Thursday, December 21, 2017

ಅರುಣ

ಬೆಳಗಿನ ಹೆಪ್ಪುಗಟ್ಟಿಸುವ ಚಳಿಯಲ್ಲಿ ಬೆಚ್ಚಗೆ ಹೊದ್ದು ಮಲಗಿದ ನಮಗೆ ಸೂರ್ಯ ಯಾಕಾದರೂ ಬಂದನೋ ಎನ್ನಿಸುತ್ತದೆ. ಆತ ಭಾಸ್ಕರನಲ್ಲವೇ? ಆತ ಬರಲೇ ಬೇಕು. ಬೆಳಗಾಗಲೇ ಬೇಕು. ಸ್ವಲ್ಪ ಹೊತ್ತಿನ ಅನಂತರ, ಮತ್ತೆ ಆ ಸೂರ್ಯನ ಕಿರಣಗಳಿಗೆ ಮೈ ಒಡ್ಡಿ, ಬೆಚ್ಚಗೆ ಬಿಸಿಲು ಕಾಸುತ್ತಾ, ವಿಟಮಿನ್ ಡಿ ಪಡೆಯುವಾಗ ಈ ಹಿಮಘ್ನ, ತಪನನಾಗಿ ಎಷ್ಟು ಹಿತಕಾರಿಯಲ್ಲವೇ?
ಜಗತ್ತಿನ ಶಕ್ತಿಮೂಲ ಈ ಸೂರ್ಯ. ಈತ ಈ ಕಾರಣದಿಂದಲೇ ಸೂರ್ಯ ನಾರಾಯಣ ಎನ್ನಿಸಿಕೊಂಡಿದ್ದು. ಆದರೆ, ಈ ಸೂರ್ಯ ಕಿರಣಗಳ ಜೊತೆ, ಜಗತ್ತಿಗೆ ಅಹಿತಕಾರಿಯಾದ ವಿಕಿರಣಗಳನ್ನೂ ಉತ್ಸರ್ಜಿಸುತ್ತಾನೆ. ಹಾಗೆ ಹೊರಟ ವಿಕಿರಣಗಳು, ಪೂರ್ಣ ಪ್ರಮಾಣದಲ್ಲಿ ಭೂಮಿಯನ್ನು ತಲುಪುವುದಿಲ್ಲ. ಹಾಗಾದರೆ ಅದನ್ನು ತಡೆಯುವವರು ಅಥವಾ ಹೀರುವವರು ಯಾರು? ಮತ್ಯಾರೂ ಅಲ್ಲ. ಸೂರ್ಯನ ಸಾರಥಿ ಅರುಣ.
ಪ್ರಜಾಪತಿಗಳಲ್ಲಿ ಒಬ್ಬರಾದ ಕಾಶ್ಯಪರ ಮಡದಿಯರು ಕದ್ರು ವಿನತೆಯರು. ಋತುಸ್ನಾತೆಯರಾದಾಗ, ಕದ್ರು ಬಲಶಾಲಿಗಳಾದ, ತನ್ನ ಅಜ್ಞಾಧಾರಕರಾದ ಸರ್ಪಗಳನ್ನು ಕೇಳಿದಳು ಆದರೆ ವಿನುತೆ ಮಹಾಪ್ರತಾಪಿಗಳೂ, ಧಾರ್ಮಿಕರೂ ಆದ ಇಬ್ಬರು ಮಕ್ಕಳನ್ನು ಕೇಳಿದಳು. ಕದ್ರುವಿನ ಅಪೇಕ್ಷೆ ಬೇಗ ಫಲಿಸಿತು. ಸವತಿ ಮಾತ್ಸರ್ಯವೋ ಅಥವಾ ಕೀಳರಿಮೆಯೋ ಏನೋ, ವಿನತೆ, ತನಗೆ ಕೊಟ್ಟಿದ್ದ ಮೊಟ್ಟೆಗಳಲ್ಲಿ ಎರಡು ಮೊಟ್ಟೆಗಳಲ್ಲಿ ಒಂದನ್ನು ಒಡೆದುಬಿಟ್ಟಳು. ಆಗ ಹುಟ್ಟಿದ ಮಗುವೇ ಅರುಣ. ವಿನತೆಯ ಹಿರಿ ಮಗ. ಆತನ ಬೆಳವಣಿಗೆ ಪೂರ್ಣವಾಗದ ಕಾರಣದಿಂದ, ಪಾಪ ಕಾಲುಗಳೇ ಬಂದಿರಲಿಲ್ಲ. ಆತನನ್ನು ಅದಕ್ಕೇ ಅನೂರ ಎಂತಲೂ ಕರೆದರು. ತನ್ನನ್ನು ವಿಕಲಾಂಗನನ್ನಾಗಿ ಮಾಡಿದ ಸಿಟ್ಟಿನಲ್ಲಿ ಅರುಣ, ವಿನತೆಯನ್ನು ದಾಸ್ಯಕ್ಕೊಳಪಡುವಂತೆ ಶಪಿಸಿದ. ಮುಂದೆ ಕದ್ರು ಮತ್ತೆ ಅವಳ ಮಕ್ಕಳು ಹೂಡಿದ ತಂತ್ರದಿಂದ ವಿನತೆ ಕದ್ರುವಿನ ದಾಸಿಯಾದಳು. ಮತ್ತೊಂದು ಮೊಟ್ಟೆ ಬಿರಿದು ಅದರಿಂದ ಹುಟ್ಟಿದವ ಗರುಡ.
