Tuesday, May 25, 2021

ವಾಲಿಪ್ರಕರಣ ಅಧ್ಯಾಯ_3_ರುಮೆಯ_ಉಮ್ಮಳಿಕೆ



[ಈತನಕ: ಸುಗ್ರೀವ ರುಮೆಯರಿಗೆ ಕ್ಷಮಾದಾನ ಕೇಳಲು ತಾರೆ ಮುಂದಾಗಿದ್ದಾಳೆ. ತನ್ನ ಯಾವ ಕಾರ್ಯಕ್ಕೂ ಪಶ್ಚಾತ್ತಾಪವಿಲ್ಲದ ವಾಲಿ ಸುಗ್ರೀವ ತಾನಾಗಿ ಬಂದು ತನ್ನಲ್ಲಿ ಕ್ಷಮೆಯಾಚಿಸುವಂತೆ ಮಾಡುತ್ತೇನೆಂಬ ಭಾವದಲ್ಲಿ ವಾಲಿ ಇದ್ದಾನೆ]

ಕಿಷ್ಕಿಂಧೆಯ ಅರಮನೆಯಲ್ಲಿ ಈ ರಾತ್ರಿ ಕಾಲದಲ್ಲಿ ನನ್ನದೇ ಮನೆಯಲ್ಲಿ ಸೆರೆಯಾಳಿನಂತಾಗಿ ಬದುಕುತ್ತಿದ್ದೇನೆ ನಾನು ರುಮೆ. ನನ್ನ ಪಾಲಿಗೆ ಹಗಲು ರಾತ್ರಿಗಳೆನ್ನುವ ಬೇಧ ಸೂರ್ಯಸುತ ಇಲ್ಲಿಂದ ಹೋದಾಗಲೇ ಇಲ್ಲವಾಯಿತು. ಅಂದಿನಿಂದ ಇಂದಿನವರೆಗೂ ನನ್ನ ಬಾಳಿನಲ್ಲಿ ಬರೀ ಕತ್ತಲು. ನನ್ನ ಬಗ್ಗೆ ಹೆಚ್ಚೇನೂ ಹೇಳುವುದಕ್ಕಿಲ್ಲ. ನಾನು ಹೆಚ್ಚಿನವಳೂ ಅಲ್ಲ. ಆದರೆ ಹಚ್ಚಿಕೊಂಡವಳು. ನನ್ನ ಗಂಡ ಸುಗ್ರೀವನಿಗೆ ಮೆಚ್ಚಿನವಳು. ನನ್ನಪ್ಪ ದಧಿಮುಖನಿಗೆ ನೆಚ್ಚಿನವಳು. ಎಲ್ಲರೂ ಹುಟ್ಟುವಂತೆಯೇ ನನ್ನ ಹುಟ್ಟು ಕೂಡಾ. ದಧಿಮುಖನಿಗೆ ಮಗಳಾಗಿ ಹುಟ್ಟಿದೆ, ಬೆಳೆದೆ. ನನ್ನ ಮನೆಗೆ ಆಗಾಗ ಬರುತ್ತಿದ್ದ ನನ್ನ ಅತ್ತೆಯ ಮಕ್ಕಳು ವಾಲಿ-ಸುಗ್ರೀವ-ಅಂಜನೆಯರೊಡನೆ ಆಡುತ್ತಾ ಆಡುತ್ತಾ ಬೆಳೆದೆ. ಎಲ್ಲಾದರೊಮ್ಮೆ ವಿನೋದಕ್ಕೆ ನನ್ನ ದೊಡ್ದ ಭಾವ ವಾಲಿ ಆಡುತ್ತಿದ್ದ ಮಾತು "ನೀನು ನನ್ನನ್ನು ಭಾವ ಎಂದು ಕರೆಯುವುದು ಸದಾ ಇದ್ದಿದ್ದೇ. ಸುಗ್ರೀವನಿಗೆ ಸ್ವಾಮಿ ಎಂದು ಕರೆಯುವುದನ್ನು ಅಭ್ಯಾಸ ಮಾಡಿಕೋ." ನಾಚುತ್ತಿದ್ದೆ ನಾನು. ಸುಗ್ರೀವನದು ಎಂದಿನಂತೆ ಪ್ರಸನ್ನತೆಯ ಮುಗುಳ್ನಗು. ಪ್ರಾಯಸಮರ್ಥಳಾದೆ. ಆದರೂ ಭಾವನವರ ವಿನೋದ ನಿಲ್ಲಲಿಲ್ಲ. ಭಾವನೆಂಬ ಸಲುಗೆಯಲ್ಲಿ ನಾನು ಒಮ್ಮೆ ಕೇಳಿಬಿಟ್ಟಿದ್ದೆ. "ನೀವು ಹೀಗೆನ್ನುತ್ತೀರಿ. ಸುಗ್ರೀವ ಒಪ್ಪಬೇಕಲ್ಲ" ಎಂದು. ಭಾವ ತನ್ನ ಭಾವನೆಯನ್ನು ಬದಲಾಯಿಸಿ ಹೇಳಿದ್ದರು. "ಒಪ್ಪಬೇಕು ಅಷ್ಟೇ. ಅಲ್ಲ ಎನ್ನುವ ಮಾತಿಲ್ಲ. ಅವನ ಅಣ್ಣ ನಾನು. ಆತನ ಸಂತೋಷ ಏನು ಎಲ್ಲಿ ಎನ್ನುವುದನ್ನು ಚೆನ್ನಾಗಿ ಬಲ್ಲೆ. ನೀನೊಪ್ಪದಿದ್ದರೆ ಮತ್ತೆ ಚೆನ್ನಾಗಿರಲಿಕ್ಕಿಲ್ಲ" ಎಂದು. ನನ್ನಲ್ಲಿ ಒಂದು ಭಯಮಿಶ್ರಿತ ಸಂತೋಷ ಮನೆಮಾಡಿತ್ತು. ನನಗೆ ನೆನಪಿದ್ದಂತೆ ಭಾವನವರಾಗಲೀ ಸ್ವಾಮಿಯಾಗಲೀ ಒಬ್ಬರೇ ಮಧುವನಕ್ಕೆ ಬಂದಿದ್ದು ನೆನಪಿಲ್ಲ. ಕಾಯದ ಜೊತೆಯ ನೆರಳಂತೆ ಇಬ್ಬರೂ ಒಟ್ಟಾಗಿಯೇ ಬಂದಿದ್ದು. 

