Wednesday, December 20, 2017

ಟಿಪ್ಪುರಾಣ-5

ಸೀದನು ಮುಂದುವರೆದು ಹೇಳತೊಡಗಿದನು. "ಅಯ್ಯಾ!! ಈ ಮಹಾನ್ ಚೇತನವು ಡೆವರುಗಳಿಗೆ ಮಾಡಿದ ಉಪಕಾರಗಳನ್ನು ಎಷ್ಟು ಹೇಳಿದರೂ ಮುಗಿಯುವುದಿಲ್ಲ. ಈ ಚೇತನವು ಸಾಕ್ಷಾತ್ ಪರಮೇಶ್ವರನಿಗೂ ಉಪಕಾರ ಮಾಡಿತ್ತು ಎನ್ನುವ ವಿಚಾರವನ್ನು ನಿಮಗೆ ಈಗಾಗಲೇ ಹೇಳಿದೆನಲ್ಲ. ಈಗ ಈ ಚೇತನವು ಪರಮೇಶ್ವರನ ಬದುಕನ್ನು ಪರಿಪೂರ್ಣಗೊಳಿಸಿದ ಬಗೆಯನ್ನು ಹೇಳುವೆನು, ಕೇಳಿರಿ."

ಪರಮೇಶ್ವರನು ಏಕಾಂತದ ಏಕತಾನತೆಯನ್ನು ಕಳೆದುಕೊಳ್ಳಲು ಟಿಪ್ಪುವು ತಾಂಡವ ಮಾಡಲು ನೀಡಿದ ಸಲಹೆಯನ್ನು ಪಾಲಿಸುತ್ತಿದ್ದನು. ಆದರೆ ಬರಬರುತ್ತಾ, ತಾಂಡವ ಕೂಡಾ ಏಕತಾನತೆಯನ್ನು ದೂರ ಮಾಡಲು ಆಶಕ್ಯವಾಯಿತು. ಆಗ ಪರಮೇಶ್ವರನು ಮತ್ತೆ ಖಿನ್ನನಾದನು. ಹೀಗೆ ಮ್ಲಾನವಾದನನಾದ ಪರಮೇಶ್ವರನನ್ನು ಕಂಡ ನಾರದನು ಈ ವಿಚಾರವಾಗಿ ಪರಮೇಶ್ವರನ ಆಪ್ತನಾದ ನಂದಿಯನ್ನು ಕೇಳಿದನು.

"ಅಯ್ಯಾ!! ನಂದಿಯೇ, ನೀನು ಆನಂದವನ್ನು ಹೊತ್ತು ಸಾಗುವ ಕಾರಣದಿಂದಲೇ ನಿನಗೆ ನಾಂದಿ ಎನ್ನುವ ಹೆಸರು ಬಂದಿದೆ. ನೀನು ಜೊತೆಯಲ್ಲಿಯೇ ಇದ್ದರೂ ಶಂಕರನು ಅನಾನಂದದಿಂದ ಇರಲು ಕಾರಣವೇನು. ಸುತ್ತಲೂ ಶೀತಮಯವಾದ ವಾತಾವರಣವೇ ಇದ್ದರೂ ಪರಮೇಶ್ವರನು ಬಿಸಿಲಿನಿಂದ ಬಾಡಿದವರ ಹಾಗೆ ಕಾಣಲು ಕಾರಣವೇನು? ಸ್ವಯಮ್ ದೇವರ ದೇವನಾದ ಪರಮೇಶ್ವರನಿರುವಲ್ಲಿ ಕಲಿ ಪ್ರವೇಶ ಹೇಗೆ ಸಾಧ್ಯ? ಮತ್ತೆ ಪರಮೇಶ್ವರನು ಈ ರೀತಿ ಖಿನ್ನನಾಗಲು ಕಾರಣವೇನು?

ಪ್ರತಿಯಾಗಿ ನಂದಿಯು ಹೇಳಿದನು,"ಮುನಿವರ್ಯಾ!! ದೇವನಾದರೇನು ಸಂಗಾತಿ ಬೇಡವೇ?"

