Thursday, May 27, 2021

ವಾಲಿಪ್ರಕರಣ ಅಧ್ಯಾಯ-4 ಸುಗ್ರೀವಸ್ವಗತ

(ಈತನಕ:ವಾಲಿಯನ್ನು ಒಪ್ಪಿಸಿ ಸುಗ್ರೀವ ರುಮೆಯರಿಗೆ ಕ್ಷಮಾದಾನ ಕೊಡಿಸಬೇಕು ಎಂದುಕೊಂಡಿರುವ ತಾರೆ, ಸುಗ್ರೀವ ಬಂದು ಕಾಲು ಹಿಡಿದರೆ ಕ್ಷಮಿಸಬೇಕು ಇಲ್ಲವಾದರೆ ಶಿಕ್ಷಿಸುತ್ತಲೇ ಇರಬೇಕು ಎನ್ನುವ ಮನಃಸ್ಥಿಯ ವಾಲಿ. ಇತ್ತ ನಡೆದ ಘಟನೆಗಳಿಂದ,, ವಾಲಿಯ ಹಿಂಸೆಯಿಂದ ಜರ್ಝರಿತಳಾಗಿ ದುಃಖಿಸುತ್ತಿರುವ ರುಮೆ)

ರಾತ್ರಿಯ ಕಾಲದಲ್ಲಿ ಹೊರಟಿದ್ದೇನೆ ನಾನು, ನನ್ನದೇ ನಗರಿ, ನನ್ನದೇ ಮನೆಯಾದ ಕಿಷ್ಕಿಂಧೆಗೆ. ನಾನು ಬೆಳೆದ ನನ್ನನ್ನು ಬೆಳೆಸಿದ ನನ್ನ ಜನರ ವಾಸಸ್ಥಾನದತ್ತ. ಮೊದಲೂ ಎಷ್ಟೊ ಬಾರಿ ನಾನು ನನ್ನ ಮನೆಯತ್ತ ಪುನಃ ಪ್ರಯಾಣ ಬೆಳೆಸಿದ್ದಿದೆ. ನನ್ನ ಹುಟ್ಟಿನಿಂದಲೇ ಹೀಗೆ. ನಾನು ಮನೆಯಲ್ಲಿ ಹುಟ್ಟಿದವನೂ ಅಲ್ಲ. ಮನೆಯ ಹೆಂಡತಿಗೆ ಹುಟ್ಟಿದವನೂ ಅಲ್ಲ. ಒಂದು ರೀತಿಯಿಂದ ನೋಡಿದರೆ ಸುಗ್ರೀವನ ಜನ್ಮದಿಂದಲೇ ವೈರುಧ್ಯಗಳು ನನ್ನ ಜೀವನದಲ್ಲಿ ಹಾಸುಹೊಕ್ಕಾಗಿವೆ. ಅಲ್ಲ, ಸುಗ್ರೀವನ ಬದುಕೇ ವೈರುಧ್ಯಗಳ ಆಡುಂಬೊಲ. ಮನೆಯತ್ತ ಹಿಂದಿರುಗುತ್ತಿರುವ ಈ ಹೊತ್ತಿನಲ್ಲಿ ಬದುಕಿನತ್ತಲೂ ಒಂದು ಸಣ್ಣ ಹಿನ್ನೋಟ ಹರಿಯುತ್ತಿದೆ, ನನಗರಿವಿಲ್ಲದೆಯೇ. ಸಹಜವಲ್ಲವೇ?! ವರ್ತಮಾನ ಎನ್ನುವುದು ಭೂತಕಾಲದ ಮೇಲೆ ಕಟ್ಟಿದ ಸೌಧ, ಭವಿಷ್ಯತ್ಕಾಲದ ಸೋಪಾನ.

