Thursday, July 12, 2012

ಬಾಲುವಿನ ಬಾಳ ಲಹರಿ

ಬಾಲು ತನ್ನ ಮನೆಯ ಹೊರಗಿನ ಜಗುಲಿಯ ಮೇಲೆ ಕುಳಿತು ಎದುರು ಮನೆಯ ಕಿಟಕಿಲ್ಲಿ ಬೆಳಗಾಗುವುದನ್ನೇ ಕಾಯುತ್ತಿದ್ದ. ಅವನ ಲೆಕ್ಕದಲ್ಲಿ ಲೋಕದಲ್ಲಿ ಬೇಕಾದರೆ ನೂರು ಸೂರ್ಯರು ಬೆಳಗಲಿ ಅದು ಎದುರು ಮನೆಯ ದೀಪದ ಬೆಳಕಿನ ಮುಂದೆ ಏನು ಅಲ್ಲ. ಅವನು ಎದುರು ಮನೆಯ ಆ ದೀಪದಲ್ಲಿ ಕಂಡದ್ದಾದರೂ ಏನು? ಅದನ್ನು ಅವನೇ ಹೇಳತೊಡಗಿದರೆ ಚಂದ ನಿಜ. ಆದರೆ ಅದನ್ನು ನಾನು ಒಮ್ಮೆ ಕೇಳಿ ಒಂದು ಬಾಟಲ್ ಅಮೃತಾಂಜನ ಖರ್ಚು ಮಾಡಿದ್ದರಿಂದ ನಿಮಗೆ ಆ ಗತಿ ಬೇಡ ಎಂದು ಸರಳವಾಗಿ ಮತ್ತು ಸುಲಭವಾಗಿ ತಿಳಿಸುವ ಪ್ರಯತ್ನ ಮಾಡುತ್ತೇನೆ. 
ದೀಪಾ ಎದುರು ಮನೆಗೆ ಬಂದ ಹುಡುಗಿ. ಆ ಮನೆ ಮಾಲಕಿ ಲಕ್ಷ್ಮಕ್ಕನ ಅಕ್ಕನ ಮಗಳು. ಊರಲ್ಲಿ ಕಾಲೇಜಿಗೆ ಹೋಗುವುದಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣ ಚಿಕ್ಕಮ್ಮನ ಮನೆ ಸೇರಿದ್ದಳು. ಅವಳು ಅಲ್ಲಿ ಸೇರಿದ ಮೇಲೆ ಬಾಳುವಿನ ಬಾಳ ತುಂಬಾ ಬೆಳಕೋ ಬೆಳಕು. ಎಷ್ಟು ಬೆಳಕು ಅಂದರೆ ರಾತ್ರಿ ಕೂಡ ಹಗಲಾಗಿದೆ. ಅಂದರೆ ನಮ್ಮ ಬಾಲು ನಿದ್ದೆ ಇಲ್ಲದೇ ರಾತ್ರಿ ಕಳೆಯುತ್ತಿದ್ದಾನೆ. ಆದರೆ ಅವನಿಗೆ ನಿದ್ದೆ ಬರದಿದ್ದಾಗ ಓದುವ ಅಭ್ಯಾಸ ಅಲ್ಲ ಹವ್ಯಾಸ. ಮೊದಲು ಕಾರ್ಯಭಾರದ ಕಾರಣ ಪರೀಕ್ಷೆಯ ಸಂಧರ್ಭದಲ್ಲಿ ಮಾತ್ರ ಈ ಕೆಲಸ ಮಾಡುತ್ತಿದ್ದ ಈಗ ಪ್ರತಿ ದಿನ ಮಾಡಿ ಅಭ್ಯಾಸವಾಗಿದೆ. ಪರಿಣಾಮ ಮೊನ್ನೆ ನಡೆದ internal assessment ನಲ್ಲಿ ಒಳ್ಳೇ ಮಾರ್ಕ್ಸ್ ಬಂದಿದೆ.ಅಷ್ಟೇ ಅಲ್ಲ ಮೊದಲು ಯಾವುದೋ ಬಸ್ಸು ಎಂದುಕೊಂಡು ಮನೆಯಿಂದ ಹೊರಡುತ್ತಿದ್ದವ ಸರಿಯಾದ ಸಮಯಕ್ಕೆ ಹೊರಡುತ್ತಿದ್ದಾನೆ. ಇದರಿಂದ ನಮ್ಮ ಬಾಲುವಿನ ತಂದೆ ಕೃಷ್ಣ ಭಟ್ಟರು ಭಾರಿ ಸಂತುಷ್ಟರು ಏಕೆಂದರೆ ಬಸ್ಸಿಗೆ ಪಾಸ್ ಇರುವುದರಿಂದ ಕಾಸು ಮಿಗುತ್ತದೆ ಮತ್ತು ಮಗ ದಿನಾ ಬೆಳಿಗ್ಗೆ ಬೇಗ ಎದ್ದು ಮನೆ ಕಡೆ ಸ್ವಲ್ಪ ಕೆಲಸ ಮಾಡಿ ಸಂಧ್ಯಾವಂದನೆ ಕೂಡ ಮಾಡುತ್ತಿದ್ದಾನೆ ಎಂದು. ಬಾಲು ಈಗ ಕಾಲೇಜಿನಲ್ಲಿ ಕೂಡ ಒಳ್ಳೇ ಹಾಜರಾತಿ ಹೊಂದಿದ್ದಾನೆ.

