Tuesday, July 3, 2018

ವಿಶ್ವಣ್ಣನ ಈ ಮೇಲ್ ಪುರಾಣ

ಉಡುಪಿಯಿಂದ ರಜೆ ಕಳೆಯಲೆಂದು ಬಂದ ಮಗಳಿಗೆ ಕೊಡಬಾರದ ಕಾಟ ಕೊಟ್ಟು ಪಾಸ್ ವರ್ಡ್ ಹಾಕಿ ಕಂಪ್ಯೂಟರ್ ಬೂಟ್ ಮಾಡುವುದನ್ನೇನೋ ಪ್ರಯಾಸದಿಂದ ಕಲಿತ ವಿಶ್ವಣ್ಣ. ಇನ್ನು ಆತನ ಬಹುದಿನದ ಆಸೆ ಫೇಸ್ ಬುಕ್ ಒಳಗೆ ಹೋಗುವುದು ಈಡೇರುವುದು ಖಚಿತವಾದ ಮೇಲೆ ಅವನಿಗೆ ಒಂದು ಹೊಸ ಅನುಮಾ಼ನ ಶುರು ಆಯಿತು. ವಿಶ್ವಣ್ಣನ ಬಳಿ ಅನುಮಾನಗಳನ್ನು ತನ್ನತ್ತ ಸೆಳೆಯುವ ಅದ್ಯಾವ ಮ್ಯಾಗ್ನೆಟ್ ಇತ್ತೋ ಆ ಮಹಾದೇವನೇ ಬಲ್ಲ. ಬಂದ ಅನುಮಾನ ತಲೆಯಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡಿ ಆ ಮರಿಗಳ ರೆಕ್ಕೆ ಬಲಿತ ಮೇಲೆ ವಿಶ್ವಣ್ಣನ ಬಾಯಿಯಿಂದ ಹಾರುತ್ತಿತ್ತು. ಅಷ್ಟರ ಒಳಗೆ ಅವನ ಮನೆಯ ಎಲೆ ಬಳ್ಳಿ ಬೋಳಾಗಿ, ರಾತ್ರಿಯಿಡೀ ನಿದ್ದೆ ಬಿಟ್ಟು, ಕವಳ ಕುಟ್ಟಿ ಅನುಮಾನದ ಪೋಷಣೆಯನ್ನು ಚೆನ್ನಾಗಿ ಮಾಡಿ ಅದನ್ನು ಪೊಗದಸ್ತಾಗಿ ಬೆಳೆಸುತ್ತಿದ್ದ ವಿಶ್ವಣ್ಣ. ಇದೆಲ್ಲ ಸಾಮಾನ್ಯ ಎಂದರೆ ಒಂದು ವಾರವಾದರೂ ನಡೆಯುತ್ತಿತ್ತು.

ಆದರೆ ಮಗಳು ರಜೆ ಮುಗಿಸಿ ಮತ್ತೆ ಹೋಗುವುದರ ಒಳಗಾಗಿ ತಾನು ನಾಣು ಮೇಲೆ ಅವಲಂಬಿತನಾಗದೆ ಅವನ ಎದುರಾಗಿ ಫೇಸ್ ಬುಕ್ಕಿನಲ್ಲಿ ಪೋಸ್ಟ್ ಹಾಕಿ ಬರೆದು ಸಾಧಿಸಿ ಅವನ ಸೊಕ್ಕು ಮುರಿಯಬೇಕು ಎನ್ನುವ ಹಟ ಇಟ್ಟ ಮೊಟ್ಟೆ ಬಹಳ ಗಟ್ಟಿ ಇತ್ತು. ಪರಿಣಾಮ, ಆತ ಬೇಗನೇ ಅನುಮಾನ ಪರಿಹಾರಕ್ಕೆ ಮುಂದಾದ. ಮಗಳಲ್ಲಿ ತನ್ನ ಅನುಮಾನ ತೋಡಿಕೊಂಡ. "ಈಗ..... ಯಂಗೆ ಯಾರಾರು ಎಂತಾರು ಹೇಳಕ್ಕು ಆದ್ರೆ ಅದು ಯಾರಿಗೂ ಗೊತ್ತಾಗಲಾಗ. ಅಥವಾ ಆನು ಯಾರಿಗಾರೂ ಎಂತಾರು ಹೇಳ್ತಿ. ಅದೂ ಬೇರೆಯವಕ್ಕೆ ಗೊತ್ತಾಗ್ಲಾಗ. ಅದು ಫೇಸ್ ಬುಕ್ಕಿನಲ್ಲಿ ಮಾಡದು ಹೆಂಗೆ?" ಎಂದ. ಮಗಳು ಚಾಟ್ ತೋರಿಸಿ ಕೊಟ್ಟಳು. ವಿಶ್ವಣ್ಣ ಅನುಮಾನ ಬೆಳೆಸಿದ. "ಯಂಗೆ ಜಾಸ್ತಿ ಹೇಳದಿದ್ದಪ. ಅವಾಗ?" ಅಂದಳು