ಪ್ರಾಯ ಸಮರ್ಥೆಯಾದ ನನ್ನನ್ನು ಕಿಷ್ಕಿಂಧೆಯ ಯಾವ ವಾನರನೂ ಕೆಟ್ಟ ದೃಷ್ಟಿಯಿಂದ ನೋಡಿದ್ದು ನೆನಪಿಲ್ಲ. ಅಥವಾ ಸಾಮಾನ್ಯ ವಾನರಿಯಂತೆ ನೋಡಿದ್ದೂ ಇಲ್ಲ. ಕಿಷ್ಕಿಂಧೆಯ ಯುವರಾಣಿ ನಾನು ಎಂಬಂತೆಯೇ ನೋಡಿದ್ದು. ಆದರೆ ನಡೆಯಿತು ಒಂದು ಕಹಿ ಘಟನೆ. ಗೋಲಭನೆನ್ನುವ ಗಂಧರ್ವ ನನ್ನನ್ನು ಹೊತ್ತು ಆಕಾಶಮಾರ್ಗವಾಗಿ ಹೊರಟಿದ್ದ. ಸ್ವಲ್ಪ ಹೊತ್ತಿನಲ್ಲಿಯೇ ಬಂದ ಭಾವನವರು ಆತನ ಮುಖಕ್ಕೆ ಗುದ್ದಿದ್ದರು. ಆತ ಕೆಳಗೆ ಬಿದ್ದಿದ್ದ. ನನ್ನನ್ನು ಹೊತ್ತು ತಂದರು. ಸುಗ್ರೀವನೊಡನೆ ಮದುವೆ ಮಾಡಿಸಿಯೇ ಬಿಟ್ಟಿದ್ದರು. ಅವರ ಮುಖದಲ್ಲಿನ ಸಿಟ್ಟು ಹೋಗಿರಲಿಲ್ಲ, ಮದುವೆಯ ಕಾರ್ಯಕ್ರಮವೆಲ್ಲ ಮುಗಿದ ಮೇಲೆ ಅಪ್ಪನಿಗೆ ಒಂದು ಸಾರಿ ಏರು ದನಿಯಲ್ಲಿ ಹೇಳಿದ್ದರು "ರುಮೆಯನ್ನು ಸುಗ್ರೀವನಿಗೆಂದು ನಿಶ್ಚಯಿಸಿ ಆಗಿತ್ತು. ಅವಳು ನಿನ್ನಲ್ಲಿ ಇದ್ದಿದ್ದು ನ್ಯಾಸಪೂರ್ವಕವಾಗಿ. ಪರಧನವನ್ನು ಹೀಗೆಯೇ ನೋಡಿಕೊಳ್ಳುವುದು? ಬಂದು ನನ್ನಲ್ಲಿಯೇ ತಿಳಿಸುವಷ್ಟಾದರೂ ವಿವೇಕ ಬಂತಲ್ಲ ನಿನಗೆ." ಅಬ್ಬಾ!! ಭಾವನ ಸಿಟ್ಟೇ.