ಒಂದು ದಿನ ತನ್ನಷ್ಟಕ್ಕೆ ತಾನೇ ಕುಳಿತು ತನ್ನೊಬ್ಬನ ಬಗ್ಗೆಯೇ ಯೋಚಿಸಿದ ಬಾಳು ತಾನು ಇನ್ನೂ ಹೆಚ್ಚಾದಗ ಮಾತ್ರ ದೀಪಳಿಗೆ ತಾನು ಒಳ್ಳೆಯ ಸಂಗಾತಿಯಾಗಳು ಸಾಧ್ಯ ಅಂತ ಅರ್ಥ ಮಾಡಿಕೊಂಡ ಆದರೆ ತನ್ನಲ್ಲಿ ಇಷ್ಟೆಲ್ಲಾ ಒಳ್ಳೆಯದು ಮಾಡಿದ ದೀಪಳಿಗೆ ಕೃತಜ್ಞತೆ ಸಲ್ಲಿಸ್ದೇ ಇದ್ದಾರೆ ಅದು ಸರಿಯಲ್ಲ, ಹಾಗೆಯೇ ಪ್ರೇಮವನ್ನು ನಿವೇದಿಸದೇ ಇದ್ದಲ್ಲಿ ಅದೂ ಸರಿಯಲ್ಲ ಎಂದು ಯೋಚಿಸಿದ ಬಾಳು ಒಂದು ಕವಿತೆಯ ಮೂಲಕ ಇವೆರಡನ್ನೂ ಮಾಡಲು ನಿರ್ಧರಿಸಿದ.

ತನ್ನ ಈ ತೀರ್ಮಾನವನ್ನು ಕಾರ್ಯರೂಪಕ್ಕೆ ತರಲು ತನ್ನ ಸ್ಫೂರ್ತಿ ದೇವತೆ ದೀಪಾಳ ಬರುವಿಕೆಯನ್ನು ಎದುರು ನೋಡುತ್ತಾ ಮನೆಯ ಎದುರು ಪೆನ್ನು ಪುಸ್ತಕಗಳೊಂದಿಗೆ ಕುಳಿತಿದ್ದಾನೆ ಈಗ. ಕುಳಿತು ಗಂಟೆ ಎರಡು ಕಳೆಯಿತು. ದೀಪಾ ಬರಲಿಲ್ಲ. ಬಾಳುವಿನ ಅಪ್ಪಯ್ಯಾನಿಗೆ ಖುಷಿಯೋ ಖುಷಿ ಯಾಕೆ ಅಂದ್ರೆ ಮಾಣಿ ಪುಸ್ತಕ ಹಿಡ್ಕೈಂದ. ದೀಪಳ ಧ್ವನಿ ಕೇಳುತ್ತಿಂದಂತೆ ಬಾಳು ಕವಿತೆಯ ಮೊದಲ ಸಾಲು ಬರೆದ-- ಓ ಸುಂದರಿ ನೀನಾದೆ ನನ್ನ ಬಾಳ ಲಹರಿ.......

