Wednesday, September 5, 2012

ಮಳೆಗಾಲದ ನೆನಪು

ಅಂದು ಮಧ್ಯಾಹ್ನ ಗಪ್ಪನ್ನ ಊಟ ಮಾಡಿ ಮನೆಯ ಚಾವಡಿಯ ಮೇಲೆ ಅತ್ತಿಂದ ಇತ್ತ ಇತ್ತಲಿಂದ ಅತ್ತ ಸುತ್ತಾಡುತ್ತಿದ್ದ. ಸುತ್ತಾಡುತ್ತ  ಸುತ್ತಾಡುತ್ತ  ಹಾಗೆಯೇ ಅವನ ದೃಷ್ಟಿ ಮನೆಯ ಎದುರಿನ ಜೀರಿಗೆ ಮಾವಿನ ಮರದ ಕಡೆ ಹರಿಯಿತು. ಅದು ಆಟ ಹುಟ್ಟಿದಾಗ ಆತನ ಅಜ್ಜಿ ಆ ಸಂಬ್ರಮದ ನೆನಪಿಗೆಂದು ನೆಟ್ಟಿದ್ದ ಗಿಡವಾಗಿತ್ತಂತೆ. ಅಂದರೆ ಈ ಮಾವಿನ ಮರಕ್ಕೂ ತನಗೂ ಒಂದೇ ಪ್ರಾಯ. ಈ ಮಾವಿನ ಮರದಲ್ಲಿ ಬಿಟ್ಟ ಎಷ್ಟು ಸಾವಿರ ಮಿಡಿಗಳನ್ನು ಉಪ್ಪಿನಕಾಯಿ ಮಾಡಿ ತಾನು ತನ್ನವರು ತಿನ್ನಲಿಲ್ಲ. ಎಷ್ಟು ದಿನ ಇದರ ನೀರು ಗೊಜ್ಜು ಮಾಡಿ ಕುಡಿಯಲಿಲ್ಲ.ನಿಜ ಈ ಮರ ನಿಜಕ್ಕೂ ತನ್ನ ಹುಟ್ಟಿನಿಂದ ಇಲ್ಲಿಯ ತನಕವೂ ತನ್ನ ಬದುಕಿನ ಒಂದು ಅವಿಭಾಜ್ಯ ಅಂಗವೇ ಆಗಿದೆ.
        ಆದರೆ ಇದೊಂದೇ ತನ್ನ ಬದುಕಿನ ಅವಿಭಾಜ್ಯ ಭಾಗವೇ? ಖಂಡಿತಾ ಅಲ್ಲ. ಎದುರಿಗಿರುವ ಎಲ್ಲವೂ ಅವಿಭಾಜ್ಯ ಭಾಗಗಳೇ. ಅದರಲ್ಲೂ ಇವಳು. ಅಂದೊಂದು ಕಾಲವಿತ್ತು ಇವಳ ಬರವಿಕೆಗೆ ತಾನು ಎಷ್ಟು ಕಾತರದಿಂದ ಕಾಯುತ್ತಿದ್ದೆ. ಇವಳು ಕೂಡ ಹಾಗೆಯೇ ಹೊತ್ತಿಗೆ ಸರಿಯಾಗಿ ಬರುತ್ತಿದ್ದಳು. ಬಂದಳೆಂದರೆ ತನ್ನಲ್ಲಿ ಅದೆಂಥ ಸಡಗರ -ಸ೦ಭ್ರಮ. ಇವಳು ಬಂದಳೆಂದರೆ ಮನಕ್ಕೆ ಅದೆಂಥಾ ತಂಪು. ಇವಳು ಬೀರುವ ಕಂಪು ಅದರ ಪರಿ ಹೇಳಲು ತನ್ನಲ್ಲಿ ಶಬ್ದಗಲಾದರೂ ಎಲ್ಲಿದೆ? ಮೇಲಿನಿಂದ ಕೆಳಕ್ಕೆ ಬರುವಾಗ ಅದೆಂತಹ ವಯ್ಯಾರ ಇವಳದ್ದು. ಇವಳ ಬರುವಿಕೆ ತನ್ನಲ್ಲಿ ಅದೆಂತಹ ಉತ್ಸಾಹ ಕೆರಳಿಸುತ್ತಿತ್ತು. ದೇಹದಲ್ಲಿದ್ದ ಹುಮ್ಮಸ್ಸ್ಸೆಲ್ಲವೂ ಒಟ್ಟಾಗಿ ಇವಳೊಂದಿಗೆ ಹೊರಡುತ್ತಿದ್ದೆ. ಸುತ್ತಾಟ ಓಡಾಟದ ಆಯಾಸ ಎಳ್ಳಷ್ಟೂ ಅರಿವಾಗುತ್ತಿರಲಿಲ್ಲ. ಆ ವಯಸ್ಸು ಕೂಡ ಹಾಗೆಯೆ ಇತ್ತು. ಅಂದು ಇವಳು ಬಂದಳೆಂದರೆ ತಾನೇ ಏನು? ಈ ಹೈಗರ ಕೇರಿ ಒಂದೇ ಅಲ್ಲ. ಎಲ್ಲ ಕೇರಿಗಳ ಜನರೂ ಸ೦ಭ್ರಮಿಸುತ್ತಿದ್ದರು. ಆ ಕಾಲದಲ್ಲಿ ತನ್ನನ್ನು ಹಿಡಿದವರಾದರೂ ಯಾರು? ಏನು ಕಡಿಮೆಯವಳೇ ಇವಳು?