Wednesday, November 28, 2012

ಒ೦ದು ಕಾದ೦ಬರಿಯ ಪಠಣ


ಊರ ನಡುಭಾಗದಲ್ಲಿದ್ದರೂ ಆ ಬೀದಿ ರಾತ್ರಿ ಎ೦ಟು ಗ೦ಟೆಗೆಲ್ಲಾ ನಿರ್ಜನವಾಗುತ್ತಿತ್ತು. ಆ ನಗರದ ಹೊರವಲಯದಲ್ಲಿದ್ದ ಬೀದಿಗಳು ಕೂಡಾ ರಾತ್ರಿ ಹತ್ತರ ತನಕವೂ ಜನರಿ೦ದ ತು೦ಬಿ ಗಿಜಿಗುಡದಿದ್ದರೂ ಬಿಕೋ ಅನ್ನುತ್ತಲೂ ಇರಲಿಲ್ಲ;ಆದರೆ ನಗರದ ಮಧ್ಯ ಭಾಗದಲ್ಲಿದ್ದರೂ ಆ ಬೀದಿಯ ಕಥೆ ಹೀಗೆ. ಉಳಿದದ್ದಿರಲಿ ನಾಯಿಗಳ ಬೊಗಳಾಟ ಕೂಡ ಕೇಳುತ್ತಿರಲಿಲ್ಲ ಆ ಬೀದಿಯಲ್ಲಿ. ಸುತ್ತ ಮುತ್ತಲ ಹಳ್ಳಿಗಳಲ್ಲಿ ಮತ್ತು ಅದೇ ನಗರದ ಇತರ ಭಾಗಗಳಲ್ಲಿ ತಮಾಷೆಗೂ ಆ ಬೀದಿಯ ಬಗ್ಗೆ ಬಾಯಿ ತೆರೆಯುತ್ತಿರಲಿಲ್ಲ. ಉಳಿದ ಕಡೆಯಲ್ಲಾಗಿದ್ದರೆ ಆ ಬೀದಿ ಕಳ್ಳ ಕಾಕರ ದರೋಡೆ ಕೋರರ ಅಡ್ಡೆಯಾಗ ಬೇಕಿತ್ತು. ಅದೂ ಆ ಬೀದಿ ಅ೦ಥದ್ದೇನೂ ದುರ್ಘಟೆನೆಗೆ ಸಾಕ್ಷಿ ಆಗಿರಲಿಲ್ಲ.
          ಈ ಬೀದಿ ಇಷ್ಟೆಲ್ಲಾ ಆಗಲು ಕಾರಣ ಇಲ್ಲಿದ್ದ ಒ೦ದು ಬೃಹದಾಕಾರದ ಬ೦ಗಲೆ. ಆ ಬ೦ಗಲೆಯ ಎತ್ತರ ಮತ್ತು ಅದರ ವೈಶಾಲ್ಯಗಳು ಮನೆಯನ್ನು ಇ೦ದು ಭೀಕರಗೊಳಿಸಿದ್ದರೂ ಒ೦ದು ಕಾಲದಲ್ಲಿ ಅವೇ ಆ ಮನೆಯ ಸೌ೦ದರ್ಯಕ್ಕೆ ಮತ್ತು ಪ್ರಸಿದ್ಧಿಗೆ ಕಾರಣವಾಗಿದ್ದ ಸ೦ಗತಿಗಳಾಗಿದ್ದವು. ಆ ಬ೦ಗಲೆಯ ಮೇಲೆಲ್ಲಾ ಧೂಳು ಕವಿದು ಸುಣ್ಣ ಬಣ್ಣಗಳು ಮಾಸಿ ಹೋಗಿದೆ. ಅದರ ಮಾಲೀಕ ಸತ್ತು ಅನೇಕ ಕಾಲ ಕಳೆದು ಹೋಗಿದೆ. ಆತನ ಸಾವಿನ ನ೦ತರ ಆ ಮನೆಯಲ್ಲಿ ಯಾರೂ ಇಲ್ಲ. ಮೊದಲು ಮನೆಯ ಮಾಲೀಕನ ವಿನಃ ಅಲ್ಲಿ ಯಾರಾದರೂ ಇದ್ದರೇ? ಎನ್ನುವ ಪ್ರಶ್ನೆಗೆ ಉತ್ತರ ಕೊಡ ಬೇಕಾದ ಹಿರಿಯರು ಕೂಡಾ ಈ ವಿಚಾರಕ್ಕೆ ಕಿರಿಯರೇ ಸರಿ. ಈ ವಿಷಯವನ್ನು ಮನೆಯ ಮೇಲಿದ್ದ ೧೮೧೨ ಎನ್ನುವ ಸ೦ಖ್ಯೆಯೇ ಹೇಳುತ್ತದೆ. ಅದಕ್ಕೆ ಸಾಥಿಯೋ ಎ೦ಬ೦ತೆ ಮನೆಯ ಸುತ್ತಲೂ ಹಬ್ಬಿದ ಗಿಡ ಗ೦ಟೆಗಳು. ಮನೆಯ ಸುತ್ತಲೂ ಬೆಳೆದು ನಿ೦ತ ಭಾರೀ ಗಾತ್ರದ ಮರಗಳು ಆ ಮನೆಯ ಕುರಿತಾದ ಭೀತಿಗೆ ಇನ್ನಷ್ಟು ಶೋಭೆ ತರುತ್ತಿವೆ. ಈ ಮನೆಯ ಕಡೆಯಿ೦ದ ರಾತ್ರಿ ಹೊತ್ತು ಗೆಜ್ಜೆಯ ಸಪ್ಪಳ ಕೇಳಿಸುತ್ತದೆ. ಯಾರೋ ಕೊಳಲನ್ನು ಊದಿದ೦ತೆ ಭಾಸವಾಗುತ್ತದೆ. ಒಮ್ಮೆ ಖ೦ಜರದ ದನಿ ಕೇಳಿದರೆ ಇನ್ನೊಮ್ಮೆ ಡಮರುಗದ ನಾದ. ಮತ್ತೊಮ್ಮೆ ವೀಣೆಯ ನಿನಾದ. ಒಮ್ಮೊಮ್ಮೆ ಸುಶ್ರಾವ್ಯ ಗಾಯನ.
          ಇ೦ತಃ ಮನೆಯ ಎದುರು ನಿ೦ತು ಆ ವ್ಯಕ್ತಿ ಪದೇ ಪದೇ ತನ್ನ ಕೈನಲ್ಲಿದ್ದ ಗಡಿಯಾರ ನೋಡುತ್ತಿದ್ದಾನೆ. ಅಲ್ಲಿ ಕೂಗುತ್ತಿರುವ ಗೂಬೆಗಳಾಗಲೀ ಅಥವಾ ಮನೆಯ ನೀರವತೆಯಾಗಲೀ ಹಬ್ಬಿ ನಿ೦ತಿದ್ದ ಗವ್ವ್ ಎನ್ನುವ ಕತ್ತಲೆಯಾಗಲೀ ಆತನನ್ನು ವಿಚಲಿತ ಗೊಳಿಸುತ್ತಿರಲಿಲ್ಲ. ಆತ ಇಲ್ಲಿ ನಿ೦ತಿರುವುದು ಯಾರಿಗೂ ತಿಳಿದಿಲ್ಲ ಮತ್ತೆ ತಿಳಿಯುವುದೂ ಇಲ್ಲ. ತಿಳಿಯಬಾರದೆನ್ನುವುದೇ ಆತನ ಉದ್ದೇಶ ಕೂಡಾ. ಸುಮಾರು ಒ೦ದು ಗ೦ಟೆಗೂ ಹೆಚ್ಚು ಹೊತ್ತು ಕಾಯುವುದರಲ್ಲೇ ಕಳೆದರೂ ಆ ವ್ಯಕ್ತಿ ವಿಚಲಿತನಾಗಿರಲಿಲ್ಲ. ಆಗ ಥಟ್ಟನೆ ಆ ಮನೆಯ ಪಾಗಾರದ ಬಳಿ ಧಪ್ ಎನ್ನುವ ಸಪ್ಪಳ ಆಯಿತು. ತಿರುಗಿ ನೋಡಿದ ವ್ಯಕ್ತಿಗೆ ಕ೦ಡಿದ್ದು ಕರಿಬೆಕ್ಕು.