ಮರ್ಮವನ್ನು ಅರಿತ ನಾರದನು ಇದೆಲ್ಲವನ್ನೂ ಟಿಪ್ಪುವಿಗೆ ಹೇಳಿದನು. ಆಗ ಟಿಪ್ಪುವು, "ಮುನಿಗಳೇ!, ವಿಷಯವನ್ನು ನಾನು ಕೂಡಾ ಬಲ್ಲೆ. ಆದರೆ ಪರಮೇಶ್ವರನಿಗೆ ಅನುರೂಪವಾದ ಹೆಣ್ಣು ಯಾರನ್ನೂ ನಾನು  ಕಾಣೆನು. ಸರ್ವಶಕ್ತಿವಂತನಾದ, ಶುಭಾಂಕರನಾದ ಶಂಕರನಿಗೆ ಸ್ವಯಂ ಶಕ್ತಿಸ್ವರೂಪಿಣಿ ಮಡದಿಯಾಗಬೇಕಲ್ಲದೆ ಯಾರ್ಯಾರೋ ಆದರೆ ಸಲ್ಲ. ಅಂತಾ ಶಕ್ತಿಸ್ವರೂಪಿಣಿಯನ್ನು ನಾನು ಮೂರು ಲೋಕಗಳಲ್ಲೂ ಕಾಣೆ . ತ್ರಿಲೋಕ ಸಂಚಾರಿಯೂ ತ್ರಿಕಾಲ ಜ್ಞಾನಿಯೂ ಆದ ನೀವು ಅಂತಾ ಹೆಣ್ಣನ್ನು ಎಲ್ಲಾದರೂ ನೋಡಿದ್ದರೆ ನನಗೆ ತಿಳಿಸಿ. ಹರನನ್ನೂ, ಕನ್ಯೆಯ ಪಿತೃವನ್ನೂ ಒಪ್ಪಿಸುವ ಭಾರ ನನಗೆ ಬಿಡಿ" ಎಂದನು.

ಟಿಪ್ಪುವಿನ ಈ ಮಾತುಗಳನ್ನು ಕೇಳಿ ನಾರದನು, "ಅಯ್ಯಾ ಟಿಪ್ಪುವೇ, ನನಗೆ ದಕ್ಷಬ್ರಹ್ಮ ಎನ್ನುವ ಪ್ರಜಾಪತಿಯು ಅಣ್ಣನಾಗಿ ಇರುವುದನ್ನು ನೀನು ಬಲ್ಲೆಯಲ್ಲ. ಆತನ ಶಾಪದಿಂದ ನಾನು ತ್ರಿಲೋಕ ಸಂಚಾರಿ ಆಗಿದ್ದು ಎಂದು ನೀನು ಬಲ್ಲೆಯಲ್ಲ. ಆತನ ಕಿರಿಯ ಮಗಳಾದ ಸತಿ ಎಂಬವಳು ಶಿವನಿಗೆ ಅನುರೂಪವಾದ ಮಡದಿಯಾಗುತ್ತಾಳೆ. ನೀನು ಹೇಳಿದ ಗುಣಲಕ್ಶಣಗಳೆಲ್ಲವೂ ಆಕೆಯಲ್ಲಿವೆ." ಎಂದನು.

ಅದಕ್ಕೆ ಟಿಪ್ಪುವು, "ನೀವೇ ಆ ಕೆಲಸ ಮಾಡಬಹುದಲ್ಲ" ಎಂದಾಗ, ನಾರದನು,"ನನ್ನಣ್ಣ ದಕ್ಷ ದೀರ್ಘಕೋಪಿ. ಆತನಿಗೆ ನನ್ನ ಮೇಲಿನ ಕೋಪ ತಾಪ ಇನ್ನೂ ಕಡಿಮೆಯಾಗಲಿಲ್ಲ" ಎಂದನು.

ಆಗ ಟಿಪ್ಪುವು ಹರನ ಏಕಾಂತದ ಬೇಸರವನ್ನು ನೀಗಿಸುವ ಸಲುವಾಗಿ, ನೇರವಾಗಿ ಬ್ರಹ್ಮನಲ್ಲಿಗೆ ಹೋದನು. ಬ್ರಹ್ಮನು, ಟಿಪ್ಪುವನ್ನು ಆದರದಿಂದ ಬರಮಾಡಿಕೊಂಡು ಉಚಿತಾಸಾನವನ್ನು ಇತ್ತು,  ಷೋಡಷೋಪಚಾರಗಳನ್ನು ಮಾಡಿ, ಬಂದ ಕಾರಣವನ್ನು ಕೇಳಿದನು. ಟಿಪ್ಪುವು ಹರನ ಏಕಾಂತವನ್ನೂ, ಅದನ್ನು ನೀಗಿಸಲು ನಾರದನೂ ಮತ್ತು ತಾನೂ ಮಾಡಿದ ಉಪಾಯವನ್ನು ಹೇಳಿದನು.

