Tuesday, May 25, 2021

ವಾಲಿಪ್ರಕರಣ ಅಧ್ಯಾಯ-2 ವಾಲಿವಿಪ್ಲವ


[ಈತನಕ: ಕಿಷ್ಕಿಂಧೆಯ ವರ್ತಮಾನ ಪರಿಸ್ಥಿತಿಗೆ ಕಾರಣವಾದ ಘಟನೆಗಳನ್ನು ತನ್ನನ್ನೇ ಕೇಂದ್ರವಾಗಿಸಿಕೊಂಡು ತನ್ನ ಭೂತಕಾಲವನ್ನು ನೆನಪಿಸಿಕೊಳ್ಳುತ್ತ ವಾಲಿಯ ನಿರೀಕ್ಷಯಲ್ಲಿರುವ ತಾರೆ. ಅಂಗದ ತಂದ ವರ್ತಮಾನವನ್ನು ತಿಳಿದು ವಾಲಿಯಲ್ಲಿ ಸುಗ್ರೀವ ಮತ್ತು ರುಮೆಯರಿಗೆ ಕ್ಷಮಾದಾನವನ್ನು ಯಾಚಿಸುವ ಮನಸ್ಸು ಮಾಡಿ ಎಲ್ಲ ಧೈರ್ಯ ಒಗ್ಗೂಡಿಸಿಕೊಳ್ಳಲು ಪ್ರಯತ್ನಿಸಿದ್ದಳು]

 

ಬಿಡು ಬೀಸಾದ ಹೆಜ್ಜೆಗಳನ್ನಿಡುತ್ತಾ ತಾರೆಯ ಅಂತಃಪುರಕ್ಕೆ ಬಂದ ವಾಲಿ ಅವಳನ್ನು ಬರಸೆಳೆದು ಮುದ್ದುಗರೆದು ರಮಿಸಿ ಸುಖಿಸಿ ಹಾಸಿಗೆಯ ಮೇಲೆ ಒರಗಿ ಆ ಸುಖದ ಹಂಬಲಿನಲ್ಲೇ ಇದ್ದೇನೆ. ಹಾಲು ಚೆಲ್ಲಿದಂತೆ ಚೆಲ್ಲಿದ ಬೆಳದಿಮ್ಗಳಿನಲ್ಲಿ ನನ್ನ ತಾರೆ ಮತ್ತಷ್ಟು ಮುದ್ದಾಗಿ ಕಾಣುತ್ತಾಳೆ. ಯಾರವ ಒದರಿದವ? ಬಾಲ ವನಿತಾ ಸುರತ ಮೃದಿತಾ ಕ್ಷೀಣೈರ್ಯಪಿ ಶೋಭತೇ ಎಂದವ. ಕಲ್ಪನೆಯಲ್ಲಿ ಶೋಭಿಸುವುದನ್ನು ಅಭ್ಯಾಸ ಮಾಡಿದ ಹುಚ್ಚು ಕವಿಯಾತ. ಖಂಡಿತಕ್ಕೂ. ಏಕೆಂದರೆ ಶೋಭಿಸುವುದು ಎನ್ನುವುದನ್ನು ಅಕ್ಷರಶಃ ಅಭ್ಯಸಿಸಿ ಅನುಭವಿಸಿದವ ನಾನು. ವಾನರೇಶ್ವರ, ಇಂದ್ರನಂದನ ವಾಲಿ. ಆ ಕವಿ ನಿಜಕ್ಕೂ ದೌರ್ಭಾಗ್ಯವಂತ. ನನ್ನ ತಾರೆಯಂಥಾ ಸುಂದರವಾದ ಹೆಂಡತಿ ಆತನಿಗೆ ಒಲಿಯಲಿಲ್ಲ, ನನ್ನ ತಾರೆಯಂಥಾ ಕಾಮಿನಿ ಆತನ ಸತಿಯಲ್ಲ. ನನ್ನ ತಾರೆಯಂಥಾ ಮೋಹಿನಿ ಮತ್ಯಾರಿಗೂ ಸಿಗಲಿಲ್ಲ. ಸಿಗಲು ಸಾಧ್ಯವೂ ಇಲ್ಲ. ಕಾರಣ ಈ ವಾಲಿಯ ಶ್ರೇಷ್ಠತೆ, ಉತ್ಕೃಷ್ಟತೆ.  ಆಯಾಸದಲ್ಲೂ ಸುಖ ಎನ್ನುವುದಿದ್ದರೆ ಅದು ಈ ಕ್ರೀಡೆಯಲ್ಲಿ, ಸಾಹಸ ಪ್ರದರ್ಶಿಸುವ ಮಲ್ಲ ಯುದ್ಧದಲ್ಲಿ. ಅಥವಾ ಪಂಥಾಹ್ವಾನವನ್ನು ಗೆಲ್ಲುವಲ್ಲಿ ಮಾಡುವ ಕಾರ್ಯದಲ್ಲಿ.