ತಾಯಿ ದಾಸಿಯಾದಮೇಲೆ ಮಕ್ಕಳೂ ದಾಸ್ಯವನ್ನು ಮಾಡಲೇ ಬೇಕಲ್ಲ. ಗರುಡನ ಕತೆಯೂ ಹಾಗೆಯೇ ಆಯಿತು. ಆದರೆ ಗರುಡ ತನ್ನಣ್ಣನನ್ನು ಬಿಡಲಿಲ್ಲ. ಆತನನ್ನು ಸದಾ ತನ್ನ ಜೊತೆಗೇ ಕರೆದೊಯ್ಯುತ್ತಿದ್ದ.
ಇನ್ನೊಂದೆಡೆ, ರಾಹು ಪದೇ ಪದೇ ತನ್ನನ್ನು ಕಾಡುತ್ತಿರುವುದರಿಂದ ಕ್ಷೋಭೆಗೊಳಗಾದ ಸೂರ್ಯ, ಸಕಲ ಲೋಕಗಳನ್ನೂ ದಹಿಸಲು ತನ್ನ ಕಿರಣಗಳನ್ನು ತೀವ್ರ ತಾಪಕ್ಕೆ ಈಡು ಮಾಡಿ ಉದಯಿಸುವ ಘೋಷಣೆ ಮಾಡಿ ಅದಕ್ಕೆ ಅನುವಾದ. ಈ ಕಡೆ ಕದ್ರು, ಗರುಡನಲ್ಲಿ, ತನ್ನನ್ನ್ನೂ ತನ್ನ ಮಕ್ಕಳನ್ನೂ ರಾಮಣೀಯಕ ಎನ್ನುವ ದ್ವೀಪಕ್ಕೆ ಕರೆದೊಯ್ಯಲು ಹೇಳಿದಳು. ಗರುಡ, ತನ್ನಣ್ಣ ಅರುಣನನ್ನೂ, ಸರ್ಪಗಳನ್ನೂ ಮತ್ತು ಕದ್ರುವನ್ನೂ ಬೆನ್ನ ಮೇಲೆ ಕೂರಿಸಿಕೊಂಡು ಹಾರುತ್ತಾ ಸಾಗಿದ. ಅದೇ ಸಮಯಕ್ಕೆ ಸೂರ್ಯ ತೀವ್ರ ತಾಪದಿಂದ ಉದಯಿಸುತ್ತಾನೆ. ಸೂರ್ಯನ ಪ್ರಖರತೆಯನ್ನು ಗರುಡ ಅರುಣರು ತಾಳಿಕೊಂಡರೂ ಸರ್ಪಗಳು ಮೂರ್ಛಿತರಾದರು. ಇದನ್ನು ನೋಡಿದ ಕದ್ರು ತನಗೆ ಮಗನ ಸಮಾನನೂ, ದೇವತೆಗಳಿಗೆ ಒಡೆಯನೂ ಆದ ಇಂದ್ರನನ್ನು ಪ್ರಾರ್ಥಿಸಿದಳು. ತನ್ನ ಚಿಕ್ಕಮ್ಮನ ಮೊರೆ ಕೇಳಿದ ಇಂದ್ರ, ಸರ್ಪಗಳನ್ನು ರಕ್ಷಿಸಲು ಸೂರ್ಯನ ಪ್ರಖರತೆಯನ್ನು ಕಡಿಮೆ ಮಾಡುವುದಕ್ಕಾಗಿ ಮೋಡಗಳನ್ನು ಸೃಜಿಸಿ ಮಳೆ ಸುರಿಸಿದ. ಆದರೆ ಇದು ಕೇವಲ ತಾತ್ಕಾಲಿಕ ಉಪಶಮನವೇ ಆಯಿತು. ಪ್ರಕ್ಷುಬ್ಧ ಸೂರ್ಯ, ಭಾಸ್ಕರನಷ್ಟೇ ಆಗಿ ಉಳಿಯದೆ ತಪನನಾಗಿಬಿಟ್ಟಿದ್ದನಲ್ಲ.
