Tuesday, July 24, 2018

ಶುಕ್ರನ ಡೌಟ್

ಊರ ಹೆಗಡೆಯವರ ಮನೆಯ ಕೆಲಸ, ಅದರ ಮಧ್ಯೆ ಕೆರೆ ರಿಪೇರಿಯ ಮೇಲೋವರ್ಸೀ ಹೀಗೆ ಆಗಾಗ ಸಂದರ್ಭಕ್ಕೆ ತಕ್ಕಂತೆ ಅವತಾರಗಾಳನ್ನು ತಳೆಯುತ್ತಾ ಅವಾಂತರಗಲನ್ನು ಮೈ ಮೇಲೆ ಎಳೆದುಕೊಳ್ಳುತ್ತಾ ಸಾಗುವ ಶುಕ್ರ ಏನನ್ನಾದರೂ ಬಿಟ್ಟಾನು ಆದರೆ ತಾನು ಅರೆ ಬೆರೆ ಕಲಿತ ಯಕ್ಶಗಾನದಿಂದಲೇ ತಾನೊಬ್ಬ ಹೆಸ್ರಾಂತ ಕಲಾವಿದನಾಗಬೇಕು ಎನ್ನುವ ಆಸೆಯನ್ನಾಗಲೀ ಅಲ್ಲ. ಇವನ ಆಸೆಗೆ ಇಂಬು ಕೊಡಲೋ ಎನ್ನುವಂತೆ ಊರಿನಲ್ಲಿ ಹುಟ್ಟಿ, ಯಕ್ಷಗಾನ ಕಲಿತು ಜೊತೆಯಲ್ಲಿಯೇ ಇಂಜಿನಿಯರಿಂಗ್ ಓದಿ, ಕೊನೆಗೆ ಅಮೆರಿಕಾ ಸೇರಿ ದೊಡ್ಡ ಕೆಲಸ ಹಿಡಿದು ಈಗ ಮಕ್ಕಳೊಂದಿಗೆ ರಜೆ ಕಲೆಯಲು ಬಂದ ಗಣೇಶನ ವೇಷ ಮಾಡುವ ತಲುಬು ಜೊತೆಯಾಯಿತು.

ಒಂದು ಕಾಲದಲ್ಲಿ ತನ್ನ ಜತೆಗಾರನಾಗಿದ್ದ ನಾಗೇಂದ್ರನನ್ನು ಕರೆದು ತನ್ನ ಆಸೆ ಹೇಳಿಕೊಂಡ. ಗಣೇಶನ ಪ್ರತಿಭೆಯ ಸಂಪೂರ್ಣ ಪರಿಚಯವಿದ್ದ ನಾಗೇಂದ್ರ, ಒಪ್ಪಿದ್ದ. ಇಬ್ಬರೂ ಗೆಳೆಯರು ಮನೆಯ ಜಗುಲಿಯಲ್ಲಿ ಕುಳಿತು ಎಲೆ ಅಡಿಕೆ ಮೆಲ್ಲುತ್ತಾ ಪ್ರಸಂಗ ಶರಸೇತು ಬಂಧನ ಎಂದು ತೀರ್ಮನಿಸಿದರು, ಅದೇ ಊರಿನ ಮಹಾಬಲ ಹನುಮಂತನ ವೇಷ ಮಾಡುವುದು ಗಣೇಶ ಅರ್ಜುನನ ಪಾತ್ರ ನಿರ್ವಹಿಸುವುದು ಎಂದೂ ನಿರ್ಧಾರವಾಯಿತು. ಬ್ರಾಹ್ಮಣ ಪಾತ್ರಧಾರಿಯ ಬಗ್ಗೆ ಚರ್ಚಿಸುತ್ತಿರುವಾಗ ಪಕ್ಕದ ಮನೆಯಲ್ಲಿ ಸಗಣಿ ಎತ್ತುತ್ತಿದ್ದ ಶುಕ್ರ ಓಡಿ ಬಂದು ತಲೆ ತುರಿಸುತ್ತಾ ನಿಂತ
ನಾಗೇಂದ್ರ ಗಣೇಶ ಇಬ್ಬರೂ ಇರಿಸು ಮುರಿಸು ಅನುಭವಿಸತೊಡಗಿದ್ದರು ಶುಕ್ರ ಅಲಿದ್ದಿದ್ದರಿಂದ. ಈ ಇರಿಸು ಮುರಿಸು ಕೊನೆಯಾಗಬೇಕಿದ್ದರೆ ಶುಕ್ರ ಅಲ್ಲಿಂದ ತೊಲಗಬೇಕಿತ್ತು. ಆದರೆ ಇವ ಸುಲಭದಲ್ಲಿ ತೊಲಗ. ಅದಕ್ಕೇ ನಾಗೇಂದ್ರ ಮಾತಿಗೆಳೆದ. "ಎಂತಾ ಶುಕ್ರ! ಎಲ್ಲಾರೂ ವೇಷ ಮಾಡಿದ್ಯೇನ ಮತ್ತೆ!"