 

ಆಹಾ!! ತಾರೆಯ ಮುಖಭಾವವೇ!! ಅದೆಂಥಾ ಸೊಗಸು, ಅದೇನು ಸೌಂದರ್ಯ. ತನ್ನ ತನುಸುಖವನ್ನು ವಾಲಿಗೆ ಧಾರೆ ಎರೆದು ಧನ್ಯಳಾದ ಭಾವವನ್ನು ಅವಳ ಮುಖದಲ್ಲಿ ಕಾಣುತ್ತಿದ್ದೇನೆ. ತಾರೆಯೇ ಏನು? ಕಿಷ್ಕಿಂಧೆಯಲ್ಲಿನ ನನ್ನ ಎಲ್ಲ ರಾಣಿಯರ ಮುಖದಲ್ಲಿ ನಾನು ಈ ಧನ್ಯತಾಭಾವವನ್ನು ಕಂಡವ. ಆಗದಿದ್ದೀತೇ ಮತ್ತೆ? ಸುಖೋಪಭೋಗದ ಸುಧಾಮ ಎನ್ನಿಸಿಕೊಂಡ ಸ್ವರ್ಗದ ಅಧಿಪತಿಯ ಮಗನ ತೋಳುಗಳಲ್ಲಿ ಕರಗಿದಾಗ? ದೈತ್ಯ ದೇವತೆಗಳ ಗಡಣ ಹೈರಾಣಾಗಿ ಬಿದ್ದಾಗ ಕಡಲನ್ನೇ ಕಡೆದವನ ಹೆಂಡತಿ ಎಂದು ಲೋಕ ಗುರುತಿಸುವಾಗ?

ಎದುರಾಳಿಯ ಅರ್ಧ ಬಲವನ್ನು ಸೂರೆಗೊಂಡು ಅದರಿಂದಲೇ ಆತನನ್ನು ಮಣಿಸುವ ವರ ಪಡೆದವನ ವಧು ತಾನೆನ್ನಿಸಿಕೊಂಡಾಗ? ಸಪ್ತ ಸಾಲ ವೃಕ್ಷಗಳ ಒಂದೊಂದೇ ಗರಿಯನ್ನು ಕತ್ತರಿಸುವ ಕೌಶಲ್ಯ ಹೊಂದಿದವ ದೇಹ ತನ್ನೆದುರು ಸುಖಕ್ಕಾಗಿ ಕಾತರಿಸಿದಾಗ? ಇಂದ್ರಿಯಗಳ ಪ್ರತೀಕವಾಗಿರುವವನ ಮಗನಿಂದಲೇ ಇಂದ್ರಿಯ ಸುಖ ಕೊಟ್ಟು ಪಡೆವಾಗ ಯಾವ ಹೆಣ್ಣು ತಾನೇ ಧನ್ಯತಾಭಾವವನ್ನು ಅನುಭವಿಸುವುದಿಲ್ಲ? ಅದು ಸಹಜವೂ ಹೌದು. ಸ್ವಾಭಾವಿಕವೂ ಹೌದು. ಹೆಚ್ಚುಗಾರಿಕೆ ಇರುವುದು ಅಲ್ಲಲ್ಲ. ತಾರೆಯೊಂದಿಗೆ ರಮಿಸಿದಾಗ ನಾನು ಧನ್ಯ ಎಂದು ನನಗನ್ನಿಸುತ್ತದೆ.

 

