Wednesday, December 6, 2017

ಟಿಪ್ಪುರಾಣ-3

"ಮುನಿವರ್ಯಾ!!, ಟಿಪ್ಪುವಿನ ಪುರಾಣವನ್ನೇನೋ ಪುನಹ ರಚಿಸಿದ ಬಗೆ ಮತ್ತು ಅದಕ್ಕೆ ಕಾರಣರಾದವರ ಬಗ್ಗೆಯೂ ನಮಗೆ ತಿಳಿಸಿ ಕೃತಾರ್ಥರನ್ನಾಗಿ ಮಾಡಿದಿರಿ ನಿಜ. ಆದರೆ, ಬರಹದ ಉದ್ದೇಶ ಏನಿತ್ತು.  ಇಷ್ಟು ಕಾಲದ ತನಕ ಗುಟ್ಟಾಗಿ ಉಳಿದಿದ್ದ ಈ ಚರಿತ್ರೆ ಮತ್ತೆ ಅಕ್ಷರ ರೂಪ ತಳೆಯಲು ಉದ್ದೇಶವಾದರೂ ಏನಿತ್ತು ಇದನ್ನು ಕೂಡಾ ತಿಳಿಸಿ ನಮ್ಮ ಜ್ಞಾನವನ್ನು ಹೆಚ್ಚಿಸಬೇಕು" ಎಂದು ಅವರಲ್ಲಿದ್ದ ಶುನಕ ಎನ್ನುವ ಶಿಷ್ಯನು ಕೇಳಿದನು.

"ಶುನಕನೇ!! ದೈವ ಸಂಕಲ್ಪವು ಕೆಲವು ಸಲ ವಿಶಿಷ್ಟವಾಗಿಯೂ ವಿಚಿತ್ರವಾಗಿಯೂ ಇರುತ್ತದೆ ಎನ್ನುವುದನ್ನು ನೀನು ಬಲ್ಲೆಯಷ್ಟೆ. ಹಿಂದೆಯೂ ಅನೇಕ ಪುರಾಣಗಳನ್ನು ಹೇಳಿ ಈ ವಿಚಾರವನ್ನು ತಿಳಿಸಿದ್ದೇನೆ. ಹಾಗೆಯೇ ಇಲ್ಲಿಯೂ ನಾನು ತಿಳಿಸುತ್ತೇನೆ."

"ದೇವಿ ಚಾಮುಂಡೇಶ್ವರಿಯ ಮೇಲಿನ ಅತೀವ ಭಕ್ತಿಯಿಂದಾಗಿ ಈ ಚೇತನವು ಆಕೆ ಮಹಿಷನನ್ನು ಕೊಂಡು ಕಳೆದ ಊರಿನಲ್ಲಿ ಜನಿಸಿ, ಅಲ್ಲಿಯ ಅರಸೊತ್ತಿಗೆಯನ್ನು ಪಡೆಯಿತು. ತದನಂತರದಲ್ಲಿ ಮೃಣ್ಮಯವಾದ, ಅಶಾಶ್ವತವಾದ ಶರೀರವನ್ನು ಯುದ್ಧಭೂಮಿಯಲ್ಲಿ ವಿಸರ್ಜಿಸಿ, ವಿಷಯಗಳನ್ನು ನಿರ್ಲಕ್ಷಿಸಿ, ದೇವಭೂಮಿಯ ಕಡೆ ತೆರಳಿತು. ಅದಾಗಿ ೨೦೦ ವರ್ಷಗಳ ಕಾಲ ಈತನ ಬಗ್ಗೆ ಏನೋ ಚರ್ಚೆಯಾಗಲೀ ಈತನ ಜನ್ಮೋತ್ಸವವಾಗಲೀ ನಡೆಯಲಿಲ್ಲ. ಆದರೆ, ಕರ್ನಾಟಕದಲ್ಲಿ ಸೀದ ಎನ್ನುವ ವ್ಯಕ್ತಿಯೊಬ್ಬ ಕರ ಚಳಕದಿಂದ ಅಧಿಕಾರ ಪಡೆದು, ಅದನ್ನು ಉಳಿಸಿ ಬೆಳೆಸಿಕೊಳ್ಳಲು ದಿಕ್ಕು ಕಾಣದೆ ಪರಿತಪಿಸುತ್ತಿದ್ದಾಗ, ಈತನ ಜಯಂತಿಯನ್ನು ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಿ ಬೆಂಬಲ ಪಡೆಯುವ ಹವಣಿಕೆಯಲ್ಲಿದ್ದನು."

