ತಂದು ಕೊಡುತ್ತದೆ ಕೂಡಾ. ಹಾಲ ಅದು ಇದು ಮಾತಾಡುತ್ತಾ, ರವಿ ಬೆಳಗೆರೆಯ ಸುದ್ದಿ ಶುರು ಮಾಡಿದ. ಹಾಲ ಯಾರೋ ದೊಡ್ಡವರ ಸುದ್ದಿಗೆ ಬಾಯ್ದೆರೆದ ಎಂದರೆ ಸಾಕು ಇಂಗ್ಲೀಷ್ ಭಾಷೆಯ ಶಬ್ದವೊಂದು ಹೊಸ ಸಂಧಿ ಸಮಾಸಗಳನ್ನು ಪಡೆದು ನವರೂಪ ತಳೆದು ಕಂಗೊಳಿಸಿ ಶಬ್ದಕೋಶದಲ್ಲಿ ಸ್ಥಾನಪಲ್ಲಟವಾಯಿತೆಂದೇ ಲೆಕ್ಕ.
ಸಿನಿಮಾದಲ್ಲಿ ಹೀರೊಯಿನ್ ಈಜುಕೊಳದಿಂದ ಮೇಲೆದ್ದು ಬರುವಾಗ ನೀರ ಹನಿ ಉದುರುತ್ತಾ, ಸುಮಧುರ ಹಿನ್ನೆಲೆ ಸಂಗೀತ ಕೇಳಿಸುತ್ತದೆಯಲ್ಲ ಹಾಗೆಯೇ, ಇಂಗ್ಲೀಷಿನ ಶಬ್ದಗಳಿಗೆ ಸಂಚಕಾರ ಬರುವ ಮುನ್ನ ಹಾಲನ ಬಾಯಿಯಲ್ಲಿ ಒಂದು ಮಹತ್ತರ ವಿಷಯ ಹೊರಬೀಳುತ್ತದೆ. ಇಷ್ಟಾದರೆ ಸಾಕು ನನ್ನ ಕಿವಿ ಅಗಲವಾಗಿ ತಲೆಯಲ್ಲಿನ ಮೆಮೋರಿ ಕಾರ್ಡ್ ಪೂರ್ತಿ ಆನ್ ಆಗುತ್ತದೆ. ಈ ಕೊಲೆಯ ವರದಿ ಮಾಡಲು.

"ಅಲ್ಲೀ ಅಪಿ!! ಎಂತಾಗೈತೆ ಅವಂಗೆ, ಅವಾಗ ನಮ್ಮನೆ ಹುಡ್ರೆಲ್ಲಾ ನೈಟ್ ಆತು ಅಂದ್ರೆ ಸಾಕು ಕ್ಲೈಮ್ ಡೈರಿ ನೋಡ್ಬೋಕು ಅಂತ ಕಾಯ್ತುದ್ದುವು. ಅದರಾಗೆ ಮಾತಾಡವ ಇವ. ನಾನೂ ಕೇಳ್ತುದ್ದೆ. ಒಂಥರಾ ಒಳ್ಳೆ ಸ್ವರ ಅವಂದು. ಅವ ಬರ್ದುದ್ದೆಲ್ಲಾ ಸತ್ಯ ಅಂತುತ್ತು ನಮ್ಮನೆ ಹುಡುಗಿ. ಅವ ಭಾರಿ ಓದ್ಯಾನಂತೆ. ಭಾಳ ವರ್ಷ ಪೇಪರ್ ನಡೆಸ್ಯಾನೆ. ನಂಗೆ ಇಂಗ್ಲಿಷ್ ಮಾತಾಡಕ್ಕೆ ಬಂದ್ರೂ ಕನ್ನಡ ಒಡಕ್ಕೆ ಬರಕಲ್ಲ ಬಿಡಿ. ಅದು ಹಂಗೇ. ಒಂದು ಕೊಡ ಶಿವ ಇನ್ನೊಂದು ಕೊಡಕಲ್ಲ. ಎಂತೋ ಒಂಚೂರು ತಿಳ್ಕಂಡವ್ರ ಸಾವಾಸ ಮಾಡಿ ಸ್ವಲ್ಪ ಮಾತು ಬಂದೈತೆ ಬಿಡಿ. ಇನ್ನೊ ಕೆಲವೈದಾವೆ ನಮ್ಮ ಕೇರಿಲಿ. ಕನ್ನಡವೇ ಬರಕಲ್ಲ ಸಮಾಗಿ, ಇನ್ನು ಇಂಗ್ಲೀಷ್ ಮಾತಾಡಿ ಉಂಡ್ವು ಬಿಡಿ. ಹಾಂ! ನಂದು ಬಿಡಿ ಎಂತ ಹೇಳದು!! ಬೆಳ್ಗೆರೆ ಸುದ್ದಿ ಮಾತಾಡನ ಕಪ್ಪು ಹೊತ್ತಾಗೆ"