ಶುಕ್ರ ಶುರುವಿಟ್ಟುಕೊಂಡ. "ಎಂತ ಯಾಸು ಮಾಡುದೇ.. ಮೊದ್ಲಾರೆ ನಾವುಡ್ರ ನೆನಪಿತ್ತು. ನಾ ಅವ್ರ ಹೆಸ್ರ್ ಹೆಳ್ರೆ ಸಾಕಿತ್ ಒಂದ್ ಯಾಸು ಆಯ್ತಿದ್ದೀತ್. ಈಗ ಹಾಂಗಾ. ಅಲ್ಲ ವಾಲಿ ಕಳೂಕೆ... ದುಡ್ ಕೊಟ್ ಯಾಸು ಮಾಡೂ ಜನ ತಯಾರಾಯೀರ್ ಈಗ. ನಮಗೆ ಅದೆಲ್ಲ ಆತ್ತ?! ಹಪ್ ಹಿಡೂಕೆ. ಹಿಂಗೇ ಎಲ್ಲಾರೊ ಹವ್ಯಾಸಕ್ಕೆ ಸಿಕ್ರೆ ಮಾಡ್ವ ಅಂತ. ಮತ್ತೆ ನಂಗೂ ಈಗ ಮುಂಚಿನ ಕಸುವಿಲ್ಯೆ... ಕುಣೂಕಾತ್ಲ. ಅದ್ಕೇ ಸಣ್ ಯಾಸು ಕುಣಿತ ಕಮ್ಮಿ ಇಪ್ದಾರೆ ಮಾಡ್ಲಕ್....." ಹೀಗೆಲ್ಲಾ ಹಲುಬುತ್ತಿದ್ದಾಗ ನಾಗೇಂದ್ರನಿಗೆ ಶುಕ್ರನ ವಿದ್ಯುಲ್ಲೋಚನ ನೆನಪಾಗಿ ಒಳಗೊಳಗೇ ಕುದಿದ ಒಮ್ಮೆ. ಸಿಕ್ಕ ಸಮಯ ಅಂತ ನವಿರಾಗಿ ಝಾಡಿಸಿದ.

"ಮತ್ತೆ ಶುಕ್ರ ನಿಂಗೂ ಈಗ ಮರೆವು ಶುರುವಾತು ಕಾಣ್ತದೆ. ಅವತ್ತು ವಿದ್ಯುಲ್ಲೋಚನನ ಪ್ರವೇಶ ತಪ್ಪಿ ಹೊಗಿತ್ತು ನೋಡು.."

ವೇಷ ಮಾಡುವ ಆತುರದಲ್ಲಿದ್ದ ಶುಕ್ರನಿಗೆ ಅವಮಾನವಾಗಲೇ ಇಲ್ಲ, ಅವಕಾಶವೇ ಆಯಿತು. "ಹೌದೆ... ಆರೆ ಮಹಾಭಾರತದ ಪೌರಾಣಿಕ ಪ್ರಸಂಗ ಪೂರ್ತಿ ನೆನಪಿತ್.. ಭೀಷ್ಮ ವಿಜಯ, ಸುಭದ್ರಾ ಕಲ್ಯಾಣ, ಕೃಷ್ಣಾರ್ಜುನ, ಭೀಷ್ಮ ಪ್ರತಿಜ್ಞೆ ಎಲ್ಲಾ ಪೂರಾ ನೆನಪಿತ್ ಕಾಣೀ... ಅದ್ರಾಗೆಲ್ಲ ಬಪ್ಪ ವನಪಾಲಕ, ಕಂದರ, ದಾರುಕ ಎಲ್ಲಾ ಮಾಡೂದಾರೆ ಆತ್ತ್..."

ಈಗ ಗಣೇಶ ಬಾಯಿ ಹಾಕಿದ. "ಶರಸೇತು ಬಂಧನದ ಬ್ರಾಹ್ಮಣನ ನಡೆ ಗೊತ್ತಿದೆಯಾ ಶುಕ್ರ..." ನಾಗೇಂದ್ರ ತಡೆಯಲು ನೋಡಿದನಾದರೂ ಸಾಧ್ಯವಾಗಲಿಲ್ಲ.