ನನ್ನಪ್ಪ ವೃಕ್ಷರಜಸ್ಸು. ಆತ ಬ್ರಹ್ಮ ಮಾನಸ ಪುತ್ರನಂತೆ. ಅವನಿಗೆ ಬ್ರಹ್ಮನಿಂದ ಕೊಡಲ್ಪಟ್ಟ ಭೂಮಿಯಂತೆ ಕಿಷ್ಕಿಂಧೆ. "ಭಲ್ಲೂಕ- ಗೋಲಾಂಗೂಲಗಳ ರಾಜನಾಗಿ ಬದುಕು" ಎನ್ನುವ ಆಶೀರ್ವಾದ ಪೂರ್ವಕ ಆಜ್ಞೆಯನ್ನು ಹೊತ್ತು ಕಿಷ್ಕಿಂಧೆಯ ಅರಸನಾದನಂತೆ ನನ್ನಪ್ಪ. ವಯೋಮಾನದಲ್ಲಿ ಅವನಿಗಿಂತ ಬಹಳೇ ದೊಡ್ಡವರು ಜಾಂಬವರು. ಆದರೆ ಅಪ್ಪನಿಗೆ ಗುರುವಾಗಿ, ಸಖನಾಗಿ ನಿಂತರು. ಅವರ ವಿಶೇಷತೆ ಅದು. ಕುಕ್ಷಿ ಎನ್ನುವಳೊಬ್ಬ ವಾನರಿಯನ್ನು ನನ್ನಪ್ಪನಿಗೆ ಬ್ರಹ್ಮದೇವ ಮದುವೆ ಮಾಡಿಸಿದನಂತೆ. ಆದರೆ ವಿಧಿಯ ಮಗನ ಬದುಕಿನಲ್ಲೂ ವಿಧಿಯಾಟ. ಸಂತಾನವಿಲ್ಲ. ಸಂತಾನಾಪೇಕ್ಷಿಯಾಗಿ ನನ್ನಪ್ಪ ಹಿಮಾಲಯದ ಕಡೆ ಹೋದನಂತೆ. ಸ್ನಾನಕ್ಕೆಂದು ಕೊಳವೊಂದರಲ್ಲಿ ಮಿಂದೆದ್ದಾಗ ಹೆಣ್ಣಾದನಂತೆ. ಆಗ ಆತನ ಬಾಲಕ್ಕೆ ಇಂದ್ರನ ತೇಜಸ್ಸು ಬಿದ್ದು ಹುಟ್ಟಿದವನಂತೆ ನನ್ನಣ್ಣ ವಾಲಿ. ಕುತ್ತಿಗೆಯ ಭಾಗಕ್ಕೆ ಸೂರ್ಯನ ತೇಜಸ್ಸು ತಾಗಿ ನಾನು ಹುಟ್ಟಿದ್ದಂತೆ. ಎರಡೂ ಮಕ್ಕಳನ್ನು ತಾನೇ ತಾಯಾಗಿ ಹೆತ್ತವ ನನ್ನಪ್ಪ. ಇಂದ್ರ ಸೂರ್ಯರೇ ಹೇಳಿದ್ದಂತೆ. ಪಕ್ಕದ ಕೊಳದಲ್ಲಿ ಮಿಂದೇಳು ಮತ್ತೆ ಗಂಡಾಗುವೆ ಎಂದು. ಅಂತೆಯೇ ನನ್ನಪ್ಪ ಮಾಡಿದ. ಮತ್ತೆ ಗಂಡು ದೇಹವನ್ನು ಪಡೆದ. ನನ್ನನ್ನು ಮತ್ತು ಅಣ್ಣನನ್ನು ಕರೆದುಕೊಂಡು  ಕಿಷ್ಕಿಂಧೆಗೆ ಬಂದ. ನಮ್ಮ ಲಾಲನೆ ಪಾಲನೆಗಳನ್ನೂ ಚೆನ್ನಾಗಿ ಮಾಡಿದ. 

ಆದರೆ ಬಾಲ್ಯದ ಆ ಕಾಲದಿಂದಲೂ ತನಗೆ ಬಲವಾಗಿ, ತನ್ನ ರಕ್ಷಕನಾಗಿ ಮೆರೆದದ್ದು ಅಣ್ಣ ವಾಲಿಯೇ. ಅಂಥಾ ಪರಾಕ್ರಮಿ ಅಣ್ಣನ ತಮ್ಮ ನಾನು ಎಂದು ಅದೆಷ್ಟು ಸಂತಸ ಹಮ್ಮು ಬಿಮ್ಮಿನಿಂದ ಹೇಳಿಕೊಳ್ಳುತ್ತಿದ್ದವ ನಾನು. ಕಿಷ್ಕಿಂಧೆಯಲ್ಲಿ ಎಲ್ಲರೂ ವಿನೋದ ಮಿಶ್ರಿತ ಹೆಮ್ಮೆಯಿಂದ ಆಡುತ್ತಿದ್ದ ಮಾತು. "ವಾಲಿಯ ಬೆನ್ನಿನ ಹಿಂದೆ ಬಾಲ. ಬಾಲದ ಹಿಂದೆ ಅವನ ತಮ್ಮ ಸುಗ್ರೀವ" "ವಾಲಿಯನ್ನು ಎಂದಾದರೊಂದು ದಿನ ಆತನ ನೆರಳು ತ್ಯಜಿಸೀತು. ಸುಗ್ರೀವ ತ್ಯಜಿಸಲಾರ." ಈ ಮಾತುಗಳನ್ನು ಕೇಳಿದಾಗಲೆಲ್ಲ ಬೀಗಿದ್ದವ ನಾನು. ಅಣ್ಣನೂ ಅಷ್ಟೇ.
ಅದೆಷ್ಟು ಯುದ್ಧಗಳಿಗೆ ಒಟ್ಟಾಗಿ ತೆರಳಿದ್ದವರು ನಾವು. ಆದರೆ ಅಣ್ಣ ಎಂದಿಗೂ ನನಗೆ ಒಂದು ಸಣ್ಣ ಗಾಯವೂ ಆಗಲಿಕ್ಕೆ ಬಿಡಲಿಲ್ಲ. ಯುದ್ಧದಲ್ಲಿ ನಾನು ಮುಂದಾಗುವಷ್ಟರಲ್ಲಿ ನನ್ನಣ್ಣ ಯುದ್ಧ ಮುಗಿಸಿ, "ಸುಗ್ರೀವ, ನೀನು ಕ್ಷೇಮವಷ್ಟೇ! ಏಳು ಮನೆಗೆ ಹೋಗುವ" ಎನ್ನುತ್ತಿದ್ದ. ಅವನಿಗೆ ತನಗಾದ ನೋವಿನ ಪರಿವೆಯೇ ಇರುತ್ತಿರಲಿಲ್ಲ. ಇದರ ಬಗ್ಗೆ ಪ್ರಶ್ನಿಸಿದರೆ ಆತ ಹೇಳುತ್ತಿದ್ದುದು ಒಂದೇ ಮಾತು. "ವೀರನಿಗೆ ನೋವೆಲ್ಲಿಯದು. ಆತನ ದೇಹಕ್ಕಾದ ಗಾಯಗಳು ಆತನ ವೀರತನದ ಕುರುಹುಗಳು."