ಕಾರಣ ಇಷ್ಟೇ. ಈ ತಾರೆ ನನ್ನ ಪಾಲಿನ ಭಾಗ್ಯ ತಾರೆ. ಇವಳು ಬಂದ ಮೇಲಲ್ಲವೇ ವಾಲಿ  ವಾನರೇಶ್ವರ ಎಂದು ಲೋಕ ವಿಖ್ಯಾತನಾಗಿದ್ದು. ಲೋಕದಲ್ಲಿ ಸಮುದ್ರ ಕಡೆದಿದ್ದು ದೊಡ್ಡ ಸಂಗತಿಯೇನಲ್ಲ. ಆದರೆ ದೇವ ದೈತ್ಯರಿಬ್ಬರೂ ಒಪ್ಪಿ ತಾರೆಯನ್ನು ನನಗೆ ಕೊಟ್ಟಿದ್ದು ಹೆಚ್ಚುಗಾರಿಕೆ. ನನ್ನ ಪರಾಕ್ರಮದ ಸಂಪಾದನೆ ನನ್ನೀ ಭಾಗ್ಯತಾರೆ. ಈ ನನ್ನ ಭಾಗ್ಯತಾರೆಯೊಂದಿಗೆ ಸುಖ ಸಂತೋಷದಿಂದ ಕಳೆಯುತ್ತಿದ್ದೆ. ಮಗ ಅಂಗದನ ಮುಗ್ಧ ಲೀಲೆಗಳಿಗೆ ಮರುಳಾಗುತ್ತಿದ್ದೆ. ತನಗಿಂಥಾ ಭಾಗ್ಯತಾರೆ ದೊರೆತ ಮೇಲೆ ತನ್ನ ತಮ್ಮ ಸುಗ್ರೀವನಿಗೂ ಮದುವೆ ಮಾಡಿಸುವ ಯೋಚನೆಯಲ್ಲಿದ್ದೆ. ಆಗಲೇ ನಡೆದಿದ್ದು ಗೋಲಭ ಗಂಧರ್ವನೊಡನೆ ಯುದ್ಧ. ಕಿಷ್ಕಿಂಧೆಯ ಹೆಣ್ಣು ಮಗಳು ರುಮೆ. ನನ್ನ ಮಾವನ ಮಗಳು. ಅಂದು ಅವಳನ್ನು ಹೊತ್ತೊಯ್ದಿದ್ದ ಗಂಧರ್ವ ಗೋಲಭನೊಂದಿಗೆ ಕಾದಾಡಿ ಅವನ ಮುಸುಡಿಗೆ ಗುದ್ದಿ ರುಮೆಯನ್ನು ಮತ್ತೆ ಕರೆತಂದಿದ್ದೆ. ರುಮೆಯ ಮುಂದಿನ ಬದುಕು ಸುಖಮಯವಾಗಬೇಕು. ತಮ್ಮ ಸುಗ್ರೀವನೂ ಸಂಸಾರದ ಸುಖವನ್ನು ಪಡೆಯಲಿ ಎಂದು ಸೋದರಿಕೆಯ ಸಂಬಂಧದಲ್ಲಿ ಮದುವೆ ಮಾಡಿಸಿ ರುಮೆಯನ್ನು ಮನೆದುಂಬಿಸಿಕೊಂಡಿದ್ದೆ. ನಂತರದಲ್ಲಿ ನನ್ನ ಸ್ನೇಹಿತನಾಗಿ ಚತುರ್ದಶ ಭುವನ ತಲ್ಲಣ ಎಂದು ಕರೆಸಿಕೊಂಡಿದ್ದ ರಾವಣನೊಡನೆ ತುಲ್ಯಾರಿ ಮಿತ್ರತ್ವದ ಸಾಧನೆಯಾಗಿತ್ತು. ಸಾಧನೆ ನನಗಲ್ಲ ಅವನಿಗೆ. ನನಗಂತೂ ಅದು ಆ ಮೊದಲಿನಂತೆ ಎಂತೆಂಥವರಿಗೋ ಕೊಟ್ಟ ಪ್ರಾಣ ಭಿಕ್ಷೆ. ಆದರೂ ಸ್ನೇಹಕ್ಕಾಗಿ ಆತ ಕೈ ಮುಂದೆ ಮಾಡಿದಾಗ ಒಪ್ಪಿದ್ದೆ. ಕಾರಣ ಇಷ್ಟೇ. ಆತನ ಹರಭಕ್ತಿ. ವಿಶ್ರಾವಸುವಿನ ಮಗ ಎನ್ನುವುದಾಗಿ. ಆತನಲ್ಲಿ ಅಲ್ಲದಿದ್ದರೂ ಆತನ ತಂದೆಯಲ್ಲಿ ದೊಡ್ಡತನ ನೋಡಿ ಸ್ನೇಹಿತನಾಗಿದ್ದೆ.

 