ಶುಕ್ರ ನಡೆ ಬಿಚ್ಚಿಟ್ಟ. "ಅರ್ಜುನ ಹನುಮಂತ ಮಾತಾಡ್ಕಂಡ್ ಮಾತು ವಾದ ಆಯಿ ಪಂಥ ಆತ್ತ್... ಮತ್ತೆ ಅರ್ಜುನ ಸೇತುವೆ ಕಟ್ಟಿದ ಹಾಂಗೂ ಸೇತುವೆ ಮುರ್ದೆ ಹಾಕ್ತ ಹನ್ಮಂತ. ಸೊಕ್ಕಿಳಿದ ಅರ್ಜುನ ಬೆಂಕಿಗೆ ಹಾರೂಕೆ ಹ್ವಾತ. ಅಶ್ಟೋತ್ತಿಗೆ ಕಿಷ್ಣ ಬ್ರಾಮಣ ಆಯಿ ಬಂದ್ ಮತ್ತೊಂದ್ ಸತಿ ಸೇತ್ವೆ ಕಟ್ಟೂಕೆ ಹನುಮಂತನ ಕೈನಂಗೆ ಮುರೂಕೆ ಹೇಳೂದ್.. ಹನುಮಂತಂಗೆ ಆತ್ಲ... ಆಗ ರಾಮರೂಪ ಬತತ್ ಕಾಣಿ..."
ಗಣೇಶ ನಾಗೇಂದ್ರನಿಗೆ ಹೇಳಿದ "ಇವನೇ ಮಾಡ್ಲಿ ಬಿಡ. ನಡೆ ಗೊತ್ತಿದ್ದಲ"

ನಾಗೇಂದ್ರನಿಗೂ ಹೌದೆನ್ನಿಸಿತ್ತು. ಒಪ್ಪಿದ. ಆದರೆ ಈಗ ಶುಕ್ರನಿಗೆ ಯೋಚನೆ ಶುರುವಾಯಿತು.

"ಅಲ್ಲ ಗಣೇಶಯ್ಯ ಸಿಕ್ಕಾಪಟ್ಟೆ ಓದೀರಂಬ್ರ್. ಅವ್ರಿಪ್ಪ ದೇಶ್ದಂಗೆ ಇಂಗ್ಲೀಷೇ ಮಾತಾಡ್ತ್ರಂಬ್ರ್. ಈಗೆನಾರು ಯಾಸು ಮಾಡಿ ಅವ್ರ್ ಇಂಗ್ಲೀಷ್ ಮಾತಾಡಿಬಿಟ್ರೆ?! ಆಟ ಹಾಳಾಪೂದ್ ಅತ್ಲಾಗಿರ್ಲಿ. ನಂಗೆ ಇಂಗ್ಲೀಷ್ ಬತ್ಲ ಅಂತಾಯಿ ಮರ್ಯಾದಿ ಹ್ವಾತ್ತ್. ಎಂತ ಮಾಡೂದ್ ಈಗ. ನಾನೇ ಮೇಲ್ಬಿದ್ ಯಾಸು ಮಾಡ್ತೆ ಅಂದೇಳಿ ಕೈ ಕೊಟ್ರೆ ಮತ್ತೆ ಯಾಸು ಸಿಕ್ಕೂದಿಲ್ಲ. ಎಂತ ಮಾಡೂದ್..." ಹೀಗೆಯೇ ಯೋಚಿಸುತ್ತಾ ಮನೆ ಕಡೆ ಸಾಗುತ್ತಿದ್ದಾಗ ಥಟ್ಟನೆ ಉಪಾಯವೊಂದು ಎಲ್ಲಿಂದಲೋ ಬಂದು ಸೇರಿತ್ತು. ಶುಕ್ರ ಸಮಾಧಾನ ಪಟ್ಟಿದ್ದ.