ನನ್ನಣ್ಣನಿಗೊಂದು ಅಭ್ಯಾಸ. ಮೂರು ಹೊತ್ತು ಮೂರು ಸಮುದ್ರದಲ್ಲಿ ಅರ್ಘ್ಯ ಪ್ರದಾನ ಮಾಡುವುದು. ಒಂದು ದಿನ ಅಣ್ಣನಲ್ಲಿ ಪ್ರಶ್ನಿಸಿದ್ದೆ. "ಏಕಣ್ಣ ಇಷ್ಟು ಶ್ರಮ ಪಟ್ಟು ಮೂರು ಹೊತ್ತು ಮೂರು ಬೇರೆ ಬೇರೆ ದಿಕ್ಕಿನ ಸಮುದ್ರ ತೀರಕ್ಕೆ ಹೋಗಿ ಅರ್ಘ್ಯ ಬಿಡುವುದು?" ಅಣ್ಣನೆಂದಿದ್ದ, "ನಿನ್ನಂಥಾ ತಮ್ಮನನ್ನು ಕೊಟ್ಟಿದ್ದಾನೆ ಭಗವಾನ್ ಸೂರ್ಯ ನಾರಾಯಣ. ಅದಕ್ಕಾಗಿ ಅವನಿಗೆ ಕೃತಜ್ಞತೆ ಸಲ್ಲಿಸಬೇಡವೇ?"

ಇಂತಿದ್ದ ನನ್ನಣ್ಣ ಸಮುದ್ರ ಮಂಥನದಲ್ಲಿ ಪಾಲ್ಗೊಂಡು ತಾರೆಯನ್ನು ತನ್ನರಸಿಯಾಗಿ ಪಡೆದ. ನನಗೆ ರುಮೆಯನ್ನು ತಂದು ಮದುವೆ ಮಾಡಿಸಿದ. ತಂಗಿ ಅಂಜನೆಗೆ ಮಾಲ್ಯವಂತದ ಅರಸ ಕೇಸರಿಯೊಂದಿಗೆ ಮದುವೆ ಮಾಡಿಸಿದ. ಸಾಂಸಾರಿಕವಾಗಿ ಈ ಎಲ್ಲ ಕರ್ತವ್ಯಗಳನ್ನೂ ನಿರ್ವಹಿಸಿದ ನನ್ನಣ್ಣ. ಅದರಲ್ಲಿ ಸಂತೋಷ ಪಟ್ಟು ತನ್ನವರನ್ನೂ ಸಂತಸಗೊಳಿಸಿದ್ದ. ಆಗಲೇ ನಡೆದಿದ್ದು ಒಂದು ದುರ್ಘಟನೆ. ಸೂರ್ಯನನ್ನು ತಿನ್ನಲು ಹೋಗಿದ್ದ ನಮ್ಮಳಿಯ ಹನುಮ, ಆ ಬಾಲ್ಯದಲ್ಲಿ ಅದೆಷ್ಟೋ ವರಗಳನ್ನು ಸಂಪಾದಿಸಿದ. ಆದರೆ ಹುಡುಗಾಟಿಕೆ ಮಾಡಿಬಿಟ್ಟ. ಪರಿಣಾಮ ಋಷಿಗಳ ಶಾಪದಿಂದ ಮಂಕಾಗಿ ಕುಳಿತ. ಆದರೆ ತಂಗಿ ಅಂಜನಾದೇವಿ ಗಟ್ಟಿಗಿತ್ತಿ. ಅವಳು ಆತನಿಗೆ ಹೇಳಿದ್ದು, "ಮಗನೇ ಸದಾಕಾಲ ರಾಮಧ್ಯಾನದಲ್ಲಿರು. ರಾಮನೊಲುಮೆ ನಿನಗೆ ದೊರೆತು ಉದ್ಧಾರವಾಗುತ್ತೀ". ತನ್ನ ಸಭ್ಯತೆಯಿಂದಲೇ ಅದೆಷ್ಟೊ ರಾಕ್ಶಸರನ್ನು ವೈರಿಯಾಗಿ ಪಡೆದಿದ್ದ ಭಾವ ಕೇಸರಿ. ಇದೆಲ್ಲದರ ಪ್ರಭಾವ ಹನುಮನ ಮೇಲಾಗಿ ಆತನಿಗೆ ತೊಂದರೆಯಾಗಬಾರದೆಂದು ನಾನು ಹನುಮನನ್ನು ಕಿಷ್ಕಿಂಧೆಗೆ ಕರೆತಂದೆ. ನನಗೂ ಅಂತರಂಗದಲ್ಲಿ ಇದ್ದ ಧೈರ್ಯ ವಾಲಿಯದ್ದೊಂದೇ. ವಾಲಿಯೂ ನಾನು ಮಾಡಿದ್ದು ಸರಿಯಾಗಿಯೇ ಇದೆ. ಅಂಗದನಿಗೂ ಜೊತೆಯಾಯ್ತು ಎಂದೇ ಹೇಳಿದ್ದ.