ಇದೇ ಭಾವನ ಸಿಟ್ಟಿನ ಸ್ವಭಾವ ಹೆಪ್ಪುಗಟ್ಟಿ ಸೇಡಿನ ಬೆಟ್ಟವಾಗಿ ನನಗೆ ಕೆಟ್ಟ ಕಾಲ ಬಂತಲ್ಲ. ಎಲ್ಲಿ ತಪ್ಪಿದೆ ನಾನು ಎನ್ನುವುದೇ ತಿಳಿಯುತ್ತಿಲ್ಲ. ಅಕ್ಕ ತಾರೆ ನನ್ನವರನ್ನು ಸೇರಿದಾಗ ನಾನು ವಿರೋಧಿಸಲಿಲ್ಲ ನಿಜ. ಅದಕ್ಕೆ ಕಾರಣವೂ ಇದೆ. ಒಂದು ಕಡೆ ಕಿಷ್ಕಿಂಧೆಯ ಭವಿಷ್ಯದ ಕುಡಿ ಅಂಗದ. ಆತನ ಭವಿತವ್ಯ ಮುಖ್ಯ. ಕಿಷ್ಕಿಂಧೆಯ ಅಸಂಖ್ಯ ವಾನರರ ಭದ್ರತೆ ಮುಖ್ಯ. ಈ ಸಾಮ್ರಾಜ್ಯಕ್ಕೆ ಭವಿತವ್ಯದ ರಾಜನಾಗಬೇಕಾದ ಅಂಗದನ ಹಿತದೃಷ್ಟಿಯಿಂದ ಅಕ್ಕ ನನ್ನವರನ್ನು ಸೇರಿದ್ದು ಎನ್ನುವುದನ್ನು ನಾನು ಅರಿಯದವಳಲ್ಲ. ಧರ್ಮಶಾಸ್ತ್ರ ತಾರೆಯ ಕಾರ್ಯಕ್ಕೆ ಸಮ್ಮತಿ ಸೂಚಿಸಿದೆಯೇ ಹೊರತು ನಿಷೇಧವನ್ನು ಹೇರಲಿಲ್ಲ, ಧರ್ಮದ ಪ್ರಕಾರ ಸರಿ ಇರುವುದನ್ನು ನಾನೇಕೆ ವಿರೋಧಿಸಲಿ? ಭಾವನವರು ತಮ್ಮ ಬಲಪ್ರದರ್ಶನದ ಹಪಹಪಿಕೆಯಿಂದ ಅನೇಕರಲ್ಲಿ ವೈರವನ್ನು ಕಟ್ಟಿಕೊಂಡಿದ್ದರು. ಅನೇಕರಲ್ಲಿ ಸ್ನೇಹವನ್ನೂ ಸಂಪಾದಿಸಿದ್ದರು ನಿಜ. ಆದರೆ ಎರಡೂ ಬಣದಲ್ಲಿದ್ದವರು ದುಷ್ಟರೇ. ಅಂತರಂಗದಲ್ಲಿ ನನ್ನ ಸ್ವಾಮಿ ಇದರ ಕುರಿತು ಅದೆಷ್ಟೋ ಬಾರಿ ಆತಂಕ ವ್ಯಕ್ತ ಪಡಿಸಿದ್ದರೂ, ಅಣ್ಣನ ಬಲದ ಮೇಲಿನ ವಿಶ್ವಾಸದಿಂದ ಸಮಾಧಾನ ಪಡುತ್ತಿದ್ದರು ಇದರಿಂದಲೇ ಈ ವಿಷಯ ತನಗೆ ತಿಳಿದಿದ್ದು. ಅಂಗದ ಅನಾಥ, ತಾರೆ ಮೊದಲೇ ಸುಂದರಿ ಈಗ ಆಶ್ರಯ ಹೀನೆ ಅಂತ ಗೊತ್ತಾದರೆ ಇಲ್ಲವಾದ ವಾಲಿಯ ಮೇಲಿನ ದುಷ್ಟರ ಸಿಟ್ಟು ಇವರ ಕಡೆ ತಿರುಗದಿದ್ದೀತೇ? ಖಂಡಿತ ಇಲ್ಲ. ನನ್ನ ಪರಿವಾರದ, ವಾನರರ ಭವಿತವ್ಯದ ದೃಷ್ಟಿಯಿಂದಲೇ ನಾನು ಅದನ್ನು ಒಪ್ಪಿದ್ದು. ಒಂದು ಹೆಣ್ಣಾಗಿ ನನಗಿಷ್ಟು ಅರ್ಥವಾಗದೇ ಇದ್ದೀತೇ?

