Monday, November 19, 2018

ವರದಕ್ಕನ ವರಾತಗಳು (ಅಧ್ಯಾಯ1 ಪ್ರಸಂಗ1)

ವರದಕ್ಕ ಹುಟ್ಟಿದ್ದು ಸಿರಸಿಯ ಒಂದು ಸಣ್ಣ ಊರಿನ ದೊಡ್ಡ ಕುಟುಂಬದಲ್ಲಿ. ಮದುವೆಯಾಗಿದ್ದು ಕೂಡಾ ಅದೇ ಸಿರಸಿ ಪ್ರಾಂತ್ಯದ ಮತ್ತೊಂದು ಸಣ್ಣ ಊರಿನ ದೊಡ್ಡ ಕುಟುಂಬದಲ್ಲಿ. ಅವಳ ತವರು ಮನೆಯವರು ಬನವಾಸಿಯ ಭಕ್ತರಂತೆ. ಅದಕ್ಕೇ ಬನವಾಸಿಗೆ ಸಂಬಂಧಿಸಿದ ಹೆಸರೊಂದು ಅವರ ಮನೆಯಲ್ಲಿ ಹುಟ್ಟಿದ ಹಿರಿಯ ಮಗಳಿಗೆ ಇಡಲೇ ಬೇಕಿತ್ತು. ಮಧುಕೇಶ್ವರನ ಪಾದಕಮಲಗಳನ್ನು ನಿತ್ಯವೂ ತೋಯಿಸುವ ವರದೆಯ ಹೆಸರನ್ನೇ ಅವಳಿಗೆ ಇಟ್ಟಿದ್ದರು ಅವಳ ಅಪ್ಪಯ್ಯ. ಅವಳ ಸೌಭಾಗ್ಯ ಬಹಳ ದೊಡ್ಡದು. ತವರು ಮನೆಯಲ್ಲಿ ಮುತ್ತಜ್ಜಿ ಮತ್ತು ಮುತ್ತಜ್ಜನ ಆಶೀರ್ವಾದವನ್ನು ಪಡೆದು ಮದುವೆಯಾದರೆ ಕೊಟ್ಟ ಮನೆಯಲ್ಲಿಯೂ ಮುತ್ತಜ್ಜ ಮುತ್ತಜ್ಜಿಯ ಆಶೀರ್ವಾದವನ್ನು ಪಡೆದೆ ಒಳ ಸೇರಿದಳು. ಒಂದು ಹಂತದ ಶ್ರೀಮಂತಿಕೆ ಇತ್ತು. ಹಿರಿಯ ಮಗಳಾಗಿದ್ದರಿದ ಸ್ವಲ್ಪ ಮುದ್ದು ಕೂಡಾ ಹೆಚ್ಚಿತ್ತು. ಪರಿಣಾಮ ಅವಳು ಸುಖವಾಗಿಯೇ ಇದ್ದಳು ಇಹ ಪರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆಯೇ. ಹಾಗಂತ ಅವಳ ತವರು ಮನೆಯವರು ಅವಳನ್ನು ಮುದ್ದಿನ ಮುದ್ದೆಯಾಗಿಸಲಿಲ್ಲ. ಅಡುಗೆ ಕೆಲಸ, ಆದರಾತಿಥ್ಯ, ಶಿಸ್ತು, ಸಂಗೀತ ಎಲ್ಲವನ್ನೂ ಅವಶ್ಯಕತೆಯಿದ್ದಷ್ಟು ಕಲಿಸಿದ್ದರು.

