Monday, July 30, 2018

ಕಳ್ಳಿಪೀರ

ನಾನು ಚಿಕ್ಕವನಿದ್ದಾಗ ನಮ್ಮ ಮನೆಯಲ್ಲಿ ಗದ್ದೆ ಬೇಸಾಯ ನಡೆಯುತ್ತಿತ್ತು. ಗದ್ದೆ ಕೊಯ್ಲಿನ ನಂತರದಲ್ಲಿ ಅದನ್ನು ತಂದು ಹರ ಹಾಕಿ, ಒಕ್ಕಿ, ಭತ್ತ ಜಪ್ಪಿ ನಂತರ ಭತ್ತವನ್ನು ಒಟ್ಟು ಮಾಡಿ ಪಣಥ ಸೇರಿಸುತ್ತಿದ್ದರು. ಈ ಸಮಯದಲ್ಲಿ ಹರ ಹಾಕಿದ ಹುಲ್ಲಿನ ಮೇಲೆ ಎತ್ತಿಗೆ ರೋಣಗಲ್ಲನ್ನು ಕಟ್ಟಿ ಓಡಿಸುವವನ ಕೂಗಾಟ ಚೀರಾಟದ ಮಧ್ಯೆ, ಮನೆಯ ಎದುರಿಗೆ ಎತ್ತರದಲ್ಲಿದ್ದಎಲೆಕ್ಟ್ರಿಕ್ ತಂತಿಯ ಮೇಲೆ ಸಾಲಾಗಿ ಕೂರುತ್ತಿದ್ದ ಹಕ್ಕಿಗಳ ಸಾಲು. ಹಕ್ಕಿಗಳು ಹಸಿರು ಬಣ್ಣದಲಿದ್ದವು. ಅದನ್ನು ನೋಡಿ ಎಲ್ಲರೂ ಗಿಳಿ ಎಂದು ಕರೆಯುತ್ತಿದ್ದೆವು. ನಂತರದಲ್ಲಿ ನಮ್ಮ ಮನೆಯಲ್ಲಿ ಗದ್ದೆ ಮಾಡುವುದನ್ನು ಕೈಬಿಡಲಾಯ್ತು. ಅದಾಗಿ ಸ್ವಲ್ಪ ದಿನಗಳಲ್ಲಿ ನಾವು ಗಿಳಿ ಎಂದುಉ ಕರೆಯುತ್ತಿದ್ದ ಆ ಹಕ್ಕಿಗಳ ಆಗಮನವೂ ನಿತ್ತು ಹೋಯ್ತು. ಆದರೂ ಅಲ್ಲಲ್ಲಿ ಆ ಹಕ್ಕಿ ದರ್ಶನವನ್ನು ಕೊಡುತ್ತಿತ್ತು. ಆದರೆ, ಬೆಲೆಯುತ್ತಿದ್ದ ದೇಹ ಅದರೊಂದಿಗೆ ಹ್ಸೆದು ಬೆಸೆದುಕೊಂಡಿದ್ದ ಮನಸ್ಸು ಅವೆರಡೂ ಆ ಕಡೆ ಕುತೂಹಲವನ್ನು ತಾಳಲಿಲ್ಲ. ಗೊತ್ತಾದ ಒಂದೇ ವಿಚಾರವೆಂದರೆ, ಮಿರ್ನುವುದೆಲ್ಲಾ ಪೊನ್ನಲ್ಲ ಎನ್ನುವಂತೆ ಹಸಿರು ಬಣ್ಣದ ಹಕ್ಕಿಗಳೆಲ್ಲಾ ಗಿಳಿಗಳಲ್ಲ ಎನ್ನುವುದು.

