Sunday, May 30, 2021

ವಾಲಿಪ್ರಕರಣ ಅಧ್ಯಾಯ-7 ವಾಲಿಪ್ರಶ್ನಾವಲೀ

 

(ಈತನಕ:ವಾಲಿಯನ್ನು ಒಪ್ಪಿಸಿ ಸುಗ್ರೀವ ರುಮೆಯರಿಗೆ ಕ್ಷಮಾದಾನ ಕೊಡಿಸಬೇಕು ಎಂದುಕೊಂಡಿರುವ ತಾರೆ, ಸುಗ್ರೀವ ಬಂದು ಕಾಲು ಹಿಡಿದರೆ ಕ್ಷಮಿಸಬೇಕು ಇಲ್ಲವಾದರೆ ಶಿಕ್ಷಿಸುತ್ತಲೇ ಇರಬೇಕು ಎನ್ನುವ ಮನಃಸ್ಥಿಯ ವಾಲಿ. ಇತ್ತ ನಡೆದ ಘಟನೆಗಳಿಂದ,, ವಾಲಿಯ ಹಿಂಸೆಯಿಂದ ಜರ್ಝರಿತಳಾಗಿ ದುಃಖಿಸುತ್ತಿರುವ ರುಮೆ. ರಾಮನ ನಿರ್ದೇಶನದಂತೆ ಸಪ್ತ ಜನಾಶ್ರಮದ ಮಾರ್ಗವಾಗಿ ತನ್ನ ಜನ್ಮದಿಂದ ಇಲ್ಲಿಯ ತನಕದ ಜೀವನವನ್ನು ಮೆಲುಕು ಹಾಕುತ್ತಾ ಕಿಷ್ಕಿಂಧೆಯನ್ನು ಪ್ರವೇಶಿಸಿರುವ ಸುಗ್ರೀವ, ವಾಲಿಯ ಶನ ಕಕ್ಷೆಯತ್ತ ಸಾಗಿದ್ದಾನೆ ಸುಗ್ರೀವನ ಪಂಥಾಹ್ವಾನವನ್ನು ಸ್ವೀಕರಿಸಿ ಯುದ್ಧಕ್ಕೆ ಹೊರಟ ವಾಲಿಯನ್ನು ತಾರೆ ತಡೆಯುತ್ತಾಳೆ. ರಾಮ ಸುಗ್ರೀವನಿಗೆ ಅಭಯದಾನ ಮಾಡಿದ ವಿಷಯ ತಿಳಿಸುತ್ತಾಳೆ. ರಾಮನ ಹಿರಿಮೆಯನ್ನು ತಿಳಿಸುತ್ತಾಳೆ. ಆಗ ವಾಲಿ ಒಂದೋ ಮೋಕ್ಷ ಇಲ್ಲವೇ ಸುಗ್ರೀವನ ಸಾವು ಎಂದು ತಾರೆಗೆ ಸಾರಿ ಮುಂದುವರೆಯುತ್ತಾನೆ. ಸುಗ್ರೀವನೊಂದಿಗೆ ನಡೆದ ಕೂಟಯುದ್ಧದಲ್ಲಿ ವಾಲಿಯ ಕೈ ಮೇಲಾಗುತ್ತಿದ್ದ ಹೊತ್ತಿನಲ್ಲಿ ಆತನ ಎದೆಯ ಎಡಭಾಗಕ್ಕೆ ಬಾಣವೊಂದು ಪ್ರವೇಶಿಸುತ್ತದೆ. ಆಘಾತಕ್ಕೆ ಕುಸಿದು ಬಿದ್ದ ವಾಲಿಯ ಕಣ್ಣಿಗೆ ಆಕೃತಿಯೊಂದು ಕಾಣಿಸುತ್ತದೆ.)