ಆದರೆ ಆಗ ವಕ್ಕರಿಸಿದ ದುಂದುಭಿ. ಕೋಣನ ವೇಷದಲ್ಲಿ. ಕಿಷ್ಕಿಂಧೆಯ ಅರಮನೆಯ ಉಪ್ಪರಿಗೆಯ ಹಜಾರದಲ್ಲಿ ನನ್ನ ಹೆಂಡತಿಯರು, ಮಿತ್ರರು ಬಾಂಧವರೊಡನೆ ಆಮೊದ ಪ್ರಮೋದ ವಿಲಾಸದಲ್ಲಿದ್ದಾಗ ಬಂದು ಯುದ್ಧಕ್ಕೆ ಕರೆದಿದ್ದ. "ವರುಣ, ಹಿಮವಂತ ಸೂರ್ಯರು ತಿಳಿಸಿದ್ದಾರೆ,, ನನ್ನ ಪರಾಕ್ರಮಕ್ಕೆ ಲೋಕದಲ್ಲಿ ನೀನೋರ್ವನೇ ಸಾಟಿಯಂತೆ. ನೋಡೋಣ ಬಾ!!" ಎನ್ನುತ್ತಾ ಗುಟುರು ಹಾಕುತ್ತಾ ನನ್ನನ್ನು ಕೆಣಕಿದ್ದ ಆ ಮೂಢ. ಉಪ್ಪರಿಗೆಯಿಂದಿಳಿದು ಆತನೆದುರಿಗೆ ನಿಂತಾಗ, " ಹೆಂಡ ಕುಡಿದ ಕೋತಿಯಾಗಿದ್ದೀ ವಾಲಿ. ನಿನ್ನೊದನೆ ಕಾದಾಡುವುದು ಧರ್ಮವಲ್ಲ" ಎಂದಿದ್ದ ಆ ಅಧಮ. ಸುಧರ್ಮ ಸಭೆಯ ಅಧ್ಯಕ್ಷನ ಮಗನಿಗೆ ಹಸಿ ಮಾಂಸ ತಿನ್ನುವ ರಕ್ಕಸನ ಬಾಯಿಯಲ್ಲಿ ಧರ್ಮ ಬೋಧೆ. ನನ್ನ ರಕ್ತ ಕುದಿಯ ತೊಡಗಿತ್ತು. ಹೋಗಿ ಆತನ ಕೋಡು ಹಿಡಿದು ನೆಲಕ್ಕೆ ಬಡಿದು ಕೊಂದು ಹಾಕಿದ್ದೆ. ಮತ್ತವನ ಕಳೇಬರ ನೋಡಿದರೆ ಹೇಸಿಗೆಯಾಗಿತ್ತು. ಬಿಸಾಡಿದ್ದೆ.

 

ಹಾಗೆ ಬಿಸಾಡುವಾಗ ಆತನ ದೇಹದಿಂದ ರಕ್ತ ಬಿತ್ತಂತೆ ಋಷ್ಯಮೂಕದಲ್ಲಿರುವ ಮತಂಗ ಮುನಿಯ ಆಶ್ರಮದ ಅಂಗಳದಲ್ಲಿ. ಶಪಿಸಿದರಂತೆ. ವಾಲಿ ಇಲ್ಲಿಗೆ ಕಾಲಿಟ್ಟರೆ ಸಾಯಲಿ ಎಂದು. ಸಿಟ್ಟು ಬಂದಿತ್ತು ನನಗೆ. ಯಜ್ಞ ಯಾಗಾದಿಗಳನ್ನು ಹಾಳುಗೆಡಹುವ ರಕ್ಕಸನನ್ನು ಕೊಮ್ದಿದ್ದಕ್ಕೆ ಪರಿತೋಷಗೊಂಡು ಪಾರಿತೋಷಕವಾಗಿ ವರದಿಂದ ಅನುಗ್ರಹಿಸುವ ಬದಲು ಶಪಿಸಿದರಲ್ಲಾ ಎಂದು ಸಿಟ್ಟು ಬಂದಿತ್ತು ನನಗೆ. ಆದರೂ ಜಾಂಬವರು ಹಿರಿಯರೆಂದು ಅವರ ಮಾತಿಗೆ ಬೆಲೆ ಕೊಟ್ಟು ಪಂಪಾ ತೀರದಲ್ಲಿ ಅವರ ಕಾಲು ಹಿಡಿದು ಕ್ಷಮೆ ಕೇಳಿದ್ದೆ. ಕೊಡಲಿಲ್ಲ. ವಿಧಿಯ ಇಚ್ಛೆ ಎಂದು ಸುಮ್ಮನಾಗಿದ್ದೆ. ನಂತರದಲ್ಲಿ ಆ ದುಂದುಭಿಯ ಅಟ್ಟೆಯನ್ನು ಕಾಲ ಹೆಬ್ಬೆರಳಿನಿಂದ ಮೊಣಕಾಲ ಪರ್ಯಂತ ಎತ್ತಿ ನನ್ನ ಬಲ ಪ್ರದರ್ಶಿಸುತ್ತಿದ್ದೆ.