ಕೊನೆಗೆ ನಾನೂ ಅನೇಕರಂತೆ ಕ್ಯಾಮರಾ ತೆಗೆದುಕೊಂಡೆ. ಆಗ ಹೊಸ ಬಿಸಿಯಲ್ಲಿ ಸಿಕ್ಕ ಸಿಕ್ಕಲ್ಲೆಲ್ಲಾ ನನ್ನ ಕ್ಯಾಮರಾ ಕಣ್ಣು ಹರಿಯುತ್ತಿತ್ತು. ಮಧ್ಯೆ ತೇಜಸ್ವಿಯವರ ಪುಸ್ತಕಗಳನ್ನು ಓದಿದ್ದು ಮನುಷ್ಯನಿಗಿಂತ ಅನ್ಯ ಜೀವಿಗಳ, ಅದರಲ್ಲೂ ಹಕ್ಕಿಗಳೆಡೆಗೆ ನನ್ನಲ್ಲಿ ಅದೇನೋ ವಿಶೇಷ ಆಕರ್ಷಣೆ ಬೆಳೆಸಿತ್ತು. ಕ್ಯಾಮೆರಾದಲ್ಲಿ ಒಮ್ಮೆ ಈ ಹಕ್ಕಿಯ ಚಿತ್ರವನ್ನು ತೆಗೆದು ಫೇಸ್ ಬುಕ್ಕಿನಲ್ಲಿ ಹಾಕಿದೆ. ಆಗೆಲ್ಲಾ ಫೋಟೋಗಳು ಕೇವಲ ನನ್ನ ಗೋಡೆಯ ಮೇಲೆ ಮಾತ್ರ ಇರುತ್ತಿದ್ದವು. ನನ್ನ ಫೋಟೋಗ್ರಫಿ ಸೊಗಸಲ್ಲ, ನೋಡುವುದಕ್ಕೂ ಯೋಗ್ಯವಲ್ಲ. ಆದರೂ ನಾನು ಹಕ್ಕಿಗಳ ಫೋಟೊ ತೆಗೆಯುವುದು ಬಿಡಲಿಲ್ಲ. ಕಾರಣ ಇಷ್ಟೇ. ಗುಬ್ಬಿಗಳಂತೆ ನಾಳೆ ಉಳಿದ ಹಕ್ಕಿಗಳೂ ಮರೆಯಾದರೆ ನೋಡುವುದಕ್ಕಾದರೂ ಇರಲಿ ಎನ್ನುವಂತೆ. (ಔಷಧಿಗೆ ಎಂದು ಹಳೆಯ ಕಾಲದಲ್ಲಿ ಕಲ್ಲುಸಕ್ಕರೆ ತೆಗೆದಿಟ್ಟಂತೆ.)

ಹೀಗೆ ಕ್ಯಾಮರಾವನ್ನು ಕಂಡ ಕಂಡಲ್ಲಿಟ್ಟು ಬಟನ್ ಒತ್ತುತ್ತಿದ್ದಾಗ (ಫೋಟೋಗ್ರಫಿ ಎನ್ನುವ ಶಬ್ದಕ್ಕೆ ನಾನು ತೆಗೆದ-ತೆಗೆಯುವ ಎಷ್ಟೋ ಚಿತ್ರಗಳು ಅಪವಾದ-ಅಪಸವ್ಯ. ಹಾಗಾಗಿ ನಾನು ಆ ಶಬ್ದ ಬಳಸುತ್ತಿಲ್ಲ) ಸಿಕ್ಕ ಹಕ್ಕಿಗಳ ಫೋಟೋಗಳನ್ನು ಫೇಸ್ ಬುಕ್ಕಿನ ಹಕ್ಕಿಗಳಿಗೆ ಸಂಬಂಧಿಸಿದ ಗ್ರೂಪಿನಲ್ಲಿ ಹಾಕಿ ಅವುಗಳ ಹೆಸರನ್ನು ತಿಳಿಯುತ್ತಿದ್ದೆ. ಆಗ ಈ ಹಕ್ಕಿಯ ಹೆಸರು ಗ್ರೀನ್ ಬೀ ಈಟರ್ ಎಂದು ತಿಳಿಯಿತು. ಕನ್ನದದಲ್ಲಿ ನೇರವಾಗಿ ಭಾಷಾಂತರಿಸಿದರೆ " ಹಸಿರು ನೊಣ ಹಿಡುಕ" ಎಂದಾಗುತ್ತದೆ. ಆದರೆ ಸಂಧಿ ಸಮಾಸಗಳನ್ನು ಸೃಷ್ಟಿಸಿ ಆಡುವ ಭಾಷೆಯನ್ನು ಸುಲಭ-ಸುಲಲಿತಗೊಳಿಸಿದ ನಮ್ಮ ಜನ ಇಷ್ಟುದ್ದದ ಹೆಸರನ್ನು ಖಂಡಿತಾ ಇಟ್ಟಿರಲಾರರು. ಕೊನೆಗೆ ಮತ್ತೆಲ್ಲೋ ಹಕ್ಕಿಗಳ ಬಗ್ಗೆ ಓದುತ್ತಿದ್ದಾಗ ತಿಳಿದಿದ್ದು ಈ ಹಕ್ಕಿಯ ಹೆಸರು "ಜೇನುಬಾಕ" ಎನ್ನುವುದು. ಇದಕ್ಕೇ "ಕಳ್ಳಿಪೀರ" ಎಂದೂ ಕರೆಯುತ್ತಾರೆ ಎಂದು ತಿಳಿಯಿತು.