ಮಗಳು ಹೇಳಿದಳು "ಅದಕ್ಕೆ ಇ ಮೇಲ್ ಉಪಯೋಗಿಸಕ್ಕು ಅಪ್ಪ"

"ಸರಿ. ಅದನ್ನ ಫೇಸ್ ಬುಕ್ಕಾಗೆ ತೋರ್ಸು. ಎಲ್ಲಾ ಒಂದೇ ಸತಿ ತೋರಿಸಕ್ಕೆ ಬತಲ್ಯಾ? ಸರಿ ಕಲತ್ರೆ ಸರಿ ಹೇಕೊಡಕ್ಕೆ ಬತ್ತು. ಯಂತಾ ಸುಡುಗಾಡು ಕಲಿತಿದ್ರಾ ಏನ?"

"ಅಪಾ, ಇ ಮೇಲ್ ಅಂದ್ರೆ ಪೋಸ್ಟ್ ಇದ್ದ ಹಾಂಗೆ. ಫೇಸ್ ಬುಕ್ ಕಟ್ಟೆ ಪಂಚಾಯ್ತಿ ಇದ್ದ ಹಾಂಗೆ. ಈಗ ನಿಂಗೆ ಮೇಲ್ ಬರಕ್ಕು ಅಂದ್ರೆ ನಿಂದೊಂದು ಅಡ್ರೆಸ್ ಮಾಡಿ ಅದಕ್ಕೆ ಯಾರಾದರೂ ಮೇಲ್ ಕಳಿಸಿರೆ ಬತ್ತು."

"ಮನೆ ಅಡ್ರೆಸ್ ಸಾಕಾಗ್ತಲ್ಯಾ?" ಎಂದ

"ಇಲ್ಲೆ "

"ಅಲ್ಲ. ಫೇಸ್ ಬುಕ್ಕಲ್ಲೇ ಅದು ಬರ ಹಾಂಗೆ ಮಾಡ್ಲಕ್ಕಲ. ಎಂತಕ್ಕೆ ಮಾಡ್ಲೆ. ಶಿ. ಪಾಸಿಟಿವ್ ಥಿಂಕಿಂಗೇ ಇಲ್ಲೆ. ಮತ್ತೆಂತ ಆಗ್ತು. ನಿಂಗಳೂ ಹಾಂಗೆ ಇದ್ದಿ. ಫೇಸ್ ಬುಕ್ಕಿನವಕ್ಕೆ ಹೇಳಕ್ಕು ಇದೆಲ್ಲ ಬೇಕು ಅಂತ. ನಿಂಗಕ್ಕೆ ಮುಂಚೆ ಪಾಸಿಟಿವ್ ಥಿಂಕಿಂಗ್ ಇಲ್ಲೆ. ಆಮೇಲೆ ಅವಕ್ಕಿಲ್ಲೆ. ಈಡು ಜೋಡು ಸರಿ ಹೋಯ್ದು ತಗ. ಎಲ್ಲ ನಮ್ಮ ಹಣೆಬರಹ. ಹಾಳಾಗಿ ಹೋಗ್ಲಿ ಅಂತ ಬಿಡ ಹಂಗೊ ಇಲ್ಲೆ. ಅವಕ್ಕೆ ಹೇಳನ ಅಂದ್ರೆ ನಮಗೆ ಇಂಗ್ಲೀಷ್ ಬತಲ್ಲೆ. ನಿಂಗಕ್ಕೆ ಕನ್ನಡ ಅರ್ಥ ಆಗ್ತಲ್ಲೆ."

ಇಷ್ಟು ಹೊತ್ತಿಗೆ ಮಗಳಿಗೆ ಸೈರಣೆ ತಪ್ಪಿತ್ತು. ಅಲ್ಲವೇ ಮತ್ತೆ, "ನಮ್ಮ ಹಣೆ ಬರಹ ಹಾಳಾಗಿ ಹೋಗ್ಲಿ ಬಿಡಕ್ಕೂ ಬತಲ್ಲೆ" ಅನ್ನುತ್ತಿರುವ ಅಪ್ಪನನ್ನು ಹಿಡಿದು ಫೇಸ್ ಬುಕ್ಕಿನ ಗೂಟಕ್ಕೆ ಕಟ್ಟಿದ್ದಾದರೂ ಯಾರು? ಸೈರಣೆ ತಪ್ಪಿದ್ದ ಮಗಳು ಕೇಳಿದಳು. "ಅಪಾ, ಹಂಗರೆ ಫೇಸ್ ಬುಕ್ ಡೆಲೀಟ್ ಮಾಡ್ಲಾ? ಸುಮ್ನೆ ರಗಳೆಯಲ."