ಇಲ್ಲ. ತಾರೆ ಸುಗ್ರೀವರ ವಿಷಯದಲ್ಲಿ ನಾನು ಮಾಡಿದ್ದು ಯಾವುದೇ ರೀತಿಯಿಂದಲೂ ತಪ್ಪಲ್ಲ. ಹಾಗಾದರೆ ಎಲ್ಲಿ ತಪ್ಪಿದೆ ನಾನು? ಮಾಯಾವಿಯೊಡನೆ ಕಾದಾಟಕ್ಕೆ ಭಾವನ ಬೆನ್ನ ಹಿಂದೆಯೇ ಹೊರಟರಲ್ಲ ನನ್ನವರು ಆಗ ತಡೆಯದೇ ತಪ್ಪಿದ್ದ್ದೇನೆಯೇ? ಇಲ್ಲ. ಅಂದು ಅವರಿಬ್ಬರ ಸಹಜ ಗುಣದಂತೆ ವ್ಯವಹರಿಸಿದ್ದರು ಅವರು. ಹಾಗಾಗಿ ಅಲ್ಲಿಯೂ ನಾನು ತಪ್ಪಲಿಲ್ಲ. ಹಾಗಾದರೆ ತಪ್ಪಿಲ್ಲದ ತನಗೇಕೆ ಈ ಶಿಕ್ಷೆ? ಅಂದೊಮ್ಮೆ ರಕ್ಷೆಯನ್ನು ಕೊಟ್ಟ, ರಕ್ಷೆ ಶಾಶ್ವತವಾಗಿರಲಿ ಎಂದು ಮದುವೆ ಮಾಡಿಸಿದ ವಾಲಿಯೇ ತನ್ನನ್ನು ಈ ಪರಿ ದೈಹಿಕವಾಗಿ ಹಿಂಸಿಸುವುದೇಕೆ? ಅವರ ಸಿಟ್ಟಿರುವುದಾದರೂ ಯಾರ ಮೇಲೆ? ಅಕ್ಕ ತಾರೆಯನ್ನು ಎಂದಿಗೂ ಪ್ರಶ್ನಿಸಿದ್ದನ್ನು ನಾನು ನೋಡಲಿಲ್ಲ, ಆದರೆ ನನ್ನನ್ನು ನನ್ನವರು ಋಷ್ಯಮೂಕದಿಂದಲೂ ಕಾಣುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಬಲಾತ್ಕರಿಸುವುದಾದರೂ ಏಕೆ? ಋಷ್ಯಮೂಕದಲ್ಲಿರುವ ನನ್ನವರು ಇದನ್ನೆಲ್ಲ ನೋಡಿ ಇಲ್ಲಿ ಬರಲಿ ಎಂದೇ? ಅದರ ಬದಲು ವಾಲಿಯೇ ಋಷ್ಯಮೂಕಕ್ಕೆ ಹೋಗ ಬಹುದಲ್ಲ. ಓಹ್!! ಅದು ಅಸಾಧ್ಯ. ಅವರಿಗೆ ಶಾಪವಿದೆ. ಅಂದರೆ ತಮ್ಮ ಸಿಟ್ಟನ್ನು ತೀರಿಸಿಕೊಳ್ಳಲಾಗದ ದೌರ್ಬಲ್ಯಕ್ಕೆ ತಾನು ಎರವೇ? ಅಲ್ಲದೇ ಮತ್ತೇನು?