 

ಕಂಡ ಆಕೃತಿ ಮುಂದೆ ಮುಂದೆ ಬರುತ್ತಿದೆ. ಆಜಾನು ಬಾಹುವಾದ ವ್ಯಕ್ತಿಯೊಬ್ಬ ನಾರು ಮಡಿಯನ್ನುಟ್ಟು, ಬಿಲ್ಲನ್ನು ಹಿಡಿದು ಬತ್ತಳಿಕೆಯನ್ನು ತೊಟ್ಟು ಮುಂದೆ ಮುಂದೆ ಬರುತ್ತಿದೆ. ಹತ್ತಿರ ಬಂದಾಗ ಆಕೃತಿಯ ಸುತ್ತ ಒಂದು ವಿಶೇಷವಾದ ಪ್ರಭಾವಳಿಯೂ ಅವ್ಯಕ್ತವಾಗಿ ಭಾಸವಾಗುತ್ತಿದೆ. ಇಲ್ಲವಾದರೆ, ಮುಖದಲ್ಲಿನ ಪ್ರಸನ್ನತೆ, ಸ್ಥಿತ ಪ್ರಜ್ಞ ಭಾವ, ದೈವೀ ತೇಜಸ್ಸು ಇದನ್ನೆಲ್ಲವನ್ನೂ ರಾತ್ರಿಯ ಕಾಲದ ಕತ್ತಲಿನಲ್ಲಿ ವಾಲಿ ಅದೆಂತು ಗುರುತಿಸಲು ಸಾಧ್ಯವಿತ್ತು. ಕಂಡೊಡನೆ ವಾಲಿಗೆ ಹಿಂದೊಮ್ಮೆ ಇದೇ ಪ್ರಭಾವಳಿಯನ್ನು ಇದೇ ತೇಜಸ್ಸನ್ನು ಕಂಡಂತೆ ಅನುಭವವಾಗುತ್ತಿದೆ. ಯಾರಿರಬಹುದು? ಊರ್ಧ್ವಲೋಕದ ದೇವತೆಯೇ? ಗಂಧರ್ವನೇ? ಯಕ್ಷನೇ? ಕಿನ್ನರನೇ? ಕಿಂಪುರುಷನೇ? ಅಥವಾ ಕಾಮರೂಪದಿಂದ ನಿಜ ರೂಪ ಮರೆಸಿ ಬಂದ ರಾಕ್ಷಸನೇ? ಅಥವಾ ತಪೋ ತೇಜದಿಂದ ಕಂಗೊಳಿಸುವ ಋಷಿಯೇ? ಎಂಬೆಲ್ಲ ಗೊಂದಲಗಳು ಮನಸ್ಸಿನಲ್ಲಿ ಮಿಂಚಂತೆ ಮೂಡಿ ಮರೆಯಾಗುತ್ತದೆ.ಆದರೆ ದೇಹಕ್ಕಾದ ಘಾತದ ಮುಂದೆ ಅವೆಲ್ಲವೂ ಮರೆಯಾಗೆ ವಾಲಿಯ ಎದೆಯಲ್ಲಿ ಉರಿ ತಾಳಲಾಗದೇ "ಅಯ್ಯೋ!! ಹಾ!! ಎಂದು ಜೋರಾಗಿ ಕಿರುಚಿದ ವಾಲಿ.

 

ಒಮ್ಮೆ ಎದ್ದು ನಿಂತು ಎದುರಿಗೆ ಬಂದು ನಿಂತ ವ್ಯಕ್ತಿಯನ್ನು ಯುದ್ಧಕ್ಕೆ ಕರೆಯಲು ಯೋಚಿಸಿದ. ಎದ್ದು ನಿಲ್ಲಲು ಸಾಧ್ಯವಾಗಲಿಲ್ಲ. ದೇಹಕ್ಕಾದ ನೋವೇ ಅಥವಾ ಮನಸ್ಸಿಗಾದ ಆಘಾತವೇ ಎಂದು ಕ್ಷಣದಲ್ಲಿ ತುಸು ಗೊಂದಲಕ್ಕೊಳಗಾದ ವಾಲಿ. ತತ್ ಕ್ಷಣ ತಾರೆ ಆಡಿದ ಮಾತುಗಳು ನೆನಪಾದವು. ಎದುರಿಗಿದ್ದ ಆಕೃತಿ ರಾಮನೇ ಸರಿ ಎಂದು ವಾಲಿ ಗ್ರಹಿಸಿದ. ಒಮ್ಮೆ ದೀರ್ಘವಾದ ಉಸಿರನ್ನು ಎಳೆದುಕೊಂಡು ಮಾತಾಡತೊಡಗಿದ.

