Wednesday, September 12, 2012

ಒಲೆದಂಡೆ


ನಾನು ಶಾಲೆಗೇ ಹೋಗಲು ಶುರು ಮಾಡಿದಾಗ  ಮನೆಯಲ್ಲಿ ಇನ್ನೂ ಎಲ್. ಪಿ. ಜಿ ಬಂದಿರಲಿಲ್ಲ. ಆಗ ಏನಿದ್ದರೂ ಕಟ್ಟಿಗೆ ಒಲೆ ಮತ್ತು ಇದ್ದಿಲ ಒಲೆಗಳದ್ದೆ ಅಡಿಗೆಮನೆಯಲ್ಲಿ ಕಾರ್ಯಭಾರ.ಈಗ ಈ ಬೆಂಗಳೂರೆಂಬ ಮಹಾ ನಗರಕ್ಕೆ ಬಂದ ಮೇಲೆ ಅನೇಕ ಬಾರಿ ನೆನಪಾಗುವ ವಸ್ತು ವಿಷಯಗಳಲ್ಲಿ ಇದು ಕೂಡ ಒಂದು. 
ಮಳೆಗಾಲದಲ್ಲಿ ಆ ಬಿರುಸುಮಳೆಯಲ್ಲಿ ಸೋಕಿದ ಇರುಸಲು ನೀರು ಅಂಗಿ ಚಡ್ಡಿಯನ್ನೆಲ್ಲ ಒದ್ದೆ ಮಾಡಿ ಹಾಕುತ್ತಿತ್ತು. ಕೊಡೆಯಿಂದ ಬಿದ್ದ ನೀರು ಪುಸ್ತಕಕ್ಕಿಂತ ಹಡಪ  ಹೆಚ್ಚಾಗಿದ್ದ ಪಾಟಿ ಚೀಲವನ್ನೂ ವದ್ದೆ ಮಾಡುತ್ತಿತ್ತು. ಸಾಲದ್ದಕ್ಕೆ ಹರಿಯುವ ನೀರಿಗೆ ಅಣೆ ಕಟ್ಟು ಕಟ್ಟುವ ಭರದಲ್ಲಿ ಕೊಡೆಯ ಮೇಲಿನ ಧ್ಯಾನ ತಪ್ಪಿ ಹೋಗಿ ಮೈ ಮೇಲೆಲ್ಲಾ ನೀರು ಬಿದ್ದು ಮನೆಗೆ ಬರುವಷ್ಟರಲ್ಲಿ ಮೈ ಚಳಿ ನಡುಕ ಹತ್ತುತ್ತಿತ್ತು. ಆದರೂ ಅದರಲ್ಲಿ ಖುಷಿ ಇರುತ್ತಿತ್ತು. ಕಾರಣ ಗೊತ್ತಿಲ್ಲ.
ಹೀಗೆ ಒದ್ದೆಯಾದ ಮೈಯನ್ನು ಮನೆಯಲ್ಲಿದ್ದ ಹಿರಿಯರು ಒರೆಸಿ ಬೇರೆ ಬಟ್ಟೆ ತೊಡುವಂತೆ ಹೇಳಿದ್ದನ್ನು ಶಿರಸಾ ವಹಿಸಿ ಪಾಲಿಸುತ್ತಿದ್ದೆ. ನಂತರ, ಅಜ್ಜ ಹೇಳುತ್ತಿದ್ದ."ಅಪ್ಪಿ ಪುಸ್ತಕ ವದ್ದೆ ಆಗಿರ್ತು ಒಣಸಕ್ಕು. ಕೊಡು. ಒಲೆ ದಂಡೆ ಮೇಲೆ ಇಡ್ತಿ" ಎಂದು ಅಪ್ಯಾಯಮಾನತೆಯಿಂದ ಕೇಳುತ್ತಿದ್ದ. ಅಜ್ಜನ ಬಾಲವೇ ಆಗಿದ್ದ ನಾನು ಅಜ್ಜನ ಹಿಂದೆಯೇ ಒಲೆ ದಂಡೆ ಹತ್ತಿರ ಪುಸ್ತಕ ಒಣಗಿಸುತ್ತ, ಮೈ ಬೆಚ್ಚಗೆ ಮಾಡಿಕೊಳ್ಳುತ್ತಾ ಕೂರುತ್ತಿದ್ದೆ. ಅಂದು ಓದಿಗೆ ಚಕ್ಕರ್. ಯಾರಾದರೂ ಹೇಳಿದರೆ ನನ್ನ ಸೂಪರ್ ಮ್ಯಾನ್ ನನ್ನಜ್ಜನ ಬೆಂಬಲ ನಂಗೆ ಅಂದು. "ಪುಸ್ತಕ ಎಲ್ಲ ಒದ್ದೆ ಆಯ್ದು. ಮೈ ಎಲ್ಲ ಚಳಿ ಹತ್ತಿ ನಡುಗ್ತಾ ಇದ್ದು. ಸ್ವಲ್ಪ ಬೆಚ್ಚಗೆ ಮಾಡ್ಕಂಡು ಓದಕ್ಕೆ ಕೂತ್ಗತ್ತ. ಅಷ್ಟು ಹೊತ್ತಿಗೆ ಪುಸ್ತಕ ಒಣಗ್ತು" ಎನ್ನುವ ಆಜ್ಞೆ ಹೊರ ಬರುತ್ತಿತ್ತು. ಜೂನ್ ನಿಂದ ಜನವರಿ ತನಕ ಅಜ್ಜ ಸಂಜೆ ಹೊತ್ತು ಹೆಚ್ಚಾಗಿ ಇರುತ್ತಿದ್ದುದು ಒಲೆ ದಂಡೆಯ ಬಳಿಯಲ್ಲಿ. ನಾನು ಪುಸ್ತಕ ಹಿಡಿದು ಓದುತ್ತಾ ಅಜ್ಜನ ಪಕ್ಕದಲ್ಲಿ. 