 

ಕೆಲವೇ ದಿನಗಳು ಕಳೆದಿತ್ತು. ಮಾಯಾವಿ ಬಂದು ಯುದ್ಧಕ್ಕೆ ಕರೆದ. ಆಗಲೂ ರಾತ್ರಿಯ ಕಾಲ. ಯುದ್ಧಕ್ಕೆ ಆಹ್ವಾನ ಬಂದ ಮೇಲೆ ಬಿಡಲಾದೀತೇ? ಖಂಡಿತಕ್ಕೂ ಇಲ್ಲ. ಹೊಡೆದು ಬಡಿದು ತುಳಿಯುತ್ತಿದ್ದೆ ಮಾಯಾವಿಯನ್ನು. ಮಾಯಕದಲ್ಲಿ ತಪ್ಪಿಸಿಕೊಂಡು ಓಡಿದ. ಶತ್ರು ಶೇಷ ಬಿಡಬಾರದು ಎಂದು ಬೆನ್ನಟ್ಟಿದೆ. ನನ್ನ ಬೆನ್ನ ಹಿಂದೆ ನನ್ನ ಬಾಲ. ಅದರ ಹಿಂದೆ ತಮ್ಮ ಸುಗ್ರೀವ. ಗುಹೆಯೊಂದನ್ನು ಹೊಕ್ಕ ಮಾಯಾವಿ. ಸುಗ್ರೀವ ಸ್ವಲ್ಪ ಸಾಧು ಸ್ವಭಾವದವ. ಅಲ್ಲ ಹಾಗೆ ನಟಿಸುತ್ತಿದ್ದವ. ನಾನದನ್ನು ತಿಳಿಯದೆಯೇ ಕತ್ತಲಿನಲ್ಲಿ ತನ್ನ ಶಕ್ತಿ ಹೆಚ್ಚ್ಚಿಸಿಕೊಳ್ಳುವ ರಕ್ಕಸನಿಂದ ಸುಗ್ರೀವನಿಗೆ ತೊಂದರೆಯಾಗಬಾರದು ಎಂದು ಆತನಿಗೆ ಗುಹೆಯ ಹೊರಕ್ಕೆ ನಿಲ್ಲಲು ಹೇಳಿ ಒಳಗೆ ಹೊಕ್ಕೆ. ಆಮೇಲೆ ಮಾಯಾವಿಯೊಡನೆ ಕಾದಾಟ. ಕಳೆದ ಕಾಲ ಎಷ್ಟೊ ಏನೋ ನನಗೆ ತಿಳಿಯಲಿಲ್ಲ. ಆತನನ್ನು ಕೊಂದು ಗುಹೆಯ ಬಾಗಿಲಿಗೆ ಬಂದರೆ ಬಂಡೆಯೊಂದು ಗುಹೆಯ ಬಾಗಿಲನ್ನು ಮುಚ್ಚಿದೆ. ಕನಲ್ಲಿನ ಗಧೆಯಿಂದ ಅದನ್ನು ಕುಟ್ಟಿ ಪುಡಿಮಾಡಿ ಹೊರಕ್ಕೆ ಬಂದೆ. ಸುಗ್ರೀವ ಕಾಣುತ್ತಿಲ್ಲ.

 

ಗಾಭರಿಗೊಂಡು ನಾನು ಆ ಗೊಂಡಾರಣ್ಯದಲ್ಲಿ ಹುಡುಕತೊಡಗಿದೆ. ಮತಿಭ್ರಾಂತನಾಗಿ ಹೋದೆ. ಅಂಗದ ನನ್ನ ತನುಜಾತನಿರಬಹುದು. ಆದರೆ ಸುಗ್ರೀವ ನನ್ನ ಸಹಜಾತ. ನಾನವನಿಗೆ ಅಣ್ಣ ಮಾತ್ರವಲ್ಲ. ತಂದೆಯಾಗಿದ್ದೆ. ತಾಯಿಯೂ ಆಗಿದ್ದೆ. ಎಳವೆಯಲ್ಲಿ ಮಾವ ದಧಿಮುಖನ ಮಧುವನದಲ್ಲಿ ಕ್ರೀಡಿಸಿ ಆಯಾಸಗೊಂಡ ಸುಗ್ರೀವನನ್ನು ತನ್ನ ಹೆಗಲಮೇಲೆ ಮಲಗಿಸಿಕೊಂಡು ನಾನು ಕೂರುತ್ತಿದ್ದೆ. ಆತ "ಅಣ್ಣಾ ಕಾಲು ನೋವು ನಡೆಯಲಾರೆ" ಎಂದು ಅತ್ತರೆ ಆತನನ್ನು ಎತ್ತಿ ಸಾಗುತ್ತಿದ್ದೆ. ಅಣ್ಣನಾಗಿದ್ದ ನನಗೆ ಸುಗ್ರೀವ ತಮ್ಮನಷ್ಟೇ ಅಲ್ಲದೆ ಕಣ್ಣ ಪಾಪೆಯಾಗಿದ್ದವ. ಆತ ಕಾಣುತ್ತಿಲ್ಲ. ಆತ ಕೂರದ ಕಿಷ್ಕಿಂಧೆಯ ಯುವರಾಜ ಪೀಠವನ್ನು ನಾನು ಕಲ್ಪಿಸಿಕೊಳ್ಳುವುದೂ ಅಶಕ್ಯ. ಹುಡುಕಿ ಹೈರಾಣಾದ ನಾನು ಕಿಷ್ಕಿಂಧೆಗೆ ಮರಳಿ ಸಕಲ ವಾನರ ಸಮೂಹವನ್ನು ಅಟ್ಟಿ ಸುಗ್ರೀವನ ಇರವನ್ನು ಹುಡುಕಿಸಿ ತಮ್ಮನನ್ನು ಮತ್ತೆ ಸೇರಬೇಕೆಂದು ಹೊರಟೆ.