 

"ಅಯ್ಯಾ ಶ್ರೀರಾಮಚಂದ್ರ, ಏಕೆ ಇಂಥಾ ಕೆಲಸವನ್ನು ಮಾಡಿದೆ? ಸುಗ್ರೀವ ಮತ್ತು ನನ್ನ ನಡುವಿನ ಕೂಟ ಕಾಳಗದಲ್ಲಿ ನೀನೇಕೆ ಕೈ ಹಾಕಿದೆ? ಸೂರ್ಯವಂಶೀಯನಾಗಿ ವಿಶ್ವಾಮಿತ್ರ ವಸಿಷ್ಠರ ಶಿಷ್ಯನಾಗಿ ನಿನಗಿದು ಶೋಭೆಯೇ? ಅಹಲ್ಯೆಯನ್ನು ಉದ್ಧರಿಸಿದವನಂತೆ ನೀನು. ಪರಾಙ್ಮುಖ ವಧೆಯ ಪ್ರಕಾರದಿಂದ ನನ್ನ ಮೇಲೆ ಅದೇಕೆ ಬಾಣವನ್ನು ಪ್ರಯೋಗಿಸಿದೆ? ನಿನಗೂ ನನಗೂ ಯಾವುದೇ ರೀತಿಯ ವೈರವಿಲ್ಲ. ನಿಮ್ಮ ಅಯೋಧ್ಯೆಯ ಮೇಲೆ ನಾನು ಸದಾಕಾಲ ಗೌರವ ಭಾವವನ್ನಿಟ್ಟುಕೊಂಡೇ ಬದುಕಿದವ. ನಿನ್ನ ಮಾಂಡಲಿಕ ಸಾಮಂತರ ಮೇಲೆ ಎಂದೂ ಬಲಪ್ರಯೋಗಕ್ಕೆ ಮುಂದಾಗಲಿಲ್ಲ.ನೀನು ಅಭಯವನ್ನು ಕೊಟ್ಟ ಯಾರ ಮೇಲೂ ನಾನು ಅತಿಕ್ರಮಣಕ್ಕೆ ಮುಂದಾಗಲಿಲ್ಲ. ನಿಮ್ಮ ಅಯೋಧ್ಯೆಯ ಸಂಪತ್ತಿಗೋ ಅಥವಾ ಅಲ್ಲಿನ ಹೆಣ್ಣು ಮಕ್ಕಳ ಮೇಲೋ ಕಣ್ಣು ಹಾಕಲಿಲ್ಲ ನಾನು. ಆದರೂ ನೀನೇಕೆ ಹೀಗೆ ಮಾಡಿದೆ?ನನ್ನ ಮೇಲಿನ ಅಧಿಕಾರಂದಿಂದ ಹೀಗೆ ವರ್ತಿಸಲು, ನಾನೇನು ನಿನ್ನ ಅಧೀನ ಅರಸನಲ್ಲ. ಸರ್ವ ತಂತ್ರ ಸ್ವತಂತ್ರ.ಅರಸು ಮಕ್ಕಳು ಮೃಗಬೇಟೆಯನ್ನು ಆಡಬಹುದು. ಆದರೆ ನಾವು ಗೋಲಾಂಗೂಲಗಳು. ಮೃಗಗಳಲ್ಲ. ಇನ್ನು ಸ್ವಭಾವ ಪ್ರಕಾರದಿಂದ ನಮ್ಮನ್ನು ಮೃಗ ಅಂತ ಭಾವಿಸಿದರೂ ಬೇಟೆಗೆ ಯೋಗ್ಯವಾದ ಮೃಗಗಳಲ್ಲ ನಾವು. ಅರಸು ಮಕ್ಕಳಿಗೆ ಮೃಗಮಾಂಸ ಭೋಜನ ವರ್ಜ್ಯವಲ್ಲ.