ಕೊಟ್ಟ ಮನೆಯಲ್ಲಿಯೂ ಅವಳಿಗೆ ಇದ್ಯಾವುದರ ತಲೆಬಿಸಿ ಉಂಟಾಗಲಿಲ್ಲ. ದೂರದ ಸಂಬಂಧಿಕರೇ ಆಗಿದ್ದ ಗಂಡನ ಮನೆ ತುಂಬಾ ಜನ ಇದ್ದರು. ಎಲ್ಲರೂ ಅವರವರ ಕೆಲಸದಲ್ಲಿ ನಿರತರಾಗಿರುತ್ತಿದ್ದರು. ಮತ್ತೆ ಗಂಡನ ಮನೆಯಲ್ಲಿಯೂ ಸಾಕಷ್ಟು ಸ್ಥಿತಿವಂತರೇ ಆಗಿದ್ದರು. ಇವಳೂ ತನಗೆ ಗೊತ್ತಿದ್ದ ಕೆಲಸಗಳನ್ನು ನಾಜೂಕಿನಿಂದ ಮತ್ತು ಅಚ್ಚುಕಟ್ಟಾಗಿ ನಡೆಸಿಕೊಂಡು ಅತ್ತೆ ಮಾವನ ಪ್ರೀತಿಯ ಸೊಸೆಯಾಗಿದ್ದಳು. ಅವಳ ಮೈದುನಂದಿರಿಗೆ ಪ್ರೀತಿಯ ದೊಡ್ಡತ್ತಿಗೆಯಾಗಿದ್ದಳು. ನಾದಿನಿಯರಿಗೆ ಸಲುಗೆಯ ಗೆಳತಿಯಾಗಿ, ಮೈದುನಂದಿರ ಮಕ್ಕಳಿಗೆ ಅಕ್ಕರೆಯ ದೊಡ್ಡಾಯಿಯಾಗಿದ್ದಳು. ತನ್ನ ಮಕ್ಕಳು ಮತ್ತು ಮೈದುನಂದಿರ ಮಕ್ಕಳ ನಡುವೆ ಭೇದ ಮಾಡಲಿಲ್ಲ ಎಂದಿಗೂ. ಓರೆಗಿತ್ತಿಯರಿಗೂ ಕೂಡಾ ಅಕ್ಕ ಎಂದು ಕರೆಸಿಕೊಳ್ಳುತ್ತಿದ್ದ ಗೆಳತಿ ಆಕೆ.

ವರದಕ್ಕನ ಚಹಾ ಮನೆಯಲ್ಲಿ ಎಲ್ಲರಿಗೂ ಪ್ರೀತಿ. ಅವಳ ಅತ್ತೆ ಅವಳಿಂದ ಆ ರೀತಿ ಚಹಾ ಮಾಡುವುದನ್ನು ಕಲಿಯಲು ಸಾಕಷ್ಟು ಪ್ರಯತ್ನ ಪಟ್ಟು ಸೋತಿದ್ದರು. ಇದು ಅವಳ ಅತ್ತೆ ಸುಭದ್ರಮ್ಮನವರಿಗೆ ಒಂದು ಅತೀವ ಮೆಚ್ಚುಗೆಯ ವಿಚಾರವಾಗಿತ್ತು. ಎಲ್ಲರ ಬಳಿಯಲ್ಲಿಯೂ ಸೊಸೆಯನ್ನು ಮೆಚ್ಚಿ " ವರದಾ ಮಾಡ ಚಾನ್ನ ಯಾವ ಹೊಟೇಲಲ್ಲೂ ಮಾಡಲಾಗ್ತಿಲ್ಲೆ ಗೊತ್ತಿದ್ದೊ... ಅಷ್ಟು ಚೊಲೋ ಮಾಡ್ತು. ಇದು ಆನೊಬ್ಬವ್ನೇ ಹೇಳದಲ್ಲ ಮತ್ತೆ ಹಾಂ!! ಮನೆ ಅವ್ವು ಎಲ್ಲರೂ ಹಿಂಗೇ ಹೇಳಿಗಿದ್ದ." ಎಂದು ಎಲ್ಲರ ಎದುರಿನಲ್ಲಿಯೂ ಹೊಗಳಿದ್ದಳು.