 

ಕಿಷ್ಕಿಂಧೆಗೆ ಬಂದರೆ ನನ್ನನ್ನು ನೋಡಿ ಗೌರವದಿಂದ ಹೆದರುತ್ತಿದ್ದವರು ಭೂತ ಭಯಕ್ಕೆ ಒಳಗಾದವರಂತೆ ಹೆದರಿದ್ದರು. ಲಕ್ಷಿಸಲಿಲ್ಲ ನಾನು. ಬಂದು ನೋಡಿದರೆ, ಸುಗ್ರೀವ ಸಿಂಹಾಸನದ ಮೇಲೆ ಕುಳಿತಿದ್ದಾನೆ. ಮನದ ಆಳದಲ್ಲಿ ಎಲ್ಲಿಯೋ ಒಂದು ಸಣ್ಣ ಸಂತೋಷ ನನಗಾಗಿತ್ತಾ? ಗೊತ್ತಿಲ್ಲ. ಯಾಕೆಂದರೆ ತತ್-ಕ್ಷಣದಲ್ಲಿ ಸುಗ್ರೀವನ ಬಲಭಾಗದಲ್ಲಿ ಕುಳಿತಿದ್ದವಳು ನನ್ನ ತಾರೆ. ನಾನು ತಡ ಮಾಡಲಿಲ್ಲ. ರುಮೆಯನ್ನು ಕೂದಲನ್ನು ಹಿಡಿದು ಜಗ್ಗುತ್ತಾ ನನ್ನ ರಾಣೀವಾಸದಲ್ಲಿ ಎಸೆದು ಬಂದು ಸುಗ್ರೀವನನ್ನು ಎಡಗಾಲಿನಲ್ಲಿ ಒದ್ದಿದ್ದೆ. ತಡೆಯ ಬಂದಿದ್ದ ಜಾಂಬವ. ಹಿರಿಯನೆನ್ನುವ ಗರ್ವ ಇಳಿಯುವಂತೆ ಆತನನ್ನು ಹೊಡೆದಿದ್ದೆ.  ಓಡುತ್ತಿದ್ದ ಸುಗ್ರೀವನನ್ನು ಬೆನ್ನಟ್ಟಿದ್ದೆ. ಹೊಡೆಯುತ್ತಿದ್ದೆ. ಒದೆಯುತ್ತಿದ್ದೆ. ತುಳಿಯುತ್ತಿದ್ದೆ. ಮತ್ತೆ ನನ್ನ ಭಾಗ್ಯತಾರೆಯನ್ನು ತನ್ನೆಡೆಗೆಳೆದವನನ್ನು ಸುಮ್ಮನೇ ಬಿಡಲೆ. ತಾರೆ ನೆನಪಾಗಿ ಮನೆಗೆ ಬಂದಿದ್ದೆ. ಸುಗ್ರೀವನನ್ನು ನೀನೇಕೆ ಸೇರಿದೆ? ಎಂದು ನಾನು ಎಂದಿಗೂ ತಾರೆಯನ್ನು ಪ್ರಶ್ನಿಸಲಿಲ್ಲ. ನನಗೆ ಗೊತ್ತಿದೆ. ಜಾಂಬವ-ಸುಗ್ರೀವರ ಬೆಣ್ಣೆ ಮಾತುಗಳಿಗೆ ಮರುಳಾಗಿ ಅಥವಾ ಸುಗ್ರೀವನ ಷಡ್ಯಂತ್ರದ ಅರಿವಿದ್ದ ಆಕೆ ಅಂಗದನ ಭವಿತವ್ಯಕ್ಕಾಗಿ ಒಲ್ಲದ ಮನಸ್ಸಿನಿಂದಲೇ ಸುಗ್ರೀವನನ್ನು ಸೇರಿದ್ದಳು. ಪಾಪ ನನ್ನ ತಾರೆ. ಆ ಹೇಡಿಯನ್ನು ಸೇರಿ ಸುಖಿಸುವ ನೆಪದಲ್ಲಿ ಅದೆಷ್ಟು ಹೇಸಿಗೆ ಅನುಭವಿಸಿದ್ದಳೋ ಏನೋ.