 

ಐದು ಉಗುರುಗಳಿರುವ ಖಡ್ಗಮೃಗ, ಮುಳ್ಳುಹಂದಿ, ಉಡ, ಮೊಲ ಮತ್ತು ಆಮೆ ಐದು ಜೀವಿಗಳು ಮಾತ್ರ ಕ್ಷತ್ರಿಯರಿಗೂ ಬ್ರಾಹ್ಮಣರಿಗೂ ಭೋಜನಕ್ಕೆ ಅರ್ಹವಾಗಿವೆ. ಇದರಲ್ಲಿ ಗೋಲಾಂಗೂಲ ವಾನರರ ಹೆಸರಿಲ್ಲ. ಇನ್ನು ಚರ್ಮ, ಕೂದಲು ಮತ್ತು ಮೂಳೆಗಳಿಗಾಗಿ ಕೊಂದೆಯೋ ಎಂದರೆ ನಮ್ಮ ಕೂದಲು, ಚರ್ಮ ಮೂಳೆಗಳು ಶಾಸ್ತ್ರಪ್ರಕಾರವಾಗಿ ನಿಷಿದ್ಧ. ಹಾಗಾಗಿ ಜಿಂಕೆಯ ಚರ್ಮವನ್ನು ಹೆಂಡತಿಗೆ ಕೊಡಲಾಗಲಿಲ್ಲ ಎಂದು ಮಂಗನ ಚರ್ಮ ಕೊಡುವುದಕ್ಕೆ ನೀನು ಮುಂದಾಗಲಿಲ್ಲ.

 

"ಹುಂ!! ಸಾಮ್ರಾಜ್ಯಕ್ಕೆ ಸಲ್ಲದೇ ಹೊರಬಿದ್ದವ ನೀನು. ನನ್ನಿಂದ ಪೆಟ್ಟು ತಿಂದು ಹೊರಹಾಕಲ್ಪಟ್ಟವ ಸುಗ್ರೀವ. ಹೆಂಡತಿಯನ್ನು ಕಾಪಾಡಿಕೊಳ್ಳಲಾಗದ ನೀನು, ಹೆಂಡತಿಯನ್ನು ಬಿಟ್ಟು ಬಂದ ಸುಗ್ರೀವ. ಎಂಥಾ ಜೋಡಿ ಮಹಾರಾಯ ನಿಮ್ಮದ್ದು. ವಿಧಿ ಬೆಸೆದ ಜೋಡಿ. ವಾಲಿಯನ್ನು ಕೊಲ್ಲುವುದಕ್ಕಾಗಿ ಸಮಾನ ಸ್ಕಂದರಾದ ಸಮಾನ ದುಃಖಿಗಳಾದ ನೀವಿಬ್ಬರೂ ಒಂದಾದಿರಿ. ನಿನ್ನ ವಿಚಾರದಲ್ಲಿ ಔದಾಸೀನ್ಯವನ್ನು ತೋರಿದ್ದ ವಾಲಿಗೆ ರೀತಿ ಮೋಸದಿಂದ ಹೊಡೆದು ಕೊಂದೆಯಲ್ಲ. ನೀನು ಪಾಪಿಯಲ್ಲದೇ ಮತ್ತೇನು?"

 