ವೀರಂಚಿಯು ನಸುನಗುತ್ತಾ, ದಕ್ಷನನ್ನು ಸ್ಮರಿಸಿದನು. ಆ ಕ್ಷಣದಲ್ಲಿ ದಕ್ಷನು ವೇದಪುರುಷನ ಎದುರಿನಲ್ಲಿ ಬಂದು ನಿಂತನು. ಬ್ರಹ್ಮನು, ಕುಶಲೋಪರಿಯನ್ನು ಮಾಡುತ್ತಾ, ಸತಿಯನ್ನು ಶಿವನಿಗೆ ಮದುವೆ ಮಾಡಿಕೊಡುವ ಪ್ರಸ್ತಾಪವನ್ನು ಮಾಡಿದನು. ಇದಕ್ಕೆ ಒಪ್ಪದ ದಕ್ಷನು ಶಿವನನ್ನು ಪರಿ ಪರಿಯಾಗಿ ನಿಂದಿಸುತ್ತಾ, ಆತನನ್ನು ಕಾಡ ಕಿರಾತನಿಗೆ ಹೋಲಿಸಿಬಿಟ್ಟನು.

ಇದನ್ನು ಕೇಳಿ ಟಿಪ್ಪುವು ಅತಿ ಕ್ರೋಧಾವಿಷ್ಟನಾದನು. ಒಡನೆಯೇ ತನ್ನ ಓರೆಯಲ್ಲಿದ್ದ ಖಡ್ಗವನ್ನು ಸೆಳೆದು, ಪ್ರಜಾಪತಿಯಾದ ದಕ್ಷನಲ್ಲಿ ಹೋರಾಡತೊಡಗಿದನು. ದಕ್ಷನೋ ಪ್ರಜಾಪತಿ, ಮೇಲಾಗಿ ಬ್ರಹ್ಮಪುತ್ರ. ರಾಜಸೀ ಗುಣ ಸಂಪನ್ನ. ವೀರನೂ ಕೂಡಾ. ಪ್ರತೀಘಾತವನ್ನು ಮಾಡಿದನು. ಇಬ್ಬರೂ ಬಹುಕಾಲ ಯುದ್ಧವನ್ನು ಮಾಡಿದರು. ಟಿಪ್ಪುವನ್ನು ಯುದ್ಧದಲ್ಲಿ ಸೋಲಿಸಲಾಗದ ದಕ್ಷನು, ಟಿಪ್ಪುವನ್ನು ಮಾನಸಿಕ ಆಘಾತಕ್ಕೆ ಈಡು ಮಾಡಲು ಕಟು ವಚನಗಳಿಂದ ಕಣ್ಣುಗಳನ್ನು ಕೆಂಪು ಮಾಡಿಕೊಂಡು, ಈ ರೀತಿಯಾಗಿ ಹೇಳಿದನು.

"ಸಕಲ ಲೋಕದ ಪ್ರಜೆಗಳನ್ನು ಸೃಷ್ಟಿಸಿ ಅವರನ್ನು ಧರ್ಮ ಮಾರ್ಗದಲ್ಲಿ ನಡೆಯುವನ್ತೆ ಮಾಡಬೇಕೆಂದು ಸ್ವಯಂ ಬ್ರಹ್ಮನಿಂದ ಆಜ್ಞಾಪಿತನಾದ ನನ್ನ ಮೇಲೆ ಶಸ್ತ್ರಾಘಾತವನ್ನು ಮಾಡಿದೆಯಾ! ಮೂಢ, ನಿನಗೆ ಬ್ರಹ್ಮ ಹತ್ಯೆಯ ಪಾಪವು ಬರಲಿ"

ಟಿಪ್ಪುವು ಮೊದಲೇ ಹೇಳಿದಂತೆ ಅತಿಶಕ್ತಿವಂತ ಚೇತನವಾಗಿತ್ತು. ಹಾಗಾಗಿ ಈ ಶಾಪವನ್ನು ಕಲಿಯುಗದ ಜನ್ಮದಲ್ಲಿ ಕಳೆಯುವುದಾಗಿ ತೀರ್ಮಾನಿಸಿ ಮತ್ತೊಂದು ಘಾತವನ್ನು ಮಾಡಿದನು ದಕ್ಷನಿಗೆ. ಆ ಘಾತವನ್ನು ತಡೆಯಲಾರದ ದಕ್ಷನು ತನ್ನ ಮಗಳಾದ ಸತಿಯನ್ನು ಪರಮೇಶ್ವರನಿಗೆ ಮದುವೆ ಮಾಡಿ ಕೊಡಲು ಒಪ್ಪಿದನು.

ಹೀಗೆ ಟಿಪ್ಪುವು ಪರಮೇಶ್ವರನ ಏಕತಾನತೆ ಮತ್ತು ಒಂಟಿತನದ ಬೇಸರವನ್ನು ಕಳೆದನು.

ಇತಿ ಟಿಪ್ಪುರಾಣೆ ಆದಿ ಸರ್ಗೆ ಏಕಾಂತಹರಣಂ ಇತಿ ಪಂಚಮೋಧ್ಯಾಯಃ ಸಂಪೂರ್ಣಂ.


#ಟಿಪ್ಪುರಾಣ

No comments:

Post a Comment