ಹಾಗಾದರೆ ನಾನೆಲ್ಲಿ ತಪ್ಪಿದೆ? ವಾಲಿ ಹತನಾದ ಎಂದು ಸುಗ್ರೀವ ಹೇಳಿದೊಡನೆ "ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು" ಎನ್ನುವ ಮಾತಿನಂತೆ ನಡೆಯದೇ ಇದ್ದಿದ್ದೇ ನನ್ನ ತಪ್ಪೇ. ಒಂದು ದೃಷ್ಟಿಯಿಂದ ನಿಜ. ಆದರೆ ವಾಲಿಯ ಎಷ್ಟೋ ಹೆಂಡತಿಯರು ಅನೇಕ ಬಾರಿ ಮಾತನಾಡಿದ್ದನ್ನು ನಾನೇ ಕೇಳಿದವಳು. "ನಮ್ಮವರ ವಿಪರೀತ ಬುದ್ಧಿಯಿಂದ ಮಾಂಗಲ್ಯದ ಉಳಿವಿನ ಬಗೆಗೆ ನಮಗೇ ಭಯವಾಗುತ್ತದೆ ಎಂದು." ಅದೆಷ್ಟೊ ಬಾರಿ ಅವರಿವರು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡಿದ್ದನ್ನು ಕೇಳಿದ್ದೇನೆ. "ವಾಲಿಯ ವಿಪರೀತ ಬುದ್ಧಿಯನ್ನು ನೋಡಿದರೆ ಭಯವೇ ಆಗಿದೆ. ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತಾದೀತೇ?" ಎಂದು. ಕಿಷ್ಕಿಂಧೆಯ ಎಲ್ಲರಲ್ಲಿ ಸುಪ್ತವಾಗಿ ವಾಲಿಯ ಬಗ್ಗೆ ಇದ್ದ ಭಾವನೆ ಅದು. ವಾಲಿಯ ಅಂತ್ಯಕಾಲ ಸಮೀಪಿಸಿದೆ ಎಂದು. ಹಾಗಾಗಿಯೇ ವಾಲಿ ಸತ್ತಿದ್ದಾನೆ ಎಂದ ಕೂಡಲೇ ಎಲ್ಲರೂ ಅದನ್ನು ಪರಾಮರ್ಷಿಸದೇ ಒಪ್ಪಿದ್ದು. ಸಮಷ್ಟಿಯ ಭಾವದಲ್ಲಿದ್ದ ನನ್ನ ತಪ್ಪೇನೂ ಇಲ್ಲವಲ್ಲ.

ಆದರೆ, ನನ್ನನ್ನು ಬಲಾತ್ಕರಿಸುವಾಗ ವಾಲಿಯಾಡುವ ಮಾತುಗಳನ್ನು ಕೇಳಿದರೆ ಇವೆಲ್ಲದರಲ್ಲಿಯೂ ನನ್ನ ತಪ್ಪಿದೆ. ಬಲಾತ್ಕಾರವನ್ನು ತಾಳಲಾರದೆ ಉಮ್ಮಳಿಸಿದರೆ, " ದುಃಖಿಸು ನೀಚ ಹೆಣ್ಣೆ. ಅಳು ಜಾರಿಣಿ. ನಿನ್ನ ಉಮ್ಮಳಿಕೆಗಳು ವಾಲಿಯ ಪಾಲಿನ ಮಂಗಳವಾದ್ಯದಂತೆ. ಸುಖಿಸಿದೆಯಲ್ಲ ಅಂದು ನಿನ್ನ ನೀಚ ಹೇಡಿ ದುರ್ಬಲ ಗಂಡನೊಡನೆ ಸಿಂಹಾಸನದ ಮೇಲೆ ಕುಳಿತು. ಆತ ತಾರೆಯನ್ನು ಭೋಗಿಸಿದಾಗ ತಾರೆಗಾದ ಹೇಸಿಗೆ ನಿನಗೂ ಆಗಬೇಕು. ಆ ನೋವನ್ನು ನೀನೇ ಉಣ್ಣಬೇಕು. ನಿನ್ನ ಸ್ವೇಚ್ಛಾಚಾರದ ಸ್ವೇಚ್ಛಾ ಪ್ರಾರಬ್ಧ ಇದು. ಅನುಭವಿಸು"
ಸಾಲದ್ದಕ್ಕೆ ಎಲ್ಲಾದರೊಮ್ಮೆ ನನ್ನಪ್ಪನನ್ನು ಕರೆದು ಅವಮಾನಿಸುವುದೂ ಇದೆ. 