ಒಂದು ದಿನ ಅರ್ಘ್ಯಪ್ರದಾನ ಮಾಡಿ ಬಂದ ಅಣ್ಣ, ಬಾಲದಿಂದ ಒಂದು ವಿಚಿತ್ರ ಆಕೃತಿಯನ್ನು ಹೊರತೆಗೆದು ಅಂಗದ ತೊಟ್ಟಿಲಿಗೆ ಕಟ್ಟುತ್ತಿದ್ದ. ನೋಡಿದರೆ ಅದಕ್ಕೆ ಹತ್ತು ತಲೆಗಳಿದ್ದವು. ಆ ಆಕೃತಿ ಏನನ್ನೊ ಹೇಳಲು ತವಕಿಸುತ್ತಿತ್ತು. ಸೂಕ್ಷ್ಮವಾಗಿ ಇದನ್ನು ಗಮನಿಸಿದ ನಾನು ಅಣ್ನನಲ್ಲಿ ಹೇಳಿದೆ. ಅಣ್ಣನೂ ಅದನ್ನು ಗಮನಿಸಿ, ಕಟ್ಟು ಬಿಚ್ಚಿದ. ಆ ಆಕೃತಿ ಬೆಳೆದು ನಿಂತಿತು. ತನ್ನನ್ನು ಲಂಕೇಶ್ವರ ರಾವಣ ಎನ್ನುವುದಾಗಿ ಪರಿಚಯಿಸಿಕೊಂಡು ಅಣ್ಣನಲ್ಲಿ ಸ್ನೇಹವನ್ನು ಕೋರಿದ. ಮೊದಲೇ ನಮ್ಮಣ್ಣ ವೈರ ಮತ್ತು ಸ್ನೇಹ ಎರಡರಲ್ಲೂ ಎತ್ತಿದ ಕೈ. ಕೊಟ್ಟೇ ಬಿಟ್ಟ ಕೇಳಿದ್ದನ್ನು.

ನಮ್ಮಣ್ಣನ ಸ್ವಭಾವ ನಿಧಾನವಾಗಿ ಬದಲಾಗ ಹತ್ತಿತು. ಅರಮನೆಯಲ್ಲಿಯೂ ಅಷ್ಟೇ ಕಿಷ್ಕಿಂಧೆಯ ಇತರರೊಡನೆಯೂ ಅಷ್ಟೇ. ನಾನು ಹೇಳಿದ್ದೇ ಆಗಬೇಕು ಎನ್ನುವ ಭಾವದ ವರ್ತನೆ. ಮಿತಿ ಮೀರಿದ್ದ ಮಧು ಸೇವನೆ. ಅಸಂಖ್ಯ ಹೆಂಡತಿಯರ ನಡುವೆ ಕೈಗೆ ಸಿಕ್ಕವಳನ್ನು ಎಳೆದು ಹೊತ್ತುಗೊತ್ತಿನ ಪರಿವೆಯಿಲ್ಲದೇ ಭೋಗಿಸುತ್ತಿದ್ದ. ಆದರೂ ಪ್ರತಿ ದಿನ ಮಲಗಲಿಕ್ಕೆ ತಾರೆಯ ಮನೆಗೇ ಹೋಗುತ್ತಿದ್ದ. ಸದಾಕಾಲ, ಅವರಿವರಿಗೆ ಬಡಿಯುವ ಮಾತುಗಳೇ. ಯಾರೇ ಯುದ್ಧಕ್ಕೆ ಕರೆಯಲಿ. ಯಾವ ಪರಿವೆಯೂ ಇಲ್ಲದೆಯೇ ಹೋಗಿ ತುಡುಕಿ ಕೊಂದು ಇಲ್ಲವಾದರೆ ಸಾಯುವಂತೆ ಬಡಿದು ಬರುತ್ತಿದ್ದ. ತಡೆದರೆ, ಕೊರಳಲ್ಲಿನ ಹಾರ ಎತ್ತಿ ತೋರಿಸಿ ಹೇಳುತ್ತಿದ್ದ. "ಈ ಹಾರದ ಬಲದಿಂದ ಎದುರಿನವನ ಅರ್ಧ ಬಲ ನನ್ನನ್ನು ಸೇರುತ್ತದೆ. ಮತ್ತೇಕೆ ಭಯ? ಪ್ರಾಣವೇ, ಸೃಷ್ಟಿಯನ್ನು ಪಾಲಿಸುವವನೇ ಅದನ್ನೂ ಪಾಲಿಸುತ್ತಾನೆ". ಋಷ್ಯಮೂಕದೆಡೆಗೆ ಪ್ರತಿದಿನವೂ ಗೌರವದಿಂದ ನೋಡಿ ನಮಸ್ಕರಿಸುತ್ತಿದ್ದ ನನ್ನಣ್ಣ ಅದನ್ನು ಮರೆತೇ ಬಿಟ್ಟಿದ್ದ.