"ಸುಗ್ರೀವನಿಗೂ ನಿನಗೂ ಅಗ್ನಿಸಾಕ್ಷಿಯಾಗಿ ಸ್ನೇಹವಾಯಿತಂತೆ. ಸುಗ್ರೀವನಿಗೆ ಆತನ ಹೆಂಡತಿಯನ್ನು ನೀನು ದೊರಕಿಸಿಕೊಡಬೇಕು; ಆತ ನಿನ್ನ ಹೆಂಡತಿಯಾದ ಸೀತಾನ್ವೇಷಣೆಗೆ ಸಹಾಯ ಮಾಡಬೇಕು ಎನ್ನುವಂತೆ ಪರಸ್ಪರ ವಚನ ಕೊಟ್ಟಿರಂತೆ. ಆದರೆ ಪರಸ್ಪರ ನಂಬಿಕೆಯ ಮೇಲೆಯೇ ಯಾವುದೇ ಅಪೇಕ್ಷೆಯಿಲ್ಲದೆ ಪರಿಶುದ್ಧ ಮನಸ್ಸಿನಿಂದ ಸ್ನೇಹವಾಗಬೇಕು. ನಿಮ್ಮಲ್ಲಿ ಹಾಗಾಗಲಿಲ್ಲ. ಒಂದು ರೀತಿಯ ಒಪ್ಪಂದ ಮಾತ್ರ ನಡೆದಿದೆ. ನಿನಗೆ ನಿನ್ನ ಹೆಂಡತಿಯನ್ನು ಹುಡುಕಲು ಸಹಾಯವಾಗಲು ತನ್ನ ಹೆಂಡತಿಯಿಂದ ದೂರಾದ ಸುಗ್ರೀವನೊಡನೆ ಒಪ್ಪಂದ ಮಾಡಿಕೊಂಡು ನನ್ನನ್ನು ವಿನಾ ಕಾರಣ ಕೊಂದೆ. ನನ್ನಲ್ಲಿ ಒಂದು ಮಾತನ್ನು ಹೇಳಿದ್ದರೆ ಸಾಕಿತ್ತು. ಲಂಕೇಶ್ವರನನ್ನು ಆತನ ನಗರಿ ಲಂಕೆಯ ಸಹಿತವಾಗಿ ನನ್ನ ಬಾಲಕ್ಕೆ ಕಟ್ಟಿ ಎಳೆದು ತಂದು ನಿನ್ನ ಮುಂದಿಡುತ್ತಿದ್ದೆ. ಅಲ್ಲವಾದರೆ ನನ್ನ ಬಾಲಕ ಅಂಗದನನ್ನು ಕಳುಹಿಸಿ ರಾವಣನಿಗೆ ಬುದ್ಧಿ ಹೇಳಿಸಿ, ಸಾಕಾಗದಿದ್ದರೆ ಅವನಿಗೆ ನಾಲ್ಕು ಬಡಿಸಿ ನಿನ್ನ ಮುಂದೆ ಸೀತೆಯನ್ನು ತಂದಿರಿಸುತ್ತಿದ್ದೆ"

 