"ಅಯ್ಯ ನಿನ್ನ. ಬುದ್ಧಿ ಇಲ್ಯಾ ನಿಂಗೆ. ನಿನ್ನ ಹೊರಗಡೆ ಬಿಟ್ಟು ಅಷ್ಟೆಲ್ಲಾ ದುಡ್ಡು ಖರ್ಚು ಮಾಡಿದ್ದು ಎಂತಕ್ಕೆ ಅಂತ ಗೊತ್ತಿದ್ದಾ ಒಂಚೂರು ಪ್ರಪಂಚ ಅರ್ಥ ಆಗ್ಲಿ ಅಂತ. ಯಂಗೆ ಮೇಲ್ ಬಗ್ಗೆ ತಲೆಬಿಸಿ ಆದ್ರೆ ನಿಂದೊಳ್ಳೆ ಕತೆ. ಸುಮ್ನೆ ಮೇಲ್ ಮಾಡಿ ಕೊಡು" ಎಂದ.

ಹುಡುಗಾಟಿಕೆಯ ಮಗಳು ಇನ್ನೂ ಮುಂದೆ ಹೋಗಿ, ಮೇಲ್ ಅನ್ನು ಔಟ್ ಲುಕ್ಕಿಗೆ ಹಾಕಿ ಕೊಟ್ಟಳು. ತನ್ನಪ್ಪನಿಗೆ ವೃಥಾ ಕಷ್ಟ ಬೇಡ. ಮತ್ತೆ ಸ್ಪ್ಯಾಮ್ ಮೇಲ್ ಬಂದು ಇವನ ಬಾಯಿಗೆ ತನ್ನ ತಲೆ ಸಿಕ್ಕುವುದು ಬೇಡ ಎನ್ನುವ ಎರಡೂ ಕಾರಣ ಇತ್ತು ಬಿಡಿ.

ಮೇಲ್ ಓಪನ್ ಮಾಡಿ ಕುಳಿತ ವಿಶ್ವಣ್ಣ. ಗಂಟೆ ಎರಡು ಕಳೆಯಿತು. "ಮಗಾ ಅದು ಸರಿ ಇಲ್ಲೆ" ಅಂದ.

"ಎಂತಾತು" ಅಂದಳು

"ಯಾವ ಮೇಲೂ ಬರ್ಲೆ-ಗೀಲೂ ಬರ್ಲೆ"

ಮಗಳು ತನ್ನ ಮೊಬೈಲಿನಿಂದ ಒಂದು ಟೆಸ್ಟ್ ಮೇಲ್ ಕಳಿಸಿದಳು. ಸ್ವಲ್ಪ ಹೊತ್ತಿಗೇ ಅದು ಬಂತು.

"ಈಗ ಹೆಂಗೆ ಬಂತು? ಅವಾಗ ಎಂತಕ್ಕೆ ಬರ್ಲೆ" ಎಂದ ವಿಶ್ವಣ್ಣ. ಮೊದಲೇ ಸೈರಣೆ ತಪ್ಪಿದ್ದ ಮಗಳು ರಾಂಗ್ ಆದಳು. ಅಪ್ಪ ಅನ್ನುವುದನ್ನೂ ಲೆಕ್ಕಿಸದಷ್ಟು ಸಹನೆ ಕೆಟ್ಟಿತ್ತು ಅವಳಿಗೆ.

"ಅಯ್ಯೋ ಪುಣ್ಯತ್ಮ, ಅವಾಗ ಯಾರೂ ಮೇಲ್ ಕಳಿಸಿರ್ಲೆ ಬರ್ಲೆ. ನಾ ಕಳಸ್ದಿ ಬಂತು."

"ಎಂತಕ್ಕೆ ಕೂಗ್ತೆ ನೀನು? ಯಂಗೊತ್ತಾಗ್ತಲ್ಲೆ ಕೇಳ್ದಿ. ನಿಧಾನಕೆ ಹೇಳಕ್ಕೆ ಬತಲ್ಯಾ ನಿಂಗೆ. ಯಾವಾಗ ಕಲಿತೆ ಪಾಸಿಟಿವ್ ಥಿಂಕಿಂಗ್?" ಎಂದ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗದ ಜಗಜಟ್ಟಿಯ ಶೈಲಿಯಲ್ಲಿ ಎಂದಿನಂತೆ.

# ವಿಶಾರದ_ವಿಶ್ವನಾಥ

1 comment:

  1. ಅಯ್ಯಯಪ್ಪ ಸಾಕೋ ಮಾರಾಯ?! ನಕ್ಕೂ ನಕ್ಕೂ ಸಾಕಾತು!

    ReplyDelete