ಅದ್ಯಾವ ಕಾರಣದಿಂದ ಇಂಥ ವಿಪರೀತ ಬುದ್ಧಿಗಳು ಅಣ್ಣನನ್ನು ಸೇರಿದ್ದವೋ ಏನೋ? ಭಗವಂತನೇ ಬಲ್ಲ. ಇಷ್ಟೆಲ್ಲ ಇದ್ದಾಗಲೇ ಬಂದವ ದುಂದುಭಿ. ವರುಣ ಸೂರ್ಯ ಹಿಮವಂತರು ಹೇಳಿದ್ದಂತೆ ವಾಲಿ ನಿನಗೆ ತಕ್ಕ ಪರಾಕ್ರಮಿ ಎಂದು. ಕುಡಿದ ಮತ್ತಿನಲ್ಲಿಯೂ ಕಾದಾಡಿ ಅವನನ್ನು ಕೊಂದಿದ್ದ. ಕಳೇಬರವನ್ನು ಎಸೆಯುವಾಗ ಋಷ್ಯಮೂಕದ ಮಾರ್ಗದಲ್ಲಿ ಎಸೆದಿದ್ದ. ಮಾರನೆಯ ದಿನದಿಂದ ಮೂರು ಸಮುದ್ರದಲ್ಲಿ ಅರ್ಘ್ಯ ಕೊಡುವ ಅಭ್ಯಾಸವೂ ನಿಂತಿತ್ತು. ಕಳೇಬರದಿಂದ ಸುರಿದ ರಕ್ತದಿಂದ ಆಶ್ರಮ ಮಲಿನವಾಯಿತೆಂದು ಮತಂಗರು ಶಾಪ ಕೊಟ್ಟರಂತೆ. "ವಾಲಿ ಈ ಋಷ್ಯಮೂಕಕ್ಕೆ ಬಂದರೆ ಸಾಯಲಿ" ಎಂದು. ವಿಷಯ ತಿಳಿದ ವಾಲಿ ಅದನ್ನು ಕಡೆಗಣಿಸಿದ್ದ. ತಾರೆ-ಜಾಂಬವರು ಮತ್ತು ನಾನು ಒತ್ತಾಯಿಸಿದ್ದಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಮತಂಗರಲ್ಲಿ ಕ್ಷಮೆಯಾಚಿಸಿದ. ಅದು ಹೇಗೆ ದಕ್ಕೀತು?

ಸಾಲದ್ದಕ್ಕೆ ಬಲಪ್ರದರ್ಶನದ ಮತ್ತು ಕೌಶಲ್ಯ ಪ್ರದರ್ಶನದ ಚಟ ನನ್ನಣ್ಣನಿಗೆ. ಮನೆಗೆ ಬಂದ ಬಂಧು ಬಾಂಧವರನ್ನೆಲ್ಲ ಕರೆದುಕೊಂಡು ಬಂದು ದುಂದುಭಿಯ ಅಟ್ಟೆಯನನ್ನು ಹೆಬ್ಬೆರಳ ಮೇಲೆ ಮೊಣಕಾಲ ತನಕ ಎತ್ತುವುದು; ಒಂದೇ ಬಾಣದಿಂದ ವರ್ತುಲಾಕಾರದಲ್ಲಿ ಇದ್ದ ಸಪ್ತಸಾಲ ವೃಕ್ಷಗಳ ಗರಿ ಕತ್ತರಿಸುವುದು ಹೀಗೆ.