"ಇಕ್ಷ್ವಾಕು ವಂಶದ ಅರಸರು ಧರ್ಮಭೀರುಗಳಂತೆ. ಹಿಂದೆ ನನ್ನಪ್ಪ ಒಂದು ಪಾರಿವಾಳವಾಗಿ, ಅಗ್ನಿ ಗಿಡುಗನಾಗಿ ನಿನ್ನ ವಂಶದ ಹಿರಿಯ ಶಿಬಿ ಚಕ್ರವರ್ತಿಯನ್ನು ಪರೀಕ್ಷಿಸಿದಾಗ ಪಾರಿವಾಳಕ್ಕೆ ಅಭಯವನ್ನು ಕೊಟ್ಟು ಹಸಿದ ಗಿಡುಗಕ್ಕೆ ಆಹಾರವಾಗಿ ತನ್ನ ತೊಡೆಯ ಮಾಂಸವನ್ನೇ ಕೊಟ್ಟವನಂತೆ ಆತ. ಬೇಟೆಯೂ ಬದುಕಬೇಕು, ಹಸಿದವನೂ ಉಣ್ಣಬೇಕು ಎನ್ನುವ ನೀತಿ ಅದು. ಬಹುಜನ ಹಿತಾಯ ಬಹುಜನ ಸುಖಾಯ ಎನ್ನುವ ನೀತಿ ಅದು. ಅದಷ್ಟೇ ಅಲ್ಲ. ಕರಂಧಮನೆನ್ನುವ ಅರಸ ಮಕ್ಕಳಿಲ್ಲದ ತನಗೆ ಪಿತೃ ಶಾಪದಿಂದ ಮಕ್ಕಳಾಗಲಿಲ್ಲವೆನ್ನುವುದನ್ನು ತಿಳಿದು ಅವರ ತೃಪ್ತಿಗಾಗಿ ಜಿಂಕೆ ಮಾಂಸವನ್ನರ್ಪಿಸಬೇಕೆಂದು ತಿಳಿದು ಬೇಟೆಗೆ ಹೋದಾಗ, ಜಿಂಕೆಗಳು ತಾವಾಗಿ ನಾ ಮುಂದು ತಾ ಮುಂದು ಎಂದು ಸಮರ್ಪಿಸಿಕೊಳ್ಳಲು ಬಂದುವಂತೆ. ಆದರೆ, ಕರುಣೆ ತಳೆದ ಆತ ಕೊಲ್ಲುವ ಅಭೀಪ್ಸೆಯನ್ನು ತೊರೆದು ತಪಶ್ಚರ್ಯೆಯಿಂದ ಅವಿಕ್ಷಿತನನ್ನು ಪಡೆದನಂತೆ. ಗಂಗೆಯನ್ನೇ ಭುವಿಗಿಳಿಸಿದ ಭಗೀರಥ, ಮತ್ತೊಬ್ಬನಿಗೆ ನಿಷ್ಚಯವಾಗಿದ್ದ ವೈಶ್ಯ ಕನ್ಯೆಯನ್ನು ಮದುವೆಯಾಗಿದ್ದರಿಂದ ವರ್ಣ ತ್ಯಜಿಸಬೇಕಾಗಿ ಬಂದಾಗ ಅಂತೆಯೇ ಮಾಡಿದ ನಾಭಾಗ, ನಂತರದಲ್ಲಿ ಮಗನಿಂದ ರಾಜ್ಯ ದಕ್ಕಿದರೂ ಅದನ್ನು ಸ್ವೀಕರಿಸಲಿಲ್ಲವಂತೆ. ಇಂಥ ಎಷ್ಟೊ ಜನ ಅರಸರು ಆಗಿಹೋಗಿದ್ದಾರೆ ಸೂರ್ಯವಂಶದಲ್ಲಿ. ಅಂತರಿಂದ್ರಿಯ ನಿಗ್ರಹ, ಬಹಿರಿಂದ್ರಿಯ ನಿಗ್ರಹ, ಕ್ಷಮೆ, ಧೈರ್ಯ,ಸತ್ಯನಿಷ್ಠೆ,ಅನಾಸ್ತೇಯ,ದುಷ್ಟ ಶಿಕ್ಷಣ, ಶುಚಿತ್ವ ಮೊದಲಾದ ಗುಣಗಳ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟ ಅರಸರು ಬಹುಷಃ ನಿನಗೆ ಆದರ್ಶವಾಗಲಿಲ್ಲ. ಗುರುವಿಗೇ ಶಾಪವನ್ನು ಕೊಡಲು ಮುಂದಾಗಿದ್ದ ಮಿತ್ರಸಹ, ಮಕ್ಕಳನ್ನು ಮುಳುಗಿಸಿ ಆನಂದ ಪಡೆಯುತ್ತಿದ್ದ ಅಸಮಂಜಸರು ಆದರ್ಶವಾದರೇ ನಿನಗೆ? ನಿನ್ನಪ್ಪನೂ ಹೀಗೆಯೇ ಮರೆಯಲ್ಲಿ ನಿಂತು ಶ್ರವಣನೆನ್ನುವ ಬ್ರಾಹ್ಮಣಕುಮಾರನನ್ನು ಕೊಂದು ಶಪಿಸಲ್ಪಟ್ಟಿದ್ದನಂತೆ. ಆದರೆ ಮಹಾತ್ಮ ಅದಕ್ಕೆ ಪಶ್ಚಾತ್ತಾಪ ಪಟ್ಟಿದ್ದ. "

 