ಇಷ್ಟೇ ಅಲ್ಲ ಚೌತಿ ಹಬ್ಬದ  ಸಮಯದಲ್ಲಿ ತಂದ ಪಟಾಕಿ ಎಲ್ಲ ಒಲೆ ದಂಡೆಯ ಮೇಲಿನ ಗೂಡಲ್ಲಿ ಸೇರುತ್ತಿತ್ತು. "ಬೆಚ್ಚಗೆ ಇಡಕ್ಕು. ಇಲ್ದಿದ್ರೆ ಪಟಾಕಿ ಹೊಡೆಯಕ್ಕೆ ಆಗ್ತಲ್ಲೆ." ಎನ್ನುವ ಅಜ್ಜನ ಅಪ್ಪನ ಮಾತುಗಳು ಈಗಲೂ ನೆನಪಾಗುತ್ತದೆ. ಕೆಲವೊಮ್ಮೆ ಮಳೆರಾಯ ಗಣಪನನ್ನು ಕಳಿಸಿದರೂ ಹೋಗುತ್ತಿರಲಿಲ್ಲ. ಆಗೆಲ್ಲ ಹೇಳುವುದು. "ಒಲೆ ದಂಡೆ ಮೇಲೆ ಇರ್ಲಿ ಪಟಾಕಿ. ದೊಡ್ಡ ಹಬ್ಬಕ್ಕೆ ಹೊಡೆದರೆ ಆತು" ಎಂದು.
ಆ ಮೇಲೆ ಮನೆಗೆ ಎಲ್. ಪಿ. ಜಿ. ಪ್ರವೇಶ ಆಯಿತು. ನಿಧ್ಹನಕ್ಕೆ ಒಲೆ ಉರಿಯುವುದೂ ಕಮ್ಮಿ ಆಯಿತು. ಅಷ್ಟರಲ್ಲಿ ನಾನು ಸ್ವಲ್ಪ ಬೆಳೆದಿದ್ದನಲ್ಲ, ಪುಸ್ತಕ ಒದ್ದೆಯಾಗುವುದೂ ಕಮ್ಮಿ ಆಯಿತು. ಆದರೂ ಒಲೆ ದಂಡೆಯ ಸೆಳೆತ ಬಿಡಲಿಲ್ಲ.
ಹೋಗಿ ಚಳಿ ಕಾಯಿಸುತ್ತಾ ಕೂರುತ್ತಿದ್ದೆ. "ಮುದುಕ!" ಎಂದು ಯಾರಾದರೂ ಕರೆದರೂ ಬೇಸರವಾಗುತ್ತಿರಲಿಲ್ಲ. ಒಲೆ ದಂಡೆಯ ಸೆಳೆತ ಎಷ್ಟಿತ್ತು ಎಂದರೆ ಸಣ್ಣ ಮಳೆಗೂ ನಾನು ಚಳಿ ಎನ್ನುತ್ತಾ ಕೂರುತ್ತಿದ್ದೆ. ಕೊನೆ ಕೊನೆಗೆ ಇದ್ದ ಒಲೆ ಪೂರ್ತಿ ಮಾಯವಾಯಿತು. ಆದರೂ ಬಚ್ಚಲ ಮನೆಯ ಒಲೆ ಇತ್ತು. ಈಗಲೂ ಅಷ್ಟೇ ಊರಿಗೆ  ಮಳೆಗಾಲದಲ್ಲಿ ಅಥವಾ ಚಳಿಗಾಲದಲ್ಲಿ ಹೋದರೆ ಒಲೆ ದಂಡೆ ಮುಂದೆ ಕಾಲು ಗಂಟೆಯಾದರೂ ಕೂರುತ್ತೇನೆ. 
ಮೊನ್ನೆ ಒಂದು ದಿನ ರೈನ್ ಕೋಟ್ ಬಿಟ್ಟು ಹೋಗಿ ಮಳೆಯಲ್ಲಿ ನಾನು ವದ್ದೆಯಾಗಿ ಚೀಲದಲ್ಲಿದ್ದ ಪುಸ್ತಕವೂ ವದ್ದೆಯಾದಾಗ ಇದೆಲ್ಲ ನೆನಪಾಯಿತು. ಈಗ ಮೈ ವದ್ದೆಯಾದರೆ ಹೇಗೆ ಬೆಚ್ಚಗೆ ಮಾಡಲಿ? ಪುಸ್ತಕ ವದ್ದೆಯಾದರೆ ಹೇಗೆ ಒಣಗಿಸಲಿ? 
ನಿಜಕ್ಕೂ ನಾನು ಏನನ್ನೋ ಕಳೆದುಕೊಂದನೆಂಬ ಭಾವ ನನ್ನನ್ನು ಕಾಡಿದ್ದು ಸುಳ್ಳಲ್ಲ.

No comments:

Post a Comment