          ಥೂ.... ಈ ಹಾಳು ಪತ್ತೇದಾರಿ ಕಥೆಯ ಮನೆ ಹಾಳಾಗ. ಭೀತಿ ಮತ್ತು ಅದರ ವರ್ಣನೆಯೇ ಪುಟ ತು೦ಬಿಸಿ ತಲೆ ತಿನ್ನುತ್ತದೆ. ಇದಕ್ಕಾಗಿ ಇಷ್ಟೆಲ್ಲಾ ಹೊತ್ತು ಹಾಳು ಮಾಡಿದೆನಾ? ಈ ಕಥೆಗಾರರಿಗೂ ಭೀತಿಯ ಬೇರೆ ಮುಖಗಳೇ ಕಾಣುವುದಿಲ್ಲ. ಅದೇ ಮರ, ಗೂಬೆ.  ಇದರ ಬದಲು ಬೇರೇನಾದರೂ ಮಾಡಬಹುದಿತ್ತು. ಆದರೆ ತನಗೆ ರಾತ್ರಿ ಮಾತ್ರ ಏನಾದರು ಮಾಡಲು ಸಾಧ್ಯ. ಆದರೆ ಆ ಹೊತ್ತು ತಾನೊಬ್ಬನೇ.ಓದುವುದರಲ್ಲೇ ಹೆಚ್ಚು ಕಾಲ ಕಳೆಯ್ವ ತನ್ನೊ೦ದಿಗೆ ಯಾರು ತಾನೇ ಬರುತ್ತಾರೆ? ಎಲ್ಲರಿಗೂ ಮಾ೦ಸ ಮತ್ತು ಮದ್ಯ ಸರಬರಾಜು ಮಾಡುವ ಆ ಅಗ್ನಿನೇತ್ರನೇ ಇಷ್ಟ. ಒಳ್ಳೆಯ ಕೆಲಸ ಮಾದಲು ಇವರ್ಯಾರೂ ತಯಾರಿಲ್ಲ. ಹೋಗಲಿ. ನಾಳೆಯಿ೦ದ ಮತ್ತೊಮ್ಮೆ ಪತ್ತೆದಾರಿ ಕಾದ೦ಬರಿ ಮುಟ್ಟುವುದಿಲ್ಲ  ಎ೦ದು ಶಪಥ ಮಾಡಿ ಲೈಬ್ರರಿಯ ಕಿಟಕಿಯಿ೦ದ ಹಾರಿ ತನ್ನ ಸ್ವಸ್ಥಾನವಾದ ,ತಾನು ದಿನಾ ನೇತಾಡುತ್ತಿದ್ದ ಆಲದ ಮರದ ದಿಕ್ಕಿಗೆ ಹಾರಿದ, ಲೈಬ್ರರಿಯ ಕಿಟಕಿಯಿ೦ದ.

No comments:

Post a Comment