ಕೆಲವು ಸಲ ಹೊಗಳಿಕೆಯ ವೈಖರಿ ಇನ್ನೂ ರಂಜಿತವಾಗುತ್ತಿತ್ತು. "ಮನ್ನೆ ಮೂಲೆಮನೆ ಮಾಬ್ಲೇಸ್ರ ಬಂದಿದ್ದ ಅವರ ಮನೆ ರಘುನ ಮದ್ವೆಗೆ ಕರೆಯಲೆ. ಇದು ಚಾ ಮಾಡಿ ಕೊಟ್ಟಿಗಿದ್ದು. ಅವ ಆಮೇಲೆ ಯನ್ನ ಕೈಲಿ ಕೇಳಿಗಿದ್ದ. ಅತೇ ಚಾ ಪುಡಿ ಎಲಿ ಸಿಗ್ತೇ? ಭಾರಿ ಚೊಲೋ ಆಜು. ಆನೂ ಮದ್ವೆಗೆ ಇದನ್ನೇ ತರ್ಸಕ್ಕು ಅಂತ ಈಗ ತೀರ್ಮಾನ ಮಾಡಿಗಿದ್ದಿ ಅಂದ. ಆನು ಹೇಳ್ದಿ ತಮ ಚಾ ಪುಡಿ ಎಂತಾ ಎಲ್ಲಾ ವಾಂದೇಯ ಹೇಳಿ. ಮಾಡವ್ವು ಗನಾಗಿ ಮಾಡವ್ವು. ನಮ್ಮನೆ ಸೊಸೆ ಕೈ ಹಾಂಗಿದ್ದ. ಚಾ ಮಾಡ ಕಲೆ ಒಲ್ದಿಗಿದ್ದು ತಮಾ ಅಂದಿ. ಆದ್ರೂ ಅವಂಗೆ ನಂಬಿಕೆ ಬಂಜಿಲ್ಲೆ."

ಇನ್ನೊಮ್ಮೆ ಸುಭದ್ರಕ್ಕನ ಬಾಯಿಯಲ್ಲಿ ಸೊಸೆಯ ಹೊಗಳಿಕೆಯ ಪ್ರಕಾರ ಬೇರೆಯದೇ ಇರುತ್ತಿತ್ತು. "ಮನ್ನೆ ಯಮ್ಮನೆ ಗಪ್ಪತಿ ಕಾಂಬಲೆ ಸಾಗರದಿಂದ ಅವನ ಹೆಂಡತಿ ಭಾವ ಬಂದಿಗಿದ್ದ. ಇದು ತಾ ಮಾಡಿದ ಚಾ ಕೊಟ್ಟಿಗಿದ್ದು. ಅಂವ ಕಾಪಿ ಕುಡ್ಯಂವ. ಸಾಗರ ಬದಿಯಂವ ಅಲ್ದೋ?! ಅಂವ ಚಾ ಕುಡ್ಕಂಡು ಅತ್ಗೇ, ಆನಿನ್ನು ಕಾಪಿ ಕುಡಿತ್ನಿಲ್ಯೇ. ಯಮ್ಮನೆ ರಾಜಿಗೊಂದು ಚಾ ಮಾಡದು ಕಲಸ್ಕೊಡೇ ಅಂತ ಹೇಳಿಗಿದ್ದ."

ಹೀಗೆ ವರದಕ್ಕನ ಚಹಾಕೆ ಅವಳ ಅತ್ತೆಯೇ ಪಿ ಆರ್ ಓ ಆಗಿ ಅವಳ ಚಹಾ ಬಹಳ ಪ್ರಸಿದ್ಧವಾಯಿತು. ಆದರೆ ಈ ಚಹಾ ಪ್ರಸಿದ್ಧವಾದದ್ದಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲ. ವರದಕ್ಕನ ಐಡೆಂಟಿಟಿ ಆಗಿಬಿಟ್ಟಿತು. ಸಮಸ್ಯೆ ಶುರುವಾಗಿದ್ದೇ ಇಲ್ಲಿಂದ.