ಆಟದ ದಿನ ಬಂತು. ರಂಗಸ್ಥಳ ಸಜ್ಜಾಯಿತು. ಎಷ್ಟೋ ವರ್ಷಗಳ ನಂತರ ಹಳೆಯ ಗೆಳೆಯರ ಕೂಡುವಿಕೆಯಲ್ಲಿ ನಡೆಯುವ ಪ್ರದರ್ಶನಕ್ಕೆ ಊರ ಜನರೂ ಕಾತುರರಾಗಿ ನೆರೆದರು. ಪ್ರದರ್ಶನ ಶುರುವಾಯಿತು. ಅರ್ಜುನ ಹನುಮಂತ ಇಬ್ಬರಲ್ಲೂ ಒಳ್ಳೆಅಯ ಹೊಂದಾಣಿಕೆ ಇದ್ದಿದ್ದರಿಂದ ಆಟ ಚೆನ್ನಾಗಿಯೇ ಸಾಗುತ್ತಿತ್ತು. ಅರ್ಜುನ ಅಗ್ನಿ ಪ್ರವೇಶಕ್ಕೆ ಸಿದ್ಧನಾಗುವ ಘಳಿಗೆ ಬಂತು. ಹೊಳೆದ ಉಪಾಯವನ್ನೇ ತಲೆಯಲ್ಲಿಟ್ಟುಕೊಂಡು ಬಂದ ಶುಕ್ರ, ಮಾತಾಡಿಯೇ ಬಿಟ್ಟ-"ಹುಡುಗಾ ನನಗೊಂದು ಡೌಟು ಬಂದದೆ. ಸ್ವಲ್ಪ ಪರಿಹಾರ ಮಾಡಿಕೊಡು"

ಪಾತ್ರದಲ್ಲಿ ತಲ್ಲೀನನಾಗಿದ್ದ ಗಣೇಶ ಒಮ್ಮೆಲೆ ಅವಾಕ್ಕಾದ. ಆದರೆ ಆತನ ಸಮಯ ಪ್ರಜ್ಞೆ ಆತನನ್ನು ಉಳಿಸಿತು. ಆಟವನ್ನೂ ಉಳಿಸಿತು. "ಸ್ವಾಮೀ ಭವಸಾಗರವನ್ನು ದಾಟಿಸಲು ನೆರವಾಗುವ ನಿಮ್ಮಂಥಾ ವೃದ್ಧ ಬ್ರಾಹ್ಮಣರು ದಾಟಿ ಬರುವುದರಲ್ಲಿ ಏನೂ ಅಸಹಜತೆ ಇಲ್ಲ. " ಎಂದ. ನಂತರ ಶುಕ್ರ ಚೆನ್ನಾಗಿಯೇ ಪಾತ್ರ ನಿರ್ವಹಿಸಿದ. ಗಣೇಶ-ಮಹಾಬಲ ಕೂಡಾ ಚೆನ್ನಾಗಿಯೇ ಅಭಿನಯಿಸಿ ಪ್ರಸಂಗ ಚೆನ್ನಾಗಿಯೇ ಆಯಿತು.

ಚೌಕಿಯಲ್ಲಿ ವೇಷ ಬಿಚ್ಚುತ್ತಾ, ಗಣೇಶ ಕೇಳಿದ. "ಇಂಗ್ಲೀಷ್ ಎಂತಕ್ಕೆ ಮಾತಾಡಿದ್ಯೋ ಶುಕ್ರ?!"

"ಮತ್ತೆ ನೀವು ದಿನಾ ಮಾತಾಡ್ತ್ರಿ ಅಪ್ಪಿ ತಪ್ಪಿ ಇವತ್ ನೀವ್ ಇಂಗ್ಲೀಷ್ ಮಾತಾಡಿ ನಂಗೆ ಉತ್ರ ಕೊಡೂಕೆ ಆಯ್ದೀರ್ಗತಿಗೆ, ಶುಕ್ರಂಗೆ ಇಂಗ್ಲಿಷ್ ಬತ್ತಿಲ್ಲ ಅಂತ ಊರಂಗೆಲ್ಲ ಮಾತಾಡ್ತ್ರ್. ನಾ ಎಷ್ಟ್ ಝಾಪ್ ಮಾಡ್ರೂ ಸಾಕಾತ್ಲ ಕೊನಿಗೆ. ಅದ್ಕೇ, ನಂಗೆ ಸ್ವಲ್ಪ ಇಂಗ್ಲೀಷ್ ಬತತ್ ಅಂತ ತೋರ್ಸೂಕೆ ಹಂಗೆ ಮಾಡಿದ್ದೇ... ಹೆಂಗೆ?! ಈಗ ಯಾರಾರೂ ಹೇಳ್ತ್ರ ಶುಕ್ರ್ಂಗೆ ಇಂಗ್ಲೀಷ್ ಬತ್ಲ ಅಂತ?!"

ಶುಕ್ರನ ಪುಣ್ಯ ಗಟ್ಟಿ ಇತ್ತು. ಆತ ರಂಗಸ್ಥಳದ ಮೇಲೆ "ಡೌಟ್" ಎಂದಾಗ ನಾಗೇಂದ್ರ ತಾಳ ಬಿಟ್ಟು ಟೀ ಕುಡಿಯುತ್ತಿದ್ದ. ಇದೆಲ್ಲ ಕೇಳಲಿಲ್ಲ.

No comments:

Post a Comment