ಮುಗಿಯಲಿಲ್ಲ ಹಾಲನ ಭಾಷಣ. ಮುಂದುವರೆಯಿತು."ಅವ ಪೇಪರ್ ಬರೆಯವ ಅಷ್ಟೂ ತಿಳಕಣದು ಬ್ಯಾಡೆ? ಎಲ್ಲಾ ಕಳ್ಳರಿಗೆ ಕೊಲೆಗಾರ್ರಿಗೆ ಸಮಾ ಬೈತುದ್ದ. ಇವಂಗೇ ಗೊತ್ತಾಗುಲ್ಲೇ ಹಂಗರೆ. ಕೊಲೆ ಮಾಡ್ರೆ ಪೋಲೀಎಸರು ಬಿಡಕಲ್ಲ. ಕೊಲೆ ಬಿಡಿ. ಕದ್ರೇ ಬಿಡಕಲ್ಲ. ನಾವು ಬೇರೆ ಅವ್ರಿಗೆ ನೀತಿ ಹೇಳ್ಬೋಕಿದ್ರೆ ಸಮಾ ಇರ್ಬೋಕು. ಯುಲ್ದಿದ್ರೆ ಅಪಾಯಾಕಾವೆ. ಆಗಕಲ್ಲೆ ಮಯ್ತೆ? ಅವ ನನ್ನ ಲೆಕ್ಕ ಒಟ್ಟು ಎಂತೋ ಒಂದು ಬರಿತುದ್ದ ಎಂತೊ ಒಂದು ಹೇಳ್ತುದ್ದ. ಅದೆಲ್ಲ ಮಾಡಕ್ಕೂ ಮುಂಚೆ ತಿಳ್ಕಬೋಕು ನನ್ನ ಹಂಗೆ. ನಾ ತಿಳ್ಕಳ್ದೆ ಒಂದಾದ್ರೂ ಮಾತಾಡ್ತುನ? ಹೇಳಿ ಅಪಿ. ಇಂಗ್ಲಿಶ್ ಮಾತಾಡ್ರೆ ನೀವೇ ಎಂತೂ ಹೇಳಕಲ್ಲ..."

ನನಗಿಲ್ಲಿ ಗೊಂದಲವಾಯಿತು ಈ ಹಾಲ ನನ್ನನ್ನು ಏಣಿ ಹತ್ತಿಸಿದ್ದಾ ಅಥವಾ ತಾನೇ ಹತ್ತಿದ್ದಾ ಅಂತ. ನಾನು ಈತನ ಇಂಗ್ಲಿಷಿಗೆ ಸುಮ್ಮನಿದ್ದು ಕೇಳಿಸಿಕೊಳ್ಳುವುದು ಇಂಗ್ಲಿಷ್ ಮಾತೆಯ ಬೇಸರಕ್ಕೆ ಕಾರಣವಾಗಿ ಈ ಮಾತು ಬಂದಿರಬಹುದೇ ಎಂದೂ ಅನ್ನಿಸಿತ್ತು. ಧರ್ಮ ಸಂಕಟ ನನಗೆ. ಸುಮ್ಮನೆ ಹೂಂ ಎಂದರೆ ಹಾಲ ಮಾತಾಡಿದ್ದು ತಪ್ಪಿದ್ದರೂ ನಾನು ಅರ್ಥ ಮಾಡಿಕೊಳ್ಳಲಿಲ್ಲ ಎಂದಾಗುತ್ತದೆ. ಉಹೂಂ ಎಂದರೆ ಹಾಲನ ಅದ್ಭುತ ಇಂಗ್ಲಿಷ್ ಮಿಸ್ ಮಾಡಿಕೊಳ್ಳಬೇಕು. ಈ ಪುಣ್ಯಾತ್ಮ ಹಾಲಾಹಲದ ಅನುಭವ ಮಾಡಿಸಿದರೂ ಮಾಡಿಸಿಯಾನು ಅವನದ್ದಲ್ಲ ಎಂದರೆ.  ಅದಕ್ಕೇ "ಕಾನೂನು ಎಂತ.... " ಎನ್ನುತ್ತಾ ಮಾತು ಬದಲಿಸಿಸಲು ಪೀಠಿಕೆ ಹಾಕಲು ಮುಂದಾದೆ.

ಇಷ್ಟರಲ್ಲಿ ಹಾಲ ಮುಂದುವರೆಸಿಯೇ ಬಿಟ್ಟ. "ಹೌದು ಅಪಿ. ಕಾನೂನು ಅಂದ್ರೆ ಎಂತ ಭಾಳ ಘನ ಅದು. ಅದಕ್ಕೆ ಗೌರುವ ಕೊಡ್ಬೋಕು. ಅದು ನಮ್ಮನ್ನ ಕಾಯ್ತೈತೆ. ಅದೊಂಥರಾ ಸಾಸ್ತ್ರ ಇದ್ದಂಗೆ. ಈಗ, ನಾವು ಭೂತನ ಮಟ್ಟಿ ಬುಡದಾಗೆ ಉಚ್ಚೆ ಹೊಯ್ಯಾಕೆ ಆಕಾವೇ? ಆಗ್ಕಲ್ಲ. ಅದೊಂದು ಕಾನೂನು. ಕಾನೂನು ಅಂದ್ರೆ ಎಂತ, ರೂಲ್ಸಿಗೆ ಸಮ"

ಇಷ್ಟರಲ್ಲಿ ಅಮ್ಮನಿಂದ ಊಟಕ್ಕೆ ಕರೆ ಬಂತು. ಹಾಲನಿಗೂ ಮನೆ ನೆನಪಾಗಿ ಹೊರಟ. ನಾನು ಹಾಲನ ಮಾತನ್ನು ಹೊತ್ತು ತಂದ ಮಾತಾಗಿಸಿದೆ. ನನಗೂ ಅವತ್ತೇ ಗೊತ್ತಾಗಿದ್ದು ಕಾನೂನು ಅಂದ್ರೆ ರೂಲ್ಸಿಗೆ ಸಮ ಅಂತ. ಇದಕ್ಕೂ ಯಾರೂ ಮೋದಿ ಸರಕಾರ ಹೊಣೆ ಮಾಡದಿದ್ದರೆ ಸಾಕು, ಕಾನೂನು ರೂಲ್ಸಿಗೆ ಸಮವಾಗಿದ್ದಕ್ಕೆ.

No comments:

Post a Comment