 

ಮತ್ತೊಮ್ಮೆ ಸುಗ್ರೀವನನ್ನು ಬೆನ್ನಟ್ಟಿ ಸಾಗಿದ್ದೆ. ಆದರೆ ಮಾರ್ಗ ಮಧ್ಯದಲ್ಲಿ ಬಂದಿದ್ದ ಸೂರ್ಯ. ತನ್ನ ರಥಕ್ಕೆ ತನ್ನ ಮಗನಾಗಿದ್ದ ಸುಗ್ರೀವನನ್ನು ಹತ್ತಿಸಿಕೊಂಡ. ಎಲ್ಲೋ ಒಂದೆಡೆ ದುಂದುಭಿಯ ಮಾತು ಮೊರೆಯುತ್ತಿತ್ತು. ಸುಗ್ರೀವನನ್ನು ಮನಸೋ ಇಚ್ಚೆ ಥಳಿಸಿ ಸೇಡು ತೀರಿಕೊಳ್ಳಬೇಕು ಎಂದುಕೊಂಡಿದ್ದ  ನಾನು ಕೈ ಹಿಸುಕಿಕೊಂಡಿದ್ದೆ. ಆದರೆ ಅದು ಕೆಲವೇ ಕೆಲವು ದಿನ ಮಾತ್ರ. ಋಷ್ಯಮೂಕದಲ್ಲಿ ಸುಗ್ರೀವನ ಸುಟ್ಟ ಮುಖ ಕಂಡಿತ್ತು. ." ಎಲಾ ಹೇಡಿ!! ನನ್ನ ಶಾಪದ ಸಮಾಚಾರವನ್ನು ತಿಳಿದು, ಋಷ್ಯಮೂಕದಲ್ಲಿ ಅವಿತಿದ್ದೀಯಾ?"  ಎಂದು ಕಿರುಚಿದ್ದೆ. ಕೆಲವೇ ಹೊತ್ತಿನಲ್ಲಿ ಸುರ್ತಂಗದ ತುದಿಯಲ್ಲಿ ಬೆಳಕಿನ ಕಿರಣವೊಂದು ಕಂಡಂತೆ. ಮೋಡದ ಮರೆಯಲ್ಲಿ ಬೆಳ್ಳಿಯ ಬೆಳಗು ಕಂಡಂತೆ ತನಗೆ ಹೊಳಹೊಂದು ಕಂಡಿತ್ತು. ಗಹಗಹಿಸಿ ಅಟ್ಟಹಾಸಗೈದಿದ್ದೆ.

 

