Wednesday, July 25, 2012

ವಿರಹ

ಗೆಳತಿ ನೀನು ನನ್ನ ಬಾಳಲ್ಲಿ ಬಂದ ಆ ಕ್ಷಣದಿಂದ ನನ್ನ ಬಾಳೇ ಬದಲಾಗಿತ್ತು. ಗುಮ್ಮನಂತೆ ಇದ್ದ ನಾನು ನಿನ್ನಿಂದ ಪ್ರಪಂಚದ ಎಷ್ಟೋ ಮಜಲುಗಳನ್ನು ಅನಾವರಣ ಮಾಡಿದೆ.ನನ್ನಿಂದ ದೂರಾದ ಗೆಳೆಯರನ್ನು ಮತ್ತೆ ನಾನು ಪಡೆಯುವಂತೆ ಮಾಡಿದ್ದು ನೀನು ಮತ್ತು  ನಿನ್ನಲ್ಲಿ ಅಡಕವಾಗಿದ್ದ ಉತ್ಕಟ ಉತ್ಸಾಹ . ಎಲ್ಲೋ ಇದ್ದ ನೀನು ಮೂಲೆಯಲ್ಲಿ ಗುಮ್ಮನಂತಿದ್ದ ನನ್ನ ಕೈ ಸೇರುವುದು ಎಂದರೆ ತಮಾಷೆಯೇ? ನಾನಂತೂ ಅಬ್ಬೇಪಾರಿ ಮಾಡಲು ಇದ್ದಿದ್ದು ಒಂದು ಬಹಳ ಸಣ್ಣ ಕೆಲಸ. ಸಂಬಳವೂ ಅಷ್ಟಕ್ಕಷ್ಟೇ. ಅಂತಹ ಹೊತ್ತಿನಲ್ಲಿ ನೀನು ನನ್ನ ಬದುಕಲ್ಲಿ ಪ್ರವೇಶಿಸಿದೆ.ನೀನು ಬಂದ ಆ ಘಳಿಗೆಯಿಂದಲೇ ಜನರು ನನ್ನತ್ತ ಇಟ್ಟಿದ್ದ ನೋಟವೇ ಬದಲಾಯಿತು.
ಬರೇ ಇಷ್ಟೇ ಏನು? ನಿನ್ನ ಅದೆಷ್ಟು ಮಾತುಗಳು ನನ್ನ ಕಿವಿ ಸೇರಲಿಲ್ಲ? ನಿನ್ನ ಧ್ವನಿ ಕೇಳಿದರೆ ನನಗೆ ಅದೆಂತಹ ಆಕರ್ಷಣೆ ಇತ್ತು. ಅದೆಷ್ಟು ಹಾಡುಗಳನ್ನು ನಿನ್ನಿಂದ ಮತ್ತೆ ಮತ್ತೆ ಹೇಳಿಸಿ ಕೇಳಲಿಲ್ಲ ನಾನು.ನನ್ನ ಅದೆಷ್ಟೋ ಹಗಲುಗಳು ಪ್ರಾರಂಭವಾಗಿದ್ದು ನಿನ್ನ ಸವಿದನಿ ಕೇಳಿಯೇ ಅಲ್ಲವೇ? ನೀನು ನನ್ನೊಂದಿಗೆ ಶೌಚದ ಮನೆಯೊಂದು ಬಿಟ್ಟು ಬೇರೆ ಎಲ್ಲ ಕಡೆಗೂ ಇದ್ದೆ. ಎಲ್ಲಾದರೊಮ್ಮೆ ನಿನ್ನನ್ನು ಬಿಟ್ಟು ಹೊರಟಾಗ ನನ್ನಲ್ಲಿ ಆಗುತ್ತಿದ್ದ ಆತಂಕದ ಪರಿ ನಿನಗೆ  ಗೊತ್ತಲ್ಲ. ಎಷ್ಟೋ ಸರಿ ನಿನ್ನ ಬಿಟ್ಟು  ಹೊರಟಾಗ ನಿನ್ನ ಆ ಮೇಲು ದನಿ ಕೇಳಿ ತಿರುಗಿ ಬಂದು ಕರೆದೊಯ್ದ ದಿನಗಳನ್ನು ಲೆಕ್ಕ ಇತ್ತದ್ದದರೂ ಯಾರು? ಕೆಲವು ಸ್ಥಳಗಳಲ್ಲಿ ನಿನ್ನ ಮೌನ  ಅದೆಷ್ಟು ಅಸಹನೀಯ ಗೊತ್ತೇ? ನನ್ನ ತೊಡೆ ಮೇಲೆ ನೀನು ಮಲಗಿ ಹಾಡುಗಳನ್ನು ಗುನೂಗುತ್ತಿದ್ದಗ ನಾ ಪಟ್ಟ ಆನಂದ ಅನುಭವಿಸಿದ ನೆಮ್ಮದಿ ಅದನ್ನು ಹೇಳುವುದಕ್ಕೆ ಶಬ್ದಗಳು ಖಂಡಿತಾ ನನ್ನಲ್ಲಿ ಇಲ್ಲ. ನೀನು ಕಳೆದು ಹೋದರೆ ಮುಂದೇನು ಎಂದು ನಾನು