ಅಪರೂಪಕ್ಕೆ ಸಾಗರದ ಕಡೆಯ ನೆಂಟರ ಮನೆಗೆ ಹೋದಾಗ ಅಲ್ಲಿ ಚಹಾ ಸಿಗುವುದು ವಿರಳವಾಗಿತ್ತು. ಮತ್ತೆ ಅಲ್ಲಿನ ಫಿಲ್ಟರ್ ಕಾಪಿಯನ್ನು ಸವಿಯುವ ಆಸೆ ವರದಕ್ಕನಿಗಿದ್ದರೂ ಆಸೆ ಈಡೇರಿಸಿಕೊಳ್ಳುವಂತಿಲ್ಲ. ಕಾರಣ ವರದಕ್ಕ ತಾನು ಚಹಾ ಮಾಡುವುದಷ್ಟೇ ಸರಿ ಕುಡಿಯುವುದಿಲ ಎನ್ನುವ ಮಾತು ಬಂದರೆ ಎನ್ನುವ ಒಂದು ಆತಂಕ ಅವಳಲ್ಲಿತ್ತು. ಇದು ಅವಳಿಗೆ ತುಸು ಕಸಿವಿಸಿ ಮುಜುಗರಗಳನ್ನುಂಟುಮಾಡುತ್ತಿತ್ತು. ಆದರೆ ವರದಕ್ಕ ಇದನ್ನು ಸಲೀಸಾಗಿ ನಿರ್ವಹಿಸಿದ್ದಳು. ತನಗೆ ಕಾಪಿ ಕುಡಿಯದಂತೆ ಡಾಕ್ಟರ ಸಲಹೆ ಇದೆ ಎಂದು ಎಲ್ಲರನ್ನೂ ನಂಬಿಸಿದ್ದಳು. ಆದರೆ, ಅವಳ ಒಳಗೆ ಒಂದು ಆಸೆಯೂ ಅಂಕುರಿಸಿತ್ತು. "ತಾನು ಚನಾಗಿ ಕಾಪಿನೂ ಮಾಡವ್ಳು ಹೇಳಿ ಹೆಸ್ರು ಮಾಡವು." ಎನ್ನುವುದೇ ಆ ಆಸೆ. ಆದರೆ ಆ ಆಸೆಯ ಈಡೇರಿಕೆಗೆ ತನಗೆ ಸದ್ಯಕ್ಕಿದ್ದ "ಚಾ ಎಕ್ಸ್ ಪರ್ಟ್" ಎನ್ನುವ ಬಿರುದು ಕಳೆದುಕೊಳ್ಳುವುದು ಅಥವಾ ಅದಕ್ಕೆ ಧಕ್ಕೆ ತಂದುಕೊಳ್ಳುವುದು ಇಷ್ಟವಿರಲಿಲ್ಲ.