ಆಮೇಲೆ ಬಂದವ ಮಾಯಾವಿ. ಅವನನ್ನು ಕೊಲ್ಲಲ್ಲು ಅಣ್ಣ ಹೊರಟ. ಅದೂ ರಾತ್ರಿಯ ಕಾಲದಲ್ಲಿ. ಕತ್ತಿನಲ್ಲಿ ಕನಕ ಕಾಂಚನ ಮಾಲೆ ಕಾಣಲಿಲ್ಲ ನನಗೆ. ಕಂಗೆಟ್ಟು ನಾನೂ ಓಡಿದೆ. ಮಾಯಾವಿ ಹೊಕ್ಕ ಗುಹೆಯ ಬಾಗಿಲಿನಲ್ಲಿ ನನ್ನನ್ನು ನಿಲ್ಲಿಸಿ ತಾನು ಒಳಹೋದ ಅಣ್ಣ ಅದೆಷ್ಟು ದಿನ ಕಳೆದರೂ ಬರಲಿಲ್ಲ. ನನಗಂತೂ ಹೇಳಲಸಾಧ್ಯವಾದ ಭಯ. ಅಷ್ಟರಲ್ಲಿ ಗುಹೆಯಲ್ಲಿ ಹರಿದು ಬಂತು ರಕ್ತದ ಕೋಡಿ. ಬೆನ್ನಿಗೇ ನನ್ನಣ್ಣನ ಆರ್ತನಾದ" ಹಾ!! ಸುಗ್ರೀವ!! ಬದುಕಿಕೋ". ದುಃಖದಲ್ಲಿಯೂ ತನಗೆ ದೇವರು ಬುದ್ಧಿ ಕೊಟ್ಟ. ಗುಹೆಗೆ ಬಂಡೆಯೊಂದನ್ನು ಅಡ್ಡಲಾಗಿಟ್ಟು, ಕೀಲು ಹೊಡೆದು ಮನೆಗೆ ಬಂದೆ. ಕಂಡ ಘಟನೆಯನ್ನು ಹೇಳಿ, ಕೋಣೆಯ ಬಾಗಿಲು ಹಾಕಿಕೊಂಡು ಕುಳಿತೆ. ಅಳಲಿಕ್ಕೂ ಸಾಧ್ಯವಿಲ್ಲದಷ್ಟು ನಿತ್ರಾಣನಾಗಿದ್ದೆ ನಾನು.

ಕೊನೆಗೊಂದು ದಿನ ಜಾಂಬವರು ಬಂದು ತಿಳಿ ಹೇಳಿ ನನಗೆ ರಾಜ್ಯಾಭಿಷೇಕವನ್ನು ಮಾಡಿಸಿದರು. ನಾನು ಮತ್ತು ರುಮೆ ರಾಜ ರಾಣಿಯರಾಗಿ ಸಿಂಹಾಸನ ಏರಿದ್ದೆವು. ತತ್ ಕ್ಷಣದಲ್ಲಿ ತಾರೆ ಬಂದು ನನ್ನ ಬಲಕ್ಕೆ ಕುಳಿತಳು.

ವಾಲಿ ಇಲ್ಲ ಎನ್ನುವ ಬೇಸರದ ನಡುವೆಯೂ ಸುಖ ಸಂತೋಷಗಳಿಂದ ದಿನಗಳು ಕಳೆಯುತ್ತಿದ್ದವು. ಒಂದು ದಿನ ಬಂದ ವಾಲಿ. ಸಿಂಹಾಸನದ ಮೇಲೆ ನನ್ನನ್ನು ನೋಡುತ್ತಿದ್ದಂತೆ ಸಿಟ್ಟಿನಿಂದ ಘರ್ಜಿಸಿ ರುಮೆಯನ್ನು ಎಳೆದೊಯ್ದು ಕೂಡಿ ಹಾಕಿ ನನ್ನನ್ನು ನಿಂದಿಸುತ್ತಾ ಅಟ್ಟಿಸಿಕೊಂಡು ಬಂದು ಹೊಡೆದ. ಹೊಡೆಯುತ್ತಲೇ ಇದ್ದ. "ಕ್ಷಮಿಸು" ಎಂದಿದ್ದು ಆತನಿಗೆ ಕೇಳಿಸಲೇ ಇಲ್ಲ. ಆಗ ನನ್ನಪ್ಪ ನನ್ನನ್ನು ತನ್ನ ರಥ ಹತ್ತಿಸಿಕೊಂಡ. ಋಷ್ಯಮೂಕದಲ್ಲಿ ಇಳಿಸಿದ.

ಮರುದಿವಸ ರಾತ್ರಿ ಕಂಡಿದ್ದು ಕಿಷ್ಕಿಂಧೆಯ ಅರಮನೆಯ ಉಪ್ಪರಿಗೆಯಲ್ಲಿ ಬಲಾತ್ಕಾರಗೊಳ್ಳುತ್ತಿದ್ದ ನನ್ನರಸಿ ರುಮೆ. ತಿರುಗಿ ಹೋಗಿ ಕೇಳಿದ್ದೆ. "ಅಣ್ಣಾ!! ರುಮೆಯನ್ನು ನನ್ನೊಂದಿಗೆ ಕಳಿಸಿಕೊಡು" ವಾಲಿ ನನಗೆ ಪೆಟ್ಟು ಕೊಟ್ಟು ಕಳಿಸಿದ್ದ. ಶತಮಾನಕ್ಕೊ ದಶಮಾನಕ್ಕೋ ಒಮ್ಮೆ ಈ ಘಟನೆ ಪುನರಾವರ್ತಿತವಾಗುತ್ತಿತ್ತು. ಇಂದೂ ಆಯಿತು.