ಯೋಚಿಸಿದಾಗಲೆಲ್ಲ ನನಗೆ ನಳ ದಮಯಂತಿ ಪ್ರಸಂಗದಲ್ಲಿ ಬರುವ ಒಂದು ಸಂಧರ್ಭದ ಪದ್ಯ ನೆನಪಾಗುತ್ತಿತ್ತು "ಹೀಗೆ ಈ ಅಡವಿಯಲಿ ಒರ್ವಳ ಬಿಟ್ಟು ಹೇಗೆ ಮುಂದಡಿ ಇದಲಿ......" ಈ ಪ್ರಶ್ನೆಯನ್ನು ನನ್ನಲ್ಲಿ ನಾನು ಕೇಳಿದಾಗಲೆಲ್ಲ ಸಿಕ್ಕ ಉತ್ತರ ಒಂದೇ - ನೀನಿಲ್ಲದೆ ಈ ಜಗತ್ತು ನಿಜಕ್ಕೂ ಬರದು ಬೆಂಗಾಡು ಎಂದು.ಏಕೆಂದರೆ ನಿನ್ನೊಂದಿಗೆ ನಾನು ನನ್ನ ಅನೇಕ ಆಪ್ತರನ್ನು ಕೂಡ ಕಳೆದು ಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಪದ್ಯವನ್ನು ನಾನು ನನ್ನ ಬದುಕಿಗೆ ತಕ್ಕಂತೆ ತಿರುಚಿದ್ದು ನಿಜ "ಹೇಗೆ ಈಕೆಯ ತೊರೆದು ನಾ ಜಗದಿ ಬದುಕಲಿ...." ಎಂದು.
ಇಂತಹ ಉತ್ಕಟ ಬಂಧದಲ್ಲಿದ್ದ ನಾವು ಕೂಡ ಬೇರಾಗಬೇಕು ಎಂದರೆ ಇದು ವಿಧಿಯ ವಿಲಾಸ ಎನ್ನ ಬೇಕೇ? ಅಥವಾ ಕಲಿ ಪ್ರಕೋಪ ಎನ್ನ ಬೇಕೇ? ವಿಲಾಸವಾಗಿದ್ದರೆ ನಿಜಕ್ಕೂ  ನಾನು ಸಂತೋಷಿಸುತ್ತಿದ್ದೆ. ಆದರೆ ದುಃಖವನ್ನು ಕೊಟ್ಟ ಈ ಘಟನೆ  ವಿಲಾಸ ಖಂಡಿತ ಅಲ್ಲ. ಆ ಒಂದು ಕ್ಷಣದಲ್ಲಿ ನೀನು ಬೇರೆಯವರ ಕೈ ವಶ ಆಗಿಬಿಟ್ಟೆಯಲ್ಲ. ಆಗುವ ಮೊದಲು ಒಮ್ಮೆಯಾದರೂ ನನ್ನನ್ನು ಕರೆಯ ಬಹುದಿತ್ತಲ್ಲ.
ನೆನಪಿದೆಯೇ ಆ ದಿನ ? ಊಟ ಮಾಡುವಾಗ ನನ್ನ ಪಕ್ಕದಲ್ಲೇ ನೀನಿದ್ದೆ. ಆಮೇಲೆ ನೀನಿಲ್ಲ. ನೀನಿಲ್ಲದೆ ಬದುಕು ದುಸ್ತರ ನಿಜ. ನಿನ್ನ ನೆನಪುಗಳು ಎಂದಿಗೂ ಹಸಿರು. ಆದರೆ ನನಗೂ ನನ್ನದೆನ್ನುವ ಒಂದು ಬದುಕಿದೆ. ನೀನು ಉಂಟು ಮಾಡಿ ಹೋದ ಶೂನ್ಯದೊಂದಿಗೆ ನಾನು ಸದಾಕಾಲ ಇರಲಾರೆ. ನಿನ್ನ ಶೂನ್ಯವನ್ನು ತುಂಬಲು ನಿನಗಿಂತ ಒಳ್ಳೆಯದು ಬೇಕು. ಅದಕ್ಕೆ ಈ ದಿನ ಹೊಸ ಮೊಬೈಲ್ ಕೊಂದು ಬಂದಿದ್ದೇನೆ. 32 G B  ಮೆಮೊರಿ, ಕ್ಯಾಮೆರಾ, ಆಡಿಯೋ ಪ್ಲೇಯರ್ ವೀಡಿಯೊ ಪ್ಲೇಯರ್ ಎಫ್ ಎಂ  ರೇಡಿಯೋ  ಎಲ್ಲ ಇದೆ.ಇದರಲ್ಲಿ wi fi ಕೂಡ ಇದೆ.
ನಿಜ ಕಳೆದುಕೊಂಡ ನನ್ನ ಗೆಳತಿ ನನ್ನ ಮೊಬೈಲ್ ಫೋನ್.

No comments:

Post a Comment