ಹೀಗೆ ಸಾಗುತ್ತಿದ್ದ ಕಾಲದ ಜೊತೆಗೆ ವರದಕ್ಕನ ಚಹಾದ ಪ್ರಸಿದ್ಧಿ ಮತ್ತು ಅದರೊಮ್ದಿಗೆ ವರದಕ್ಕನ ಪ್ರಸಿದ್ಧಿಯೂ ಬಹಳ ಮುಂದೆ ಸಾಗಿತ್ತು. ವರದಕ್ಕನ ಮಗ ವಿನಯ ಬೆಳೆದು ದೊಡ್ದವನಾಗುತ್ತಿದ್ದ. ವರದಕ್ಕನಿಗೆ ತಲೆಬಿಸಿ ಹತ್ತಿದ್ದು ಈಗ. ತನ್ನ ಗುರುತು ಹೆಗ್ಗುರುತು ಎರಡೂ ಆಗಿರುವ ಚಹಾವನ್ನು ತನ್ನ ಮಗನೇ ವರ್ಜಿಸಿ ಬಿಟ್ಟರೆ?! ತನ್ನ ಮೇಲೆ ತನ್ನ ಮಗನಿಂದಲೇ ಕಳಂಕ ಬರಬಹುದಾದ ಸಾದ್ಗ್ಯತೆಯನ್ನು ಊಹಿಸಿದಳು ವರದಕ್ಕ. ಇದಕ್ಕೆ ಅವಳ ತಲೆಯಲ್ಲಿ ಒಮ್ದು ಅದ್ಭುತ ಉಪಾಯ ಹೊಳೆಯಿತು. ಮಗನ ಬಳಿ ಹೇಳಿದಳು. " ನೀ ಶಣ್ಣಕಿದ್ದಾಗ ವಾಂದ್ ಸಲ ಸಾಗರದ ರಾಜಿ ಚಿಕ್ಕಿ ಮನೆಗೆ ಕರ್ಕ ಹೋಗಿಗಿದ್ದಿ. ನಿಂಗೆ ಅದು ಕಾಪಿ ಮಾಡಿ ಕೊಟ್ಟಿಗಿತ್ತು. ನಿಂಗೆ ವಾಂತಿ ಬೇಧಿ ಎರ್ಡೂ ಶುರುವಾಗಿತ್ತು. ವಾಂದ್ ದಿನ ಇದ್ಕ ಬಪ್ಪಲೆ ಅಂತ ಹೋದವ ನಿನ್ನ ಸಾಗರದಲ್ಲಿ ಆಸ್ಪತ್ರೇಲಿ ಬಿಟ್ಕಂಡು ಮೂರು ದಿನ ಬಿಟ್ಟು ಬಂದಿಗಿದ್ದಿ ಮನಿಗೆ. ನಿಂಗೆ ಕಾಪಿ ಕುಡದ್ರೆ ಆಗ್ತಿಲ್ಲೆ ಅಂದಿಗಿದ್ರು ಡಾಕ್ಟರು." ಎಂದು ಅವನಿಗೆ ಚನ್ನಾಗಿ ಬೈರಿಗೆ ಬಿಟ್ಟಿದ್ದಳು, ಸಮಯ ಸಿಕ್ಕಾಗಲೆಲ್ಲಾ. ಇದು ವಿನಯನಲ್ಲಿ ಕಾಪಿಯ ಕುರಿತು ಒಂದು ರೀತಿಯ ಅವ್ಯಕ್ತ ಮತ್ತು ಅಸಹಜ ಆತಂಕ ಮಿಶ್ರಿತ ಕುತೂಹಲವನ್ನು ಸೃಜಿಸಿತ್ತು. ಬೆಳೆದು ದೊಡ್ದವನಾದ ವಿನಯ ಸಿ ಇ ಟಿ ಬರೆದು ಒಳ್ಳೆಯ ರ್‍ಯಾಂಕ್ ಪಡೆದು ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಗಿಟ್ಟಿಸಿದ.