" ಈ ಹಟದಿಂದ ಮಡಿಕೇರಿಯಲ್ಲಿಂದು ಸಲ ಒಂದು ಜೀವವೇ ಹೊಗಿಬಿಟ್ಟಿತು. ಆದರೂ ಸೀದನಿಗೆ ಇದು ಬೇಡ ಎನ್ನಿಸಲಿಲ್ಲ. ಹಟದಿಂದ ಮುಂದಾಗಿ ಮತ್ತೆ ಮತ್ತೆ ಆಚರಿಸುತ್ತಿದ್ದನು. ಇತ್ತ ಮುಖ ಪುಸ್ತಿಕೆಯಲ್ಲಿ ಇರುವ ಜನಗಳು ಕೂಡಾ ಅಕ್ಟೋಬರ್ ತಿಂಗಳು ಬಂದ ಕೂಡಲೇ ಇದರ ಪರ ವಿರೋಧ ಚರ್ಚೆಗಳನ್ನು ಶುರು ಮಾಡಿಕೊಳ್ಳುತ್ತಿದ್ದರು. ಜಯಂತಿ ಮುಗಿದ ಕೂಡಲೇ ಅದನ್ನು ಮರೆಯುತ್ತಿದ್ದರು."

"ಸೀದಣ್ಣನು ಕೂಡಾ ಅವರಿಗೆ ಚರ್ಚಿಸಲು ಅನುಕೂಲವಾಗಲಿ ಎಂದು ಇಂಥಾ ಅನೇಕ ಕೆಲಸಗಳನ್ನು ಮಾಡುತ್ತಿದ್ದನು. ಹೀಗೆ ಒಮ್ಮೆ ಈತನ ಜಯಂತಿಯ ಸಂದರ್ಭದಲ್ಲಿ ಸೀದನ ಸಚಿವನೊಬ್ಬ ಟಿಪ್ಪುವಿನ ಬಗ್ಗೆ ಆತ ಹುಟ್ಟುವ ಮೊದಲೇ ಆತನ ಬಗ್ಗೆ ಬರೆಯಲಾಗಿತ್ತು ಎಂದು ಹೇಳಿ ಬಿಟ್ಟನು. ಸೀದನಾಗಲೀ, ಟೀಪುವಿನ ಮಾತೆತ್ತಿದರೆ ಸಾಕು ಜಗಳಕ್ಕೆ ಮುಂದಾಗುತ್ತಿದ್ದ ಪ್ರಶಸ್ತಿ ಭಾಜಿತ ಇತಿಹಾಸ ಕಾರರಾಗಲೀ, ಇದರ ಬಗ್ಗೆ ಏನೋ ಚಕಾರವೆತ್ತಲಿಲ್ಲ."

"ರಾಂಗು ಎನ್ನುವ ಇತಿಹಾಸಕಾರನೊಬ್ಬ ಇಂಥಾ ಅನೇಕ ಸತ್ಯಗಳನ್ನು ಸುಳ್ಳಿನ ಕವಚದಿಂದ ಅದಾಗಲೇ ಮರೆಮಾಚಿ ಯಶಸ್ವಿಯೂ ಆಗಿದ್ದನು. ಇಂಥಾ ಜನರ ಕುರಿತಾಗಿ ಹಬ್ಬದ ಖರ್ಚಿನಂತೆ ಜನ ಮಾತಾಡುವುದು ಗ್ರಂತಾಕರ್ತನಾದ ಶಶಾಂಕನಿಗೆ ಸರಿ ಕಾಣಲಿಲ್ಲ. ಈ ಚೇತನದ ಕುರಿತು ಜನ ಬಹಳ ಕಾಲ ಮಾತಾಡಿ, ಅದೂ ಸುಳ್ಳನ್ನು ಕೇಳಿ ಇನ್ನೂ ಹೆಚ್ಚಿನ ಸುಳ್ಳುಗಳನ್ನು ಹೇಳುವವರಿಗೆ ಕಷ್ಟವಾಗಬೇಕೆಂದೂ, ವಿಚಾರಿಸದೆ ವಿಮರ್ಶಿಸದೆ ಮಾತಾಡುವವರಿಗೆ ಸುಲಭವಾಗಲೆಂದೂ, ಹಾಗೆಯೇ ಮುಂದಿನ ವರ್ಷಗಳಲ್ಲಿ ಈ ಚೇತನದ ಬಗ್ಗಾಗಿ ಹೇಳಬಹುದಾದ ಮಾತುಗನ್ನು ಕೇಳಲು ಜನರಿಗೆ ಶಕ್ತಿ ಬರಲೆಂದೂ ಈ ಪುರಾಣವನ್ನು ರಚಿಸಿದನು."