ಆದರೆ ಅದಕ್ಕೆ ಪೂರ್ವದಲ್ಲಿ, ಇಂದಿನ ದಿನ ರಾಮ ಲಕ್ಷ್ಮಣರನ್ನು ದೂರದಿಂದಲೇ ಕಂಡೆ. ಹನುಮನನ್ನು ಕಳುಹಿಸಿ ಅವರ ಬಗ್ಗೆ ವಿಚಾರಿಸಲು ಹೇಳಿದೆ. ಹನುಮ ಬಾಲ ವಟುವಾಗಿ ಹೋದ. ರಾಮ ಲಕ್ಷ್ಮಣರು ತಾವು ಸುಗ್ರೀವನನ್ನು ಕಾಣಲು ಬಂದವರೆಂದು ತಿಳಿದಾಗ ತನ್ನ ನಿಜ ರೂಪದಲ್ಲಿ ಪ್ರಕಟವಾಗಿ ಅವರಿಗೆ ನಮಿಸಿದ. ಮಂಕನಂತಿದ್ದ ಹನುಮನ ಮುಖದಲ್ಲಿ ಮೇಧಾವಿಯ ವರ್ಚಸ್ಸು ಮೂಡಿತ್ತು. ಅಗ್ನಿ ಸಾಕ್ಷಿಯಾಗಿ ನನ್ನ ಮತ್ತು ರಾಮರ ನಡುವೆ ಮಿತ್ರತ್ವ ಮೂಡಿತು.

ರಾಮನಿಗೆ ಎಲ್ಲವನ್ನೂ ತಿಳಿಸಿದೆ. ವಾಲಿಯನ್ನು ಯುದ್ಧಕ್ಕೆ ಕರೆದರೆ ತಾನು ವಾಲಿಯನ್ನು ನಿಗ್ರಹಿಸುವುದಾಗಿ ರಾಮ ವಚನವನ್ನು ಕೊಟ್ಟ. ಅಂತೆಯೇ ಕರೆದೆ. ಯಾವಾಗಲೂ ಆಗುವುದೇ ಆಯಿತು. ಬೇಸರದಿಂದ ರಾಮನನ್ನು ಅದೆಷ್ಟು ನಿಂದಿಸಲಿಲ್ಲ ನಾನು. ಅದೆಷ್ಟು ಟೀಕಿಸಿದೆ. ಆದರೆ ರಾಮ "ಧೈರ್ಯ ತಾಳು" ಎಂದ. ವಾಲಿ-ಸುಗ್ರೀವರ ನಡುವಿನ ಬೇಧ ನನಗೆ ತಿಳಿಯಲಿಲ್ಲ ಎಂದ. ಸೂಕ್ಷ್ಮದಲ್ಲಿ ರಾಮ ನನಗೆ ಪಾಠವೊಂದನ್ನು ಹೇಳಿದ್ದ. ಎಷ್ಟೆಲ್ಲ ಪರೀಕ್ಷಿಸಿದ್ದೆ ನಾನು ರಾಮನನ್ನು. ದುಂದುಭಿಯ ಅಟ್ಟೆ ಎತ್ತಿದ್ದನ್ನು ತಿಳಿಸಿದಾಗ ರಾಮ ಅದನ್ನು ಒದೆದು ಹಾರಿಸಿದ್ದ. ಪೂರ್ಣ ನಂಬಿಕೆ ಬಾರಲಿಲ್ಲ ನನಗೆ. ವಾಲಿ ಸಪ್ತ ಸಾಲ ವೃಕ್ಷಗಳ ಗರಿ ಕತ್ತರಿಸುವುದನ್ನು ಹೇಳಿದೆ. ಆದರೆ ರಾಮ ಆ ಸಪ್ತ ಸಾಲ ವೃಕ್ಷಗಳನ್ನು ಒಂದೇ ನೇರಕ್ಕೆ ತಂದು ಅವೆಲ್ಲವನ್ನೂ ಒಂದೇ ಬಾಣದಲ್ಲಿ ತುಂಡರಿಸಿ ಮತ್ತೆ ಆ ಬಾಣ ರಾಮನ ತೂಣೀರವನ್ನು ಸೇರಿತ್ತು. ಆದರೂ ನಾನು ನಂಬಲಿಲ್ಲ. ನನ್ನ ಅಹಂಕಾರವೇ ಸರಿ.