ಮುಂದಿನ ಸಾಲಿಗೆ ಆದಿ ಪ್ರಾಸ ಕೊಡುವುದೋ ಅಂತ್ಯ ಪ್ರಾಸ ಕೊಡುವುದೋ ಅಥವಾ ಪ್ರಾಸವೇ ಇಲ್ಲದ ನವ್ಯ ನವೋದಯದ ಪ್ರೇಮ ಕವಿತೆ ಬರೆಯಲೋ ಎಂದು ತ್ರಾಸ ಪಡುತ್ತಿದ್ದವನಿಗೆ ಎದುರು ಮನೆಯಿಂದ ಲಕ್ಷ್ಮಮ್ಮನ ಹಳಗನ್ನಡದ ನುಡಿಗಳು ಕೇಳಿದವು. "ಅಯ್ಯೋ ಎಂತ ಕೆಲ್ಸಾ ಮಾಡಿದ್ಯೆ ಹಾಲ್ಬಿದ್ದವಳೇ ಓದ್ಲಿ ಒಳ್ಳೇದಾಗಲಿ ಒಂದು ಒಳ್ಳೇ ಮನೆ ಸೇರಿ ಬದೂಕ್ಲಿ ಅಂತ ಹೇಳಿ ಇಲ್ಲಿ ಕರ್ಕಂಡು ಬಂದ್ರೆ ಸಲೀಮನ ಲವ್ ಲೆಟರ್ ಓದ್ತಾ ಇದ್ಯೆಲೆ. ಎಂತ ಅವನ ಜೊತೆ ತೊಗರು ವ್ಯಾಪಾರ ಮಾಡಕ್ಕೂಅಂತ ಇದ್ಯಾ? ಅಥವಾ ಅವನ ತಮ್ಮನ ಗ್ಯಾರೇಜ್ ಬಟ್ಟೆ ತೊಳೆಯಕ್ಕೂ ಅಂತ ಇದ್ಯಾ. ಇನ್ನೊಂದು ಸಲ ಇದನ್ನ ಮಾಡಿರೆ ಕೊಡು ಹಾಕ್ತಿ ನೋಡು. ಏನು ಹಾಳು ಬುದ್ಧಿಯೇನ ಹೆಣ್ಣು ಮಕ್ಳೀಗೆ ಲವ್ ಮಾಡದು ಮಾಡ್ತಾ ನೋಡಿ ಮಾಡಕ್ಕೆ ಎಂತ ರೋಗ" ಎನ್ನುತ್ತಾ ದೀಪಳ ಮೇಲೆ ಲಕ್ಷ್ಮಮ್ಮ ಫೂತ್ಕರಿಸುತ್ತಿದ್ದಳು.

ಇದನ್ನೆಲ್ಲ ಕೇಳಿದ ಕಥಾ ನಾಯಕ ತಾನು ಸನ್ಯಾಸಿ ಆಗಲೋ ಅಥವಾ ತನ್ನಲ್ಲಿ ಆಗಷ್ಟೇ ಹುಟ್ಟುತ್ತಿದ್ದ ಮಹಾ ಕವಿಯನ್ನು ಕೊಲೆ ಮಾಡಿದ ತೊಗರು ಸಲೀಮನ ವಿರುದ್ಧ ಸೇಡು ತೀರಿಸಿ ಕೊಳ್ಳಲೋಎಂದು ಯೋಚಿಸ ತೊಡಗಿದ.

No comments:

Post a Comment