"ಒಂದು ವರ್ಗದ ಜನರಿಗಷ್ಟೇ ಉಪಕರಿಸುತ್ತಾ ಅವರನ್ನು ತುಷ್ಟೀಕರಿಸುತ್ತಾ ಹೋದಾಗ ಸುಳ್ಳುಗಳ ಸಹಾಯ ಬೇಕಾಗುತ್ತದೆ. ಆ ಸುಳ್ಳುಗಳನ್ನು ಹೆಣೆಯಲು ರಾಂಗು, ಕಾರ್ಮೋಡ, ಗೊತಿಂದ ರಾಯ, ಪರಾಕಾಸ ರಯ್ಯ ಹೀಗೆ ಅನೇಕ ಮಂದಿ ಪಾಷಂಡಿಗಳು ಧೈರ್ಯಾರಿಷ್ಟ, ರಾಜಕೀಯದ ಉಚ್ಛಿಷ್ಟ ಮತ್ತು ಜ್ಞಾನದ್ರವಗಳನ್ನು ಪಾನ ಮಾಡಿ, ಇನ್ನೂ ಅನೇಕ ಗಂಜಿ ತಿಳಿ ಗಿರಾಕಿಗಳ ಪಡೆಯನ್ನು ಕಟ್ಟಿ ಭೂರಿಡುತ್ತಾರೆ. ಅವರು ಏನೋ ಮಾಡದೆ ಇದನ್ನೆಲ್ಲಾ ಮಾಡಿದರೆ ಜನರ ಶ್ರಮದ ಹಣವು ಸಲ್ಲಬೇಕಾದವರಿಗೆ ಸಲ್ಲಬೇಕು ಎಂದು ಕೂಡಾ ಈ ಪುರಾಣದ ಉದ್ಡೀಶವಾಗಿದೆ."

“ವಿಚಾರವೊಂದು ವರ್ಷಕ್ಕೊಂದು ಸಾರಿ ಪ್ರಚಾರ ಪಡೆದು ತಿಂಗಳೊಪ್ಪತ್ತರಲ್ಲಿ ಮರೆವಂತಾದರೆ, ಅದು ರೋಗದಂತಾಗುತ್ತದೆ. ಅಂದರೆ ಮತ್ತೆ ಮತ್ತೆ ಮರುಕಳಿಸುತ್ತದೆ.  ಹೀಗಾಗದೆ ಒಂದು ವರ್ಷ ಪರ್ಯಂತ ಅದರ ಬಗ್ಗೆ ಜನರ ತಲೆ ತಿಂದರೆ ಜನರೇ ಇವನ ಬಗ್ಗಿನ ಅತಿಶಯ ಹೊಗಳಿಕೆಯಿಂದ ಬೇಜಾರಾಗಿ ಈತನ ಜಯಂತಿಗೆ ಕಿಮ್ಮತ್ತಿಲ್ಲದಂತಾಗಲೀ ಎನ್ನುವುದು ಕೂಡ ಈ ಪುರಾಣದ ಆಶಯ.”

“ಸುಳ್ಳನ್ನೇ ಹೇಳಿ ಒಂದನ್ನು ಆಚರಿಸಲೇಬೇಕೆಂಬ ಹಟ ಬಿದ್ದಾದಮೇಲೆ, ಸಾಲವನ್ನು ತಂದರೂ ಸರಿ, ಎಷ್ಟೇ ಹಳತಾಗಿದ್ದರೂ ಸರಿ ಹಳಸಿದ್ದರೂ ಸರಿ ತುಪ್ಪವನ್ನು ತಿನ್ನಲೇಬೇಕು ಎಂಬ ಹಟವಿದ್ದ ಮೇಲೆ, ಸದ್ವಿಚಾರಗಳನ್ನು, ಸತ್ಯವನ್ನು ಒಪ್ಪದ ಜನರಿಗೆ ಸುಳ್ಳನ್ನೇ ಉಣಬಡಿಸಲು ಈ ಪುರಾಣದ ರಚನೆಯಾಯಿತು.”

“ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ ಸುಳ್ಳಿನ ಮೂಲಕವೇ ಸುಳ್ಳಿನ ಪರಾಕಾಷ್ಟೆಯನ್ನು ತೋರಿಸಬೇಕು ಎನ್ನುವುದೇ ಈ ಪುರಾಣದ ಉದ್ದೇಶ”

ಇತಿ ಟಿಪ್ಪುರಾಣೆ ಆದಿ ಸರ್ಗೇ ಉದ್ದೇಶ ನಾಮಕ ತೃತೀಯೋಧ್ಯಾಯಃ ಸಂಪೂರ್ಣಮ್.

#ಟಿಪ್ಪುರಾಣ

No comments:

Post a Comment