ಇವಳ ಹೊಡೆತಕ್ಕೆ ಕೊಚ್ಚಿ ಹೋದವರೆಷ್ಟು? ಇವಳ ಸುನ್ದರ್ಯಕ್ಕೆ ನಾಚಿಯೇ ಇರಬೇಕು ಹೆಂಗಸರು ಮನೆಯೊಳಗೇ ಹೊಕ್ಕಿ ಕೂರುತ್ತಿದ್ದುದು.ಮುದುಕರು ತಮ್ಮ ಕೈಲಾಗದಲ್ಲ ಎಂದುಕೊಂಡಿರಬೇಕು, ಅವರ ಹುಡುಗಾಟಿಕೆಯ ಕಥೆ ಹೇಳುತ್ತಿದ್ದುದು.
         ಆದರೆ ನಂತರದಲ್ಲಿ ಏನಾಯಿತು ಇವಳಿಗೆ? ಹೊತ್ತಿಗೆ ಸರಿಯಾಗಿ  ಬರುವುದು ಬಿಟ್ಟಳು. ಬಂದರೂ ಪೂರ್ತಿ ಹೊತ್ತು ಇರುವುದು ಬಿಟ್ಟಳು. ಇದ್ದರೂ ಅವಳಲ್ಲಿ ಮೊದಲಿನ ತಾದಾತ್ಮ್ಯ ಇರಲಿಲ್ಲ .ಇನ್ನು ಕೆಲವು ಸಾರಿ ಮತ್ತೆ ಬರಲಾರಲೇನೋ ಎನ್ನುವಂತೆ ಹೋಗುತ್ತಿದ್ದಳು. ಮತ್ತೆ ಬರುತ್ತಿದ್ದಳು. ಇನ್ನು ಒಮ್ಮೊಮ್ಮೆ  ಬಂದಳೆಂದರೆ ಆ ಸ್ನಿಗ್ಧ ಸೌಂದರ್ಯದ ಬದಲಾಗಿ ರಾಕ್ಷಸಿಯಂತೆ ಸಿಟ್ಟು ಹೊತ್ತು ಬರುತ್ತಿದ್ದಳು.
       ಈ ಬಾರಿಯೂ ಹಾಗೆ ಆಯಿತಲ್ಲ. ಬರುವುದಿಲ್ಲವೇನೋ ಎಂಬಂತೆ ಮುನಿಸು ತೋರಿದಳು ಮೊದಲು. ನಂತರ ಅದೆಂತಹ ವಯ್ಯಾರದಲ್ಲಿ ಬಂದಳು. ತನಗೆ ಒಮ್ಮೆ ಉತ್ಸಾಹ ಹುಟ್ಟಿತ್ತಲ್ಲ ಅದೂ ಈ ನಡುಪ್ರಾಯದಲ್ಲಿ.
ಆ ಮೇಲೆ ಎಳೆ ಮಗುವಿನಂತೆ ರಚ್ಚೆ ಹಿಡಿದು ಕುಳಿತಳು-ಕುಣಿದಳು. ಈಗ ಮತ್ತೆ ಅದೇ ರುದ್ರ ನರ್ತನ ಯಾಕೆ ಹೀಗೆ? ಏನಾಗಿದೆ ಇವಳಿಗೆ? ಏನು ಬೇಕಾಗಿದೆ ಇವಳಿಗೆ?
      ಅಷ್ಟರಲ್ಲಿ ಅಲ್ಲಿಗೆ ಬಂದ ಮಂಜಣ್ಣ ಹೇಳಿದ."ಎಂತೋ ಗಪ್ಪ ಕತ್ತೆ ಮೇಲೆ ಒಂದೇ ಸಮ ನಿತ್ಗಂಡು ಯೋಚನೆ ಮಾಡ್ತೆ? ಎಂತಾತ? " ಎಂದು. ಅದಕ್ಕೆ ನಮ್ಮ ಗಪ್ಪಣ್ಣ ಹೇಳಿದ " ಎ೦ತು ಇಲ್ಯ ಮಂಜ.ಈ ಮಳೆ ಮೇಲೆ ಸುಮ್ನೆ ಯೋಚನೆ ಮಾಡ್ತಾ ಇದ್ದಿದ್ದಿ. ಅರ್ಥನೇ ಆಗ್ತಾ ಇಲ್ಲೆ ಮಾರಾಯ ಇದು. ಮುಂಚೆ ಬತ್ನೆ ಇಲ್ಲೆ ಅಂತಿತ್ತು. ಈಗ ಹೋಗ್ತನೆ ಇಲ್ಲೆ ಅಂತಿದ್ದು. ಎಂತ ಇದರ ಕಥೆ?"

No comments:

Post a Comment