Monday, September 24, 2012

ಮಳೆಗಾಲ

ಮನುಷ್ಯನ ಬದುಕು ಎಷ್ಟು ವಿಚಿತ್ರ. ಯಾವುದಾದ್ದ್ರೊಂದು ವಸ್ತು ಅಥವಾ ವಿಚಾರ ಕೈಗೆ ಸಿಗುತ್ತಿರುವಾಗ ಅದರ ಬಗ್ಗೆ ಎಷ್ಟು ಕಡಿಮೆ ಗಮನ ಹರಿಸುತ್ತೇವೆ ನಾವು. ಅದೇ ಒಂದು ವಸ್ತು ಅಥವಾ ವಿಷಯ ಅಥವಾ ವ್ಯಕ್ತಿ ನಮ್ಮಿಂದ ದೂರವಾದಾಗ ಅವನಿಗಾಗಿ ನಾವೆಷ್ಟು ಹಂಬಲಿಸುತ್ತೇವೆ. ಕೆಲವು ಸಾರಿ ಕಳೆದು ಹೋದ ಆ ವಿಚಾರ ವಿಷಯಗಳ ಮುಂದೆ ಲೋಕದ ಇನ್ನಿತರ ಪ್ರಮುಖ ವಿಷಯಗಳೆಲ್ಲ ಗೌಣವಾಗಿಬಿಡುತ್ತದೆ. ದೇವರೇ ಮಾಡಿ ಹಾಕಿದ ಸ್ವರ್ಗ ಅಲ್ಲಿ ಹರಿದಾಡುವ ಸುರನಡಿಯೋ ಎಂಬಂತೆ ಬರುವ ಮಳೆಗಾಲ ಕೂಡ ಇದಕ್ಕೆ ಹೊರತಲ್ಲ. ನಾನು ಬದುಕಿನಲ್ಲಿ ಕಳೆದದ್ದು ಬಹಳ ಕಡಿಮೆ ವರ್ಷಗಳನ್ನಾದರೂ ಕಳೆದುಕೊಂಡಿದ್ದು ತುಸು ಹೆಚ್ಚು ಎಂದೇ ಹೇಳಬೇಕು. ಆದರೆ ಆ ದೇವರು ನನಗೆ ಕೆಲವು ವಿಷಯಗಳಲ್ಲಿ ಒಳ್ಳೆಯ ಜ್ಞಾಪಕ ಶಕ್ತಿ ಕೊಟ್ಟು ಅಂಥ ಘಟನೆಗಳ ಸವಿ ನೆನಪಿನ ಬುತ್ತಿಯ ಬುತ್ತಿ ಸದಾ ನೆತ್ತಿಯ ಮೇಲೆ ಇರುವಂತೆ ಮಾಡಿದ್ದಾನೆ ಅದಕ್ಕೆ ನಾನು ಆತನಿಗೆ ಋಣಿ. 