ಆಗ, ಗರುಡನ ಬೆನ್ನ ಮೇಲಿದ್ದ ಅರುಣ ತಾನು ಮರೆಯಾಗಿ, ಸರ್ಪಗಳನ್ನು ರಕ್ಷಿಸಿದ. ಸೂರ್ಯನ ತಪನದಿಂದ ಜಗತ್ತನ್ನು ಉಳಿಸಲು ಅರುಣ ಮುಂದಾದ, ಗರುಡನಲ್ಲಿ, ಸೂರ್ಯನ ರಥದ ಸಮೀಪಕ್ಕೆ ಸಾಗಲು ಹೇಳಿದ. ಅಣ್ಣನ ಬಲದ ಬಗ್ಗೆ ತಿಳಿದಿದ್ದ ಗರುಡ ರಥದ ಸಮೀಪ ಸಾಗಿದ. ರಥಾಗ್ರವನ್ನು ಅಂದರೆ ರಥದ ಮೂಕನ್ನು ಸಮೀಪಿಸಿ ನಿಂತ. ಅರುಣ ಆ ಮೂಕಿನ ಮೇಲೆ ಕುಳಿತು, ಸೂರ್ಯನ ರಥದ ಲಗಾಮುಗಳನ್ನು ಹಿಡಿದು ರಥವನ್ನು ನಡೆಸುತ್ತಾ ಸೂರ್ಯನ ತಾಪವನ್ನು ಹೀರತೊಡಗಿದ. ಅಂದಿನಿಂದ ಇಂದಿನ ವರೆಗೂ, ಅರುಣ ತನ್ನ ಅಣ್ಣನೂ ಆದ ಸೂರ್ಯನ ತಾಪವನ್ನು ಶಮಿಸುತ್ತಾ, ಸೃಷ್ಟಿಯನ್ನು ರಕ್ಷಿಸುತ್ತಲೇ ಇದ್ದಾನೆ.
ಇದಿಷ್ಟೂ ಪುರಾಣಸಾರಾಂಶವಾಯಿತು. ಈಗ ವರ್ತಮಾನವನ್ನೊಮ್ಮೆ ನೋಡೊಣ. ಭೂಮಿಯನ್ನು ಆವರಿಸಿರುವ ಗೋಲಗಳಲ್ಲಿ ಅಯಾನುಗೋಲವೂ ಒಂದು. ಈ ಅಯಾನುಗೋಲವು ಓಜೋನ್ ಪದರದ ಮುಂದಿನ ಭಾಗ. ಈ ಅಯಾನುಗಳು ಉಂಟಾಗುವುದು ಸೂರ್ಯನಿಂದ ಉತ್ಸರ್ಜಿತವಾದ ನೇರಳಾತೀತ ಕಿರಣಗಳು ಓಜ಼ೋನ್ ಪದರದ ಮೇಲೆ ಬಿದ್ದು ಪ್ರತಿಫಲಿಸುವುದರಿಂದ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಅಯಾನು ಗೋಳದ ಇರುವಿಕೆ ದೃಢಪಟ್ಟಿದ್ದು ಮಾರ್ಕೋನಿ, ರೇಡಿಯೋ ಅಲೆಗಳನ್ನು ಶಾಂತಸಾಗರದಿಂದ ಆಚೆ ಕಳಿಸಿದಾಗ. ಉದಯದ ಸಮಯದಲ್ಲಿ ಸೂರ್ಯನಿಂದ ವಿಕಿರಣದ ಉತ್ಸರ್ಜನೆ ತೀವ್ರವಾಗಿರುತ್ತದೆ ಎನ್ನುವುದನ್ನೂ ವಿಜ್ಞಾನಿಗಳೂ ದೃಢಪಡಿಸಿದ್ದಾರೆ. ಒಜ಼ೊನ್ ಪದರ ವಿಕಿರಣಗಳನ್ನು ಹೀರಿ ಭೂಮಿಯನ್ನು ರಕ್ಷಿಸುತ್ತಿರುವುದು ಎಲ್ಲರಿಗೂ ತಿಳಿದಿರುವುದೇ ಆಗಿದೆ. ಇಂದ್ರ, ಸೂರ್ಯನ ತಾಪದಿಂದ ರಕ್ಷಿಸಲು ಸೃಜಿಸಿದ ಮಹಾಮೇಘ ಸಮುಚ್ಛಯವೇ ಇದಿರಬಹುದೇ ಹಾಗಾದರೆ?ಸೂರ್ಯನಿಂದ ವಿಕಿರಣಗಳ ಉತ್ಸರ್ಜನೆ ತೀವ್ರವಾಗುವುದು, ಸೂರ್ಯನಲ್ಲಿ ಒತ್ತಡ ಹೆಚ್ಚಾದಾಗ ಅಂದರೆ ಕ್ಷೋಭೆ ಹೆಚ್ಚಿದಾಗ!