ಈ ಎಲ್ಲ ದುಃಖವನ್ನು ಸಂತೈಸುವರು ಯಾರೂ ಇಲ್ಲವೆಂದಲ್ಲ. ಅಕ್ಕ ತಾರೆ ಸಂತೈಸುತ್ತಾಳೆ ನಿಜ. ಆದರೆ ಅದೂ ಭಯದಲ್ಲಿಯೇ, ಅದು ಸಾಂತ್ವನ ಎನ್ನುವುದಕ್ಕಿಂತ ನಮ್ಮಿಬ್ಬರ ನಡುವಿನ ಸಮಾನ ದುಃಖ ಎಂದರೆ ತಪ್ಪಲ್ಲ. ಅಕ್ಕನಲ್ಲಿರುವುದು ಅನುಕಂಪ ಮಾತ್ರ. ಅವಳ ಮಿತಿಯಲ್ಲಿ ಇಷ್ಟಲ್ಲದೇ ಇನ್ನೇನು ಸಾಧ್ಯ?

ಹೇಳಲಿಕ್ಕೆ ಧರ್ಮಾಧಿಪತಿ ಯಮ ಮತ್ತು ಕರ್ಮಾಧಿಪತಿ ಶನಿ ನನ್ನವರ ಅಣ್ಣಂದಿರು. ಆದರೆ ಅವರ ಕುರಿತಾಗಿ ಅವರೂ ಏನೂ ಮಾಡುತ್ತಿಲ್ಲ. ಅವರಿಗೂ ವಾಲಿಯ ಭಯ. ಸೂರ್ಯದೇವ ಇವರ ನೋವು ನೋಡಲಾರದೆ ಋಷ್ಯಮೂಕದಲ್ಲಿ ಬಿಟ್ಟ. ಆದ್ರೆ ತನ್ನೊದನೆ ಕರೆದೊಯ್ಯಲಿಲ್ಲ. ದೇವ ವೈದ್ಯರಾದ ಅಶ್ವಿನೀ ದೇವತೆಗಳೂ ನನ್ನ ಭಾವಂದಿರು. ಆದರೆ ನನಗಿರುವ ನೋವಿಗೆ ಅವರಲ್ಲಿ ಮದ್ದಿಲ್ಲವಲ್ಲ. ನಾನು ಹತಾಶಳಾಗುವುದಿಲ್ಲ, ನನ್ನವರ ಒಳ್ಳೆಯತನ ಅವರ ಕೈಬಿಡದು. ಅವರೇನೂ ದುರ್ಬಲರಲ್ಲ. ಹೇಡಿಯಲ್ಲ. ಅಣ್ಣನೊಡನೆ ಕಾದಾಡುವಾಗ ಅವರಿಗೆ ಭ್ರಾತೃಪ್ರೇಮ ಅಡ್ಡ ಬರುತ್ತಿದೆ. ಆದರೆ, ನಾನು ನಾಳಿನ ಒಳ್ಳೆಯದರ ನಿರೀಕ್ಷೆ ಅಪೇಕ್ಷೆ ಕಳೆದುಕೊಳ್ಳುವುದಿಲ್ಲ. ಭಗವಂತ ಏನಾದರೂ ದಾರಿ ತೋರಿಯಾನು. ನನ್ನ ಈ ಸಂಕಷ್ಟಕ್ಕೆ ಒಂದು ಮುಕ್ತಿಯನ್ನು ಇಂದಲ್ಲ ನಾಳೆ ಕೊಟ್ಟಾನು.  ನನ್ನವರು ಮತ್ತಿಲ್ಲಿ ಬಂದಾರು. ನಾವಿಬ್ಬರೂ ಒಂದಾಗಿ ಬಾಳುವಂತಾದೀತು.

No comments:

Post a Comment