ಈಗ ಬರುತ್ತಿರುವ ಅಂಥದ್ದೇ ಇನ್ನೊಂದು ನೆನಪು ಊರಿನ ಮಳೆಗಾಲದ್ದು. ಚಿಕ್ಕ ವಯಸ್ಸಿನಲ್ಲಿ ಆ ಮಳೆಗಾಲದ ಬದುಕು ಅದೂ ಆ ಮಲೆನಾಡಿನಲ್ಲಿ ಅದೆಷ್ಟು ಚಂದವಿತ್ತು.ಶಾಲೆ ಶುರುವಾಗುವ ಸಮಯಕ್ಕೆ ಸರಿಯಾಗಿ ಮಳೆಗಾಲ ಪ್ರಾರಂಭವಾಗುತ್ತಿತ್ತು. ಆ ಮಣ್ಣಿನ ವಾಸನೆ ಅದೆಷ್ಟು ಮಧುರ ಅದೆಷ್ಟು ಹಿತಕರ. ಅಂತಹ ಬಿರುಮಳೆಯಲ್ಲಿ ಇಲ್ಲದಿದ್ದರೆ ಜಿಮರು ಮಳೆಯಲ್ಲಿ ಹುಡುಗರೆಲ್ಲ ಒಟ್ಟಾಗಿ ಶಾಲೆಗೇ ಹೋಗುತ್ತಿದ್ದೆವು. ಎಲ್ಲರ ಕೈನಲ್ಲೂ ಒಂದೊಂದು ಕೊಡೆ. ಎಲ್ಲರ ಕೊಡೆಯ ಮೇಲೂ ಅವರ ಹೆಸರು ಅಥವಾ ಇನಿಷಿಯಲ್ಲು. ಅದನ್ನೂ ಕೂಡ ಜಂಭದಿಂದ ತೋರಿಸುತ್ತ ಓಡಾಡುತ್ತಿದ್ದವರು ನಾವು. ಮನೆಯಲ್ಲಿ ದೊಡ್ದವರೆನೋ ಕೊಡೆ ಕಳೆದುಕೊಂಡು ಮಕ್ಕಳು ಮಳೆಯಲ್ಲಿ ನೆನೆದಾಡುವುದು ಬೇಡ ಅಂತ ಬರೆದು ಕೊಡುತ್ತಿದ್ದರು. ಈ ಕೊಡೆ ನಮಗಾದರೂ ಯಾಕೆ? ಬೇರೆ ಹುಡುಗರ ಹತ್ತಿರ ಜಂಭ ಕೊಚ್ಚುವುದಕ್ಕೆ. ಮಳೆಯಲ್ಲಿ ಹರಿದಾಡುವ ನೀರಿಗೆ ಅಲ್ಲೇ ಇದ್ದ ಕೆಸರನ್ನು ಕಾಲಿಂದ ಒಟ್ಟುಮಾಡಿ ಕಟ್ಟು ಕಟ್ಟುವ ಸಮಯಕ್ಕೆ ಕೊಡೆ ಒಂದು ಭಾರವಾದ ವಸ್ತು. ಮಳೆಗಾಲದಲ್ಲಿ ಬಿಡುವ ಹನ್ನುಗಳದ ಅಂಕೋಲೆ ಹಣ್ಣು ತೊಗರು ರುಚಿಯ ಕುನ್ನೆರಳ ಹಣ್ಣು ತಿನ್ನುವಾಗ ಇದೆ ಕೊಡೆ ನಮ್ಮ ಆಪ್ತ ಮಿತ್ರ. ಏಕೆಂದರೆ ಅದಕ್ಕೆ ಅಲ್ಲಿ ದೋಟಿಯ ಪಾತ್ರ. 
ಹಾಂ! ಮಳೆಗಾಲದ ನಿಜವಾದ ಮಜಾ ಇರುತ್ತಿದ್ದದ್ದೆ ಈ ಹಣ್ಣುಗಳನ್ನು ತಿನ್ನುವುದರಲ್ಲಿ ಅಲ್ಲವೇ. ಇದಕ್ಕಿಂತ ಹೆಚ್ಚಿನ ಮಜಾ ಕೊಡುತ್ತಿದ್ದದ್ದು ಅನೇಕ ರುಚಿಗಳಲ್ಲಿ ಸಿಗುತ್ತಿದ್ದ ಸಳ್ಳೆ ಹಣ್ಣಿನಲ್ಲಿ.ಸಿಹಿ ಕಹಿ ಒಗರು ಹುಳಿ ಹೀಗೆ ಎಲ್ಲ ರುಚಿಗಳಿಂದ ಕೂಡಿರುತ್ತಿತ್ತು  ಈ ಹಣ್ಣು. ಇದನ್ನು ತಿನ್ನುವಾಗಲೂ ಕೊಡೆ ಮಿತ್ರನೇ. ಇಷ್ಟೆಲ್ಲಾ ಆದ ಮೇಲೆ ಮೈ ವದ್ದೆ ಮಾಡಿಕೊಂಡು ಮನೆಗೆ ಹೋದರೆ ಹೊರಗಡೆ ಇರದಿದ್ದ ಗುಡುಗು ಸಿಡಿಲು ಮಿಂಚುಗಳ ಅಬ್ಬರ ಮನೆಯಲ್ಲಿ. ಅಪ್ಪ ಅಮ್ಮನ ಬಾಯಲ್ಲಿ ವಿಶ್ವ ರೂಪದ ದರ್ಶನವೂ ಆಗುತ್ತಿತ್ತು. ಇದಕ್ಕೆ ಸಿಟ್ಟು ಮಾಡಿಕೊಂಡು ಮತ್ತೆ ಮಳೆಯಲ್ಲಿ ನೆನೆದಾಟ. ಆ ಮೇಲೆ ಜ್ಞಾನ ವೃಕ್ಷದ ಬೇರು ಎನ್ನಿಸಿಕೊಂಡ ಬರಲಿನ ದರುಶನ. 
ಇಷ್ಟೆಲ್ಲಾ ಆದರೂ ನಾವ್ಯಾರೂ ಮಳೆಯಲ್ಲಿ ನೆನೆಯುವ (ಕೆಟ್ಟ) ಅಭ್ಯಾಸ ಬಿಟ್ಟವರಲ್ಲ. ಆಗ ಅಮ್ಮನೋ ಅಜ್ಜಿಯೋ ಅಥವಾ ಊರಲೀ ಬೇರೆ ಯರದರೋ ಹೇಳುತ್ತಿದ್ದದ್ದು "ನೀರಾಡಿರೆ ಕೊಕ್ಕೆ ಹುಳ ಮೈ ಒಳಗೆ ಹೋಗಿ ಹುಣ್ಣು ಮಾಡ್ತು. ಕೊನಿಗೆ ಡಾಕ್ಟ್ರು ಹೊಟ್ಟೆ ಕೊಯ್ತ ನೋಡು. " ಅಂತ ಹೆದರಿಸುತ್ತಿದ್ದದ್ದು ಎಷ್ಟು ಚನ್ನ ಅಲ್ಲವೇ?
ಇದೇ ಮಳೆಗಾಲದಲ್ಲಿ ತಲೆ ತುಂಬಾ ಹೇನು. ಅಮ್ಮನ ತೊಡೆ ಮೇಲೆ ಮಲಗಿ ಆ ಹೇನು ತೆಗೆಸಿ ಕೊಳ್ಳುವುದರಲ್ಲಿ ಅದೆಂಥ ಆನಂದ ಇತ್ತು?
ಮಳೆಗಾಲ ನಮ್ಮಂಥ ತಿಂಡಿ ಪೋತರಿಗಂತೂ ಹೇಳಿ ಮಾಡಿಸಿದ ಕಾಲವಾಗಿತ್ತು. ಹಲಸಿನ ಕಾಯಿಯ ಚಿಪ್ಸ್ ಹಪ್ಪಳ, ಬಾಲೆಕಾಯಿಯ ಚಿಪ್ಸ್ ಹಪ್ಪಳ ಮತ್ತೆ ಕಳಲೆ..... ಆಹಾ ಎಂಥ ರುಚಿಯಾದ ಪದಾರ್ಥಗಳು ಇವು. ಸಾಲದ್ದಕ್ಕೆ ಸಾಲುಗಟ್ಟಿ ಬರುವ ಹಬ್ಬಗಳು. ನೂಲ ಹುಣ್ಣಿಮೆಯಲ್ಲಿ ಸತ್ರದ ಹಿತ್ತನ್ನೂ ಬಿಡದೆ ತಿನ್ದಾಗುತ್ತಿತ್ತು. ನಾಗರ ಪಂಚಮಿಯ ಕಾಯಿ ಕಡುಬು, ಕೃಷ್ಣಾಷ್ಟಮಿಯ ಗೋಧಿ ಮುದ್ದೆ ಆ ಮೇಲೆ ಗಣಪತಿ ಹಬ್ಬದ ಚಕ್ಕುಲಿ ಎಳ್ಳುಂಡೆ ಪಂಚ ಕಜ್ಜಾಯ. ಇಷ್ಟಲ್ಲದೆ ಮಳೆಗಾಲದಲ್ಲೇ ಬರುವ ವೈದೀಕ ಅರ್ಥಾತ್  ತಿಥಿ ಮನೆ ಅಲ್ಲಿ ಹೋಳಿಗೆ, ಸುಟ್ಟೆವು ಪಾಯಸ. 