ಅಂದೇ ರಾತ್ರಿ ರುಮೆಯ ಜುಟ್ಟು ಹಿಡಿದು ದರ ದರನೆ ಎಳೆಯುತ್ತಾ ಅರಮನೆಯ ಮಾಳಿಗೆಗೆ ಕರೆದೊಯ್ದಿದ್ದೆ. ಬೇಕೆಂದೇ ಕರ್ಪೂರ-ಶ್ರೀಗಂಧದ ಮರಗಳಿಂದ ತಯಾರಿಸಿದ್ದ ಹಿಲಾಲುಗಳನ್ನು ಹಚ್ಚಿ ರುಮೆಯನ್ನು ಭೋಗಿಸಿದ್ದೆ. ಉಳಿದ ರಾಣಿಯರಂತೆ ರುಮೆ ಸಾರ್ಥಕ್ಯವನ್ನೋ ಧನ್ಯತೆಯನ್ನೋ ಅನುಭವಿಸಲಿಲ್ಲ. ಅನುಭವಿಸಬಾರದು. ತನ್ನ ಗಂಡ ಅವನ ಅತ್ತಿಗೆಯನ್ನು ಸೇರಿದ್ದನ್ನು ಆಕೆ ತಡೆಯಬೇಕಿತ್ತು. ಗೋಲಭನಿಂದ ಬಿಡಿಸಿ ತಂದಿದ್ದರ ಬಗೆಗೆ ಕ್ರುತಜ್ಞತೆ ಹೊಂದಿ ಅಕಾರ್ಯ ಘಟಿಸದಂತೆ ನೋಡಿಕೊಳ್ಳಬೇಕಿತ್ತು. ಹೋಗಲಿ. ಸಣ್ಣ ಸವತಿ ಮಾತ್ಸರ್ಯವಾದರೂ ಮೂಡಿ ತಾರೆಯನ್ನು ಸುಗ್ರೀವ ಸೇರದಂತೆ ತಡೆಯಬೇಕಿತ್ತು. ಮಾಡಲಿಲ್ಲ ಅವಳು. ದುಃಖಿಸಬೇಕು ಆಕೆ. ದುಃಖದಿಂದ ಬಿಕ್ಕಳಿಸುತ್ತಿದ್ದಳು. ರುಮೆಯ ಬಿಕ್ಕಳಿಕೆಗಳ ನಡುವೆ ಋಷ್ಯಮೂಕದತ್ತ ನೋಡಿದರೆ ಮ್ಲಾನವದನನಾಗಿದ್ದ ಸುಗ್ರೀವ ಕಂಡಿದ್ದ. ಗಹಗಹಿಸಿ ನಕ್ಕಿದ್ದೆ ನಾನು. ಮರುದಿನ ನಾನು ನಿರೀಕ್ಷಿಸಿದ್ದೇ ಆಗಿತ್ತು, ನಾನು ಋಷ್ಯಮೂಕದ ಕಡೆ ಹೋದರೆ ಸಾಯುತ್ತೇನೆ. ಅದಕ್ಕೇ ಸುಗ್ರೀವ ತಾನೇ ಈಕಡೆ ಬರುವಂತೆ ಮಾಡಿದ್ದೇನೆ. ನನ್ನೆಣಿಕೆಯಂತೆಯೇ ಆಗಿತ್ತು. ಬಂದಿದ್ದ ಸುಗ್ರೀವ. ಬಡಿದಿದ್ದೆ ಸಾಯುವಂತೆ, ಆದರೆ ಸಾಯದಂತೆ. ಅಣ್ಣನಾಗಿ ತಮ್ಮನನ್ನು ಸಾಯಿಸಿದ ಎನ್ನುವ ಅಪಕೀರ್ತಿ ಬೇಡವಾಗಿ. ಶತಮಾನಕ್ಕೊ ದಶಮಾನಕ್ಕೋ ಒಮ್ಮೆ ಈ ಘಟನೆ ಪುನರಾವರ್ತಿತವಾಗುತ್ತಿತ್ತು. ಇಂದೂ ಆಯಿತು. ಆದರೆ ಇಂದು ಬಂದ ಸುಗ್ರೀವ ಎಂದಿನಂತಿರಲಿಲ್ಲ. ಸ್ವಲ್ಪ ಧೈರ್ಯ ಬಂದಿದೆ. ವಾಲಿಯ ತಮ್ಮನಲ್ಲವೇ? ಬಾರದಿದ್ದೀತೇ?

 

ಒಮ್ಮೆ ಸುಗ್ರೀವ ನನ್ನ ಕಾಲು ಹಿಡಿದು ತಪ್ಪಾಯಿತೆಂದು ಬೇಡಿಕೊಳ್ಳಲಿ ಸಾಕು. ಕಿಷ್ಕಿಂಧೆಯ ಪಟ್ಟ ಕಟ್ಟಿ ವಾನಪ್ರಸ್ಥಕ್ಕೆ ಸಾಗುತ್ತೇನೆ. ಅಲ್ಲ. ಸೃಷ್ಟಿಕರ್ತನನ್ನು ಕರೆಸಿ ಸುಗ್ರೀವನಿಗೊಂದು ಲೋಕದ ನಿರ್ಮಾಣ ಮಾಡುತ್ತೇನೆ. ಅಲ್ಲಿಗೆ ಸುಗ್ರೀವನನ್ನು ಅಧಿಪತಿಯಾಗಿಸುತ್ತೇನೆ. ಆದರೆ ಸುಗ್ರೀವ ಮಣಿದು ಕ್ಷಮೆ ಯಾಚಿಸಬೇಕು. ಅಷ್ಟಾದರಾಯ್ತು.

 

ಮತ್ತೆ ತಾರೆಯ ಮುದ್ದುಮುಖ ಕರೆಯುತ್ತಿದೆ. ದಣಿದಿರುವ ಆಕೆಯನ್ನು ನನ್ನ ಸುಖಕ್ಕಾಗಿ ಮತ್ತೆ ಕರೆಯಲಾರೆ. ಹಾಗೆ ತಬ್ಬಿ ಮಲಗುತ್ತೇನೆ.

No comments:

Post a Comment