ಮೊನ್ನೆ ಎಲ್ಲೋ ಹಳೆಯ ಫೋಟೋಗಳನ್ನು ಹುಡುಕುತ್ತಿದ್ದಾಗ, ಈ ಹಕ್ಕಿಯ ಕೆಲವು ಫೋಟೋಗಳು ಸಿಕ್ಕವು. ತೆಗೆದು ಫೇಸ್ ಬುಕ್ಕಿನಲ್ಲಿ ಹಾಕುವ ಮೊದಲು ಕೆಲಾನ್ನು ತಿಳಿಯೋಣ ಎಂದು ಹುಡುಕಾಟ ನಡೆಸಿದೆ. ಸಿಕ್ಕ ವಿಚಾರಗಳು ಇಂತಿವೆ.

ಈ ಹಕ್ಕಿಯ ಮುಖ್ಯ ಆಹಾರ, ಜೇನ್ನೊಣ. ಹುಳ ಹುಪ್ಪಟೆಗಳು ಇರುವೆಗಳು ಕೂಡಾ ಇದರ ಆಹಾರ. ಇದನ್ನು ಸಂಸ್ಕೃತದಲ್ಲಿ ಸಾರಂಗ ಎಂದು ಕರೆಯುತ್ತಾರೆ. ತುಳು ಭಾಷೆಯಲ್ಲಿ ಇದನ್ನು ತುಂಬೆ ಪಕ್ಕಿ ಎನ್ನುತ್ತಾರೆ. ಎತ್ತರದ ಸ್ಥಳಗಳಲ್ಲಿ ಕೂರುವ ಸ್ವಭಾವ ಇದೆ. ವಿಶೇಷತೆ ಎಂದರೆ, ಇದು ಬಿಲದಲ್ಲಿ ವಾಸಿಸುತ್ತದೆ. ಗುಂಪಾಗಿ ಕೂರುವುದು ಇವುಗಳ ಸ್ವಭವ. ಮಳೆ ಆಧರಿಸಿ ಇವುಗಳ ವಲಸೆ ಇರುತ್ತದಂತೆ. ಮರಳು ಸ್ನಾನವೂ ಇವುಗಳ ವಿಶೇಷತೆಯಲ್ಲೊಂದು. ಆವಾಸ ಸ್ಥಾನ ಏಷಿಯಾ, ಪಶ್ಚಿಮ ಆಫ್ರಿಕಾ, ನೈಲ್ ಕಣಿವೆ, ಹಿಮಾಲಯ ಪರ್ವತ ಪ್ರದೇಶ ಹೀಗೆ ಎಲ್ಲೆಡೆ ವ್ಯಾಪಿಸಿದೆ. ಬೇಟೆಯಾಡಿದ ಹುಳುಗಾನ್ನು ತಿನ್ನುವ ಮೊದಲು ಅವುಗಳ ರೆಕ್ಕೆಗಳನ್ನು ಹರಿದು ಬಿಚ್ಚಿ, ಹೊರಭಾಗದ ಆವರಣವನ್ನು ಬೇರ್ಪಡಿಸಿ ತಿನ್ನುತ್ತವೆ. ಇದಕ್ಕಾಗಿ ಹಿಡಿದ ಬೇಟೆಯನ್ನು ಹಿಡಿದು ಕುಳಿತ ಕಂಬಿಗೆ ಪದೇ ಪದೇ ಬಡಿಯುತ್ತವೆ. ನಂತರ ನುಂಗುತ್ತವೆ.

ಕ್ಯಾಮರಾ ಹಿಡಿದು ಬಟನ್ ಒತ್ತಿದ್ದನ್ನು ಹೀಗೆ ಸಾರ್ಥಕಗೊಳಿಸಲೆಂದು ಗಡಿಬಿಡಿಯಲ್ಲಿ ಇಷ್ಟನ್ನೇ ತಿಳಿದು ಕಕ್ಕಿದ್ದೇನೆ. ಪಕ್ಷಿ ಪ್ರಪಂಚದಲ್ಲಿ ಇಟ್ಟ ಮೊದಲ ಅಂಬೆಗಾಲು. ವಿಚಾರ ಹೆಚ್ಚು ತಿಳಿಸಲಿಲ್ಲ. ನಾನೂ ತಿಳಿದಿಲ್ಲ. ಒಟ್ರಾಸಿ ಇದೆ. ನೀವು ತಿಳಿಸಿದರೆ ತಿಳಿವಾಸೆ ಇದೆ. ತಿಳಿಸಿ.






1 comment:

  1. ಇನ್ನು ಸ್ವಲ್ಪ ವಿವರ ಹಾಕಬಹುದಿತ್ತು. ಚೆನ್ನಾಗಿದೆ. ಸ್ಪೆಲ್ಲಿಂಗ್ ಮಿಸ್ಟೇಕ್ ದಂಡಿಯಾಗಿದೆ

    ReplyDelete