ಇಲ್ಲೊಂದು ಶಬ್ದಸಾಮ್ಯವೂ ಸೊಗಸಾಗಿದೆ. ಅರುಣ>>>ಅಯಾನ್!! ಎರಡೂ ಭೂಮಿ ಮತ್ತು ಸೂರ್ಯನ ನಡುವೆ ಇವೆ ಮತ್ತು ಸೂರ್ಯನ ಕಿರಣಗಳು ಇವುಗಳ ಮೂಲಕವೇ ಹಾಯ್ದು ಭೂಮಿಯನ್ನು ಸೋಕಬೇಕು!!!
ನಮ್ಮ ಪೂರ್ವಿಕರು, ಸೂರ್ಯನಿಂದ ಕಿರಣಗಳು ಹೊರ ಹೊಮ್ಮುವ ಬಗೆ-ಅದರ ಕಾರಣಗಳನ್ನೂ ತಿಳಿದಿದ್ದರು. ವಿಕಿರಣಗಳ ಉತ್ಪತ್ತಿ, ಅದರಿಂದ ಉಂಟಾಗುವ ಸಮಸ್ಯೆ- ವಿನಾಶ ಎನ್ನುವುದನ್ನೂ ಅರಿತಿದ್ದರು. ಸೂರ್ಯನಿಂದ ಉತ್ಸರ್ಜಿತವಾಗುವ ವಿಕಿರಣಗಳನ್ನು ಅರುಣ ಹೀರಿದ ಎನ್ನುವಾಗ ಅವರಿಗೆ ಅಯಾನುಗೋಲದ ಪರಿಚಯ ಇದ್ದಿರಲೇ ಬೇಕು ಎನಿಸುವುದಿಲ್ಲವೆ? ಒಜ಼ೋನ್ ಪದರ ಇದ್ದಿದ್ದು ಹೌದಾದರೂ ಅದರ ಸೃಷ್ಟಿಯ ಬಗ್ಗೆ ಇಂದಿಗೂ ಇದಮಿತ್ಥಮ್ ಎನ್ನುವ ವ್ಯಾಖ್ಯಾನ ದೊರೆಯಲಿಲ್ಲ, ನಮ್ಮ ಪುರಾಣಗಳು ನಡೆದಿತ್ತು ಎನ್ನುವುದಕ್ಕೆ ಸಾಕ್ಷಿ ಕೇಳುವುದರಲ್ಲಿ ಸಮಯ ಪೂರ್ತಿ ವ್ಯಯ ಮಾಡಿ ಅವರಿಗೆ ಇದನ್ನು ಕಂಡು ಹಿಡಿಯಲು ಆಗಲಿಲ್ಲವೇನೋ ಬಿಡಿ.
ಉದಯದ ಕಾಲವನ್ನು ಅರುಣೋದಯ ಎನ್ನುತ್ತಾರೆ. ಸಾರಥಿ, ರಥಿಕನಿಗಿಂತಲೂ ಮೊದಲೇ ಬರುವುದು. ಸೂಕ್ಷ್ಮವಾಗಿ ಗಮನಿಸಿದರೆ, ಉದಯ ಸೂರ್ಯನ ಬಣ್ಣ, ಅಸ್ತಮಿಸುತ್ತಿರುವ ಸೂರ್ಯನ ಬಣ್ಣಕ್ಕಿಂತ ತುಸು ಭಿನ್ನವಾಗಿದೆ. ಅದಕ್ಕೇ ಬೆಳಗಿನ ಬಣ್ಣವನ್ನು ಅರುಣವರ್ಣ ಎಂದು ಕರೆಯುವುದು. ಕಿರಣಗಳ ವಕ್ರೀಭವನದಿಂದ ಸೂರ್ಯ ಉದಯ-ಅಸ್ತಮಾನಗಳ ಸಮಯದಲ್ಲಿ ಕೆಂಪಡುರುವುದು ಎನ್ನುವುದು ವೈಜ್ಞಾನಿಕವಾಗಿ ಸಿದ್ಧಗೊಂಡಿದೆ.