ವರದಕ್ಕನ ಚಿಂತೆ ಅದೇ ಇದ್ದರೂ ಚಿಂತೆಯ ಸ್ವರೂಪ ಬದಲಾಗಿತ್ತು.ತನ್ನ ಮಗ ಯಾವುದೇ ಕಾರಣಕ್ಕೆ ಕಾಪಿ ಕುಡಿಯಬಾರದು ಎನ್ನುವ ಮಹದಾಸೆ ಹೊತ್ತಿದ್ದ ವರದಕ್ಕ ಹಾಸ್ಟೆಲ್ಲಿನಲ್ಲಿ ಕಾಪಿ ಕುಡಿದುಬಿಟ್ತರೆ ಎನ್ನುವ ಆತಂಕದಲ್ಲಿ ಮಗನನ್ನು ತನ್ನ ಅಣ್ಣನ ಮಗನ ರೂಮಿನಲ್ಲಿಯೇ ಇರಲು ವ್ಯವಸ್ಥೆ ಮಾಡಿಸಿದಳು. ಇಂಜಿನ್ಯರಿಂಗ್ ಕಾಲೇಜಿನ ರ್‍ಯಾಗಿಂಗ್ ಎನ್ನುವ ಭೂತದ ಮಹಾತ್ಮೆ ಗೊತ್ತಿದ್ದ ಆತನೂ ಸಂತೋಷದಿಂದಲೇ ವಿನಯನೊಂದಿಗೆ ಇರಲು ಒಪ್ಪಿದ್ದ. " ಮನೆ ಬಿಟ್ಟಿಕ್ಕೆ ಹೋದ ಮಗ ಅಲ್ಲೆನಾರು ಚಾ ಬಿಟ್ಟು ಕಾಪಿ ಕಲ್ತ್ರೆ?" ಎನ್ನುವ ರೂಪಕ್ಕೆ ಬದಲಾಗಿತ್ತು. ವರದಕ್ಕ ತಡ ಬಡ ಮಾಡಲೇ ಇಲ್ಲ. " ತಮಾ ಕಾಪಿ ಕುಡದ್ರೆ ಬುದ್ಧಿ ಬೆಳೀತಿಲ್ಯಡ. ಮತ್ತೆ ಶಿಟ್ಟೂ ಜಾಸ್ತಿ ಆಗ್ತಡ. ರಾಜಿ ಚಿಕ್ಕಿ ಮಗ ಶಂಕ್ರನ್ನೇ ನೋಡು. ಒಳ್ಳೆ ರೌಡಿಗಳ ನಮ್ನಿ ಶಿಟ್ಟು ಮಾಡ್ತ ಹೌದಾ?! ಮತ್ತೆ ನೀ ಅವನ್ನ ನೋಡಿಗಿದ್ಯ? ಇನ್ನೂ ಹತ್ತನೆತ್ತಿಲಿದ್ದ. ಈಗಲೇ ಗಡ್ಡ ಮೀಸೆ ಹೆಂಗೆ ಬೈಂದು ಅವಂಗೆ. ಕಾಪಿ ಎಷ್ಟ್ ಕುಡಿತಾ ಗೊತಿದ್ದೋ? ಕಾಪಿ ಕುಡದ್ರೆ ಸುಸ್ತ್ ಜಾಸ್ತಿ ಆಗ್ತಡ. ವಯಸ್ಸೂ ಬೇಹ ಆಗ್ಬುಡ್ತಡ. ಸ್ವಕಾಗಿ ಎಂತಕ್ಕೆ ಸಮಸ್ಯೆ ಮೈ ಮೇಲೆ ಎಳ್ಕಂಬದು ಅಲ್ದೋ? ಅಪ್ಪಿ ತಪ್ಪಿ ಕಾಪಿ ಕುಡ್ದಿಕ್ಕಡ ಮತ್ತೆ. ತೆಳತ್ತ?" ಎಂದು ಮತ್ತೊಂದಿಷ್ಟು ಭಯದ ಬೀಜ ಬಿತ್ತಿದ್ದಳು.


ಇದೇ ಭಯದ ಬೀಜವನ್ನು ತಲೆಯಲ್ಲಿ ಹೊತ್ತು ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿಗೆ ಹೊರಟಿದ್ದ ವಿನಯ. ಆದರೆ ವರದಕ್ಕನ ತಲೆಯಲ್ಲಿ ಕಾಪಿ ಬಲವಾಗಿ ಬೇರು ಬಿಟ್ಟಿತ್ತು.

(ಮುಂದುವರೆಯುವುದು)

#ವರದಕ್ಕನ_ವರಾತಗಳು

#ಚಹಾ_ವರದಕ್ಕನ_ಕಾಫಿ_ಪ್ರಕರಣ_1

1 comment:

  1. As always... Keeps the readers curiosity till the end. Good one!

    ReplyDelete