"ನನ್ನ ಹೆಂಡತಿ ತಾರೆ ನನ್ನನ್ನು ತಡೆದು ಎಚ್ಚರಿಸಿದ್ದಳು. ಹಾಗೆ ಎಚ್ಚರಿಸುವಾಗ ನಿನ್ನನ್ನು ಬಹುವಾಗಿ ಕೊಂಡಾಡಿದ್ದಳು. ನಿನ್ನ ಬಗ್ಗೆ ಇನ್ನಿತರರಿಂದಲೂ ನಾನು ಮೊದಲೇ ಕೇಳಿ ತಿಳಿದಿದ್ದೆ, ನಿನ್ನ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದ್ದೆ. ಆದರೆ ಅವರೆಲ್ಲ ಸುಳ್ಳು ಹೇಳಿದ್ದರೇ ಹಾಗಾದರೆ? ಅದಿಲ್ಲವಾದರೆ, ಕಾಮಪೀಡುತನಾಗಿ ಅರ್ಥ ಧರ್ಮಗಳಲ್ಲಿ ಚಿತ್ತವನ್ನಿಡದೇ ಕೇವಲ ಕಾಮಕ್ಕಾಗಿ, ಅದನ್ನು ತೀರಿಸುವ ಹೆಣ್ಣಿಗಾಗಿ ನನ್ನನ್ನು ಮರೆಯಲ್ಲಿ ನಿಂತು ಕೊಲ್ಲುತ್ತಿರಲಿಲ್ಲ. ರಾಜನ ಗುಣಗಳಾದ ದಂಡನೀತಿ, ವಿನಯ ನಿಗ್ರಹ ಅನುಗ್ರಹಗಳಿಂದ ದೂರಾಗಿ ಹೀನಕಾರ್ಯ ಮಾಡುತ್ತಿರಲಿಲ್ಲ. ಧರ್ಮ- ಶಾಸ್ತ್ರಗಳನ್ನು ತಿಳಿದೂ ವನಚರಿಯಾದ ನನ್ನನ್ನು ರೀತಿ ಕೊಲ್ಲುತ್ತಿರಲಿಲ್ಲ. ಕರ್ತವ್ಯಾಕರ್ತವ್ಯದ ವಿಚಾರದಲ್ಲಿ ವಿವೇಕವನ್ನು ಮರೆಯುತ್ತಿರಲಿಲ್ಲ. ಗಂಡನೊಬ್ಬ ಮನೆಯ ಮುಂಭಾಗದಲ್ಲಿ ಸತ್ಕರ್ಮ ನಿರತನಾದಾಗ, ಹಿತ್ತಲಿನಲ್ಲಿ ಹೆಂಡತಿಯಾದವಳು ವ್ಯಭಿಚಾರವನ್ನು ಮಾಡುವಂತೆ ನನಗೆ ಬಾಣವನ್ನು ಹೊಡೆದೆಯಲ್ಲ. ಯಾಕೆ? ಸೂರ್ಯವಂಶದ ಸತ್ಕೀರ್ತಿಗೆ ಅದೇಕೆ ಕಳಂಕವನ್ನು ತಂದೆ? ಮತ್ತೇರಿ ಮಲಗಿದ್ದವನನ್ನು ವಿಷಸರ್ಪವೊಂದು ಮೋಸದಿಂದ ಕಚ್ಚಿ ಕೊಲ್ಲುವಂತೆ ನನ್ನ ಮೇಲೇಕೆ ಬಲಪ್ರಯೋಗ ಮಾಡಿದೆ? ಯಾವ ಗುರುಗಳಿಂದ ಹೇಡಿ ವಿದ್ಯೆಯನ್ನು ಕಲಿತೆ? ನೀನು ಹಿಂದೆ ಸೇವಿಸಿದ ವಸಿಷ್ಠ, ವಿಶ್ವಾಮಿತ್ರ, ಭರದ್ವಾಜ, ಸತ್ಯಕಾಮ ಜಾಬಾಲಿ, ಗೌತಮ, ಮತಂಗ ಮೊದಲಾದ ಋಷಿಗಳಿಗೆ ಅವಮಾನ ಮಾಡುವ ಲಂಡಿ ವೃತ್ತಿಯನ್ನದೇಕೆ ಕೈಗೊಂಡೆ? ನಿನ್ನನ್ನು ಸಂಗಡಿಸಿದ ಅಥವಾ ಕೀರ್ತಿಸಿದ ಸತ್ಪುರುಷರೆಲ್ಲರೂ ನಿನ್ನ ಕುರಿತಾಗಿ ಖೇದ ವ್ಯಕ್ತಪಡಿಸುವಂತೆ ನೀನೇಕೆ ವರ್ತಿಸಿದೆ? ಉತ್ತರಿಸು ರಾಮಾ ಉತ್ತರಿಸು"

 