ಹೀಗೆ ಸೂರ್ಯನಿಂದ ವಿಕಿರಣಗಳ ಉತ್ಸರ್ಜನೆ, ಓಜ಼ೋನ್ ಪದರದ ಮೇಲೆ ಅವು ಬಿದ್ದು ಪ್ರತಿಫಲನಗೊಂಡು ಅಯಾನುಗಳಾಗಿ, ಮತ್ತೆ ಉಳಿದ ಕಿರಣಗಳು ವಕ್ರೀಭವನಗೊಂಡು, ಕೆಂಪಡರುವುದು ಎಲ್ಲವನ್ನೂ ಭಾರತದ ಋಷಿ ಮುನಿಗಳು ಅರಿತಿದ್ದರು., ಅದೂ ಯಾವುದೇ ಹಬಲ್ ದೂರದರ್ಶಕ ಇಲ್ಲದೆ; ನಾಸಾದ ಸಹಾಯ ಪಡೆಯದೆ ಸೂರ್ಯನ ಬೆಳಕಿನ ನ್ಯಾಸ- ವಿನ್ಯಾಸಗಳನ್ನು ತಿಳಿಸಿದ್ದರು.
ಹೀಗೆ ಸೂರ್ಯನನ್ನು ಜಗತ್ಪಿತ ಎಂದು ಕರೆದು, ಅವನ ಕುರಿತಾಗಿ ಅನೇಕ ವಿಚಾರಗಳನ್ನು ಸುಂದರ ಶಬ್ದಗಳಲ್ಲಿ, ರಸ್ವತ್ತಾದ ಅಲಂಕಾರಗಳಿಂದ, ಸೂಕ್ತ ಶಬ್ದಗಳಿಂದ, ರಹಸ್ಯಂ ಚ ಪ್ರಕಾಶಂ ಚ ಎನ್ನುವ ರೀತಿಯಲ್ಲಿ ವರ್ಣಿಸಿ, ಮಾನಕ್ಕೊಪ್ಪುವ ರೀತಿಯಲ್ಲಿ ಬಹಳ ಹಿಂದೆಯೇ ತಿಳಿಸಿದ್ದರು ಈ ಭರತ ಭೂಮಿಯಲ್ಲಿದ್ದ ಋಷಿ ಮುನಿಗಳು.  ಸೂರ್ಯನ ಬೆಳಕಿನ ಮೇಲೆ ಆಧುನಿಕ ವಿಜ್ಞಾನದ ಆಧಾರದಲ್ಲಿ ಸಂಶೋಧನೆ ಮಾಡಿ ಆ ಮಾತುಗಳು ಸತ್ಯ, ಕೇವಲ ಕಪೋಲ ಕಲ್ಪಿತವಲ್ಲ, ಬ್ರಾಹ್ಮಣರ ಅತಿರಂಜಿತ ವಿಚಾರಗಳಲ್ಲ, ಅಡಗೊಲಜ್ಜಿಯ ಕತೆಯೂ ಅಲ್ಲ ಎಂದು ಸಾಧಿಸಿದ್ದು, ಇದೇ ಭರತವರ್ಷದಲ್ಲಿ ಹುಟ್ಟಿದ ಸರ್ ಸಿ. ವಿ. ರಾಮನ್. ಇದು ಕಾಕತಾಳೀಯವೋ ಅಥವಾ ದೈವಲೀಲೆಯೋ?!
ಆದರೂ ಪುರಾಣಗಳ ಬಗೆಗೆ ವೈಜ್ಞಾನಿಕ ಪುರಾವೆ ಬೇಕಾಗಿದೆ. ಕೊಡಲಾರದ್ದು ವಿಜ್ಞಾನಿಗಳ ಅಸಹಾಯಕತೆಯೋ ಅಥವಾ ಕೊಟ್ತದ್ದನ್ನು ಒಪ್ಪದಿರುವುದು ಬುದ್ಧಿ ಇದೆ ಎಂದು ಗುರುತಿಸಲ್ಪಡುವವರ ಅಲ್ಪತನವೋ, ಅಹಂಕಾರವೋ ತಿಳಿಯುತ್ತಿಲ್ಲ.

No comments:

Post a Comment