ರಾಮ ನನಗಿಲ್ಲಿ ಕಲಿಸಿದ್ದು ಎರಡು ಪ್ರಮುಖ ಪಾಠಗಳು. ವಾಲಿಗೆ ನಾನು ಅಷ್ಟೊಂದು ಕನಿಷ್ಠನಲ್ಲ ಎನ್ನುವುದು, ಇನ್ನೊಂದು ಪರೀಕ್ಷಕ ತಾನು ಮೊದಲು ಸಂಪೂರ್ನ ಸತ್ಯವನ್ನು ತಿಳಿದು, ಅದನ್ನು ಪರೀಕ್ಷಾರ್ಥಿಗೆ ತಿಳಿಸಿ ಪರೀಕ್ಷಿಸಬೇಕು ಎನ್ನುವುದು. ರಾಮ ತರಿಸಿ ಹಾಕಿದ್ದಾನೆ ನನಗೆ ಗಜಪುಷ್ಪದ ಮಾಲಿಕೆಯನ್ನು. ಸಾಲದ್ದಕ್ಕೆ, ಯಾವ ಸಪ್ತ ಜನಾಶ್ರಮಕ್ಕೆ ಕಾಲಿಟ್ಟರೆ ದುರ್ಜನರ ತಲೆ ಸಾವಿರ ಹೋಳಾಗುತ್ತದೆ ಎನ್ನುವ ಪ್ರತೀತಿ ಇದೆಯೋ ಅದೇ ಸಪ್ತ ಜನಾಶ್ರಮದ ದಾರಿಯಲ್ಲಿ ನಾನು ಸಾಗುತ್ತಿದ್ದೇನೆ. ಅಲ್ಲ ರಾಮ ನನ್ನನ್ನು ಈ ದಾರಿಯಲ್ಲಿ ಕರೆದುಕೊಂಡು ಬಂದಿದ್ದಾನೆ, ರಾಮ ಅದೆಷ್ಟು ಮಹೋನ್ನತ ವ್ಯಕ್ತಿ. ದಾರಿ ತೋರಿಸುವುದು ಮಾತ್ರವಲ್ಲ, ನಂಬಿದವರನ್ನು ಕೈ ಹಿಡಿದು ಸರಿದಾರಿಯಲ್ಲಿ ಸಾಗಿಸುತ್ತಾನೆ. ಶ್ರೀರಾಮಚಂದ್ರನ ಮಾರ್ಗದರ್ಶನದಲ್ಲಿ ಸಾಗುವ ಈ ಸಮಯ ಸುಗ್ರೀವನ ಬದುಕಿನ ಅತ್ಯಮೂಲ್ಯ-ಅವಿಸ್ಮರಣೀಯ- ಅನುಪಮ ಕ್ಷಣ. ಶ್ರೀರಾಮನ ನಿರ್ದೇಶನದಂತೆ ಆತ ತೋರಿದ ದಾರಿಯಲ್ಲಿ ಸಾಗಿದರೆ ಸತ್ಪ್ರಭಾವ ಆಗಿಯೇ ಆಗುತ್ತದೆ. ಹನುಮನೇ ಸಾಕ್ಷಿಯಲ್ಲವೇ ಇದಕ್ಕೆ? 

ಸಪ್ತ ಜನಾಶ್ರಮವನ್ನೊ ದಾಟಿಯಾಗಿದೆ. ಕಾಡಿನ ಸರಹದ್ದು ಮುಗಿಯುತ್ತಿದೆ. ಅದೋ ಕಿಷ್ಕಿಂಧೆಯ ಅರಮನೆ ಕಾಣುತ್ತಿದೆ. . ವನವಾಸ ದೀಕ್ಷಾಬದ್ಧನಾದ ರಾಮ ಕಿಷ್ಕಿಮ್ಧೆಯ ನಗರಿಯನ್ನು ಪ್ರವೇಶಿಸುವಂತಿಲ್ಲ. ರಾಮ ನಿಯಮ ಮೀರುವವನಲ್ಲ.ಸರಹದ್ದಿನಲ್ಲಿ ನಿಂತು ರಾಮ ತನ್ನ ಬಲಗೈನಿಂದ ಸನ್ನೆ ಮಾಡಿ ಸಾಗಲು ಹೇಳುತ್ತಿದ್ದಾನೆ ಆ ಸನ್ನೆ ನನ್ನ ಪಾಲಿಗೆ ಕೇವಲ ಹೋಗು ಎನ್ನುವ ಸನ್ನೆಯಲ್ಲ. ಹೋಗು ನಾನುದ್ಧರಿಸುತ್ತೇನೆ ಎನ್ನುವ ಸನ್ನೆಯಂತೆ ಕಾಣುತ್ತಿದೆ. ಹಿಂದಿರುವ ರಾಮನ ಮೇಲಿನ ನಂಬಿಕೆಯಿಂದ ಮುಂದೆ ಸಾಗುತ್ತೇನೆ, ಅದೋ ವಾಲಿಯ ಶಯನ ಕಕ್ಷೆ. ಕಿಟಕಿಯ ಹತ್ತಿರ ನಿಂತಾಗಿದೆ. ಇನ್ನು ಕಾರ್ಯ ಸಾಧಿಸಬೇಕು.

(ಸಶೇಷ)

No comments:

Post a Comment