ಇದೆ ಮಳೆಗಾಲವನ್ನು ನಾವು ಸೈಕಲ್ ಹೊಡೆಯಬೇಕು ಎಂಬ ಆಸೆಗೆ ಬಿದ್ದು ಬೈದದ್ದೂ ಇದೇ ಆ ಕಾಲದಲ್ಲಿ. ಕ್ರಿಕೆಟ್ ಆಟಕ್ಕೆ ಇದೊಂದು ಶತ್ರು ಎಂಬಂತೆ ಕಂಡದ್ದೂ ಇದೇ. ಮಳೆ ಜೋರಾಗಿ ಮನೆಯಲ್ಲಿ ಹಿರಿಯರೆಲ್ಲ "ಇವತ್ತು ಶಾಲಿಗೆ ಹೋಪದು ಬ್ಯಾಡ" ಅಂದ ಕೂಡಲೇ ಮಳೆ ಮಿತ್ರ!! ಇದೇ ಮಳೆಗಾಲದಲ್ಲಿ ಬರುತ್ತಿದ್ದ ಜ್ವರ! ಅಹ ಗಣಿತದ ಮನೆ ಕೆಲಸ ಮಾಡದೇ ಇದ್ದಾಗ ಜ್ವರ ಬಂದರೆ ಅದೆಂಥಾ ಆನಂದ.

ಇನ್ನು ಇದೆಲ್ಲ ಬರೇ ನೆನಪು ಅಷ್ಟೇ. ನಮ್ಮ ಕಾಸು ಸಂಪಾದಿಸುವ ಹುಕಿಗೆ ನಮ್ಮ ಮುಂದಿನ ಪೀಳಿಗೆ ಇಂತಹ ಸುಖದಿಂದ ವಂಚಿತವಾಗುತ್ತಿದೆ

No comments:

Post a Comment