"ರಾಜನಾಗಿ ನೀನು ರಾಜಧರ್ಮವನ್ನು ತ್ಯಜಿಸಿರಬಹುದು. ಆದರೆ ವಾಲಿ ತ್ಯಜಿಸಲಿಲ್ಲ. ಕಿಷ್ಕಿಂಧೆಯಲ್ಲಿ ನಡೆದ ತಪ್ಪಿನ ಕುರಿತಾಗಿ ವಿಚಾರಿಸುವ ಬಾಧ್ಯತೆ ಮತ್ತು ಅಧಿಕಾರ ಎರಡೂ ನನ್ನ ಪಾಲಿಗಿದೆ. ರಾಜನನ್ನು ಕೊಂದವ, ಬ್ರಾಹ್ಮಣನನ್ನು ಸಂಹರಿಸಿದವ, ಗುರುಪತ್ನಿಯನ್ನು ಭೋಗಿಸಿದವ ಇವರೆಲ್ಲ ನರಕಕ್ಕೆ ಹೋಗುತ್ತಾರೆ ಎನ್ನುತ್ತದೆ ಧರ್ಮಶಾಸ್ತ್ರ. ಕಿಷ್ಕಿಂಧೆಯ ಪ್ರಭುವಾಗಿ ನೀನು ಮಾಡಿದ ಎಲ್ಲ ತಪ್ಪುಗಳನ್ನು ವಿಚಾರಿಸಬೇಕೆಂದು ಎಡಗೈನಲ್ಲಿ ಬಾನವನ್ನು ತಡೆದು ಪ್ರಶ್ನಿಸುತ್ತಿದ್ದೇನೆ. ಯಾಕೆ ಹೀಗೆ ಮಾಡಿದೆ? ನಾನು ನಿನ್ನ ಮೇಲೆ ಅಧಿಕಾರಯುತವಾಗಿ ಕೇಳುವುದು ನಿನಗೋ ನಿನ್ನ ಕೀರ್ತಿಗೋ ತಕ್ಕುದಲ್ಲದಿದ್ದರೆ ನಾಳೆಯ ದಿನ ನೀನು ಅನೇಕ ಸತ್ಪುರುಷರು ಇದನ್ನು ಪ್ರಶ್ನಿಸಿದಾಗ ಏನು ಹೇಳುವೆಯೋ ಅದನ್ನು ನನಗೆ ಹೇಳು. ಒಬ್ಬ ಘಾತಿತ ವ್ಯಕ್ತಿಯಾಗಿ ನಾನಿದನ್ನು ಕೇಳುವ ಅಧಿಕಾರ ಹೊಂದಿದ್ದೇನೆ. ಅಪರಾಧಿಯೇ ಆಗಿದ್ದರೂ ನನ್ನ ಅಪರಾಧ ಏನು ಎನ್ನುವುದು ತಿಳಿಯಬೇಕಾಗಿದೆ. ದಂಡಾಧಿಕಾರಿಯಾಗಿ ಶಿಕ್ಷಿಸುವ ಮುನ್ನ ಅಪರಾಧಿಗೆ ಆತನ ಅಪರಾಧವನ್ನು ತಿಳಿಸಬೇಕಾಗುತ್ತದೆ. ಎಲ್ಲ ನೆಲೆಯಲ್ಲಿ ನಾನು ನಿನ್ನಲ್ಲಿ ಕೇಳುತ್ತಿದ್ದೇನೆ ರಾಮ, ಉತ್ತರಿಸು". ಹೀಗೆಂದು ನಿಡುಸುಯ್ದು ವಾಲಿ. ರಾಮ ನಸು ನಕ್ಕು ಪ್ರಸನ್ನ ವದನನಾಗಿ ತನ್ನ ಬಲ ಅಂಗೈಯನ್ನು ಅಭಯಹಸ್ತವೋ ಎನ್ನುವಂತೆ ತೋರಿಸಿದ. ಪ್ರಯಾಸದಿಂದ ಕಣ್ಮುಚ್ಚಿ, ರಾಮನ ಮಾತುಗಳಿಗೆ ಕಿವಿಯಾದ  ವಾಲಿ.

 

(ಸಶೇಷ)

No comments:

Post a Comment